Monthly Archives: August 2011

ಇದು ಸಮ್ಮಿಶ್ರ ಸರಕಾರ!

ಭೂಮಿ ಬಾನು

ಇತ್ತೀಚಿನ ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಸಮ್ಮಿಶ್ರ ಸರಕಾರವೇ ಎನ್ನುವ ಸಂಶಯ ಹುಟ್ಟಿಸುತ್ತಿವೆ.ಡಿ.ವಿ ಸದಾನಂದಗೌಡರು ಒಂದು ಬಣದ ಆಯ್ಕೆ. ಶೆಟ್ಟರ್ ಬಣ ಜಗದೀಶ್ ಶೆಟ್ಟರ್ ಉಪ ಮುಖ್ಯಮಂತ್ರಿಯಾಗಬೇಕು ಎಂದು ಪಟ್ಟು ಹಿಡಿಯಿತು. ಜೊತೆಗೆ ಒಂದೊಂದು ಬಣವೂ ತಲಾ 17 ಸಚಿವ ಸ್ಥಾನ ಬೇಕು ಎಂದು ಹಟ ಹಿಡಿಯಿತು.

ಈಗ್ಗೆ ಮೂರು ವರ್ಷಗಳ ಹಿಂದೆ ಜೆಡಿ(ಎಸ್)-ಬಿಜೆಪಿ ಸಮ್ಮಿಶ್ರ ಸರಕಾರ ಆಡಳಿತಕ್ಕೆಬಂದಾಗ ಎರಡು ಪಕ್ಷಗಳ ನಾಯಕರ ಮಧ್ಯೆ ಇಂತಹದೇ ಒಪ್ಪಂದ ಏರ್ಪಟಿತ್ತು. ಆಗಿನ ಸಂದರ್ಭದಲ್ಲಿ ಪಕ್ಷಗಳು ಬೇರೆ ಇದ್ದವು. ಈಗ ಪಕ್ಷ ಒಂದೇ, ಬಣ ಎರಡು. ಆಡಳಿತ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ‘ಪ್ರಜಾಪ್ರಭುತ್ವ’ ಕ್ರಮ ಅನುಸರಿಸಿದ ಕಾರಣ ಎರಡು ಬಣಗಳ ಬೆಂಬಲಿಗರಾರು ಎನ್ನುವುದ ಜಗಜ್ಜಾಹಿರಾಯಿತು. ಮುಂದಿನ ದಿನಗಳಲ್ಲಿ ಬಣಗಳ ನಡುವಿನ ಭಿನ್ನಮತ ಉಲ್ಬಣಗೊಂಡು ಸರಕಾರ ಮುಗ್ಗರಿಸುವ ಸ್ಥಿತಿ ಬರಬಹುದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸದಾ ಎಚ್ಚರದಿಂದಲೇ ಹೆಜ್ಜೆ ಇಡಬೇಕು. ಈ ಸ್ಥಿತಿಗೆ ಕಾರಣ ಬಿಜೆಪಿ ಹೈಕಮಾಂಡ್.

ಭ್ರಷ್ಟಾಚಾರ ಆರೋಪ ಹೊತ್ತ ಮುಖ್ಯಮಂತ್ರಿಗೆ ರಾಜೀನಾಮೆ ಕೊಡಿ ಎಂದು ಆದೇಶಿಸಿದ ಹೈಕಮಾಂಡ್ ಒಮ್ಮತದ ಅಭ್ಯರ್ಥಿಯನ್ನು ತೆರವಾದ ಸ್ಥಾನಕ್ಕೆ ತರಲು ಸೋತಿತು. ಪರಿಣಾಮವಾಗಿ ಕೇವಲ 62 ಶಾಸಕರ ಬೆಂಬಲವಿರುವ ಅಭ್ಯರ್ಥಿ 224 ಸದಸ್ಯ ಬಲದ ಶಾಸನ ಸಭೆಯ ನಾಯಕನಾಗಬೇಕಾಯಿತು!

