Daily Archives: September 2, 2011

ವರ್ತಮಾನದ ಕವಿ ಫೈಜ್ ಅಹ್ಮದ್ ಫೈಜ್

ಭಾರತ ಉಪಖಂಡದ ಆಧುನಿಕ ಉರ್ದು  ಸಾಹಿತ್ಯದ ಪಿತಾಮಹ ಎನಿಸಿದ ಕವಿ, ಲೇಖಕ, ಪತ್ರಕರ್ತ ಫೈಯಾಜ್ ಅಹಮದ್ರವರ ಶತಮಾನತ್ಸೋವ ವರ್ಷ ಇದು. ಆದರೆ, ತಾನೇ ಹುಟ್ಟು ಹಾಕಿದ ಭಯೋತ್ಪಾದನೆಯ ಸುಳಿಯೊಳಗೆ ಸಿಲುಕಿ ನಲುಗಿರುವ ಪಾಕಿಸ್ತಾನಕ್ಕಾಗಲಿ ಅಥವಾ ಹಲವು ಹಗರಣಗಳ ಕೆಸರಿನೊಳಗೆ ಮುಳುಗಿ ಏಳುತ್ತಿರುವ ಭಾರತಕ್ಕಾಗಲಿ ಈ ಕವಿಯ ಸ್ಮರಣೆ ಮಾಡುವಷ್ಟು ವ್ಯವಧಾನವಿಲ್ಲ. ಆದರೂ ಫೈಯಾಜ್ ಉರ್ದು ಸಾಹಿತ್ಯ ಪ್ರಿಯರ ಎದೆಯಲ್ಲಿ ಹಸಿರಾಗಿದ್ದಾರೆ.

ವಿಭಜನೆ ಪೂರ್ವ ಭಾರತದ ಉರ್ದು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯ್ಯಾಡಿಸಿ, ಉರ್ದು ಸಾಹಿತ್ಯಕ್ಕೆ ಆಧುನಿಕತೆಯ ಸ್ಪರ್ಶ ತಂದುಕೊಟ್ಟ ಫೈಜ್ ಅಹಮದ್ ನಿಜ ಜೀವನದಲ್ಲಿ ಹುಟ್ಟು ಹೋರಾಟಗಾರ. ಎಡಪಂಥೀಯ ಚಿಂತನೆಗಳ ಮೂಲಕ ಗಝಲ್ ಪ್ರಕಾರದಲ್ಲಿ ನಿಂತ ನೀರಾಗಿದ್ದ ಕಾವ್ಯಕ್ಕೆ ಹೊಸ ಮಜಲನ್ನು ನೀಡಿದವರು. ಹೆಣ್ಣಿನ ಸೌಂದರ್ಯ, ಅವಳ ಕಣ್ಣು, ತುಟಿ, ಸೊಂಟ ಮುಂಗುರುಳು ಹಾಗೂ ಬೆಳದಿಂಗಳು ಮತ್ತು ಮಧುರಸ ಇವುಗಳ ಸುತ್ತ ಗಿರಕಿ ಹೊಡೆಯುತಿದ್ದ ಉರ್ದು ಕಾವ್ಯಕ್ಕೆ ನಾವು ಯೋಚಿಸಬಹುದಾದ ವರ್ತಮಾನದ ಬೇಗುದಿಗಳಿವೆ ಎಂದು ತೋರಿಸಿಕೊಟ್ಟ ಮಹಾನ್ ಕವಿ ಫೈಜ್.

