Anna_Hazare

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಈಗಿನ ಭ್ರಷ್ಛಾಚಾರ ವಿರೋಧಿ ಆಂದೋಳನ ನಮ್ಮ ಸಮಾಜದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಸರ್ಕಾರ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದ ಬಗ್ಗೆಯೇ ಹೆಚ್ಚು ಮಾತನಾಡುತ್ತಿರುವುದು. ಮತ್ತು ಈ ಮೂಲಕ ಈ ಆಂದೋಳನ ಕೇಳಿದ್ದು ಒಂದು ಮಸೂದೆಯನ್ನು. ಆದರೆ ಈ ಪರಿಸ್ಥಿತಿಯ ಮತ್ತು ಸಮಸ್ಯೆಯ ಮೂಲ ಇರುವುದು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ನಾವು ಆರಿಸಿಕೊಳ್ಳುತ್ತಿರುವ ಜನರ ಅರ್ಹತೆಯಲ್ಲಿ. ಹಾಗಾಗಿ ಇದು ಕೊನೆಗೂ ಮುಟ್ಟುವುದು ಆ ಬೇರಿಗೇ. ಅದನ್ನೇ ಅಣ್ಣಾ ಹಜಾರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತ ಚುನಾವಣಾ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ಕೆಳಗಿನ ಲೇಖನವನ್ನು ನಾನು ಬರೆದಿದ್ದು ಕಳೆದ ಜೂನ್ 15, 2011ರ ಸಮಯದಲ್ಲಿ. ಬಹುಶಃ ಅದೇ ವಾರದ ಒಂದು ದಿನ ಅದು “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಅಲ್ಲಿ ನಾನು ಅಂತಿಮವಾಗಿ ಹೇಳಬಯಸಿದ್ದು, ‘ನಮ್ಮ ರಾಜಕೀಯ ನಾಯಕರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.’ ಅದು ಬಹುಶಃ ಒಂದಷ್ಟು ಮಟ್ಟಿಗೆ ನಿಜವಾಗುವ ಸಾಧ್ಯತೆಗಳು ಈಗಾಗಲೆ ಕಾಣಿಸುತ್ತಿವೆ. ಆ ಲೇಖನದ ಪೂರ್ಣಭಾಗ ಇದು:

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಇವತ್ತು ಭ್ರಷ್ಟಾಚಾರದ ಸುತ್ತ ಚಳವಳಿ ಮಟ್ಟದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಇತ್ತೀಚಿನ ದಿನಗಳ ಮುಖ್ಯ ಪ್ರೇರಣೆ ಎಂದರೆ ನಮ್ಮ ಜನಪ್ರತಿನಿಧಿಗಳು ಅನೈತಿಕ ಕಾರ್ಯಗಳಿಂದ ಭ್ರಷ್ಟಾಚಾರದ ಹಗರಣಗಳಲ್ಲಿ ತೊಡಗಿರುವುದು ಜನಕ್ಕೆ ಮಾಧ್ಯಮಗಳ ಮೂಲಕ ನೇರಾನೇರವಾಗಿ ಗೊತ್ತಾಗುತ್ತಿರುವುದು. ದೇಶದ ಜನಕ್ಕೆ ತಾವು ತಮ್ಮ ದೈನಂದಿನ ಕೆಲಸದಲ್ಲಿ ನಿತ್ಯ ಕಾಣುವ ಮತ್ತು ಅನುಭವಿಸುವ ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ರಾಜಕಾರಣಿಗಳ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಜೀವನದಲ್ಲಿನ ಅಧ:ಪತನ ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದಿನ ಚಳವಳಿ ಒಂದು ಮಟ್ಟದ ಅಧಿಕೃತತೆ ಪಡೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಶಾಸಕರು-ಸಂಸದರು ರಚಿಸಬೇಕಾದ, ಮಂಡಿಸಬೇಕಾದ ಕಾನೂನು-ಮಸೂದೆಗಳನ್ನು ಅವರಿಗಾಗಿ ಕಾಯದೆ ಈ ರಾಜಕೀಯೇತರ ಸಾಮಾಜಿಕ ನಾಯಕರೆ ರಚಿಸಲು ಮುಂದಾಗುತ್ತಿದ್ದಾರೆ. ಅವುಗಳ ಮಂಡನೆ ಮತ್ತು ಅಂಗೀಕಾರಕ್ಕೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದ್ದಾರೆ. ಈ ಪರಿಸ್ಥಿತಿಗೆ ಭ್ರಷ್ಟಾಚಾರದಲ್ಲಿ ನಿರತರಾದ ಶಾಸಕರು, ಸಂಸದರು, ಅಧಿಕಾರರೂಢರಷ್ಟೇ ಕಾರಣರಾಗಿದ್ದರೆ ಮತ್ತು ಅವರ ಪ್ರಮಾಣ ಅಲ್ಪಪ್ರಮಾಣದಲ್ಲಿ ಇದ್ದಿದ್ದರೆ ಈ ಶಾಸನಸಭೆಯ ಹೊರಗಿನವರ ಮಧ್ಯಪ್ರವೇಶ ಪ್ರಜಾಪ್ರಭುತ್ವದಲ್ಲಿ ಗಂಭೀರ ವಿಷಯವೆ ಆಗಿರುತ್ತಿತ್ತು. ಆದರೆ ನಮ್ಮ ಇಂದಿನ ಬಹುಪಾಲು ಜನಪ್ರತಿನಿಧಿಗಳು ತಮ್ಮ ಮೂಲಭೂತ ಕರ್ತವ್ಯಗಳಾದ ಕಾನೂನು ರಚನೆ ಮತ್ತು ತಿದ್ದುಪಡಿ, ಮತ್ತು ಕಾನೂನಿನ ಅನುಷ್ಠಾನದ ಉಸ್ತುವಾರಿಯಲ್ಲಿ ಇಂದು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಇದಕ್ಕೆ ನಿದರ್ಶನವಾಗಿ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚಿನ ವಿಧಾನಮಂಡಲ ಅಧಿವೇಶನ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲೇ ಜರುಗಿತು. ಇದರಿಂದಾಗಿ ವಿಧಾನಸಭಾ ಕಲಾಪವನ್ನು ಬಹಳ ದಿನ ನಡೆಸಲಾಗದೆ ತರಾತುರಿಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಿ ಮುಂದೂಡಲಾಯಿತು. ಆದರೆ ಮುಂದೂಡುವುದಕ್ಕೆ ಕೆಲವು ಗಂಟೆಗಳ ಮೊದಲು ಐದು ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆಯೇ ಅಂಗೀಕರಿಸಲಾಯಿತು. ಶಾಸನಸಭೆಯಲ್ಲಿ ಮಂಡಿಸುವ ಮಸೂದೆಗಳ ಕುರಿತು ಶಾಸಕರಿರಲಿ, ತಮ್ಮ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿದ ಮಸೂದೆಗಳನ್ನು ಮಂಡಿಸುವ ಸಚಿವ ಮಹಾಶಯರಿಗೂ ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇರುವುದು ಸಂಶಯಾಸ್ಪದ. ಇನ್ನು ಆ ಕಾನೂನುಗಳು ಯಾವ ರೀತಿ ಜನಪರವಾಗಿರಬಲ್ಲವು? ಅವುಗಳಲ್ಲಿ ಯಾರ ಹಿತಾಸಕ್ತಿಗಳು ಮೇಲುಗೈ ಸಾಧಿಸಿರಬಹುದು? ಇನ್ನು ಮೇಲುನೋಟಕ್ಕಾದರೂ ತಮ್ಮ ಭ್ರಷ್ಟ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕಾನೂನುಗಳ ಅನುಷ್ಠಾನದ ವಿಚಾರದಲ್ಲಿ ಯಾವ ಸ್ವಾರ್ಥಿಗಳು ತಾನೆ ಆಸಕ್ತಿ ತಾಳುತ್ತಾರೆ? ಇದು ಕೇವಲ ಕರ್ನಾಟಕದ್ದಷ್ಟೇ ಕತೆಯಲ್ಲ. ಭಾರತದ ಬಹುಪಾಲು ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಇಂತಹುದೇ ಪರಿಸ್ಥಿತಿ ಇದೆ.