No doubt, ಡಿವಿಎಸ್ ಯಡಿಯೂರಪ್ಪನ ಆಯ್ಕೆ. ಆ ಕಾರಣಕ್ಕೇನೆ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಯಡಿಯೂರಪ್ಪನ ಆಶೀರ್ವಾದ ಪಡೆದುಕೊಂಡಿದ್ದು. ಅದರರ್ಥ ಈ ದೇಶದ ಸಂವಿಧಾನಕ್ಕಿಂತ ಹೆಚ್ಚನ ಬೆಲೆ ಅವರು ಬೆಲೆ ಕೊಡುವುದು ಯಡಿಯೂರಪ್ಪನಿಗೆ. ಅನೇಕ ರೀತಿಯಲ್ಲಿ ಡಿವಿಎಸ್, ಯಡಿಯೂರಪ್ಪನ ಪ್ರತಿನಿಧಿ. ಪ್ರಮಾಣ ವಚನ ಸ್ವೀಕರಿಸಿದ ನಂತರ ಹೊರಟಿದ್ದು ಆರ್ ಎಸ್ ಎಸ್ ಕಚೇರಿಗೆ. ನಂತರ ಆದಿಚುಂಚನಗಿರಿ ಸ್ವಾಮೀಜಿ ಭೇಟಿಗೆ. ಮಾರನೆಯ ದಿನವೇ ತುಮಕೂರಿನ ಸಿದ್ದಗಂಗೆ ಮಠದಲ್ಲಿ ಹಾಜರ್.

ಈಗ್ಗೆ ಹತ್ತು – ಹದಿನೈದು ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾದವರು ಸಾಮಾನ್ಯವಾಗಿ ತಮ್ಕ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಹೇಳುವ ಪರಿಪಾಠ ಇತ್ತು. ಆದರೆ ಈಗ ಅದೆಲ್ಲ ಇಲ್ಲ. ಮಠಗಳಿಗೆ ಭೇಟಿ ನೀಡುವುದೇ ಇವರ ಮಹತ್ಕಾರ್ಯ. ಸಂವಿಧಾನಕ್ಕೆ ತಕ್ಕುದಾಗಿ ಆಡಳಿತ ನಡೆಸುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತಂದಿರುವ ಸಂಸ್ಥೆಗಳಿಗೆ ಭೇಟಿ ನೀಡುವುದೆ ಎಷ್ಟು ಸರಿ? ಹಾಗೂ ಇಂತಹ ನಾಯಕರು ತಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನಕ್ಕೆ ತಕ್ಕುದಾಗಿ ಆಡಳಿತ ನಡೆಸುತ್ತಾರೆ ಎನ್ನುವುದನ್ನು ನಂಬುವುದಾದರೂ ಹೇಗೆ? ಈಗಷ್ಟೆ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಎನಿಸಿಕೊಂಡಿರುವ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದೂ ಇದೇ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು. ಆದರೆ ಬದ್ಧತೆ ಸೀಮಿತವಾಗಿದ್ದು ಕುಟುಂಬಕ್ಕೆ, ಸ್ವಜನರ ಹಿತಕ್ಕೆ.

(ಚಿತ್ರಕೃಪೆ: ವಿಕಿಪೀಡಿಯ)

“ವರ್ತಮಾನ”ಕ್ಕೊಂದು ಪೀಠಿಕೆ…

ಸ್ನೇಹಿತರೆ,

ಕರ್ನಾಟಕದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಇಂದು ಒಂದು ವಿಶಿಷ್ಟವಾದ ಚಲನಾವಸ್ಥೆಯಲ್ಲಿರುವುದು ತಮಗೆಲ್ಲ ತಿಳಿದಿರುವ ಸಂಗತಿಯೇ. ಪ್ರಪಂಚದಾದ್ಯಂತ ಅನೇಕ ದೇಶಗಳು ಮತ್ತು ಸಮುದಾಯಗಳು ಆಧುನಿಕತೆಯತ್ತ ಮತ್ತು ಒಂದು ಉತ್ತಮ ಆಡಳಿತ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ ಅದು ಸಹಜವಾದದ್ದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಘಟನೆಗಳು ನಮ್ಮ ಮಧ್ಯೆ ಪ್ರತಿನಿತ್ಯ ನಡೆಯುತ್ತಿವೆ. ವೈಯಕ್ತಿಕ ನೈತಿಕತೆ ಉಳಿಸಿಕೊಳ್ಳುವುದೇ ಈ ಸಂದರ್ಭದಲ್ಲಿ ಒಂದು ಸವಾಲಾಗಿ ಹೋಗಿದೆ. ಹಾಗೆಯೇ, ಆಶಾವಾದವನ್ನೂ ಸಹ.

