Anna_Hazare

ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…

ಅಣ್ಣಾ ಹಜಾರೆಯವರ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ಯಾವುದೋ ಒಂದು ಲೊಕಪಾಲ್ ಮಸೂದೆ ಮುಂದಿನ ಒಂದೆರಡು ತಿಂಗಳಿನಲ್ಲಿ ಅಂಗೀಕಾರವಾಗುವುದು ಈಗ ನಂಬಬಹುದಾದ ವಿಚಾರ. ಇಂದಲ್ಲ ನಾಳೆ ಯಾವುದೋ ಒಂದು ಲೋಕ್‌ಪಾಲ್ ಬರುತ್ತಿತ್ತು. ಆದರೆ, ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹ ಇಲ್ಲದೇ ಹೋಗಿದ್ದರೆ ಅದು ಇಷ್ಟು ಬೇಗ ಆಗುತ್ತಿರಲಿಲ್ಲ. ಮತ್ತು ಇಷ್ಟು ಪರಿಣಾಮಕಾರಿಯಾಗಿಯೂ ಇರುತ್ತಿರಲಿಲ್ಲ.

Anna_Hazare

Anna_Hazare

ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಮೂಲ ಬೇರು ಇರುವುದು ನಮ್ಮ ಸಮಾಜದಲ್ಲಿ ಸಾರ್ವತ್ರಿಕವಾಗಿಲ್ಲದ ಮೌಲ್ಯಗಳಿಂದ ಮತ್ತು ಪ್ರಜಾಪ್ರಭುತ್ವದ ಆಳವಾದ ಕಲ್ಪನೆ ನಮ್ಮ ಬಹುತೇಕ ದೇಶವಾಸಿಗಳಿಗೆ ಇಲ್ಲದಿರುವುದರಿಂದ. ಮೂರ್ನಾಲ್ಕು ದಶಕಗಳ ಹಿಂದೆ ಕಳ್ಳತನ-ಕೊಲೆ-ಸುಲಿಗೆಯಲ್ಲಿ ತೊಡಗಿದ ಜನರನ್ನು, ಲಂಚ ತೆಗೆದುಕೊಂಡು ಸಿಕ್ಕಿಬೀಳುತ್ತಿದ್ದವರನ್ನು ಸಮಾಜ ಒಂದು ರೀತಿ ನೋಡುತ್ತಿತ್ತು. ಅಘೋಷಿತ ಬಹಿಷ್ಕಾರ ಹಾಕುತ್ತಿತ್ತು. ಆದರೆ ಯಾವಾಗ ದುಡ್ಡು ಮತ್ತು ನಮ್ಮ ಈಗಿನ ಬುದ್ಧಿಗೇಡಿ ಭ್ರಷ್ಟ ರಾಜಕಾರಣಿಗಳ ಅಭಿವೃದ್ಧಿಯ ಕಲ್ಪನೆ ಸಮಾಜದಲ್ಲಿ ಸ್ಥಾನ ಪಡೆದುಕೊಂಡಿತೊ, ಆಗ ನಮ್ಮ ಸಮಾಜದಲ್ಲಿದ್ದ ಅಷ್ಟಿಷ್ಟು ನೀತಿ-ನಿಜಾಯಿತಿಗಳೆಲ್ಲ ಮೂಲೆಗುಂಪಾದವು. ನ್ಯಾಯವಾಗಿರುವುದು, ಸರಳ-ಆದರ್ಶ ಜೀವನ ನಡೆಸುವುದು ಸಮಾಜದ ಪ್ರಕಾರ ಕೇವಲ ಸೋತವರ ಮೌಲ್ಯಗಳಾದವೇ ಹೊರತು ಸಮಾಜದ ಮೌಲ್ಯಗಳಾಗಲಿಲ್ಲ. ನಮ್ಮದೇ ದೇಶದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕಾನೂನಿನ ಪ್ರಕಾರ ನಡೆದುಕೊಳ್ಳುವುದಕ್ಕೆ, ಕಾನೂನು ಪಾಲಿಸುವುದಕ್ಕೆ ನಾವು ಯಾಕಾಗಿ ಲಂಚ ನೀಡಬೇಕು ಎಂದು ಜನ ನಿಂತು ಯೋಚಿಸಲಿಲ್ಲ. ಕೊಡದಿದ್ದರೆ ಕೆಲಸ ಆಗುವುದಿಲ್ಲ; ಎಲ್ಲರೂ ಕೊಡುತ್ತಾರೆ, ನಾವೂ ಕೊಡುವುದರಲ್ಲೇನು ತಪ್ಪು; ಇದು ಲೋಕಸಮ್ಮತ ಎನ್ನುವ ತೀರ್ಮಾನಕ್ಕೆ ಬಹುತೇಕ ಜನ ಬಂದ ಸಂದರ್ಭ ಇದು.

