Monthly Archives: August 2011

Karnataka High Court

ನಿಂತ ನೀರಾಗಿ ಕೊಳೆತವರು

ಕಳೆದ ವಾರ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಭವಿಸಿದ ಆಘಾತಕಾರಿ ಸಂಗತಿ ಯಾವುದೇ ಕನ್ನಡ ಮಾಧ್ಯಮಗಳಲ್ಲಿ ಸುದ್ಧಿಯಾಗಲಿಲ್ಲ. ಆದರೆ, ಎಲ್ಲಾ ಇಂಗ್ಲೀಷ್ ಪತ್ರಿಕೆಗಳು ಇದನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಜೊತೆಗೆ ಸಂಪಾದಕೀಯ ಬರೆದು ಆತಂಕ ವ್ಯಕ್ತಪಡಿಸಿದವು.

ಕರ್ನಾಟಕದಲ್ಲಿ ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಹೈಕೋರ್ಟ್, ಏಳು ವರ್ಷ ಸೇವೆ ಸಲ್ಲಿಸಿರುವ ವಕೀಲರಿಗಾಗಿ ಅರ್ಹತೆ ಪರೀಕ್ಷೆಯೊಂದನ್ನು ಕಳೆದ ವಾರ ಏರ್ಪಡಿಸಿತ್ತು. 518 ಮಂದಿ ವಕೀಲರು ಪಾಲ್ಗೊಂಡಿದ್ದ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಒಬ್ಬ ವಕೀಲ ಮಾತ್ರ. ಉಳಿದ 517 ಮಂದಿ ವಿಫಲರಾಗಿರುವುದು ಇವರ ವಕೀಲಿ ವೃತ್ತಿ ಬಗೆಗಿನ ಬದ್ಧತೆ ಮತ್ತು ಅಧ್ಯಯನದ ಕೊರತೆಯನ್ನು ಅನಾವರಣಗೊಳಿಸಿದೆ.

ಈ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ಬಹುತೇಕ ಸುದ್ದಿ ಮಾಧ್ಯಮಗಳು, ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಕಾಲೇಜು ಇರುವ ಬೆಂಗಳೂರಿನಲ್ಲಿ ಇಂತಹ ಸಂಗತಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸುವುದರ ಜೊತೆಗೆ, ಇಂದಿಗೂ ಭಾರತದ ಅನೇಕ ಕೆಳಹಂತದ ನ್ಯಾಯಾಲಯಗಳಲ್ಲಿ ಸಂಕ್ಷಿಪ್ತವಾಗಿ ತೀರ್ಪು ಬರೆಯಲಾರದ ನ್ಯಾಯಾಧೀಶರುಗಳಿದ್ದಾರೆ ಎಂದು ವ್ಯಂಗ್ಯವಾಡಿವೆ.

ಇಂದು ಕಾನೂನು ಜ್ಞಾನಶಿಸ್ತುಗಳಲ್ಲಿ ಒಂದಾಗಿದ್ದು ಹಲವು ಶಾಖೆಗಳಾಗಿ ಕವಲೊಡೆದಿದೆ. ಕಾನೂನು ಪದವಿಯ ಸಂದರ್ಭದಲ್ಲಿ ಹನ್ನೆರಡಕ್ಕೂ ಮೇಲ್ಪಟ್ಟ ವಿವಿಧ ವಿಷಯಗಳ ಕಾನೂನನ್ನು ಅಧ್ಯಯನ ಮಾಡುವುದು ಕಡ್ಡಾಯ. ಪದವಿಯ ನಂತರ ಯಾವುದೇ ವ್ಯಕ್ತಿ ವೃತ್ತಿಯ ಸಂದರ್ಭದಲ್ಲಿ ತನಗೆ ಇಷ್ಟವಾದ ಕಾನೂನು ಶಾಖೆಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಇದು ಕಾನೂನು ಪರಿಣಿತಿಯಲ್ಲಿ ಅವಶ್ಯ ಕೂಡ ಹೌದು. ಹಾಗಾಗಿ ಇಂದು ನಾವು ಎಲ್ಲೆಡೆ ಕ್ರಿಮಿನಲ್ ಲಾ, ಸಿವಿಲ್ ಲಾ, ಕಂಪನಿ ಲಾ, ಅಂತಾರಾಷ್ಟ್ರೀಯ ಕಾನೂನು, ಹಿಂದೂ ಕಾನೂನು ಹೀಗೆ ಈ ವಿಷಯಗಳಲ್ಲಿ ಪರಿಣಿತ ಹಾಗೂ ತಜ್ಞ ವಕೀಲರನ್ನು ನಾವು ಕಾಣುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಪರಿವರ್ತನಾ ಮತ್ತು ಚಲನಶೀಲವಾದ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಳಗಾಗುತ್ತಿರುವ ಕಾನೂನುಗಳ ಬಗ್ಗೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಅಧ್ಯಯನ ಮಾಡುವುದು ಅಗತ್ಯ.ವಿಲ್ಲ ಎಂದು ಭಾವಿಸುವುದು ಅವಿವೇಕತನದ ಪರಮಾವಧಿಯಾಗುತ್ತದೆ.

ವರ್ತಮಾನದ ವಕೀಲಿ ವೃತ್ತಿ ಆಶಾದಾಯಕ ವೃತ್ತಿಯಾಗಿಲ್ಲ. ಆದರೂ ಕಾನೂನು ಅಧ್ಯಯನಕ್ಕೆ ಯುವ ಜನಾಂಗ ಆಸಕ್ತಿ ತೋರುತ್ತಿದ್ದು, ಪದವಿಯ ನಂತರ ಸ್ವತಂತ್ರ ವೃತ್ತಿಗಿಂತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊರೆಯುತ್ತಿರುವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ದಶಕಗಳ ಹಿಂದೆ ಕಾನೂನು ಪದವಿ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ವಕೀಲರಿಗೆ ವೃತ್ತಿ ಮತ್ತು ಅದರ ಘನತೆಗಿಂತ ಸಂಘಟನೆ ಮತ್ತು ರಾಜಕೀಯ ಮುಖ್ಯವಾಗಿದೆ.

Karnataka High Court

Karnataka High Court

ಕರ್ನಾಟಕದಲ್ಲಿ ಇಂದು ವಕೀಲರ ಸಂಘ, ವಕೀಲರ ಪರಿಷತ್ ಹೀಗೆ ಹಲವು ಬಣಗಳು ಹುಟ್ಟಿಕೊಂಡು ಇವುಗಳ ಚುನಾವಣೆ ಮತ್ತು ಚುನಾವಣೆಯ ಸಂದರ್ಭದಲ್ಲಿ ವಕೀಲರ ವರ್ತನೆ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆ ಇಲ್ಲ. ತಮ್ಮ ವೃತ್ತಿಯ ಘನತೆ ತೊರೆದು ರಾಜಕೀಯ ಪಕ್ಷಗಳೊಂದಿಗೆ ಹಲವು ವಕೀಲರು ಗುರುತಿಸಿಕೊಂಡಿದ್ದರೆ, ಮತ್ತಷ್ಟು ವಕೀಲರು ಯಾವ ಅಳುಕೂ ಇಲ್ಲದೆ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿ ಬೀದಿಗಿಳಿದು ಪ್ರತಿಭಟಿಸುವುದು, ರಸ್ತೆತಡೆ ಮಾಡುವುದನ್ನು ನಾವು ಕಾಣುತ್ತಿದ್ದೇವೆ.