1930 ರ ದಶಕದಲ್ಲಿ ಪ್ರಗತಿಪರ ಲೇಖಕರ ಸಂಘವನ್ನು ಹುಟ್ಟು ಹಾಕಿದ ಉರ್ದು ಸಾಹಿತ್ಯದ ಮಹನೀಯರಲ್ಲಿ ಇವರು ಒಬ್ಬರು. 1911ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್ ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ಉತ್ತಮ ಪಂಡಿತರಿಂದ ಸಾಂಪ್ರದಾಯಿಕ ಉರ್ದು ಶಿಕ್ಷಣ ಪಡೆದರು. ಇವರ ತಂದೆ ಅಂದಿನ ಆಪ್ಘಾನಿಸ್ತಾನದ ದೊರೆಗೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಮುಂದೆ ಅದೇ ನಗರದ ಸ್ಕಾಟಿಶ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದು, ಮುರ್ರೆ ಕಾಲೇಜಿನಲ್ಲಿ ಪದವಿ ಹಾಗು ಲಾಹೋರ್ನ  ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು, ಕೆಲವು ಕಾಲ ಅಮೃತಸರದ ಕಾಲೇಜಿನಲ್ಲಿ  ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ 1941ರಲ್ಲಿ ಲಾಹೋರ್ಗೆ  ತೆರಳಿ ಸ್ಥಳೀಯ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಲಾಹೋರ್ನಲ್ಲಿ ಇದ್ದಾಗಲೇ ಇವರ ಪ್ರಥಮ ಕವನ ಸಂಕಲನ ನಕ್ಷ್ಪರ್ಯಾದಿ ಪ್ರಕಟವಾಯಿತು. ಉರ್ದು ಸಾಹಿತ್ಯದಲ್ಲಿ ಸಾಂಪ್ರದಾಯಕವಾಗಿ ಕಾವ್ಯದ ವಸ್ತು ಪ್ರೀತಿ, ಪ್ರೇಮ ಇದ್ದ ಸಂಧರ್ಭದಲ್ಲಿ ಕಾವ್ಯಕ್ಕೆ ಹೊಸ ಪ್ರತಿಮೆ, ರೂಪಕ, ವಸ್ತುಗಳನ್ನು ನೀಡಿದ ಕೀರ್ತಿ ಇವರದು. ಇವರ ಕಾವ್ಯದಲ್ಲಿ ಹೊಸದಾಗಿ ಮೂಡಿಬಂದ ಪ್ರತಿಭಟನೆ, ನೊಂದವರ ನೋವು ಇವರಿಗೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತು. ಉರ್ದು ಸಾಹಿತ್ಯದಲ್ಲಿ ಆವರೆಗೆ ಇದ್ದ ಪ್ರಾಸ, ಪುರಾಣ ವಸ್ತುಗಳನ್ನು ತ್ಯಜಿಸಿ ಕ್ರಾಂತಿಯನ್ನು ಪರಿಚಯಿಸಿದ ಫಯಾಜ್ ಪ್ರಗತಿಪರ ಕಾವ್ಯದಲ್ಲಿ ಕಟು ವಾಸ್ತವಗಳು ಇರಬೇಕೆ ಹೊರತು ಭ್ರಮೆ, ಕನಸು, ಕನವರಿಕೆಗಳಲ್ಲ ಎಂದು ಪ್ರತಿಪಾದಿಸಿದವರು.

ಆಧುನಿಕ ಉರ್ದು ಸಾಹಿತ್ಯ ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಇಟ್ಟುಕೊಂಡಿದ್ದ ಪಯಾಜ್ ಅಹಮದ್ ತಮ್ಮ ಜೀವಿತಾವಧಿಯಲ್ಲಿ 18 ಕವನ ಸಂಕಲನ, ಮತ್ತು 12ಕ್ಕೂ ಮಿಗಿಲಾದ ಗದ್ಯ ಕೃತಿಗಳನ್ನು ರಚಿಸಿದರು. ಇವರ ಗದ್ಯಕೃತಿಗಳೆಲ್ಲವೂ ಉರ್ದು ಸಾಹಿತ್ಯ ಕುರಿತ ಚಿಂತನೆಗಳೇ ಆಗಿರುವುದು ವಿಶೇಷ. ಸಾಹಿತ್ಯದ ಪ್ರಶ್ನೆಗಳು ಸಾಹಿತ್ಯ ಮತ್ತು ಅಸ್ತಿತ್ವ ಕಾವ್ಯ ಮತ್ತು ಪ್ರಜ್ಞೆ ಲೇಖಕ ನೀನೆಲ್ಲಿ ನಿಂತಿದ್ದೀಯಾ? ಗಝಲ್ ಭವಿಷ್ಯ ಒಂದು ಚಿಂತನೆ ಕಾವ್ಯ ಮತ್ತು ಪ್ರಜಾಪ್ರಭುತ್ವ ಸಾಹಿತ್ಯ ಮತ್ತು ಸಂಸ್ಕೃತಿ ಸಾಹಿತ್ಯ ಮತ್ತು ಲೇಖಕ ಸೌಂದರ್ಯ ಮತ್ತು ಪರಿಕಲ್ಪನೆ ಮುಂತಾದ ಕೃತಿಗಳನ್ನು ಇಂಗ್ಲೀಷ್ ಮತ್ತು ಉರ್ದು ಭಾಷೆಗಳಲ್ಲಿ ರಚಿಸುವುದರ ಮೂಲಕ ಆಧುನಿಕ ಉರ್ದು ಸಾಹಿತ್ಯ ಲೋಕಕ್ಕೆ ಹೊಸ ಲೇಖಕರನ್ನು ಕವಿಗಳನ್ನು ನೀಡಿದ ಕೀರ್ತಿ ಇವರದು. ಹಾಗಾಗಿ ಇವರನ್ನ ಆಧುನಿಕ ಉರ್ದುಸಾಹಿತ್ಯದ ಪಿತಾಮಹ ಎಂದೇ ಇಂದಿಗೂ ಗೌರವಿಸಲಾಗುತ್ತಿದೆ.

