“ವರ್ತಮಾನ”ಕ್ಕೊಂದು ಪೀಠಿಕೆ…

ಸ್ನೇಹಿತರೆ,

ಕರ್ನಾಟಕದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಇಂದು ಒಂದು ವಿಶಿಷ್ಟವಾದ ಚಲನಾವಸ್ಥೆಯಲ್ಲಿರುವುದು ತಮಗೆಲ್ಲ ತಿಳಿದಿರುವ ಸಂಗತಿಯೇ. ಪ್ರಪಂಚದಾದ್ಯಂತ ಅನೇಕ ದೇಶಗಳು ಮತ್ತು ಸಮುದಾಯಗಳು ಆಧುನಿಕತೆಯತ್ತ ಮತ್ತು ಒಂದು ಉತ್ತಮ ಆಡಳಿತ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ ಅದು ಸಹಜವಾದದ್ದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಘಟನೆಗಳು ನಮ್ಮ ಮಧ್ಯೆ ಪ್ರತಿನಿತ್ಯ ನಡೆಯುತ್ತಿವೆ. ವೈಯಕ್ತಿಕ ನೈತಿಕತೆ ಉಳಿಸಿಕೊಳ್ಳುವುದೇ ಈ ಸಂದರ್ಭದಲ್ಲಿ ಒಂದು ಸವಾಲಾಗಿ ಹೋಗಿದೆ. ಹಾಗೆಯೇ, ಆಶಾವಾದವನ್ನೂ ಸಹ.

ಹೀಗಿರುವಾಗಲೂ, ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಅನೇಕ ಪ್ರಾಮಾಣಿಕ ಜನರು ತಮ್ಮದೇ ನೆಲೆಯಲ್ಲಿ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಕೆಲಸಗಳನು ಮಾಡುತ್ತಲೇ ಇದ್ದಾರೆ. ಆದರೆ ಸಮಾಜ ಇಂದು ಅಂತಹ ಕೆಲಸಗಳನ್ನು ಪ್ರಶಂಸಿಸುತ್ತಿದೆಯೇ ಎನ್ನುವುದು ಸಂಶಯಕ್ಕೂ ಆಸ್ಪದವಿಲ್ಲದಷ್ಟು ನಿರಾಶಾದಾಯಕವಾಗಿದೆ. ಸಂಪತ್ತಿನ ಮತ್ತು ದೊಡ್ಡಸ್ತಿಕೆಯ ಹುಡುಕಾಟದಲ್ಲಿ ಇಂದಿನ ಸಮಾಜ ನ್ಯಾಯಾನ್ಯಾಯದ ವಿವೇಚನೆಯಿಲ್ಲದೆ ಸುಲಭಮಾರ್ಗಗಳ ಹುಡುಕಾಟದಲ್ಲಿದೆ. ಭ್ರಷ್ಟಾಚಾರ ಎಲ್ಲಿಯೋ ಕೆಲವರಿಗೆ ಸಂಬಂಧಪಟ್ಟ ವಿಷಯವಾಗಿ, ಬಹುತೇಕ ಜನ ಅದರೊಡನೆ ರಾಜಿ ಮಾಡಿಕೊಂಡುಬಿಟ್ಟಿದ್ದಾರೆ. “ಭ್ರಷ್ಟರು ಯಾರಿಲ್ಲ?” ಎನ್ನುವ ಘೋಷ ವಾಕ್ಯವೇ ಇಂದು ಎಲ್ಲಾ ಜನರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿರುವ ವಾದವಾಗಿದೆ. ಹಾಗೆ ಹೇಳುವುದೇ ಒಂದು ನೈತಿಕ ಅಧ:ಪತನ ಎಂದು ಹೇಳುವವರಾಗಲಿ ಮತ್ತು ಅದನ್ನು ಕೇಳಿಸಿಕೊಂಡು ಒಪ್ಪಿಕೊಳ್ಳುವವರಿಗಾಗಲಿ ಅರ್ಥವಾಗುತ್ತಿಲ್ಲ. ಅಥವ ಅವರು ಬೇಕೆಂತಲೇ ಅದನ್ನು ನಿರಾಕರಿಸುತ್ತಿದ್ದಾರೆ. ಇದೆಲ್ಲ ಹೇಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ, ಪ್ರಗತಿ, ಸಮಾನತೆಯ ಸಾಧನೆಗೆ ಮಹಾಗೋಡೆಯಾಗಿ ನಿಂತಿವೆ ಎಂದು ವಿವರಿಸುವುದೇ ಇಂದಿನ ಬಹುಮುಖ್ಯ ಸವಾಲಾಗಿದೆ.