ಇವರೆಲ್ಲರೂ ಒಮ್ಮೆ ತಮ್ಮ ಅರ್ಹತೆಯ ಬಗ್ಗೆ ತಮ್ಮ ತಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು. ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಪ್ರತಿ ಮೂರು ವರ್ಷಕ್ಕೊಮ್ಮೆ ಇವರಿಗೆಲ್ಲಾ ಕಡ್ಡಾಯವಾಗಿ ಪರೀಕ್ಷೆ ನಡೆಸಿ ವಕೀಲಿ ವೃತ್ತಿಗೆ ಅನುಮತಿ ನೀಡುವುದನ್ನು ಚಾಲನೆಗೆ ತಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದಿಷ್ಟು ಸುಧಾರಣೆ ಕಾಣಬಹುದು. ಇಂತಹ ದುರ್ಗತಿ ಕೇವಲ ವಕೀಲ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಕಳೆದ ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಖಾಸಗಿ ಚಾನಲ್ ಒಂದು ನಮ್ಮ ಸರಕಾರಿ ಶಾಲಾ ಶಿಕ್ಷಕರಿಗೆ, ಸ್ವತಂತ್ರ ಬಂದು ಎಷ್ಟು ವರ್ಷಗಳಾದವು?, ಮಹಾತ್ಮಗಾಂಧಿಯ ಪೂರ್ಣ ಹೆಸರೇನು?, ನೆಹರು ಪುತ್ರಿ ಯಾರು?, ಜಲಿಯನ್ ವಾಲಾಬಾಗ್ ಎಲ್ಲಿದೆ? ಎಂಬ ಪ್ರಶ್ನೆಗಳನ್ನು 50ಕ್ಕೂ ಹೆಚ್ಚು ಶಿಕ್ಷಕರ ಎದುರು ಇಟ್ಟಿತ್ತು. ಇವುಗಳಿಗೆ ಒಂದಿಬ್ಬರು ಹೊರತುಪಡಿಸಿದರೆ ಉಳಿದವರೆಲ್ಲಾ ಕ್ಯಾಮೆರಾ ಎದುರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು. ಇವರೆಲ್ಲಾ ನಮ್ಮ ಸಮಾಜದ ಭಾಗವಾಗಿರುವುದು ವರ್ತಮಾನದ ದುರಂತಗಳಲ್ಲಿ ಒಂದು.

– ಡಾ.ಎನ್.ಜಗದೀಶ್ ಕೊಪ್ಪ

ಮುಂಗಾರು ಮಳೆ ಹೀರೋ ಕೊಡಗು ಹುಡುಗಿಯನ್ನು ಏಕೆ ಮದುವೆಯಾಗಲಿಲ್ಲ..?

1962ರಲ್ಲಿ ಬಿಡುಗಡೆಯಾದ ಕಿತ್ತೂರು ಚೆನ್ನಮ್ಮ ಚಿತ್ರ ಹೆಸರೇ ಹೇಳುವಂತೆ ಬೆಳವಾಗಿ ಭಾಗದ ಕಿತ್ತೂರಿನ ರಾಣಿ ಚೆನ್ನಮ್ಮನ ಸಾಹಸಗಾಥೆ ಹೇಳುವ ಚಿತ್ರ. ಆ ಚಿತ್ರದಲ್ಲಿ ಚೆನ್ನಮ್ಮ ಪಾತ್ರಧಾರಿ ಮಾತನಾಡುವುದು ಹಳೇ ಮೈಸೂರು ಭಾಗದ ಕನ್ನಡವನ್ನು. ಆದರೆ ಚೆನ್ನಮ್ಮನಿಗೆ ಮೋಸ ಮಾಡಿ ಬ್ರಿಟಿಷರಿಗೆ ನೆರವು ನೀಡುವ ಮಂತ್ರಿಗಳ ಪಾತ್ರಧಾರಿಗಳದು ಬೆಳಗಾವಿ ಕನ್ನಡ.

ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ವಿಮರ್ಶಕ ಎಂ.ಕೆ ರಾಘವೇಂದ್ರ ಕನ್ನಡ ಸಿನಿಮಾಗಳ ಟಾರ್ಗೆಟ್ ಆಡಿಯನ್ಸ್ ಕೇವಲ ಹಳೇ ಮೈಸೂರು ಭಾಗದ ಜನರಷ್ಟೇ ಪ್ರೇಕ್ಷಕರು ಎಂದು ವಿಶ್ಲೇಷಿಸುವಾಗ ಈ ಮೇಲಿನ ಉದಾಹರಣೆ ನೀಡುತ್ತಾರೆ.

ಹಳೇ ಮೈಸೂರು ಅಂದರೆ – ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಶಿವಮೊಗ್ಗ. ಕನ್ನಡ ಸಿನಿಮಾ ಹಿರೋಗಳೆಲ್ಲ ಸಾಮಾನ್ಯವಾಗಿ ಇದೇ ಭಾಗದವರಾಗಿರುತ್ತಾರೆ. ಅವರ ಜೊತೆಗಾತಿಯರೂ ಸಹಜವಾಗಿ ಇದೇ ಭಾಗಕ್ಕೆ ಸೇರಿದವರು. ಹಳೇ ಮೈಸೂರು ಭಾಗದ ಹೀರೋಗೆ ರಾಯಚೂರು ಅಥವಾ ಬೆಳಗಾವಿಯ ಹುಡುಗಿ ಜೊತೆ ಸರಸ ಸಾಧ್ಯವಿಲ್ಲ.

ಮುಂಗಾರು ಮಳೆ ಹಿರೋ ಕೊಡಗು ಮೂಲದ ಹುಡುಗಿಯನ್ನು ಮದುವೆಯಾಗದಿರಲು ಇದೇ ಕಾರಣಕ್ಕೆ. ಮುಂದುವರೆದು ರಂಗದೇ ಬಸಂತಿ ಚಿತ್ರದಲ್ಲಿ ಅಮೀರ್ ಖಾನ್ ಕೂಡಾ ವಿದೇಶಿ ಹುಡುಗಿಯನ್ನು ಮದುವೆಯಾಗದೇ ಉಳಿಯಲು ಇಂತಹದೇ ಒಂದು ಕಾರಣಕ್ಕೆ!

ಇಂತಹದೇ ಹೊಸ ಹೊಳಹುಗಳಿಗಾಗಿ ರಾಘವೇಂದ್ರ ಅವರ ಸಂದರ್ಶನವನ್ನು Frontline ನಲ್ಲಿ ಓದಿ. ವಿಖಾರ್ ಅಹ್ಮದ್ ಸಯೀದ್ ಸಂದರ್ಶನ ನಡೆಸಿದ್ದಾರೆ. ಓದಿದ ನಂತರ ಸಿನಿಮಾ ನೋಡುವ ನಿಮ್ಮ ಬಗೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಖಂಡಿತ.

photo courtesy – indianauteur.com

Deccan Herald - Mining Payments

ಮಾಧ್ಯಮ ಲೋಕ : ಒಡೆದ ಕನ್ನಡಿ

ಲೇಖಕಿ ಉಷಾ ಕಟ್ಟೇಮನೆ ಬ್ಲಾಗ್ ಲೋಕದಲ್ಲೂ ಸಕ್ರಿಯವಾಗಿ ಬರೆಯುತ್ತಾ ಬಂದಿರುವವರು. ಅವರು ನಮ್ಮ ದೇಶದ ಮಾಧ್ಯಮ ಲೋಕವನ್ನು ಇವತ್ತಿನ ’ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಳನದ ಹಿನ್ನೆಲೆಯಲ್ಲಿ ಚರ್ಚಿಸುತ್ತ ಕೆಲವೊಂದು ಗಂಭೀರ ವಿಷಯಗಳನ್ನು “ಮಾಧ್ಯಮ ಲೋಕ : ಒಡೆದ ಕನ್ನಡಿ” ಲೇಖನದಲ್ಲಿ ಎತ್ತಿದ್ದಾರೆ. ಆ ಲೇಖನದ ಕೊಂಡಿಯನ್ನು “ವರ್ತಮಾನ”ದೊಂದಿಗೆ ಹಂಚಿಕೊಳ್ಳುತ್ತ “ವರ್ತಮಾನ”ದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅವರ ಪೂರ್ಣ ಲೇಖನ ಇಲ್ಲಿದೆ.

ಮಾಧ್ಯಮ ಲೋಕ : ಒಡೆದ ಕನ್ನಡಿ

ಉಷಾ ಕಟ್ಟೇಮನೆ

ಪ್ರತಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ನಾನು ಎಫ಼್ ಎಮ್ ರೈನ್ ಬೋ ದಲ್ಲಿ’ ಕರ್ತ-ಪತ್ರಕರ್ತ’ ಕಾರ್ಯಕ್ರಮವನ್ನು ಕೇಳುತ್ತೇನೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಪಡೆದಿಕೊಂಡಿರುವ ಖ್ಯಾತ ಪತ್ರಕರ್ತರನ್ನು ಸ್ಟುಡಿಯೋಕ್ಕೆ ಅಹ್ವಾನಿಸಿಅವರ ಸಾಧನೆಯನ್ನು ಶೋತೃಗಳಿಗೆ ಪರಿಚಯಿಸುವ ಸಂದರ್ಶನವನ್ನಾಧರಿಸಿದ ನೇರ ಪ್ರಸಾರದ ಕಾರ್ಯಕ್ರಮವಿದು. ಎಸ್ ಎಸ್ ಉಮೇಶ್ ನಡೆಸುವ ಈ ಕಾರ್ಯಕ್ರಮ ಈಗಾಗಲೇ ನೂರು ಎಪಿಸೋಡ್ ದಾಟಿದೆ. ಇಂದು ಅದರ ಅತಿಥಿಯಾಗಿದ್ದವರು ಹಿಂದು ಪತ್ರಿಕೆಯ ಬೆಂಗಳೂರಿನ ಸ್ಥಾನಿಕ ಸಂಪಾದಕರಾಗಿದ್ದ ಅರಕರೆ ಜಯರಾಮ್ .

