ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?

ಅಣ್ಣಾ ಹಜಾರೆಯವರ ಮತ್ತವರ ಹೋರಾಟದ ಬಗ್ಗೆ ಹಲವರಿಗೆ ಹಲವು ಸಂದೇಹ ಮತ್ತು ಸಂಶಯಗಳಿರುವುದು ಸಹಜ. ಅದರಲ್ಲೂ ನಗರಕೇಂದ್ರಿತ ಮತ್ತು ಮಧ್ಯಮವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಹೋರಾಟ ನೈಜವಾದದ್ದಲ್ಲ, ಮಾಧ್ಯಮ ಸೃಷ್ಟಿ, ಎಂಬ ಗಂಭೀರ ಆರೋಪಗಳಿವೆ.

ನೆನ್ನೆ (17/8/11) NDTV ಯಲ್ಲಿ ಒಂದು ಜನಮತ ನಡೆಸಿದರು. ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ? ಎಂಬುದಾಗಿ. ಮೊಬೈಲ್‌ ಎಸ್‍ಎಂ‍ಎಸ್ ಮೂಲಕ ನಡೆದ ಜನಾಭಿಪ್ರಾಯ ಅದು. ಶೇ.55 ಜನ ಹೌದು ಎಂದರೆ, ಅಲ್ಲ ಎಂದವರು ಶೇ.45.

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಯಾವುದೇ ಒಂದು ಜನಪರ ವಿಚಾರದ ಕುರಿತು ಗಂಭೀರ ಹೋರಾಟವನ್ನೇ ತಮ್ಮ ಬದುಕಾಗಿಸಿಕೊಂಡಿರುವ ಹಲವಾರು ಜನ ಮತ್ತು ಸಂಘಟನೆಗಳು ಈ ಹೋರಾಟದಿಂದ ದೂರವೇ ಉಳಿದಿವೆ. ಇದು ಕೇವಲ ಕರ್ನಾಟಕದ ಉದಾಹರಣೆ ಮಾತ್ರವಲ್ಲ ಎಂದು ನಾವು ಕೆಲವು ಇಂಗ್ಲಿಷ್ ಚಾನಲ್‌ಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಯಾಕೆ ಹೀಗೆ? ಒಂದು ರೀತಿಯಲ್ಲಿ ನೈಜ ಹೋರಾಟಗಾರರು ಎನಿಸಿಕೊಂಡಿರುವವರೆಲ್ಲ ಈ ಹೋರಾಟದಿಂದ ವಿಮುಖರಾಗಿಯೇ ಉಳಿದಿದ್ದಾರೆ. ಕೊನೆಗೆ ವೃತ್ತಿಪರ ಹೋರಾಟಗಾರರೂ ಸಹ!

ಈ ಜನ ಹಗಲುರಾತ್ರಿ ಬೆವರು ಸುರಿಸಿ ಓಡಾಡುವವರು; ಸಂಘಟನೆ ಕಟ್ಟುವವರು; ಅವಕಾಶ ಸಿಕ್ಕ ಎಲ್ಲಾ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ, ಅಸಮಾನತೆಯ ವಿರುದ್ಧ ಮಾತನಾಡುವವರು. ರಾಜಕೀಯವಾಗಿ, ಸಾಮಾಜಿಕವಾಗಿ ತಮ್ಮದೇ ಆದ ಗಂಭೀರ ನಿಲುವುಗಳನ್ನಿಟ್ಟುಕೊಂಡಿರುವವರು. ಸಾಕಷ್ಟು ಬದ್ಧತೆ ಉಳಿಸಿಕೊಂಡವರು. ಕೇವಲ ಬಾಯಿಮಾತಿನ ಆಡಂಬರ ಅಲ್ಲದೆ ಚುನಾವಣೆಯಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು. ಕಡ್ಡಾಯವಾಗಿ ಮತ ಹಾಕುವವರು. ಹಾಗಿದ್ದಲ್ಲಿ ಇವರೇಕೆ ಈ “ಭ್ರಷ್ಟಾಚಾರದ ವಿರುದ್ಧ ಭಾರತ”ದ ಹೋರಾಟದಲ್ಲಿ ತೊಡಗಿಸಿಕೊಂಡಿಲ್ಲ?