ಹೀಗಿರುವಾಗಲೂ, ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಅನೇಕ ಪ್ರಾಮಾಣಿಕ ಜನರು ತಮ್ಮದೇ ನೆಲೆಯಲ್ಲಿ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಕೆಲಸಗಳನು ಮಾಡುತ್ತಲೇ ಇದ್ದಾರೆ. ಆದರೆ ಸಮಾಜ ಇಂದು ಅಂತಹ ಕೆಲಸಗಳನ್ನು ಪ್ರಶಂಸಿಸುತ್ತಿದೆಯೇ ಎನ್ನುವುದು ಸಂಶಯಕ್ಕೂ ಆಸ್ಪದವಿಲ್ಲದಷ್ಟು ನಿರಾಶಾದಾಯಕವಾಗಿದೆ. ಸಂಪತ್ತಿನ ಮತ್ತು ದೊಡ್ಡಸ್ತಿಕೆಯ ಹುಡುಕಾಟದಲ್ಲಿ ಇಂದಿನ ಸಮಾಜ ನ್ಯಾಯಾನ್ಯಾಯದ ವಿವೇಚನೆಯಿಲ್ಲದೆ ಸುಲಭಮಾರ್ಗಗಳ ಹುಡುಕಾಟದಲ್ಲಿದೆ. ಭ್ರಷ್ಟಾಚಾರ ಎಲ್ಲಿಯೋ ಕೆಲವರಿಗೆ ಸಂಬಂಧಪಟ್ಟ ವಿಷಯವಾಗಿ, ಬಹುತೇಕ ಜನ ಅದರೊಡನೆ ರಾಜಿ ಮಾಡಿಕೊಂಡುಬಿಟ್ಟಿದ್ದಾರೆ. “ಭ್ರಷ್ಟರು ಯಾರಿಲ್ಲ?” ಎನ್ನುವ ಘೋಷ ವಾಕ್ಯವೇ ಇಂದು ಎಲ್ಲಾ ಜನರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿರುವ ವಾದವಾಗಿದೆ. ಹಾಗೆ ಹೇಳುವುದೇ ಒಂದು ನೈತಿಕ ಅಧ:ಪತನ ಎಂದು ಹೇಳುವವರಾಗಲಿ ಮತ್ತು ಅದನ್ನು ಕೇಳಿಸಿಕೊಂಡು ಒಪ್ಪಿಕೊಳ್ಳುವವರಿಗಾಗಲಿ ಅರ್ಥವಾಗುತ್ತಿಲ್ಲ. ಅಥವ ಅವರು ಬೇಕೆಂತಲೇ ಅದನ್ನು ನಿರಾಕರಿಸುತ್ತಿದ್ದಾರೆ. ಇದೆಲ್ಲ ಹೇಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ, ಪ್ರಗತಿ, ಸಮಾನತೆಯ ಸಾಧನೆಗೆ ಮಹಾಗೋಡೆಯಾಗಿ ನಿಂತಿವೆ ಎಂದು ವಿವರಿಸುವುದೇ ಇಂದಿನ ಬಹುಮುಖ್ಯ ಸವಾಲಾಗಿದೆ.

