Karnataka High Court

ನಿಂತ ನೀರಾಗಿ ಕೊಳೆತವರು

ಕಳೆದ ವಾರ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಭವಿಸಿದ ಆಘಾತಕಾರಿ ಸಂಗತಿ ಯಾವುದೇ ಕನ್ನಡ ಮಾಧ್ಯಮಗಳಲ್ಲಿ ಸುದ್ಧಿಯಾಗಲಿಲ್ಲ. ಆದರೆ, ಎಲ್ಲಾ ಇಂಗ್ಲೀಷ್ ಪತ್ರಿಕೆಗಳು ಇದನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಜೊತೆಗೆ ಸಂಪಾದಕೀಯ ಬರೆದು ಆತಂಕ ವ್ಯಕ್ತಪಡಿಸಿದವು.

ಕರ್ನಾಟಕದಲ್ಲಿ ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಹೈಕೋರ್ಟ್, ಏಳು ವರ್ಷ ಸೇವೆ ಸಲ್ಲಿಸಿರುವ ವಕೀಲರಿಗಾಗಿ ಅರ್ಹತೆ ಪರೀಕ್ಷೆಯೊಂದನ್ನು ಕಳೆದ ವಾರ ಏರ್ಪಡಿಸಿತ್ತು. 518 ಮಂದಿ ವಕೀಲರು ಪಾಲ್ಗೊಂಡಿದ್ದ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಒಬ್ಬ ವಕೀಲ ಮಾತ್ರ. ಉಳಿದ 517 ಮಂದಿ ವಿಫಲರಾಗಿರುವುದು ಇವರ ವಕೀಲಿ ವೃತ್ತಿ ಬಗೆಗಿನ ಬದ್ಧತೆ ಮತ್ತು ಅಧ್ಯಯನದ ಕೊರತೆಯನ್ನು ಅನಾವರಣಗೊಳಿಸಿದೆ.

ಈ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ಬಹುತೇಕ ಸುದ್ದಿ ಮಾಧ್ಯಮಗಳು, ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಕಾಲೇಜು ಇರುವ ಬೆಂಗಳೂರಿನಲ್ಲಿ ಇಂತಹ ಸಂಗತಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸುವುದರ ಜೊತೆಗೆ, ಇಂದಿಗೂ ಭಾರತದ ಅನೇಕ ಕೆಳಹಂತದ ನ್ಯಾಯಾಲಯಗಳಲ್ಲಿ ಸಂಕ್ಷಿಪ್ತವಾಗಿ ತೀರ್ಪು ಬರೆಯಲಾರದ ನ್ಯಾಯಾಧೀಶರುಗಳಿದ್ದಾರೆ ಎಂದು ವ್ಯಂಗ್ಯವಾಡಿವೆ.

ಇಂದು ಕಾನೂನು ಜ್ಞಾನಶಿಸ್ತುಗಳಲ್ಲಿ ಒಂದಾಗಿದ್ದು ಹಲವು ಶಾಖೆಗಳಾಗಿ ಕವಲೊಡೆದಿದೆ. ಕಾನೂನು ಪದವಿಯ ಸಂದರ್ಭದಲ್ಲಿ ಹನ್ನೆರಡಕ್ಕೂ ಮೇಲ್ಪಟ್ಟ ವಿವಿಧ ವಿಷಯಗಳ ಕಾನೂನನ್ನು ಅಧ್ಯಯನ ಮಾಡುವುದು ಕಡ್ಡಾಯ. ಪದವಿಯ ನಂತರ ಯಾವುದೇ ವ್ಯಕ್ತಿ ವೃತ್ತಿಯ ಸಂದರ್ಭದಲ್ಲಿ ತನಗೆ ಇಷ್ಟವಾದ ಕಾನೂನು ಶಾಖೆಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಇದು ಕಾನೂನು ಪರಿಣಿತಿಯಲ್ಲಿ ಅವಶ್ಯ ಕೂಡ ಹೌದು. ಹಾಗಾಗಿ ಇಂದು ನಾವು ಎಲ್ಲೆಡೆ ಕ್ರಿಮಿನಲ್ ಲಾ, ಸಿವಿಲ್ ಲಾ, ಕಂಪನಿ ಲಾ, ಅಂತಾರಾಷ್ಟ್ರೀಯ ಕಾನೂನು, ಹಿಂದೂ ಕಾನೂನು ಹೀಗೆ ಈ ವಿಷಯಗಳಲ್ಲಿ ಪರಿಣಿತ ಹಾಗೂ ತಜ್ಞ ವಕೀಲರನ್ನು ನಾವು ಕಾಣುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಪರಿವರ್ತನಾ ಮತ್ತು ಚಲನಶೀಲವಾದ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಳಗಾಗುತ್ತಿರುವ ಕಾನೂನುಗಳ ಬಗ್ಗೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಅಧ್ಯಯನ ಮಾಡುವುದು ಅಗತ್ಯ.ವಿಲ್ಲ ಎಂದು ಭಾವಿಸುವುದು ಅವಿವೇಕತನದ ಪರಮಾವಧಿಯಾಗುತ್ತದೆ.