ಹಾಗೆಯೇ ಹೇಳಿದ ಹಾಗೆ, ನಮ್ಮ ವ್ಯವಸ್ಥೆಯಲ್ಲಿನ ದುಷ್ಟಶಕ್ತಿಗಳ ಜೊತೆ ಇಂದು ನಮ್ಮ ಸಮಾಜ ರಾಜಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಹೋಗಿದೆ ಎಂದರೆ ಇಂದಿನ ನಮ್ಮ ಬಹುತೇಕ ಸಮೂಹ ಮಾಧ್ಯಮಗಳೂ ಇಂದು ಆ ದುಷ್ಟಶಕ್ತಿಗಳ ಪೋಷಕರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಎಂತಹ ಗಂಭೀರ ವಿಷಯವನ್ನೂ ರಂಜನೀಯ ಮಾಡುವಲ್ಲಿ ಮತ್ತು ತನ್ಮೂಲಕ ತಾವು ಪ್ರಸ್ತುತತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಕೆಲಸ ನಡೆದಿದೆ. ಮತ್ತು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಾಗಬೇಕಿದ್ದ ನಮ್ಮ ಅನೇಕ ಪ್ರಗತಿಪರ ಚಿಂತಕರೂ ಇಂದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಮುಟ್ಟಿದ್ದಾರೆ. ಗುಂಪಿನಲ್ಲಿರುವಾಗಲಾದರೂ ನೈತಿಕತೆ ಉಳಿಸಿಕೊಳ್ಳುವ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡುವ ಈ ಜನರೂ ಇಂದು ಕಮ್ಮಿಯಾಗುತ್ತಾ ಹೋಗುತ್ತಿದ್ದಾರೆ. ಇದು ನಮ್ಮ ಸಮಕಾಲೀನ ಸಂದರ್ಭದ ಮಹಾದುರಂತಗಳಲ್ಲೊಂದು.

ಇಂತಹ ಸಂದರ್ಭದಲ್ಲಿ ನಮ್ಮ ವರ್ತಮಾನದ ಆಗುಹೋಗುಗಳನ್ನು ಮತ್ತು ಸವಾಲುಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಮತ್ತು ವಿಮರ್ಶಿಸಿ, ಹಾಗೆಯೇ ಭವಿಷ್ಯದ ದಿನಗಳು ಮತ್ತು ಕಾರ್ಯಗಳು ಹೇಗಿರಬೇಕು ಎಂದು ಸ್ಪಷ್ಟವಾಗಿ ಹೇಳುವ ತುರ್ತು ಇಂದಿನ ನಮ್ಮ ಸಮಾಜಕ್ಕಿದೆ ಎಂದು ನನಗನ್ನಿಸಿತು. ಆ ನಿಟ್ಟಿನಲ್ಲಿ ಒಂದು ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅದು ಸ್ಪಷ್ಟವಾಯಿತು. ಅದು ಇಂಟರ್ನೆಟ್ ಮಾಧ್ಯಮದಲ್ಲಿ ಹಲವಾರು ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದ ಸಾಧ್ಯ ಎನ್ನಿಸಿತು. ಅದರ ಕಾರ್ಯರೂಪವೇ “ವರ್ತಮಾನ”.