ಅರಕರೆ ಜಯರಾಮ್ ಎಂದರೆ ಸದಾ ಸೂಟ್ ದಾರಿಯಾಗಿರುವ, ಗಂಭೀರ ವ್ಯಕ್ತಿತ್ವದ, ಗುಂಡು ಮುಖದ ವ್ಯಕ್ತಿಯೊಬ್ಬರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಪ್ರೆಸ್ ಕ್ಲಬ್ ನಲ್ಲಿ ಅಗೊಮ್ಮೆ-ಈಗೊಮ್ಮೆ ದೂರದಿಂದ ಅವರನ್ನು ನೋಡಿದ್ದೆ. ಅವರಿಗೆ ಅಸ್ಖಲಿತವಾಗಿ ಕನ್ನಡ ಮಾತಾಡಲು ಬರುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ.

ಜಯರಾಮ್ ಅವರು ಸಮಕಾಲಿನ ಪತ್ರಿಕೊಧ್ಯಮದ ಬಗ್ಗೆ ಮಾತಾಡುತಾ, ಬೆಂಗಳೂರಲ್ಲಿ ಐವತ್ತಕ್ಕಿಂತಲೂ ಜಾಸ್ತಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮವನ್ನು ಕಲಿಸುತ್ತಾರೆ.ಆದರೆ ಗುಣಮಟ್ಟದ ಉಪನ್ಯಾಸಕರಿಲ್ಲ, ಆಲ್ಲದೆ ಪತ್ರಕರ್ತನೊಬ್ಬ ಕ್ಲಾಸ್ ರೂಮ್ ನಲ್ಲಿ ರೂಪುಗೊಳ್ಳುವುದಿಲ್ಲ, ಎಂದು ಹೇಳುತ್ತಾ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿದ್ದ ಬದ್ಧತೆ ಮತ್ತು ವೃತ್ತಿಪರತೆಯ ಬಗ್ಗೆ ಅಧಿಕಾರಯುತವಾಗಿ ಮಾತಾಡತೊಡಗಿದರು.

ಟೀವಿ ಜರ್ನಲಿಸ್ಟ್ ಗಳ ಬಗ್ಗೆ ಮಾತಾಡುತ್ತಾ ಅವರೊಂದು ಮಾತು ಹೇಳಿದರು; ಟೀವಿ ಜರ್ನಲಿಸ್ಟ್ ಗಳು ಎಮಿನೆಂಟ್ ಅಲ್ಲ, ಅವರೆಲ್ಲಾ ಪ್ರಾಮಿನೆಂಟ್ ಗಳು, ಅಂತ. ನಿಜ, ಹಿಂದೆ ಪತ್ರಿಕೋಧ್ಯಮವೆಂಬುದು ಸೇವಾಕ್ಷೇತ್ರವಾಗಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವು ಕೂಡಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಪರಿಗಣಿತವಾಗಿತ್ತು. ಸಮಾಜ ಸೇವೆಗೆ ಸಮೂಹ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿದ್ದವು. ಹಾಗಾಗಿ ಆದರ್ಶಗಳನ್ನಿಟ್ಟುಕೊಂಡ, ತತ್ವಬದ್ಧರಾದ ಯುವಕರು ನಾನಾ ಕ್ಷೇತ್ರಗಳಿಂದ ಪತ್ರಿಕಾರಂಗಕ್ಕೆ ಬರುತ್ತಿದ್ದರು.

ಆದರೆ ಇಂದು ಹಾಗಿಲ್ಲ. ಪತ್ರಿಕಾ ರಂಗ ಇವತ್ತು ಉದ್ಯಮ ಆಗಿದೆ. ಸಿನೇಮಾ, ಕ್ರೀಕೆಟ್ ನಂತೆ ಅದೊಂದು ಗ್ಲಾಮರ್ ಜಗತ್ತು. ಅಲ್ಲಿ ಹಣ ಮತ್ತು ಖ್ಯಾತಿ ಎರಡೂ ಇದೆ. ಹಾಗಾಗಿ ಅಲ್ಲಿ ಹಣ ಹಾಕಿ ದುಡ್ಡು ದುಡಿಯುವುದನ್ನು ಕರಗತ ಮಾಡಿಕೊಳ್ಳಲು ಹವಣಿಸುವವರ ದೊಡ್ಡ ವರ್ಗವೇ ಇದೆ. ರಿಯಲ್ ಎಸ್ಟೇಟ್ ಕುಳಗಳು ಸಿನೇಮಾರಂಗಕ್ಕೆ ಧಾಂಗುಡಿಯಿಟ್ಟ ಮೇಲೆ ಕನ್ನಡ ಸಿನೇಮಾ ಪ್ರಪಂಚ ಬದಲಾದ ಪರಿಯನ್ನೇ ಗಮನಿಸಿ. ಸುರೇಶ ಕಲ್ಮಾಡಿ ಒಬ್ಬ ಸಾಕಲ್ಲಾ; ಕ್ರೀಡಾ ಜಗತ್ತಿನಲ್ಲಿ ಹಣದ ಮೆರೆದಾಟದ ವೈಖರಿಯನ್ನು ತಿಳಿದುಕೊಳ್ಳಲು.

ಮಾಧ್ಯಮ ರಂಗಕ್ಕೆ ಬನ್ನಿ, ನೀರಾ ರಾಡಿಯಾ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಬರ್ಕಾದತ್ತ, ವೀರಸಾಂಘ್ವಿ, ಪ್ರಭು ಚಾವ್ಲ ಮುಂತಾದವರೆಲ್ಲಾ ಈಗಲೂ ಸ್ವಲ್ಪವೂ ಪಾಪ ಪ್ರಜ್ನೆಯಿಲ್ಲದೆ ನ್ಯಾಯಾಧೀಶರ ಧಿಮಾಕಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿ ಬಿ.ಎಲ್. ಶಂಕರ್ ತಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ, ಕನ್ನಿಮೋಳಿ, ಎ. ರಾಜ ಮುಂತಾದವರೆಲ್ಲಾ ಆರೋಪ ಹೊತ್ತು ಜೈಲಿಗೆ ತಳ್ಳಲ್ಪಡುತ್ತಾರೆ. ಮಾಧ್ಯಮದವರಿಗೇಕೆ ವಿನಾಯಿತಿ? ನಿಜ, ತಪ್ಪು ಯಾರು ಮಾಡಿದರೂ ತಪ್ಪೇ. ನಮಗೆಲ್ಲರಿಗೂ ಇರುವುದು ಒಂದೇ ಸಂವಿಧಾನ ತಾನೇ?

ಈಗ ಕರ್ನಾಟಕವನ್ನೇ ನೋಡಿ. ಲೋಕಾಯುಕ್ತ ವರದಿ ಬಂದಿದೆ. ಯು.ವಿ.ಸಿಂಗ್ ವರಧಿಯಲ್ಲಿ ಸ್ಪಷ್ಟ ವಾಗಿ ಉಲ್ಲೇಖಿತವಾಗಿದೆ; ಕನ್ನಡದ ಕೆಲವೊಂದು ಪತ್ರಕರ್ತರು ಗಣಿಕಪ್ಪವನ್ನು ಪಡೆದಿದ್ದಾರೆಂದು.

ಗಣಿಗಾರಿಕೆಯಲ್ಲಿ ದಂತಕಥೆಯಾಗುತ್ತಿರುವ ರೆಡ್ಡಿ ಸಹೋದರರ ಗ್ಯಾಂಗ್ ವಿಷಯ ಬಿಟ್ಟುಬಿಡಿ. ಅವರು ವ್ಯಾಪಾರಿಗಳು. ’ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತೇ ಇದೆಯಲ್ಲಾ. ದುಡ್ಡು ಬಾಚಿಕೊಳ್ಳುವುದೇ ವ್ಯಾಪಾರದ ಉದ್ದೇಶ. ಆದ್ರೆ ಪತ್ರಕರ್ತರ ಮುಖವಾಡಗಳನ್ನು ತೊಟ್ಟುಕೊಂಡು ಸಮಾಜಕ್ಕೆ ನೀತಿ ಪಾಠ ಹೇಳುವುದನ್ನು ಹಾಬಿಯನ್ನಾಗಿ ಇಟ್ಟುಕೊಂಡವರನ್ನು ಏನಂತ ಕರೆಯುವುದು?