ಇದೇ ಸಮಯದಲ್ಲಿ ನಮ್ಮ ಜನರಿಗೆ ರಾಜಕೀಯ ಪಕ್ಷಗಳಲ್ಲಿ ಆಯ್ಕೆಗಳೂ ಇರಲಿಲ್ಲ. ನಾನು ಇತ್ತೀಚೆಗೆ ಎಲ್ಲರಿಗೂ ಹೇಳುವ ವಿಷಯ ಏನೆಂದರೆ, ’ಯಾವುದಾದರೂ ಒಂದು ಒಳ್ಳೆಯ ನಾಯಕನ ಅಥವ ಪಕ್ಷದ ಆಯ್ಕೆ ಕರ್ನಾಟಕದ ಜನಕ್ಕೆ ಇದ್ದಿದ್ದರೆ ಇಲ್ಲಿ ವರ್ಷದ ಹಿಂದೆಯೇ ಕ್ರಾಂತಿಯಾಗಿಬಿಡುತ್ತಿತ್ತು,’ ಎಂದು. ನಿಸ್ಸಂಶಯವಾಗಿ ಯಡ್ಡಯೂರಪ್ಪ ಮತ್ತವರ ಪಕ್ಷದ ಆಡಳಿತ ಹಗಲುದರೋಡೆಕೋರರದ್ದು. ಆ ಹಗಲುದರೋಡೆಯಿಂದಲೇ ಇಷ್ಟರಲ್ಲಿಯೇ ಮತ್ತೊಂದಷ್ಟು ಕರ್ನಾಟಕದ ರಾಜಕಾರಣಿಗಳು ಜೈಲು ಸೇರಬೇಕಾಗಿ ಬರಬಹುದು. ಆದರೆ ಮಿಕ್ಕ ಪಕ್ಷಗಳ ಕತೆ ಏನು? ಬಿಜೆಪಿಯದು ಹಗಲುದರೋಡೆಯಾದರೆ ಇತರರದು ಒಂದು ರೀತಿಯಲ್ಲಿ ರಾತ್ರಿದರೋಡೆ. ಕರ್ನಾಟಕದ ಕಾಂಗ್ರೆಸ್‌ನಲ್ಲಾಗಲಿ, ಜೆಡಿಎಸ್‌ನಲ್ಲಾಗಲಿ ಆದರ್ಶ ಮತ್ತು ಪ್ರಾಮಾಣಿಕತೆಯನ್ನು ಜನರಲ್ಲಿ ಉತ್ತೇಜಿಸುವ, ತಮ್ಮ ಮಾತುಗಳಲ್ಲಿ ಜನರಿಗೆ ನಂಬಿಕೆ ಉಂಟುಮಾಡುವಂತಹ ಒಬ್ಬನೇ ಒಬ್ಬ ಸಮೂಹನಾಯಕನಿಲ್ಲ. ’ಬಿಜೆಪಿಯವರಿಗೆ ಮಾತ್ರ ಆಡಳಿತ ನಡೆಸುವುದಕ್ಕೆ ಮತ್ತು ಅಕ್ರಮ ರೀತಿಯಲ್ಲಿ ಹಣ ಮಾಡುವುದಕ್ಕೆ ಅವಕಾಶ ಇದೆ, ನಮಗಿಲ್ಲ, ದಯವಿಟ್ಟು ನಮಗೂ ಆ ಅವಕಾಶ ಮಾಡಿಕೊಡಿ,’ ಎನ್ನುವಂತಹ ಮಾತುಗಳು ಇವರಿಂದ ಬರುತ್ತಿತ್ತೇ ಹೊರತು, ’ನಾವು ಅಕ್ರಮ-ಭ್ರಷ್ಟಾಚಾರಗಳಿಲ್ಲದ ರಾಜಕಾರಣ ಮತ್ತು ಆಡಳಿತ ನಡೆಸುತ್ತೇವೆ,’ ಎಂದು ಅವರು ಹೇಳಲು ಆಗಲೇ ಇಲ್ಲ. ಈಗಲೂ ಹೇಳುತ್ತಿಲ್ಲ. ಅವರು ಈ ಸಂದರ್ಭದಲ್ಲಿ ಬಿಜೆಪಿಗಿಂತ ಭಿನ್ನವಾದ ಆಡಳಿತ ಕೊಡಬಲ್ಲರು ಎನ್ನುವಂತಹ ನಂಬಿಕೆ ಕರ್ನಾಟಕದ ಜನಕ್ಕೆ ಬರದೇ ಇದ್ದುದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ವಯಂ‍ಕೃತಾಪರಾಧಗಳು ಕಾರಣವೇ ವಿನಃ ಅನ್ಯವಲ್ಲ.