ಇದು, ಈಗಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಹಿಪಾಕ್ರಸಿಯನ್ನು ಮತ್ತು ಅವರ ಇಲ್ಲಿಯವರೆಗಿನ ಬೇಜವಾಬ್ದಾರಿಯನ್ನು ನೋಡಿ ಅವರಲ್ಲಿ ನಂಬಿಕೆ ಇಲ್ಲದೆ ಆಗಿರುವ ಸಿನಿಕತೆಯೆ? ಅಥವ ಇಲ್ಲಿ ಅದಕ್ಕಿಂತ ಗಂಭೀರವಾದ ನಗರ-ಗ್ರಾಮೀಣ, ಮೇಲ್ವರ್ಗ-ಕೆಳವರ್ಗ, ಮೇಲ್ಜಾತಿ-ಕೆಳಜಾತಿ, ಇಂತಹುವುಗಳ ಹಿನ್ನೆಲೆಯಲ್ಲಿ ಹುಟ್ಟಿರುವ ಅಪನಂಬಿಕೆಯೆ?

ಈಗ ಒಂದಷ್ಟು ಜನ ಸ್ವಯಂ‍ಪ್ರೇರಿತರಾಗಿ ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಜನ, ವಿಶೇಷವಾಗಿ ಕಾಲೇಜು ಹುಡುಗರು, ಕೆಲವು ವಿದ್ಯಾರ್ಥಿ ಸಂಘಟನೆಗಳ ಒತ್ತಾಯದಿಂದ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಕೆಲವು ಲೆಟರ್-ಹೆಡ್ ಸಂಘಗಳ ಪದಾಧಿಕಾರಿಗಳು ಚಲಾವಣೆಯಲ್ಲಿ ಉಳಿಯುವ ಕಾರಣಕ್ಕಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಇವರೆಲ್ಲರ ಬದ್ಧತೆ ಎಷ್ಟು ದಿನ? ಯಾವ ರೀತಿ?

ನನ್ನ ಪ್ರಕಾರ ಈಗಿನ ಚಳವಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅದೂ ನಗರಗಳಲ್ಲಿ ಬೆಂಬಲ ವ್ಯಕ್ತವಾಗಬೇಕಿತ್ತು. ಎಲ್ಲಾ ವಯೋಮಾನದ ಜನ ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಇದರಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡುತ್ತಿರುವವರು ಸಾವಿರಕ್ಕೆ ಒಬ್ಬರಿದ್ದಂತಿಲ್ಲ. ತ್ಯಾಗಕ್ಕೆ ಸಿದ್ದರಿಲ್ಲದ ಜನ ಬಾಯಿಮಾತಿನ ಬೆಂಬಲ ನೀಡುತ್ತಿದ್ದಾರೆ. ಯಾಕೆ?

ಜೊತೆಗೆ, ಈಗ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಚಿತ್ತಶುದ್ಧಿ ಎಷ್ಟರ ಮಟ್ಟಿಗೆ ಇದೆ? ಇದು ಅಣ್ಣಾ ಹಜಾರೆ ಎಂಬ ವ್ಯಕ್ತಿಯ ಪರವಾಗಿ ಮಾತ್ರವೇ? ಅಥವ ಕೇವಲ ರಾಜಕಾರಣಿ-ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಮಾತ್ರವೇ? ಅಥವ ಜನಲೋಕ್‌ಪಾಲ್ ಮಸೂದೆಯ ಜಾರಿಗಾಗಿ ಮಾತ್ರವೇ? ಅಥವ, ಅದಕ್ಕೂ ಮಿಗಿಲಾಗಿ, ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಾವೂ ಜವಾಬ್ದಾರಿತನದಿಂದ ಪಾಲ್ಗೊಳ್ಳುವ ನಿಟ್ಟಿನಲ್ಲಿ ತಮಗೆ ತಾವೇ ನೀಡಿಕೊಳ್ಳುತ್ತಿರುವ ವಚನವೆ?