ಕಳೆದವಾರ ಡೆಕ್ಕನ್ ಹೆರಾಲ್ಡ್ ಬಯಲು ಮಾಡಿದ ಗಣಿ ಕಪ್ಪ ಪಡೆದವರ ಹೆಸರುಗಳು ಒಂದು ಸಂಕೇತ ಮಾತ್ರ. ಮಧುಶ್ರೀಯಂಥ ನೂರಾರು ಕಂಪೆನಿಗಳಿವೆ ನೂರಾರು ’ಖಾರದ ಪುಡಿ ಮಹೇಶ’ರಿದ್ದಾರೆ. ಸಂಜಯ್ ಸರ್ ಗಳಿದ್ದಾರೆ, ಮೂರ್ತಿಗಳಿದ್ದಾರೆ. ಹಾಗೆಯೇ ನೂರಾರು ವಿ.ಭಟ್, ಆರ್.ಬಿ.ಗಳಿದ್ದಾರೆ.

ಪತ್ರಿಕೋದ್ಯಮವೆಂಬ ಗ್ಲಾಮರ್ ಲೋಕದಲ್ಲಿ ಮುಖವಾಡ ತೊಟ್ಟಿರುವ ಕೆಲವು ಪತ್ರಕರ್ತರ ಸ್ವವೈಭವೀಕರಣ, ಐಷಾರಾಮಿ ಬದುಕು ಹೇಗಿದೆಯೆಂದರೆ ನಿಜವಾದ ಪತ್ರಕರ್ತರೆಂದರೆ ಹೀಗೆಯೇ ಇರಬೇಕೆಂಬ ಭ್ರಮೆಯನ್ನು ಸಾರ್ವಜನಿಕರಲ್ಲಿ ಉಂಟುಮಾಡುವಂತೆ ಅವರ ನಡವಳಿಕೆಯಿರುತ್ತದೆ. ಅವರಲ್ಲಿ ಗಣಿ ಮಾಲೀಕರಿದ್ದಾರೆ; ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ; ಬ್ಲಾಕ್ ಮೇಲ್ ಮಾಡುವವರಿದ್ದಾರೆ; ಹಿಡನ್ ಅಜೆಂಡಗಳನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷ ಪ್ರಾಯೋಜಿತರಿದ್ದಾರೆ. ರಾಜಕೀಯ ದಲ್ಲಾಳಿಗಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ಪಿ.ಅರ್.ಓ ಗಳಿದ್ದಾರೆ. ಜಾತೀಯ ವಕ್ತಾರರಿದ್ದಾರೆ. ಇವರ ಮೆರೆದಾಟದಲ್ಲಿ ಬಹುಸಂಖ್ಯಾತರಾಗಿರುವ ಪತ್ರಕರ್ತರ ಪ್ರಾಮಾಣಿಕತೆ, ಸಮಾಜಿಕ ಕಾಳಜಿ ಮಸುಕಾಗಿ ಕಾಣುತ್ತದೆ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಸ್ವಾರ್ಥಿಗಳು ಎಂದು ಸಾರಸಗಟಾಗಿ ಅನುಮಾನದಿಂದ ನೋಡಿದಂತೆ ಪತ್ರಕರ್ತರೆಲ್ಲಾ ಎಂಜಲು ಕಾಸಿಗೆ ಕೈಯೊಡ್ಡುವವರು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಸಂಶಯವಂತೂ ಇದ್ದೇ ಇದೆ; ಗಣಿ ಲಾಬಿ ಮತ್ತು ಕಾರ್ಪೋರೇಟ್ ಜಗತ್ತು ಪತ್ರಿಕೋಧ್ಯಮವನ್ನು ನಿಯಂತ್ರಿಸುತ್ತದೆಯೆಂದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮದ ಆದ್ಯತೆಗಳು ಬದಲಾಗಿರುವುದು ಸಾರ್ವಜನಿಕರ ಕಣ್ಣಿಗೂ ನಿಚ್ಚಳವಾಗಿ ಗೋಚರಿಸುತ್ತಿದೆ. ಇಲ್ಲವಾದರೆ ಕರ್ನಾಟಕದ ಮಟ್ಟಿಗೆ ಮೂರು ಪ್ರಮುಖ ವಿಷಯಗಳಾದ ಅಕ್ರಮ ಗಣಿಗಾರಿಕೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪುನರ್ವಸತಿ, ರೈತರ ಕೃಷಿ ಭೂಮಿ ಸ್ವಾಧೀನ ಇವುಗಳಿಗೆ ಮಾಧ್ಯಮ ಲೋಕ ಸಶಕ್ತ ಧ್ವನಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅವೆಲ್ಲಾ ವರಧಿಗಾರಿಕೆಯ ಮಟ್ಟದಲ್ಲಿ ಉಳಿದುಬಿಟ್ಟವು.

ಅಣ್ಣಾ ಹಜಾರೆಯವ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಅಷ್ಟೇ. ಸುದ್ದಿಯನ್ನು ರೋಚಕವಾಗಿ, ರಂಜನೀಯವಾಗಿ, ಎಮೋಷನಲಾಗಿ ಕೊಡುತ್ತಿದೆ. ಕಾರ್ಪೋರೇಟ್ ಜಗತ್ತು ಪ್ರಜಾಪ್ರಭುತ್ವವನ್ನು ನಿಶ್ಯಕ್ತಗೊಳಿಸುತ್ತಿದೆಯೇನೋ ಎಂಬ ಸಂಶಯವೂ ಅವರನ್ನು ಕಾಡುವುದಿಲ್ಲ. ಆಡಳಿತ ಮಂಡಳಿಯಲ್ಲಿ ಬದ್ಧತೆಯಿಲ್ಲ. ಬದ್ಧತೆ ಕಾಣುತ್ತಿಲ್ಲ. ಬದ್ಧತೆಯಿರುತ್ತಿದ್ದರೆ ಬ್ರಷ್ಟಾಚಾರದ ಆಪಾದನೆ ಹೊತ್ತಿರುವ ಪತ್ರಕರ್ತರ ಮೇಲೆ ಮ್ಯಾನೇಜ್ ಮೆಂಟಿನವರು ಕ್ರಮ ಕೈಗೊಳ್ಳುತ್ತಿದ್ದರು. ದೃಶ್ಯ ಮಾಧ್ಯಮದ ಚರ್ಚೆಗಳಲ್ಲಿ ಭಾಗವಹಿಸುವವರಿಗೆಲ್ಲಾ ಗೊತ್ತಿದೆ, ತಾವು ಪರಸ್ಪರ ಕಳ್ಳರೆಂದು.

ಅಕ್ರಮ ಗಣಿಗಾರಿಕೆಯಿಂದ ದುಡ್ಡು ಸಂಪಾದನೆ ಮಾಡಿದವರು, ದುಡ್ಡು ಕೊಟ್ಟು ಎಂಪಿ ಸೀಟ್ ಖರೀದಿ ಮಾಡಿದವರು, ಸರಕಾರದ ಕೃಪಾಶ್ರಯದಿಂದ ಭೂಮಿ ಡಿನೋಟಿಪಿಕೇಶೆನ್ ಮಾಡಿಸಿಕೊಂಡವರು, ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪತ್ರಿಕೆ ನಡೆಸುತ್ತಿರುವವರು- ಇವರೆಲ್ಲಾ ಮಾಧ್ಯಮವನ್ನು ಅಸ್ತ್ರ-ಶಸ್ತ್ರಗಳಂತೆ ಬಳಸುತ್ತಿದ್ದಾರೆ. ಇಂತವರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರಿಗೆಲ್ಲಾ ಪತ್ರಕರ್ತರು ಬೇಕಾಗಿಲ್ಲ, ದಲ್ಲಾಳಿಗಳು ಬೇಕಾಗಿದ್ದಾರೆ. ಹಾಗಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು ಕೂಡಾ ಪತ್ರಕರ್ತರಾಗುತ್ತಿದ್ದಾರೆ.

ದಲ್ಲಾಳಿಗಳು ಯಾವಾಗಲೂ ಅರ್ಥಿಕರಾಗಿ ಬಲಾಢ್ಯರಾಗುತ್ತಲೇ ಹೋಗುತ್ತಾರೆ. ಇಲ್ಲವಾದರೆ ಪತ್ರಕರ್ತನೊಬ್ಬ ನೂರಾರು ಕೋಟಿಯ ಒಡೆಯನಾಗಲು ಸಾಧ್ಯವೇ ಇಲ್ಲ. ದುಡ್ಡು ಎಲ್ಲಾ ದೌರ್ಭಲ್ಯಗಳನ್ನು, ಅವಲಕ್ಷಣಗಳನ್ನು ಮುಚ್ಚಿ ಹಾಕುತ್ತದೆ.