Sansad_Bhavan

Sansad_Bhavan

ಬಹುಶಃ ಇಂತಹ ಕಾರಣಗಳಿಂದಲೇ ಕರ್ನಾಟಕದ ಜನ ಕಳೆದ ಎರಡು ಮೂರು ವರ್ಷಗಳ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಾಕಷ್ಟು ಬೆಂಬಲ ಕೊಡದೇ ಇದ್ದದ್ದು. ಅದರ ಜೊತೆಗೆ ಜನರ ವೈಯಕ್ತಿಕ ಜಾತಿ ಮೂಲದ ಭ್ರಷ್ಟತೆಯೂ ಸೇರಿತ್ತು. ನಮ್ಮ ಜಾತಿಯವನು ಮಾಡಿದರೆ ಮಾತ್ರ ತಪ್ಪಾ ಎನ್ನುವಂತಹ ಸಮರ್ಥನೆ ನೀಚತನದ್ದು, ಅದನ್ನು ಆಡಲು ಸಂಕೋಚಪಟ್ಟುಕೊಳ್ಳಬೇಕು ಎಂದು ಜಾತಿವಾದಿಗಳು ಅಂದುಕೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿಯೇ ನಾವು ಇಂದಿನ ಅಣ್ಣಾ ಹಜಾರೆ ಹೋರಾಟಕ್ಕೆ ಕರ್ನಾಟಕದಲ್ಲಿ ದೊರೆಯುತ್ತಿರುವ ಜನಬೆಂಬಲವನ್ನು ಗ್ರಹಿಸಲು ಯತ್ನಿಸಬೇಕು. ಇಷ್ಟೂ ದಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಬಂದ ಕರ್ನಾಟಕದ ಹಲವು ಆಕ್ಟಿವಿಸ್ಟ್‌ಗಳಿಗೆ ಹಜಾರೆ ಹೋರಾಟಕ್ಕೆ ದೊರೆಯುತ್ತಿರುವ ಬೆಂಬಲ ಕಸಿವಿಸಿ ಉಂಟುಮಾಡಿರುವುದು ಸಹಜ. ಆದರೆ ಈ ಹೋರಾಟಗಾರರು ಮುಟ್ಟಲು ಸಾಧ್ಯವಾಗದಿದ್ದ ಜನವರ್ಗವನ್ನು ಈ ಅಣ್ಣಾ ಹಜಾರೆ ತಂಡ ಮುಟ್ಟಿದೆ ಎಂದು ಅವರು ತಿಳಿದುಕೊಂಡರೆ ಅವರ ಕಸಿವಿಸಿ ಮತ್ತು ಕೋಪ ಸ್ವಲ್ಪ ಮಟ್ಟಿಗೆ ತಣ್ಣಗಾಗಬಹುದು. ಈ ಹೋರಾಟಕ್ಕೆ ಅಜ್ಜ-ಗಾಂಧೀವಾದಿ-ಅಹಿಂಸೆ-ಉಪವಾಸ ಎಂಬಂತಹ ಸಾಂಸ್ಕೃತಿಕ-ಸಾಮಾಜಿಕ ರೂಪ ಇದೆ ಮತ್ತು ಅದಕ್ಕೆ ಟಿವಿ-ಪತ್ರಿಕಾ ಮಾಧ್ಯಮಗಳ ಅತಿಯಾದ ಉತ್ತೇಜನ ಮತ್ತು ಪ್ರಚಾರವೂ ದೊರಕಿದೆ. ಇದೊಂದು ರೀತಿಯಲ್ಲಿ ಈ ಸಂದರ್ಭದಲ್ಲಿ ಮಾತ್ರವೇ ಸಾಧ್ಯವಾಗಬಹುದಾದ ಘಟನೆಯೇ ಹೊರತು ಎರಡು-ಮೂರು ವರ್ಷಗಳ ಮೊದಲು ಘಟಿಸಲು ಸಾಧ್ಯವೇ ಇರಲಿಲ್ಲ. ಇದು 2G-CWG-ಗಣಿ ಮುಂತಾದ ಬಯಲಿಗೆ ಬಂದಂತಹ ಹಗರಣಗಳ ತದನಂತರದ ಕಾಲಘಟ್ಟದಲ್ಲಿ ಘಟಿಸಿದ ಕ್ರಿಯೆಯೇ ಹೊರತು, ಅವು ಈ ಮಟ್ಟದಲ್ಲಿ ಬಯಲಿಗೆ ಬರದೇ ಹೋಗಿದ್ದಲ್ಲಿ ಇದೇ ಅಣ್ಣಾ ಹಜಾರೆ ಎಷ್ಟೇ ಉಪವಾಸ ಕೂತಿದ್ದರೂ ಜನರಾಗಲಿ ಅಥವ ಮಾಧ್ಯಮಗಳಾಗಲಿ ಈ ಪರಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಅಣ್ಣಾ ಹಜಾರೆ ಮತ್ತವರ ತಂಡದ ಬಗ್ಗೆ ಚಿಂತಕರ ಒಂದು ಗುಂಪಿನ ತಕರಾರು ಏನೇ ಇರಲಿ, ಅದು ಜನಸಾಮಾನ್ಯರಿಗೆ ಅಷ್ಟೇನೂ ಮುಖ್ಯವಾದದ್ದಲ್ಲ. ಸೈದ್ಧಾಂತಿಕ ಹಿನ್ನೆಲೆ ಮತ್ತು ಅದಕ್ಕೆ ಬೇಕಾದ ಓದು ಇಲ್ಲದ ಜನತೆ ಯಾವುದೇ ಸಂದರ್ಭದಲ್ಲಾಗಲಿ ಕೆಟ್ಟತನದ ವಿರುದ್ಧ ಮಾತನಾಡುತ್ತಿರುವವನ ಪರ ನಿಲ್ಲುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ದೊರಕುತ್ತಿರುವ ಜನಬೆಂಬಲ ನಿಜಕ್ಕೂ ಪ್ರಶಂಸನಾರ್ಹ. ಜನರಿಗೆ ಒಂದಲ್ಲ ಒಂದು ಸಮಯದಲ್ಲಿ ಆದರ್ಶಗಳು ಬೇಕು. ನ್ಯಾಯ-ನೀತಿಗಳು ಬೇಕು. ಅದರ ಪರ ನಿಲ್ಲಬೇಕು. ಅದನ್ನೇ ಈಗ ಬಹುತೇಕರು ಮಾಡುತ್ತಿರುವುದು.