ಯಾರು ಒಪ್ಪಲಿ ಬಿಡಲಿ, ಕಳೆದ ನಾಲ್ಕೈದು ಸಾವಿರ ವರ್ಷಗಳ ತನ್ನ ವಿಕಾಸದ ಹಾದಿಯಲ್ಲಿ ಮನುಷ್ಯ ಕೆಲವೊಂದು ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಬಂದಿದ್ದಾನೆ. ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವ; ಇತ್ಯಾದಿ. ಇಲ್ಲಿ “ವರ್ತಮಾನ”ದಲ್ಲಿಯೂ ಅಂತಹ ಮೌಲ್ಯಗಳನ್ನು ಒಪ್ಪಿಕೊಂಡವರಿಗೆ ಮಾತ್ರ ಸ್ಥಾನವಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಅದನ್ನು ನಮ್ಮ ಕಾಲಘಟ್ಟದಲ್ಲಿ ಸಾಧಿಸಿಕೊಳ್ಳಲು ಯತ್ನಿಸುವ ಸಾಮಾಜಿಕ ನ್ಯಾಯ; ಇವು ನಾವು ಒಪ್ಪಿಕೊಂಡ ಸಾರ್ವಜನಿಕ ಮೌಲ್ಯಗಳು. ವೈಯಕ್ತಿಕ ಜೀವನದಲ್ಲಿ ಮೌಲ್ಯಗಳಿಗೆ ಬದ್ಧವಾಗಿ ಜೀವನ ಸಾಗಿಸುವುದು ಮತ್ತು ಪ್ರಾಮಾಣಿಕತೆ ಉಳಿಸಿಕೊಳ್ಳುವುದು ನಮ್ಮ ಜೀವನ ಮೌಲ್ಯಗಳಾಗಬೇಕು. ಈ ಒಟ್ಟೂ ನೆಲೆಯಲ್ಲಿ ನಮಗೆ ಬಹುಶಃ ಗಾಂಧಿಗಿಂತ ಮತ್ತೊಬ್ಬ ಆದರ್ಶಪ್ರಾಯರಿಲ್ಲ. ಇಂತಹ ಒಂದು ಸಮಾನಮನಸ್ಕರ ಕ್ರಿಯಾಶೀಲ ಗುಂಪಿನಿಂದ ಏನೂ ಸಾಧ್ಯವಿದೆ ಎನ್ನುವುದು ನನ್ನ ನಂಬಿಕೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ನಮ್ಮ ವರ್ತಮಾನದ ಸಂದಿಗ್ಧ ಸ್ಥಿತಿಯನ್ನು ನಮ್ಮದೇ ನೆಲೆಯಲ್ಲಿ ಅವಲೋಕಿಸುತ್ತ, ಭವಿಷ್ಯದ ದಿನಗಳು ಹೇಗಿರಬೇಕು ಎಂದು ಪರಿಭಾವಿಸುತ್ತ, ಅದರ ಕಾರ್ಯಸಾಧನೆಗೆ ಕ್ರಿಯಾಶೀಲರಾಗಲು ದಾರಿಗಳನ್ನು ಹುಡುಕುವ ಈ “ವರ್ತಮಾನ”ದ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನಿರಿಕ್ಷಿಸುತ್ತೇವೆ. ಕನ್ನಡ ಮತ್ತು ಕರ್ನಾಟಕದ ನೆಲೆಯಲ್ಲಿ ಪರ್ಯಾಯ ಸಮೂಹ ಮಾಧ್ಯಮವೊಂದರ ಕಾರ್ಯಸಾಧ್ಯತೆಯ ಈ ಪ್ರಯತ್ನದಲ್ಲಿ ನಮ್ಮ ಜೊತೆ ನೀವು ಹಲವಾರು ರೀತಿಯಲ್ಲಿ ತೊಡಗಿಸಿಕೊಳ್ಳಬಹುದು.

 • ಈ “ವರ್ತಮಾನ”ದ ಚೌಕಟ್ಟಿನಲ್ಲಿ ಸೇರುವ ಯಾವುದೇ ವಿಷಯದ ಬಗ್ಗೆ ನಿಮ್ಮ ಲೇಖನ, ಆಡಿಯೋ, ಅಥವ ವಿಡಿಯೋವನ್ನು ನಮಗೆ ಕಳುಹಿಸಬಹುದು.
 • ಇಲ್ಲಿರುವ ಲೇಖನಗಳ ಕುರಿತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
 • ಓದಿ, ನೋಡಿ, ಮೆಚ್ಚಿಗೆಯಾದದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
 • ತಮಗೆ ಸಾಧ್ಯವಾದಲ್ಲಿ ಕೆಲವೊಂದು ಕಾರ್ಯಗಳಿಗೆ ಅನುಕೂಲವಾಗುವಂತೆ ಹಣದ ಸಹಾಯ ಸಹ ಮಾಡಬಹುದು.