ವರ್ತಮಾನದ ವಕೀಲಿ ವೃತ್ತಿ ಆಶಾದಾಯಕ ವೃತ್ತಿಯಾಗಿಲ್ಲ. ಆದರೂ ಕಾನೂನು ಅಧ್ಯಯನಕ್ಕೆ ಯುವ ಜನಾಂಗ ಆಸಕ್ತಿ ತೋರುತ್ತಿದ್ದು, ಪದವಿಯ ನಂತರ ಸ್ವತಂತ್ರ ವೃತ್ತಿಗಿಂತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊರೆಯುತ್ತಿರುವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ದಶಕಗಳ ಹಿಂದೆ ಕಾನೂನು ಪದವಿ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ವಕೀಲರಿಗೆ ವೃತ್ತಿ ಮತ್ತು ಅದರ ಘನತೆಗಿಂತ ಸಂಘಟನೆ ಮತ್ತು ರಾಜಕೀಯ ಮುಖ್ಯವಾಗಿದೆ.

Karnataka High Court

Karnataka High Court

ಕರ್ನಾಟಕದಲ್ಲಿ ಇಂದು ವಕೀಲರ ಸಂಘ, ವಕೀಲರ ಪರಿಷತ್ ಹೀಗೆ ಹಲವು ಬಣಗಳು ಹುಟ್ಟಿಕೊಂಡು ಇವುಗಳ ಚುನಾವಣೆ ಮತ್ತು ಚುನಾವಣೆಯ ಸಂದರ್ಭದಲ್ಲಿ ವಕೀಲರ ವರ್ತನೆ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆ ಇಲ್ಲ. ತಮ್ಮ ವೃತ್ತಿಯ ಘನತೆ ತೊರೆದು ರಾಜಕೀಯ ಪಕ್ಷಗಳೊಂದಿಗೆ ಹಲವು ವಕೀಲರು ಗುರುತಿಸಿಕೊಂಡಿದ್ದರೆ, ಮತ್ತಷ್ಟು ವಕೀಲರು ಯಾವ ಅಳುಕೂ ಇಲ್ಲದೆ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿ ಬೀದಿಗಿಳಿದು ಪ್ರತಿಭಟಿಸುವುದು, ರಸ್ತೆತಡೆ ಮಾಡುವುದನ್ನು ನಾವು ಕಾಣುತ್ತಿದ್ದೇವೆ.