ಹಾಗೆಂದ ಮಾತ್ರಕ್ಕೆ ಹಜಾರೆ ತಂಡದ ಕಾರ್ಯವೈಖರಿ ಮತ್ತು ಅವರು ಮುಂದೊಡ್ಡೂತ್ತಿರುವ ಮಸೂದೆಯಲ್ಲಿನ ಲೋಪದೋಷಗಳನ್ನು ವಿಮರ್ಶಿಸುತ್ತಿರುವವರನ್ನು ವಿಮರ್ಶಿಸುವುದಾಗಲಿ, ಅವರನ್ನು ಕೀಳುಮಾಡುವುದಾಗಲ್ಲಿ ಸರಿಯಲ್ಲ. ಇದು ಒಂದು ರೀತಿಯಲ್ಲಿ ಜನಪ್ರೀಯತೆ ಕಳೆದುಕೊಳ್ಳುವ ಕೆಲಸವಾದರೂ ಆಗಲೇಬೇಕಾದ ಕೆಲಸ. ಈ ನಿಟ್ಟಿನಲ್ಲಿ ನಾವು ಅರುಣಾ ರಾಯ್ ಮತ್ತವರ ಸಹಚರರನ್ನು ಮತ್ತು ಆರುಂಧತಿ ರಾಯ್‌ರಂತಹವರನ್ನು ಅಭಿನಂದಿಸಲೇಬೇಕು. ಈ ಸಂದರ್ಭದಲ್ಲಿ ನಾವು ಗಮನವಿಟ್ಟು ಅವಲೋಕಿಸಿದಾಗ, ಅಣ್ಣಾ ಹಜಾರೆ ತಂದದವರ್‍ಯಾರೂ ಅರುಣಾ ರಾಯ್ ಮತ್ತವರ ತಂಡದವರ ವಿರುದ್ಧ ವೈಯಕ್ತಿಕ ದಾಳಿ ಮಾಡುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಜನ್‌ಲೋಕ್‍ಪಾಲ್ ನೈಜ ರೀತಿಯಲ್ಲಿ ಜನರ ಕಾನೂನಾಗುವುದಕ್ಕೆ ಈ ರೀತಿಯ ವಿಮರ್ಶೆ ಅಗತ್ಯ ಎನ್ನುವ ಅರಿವು ಮತ್ತು ತಮ್ಮ ನಿಲುವಿನಲ್ಲಿಯೂ ಕೆಲವೊಂದು ತಪ್ಪುಗಳಿರಬಹುದು ಎನ್ನುವಂತಹ ವಿನಯ ಹಜಾರೆ ತಂಡದಲ್ಲಿರುವುವರಲ್ಲಿ ಇರುವ ಲಕ್ಷಣಗಳಿವೆ. ಅರುಣಾ ರಾಯ್ ಮತ್ತು ಅಣ್ಣಾ ಹಜಾರೆ ತಂಡದವರ ಸೌಜನ್ಯಯುತವಾದ ಭಿನ್ನಾಭಿಪ್ರಾಯ ಮಾದರಿಯಾದಂತಹುದು.