ಹಾಗೆಯೇ ಹೇಳಿದ ಹಾಗೆ, ನಮ್ಮ ವ್ಯವಸ್ಥೆಯಲ್ಲಿನ ದುಷ್ಟಶಕ್ತಿಗಳ ಜೊತೆ ಇಂದು ನಮ್ಮ ಸಮಾಜ ರಾಜಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಹೋಗಿದೆ ಎಂದರೆ ಇಂದಿನ ನಮ್ಮ ಬಹುತೇಕ ಸಮೂಹ ಮಾಧ್ಯಮಗಳೂ ಇಂದು ಆ ದುಷ್ಟಶಕ್ತಿಗಳ ಪೋಷಕರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಎಂತಹ ಗಂಭೀರ ವಿಷಯವನ್ನೂ ರಂಜನೀಯ ಮಾಡುವಲ್ಲಿ ಮತ್ತು ತನ್ಮೂಲಕ ತಾವು ಪ್ರಸ್ತುತತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಕೆಲಸ ನಡೆದಿದೆ. ಮತ್ತು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಾಗಬೇಕಿದ್ದ ನಮ್ಮ ಅನೇಕ ಪ್ರಗತಿಪರ ಚಿಂತಕರೂ ಇಂದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಮುಟ್ಟಿದ್ದಾರೆ. ಗುಂಪಿನಲ್ಲಿರುವಾಗಲಾದರೂ ನೈತಿಕತೆ ಉಳಿಸಿಕೊಳ್ಳುವ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡುವ ಈ ಜನರೂ ಇಂದು ಕಮ್ಮಿಯಾಗುತ್ತಾ ಹೋಗುತ್ತಿದ್ದಾರೆ. ಇದು ನಮ್ಮ ಸಮಕಾಲೀನ ಸಂದರ್ಭದ ಮಹಾದುರಂತಗಳಲ್ಲೊಂದು.

ಇಂತಹ ಸಂದರ್ಭದಲ್ಲಿ ನಮ್ಮ ವರ್ತಮಾನದ ಆಗುಹೋಗುಗಳನ್ನು ಮತ್ತು ಸವಾಲುಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಮತ್ತು ವಿಮರ್ಶಿಸಿ, ಹಾಗೆಯೇ ಭವಿಷ್ಯದ ದಿನಗಳು ಮತ್ತು ಕಾರ್ಯಗಳು ಹೇಗಿರಬೇಕು ಎಂದು ಸ್ಪಷ್ಟವಾಗಿ ಹೇಳುವ ತುರ್ತು ಇಂದಿನ ನಮ್ಮ ಸಮಾಜಕ್ಕಿದೆ ಎಂದು ನನಗನ್ನಿಸಿತು. ಆ ನಿಟ್ಟಿನಲ್ಲಿ ಒಂದು ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅದು ಸ್ಪಷ್ಟವಾಯಿತು. ಅದು ಇಂಟರ್ನೆಟ್ ಮಾಧ್ಯಮದಲ್ಲಿ ಹಲವಾರು ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದ ಸಾಧ್ಯ ಎನ್ನಿಸಿತು. ಅದರ ಕಾರ್ಯರೂಪವೇ “ವರ್ತಮಾನ”.