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವುದು ಪ್ರಬುದ್ಧವಾದ, ಪ್ರಬಲವಾದ ಕಾನೂನುಗಳಿಂದ ಮತ್ತು ಅವುಗಳ ಅನುಷ್ಠಾನದಿಂದ. ಹೊಸ ಕಾನೂನುಗಳ ರಚನೆ ಮಾಡುವುದು ಮತ್ತು ಈಗಾಗಲೇ ಇದ್ದಿರುವ ಕಾನೂನುಗಳಲ್ಲಿ ಇದ್ದಿರಬಹುದಾದ ಲೋಪದೋಷಗಳಿಗೆ ಸೂಕ್ತ ತಿದ್ದುಪಡಿ ಮಾಡುವುದು ಶಾಸಕರ-ಸಂಸದರ ಕರ್ತವ್ಯ. ಇಂದಿನ ಬಹುತೇಕ ಜನಪ್ರತಿನಿಧಿಗಳಿಗೆ ಈ ಕರ್ತವ್ಯದ ಅರಿವೇ ಇಲ್ಲ. ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆಯೂ ಅವರಿಗಿಲ್ಲ. ವಿದ್ಯಾರ್ಹತೆಯ ಮಾತು ಒಂದೆಡೆ ಇರಲಿ; ನ್ಯಾಯಪರವಾಗಿರಬೇಕು, ನೀತಿಪರವಾಗಿರಬೇಕು ಎಂಬ ಮೂಲ ನೈತಿಕ ಪಾಠವೂ ಇಂದಿನ ಜನಪ್ರತಿನಿಧಿಗಳಿಗೆ ಇಲ್ಲ. ಅನೈತಿಕ ಮತ್ತು ಅಕ್ರಮ ಮಾರ್ಗಗಳಿಂದ ಹಣ ಮಾಡಿರುವವರೆ ಇಂದು ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಬಹುಸಂಖ್ಯೆಯಲ್ಲಿ ಗೆದ್ದುಬರುತ್ತಿದ್ದಾರೆ. ಹೀಗಿರುವಾಗ ಇವರಿಂದ ಕಾಲಕಾಲಕ್ಕೆ ವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ತಡೆಗಟ್ಟುವಂತಹ ಕಾನೂನುಗಳನ್ನು ಅಪೇಕ್ಷಿಸುವುದು ಕಡುಮೂರ್ಖತನ. ಇವರು ಭ್ರಷ್ಟತೆಯಲ್ಲಿ ಪಾಲುದಾರರಷ್ಟೇ ಅಲ್ಲ, ಅದರ ಪೋಷಕರೂ ಕೂಡಾ ಹೌದು.

ಆದರೆ ಈ ನಾಡನ್ನು ಪ್ರೀತಿಸುವ, ಭಾರತದ ಜನಸಮುದಾಯ ನೈತಿಕತೆಯ ತಳಹದಿಯ ಮೇಲೆ ವಿಕಾಸಗೊಳ್ಳಬೇಕು ಮತ್ತು ಅದು ವಿಶ್ವದ ಸ್ವಾತಂತ್ರ್ಯಪ್ರೇಮಿಗಳಿಗೆ ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಆಶಾಕಿರಣವಾಗಿ ಆಸರೆಯಾಗಿ ಇರಬೇಕು ಎಂದು ಬಯಸುವ ಜನರೂ ಈ ದೇಶದಲ್ಲಿದ್ದಾರೆ. ನಮ್ಮ ಸಮಾಜ ತನ್ನ ಮೌಲ್ಯಗಳನ್ನು ಕಳೆದುಕೊಂಡು ಅಧ:ಪತನದತ್ತ ನಡೆಯುವಾಗಲೆಲ್ಲ ಇಂತಹವರು ಧ್ವನಿ ಎತ್ತುತ್ತಾರೆ. ಈಗ ಆಗುತ್ತಿರುವುದೂ ಅದೇ. ಇದರಲ್ಲಿ ಚಿತ್ತಶುದ್ಧಿಯಿಲ್ಲದ ಮತ್ತು ಈ ಚಳವಳಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಆಸೆಯುಳ್ಳ ಸ್ವಾರ್ಥಿಗಳೂ ಹಲವರಿರಬಹುದು. ಆದರೆ ಈಗಿನ ಎಲ್ಲ ವಿರೋಧಕ್ಕೂ ಮತ್ತು ಚಳವಳಿಯ ಆರಂಭಕ್ಕೆ ಪ್ರೇರಕರಾದವರು ಮಾತ್ರ ಇಂದಿನ ಅಧ:ಪತನವನ್ನು ಕಾಣಬಲ್ಲವರು ಮತ್ತು ಅದರ ಸುತ್ತ ಜನಾಭಿಪ್ರಾಯವನ್ನು ರೂಪಿಸುವ ಇಚ್ಚೆಯುಳ್ಳವರು. ಈ ಹಿನ್ನೆಲೆಯಲ್ಲಿ ನಾಡಿನ ಜನತೆ ಇಂದಿನ ಭಷ್ಟಾಚಾರ ವಿರೋಧಿ ಆಂದೋಲನವನ್ನು ಅದರ ಸದುದ್ದೇಶಗಳಿಗಾದರೂ ಬೆಂಬಲಿಸಬೇಕಿದೆ.