ಇದೇ ಸಂದರ್ಭದಲ್ಲಿ ದೇಶದ ಕೆಲವು ದಲಿತ ವರ್ಗದ ಹಿನ್ನೆಲೆಯ ಚಿಂತಕರು ಈ ಚಳವಳಿ ಮೇಲ್ಜಾತಿಯ-ಮೇಲ್ವರ್ಗಗಳ ಪಿತೂರಿ ಎನ್ನುವಂತೆ ಅಭಿಪ್ರಾಯ ಪಡುತ್ತಿದ್ದಾರೆ. ಅವರು ಹಾಗೆ ಹೇಳಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೇ ಕಾಣಿಸುತ್ತವೆ. ಆಧ್ಯಾತ್ಮ ಎಂಬ ಢೋಂಗಿಯ ಪುಂಗಿಯನ್ನು ಊದುವವರೂ ಈ ಚಳವಳಿಯ ಮುಖ್ಯಪಾತ್ರಧಾರಿಗಳಾಗಿರುವುದು ಈ ಚಳವಳಿಯ ಮಿತಿಗಳಲ್ಲಿ ಒಂದು. ಪ್ರಗತಿಪರ ಚಿಂತನೆ ಮತ್ತು ಸಮಾನತಾವಾದದ ವಿರೋಧಿಗಳು ಈ ಚಳವಳಿಯ ಮೂಲಕ ಜನಮಾನಸದಲ್ಲಿ ಚಲಾವಣೆಯಾಗಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಆದರೆ ಮೇಧಾ ಪಾಟ್ಕರ್‌ರಂತಹವರು, ಹಿಂದೂ ಸಮಾಜದ ಕೆಟ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತುತ್ತಲೆ ಬಂದಿರುವ, ಕೋಮುವಾದವನ್ನು ವಿರೋಧಿಸುವ ಅಗ್ನಿವೇಶ್‌ರಂತಹವರೂ ಈ ಚಳವಳಿಯ ಮುಂಚೂಣಿಯಲ್ಲಿರುವುದರಿಂದ ನಮ್ಮ ವಿಮರ್ಶೆ ಸಂಯಮದಿಂದ ಕೂಡಿರಬೇಕಾದ ಮತ್ತು ಕೆಲವು ವ್ಯಕ್ತಿ-ಗುಂಪುಗಳಿಗೆ ಸೀಮಿತಗೊಳಿಸಬೇಕಾದ ಅವಶ್ಯಕತೆ ಇದೆ. ಆಡಳಿತದಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿ, ಭ್ರಷ್ಟರಿಗೆ ಶಿಕ್ಷೆಯಾದರೆ, ಅದರ ಒಳಿತು ಸಮಾಜದ ಎಲ್ಲಾ ವರ್ಗಗಳಿಗೂ ಇರುತ್ತದೆಯೇ ಹೊರತು ಕೇವಲ ಕೆಲವೇ ಜನವರ್ಗಗಳಿಗೆ ಅಲ್ಲ. ಮಿಕ್ಕ ವಿಷಯಗಳನ್ನು ಪ್ರಸ್ತಾಪಿಸಲು, ಹೋರಾಡಲು, ಮತ್ತೊಂದು ಸಮಯ-ಸಂದರ್ಭ ಇದ್ದೇ ಇರುತ್ತದೆ. ಆ ವಿಷಯಗಳನ್ನು ಪ್ರಾಮಾಣಿಕವಾಗಿ ಎತ್ತಬಲ್ಲ ಜನರೂ ಇರುತ್ತಾರೆ. ಅಣ್ಣಾ ಹಜಾರೆ ಸಮಾಜದ ಎಲ್ಲಾ ವಿಚಾರಗಳನ್ನು ಯೋಚಿಸಬಲ್ಲಂತಹ ಚಿಂತಕರಾಗಲಿ, ಸಮಾಜ ಸುಧಾರಕರಾಗಲಿ ಅಲ್ಲ. ನಮ್ಮ ಎಲ್ಲಾ ವಿಚಾರಗಳಿಗೆ, ಸಮಸ್ಯೆಗಳಿಗೆ ಅವರೇ ನಾಯಕರಾಗಲಿ, ಆದರ್ಶವಾಗಲಿ, ಪರಿಹಾರವಾಗಲಿ, ಅಲ್ಲ. ಆದರೆ, ಈ ಸಂದರ್ಭದಲ್ಲಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ಅವರನ್ನು ನಾಯಕರನ್ನಾಗಿ, ಆದರ್ಶವನ್ನಾಗಿ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಇಲ್ಲಿಯವರೆಗಿನ ಜೀವನದಲ್ಲಿ ಅವರು ಇಂತಹ ಹೋರಾಟವನ್ನು ಮಾಡಿಕೊಂಡೂ ಬಂದಿದ್ದಾರೆ. ಹಾಗಾಗಿ ಅವರು ಯೋಗ್ಯರೂ ಹೌದು, ಸಮರ್ಥರೂ ಹೌದು.