ಲೇಖನಗಳನ್ನು ಕಳುಹಿಸಲು ಅಥವ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

editor@vartamaana.com

ಅಥವ

“ವರ್ತಮಾನ”
ನಂ. ೨೨೨, B4, ತುಂಗಭದ್ರ ಬ್ಲಾಕ್,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ
ಬೆಂಗಳೂರು – ೫೬೦೦೪7

ದೂ: ೯೬೮೬೦೮೦೦೦೫

 

 

ತಮ್ಮ ವಿಶ್ವಾಸಿ,
ರವಿ ಕೃಷ್ಣಾ ರೆಡ್ಡಿ

22 thoughts on ““ವರ್ತಮಾನ”ಕ್ಕೊಂದು ಪೀಠಿಕೆ…

 1. ದಿನೇಶ್ ಕುಕ್ಕುಜಡ್ಕ

  ಆಲ್ ದಿ ಬೆಸ್ಟ್. ಜತೆಯಾಗಿರೋಣ. ತಮ್ಮೆಲ್ಲರೊಂದಿಗಿರುವುದು ಖುಷಿ. -ದಿನೇಶ್ ಕುಕ್ಕುಜಡ್ಕ

  Reply
 2. Hanamant haligeri

  ಶುಭವಾಗಲಿ ಸರ್… ನಾನು ಕೂಡ ನಿಮ್ಮೊಂದಿಗೆ….

  Reply
 3. ಆಸು ಹೆಗ್ಡೆ

  ಶುಭಹಾರೈಕೆಗಳು
  ಯಾವುದೇ ತೆರನಾದ ಪೂರ್ವಗ್ರಹವಿಲ್ಲದೇ, ನಿಷ್ಪಕ್ಷಪಾತ ಧೋರಣೆಯನ್ನು ಇಟ್ಟುಕೊಂಡು ಬೆಳೆಯುವ ನಿಟ್ಟಿನಲ್ಲಿನ ಪ್ರಯತ್ನಕ್ಕೆ ನಮ್ಮ ಪ್ರೋತ್ಸಾಹ ಸದಾ ಇದೆ!

  Reply
 4. prakash

  ಹೆಗ್ಗಡೆಯವರೆ, ರವಿಕೃರ ಇಂದ ಅಂತಹ ನಿರೀಕ್ಷೆ ಇಟ್ಕೋಬೇಡಿ. ಅವರಿರುವುದೆ ಪೂರ್ವಗ್ರಪೀಡಿತ ಕಾಂಗ್ರೆಸ್ ಅಜೆಂಡಾಗಳನ್ನು ಹೇರಲು

  Reply
 5. UDAYA KUMAR IRVATHUR

  Dear Ravikrishna Reddy,

  Your dream is shred by many. Yes Gandhi is inevitable, and embedded in the culture and history of modern civilization. But a hidden agenda of cheddi parivara to dilute Gandhism with something stinking need to be taken serious note of. Let us hope that good sense prevail on all those kaki cheddi’s, so that Indian civilization is saved. I hereby extend my support in all your endevours.
  Uday

  Reply
 6. Pingback: www.vartamaana.com – ವರ್ತಮಾನ – ಇಂದಿನ ಸವಾಲು ಮತ್ತು ಭವಿಷ್ಯದ ಕನಸು

 7. sreedhar kallahalla

  ನಿಮ್ಮ ಪತ್ರಿಕೆಯ ಕಾಳಜಿಗಳು ನನ್ನವೂ ಕೂಡ.
  ನಿತ್ಯವೂ ” ವರ್ತಮಾನ”ವನ್ನು ನೋಡುವ ಮನಸ್ಸಾಗಿದೆ. ಜೊತೆಯಲ್ಲಿ ಪ್ರತಿಕ್ರಿಯಿಸಲು ಕೂಡ.
  ವಂದನೆಗಳು