ನಮ್ಮ ಈಗಿನ ಗಣರಾಜ್ಯ ವ್ಯವಸ್ಥೆಯನ್ನು ಹತ್ತಿರದಿಂದ ಮತ್ತು ಕಾಳಜಿಯಿಂದ ನೋಡಬಲ್ಲಂತಹ ಕೆಲವರು, ಈ ಚಳವಳಿ ನಮ್ಮ ಜನಪ್ರತಿನಿಧಿಗಳನ್ನು ಮತ್ತು ಪಾರ್ಲಿಮೆಂಟನ್ನು ನಿಷ್ಪ್ರಯೋಜಕಗೊಳಿಸಿ ಪ್ರಜಾಪ್ರಭುತ್ವಕ್ಕೆ ಕೇಡು ಮಾಡುತ್ತದೆ, ಎನ್ನುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿಲ್ಲದ ಸಾಮಾಜಿಕ ನಾಯಕರು ಸಂವಿಧಾನೇತರ ಶಕ್ತಿಗಳಾಗಿ ಹೊಮ್ಮುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರ ಈ ಮಾತಲ್ಲಿ ಸತ್ಯಾಂಶವಿದೆ. ಆದರೆ ಇವತ್ತಿನ ವಾಸ್ತವ ಏನೆಂದರೆ, ಜನಪ್ರತಿನಿಧಿಗಳು ನಿಭಾಯಿಸಬೇಕಾದ ಜವಾಬ್ದಾರಿಗಳು ಈಗಾಗಲೇ ಸಂಪೂರ್ಣವಾಗಿ ಕುಸಿದುಹೋಗಿವೆ. ರಸ್ತೆಗಳಲ್ಲಿ ರಕ್ತ ಹರಿಯುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ನಮ್ಮದು ಇಂದು ಮೌಲ್ಯಗಳಿಲ್ಲದ, ಕಾನೂನುಗಳಿಲ್ಲದ, ವ್ಯವಸ್ಥೆಯನ್ನು ಕೊಂಡುಕೊಳ್ಳಬಲ್ಲ ತಾಕತ್ತಿನವರ ಅವ್ಯವಸ್ಥಿತ ರಾಜಕೀಯ ಪರಿಸ್ಥಿತಿ. ಒಂದು ಕೋನದಿಂದ ಈ ಅವ್ಯವಸ್ಥಿತ ಅರಾಜಕ ಅಸ್ಥಿರತೆಯೂ ಒಂದು ರೀತಿಯ ಸ್ಥಿರ ವ್ಯವಸ್ಥೆಯಾಗಿ ಕಾಣಿಸುತ್ತದೆ ಅಷ್ಟೇ. ಅದು ಮರಳುಗಾಡಿನ ಮರೀಚಿಕೆ. ಹಾಗಾಗಿಯೇ ಈಗಿನ ಚಳವಳಿ, ಈಗ ಆಗಿರುವ ಪ್ರಜಾಪ್ರಭುತ್ವದ ಅವಹೇಳನ ಮತ್ತು ನಿರ್ವಿಯತೆಗಿಂತ ಇನ್ನೂ ಹೆಚ್ಚಿನ ನಿರ್ವಿಯತೆಯನ್ನೇನೂ ಉಂಟು ಮಾಡುವುದಿಲ್ಲ. ಮಾಡುವುದಿದ್ದರೆ ಅದು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬೇರುಮಟ್ಟದ ಪಸರಿಸುವಿಕೆಗೆ ಸಹಾಯ ಮಾಡೀತೆ ಹೊರತು ಅದರ ದಮನಕ್ಕಲ್ಲ. ಈ ಬಗ್ಗೆ ಭಯ ಪಡುವುದಕ್ಕಿಂತ ನಮ್ಮ ರಾಜಕೀಯ ನಾಯಕರ ಕುತಂತ್ರ ಮತ್ತು ಅಯೋಗ್ಯತೆಯತ್ತ ನಮ್ಮ ಗಮನ ಇರಬೇಕು. ಅವರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.

ಚಿತ್ರಕೃಪೆ: ವಿಕಿಪೀಡಿಯ

ರವಿ ಕೃಷ್ಣಾ ರೆಡ್ಡಿ

Leave a Reply

Your email address will not be published. Required fields are marked *