ಮತ್ತು, ಅಣ್ಣಾ ಹಜಾರೆ ನಮ್ಮ ಈಗಿನ ವಿಸ್ಮೃತಿಯಲ್ಲಿದ್ದ ಸಮಾಜವನ್ನು ಗಾಂಧಿಗೆ, ಅವರ ವಿಚಾರಕ್ಕೆ, ಆಚಾರಕ್ಕೆ ಎದುರು ತಂದು ನಿಲ್ಲಿಸಿದ್ದಾರೆ. ಗಾಂಧಿಯವರ ಅವಹೇಳನೆ ಮಾಡುವುದನ್ನೇ ಒಂದು ಮೌಲ್ಯ ಎಂದುಕೊಂಡ ಗುಂಪನ್ನೂ ಅವರು ತಮ್ಮ ಹಿಂದೆ ಬರುವಂತೆ ಮಾಡಿದ್ದಾರೆ. ದೇಶ ಈ ಮೂಲಕವಾದರೂ ಗಾಂಧಿಯನ್ನು ಮತ್ತೊಮ್ಮೆ ಪರಿಚಯಿಸಿಕೊಂಡರೆ ಅದು ಈ ಚಳವಳಿಯ ಸಾರ್ಥಕ್ಯದಲ್ಲೊಂದೆಂದು ನಾವು ಭಾವಿಸಬೇಕು. ದೇಶದ ಅನೇಕ ಕಡೆ ಅಕ್ಷರಶಃ ಲಕ್ಷಾಂತರ ಜನರು ಬೀದಿಗಿಳಿದಿದ್ದರೂ ಈ ಚಳವಳಿ ಅಹಿಂಸೆ ಮತ್ತು ಸೌಜನ್ಯತೆಯನ್ನು ಕಾಪಾಡಿಕೊಂಡಿದೆ ಎಂದರೆ ಅದು ಕೋಮು ಉನ್ಮಾದದಲ್ಲಿ ಆಗಾಗ ಜ್ವಲಿಸುವ ದೇಶದಲ್ಲಿ ಗಾಂಧಿಮಾರ್ಗದ ಜಯವಾಗಿಯೇ ಕಾಣಿಸುತ್ತಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನೋಡಿದರೆ, ಇಲ್ಲಿ ಅನೇಕ ಜನ ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರು ಕೇವಲ ಒಂದು ಪಕ್ಷದ ಭ್ರಷ್ಟಾಚಾರವನ್ನು ಮಾತ್ರ ಟೀಕಿಸುತ್ತಿಲ್ಲ. ಎಲ್ಲರ ಭ್ರಷ್ಟಾಚಾರವನ್ನೂ ಟೀಕಿಸುತ್ತಿದ್ದಾರೆ, ಕೇವಲ ಅದಷ್ಟನ್ನೇ ಅಲ್ಲ, ಅವರು ಮಠಗಳ ಭ್ರಷ್ಟಾಚಾರವನ್ನೂ ಎತ್ತುತ್ತಿದ್ದಾರೆ. ಸಮಾಜದ ಅನೇಕ ಲೋಪದೋಷಗಳನ್ನೂ ಎತ್ತುತ್ತಿದ್ದಾರೆ, ಹಾಗೆಯೇ ಪ್ರಜಾಪ್ರಭುತ್ವದ ಪಾಠವನ್ನೂ ಮಾಡುತ್ತಿದ್ದಾರೆ. ಅತಿರೇಕಗಳೂ ಇರುತ್ತವೆ, ನಿಜ. ಆದರೆ, ಅವೆಲ್ಲವುಗಳ ಮಧ್ಯೆ ಮುಕ್ತವಾದ ವಾತಾವರಣದಲ್ಲಿ ಜನರನ್ನು ಮುಕ್ತವಾಗಿ ಮಾತನಾಡಲು ಬಿಟ್ಟಿರುವುದು ಗಮನಿಸಬೇಕಾದ ಅಂಶ. ಕನ್ನಡದ ಚಿಂತಕ ವರ್ಗ ಮತ್ತು ಕ್ರಾಂತಿಗೀತೆಗಳನ್ನು ಹಾಡಿಕೊಂಡೇ ಒಂದೆರಡು ತಲೆಮಾರುಗಳನ್ನು ಪ್ರಭಾವಿಸುತ್ತ ಬಂದಂತಹ ಗಾಯಕರು ಇಲ್ಲಿ ಮಾಯವಾಗಿರುವುದು ವಿಪರ್ಯಾಸ. ಇದು ಆಯೋಜಕರ ಆಲೋಚನೆಯ ಮಿತಿಯೂ ಹೌದು, ಮತ್ತು ಈ ಚಿಂತಕ-ಗಾಯಕರ ಬದ್ಧತೆಯ ಪ್ರಶ್ನೆಯೂ ಹೌದು. ಇಲ್ಲಿ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತ ವೈಯಕ್ತಿಕ ದೌರ್ಬಲ್ಯಗಳೇ ಕಾರಣವಾಗಿ ಕಾಣಿಸುತ್ತವೆ.