  ನಿಮ್ಮವ, ಶ್ರೀಧರ್ ಕಲ್ಲಹಳ್ಳ, ತೀರ್ಥಹಲ್ಳಿ

  Reply
 8. shashikumar

  ನಾನು ಗೂಗಲ್ ನಲ್ಲಿ ಏನೋ ಹುಡುಕಲು ಕೀಲಿಪದ ಕೊಟ್ಟಾಗ ಬಂದದ್ದು ಈ ವರ್ತಮಾನ ಪತ್ರಿಕೆ. ಕನ್ನಡ ಜನ ಈಗಲಾದರೂ ಎಚ್ಚೆತ್ತುಕೊಂಡು ಇಂತಹ ಕೆಲಸಗಳಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಒಳ್ಳೆಯ ಬೆಳೆವಣಿಗೆ. ಇದು ನಿರಂತರವಾಗಿ ಮುಂದುವರಿಯಬೇಕೆಂಬುದು ನನ್ನಂತಹ ಎಶ್ಟೋ ಕನ್ನಡಿಗರ ಮನದಾಸೆ. ನನ್ನ ಕೈಲಾದ ಸೇವೆ ಮಾಡಲಂತೂ ನಾನು ಸದಾ ಸಿದ್ಧ.

  ನಂಬುಗೆಯ,
  ಶಶಿ

  Reply
 9. chethan ns

  ನಿಮ್ಮ ಜೊತೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಲು ವೇದಿಕೆ ಮಾಡಿಕೊಟ್ಟ ತಮಗೂ ಮತ್ತು ತಮ್ಮ ಪತ್ರಿಕೆಗೂ ಧನ್ಯವಾದಗಳು……ನಿಮ್ಮ ಜೊತೆ ನಾನು ಮೊದಲೆನೇಯದಾಗಿ ಸ್ಕಾರ್ಷ್ ನಿಷೇದ-ಕೋಮುವಾದಿ ಕಾಲೇಜುಗಳ ಸಮಾನತೆಯ ನಿಯಮದ ಬಗ್ಗೆ ನನ್ನ ಅಬಿಪ್ರಾಯ ಹಂಚಿಕೊಂಡಿದ್ದೆನೆ..ನಮಗೆ ಎಲ್ಲಾ ಪತ್ರಿಕೆ ಮತ್ತು ಟಿವಿ ಮಾದ್ಯಮಗಳ ಈಗಿನ ಮನಸ್ಥಿತಿಗಳ ಬಗ್ಗೆ ಬಹಳ ಬೇಸರವಿದೆ…ತಾವು ನಿಷ್ಪಕ್ಷಪಾತದಿಂದ ಈ ಪತ್ರಿಕೆಯನ್ನ ಮುನ್ನಡೆಸಲು ಬಯಸಿದ್ದರೆ ನಮ್ಮ ಸಹಕಾರವಿದೆ
  ಚೇತನ್ ಎನ್ ಎಸ್

  Reply
 10. hussain kadlur

  Dear All Authors, I have been reading many of your articles and all are real Mirror of Indian society. if we TRUE INDIAN LOVER, we need to uphold Indian constitution, secularism and most importantly brotherhood relationship among all caste , creed and religion. In this View I appreciate Mr. Ravi Krishna Ready and all other contemporary authors and we all support your views and news in all respect.. By Hussain Kadlur, Alur Tq, Hassan Dt.

  Reply
 11. ಸಂತೋಷಕುಮಾರ

  ನಿಮ್ಮ ಪ್ರಯತ್ನಕ್ಕೆ ನಾನು ಸದಾ ಕೈ ಜೋಡಿಸುತ್ತೆನೆ

  Reply
 12. Moulana Abdul Hafeez Al Qasmi

  ಶ್ರೀಯುತ ರವಿ ಕೃಷ್ಣಾ ರೆಡ್ಡಿಯವರೇ,
  ಇಂದಿನ ದಿನಗಳಲ್ಲಿ ಇಂತಹ ಪತ್ರಿಕೆಯ ನಮಗೆ ತೀರಾ ಅಗತ್ಯವಿತ್ತು, ಇದಕ್ಕಾಗಿ ತಾವು ತೆಗೆದುಕೊಂಡಂತಹ ನಿರ್ಧಾರ ತುಂಬಾ ಪ್ರಶಂಸನೀಯ. ನಾವು ಸದಾ ನಿಮ್ಮೊಂದಿಗಿದ್ದೇವೆ, ಅಭಿನಂದನೆಗಳು.

  Reply

Leave a Reply

Your email address will not be published. Required fields are marked *