ಆದರೆ ಇದರಿಂದೆಲ್ಲಾ ಆಘಾತಕ್ಕೊಳಗಾಗುವವರು ಜನಸಾಮಾನ್ಯರು, ಅವರ ಮುಗ್ದ ಮನಸು. ಅವರ ನಂಬಿಕೆಯ ಜಗತ್ತು. ಅವರ ಬದುಕಿನ ಮಾದರಿಗಳು ಛಿದ್ರಗೊಳ್ಳುತ್ತಿದೆ. ಛಿದ್ರಗೊಂಡ ಕನ್ನಡಿಯಲ್ಲಿ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಿಲ್ಲ

Anna_Hazare

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಈಗಿನ ಭ್ರಷ್ಛಾಚಾರ ವಿರೋಧಿ ಆಂದೋಳನ ನಮ್ಮ ಸಮಾಜದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಸರ್ಕಾರ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದ ಬಗ್ಗೆಯೇ ಹೆಚ್ಚು ಮಾತನಾಡುತ್ತಿರುವುದು. ಮತ್ತು ಈ ಮೂಲಕ ಈ ಆಂದೋಳನ ಕೇಳಿದ್ದು ಒಂದು ಮಸೂದೆಯನ್ನು. ಆದರೆ ಈ ಪರಿಸ್ಥಿತಿಯ ಮತ್ತು ಸಮಸ್ಯೆಯ ಮೂಲ ಇರುವುದು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ನಾವು ಆರಿಸಿಕೊಳ್ಳುತ್ತಿರುವ ಜನರ ಅರ್ಹತೆಯಲ್ಲಿ. ಹಾಗಾಗಿ ಇದು ಕೊನೆಗೂ ಮುಟ್ಟುವುದು ಆ ಬೇರಿಗೇ. ಅದನ್ನೇ ಅಣ್ಣಾ ಹಜಾರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತ ಚುನಾವಣಾ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ಕೆಳಗಿನ ಲೇಖನವನ್ನು ನಾನು ಬರೆದಿದ್ದು ಕಳೆದ ಜೂನ್ 15, 2011ರ ಸಮಯದಲ್ಲಿ. ಬಹುಶಃ ಅದೇ ವಾರದ ಒಂದು ದಿನ ಅದು “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಅಲ್ಲಿ ನಾನು ಅಂತಿಮವಾಗಿ ಹೇಳಬಯಸಿದ್ದು, ‘ನಮ್ಮ ರಾಜಕೀಯ ನಾಯಕರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.’ ಅದು ಬಹುಶಃ ಒಂದಷ್ಟು ಮಟ್ಟಿಗೆ ನಿಜವಾಗುವ ಸಾಧ್ಯತೆಗಳು ಈಗಾಗಲೆ ಕಾಣಿಸುತ್ತಿವೆ. ಆ ಲೇಖನದ ಪೂರ್ಣಭಾಗ ಇದು:

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಇವತ್ತು ಭ್ರಷ್ಟಾಚಾರದ ಸುತ್ತ ಚಳವಳಿ ಮಟ್ಟದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಇತ್ತೀಚಿನ ದಿನಗಳ ಮುಖ್ಯ ಪ್ರೇರಣೆ ಎಂದರೆ ನಮ್ಮ ಜನಪ್ರತಿನಿಧಿಗಳು ಅನೈತಿಕ ಕಾರ್ಯಗಳಿಂದ ಭ್ರಷ್ಟಾಚಾರದ ಹಗರಣಗಳಲ್ಲಿ ತೊಡಗಿರುವುದು ಜನಕ್ಕೆ ಮಾಧ್ಯಮಗಳ ಮೂಲಕ ನೇರಾನೇರವಾಗಿ ಗೊತ್ತಾಗುತ್ತಿರುವುದು. ದೇಶದ ಜನಕ್ಕೆ ತಾವು ತಮ್ಮ ದೈನಂದಿನ ಕೆಲಸದಲ್ಲಿ ನಿತ್ಯ ಕಾಣುವ ಮತ್ತು ಅನುಭವಿಸುವ ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ರಾಜಕಾರಣಿಗಳ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಜೀವನದಲ್ಲಿನ ಅಧ:ಪತನ ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದಿನ ಚಳವಳಿ ಒಂದು ಮಟ್ಟದ ಅಧಿಕೃತತೆ ಪಡೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಶಾಸಕರು-ಸಂಸದರು ರಚಿಸಬೇಕಾದ, ಮಂಡಿಸಬೇಕಾದ ಕಾನೂನು-ಮಸೂದೆಗಳನ್ನು ಅವರಿಗಾಗಿ ಕಾಯದೆ ಈ ರಾಜಕೀಯೇತರ ಸಾಮಾಜಿಕ ನಾಯಕರೆ ರಚಿಸಲು ಮುಂದಾಗುತ್ತಿದ್ದಾರೆ. ಅವುಗಳ ಮಂಡನೆ ಮತ್ತು ಅಂಗೀಕಾರಕ್ಕೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದ್ದಾರೆ. ಈ ಪರಿಸ್ಥಿತಿಗೆ ಭ್ರಷ್ಟಾಚಾರದಲ್ಲಿ ನಿರತರಾದ ಶಾಸಕರು, ಸಂಸದರು, ಅಧಿಕಾರರೂಢರಷ್ಟೇ ಕಾರಣರಾಗಿದ್ದರೆ ಮತ್ತು ಅವರ ಪ್ರಮಾಣ ಅಲ್ಪಪ್ರಮಾಣದಲ್ಲಿ ಇದ್ದಿದ್ದರೆ ಈ ಶಾಸನಸಭೆಯ ಹೊರಗಿನವರ ಮಧ್ಯಪ್ರವೇಶ ಪ್ರಜಾಪ್ರಭುತ್ವದಲ್ಲಿ ಗಂಭೀರ ವಿಷಯವೆ ಆಗಿರುತ್ತಿತ್ತು. ಆದರೆ ನಮ್ಮ ಇಂದಿನ ಬಹುಪಾಲು ಜನಪ್ರತಿನಿಧಿಗಳು ತಮ್ಮ ಮೂಲಭೂತ ಕರ್ತವ್ಯಗಳಾದ ಕಾನೂನು ರಚನೆ ಮತ್ತು ತಿದ್ದುಪಡಿ, ಮತ್ತು ಕಾನೂನಿನ ಅನುಷ್ಠಾನದ ಉಸ್ತುವಾರಿಯಲ್ಲಿ ಇಂದು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಇದಕ್ಕೆ ನಿದರ್ಶನವಾಗಿ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚಿನ ವಿಧಾನಮಂಡಲ ಅಧಿವೇಶನ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲೇ ಜರುಗಿತು. ಇದರಿಂದಾಗಿ ವಿಧಾನಸಭಾ ಕಲಾಪವನ್ನು ಬಹಳ ದಿನ ನಡೆಸಲಾಗದೆ ತರಾತುರಿಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಿ ಮುಂದೂಡಲಾಯಿತು. ಆದರೆ ಮುಂದೂಡುವುದಕ್ಕೆ ಕೆಲವು ಗಂಟೆಗಳ ಮೊದಲು ಐದು ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆಯೇ ಅಂಗೀಕರಿಸಲಾಯಿತು. ಶಾಸನಸಭೆಯಲ್ಲಿ ಮಂಡಿಸುವ ಮಸೂದೆಗಳ ಕುರಿತು ಶಾಸಕರಿರಲಿ, ತಮ್ಮ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿದ ಮಸೂದೆಗಳನ್ನು ಮಂಡಿಸುವ ಸಚಿವ ಮಹಾಶಯರಿಗೂ ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇರುವುದು ಸಂಶಯಾಸ್ಪದ. ಇನ್ನು ಆ ಕಾನೂನುಗಳು ಯಾವ ರೀತಿ ಜನಪರವಾಗಿರಬಲ್ಲವು? ಅವುಗಳಲ್ಲಿ ಯಾರ ಹಿತಾಸಕ್ತಿಗಳು ಮೇಲುಗೈ ಸಾಧಿಸಿರಬಹುದು? ಇನ್ನು ಮೇಲುನೋಟಕ್ಕಾದರೂ ತಮ್ಮ ಭ್ರಷ್ಟ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕಾನೂನುಗಳ ಅನುಷ್ಠಾನದ ವಿಚಾರದಲ್ಲಿ ಯಾವ ಸ್ವಾರ್ಥಿಗಳು ತಾನೆ ಆಸಕ್ತಿ ತಾಳುತ್ತಾರೆ? ಇದು ಕೇವಲ ಕರ್ನಾಟಕದ್ದಷ್ಟೇ ಕತೆಯಲ್ಲ. ಭಾರತದ ಬಹುಪಾಲು ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಇಂತಹುದೇ ಪರಿಸ್ಥಿತಿ ಇದೆ.