ದುಡ್ಡು ಕೊಟ್ಟು ಜನರನ್ನು ಸೇರಿಸಿ ರ್‍ಯಾಲಿ ಸಂಘಟಿಸುವುದನ್ನು ಕಂಡೂಕಂಡು ನಮ್ಮ ಪ್ರಜಾಪ್ರಭುತ್ವದ ಅಧೋಗತಿಯ ಬಗ್ಗೆ ಚಿಂತಿತರಾಗಿದ್ದವರಿಗೆ ಇಲ್ಲೊಂದು ಉದಾಹರಣೆ ಇದೆ. ಈ ಚಳವಳಿಗೆ ಮಧ್ಯವಯಸ್ಕರು, ಉದ್ಯೋಗದಲ್ಲಿರುವವರು, ಜನಸಾಮಾನ್ಯರು, ಸ್ವಯಂಪ್ರೇರಿತರಾಗಿ ಬರುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ನಮ್ಮ ಮುಂದಿನ ಚಳವಳಿಗಳು ಮತ್ತು ರಾಜಕಾರಣ ನಡೆಯಬೇಕಿರುವುದೇ ಈ ರೀತಿಯಲ್ಲಿ. ಆದರೆ, ಈಗ ಯಾವುದೋ ಹುಮ್ಮಸ್ಸಿನಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ಜನತೆ ಮತ್ತೆ ಚುನಾವಣಾ ಸಮಯದಲ್ಲಿ ತಮ್ಮ ಬೇಜವಾಬ್ದಾರಿ ತೋರಿಸಿದರೆ ಆಗ ಈ ಚಳವಳಿಯ ಮಿತಿ ಗೊತ್ತಾಗುತ್ತದೆ. ಕಳೆದ ಒಂದೆರಡು ಚುನಾವಣೆಗಳಲ್ಲಿ ಇದೇ ಜನ ಯೋಗ್ಯರಾದವರನ್ನು ಆರಿಸಿಕೊಂಡಿದ್ದರೆ ಈ ಚಳವಳಿಯ ಜರೂರತ್ತೇ ಇರುತ್ತಿರಲಿಲ್ಲ. ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಸಂಸದರು ಮತ್ತು ಶಾಸಕರೇ ಬರೆಯುತ್ತಿದ್ದರು. ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇಂತಹುದೊಂದು ಚಳವಳಿಯಲ್ಲಿ ಮಾತ್ರ ಪಾಲ್ಗೊಳ್ಳಲು ಬರುತ್ತಿರುವವರೇ ಇಲ್ಲಿ ದೋಷಿಗಳು. ಭ್ರಷ್ಟಾಚಾರದ ವಿರುದ್ಧ ಕೂಗುವ ಧಿಕ್ಕಾರ ಇವರ ಭ್ರಷ್ಟಾಚಾರಕ್ಕೂ ಮತ್ತು ಬೇಜವಾಬ್ದಾರಿತನಕ್ಕೂ ಕೂಗುವ ಧಿಕ್ಕಾರವೂ ಹೌದು. ಪಕ್ಷಾತೀತವಾದ ಈ ಹೋರಾಟದ ನಂತರ ಜನ ಮತ್ತೆ ತಮಗಿಷ್ಟವಾದ ಪಕ್ಷವನ್ನು ವಿಮರ್ಶೆಗೊಳಪಡಿಸದೇ ಬೆಂಬಲಿಸಿದರೆ ಅದು ಅವರು ಈ ಚಳವಳಿಯಿಂದ ಏನನ್ನೂ ಕಲಿಯಲಿಲ್ಲ ಎಂದಾಗುತ್ತದೆ. ಜಾತಿವಾದಕ್ಕೆ, ಕೋಮುವಾದಕ್ಕೆ, ಹಣಕ್ಕೆ, ಬಲಕ್ಕೆ, ವಿವಿಧ ಲಾಲಸೆಗಳಿಗೆ ಬಲಿಯಾಗದೆ ಬಹುಸಂಖ್ಯಾತ ಜನ ಪ್ರಾಮಾಣಿಕವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಾಗಲಷ್ಟೇ ನಮ್ಮ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ. ಅದು ನಿಜವಾದ ಬದ್ಧತೆ.

(ಚಿತ್ರಕೃಪೆ: ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ

Leave a Reply

Your email address will not be published. Required fields are marked *