ಇವರೆಲ್ಲರೂ ಒಮ್ಮೆ ತಮ್ಮ ಅರ್ಹತೆಯ ಬಗ್ಗೆ ತಮ್ಮ ತಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು. ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಪ್ರತಿ ಮೂರು ವರ್ಷಕ್ಕೊಮ್ಮೆ ಇವರಿಗೆಲ್ಲಾ ಕಡ್ಡಾಯವಾಗಿ ಪರೀಕ್ಷೆ ನಡೆಸಿ ವಕೀಲಿ ವೃತ್ತಿಗೆ ಅನುಮತಿ ನೀಡುವುದನ್ನು ಚಾಲನೆಗೆ ತಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದಿಷ್ಟು ಸುಧಾರಣೆ ಕಾಣಬಹುದು. ಇಂತಹ ದುರ್ಗತಿ ಕೇವಲ ವಕೀಲ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಕಳೆದ ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಖಾಸಗಿ ಚಾನಲ್ ಒಂದು ನಮ್ಮ ಸರಕಾರಿ ಶಾಲಾ ಶಿಕ್ಷಕರಿಗೆ, ಸ್ವತಂತ್ರ ಬಂದು ಎಷ್ಟು ವರ್ಷಗಳಾದವು?, ಮಹಾತ್ಮಗಾಂಧಿಯ ಪೂರ್ಣ ಹೆಸರೇನು?, ನೆಹರು ಪುತ್ರಿ ಯಾರು?, ಜಲಿಯನ್ ವಾಲಾಬಾಗ್ ಎಲ್ಲಿದೆ? ಎಂಬ ಪ್ರಶ್ನೆಗಳನ್ನು 50ಕ್ಕೂ ಹೆಚ್ಚು ಶಿಕ್ಷಕರ ಎದುರು ಇಟ್ಟಿತ್ತು. ಇವುಗಳಿಗೆ ಒಂದಿಬ್ಬರು ಹೊರತುಪಡಿಸಿದರೆ ಉಳಿದವರೆಲ್ಲಾ ಕ್ಯಾಮೆರಾ ಎದುರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು. ಇವರೆಲ್ಲಾ ನಮ್ಮ ಸಮಾಜದ ಭಾಗವಾಗಿರುವುದು ವರ್ತಮಾನದ ದುರಂತಗಳಲ್ಲಿ ಒಂದು.

– ಡಾ.ಎನ್.ಜಗದೀಶ್ ಕೊಪ್ಪ

5 thoughts on “ನಿಂತ ನೀರಾಗಿ ಕೊಳೆತವರು

  1. Sridhara Babu

    ಪರೀಕ್ಷೆಯಲ್ಲಿ ಪಾಸು ಫೇಲು ಇಂದಿನ ದಿನದಲ್ಲಿ ವ್ಯಕ್ತಿಯ ಜ್ಞಾಪಕ ಶಕ್ತಿ ತೋರುತ್ತದೆ ಹೊರತು, ವ್ಯಕ್ತಿಯ ಅರ್ಹತೆಯನ್ನು ಅಳೆಯಲಾರದು. ನ್ಯಾಯಾಧೀಶರ ಹುದ್ದೆಗೆ ಇರಬೇಕಾದ್ದು ವಿಧ್ಯಾರ್ಥಿಗಳಿಗೆ ಇರಬೇಕಾದ ಜ್ಞಾಪಕ ಶಕ್ತಿ ಅಲ್ಲ ತಮ್ಮ ಮುಂದೆ ಬರಬಹುದಾದ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಬಗೆಹರಿಸುತ್ತಾರೆ ಎಂಬ ಆತ್ಮ ಶಕ್ತಿಯ ಪರೀಕ್ಷೆ ನಡೆಯ ಬೇಕು. ವಕೀಲರಲ್ಲಿ ಜ್ಞಾನಾರ್ಜನೆಯ ಮಾರ್ಗ ಕುಂಟಿತವಾಗುತ್ತಿದೆ ನಿಜ ಆದರೆ ಇಲ್ಲಿ ಪ್ರಜ್ಞಾವಂತರು ಇಲ್ಲವೆಂದಲ್ಲ. ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆಗಾಗಿ ಅರ್ಜಿ ಹಾಕಿದ ಸುಮಾರು ಒಂದು ವರ್ಷದ ನಂತರ ಪರೀಕ್ಷಾ ಸಮಯ ಅದು ಒಂದೆರೆಡು ತಿಂಗಳ ಮುಂಚೆ ಘೋಷಣೆ ಮಾಡಲಾಗಿದೆ. ಪರೀಕ್ಷಾ ಸಮಯ ಮತ್ತು ಅದರಲ್ಲಿನ ಪ್ರಶ್ನೆ ಮತ್ತು ಅದರ ಉತ್ತರದ ವಿಸ್ತಾರ ಗಮನಿಸಿದರೆ, ಅದು ಪರೀಕ್ಷೆಯೂ ಅಲ್ಲ ತಾಳ್ಮೆ ಯಾರಿಗೂ ಇರುವುದೂ ಇಲ್ಲ. ಸಿವಿಲ್ ಕಾನೂನಿನಲ್ಲಿ ನುರಿತರಾದವರಿಗೆ ಕ್ರಿಮಿನಲ್ ಕಾನೂನು ಜ್ಞಾನ ಸುಲಭವಿರುತ್ತದೆ, ಆದರೆ ಕ್ರಿಮಿನಲ್ ಕಾನೂನು ಪ್ರಾಕ್ಟೀಸಿನಲ್ಲಿ ಇರುವವರಿಗೆ ಸಿವಿಲ್ ಸುಲಭವಾಗಲಾರದು. ಪರೀಕ್ಷೆಯಲ್ಲಿ ಎಲ್ಲಾ ವಿಚಾರವನ್ನು ಬರೆಯಲು ಕೇಳುವುದು ಸಮಂಜಸವೇ ಆದರೂ ಮೊನ್ನೆ ನಡೆದ ಪರೀಕ್ಷೆ ಆದರಿಸಿ ವಕೀಲರನ್ನು ಮೂದಲಿಸಿರುವುದು ತಪ್ಪು.