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವುದು ಪ್ರಬುದ್ಧವಾದ, ಪ್ರಬಲವಾದ ಕಾನೂನುಗಳಿಂದ ಮತ್ತು ಅವುಗಳ ಅನುಷ್ಠಾನದಿಂದ. ಹೊಸ ಕಾನೂನುಗಳ ರಚನೆ ಮಾಡುವುದು ಮತ್ತು ಈಗಾಗಲೇ ಇದ್ದಿರುವ ಕಾನೂನುಗಳಲ್ಲಿ ಇದ್ದಿರಬಹುದಾದ ಲೋಪದೋಷಗಳಿಗೆ ಸೂಕ್ತ ತಿದ್ದುಪಡಿ ಮಾಡುವುದು ಶಾಸಕರ-ಸಂಸದರ ಕರ್ತವ್ಯ. ಇಂದಿನ ಬಹುತೇಕ ಜನಪ್ರತಿನಿಧಿಗಳಿಗೆ ಈ ಕರ್ತವ್ಯದ ಅರಿವೇ ಇಲ್ಲ. ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆಯೂ ಅವರಿಗಿಲ್ಲ. ವಿದ್ಯಾರ್ಹತೆಯ ಮಾತು ಒಂದೆಡೆ ಇರಲಿ; ನ್ಯಾಯಪರವಾಗಿರಬೇಕು, ನೀತಿಪರವಾಗಿರಬೇಕು ಎಂಬ ಮೂಲ ನೈತಿಕ ಪಾಠವೂ ಇಂದಿನ ಜನಪ್ರತಿನಿಧಿಗಳಿಗೆ ಇಲ್ಲ. ಅನೈತಿಕ ಮತ್ತು ಅಕ್ರಮ ಮಾರ್ಗಗಳಿಂದ ಹಣ ಮಾಡಿರುವವರೆ ಇಂದು ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಬಹುಸಂಖ್ಯೆಯಲ್ಲಿ ಗೆದ್ದುಬರುತ್ತಿದ್ದಾರೆ. ಹೀಗಿರುವಾಗ ಇವರಿಂದ ಕಾಲಕಾಲಕ್ಕೆ ವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ತಡೆಗಟ್ಟುವಂತಹ ಕಾನೂನುಗಳನ್ನು ಅಪೇಕ್ಷಿಸುವುದು ಕಡುಮೂರ್ಖತನ. ಇವರು ಭ್ರಷ್ಟತೆಯಲ್ಲಿ ಪಾಲುದಾರರಷ್ಟೇ ಅಲ್ಲ, ಅದರ ಪೋಷಕರೂ ಕೂಡಾ ಹೌದು.

ಆದರೆ ಈ ನಾಡನ್ನು ಪ್ರೀತಿಸುವ, ಭಾರತದ ಜನಸಮುದಾಯ ನೈತಿಕತೆಯ ತಳಹದಿಯ ಮೇಲೆ ವಿಕಾಸಗೊಳ್ಳಬೇಕು ಮತ್ತು ಅದು ವಿಶ್ವದ ಸ್ವಾತಂತ್ರ್ಯಪ್ರೇಮಿಗಳಿಗೆ ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಆಶಾಕಿರಣವಾಗಿ ಆಸರೆಯಾಗಿ ಇರಬೇಕು ಎಂದು ಬಯಸುವ ಜನರೂ ಈ ದೇಶದಲ್ಲಿದ್ದಾರೆ. ನಮ್ಮ ಸಮಾಜ ತನ್ನ ಮೌಲ್ಯಗಳನ್ನು ಕಳೆದುಕೊಂಡು ಅಧ:ಪತನದತ್ತ ನಡೆಯುವಾಗಲೆಲ್ಲ ಇಂತಹವರು ಧ್ವನಿ ಎತ್ತುತ್ತಾರೆ. ಈಗ ಆಗುತ್ತಿರುವುದೂ ಅದೇ. ಇದರಲ್ಲಿ ಚಿತ್ತಶುದ್ಧಿಯಿಲ್ಲದ ಮತ್ತು ಈ ಚಳವಳಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಆಸೆಯುಳ್ಳ ಸ್ವಾರ್ಥಿಗಳೂ ಹಲವರಿರಬಹುದು. ಆದರೆ ಈಗಿನ ಎಲ್ಲ ವಿರೋಧಕ್ಕೂ ಮತ್ತು ಚಳವಳಿಯ ಆರಂಭಕ್ಕೆ ಪ್ರೇರಕರಾದವರು ಮಾತ್ರ ಇಂದಿನ ಅಧ:ಪತನವನ್ನು ಕಾಣಬಲ್ಲವರು ಮತ್ತು ಅದರ ಸುತ್ತ ಜನಾಭಿಪ್ರಾಯವನ್ನು ರೂಪಿಸುವ ಇಚ್ಚೆಯುಳ್ಳವರು. ಈ ಹಿನ್ನೆಲೆಯಲ್ಲಿ ನಾಡಿನ ಜನತೆ ಇಂದಿನ ಭಷ್ಟಾಚಾರ ವಿರೋಧಿ ಆಂದೋಲನವನ್ನು ಅದರ ಸದುದ್ದೇಶಗಳಿಗಾದರೂ ಬೆಂಬಲಿಸಬೇಕಿದೆ.

ನಮ್ಮ ಈಗಿನ ಗಣರಾಜ್ಯ ವ್ಯವಸ್ಥೆಯನ್ನು ಹತ್ತಿರದಿಂದ ಮತ್ತು ಕಾಳಜಿಯಿಂದ ನೋಡಬಲ್ಲಂತಹ ಕೆಲವರು, ಈ ಚಳವಳಿ ನಮ್ಮ ಜನಪ್ರತಿನಿಧಿಗಳನ್ನು ಮತ್ತು ಪಾರ್ಲಿಮೆಂಟನ್ನು ನಿಷ್ಪ್ರಯೋಜಕಗೊಳಿಸಿ ಪ್ರಜಾಪ್ರಭುತ್ವಕ್ಕೆ ಕೇಡು ಮಾಡುತ್ತದೆ, ಎನ್ನುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿಲ್ಲದ ಸಾಮಾಜಿಕ ನಾಯಕರು ಸಂವಿಧಾನೇತರ ಶಕ್ತಿಗಳಾಗಿ ಹೊಮ್ಮುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರ ಈ ಮಾತಲ್ಲಿ ಸತ್ಯಾಂಶವಿದೆ. ಆದರೆ ಇವತ್ತಿನ ವಾಸ್ತವ ಏನೆಂದರೆ, ಜನಪ್ರತಿನಿಧಿಗಳು ನಿಭಾಯಿಸಬೇಕಾದ ಜವಾಬ್ದಾರಿಗಳು ಈಗಾಗಲೇ ಸಂಪೂರ್ಣವಾಗಿ ಕುಸಿದುಹೋಗಿವೆ. ರಸ್ತೆಗಳಲ್ಲಿ ರಕ್ತ ಹರಿಯುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ನಮ್ಮದು ಇಂದು ಮೌಲ್ಯಗಳಿಲ್ಲದ, ಕಾನೂನುಗಳಿಲ್ಲದ, ವ್ಯವಸ್ಥೆಯನ್ನು ಕೊಂಡುಕೊಳ್ಳಬಲ್ಲ ತಾಕತ್ತಿನವರ ಅವ್ಯವಸ್ಥಿತ ರಾಜಕೀಯ ಪರಿಸ್ಥಿತಿ. ಒಂದು ಕೋನದಿಂದ ಈ ಅವ್ಯವಸ್ಥಿತ ಅರಾಜಕ ಅಸ್ಥಿರತೆಯೂ ಒಂದು ರೀತಿಯ ಸ್ಥಿರ ವ್ಯವಸ್ಥೆಯಾಗಿ ಕಾಣಿಸುತ್ತದೆ ಅಷ್ಟೇ. ಅದು ಮರಳುಗಾಡಿನ ಮರೀಚಿಕೆ. ಹಾಗಾಗಿಯೇ ಈಗಿನ ಚಳವಳಿ, ಈಗ ಆಗಿರುವ ಪ್ರಜಾಪ್ರಭುತ್ವದ ಅವಹೇಳನ ಮತ್ತು ನಿರ್ವಿಯತೆಗಿಂತ ಇನ್ನೂ ಹೆಚ್ಚಿನ ನಿರ್ವಿಯತೆಯನ್ನೇನೂ ಉಂಟು ಮಾಡುವುದಿಲ್ಲ. ಮಾಡುವುದಿದ್ದರೆ ಅದು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬೇರುಮಟ್ಟದ ಪಸರಿಸುವಿಕೆಗೆ ಸಹಾಯ ಮಾಡೀತೆ ಹೊರತು ಅದರ ದಮನಕ್ಕಲ್ಲ. ಈ ಬಗ್ಗೆ ಭಯ ಪಡುವುದಕ್ಕಿಂತ ನಮ್ಮ ರಾಜಕೀಯ ನಾಯಕರ ಕುತಂತ್ರ ಮತ್ತು ಅಯೋಗ್ಯತೆಯತ್ತ ನಮ್ಮ ಗಮನ ಇರಬೇಕು. ಅವರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.

ಚಿತ್ರಕೃಪೆ: ವಿಕಿಪೀಡಿಯ

ರವಿ ಕೃಷ್ಣಾ ರೆಡ್ಡಿ

ಅಣ್ಣಾ ಹಜಾರೆ, ರಾಮಚಂದ್ರ ಗುಹಾ, ಗಂಗಾಧರ ಮೊದಲಿಯಾರ್‌

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಇಂದಿನ ಎರಡು ಅಂಕಣ ಲೇಖನಗಳು ಬಹಳ ಗಂಭೀರ ವಿಚಾರಗಳನ್ನು ಪ್ರಬುದ್ಧವಾಗಿ ಮತ್ತು ತೀಕ್ಷಣವಾಗಿ ಮಂಡಿಸಿವೆ.

ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾರ “ಅಣ್ಣಾ ಹಜಾರೆ ಹೋರಾಟದ ಶಕ್ತಿ ಮತ್ತು ಮಿತಿ” ಲೇಖನ ಹಜಾರೆಯವರ ಹೋರಾಟವನ್ನಷ್ಟೆ ಅಲ್ಲದೆ ಅವರ ಕೆಲವು ಚಿಂತನೆಗಳನ್ನೂ ಸಹ ವಿಮರ್ಶೆಗೆ ಒಡ್ಡಿದೆ. ನನ್ನ ಪ್ರಕಾರ ಆ ಲೇಖನದ ಬಹುಮುಖ್ಯ ಅಂಶಗಳು ಇವು:

“ಹಾಗೆ ಹೇಳಿದ ನಂತರವೂ ಅಣ್ಣಾ ಜೊತೆಗೆ ಅತಿಯಾಗಿ ಗುರುತಿಸಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಜಾರೆ  ಒಳ್ಳೆಯ ವ್ಯಕ್ತಿ. ಬಹುಶಃ ಸಂತನಂತಹ ವ್ಯಕ್ತಿ. ಆದರೆ ಅವರ ಗ್ರಹಿಕೆ, ಗ್ರಾಮದ ಹಿರಿಯನ ಮಟ್ಟದಲ್ಲಷ್ಟೇ ಉಳಿದುಬಿಡುತ್ತದೆ.

ಅಣ್ಣಾ ಹಜಾರೆ ಅವರ ಶಕ್ತಿ ಹಾಗೂ ಮಿತಿಗಳೆರಡನ್ನೂ  ಈ ವರ್ಷದ ಕೊನೆಗೆ ಬಿಡುಗಡೆ ಆಗಲಿರುವ ಮುಕುಲ್ ಶರ್ಮಾ ಅವರ `ಗ್ರೀನ್ ಅಂಡ್ ಸ್ಯಾಫ್ರನ್` ಪುಸ್ತಕದಲ್ಲಿ ಚೆನ್ನಾಗಿ ಗುರುತಿಸಲಾಗಿದೆ. ಶರ್ಮಾ ಅವರು ಬಹಳ ಜನ ಮೆಚ್ಚುವಂತಹ ಪರಿಸರ ಪತ್ರಕರ್ತ.

ರಾಲೇಗಾಂವ್ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಅವರು ಮಾಡಿದ್ದಾರೆ. ಅಲ್ಲಿ ಕಂಡ ಸಂಗತಿಗಳಿಂದ ಅವರು ಪ್ರಭಾವಿತರಾಗಿದ್ದಾರೆ. ಸಮರ್ಪಕ  ಜಲ ನಿರ್ವಹಣೆ ಬೆಳೆ ಇಳುವರಿಯನ್ನು ಸಾಕಷ್ಟು ಹೆಚ್ಚಿಸಿದೆ. ಇದರಿಂದಾಗಿ ಆದಾಯ ಹೆಚ್ಚಿ ಸಾಲದ ಹೊರೆಗಳನ್ನೂ  ಜನರಿಗೆ ಕಡಿಮೆ ಮಾಡಿದೆ. ಬದಲಿಗೆ, ಅಣ್ಣಾ ಹಜಾರೆ ಅವರ ಮಾರ್ಗ `ಆಳದಲ್ಲಿ ಬ್ರಾಹ್ಮಣಿಕೆ`ಯದು ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ.

ಮದ್ಯ, ತಂಬಾಕು ಹಾಗೂ ಕೇಬಲ್ ಟಿವಿಗೂ ಅಲ್ಲಿ ನಿಷೇಧವಿದೆ. ಸಸ್ಯಾಹಾರವನ್ನೇ ಅಳವಡಿಸಿಕೊಳ್ಳಲು ದಲಿತ ಕುಟುಂಬಗಳಿಗೆ ಒತ್ತಾಯಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಂಬಕ್ಕೆ ಕಟ್ಟಿ  ಹೊಡೆಯಲಾಗಿದೆ.

ಹಜಾರೆಯವರ ಸೂಚನೆಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳೇ ನಡೆದಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ, ರಾಲೇಗಾಂವ್ ಸಿದ್ಧಿಯಲ್ಲಿ ಪ್ರಚಾರಕ್ಕೇ ಅವಕಾಶ ನೀಡಿರಲಿಲ್ಲ. `ಆಧುನಿಕ ಪ್ರಜಾಪ್ರಭುತ್ವದ ಅನೇಕ ನಿರ್ಣಾಯಕ ಆದರ್ಶಗಳಿಗೆ ಹೊರತಾಗಿರುವುದು, ಈ ಪ್ರಾಮಾಣಿಕ ಸುಧಾರಣಾ ಪ್ರಯೋಗದಲ್ಲಿ ಬಹುಮುಖ್ಯವಾದದ್ದು` ಎಂದು ಈ ವರದಿಗಾರ ಬರೆದಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಅಣ್ಣಾ ಹಜಾರೆ ಅವರು ಸ್ವಯಂಪ್ರೇರಿತರಾಗಿ ನೀಡುತ್ತಿರುವ ಹೇಳಿಕೆಗಳು ವಿಶ್ವಾಸವನ್ನು ಮೂಡಿಸುವುದಿಲ್ಲ.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕಕ್ಕೆ ಇಷ್ಟೇ ಮುಖ್ಯವಾದ ಲೇಖನ ಗಂಗಾಧರ ಮೊದಲಿಯಾರ್‌ರ “ಸಿನಿಮಾದೊಳಗೇ ಒಬ್ಬ `ಅಣ್ಣಾ’ ಇದ್ದಾನಲ್ಲಾ” ಅಂಕಣ ಲೇಖನ. It’s a shame that something of this importance and critical had to be published in a cinema supplement rather in the op-ed page. ಈ ಲೇಖನ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವ ಸಿನಿಮಾ ಲೋಕದ ವ್ಯಕ್ತಿಗಳ ಹಿನ್ನೆಲೆಯಲ್ಲಿ ಕೆಲವು ಕೇಳಲೇಬೇಕಿದ್ದ ಪ್ರಶ್ನೆಗಳನ್ನು ಎತ್ತಿರುವುದೇ ಅಲ್ಲದೆ ಹೇಳಲೇಬೇಕಾದ ಉತ್ತರಗಳನ್ನೂ ಕೊಡುತ್ತದೆ. ಆ ಲೇಖನದ ಕೆಲವು ಸಾಲುಗಳು:

“ಲಾಂಗು ಮಚ್ಚುಗಳನ್ನು ಹಿಡಿದು, ಭೂಗತ ಲೋಕದ ಡಾನ್ ಆಗಿ, ಯುವಕರು ಕತ್ತಿ, ಚಾಕು ಚೂರಿ ಹಿಡಿಯಲು ಪ್ರೇರಣೆಯಾಗುವ `ಜೋಗಯ್ಯ` ಚಿತ್ರದ ಬಿಡುಗಡೆಗೆ ಎರಡು ದಿನ ಮುಂಚೆ ನಟ ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಸ್ವಾತಂತ್ರ್ಯಯೋಧರ ಉದ್ಯಾನವನದಲ್ಲಿ ನಡೆಯುತ್ತಿರುವ ನಿರಶನ ವೇದಿಕೆಯಲ್ಲಿ ಕಾಣಿಸಿಕೊಂಡರು.