ಸಾಹಿತ್ಯ ಚಟುವಟಿಕೆಯ ಜೊತೆಗೆ ಅಪ್ಪಟ ಸ್ವಾತಂತ್ರ್ಯ ಪ್ರೇಮಿಯಾಗಿದ್ದ ಫೈಜ್ರವರು ಬ್ರಿಟೀಷರಿಂದ ಅಖಂಡ ಭಾರತದ ಬಿಡುಗಡೆಗಾಗಿ ಹಂಬಲಿಸಿದವರು. ಈ ಕಾರಣಕ್ಕಾಗಿ  ತಮ್ಮ ಹುದ್ದೆಯನ್ನು ತ್ಯಜಿಸಿ ಎರಡನೇ ಮಹಾಯುದ್ಧದಲ್ಲಿ ಬ್ರಿಟೀಷ್ ಸೇನೆಯಲ್ಲಿ ಎರಡು ವರ್ಷಗಳ ಕಾಲ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸಿದರು.

1947ರಲ್ಲಿ ಅವರು ಹಂಬಲಿಸಿದ್ದ ಸ್ವಾತಂತ್ರ್ಯ ಭಾರತಕ್ಕೆ ಸಿಕ್ಕಿತು. ಆದರೆ ಅದು ಅವರು ಕನಸಿದ್ದ ಸ್ವಾತಂತ್ರ್ಯವಾಗಿರಲಿಲ್ಲ. ವಿಭಜನೆಯ ಹೆಸರಿನಲ್ಲಿ ಭಾರತ ಮತ್ತು ಪಾಕ್ ಎರಡು ರಾಷ್ಟ್ರಗಳಾಗಿ ಉದಯಿಸಿದ್ದು ಅವರಿಗೆ ಅಪಾರ ನೋವನ್ನುಂಟುಮಾಡಿತ್ತು. ಈ ಸಂದರ್ಭದಲ್ಲಿ ಅವರೇ ಬರೆದ

ನಾನು ಕನಸಿದ ಈ ಮುಸುಕಿನ ಮುಂಜಾವು ಇದಲ್ಲ
ನಾನು ಯಾವುದರ ನಿರೀಕ್ಷೆಯಲ್ಲಿದ್ದೆನೊ ಆ ನಿರೀಕ್ಷೆಯೂ ಇದಲ್ಲ

ಎಂಬ ಕಾವ್ಯ ಇಂದಿಗೂ ಪ್ರಸಿದ್ಧವಾಗಿದೆ.