ಹಾಗೆಯೇ, ಯಾಕಾಗಿ ಗ್ರಾಮೀಣ ಜನತೆ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕಾಣಿಸುತ್ತಿಲ್ಲ? ಅವರು ಭ್ರಷ್ಟಾಚಾರದ ಮೌನ-ಪೋಷಕರೆ, ಅಥವ ಈ ಚಳವಳಿಯನ್ನು ರೂಪಿಸಿರುವ ರೀತಿಯಲ್ಲಿಯೇ ದೋಷಗಳಿವೆಯೆ? ಮೇಣದ ಬತ್ತಿ ಹತ್ತಿಸುವುದು ಮತ್ತು ಪೆಂಡಾಲ್ ಕೆಳಗೆ ಕೂತು ಘೋಷಣೆ ಕೂಗಿ ಮಾತು ಕೇಳಿಸಿಕೊಂಡು ಎದ್ದು ಹೋಗುವುದು, ಗ್ರಾಮೀಣರಿಗೆ ಪರಕೀಯವಾಗಿ ಕಾಣಿಸುತ್ತಿದೆಯೆ?

ಗಾಂಧಿಜಿಯವರ ಹೋರಾಟದಲ್ಲಿ ಪಾಲ್ಗೊಂಡ ಜನ ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲೂ ತೊಡಗಿಸಿಕೊಂಡರು. ಅನೇಕ ಜನ ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಂಡು ಹೊಸ ಆದರ್ಶಗಳನ್ನು ಮೈದುಂಬಿಸಿಕೊಂಡರು. ಈಗಿನ ಚಳವಳಿಯಿಂದ ಅದು ಸಾಧ್ಯವಿದೆಯೆ? ಈಗ ಬೀದಿಗೆ ಇಳಿದಿರುವವರು ಮುಂದಿನ ಚುನಾವಣೆಗಳಲ್ಲಿ ಕನಿಷ್ಠ ಪಕ್ಷ ಜಾತಿ-ಹಣ-ತೋಳ್ಬಲಗಳನ್ನು ಮೀರಿ ಮತ ಚಲಾಯಿಸಲಿದ್ದಾರೆಯೆ? ಕೊನೆಗೆ ಮತಗಟ್ಟೆಗಾದರೂ ಹೋಗಲಿದ್ದಾರೆಯೆ?

ಈಗಿನ ಚಳವಳಿಯನ್ನು ರೂಪಿಸುತ್ತಿರುವವರು ಈ ಮಾತುಗಳನ್ನು ಆಡದೇ ಇದ್ದಲ್ಲಿ ಮತ್ತು ಆ ನಿಟ್ಟಿನಲ್ಲೂ ಜನ ಜಾಗೃತಿ ಮೂಡಿಸದಿದ್ದಲ್ಲಿ ಇದೊಂದು ಕ್ಷಣಿಕ ಭಾವಾವೇಶದ ಪ್ರತಿಭಟನೆ. ಈ ತಲೆಮಾರಿನ defining-moment ಇನ್ನೂ ಬಂದಿಲ್ಲ ಎಂದೇ ಭಾವಿಸಬೇಕಾಗುತ್ತದೆ. ಹಾಗಾದಲ್ಲಿ ಅದೊಂದು ದುರಂತಗಳ ನಾಳೆಯಾಗುತ್ತದೆ.

(ಚಿತ್ರ-ಕೃಪೆ : ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ.

One thought on “ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?

  1. Pingback: ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?

Leave a Reply

Your email address will not be published. Required fields are marked *