ಸಿನಿಮಾ ನಟರು ಹೀಗೆ ದೇಶ ಸೇವೆಗೆ ಮುಂದಾಗುತ್ತಿರುವ ವೇಳೆಯಲ್ಲೇ ಕೆಲ ದಿನಗಳ ಹಿಂದೆ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ.  ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ನಿರ್ಮಾಪಕ ಕೆ.ಮಂಜು ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಕಿರುತೆರೆ ನಟರೂ, ನಿರ್ಮಾಪಕರೂ, ನಿರ್ದೇಶಕರೂ ಆಗಿರುವ ಸಿಹಿಕಹಿ ಚಂದ್ರು, ರವಿಕಿರಣ್ ಅವರುಗಳ ಭವ್ಯ ಬಂಗಲೆಗಳನ್ನು ಜಾಲಾಡಲಾಯಿತು. ಕೆಲವು ನಟರು, ನಿರ್ದೇಶಕರು, ನಟಿಯರು ಟಿವಿ ಚಾನಲ್ ಕಚೇರಿಗೆ ನುಗ್ಗಿ, ದಾಂದಲೆ ಮಾಡಿ ಸುದ್ದಿ ಮಾಡಿದರು. ಅತ್ತ ಕೇರಳದಲ್ಲಿ ಸೂಪರ್‌ಸ್ಟಾರ್‌ಗಳೆಂದೇ ಅಭಿಮಾನಿಗಳು ಆರಾಧಿಸುವ ಮುಮ್ಮಟಿ, ಮೋಹನ್‌ಲಾಲ್ ಅವರುಗಳ ಮನೆಗಳ ಮೇಲೆ ಸತತ ಮೂರುದಿನ ಆದಾಯ ತೆರಿಗೆ ವಂಚನೆ ಶಂಕೆಯಿಂದ ದಾಳಿ ನಡೆಸಿದ ತನಿಖಾಧಿಕಾರಿಗಳು ತಲಾ 30 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡರು. ಇಂತಹ ಜನ ಇಂದು `ಜನಲೋಕಪಾಲ`ಕ್ಕೆ ಒತ್ತಾಯಿಸಿ, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ತೊಲಗಿಸಲು ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದಿರುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ

ಆರಂಭದ ದಶಕಗಳಲ್ಲಿ ಸಿನಿಮಾದಲ್ಲಿ ಜಮೀನ್ದಾರಿ ಪದ್ಧತಿ, ಅಲ್ಲಿನ ಕ್ರೌರ್ಯ ರೀತಿ ನೀತಿಗಳನ್ನು ವಿಶ್ಲೇಷಿಸುವ ಚಿತ್ರಗಳನ್ನು ಕಾಣಬಹುದಿತ್ತು. ಸ್ವಾತಂತ್ರ್ಯಾ ನಂತರ ತಲೆದೋರಿದ ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಸಮಸ್ಯೆ, ಬಡತನ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮೊದಲಾದ ಸಮಸ್ಯೆಗಳ ಕಡೆ ಸಿನಿಮಾ ಮಂದಿ ಗಮನ ಹರಿಸಿದ್ದರು.

70ರ ದಶಕದ ನಂತರ ಸಿನಿಮಾಕ್ಕೆ ಯಾವುದೇ ಸ್ಪಷ್ಟ ನಿಲುವೇ ಇಲ್ಲದೆ, ಸಾಮಾಜಿಕಬದ್ಧತೆಯೇ ಇಲ್ಲದೆ ಜನರಿಗೆ ಮನರಂಜನೆ ಒದಗಿಸುವುದೊಂದೇ ಸಿನಿಮಾ ಉದ್ದೇಶ ಎನ್ನುವಂತಾಯಿತು. ಗಾಂಧೀಜಿ ಅವರನ್ನು ತೋರಿಸುವುದು, ಅವರ ಆದರ್ಶಗಳನ್ನು ಹೇಳುವುದು ಈಗ ಒಂದು ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. `ಲಗೇ ರಹೋ ಮುನ್ನಾಬಾಯಿ` ನೆನಪಿಸಿಕೊಳ್ಳಿ. ಗೂಂಡಾಗಿರಿ ಮಾಡುತ್ತಿದ್ದವನು ಗಾಂಧೀಗಿರಿ ಮಾಡಲಾರಂಭಿಸುವುದು ಗಾಂಧೀಜಿಯವರನ್ನು ವಿಡಂಬಿಸಿದಂತೆಯೇ ಅಲ್ಲವೇ? ನಮ್ಮ ಬಹುತೇಕ ಸಿನಿಮಾಗಳಲ್ಲಿ ಕೆಟ್ಟ ರಾಜಕಾರಣಿಗಳನ್ನು ತೋರಿಸುವುದು ಅವರ ಗಾಂಧೀ ಟೋಪಿ ಮೂಲಕವೇ! ಈಗ ಸಿನಿಮಾ ನಟರು ಗಾಂಧೀ ಟೋಪಿ ಹಾಕಿಕೊಂಡು ಬೀದಿಗಿಳಿದಿದ್ದಾರೆ!

ಸಮಾಜವನ್ನು ಪರಿವರ್ತಿಸುವ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಮೌಢ್ಯವನ್ನು ತೊಲಗಿಸುವ, ನೈತಿಕ ವಾತಾವರಣ ಸೃಷ್ಟಿಸುವ, ಭ್ರಷ್ಟಾಚಾರದ ವಿರುದ್ಧ ಜನರನ್ನು ಕೆರಳಿಸುವ ಪ್ರಬಲ ಹಾಗೂ ಪ್ರಖರ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ ಎನ್ನುವ ವಾಸ್ತವ ಸತ್ಯವೇ ನಮ್ಮ ಸಿನಿಮಾ ಜನಕ್ಕೆ ಗೊತ್ತಿಲ್ಲವಲ್ಲಾ ಎಂದು ಮರುಕವಾಗುತ್ತಿದೆ. ಭಾರತದಲ್ಲಿ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ಅಣ್ಣಾ ಹಜಾರೆ ಆಗಬಹುದು ಎನ್ನುವ  ಮಾಧ್ಯಮಶಕ್ತಿಯನ್ನೇ ನಮ್ಮ ಸಿನಿಮಾ ಮಂದಿ ಮನವರಿಕೆ ಮಾಡಿಕೊಂಡಿಲ್ಲ.

ಸಿನಿಮಾದ ಪ್ರಭಾವೀ ಆಯಸ್ಕಾಂತ ಶಕ್ತಿಯನ್ನು ಬಳಸಿಕೊಳ್ಳಲು ನಮ್ಮವರು ವಿಫಲರಾದರೆಂದೇ ಹೇಳಬೇಕು. ಸಿನಿಮಾ ಒಂದು ದೇಶವನ್ನೇ ಕಟ್ಟಲು ಏಣಿ ಆಗಬಹುದು ಎನ್ನುವುದನ್ನು ರಷ್ಯಾ ನೋಡಿ ಕಲಿಯಬೇಕು. ಬಡತನ, ಅನಕ್ಷರತೆ, ನಿರುದ್ಯೋಗ, ಮೌಢ್ಯ ಎಲ್ಲವೂ ತುಂಬಿತುಳುಕುತ್ತಿದ್ದ ಭಾರತ ದೇಶಕ್ಕೆ ಸಿನಿಮಾ ಪರಿವರ್ತನೆಯ ಹಾದಿಗಳನ್ನು ತೋರಬಹುದಿತ್ತು. ಭಾರತದಲ್ಲಿ ಸಿನಿಮಾ ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತ ದಾರಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

Screenshot courtesy: ಪ್ರಜಾವಾಣಿ

ರವಿ ಕೃಷ್ಣಾ ರೆಡ್ಡಿ