ಯಾರು ಒಪ್ಪಲಿ ಬಿಡಲಿ, ಕಳೆದ ನಾಲ್ಕೈದು ಸಾವಿರ ವರ್ಷಗಳ ತನ್ನ ವಿಕಾಸದ ಹಾದಿಯಲ್ಲಿ ಮನುಷ್ಯ ಕೆಲವೊಂದು ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಬಂದಿದ್ದಾನೆ. ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವ; ಇತ್ಯಾದಿ. ಇಲ್ಲಿ “ವರ್ತಮಾನ”ದಲ್ಲಿಯೂ ಅಂತಹ ಮೌಲ್ಯಗಳನ್ನು ಒಪ್ಪಿಕೊಂಡವರಿಗೆ ಮಾತ್ರ ಸ್ಥಾನವಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಅದನ್ನು ನಮ್ಮ ಕಾಲಘಟ್ಟದಲ್ಲಿ ಸಾಧಿಸಿಕೊಳ್ಳಲು ಯತ್ನಿಸುವ ಸಾಮಾಜಿಕ ನ್ಯಾಯ; ಇವು ನಾವು ಒಪ್ಪಿಕೊಂಡ ಸಾರ್ವಜನಿಕ ಮೌಲ್ಯಗಳು. ವೈಯಕ್ತಿಕ ಜೀವನದಲ್ಲಿ ಮೌಲ್ಯಗಳಿಗೆ ಬದ್ಧವಾಗಿ ಜೀವನ ಸಾಗಿಸುವುದು ಮತ್ತು ಪ್ರಾಮಾಣಿಕತೆ ಉಳಿಸಿಕೊಳ್ಳುವುದು ನಮ್ಮ ಜೀವನ ಮೌಲ್ಯಗಳಾಗಬೇಕು. ಈ ಒಟ್ಟೂ ನೆಲೆಯಲ್ಲಿ ನಮಗೆ ಬಹುಶಃ ಗಾಂಧಿಗಿಂತ ಮತ್ತೊಬ್ಬ ಆದರ್ಶಪ್ರಾಯರಿಲ್ಲ. ಇಂತಹ ಒಂದು ಸಮಾನಮನಸ್ಕರ ಕ್ರಿಯಾಶೀಲ ಗುಂಪಿನಿಂದ ಏನೂ ಸಾಧ್ಯವಿದೆ ಎನ್ನುವುದು ನನ್ನ ನಂಬಿಕೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ನಮ್ಮ ವರ್ತಮಾನದ ಸಂದಿಗ್ಧ ಸ್ಥಿತಿಯನ್ನು ನಮ್ಮದೇ ನೆಲೆಯಲ್ಲಿ ಅವಲೋಕಿಸುತ್ತ, ಭವಿಷ್ಯದ ದಿನಗಳು ಹೇಗಿರಬೇಕು ಎಂದು ಪರಿಭಾವಿಸುತ್ತ, ಅದರ ಕಾರ್ಯಸಾಧನೆಗೆ ಕ್ರಿಯಾಶೀಲರಾಗಲು ದಾರಿಗಳನ್ನು ಹುಡುಕುವ ಈ “ವರ್ತಮಾನ”ದ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನಿರಿಕ್ಷಿಸುತ್ತೇವೆ. ಕನ್ನಡ ಮತ್ತು ಕರ್ನಾಟಕದ ನೆಲೆಯಲ್ಲಿ ಪರ್ಯಾಯ ಸಮೂಹ ಮಾಧ್ಯಮವೊಂದರ ಕಾರ್ಯಸಾಧ್ಯತೆಯ ಈ ಪ್ರಯತ್ನದಲ್ಲಿ ನಮ್ಮ ಜೊತೆ ನೀವು ಹಲವಾರು ರೀತಿಯಲ್ಲಿ ತೊಡಗಿಸಿಕೊಳ್ಳಬಹುದು.

  • ಈ “ವರ್ತಮಾನ”ದ ಚೌಕಟ್ಟಿನಲ್ಲಿ ಸೇರುವ ಯಾವುದೇ ವಿಷಯದ ಬಗ್ಗೆ ನಿಮ್ಮ ಲೇಖನ, ಆಡಿಯೋ, ಅಥವ ವಿಡಿಯೋವನ್ನು ನಮಗೆ ಕಳುಹಿಸಬಹುದು.
  • ಇಲ್ಲಿರುವ ಲೇಖನಗಳ ಕುರಿತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
  • ಓದಿ, ನೋಡಿ, ಮೆಚ್ಚಿಗೆಯಾದದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
  • ತಮಗೆ ಸಾಧ್ಯವಾದಲ್ಲಿ ಕೆಲವೊಂದು ಕಾರ್ಯಗಳಿಗೆ ಅನುಕೂಲವಾಗುವಂತೆ ಹಣದ ಸಹಾಯ ಸಹ ಮಾಡಬಹುದು.

ಲೇಖನಗಳನ್ನು ಕಳುಹಿಸಲು ಅಥವ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

editor@vartamaana.com

ಅಥವ

“ವರ್ತಮಾನ”
ನಂ. ೨೨೨, B4, ತುಂಗಭದ್ರ ಬ್ಲಾಕ್,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ
ಬೆಂಗಳೂರು – ೫೬೦೦೪7

ದೂ: ೯೬೮೬೦೮೦೦೦೫

 

 

ತಮ್ಮ ವಿಶ್ವಾಸಿ,
ರವಿ ಕೃಷ್ಣಾ ರೆಡ್ಡಿ