    Reply
  2. vijayendra

    Dr Jagadish Koppa,

    Contestants are loosing faith in the competitive examinations because Corruption to the highest order has been crept in to the system.See how a former Chiarman of Karnataka Public Service commission is knocking at the court doors seeking anticipatory bail for the offence he has committed as the Chairman incharge of recruitment of gazetted probationers. Vijayendra.Bangalore

    Reply
  3. ರವಿಕುಮಾರ

    ಸ್ನೇಹಿತರೇ,

    ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಕೇವಲ ಒಬ್ಬರು ಮಾತ್ರ ಪಾಸಾಗಿರುವುದು ಹಾಗೂ ವಕೀಲರಲ್ಲಿ ಕಾನೂನಿನ ತಿಳುವಳಿಕೆ ಕಡಿಮೆಯಾಗುತ್ತಿದೆ ಎನ್ನುವುದು ನಿಮ್ಮ ಆತಂಕವಾಗಿದೆ. ಕೇವಲ ಒಂದು ಪರೀಕ್ಷೆಯಿಂದಲೇ ವಕೀಲರಿಗೆ ಜ್ಞಾನಾರ್ಜನೆಯ ಕೊರತೆ ಇದೆ ಎಂದು ಸಾರಾಸಗಟಾಗಿ ನಿರ್ಧಾರಕ್ಕೆ ಬರುವುದು ಕಷ್ಟ. ಯಾಕೆಂದರೆ ಎಲ್ಲ ರಂಗದಲ್ಲೂ ಆಯಾ ಕಾಲಕ್ಕೆ ಸ್ವಲ್ಪ ಮಟ್ಟಿನ ಹಿಂದುಳಿವಿಕೆ ನಡೆಯುತ್ತಲೇ ಇರುತ್ತದೆ. ಕೋರ್ಟುಗಳಲ್ಲಿ ವಾದ ಮಾಡಿ ಗೆಲ್ಲುವ ಹಾಗೂ ಗೆದ್ದಿರುವ ವಕೀಲರು ಪರೀಕ್ಷೆಯಲ್ಲಿ ಅರ್ಹತೆ ಪಡೆಯದೇ ಇರುವುದಕ್ಕೆ ಹಲವಾರು ಕಾರಣಗಳಿರುರಬಹುದು. ಕೆಲಸದ ಒತ್ತಡದಲ್ಲಿ ಪರೀಕ್ಷೆಗೆ ಬೇಕಾಗುವಷ್ಟು ತಯಾರಿ ಮಾಡಲು ಆಗದೇ ಇರಬಹುದು. ಪ್ರತಿ ಪಂದ್ಯದಲ್ಲೂ ಕ್ರೀಡಾ ಪಟುವೊಬ್ಬ ಪ್ರಥಮ ಸ್ಥಾನಗಳಿಸುವುದು, ನೂರು ರನ್ ಹೊಡೆಯುವುದನ್ನು ನಿರೀಕ್ಷಿಸಲಾಗದು. ನೂರು ಪಂದ್ಯವಾಡಿದ ಕ್ರಿಕೇಟ್ ಪಟುವೊಬ್ಬ ಶೂನ್ಯಕ್ಕೆ ಔಟಾದ ಮಾತ್ರಕ್ಕೆ ಆತನ ಸಾಮರ್ಥ್ಯದ ಕುರಿತು ಆತಂಕಗಳಿರಬೇಕೆ ಹೊರತು ಸಂಶಯವಿರಬಾರದು. ನೀವು ವಕೀಲರ ಬಳಗ ಚುನಾವಣೆಯಲ್ಲಿ ಭಾಗವಹಿಸುವ ಕುರಿತು ಹೇಳಿರುವುದು ನೋಡಿದರೇ ನೀವು ಪೂರ್ವಾಗ್ರಹ ಪೀಡಿತರಾಗಿ ವಕೀಲರು ಪರೀಕ್ಷೆಯಲ್ಲಿ ಪಾಸಾಗದ ಸಂದರ್ಭವನ್ನು ಬಳಸಿಕೊಂಡಂತೆ ಕಾಣುತ್ತದೆ. ವಕೀಲರು ನಪಾಸಾದ ಮಾತ್ರಕ್ಕೆ ನಿತ್ಯದ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಬಾರದೇ..? ಇಂಗ್ಲೀಷ್ ಪತ್ರಿಕೆಗಳು ಈ ಸುದ್ದಿಯನ್ನು ರಾಷ್ಟ್ರ ಮಟ್ಟದಲ್ಲಿ ಮಾಡಿದ್ದನ್ನು ಹೇಳಿದ್ದೀರಿ ರಾಷ್ಟ್ರ ಮಟ್ಟದ ಯಾವ ಪತ್ರಿಕೆ ಮಾದ್ಯಮ ಧರ್ಮವನ್ನು ಪಾಲಿಸುತ್ತಿವೆ ಹೇಳಿ.. ತಮ್ಮ ಮೂಗಿನ ನೇರಕ್ಕೆ ವರದಿಯನ್ನು ಪ್ರಕಟಿಸಿ (ಸೃಷ್ಟಿಸಿ )ಅವಾಂತರ ಮಾಡಿರುವ ಎಷ್ಟೋ ಉದಾಹರಣೆಗಳಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ವಕೀಲರಿಗೆ ಪರೀಕ್ಷೆ ನಡೆಸಿದರೆ ನ್ಯಾಯಾಂಗ ವ್ಯವಸ್ಥೆ ಸುಧಾರಿಸುತ್ತದೆ ಎನ್ನುವ ನಿಮ್ಮ ಮಾತು ಈಗಿನ ನ್ಯಾಯಾಂಗ ವ್ಯವಸ್ಥೆ ಸರಿ ಇಲ್ಲ ಎಂದಾಯಿತು ನಿಮ್ಮ ಆತಂಕ ನಿಜಕ್ಕೂ ನಮಗೆ ಆತಂಕ ತರಿಸುತ್ತಿದೆ.

    Reply
  4. rajesh kondapura

    ಅದ್ದರಿಂದಲೇ ಅಲ್ವೆ ಸಾರ್ ನಮ್ಮ ಅರಳಿ ಕಟ್ಟೆ ನ್ಯಾಯಾಲಯಗಳೇ ಸೂಕ್ತ ಅನ್ನಿಸೋದು?

    Reply
  5. Pingback: ಮಾಧ್ಯಮಗಳು ಮತ್ತು ಅವತಾರಗಳು

Leave a Reply to vijayendra Cancel reply

Your email address will not be published. Required fields are marked *