ಆ ಕಾಲಘಟ್ಟದ ವಿಭಜನೆಯ ನೋವು ಎಲ್ಲ ಲೇಖಕರ ಎದೆಯ ಮೇಲೆ ಬರೆ ಎಳೆದ ಮಾಯದ ಗಾಯದಂತಿದೆ. ಫೈಜ್ರವರ ಕವಿತೆಗಳೂ ಸೇರಿದಂತೆ, ಗುಲ್ಜಾರ್ ಬರೆದ

ಆ ಕೋಮು ದಳ್ಳುರಿಯಲ್ಲಿ
ಅಳಿಸಿ ಹಾಕಿದ್ದು ಮನುಷ್ಯರನ್ನಲ್ಲ
ಕೇವಲ ಹೆಸರುಗಳನ್ನು ಮಾತ್ರ
ಅವರು ತರಿದು ಹಾಕಿದ್ದು ತಲೆಗಳನ್ನಲ್ಲ
ಕೇವಲ ಟೊಪ್ಪಿಗಳನ್ನು ಮಾತ್ರ

ಅಕಸ್ಮಾತ್ತಾಗಿ ಟೊಪ್ಪಿಯೊಳಗೆ ತಲೆಗಳಿದ್ದವು ಅಷ್ಟೆ ಎಂಬ ಕವಿತೆಯೊಂದಿಗೆ ಖುಷವಂತ್ ಸಿಂಗ್ ರ “ಟ್ರೈನ್ ಟು ಪಾಕಿಸ್ತಾನ್” ಕಾದಂಬರಿ, ಭೀಷ್ಮಸಾಹನಿಯವರ ತಮಸ್ ಕಾದಂಬರಿ ಹಾಗೂ ಯಾವ ಓದುಗನೂ ಕಟು ವಾಸ್ತವವನ್ನು ಜೀರ್ಣಿಸಿಕೊಳ್ಳಲಾಗದಷ್ಟು ಮಟ್ಟದಲ್ಲಿ ಸಾದತ್ ಹಸನ್ ಮಾಂಟೊ ಬರೆದ ಕತೆಗಳು ವಿಭಜನೆಯ ನೋವಿಗೆ ಸಾಕ್ಷಿಯಾಗಿವೆ. ಈ ಎಲ್ಲಾ ಲೇಕಕರು ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸೆಯಲ್ಲಿ ಹರಿದ ಬಿಸಿ ನೆತ್ತರಿನೊಳಗೆ ತಮ್ಮ ಲೇಖನಿಯನ್ನು ಅದ್ದಿ ಈ ಸಾಹಿತ್ಯ ಸೃಷ್ಟಿಸಿದ್ದಾರೇನೊ ಎಂಬ ಭಾವನೆ ಮೂಡುತ್ತದೆ.

ಸ್ವಾತಂತ್ರ್ಯ ನಂತರ ಕರಾಚಿಯಲ್ಲಿ ನೆಲೆಸಿದ ಫಯಾಜ್ರವರು ಪಾಕಿಸ್ತಾನ್ ಟೈಮ್ಸ್ ಎಂಬ ಇಂಗ್ಲೀಷ್ ಪತ್ರಿಕೆಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಆ ನಂತರ 1962ರಲ್ಲಿ ಪಾಕಿಸ್ತಾನದ ಸಾಂಸ್ಕೃತಿಕ ರಾಯಭಾರಿಯಾಗಿ ಲಂಡನ್ನಲ್ಲೂ ಕೂಡ ಸೇವೆ ಸಲ್ಲಿಸಿದರು. ಜಾತಿ ಧರ್ಮದ ಗಡಿ ರೇಖೆಗಳನ್ನು ದಾಟಿದ್ದ ಫೈಜ್ ಬ್ರಿಟೀಷ್ ಮಹಿಳೆಯೊಬ್ಬಳನ್ನು ವಿವಾಹವಾಗಿದ್ದರು. ಕಟ್ಟಾ ಎಡಪಂಥೀಯರಾಗಿದ್ದ ಫಯಾಜ್ ಅಹಮದ್ ಸೂಫಿ ಸಂತರನ್ನು ಹಾಗೂ ಸೂಫಿ ತತ್ವಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಜಗತ್ತಿನಲ್ಲಿ ನಿಜವಾದ ಕಾಮ್ರೇಡ್ಗಳೆಂದರೆ ಸೂಫಿ ಸಂತರು ಎಂಬುದು ಅವರ ನಂಬಿಕೆಯಾಗಿತ್ತು.

ಸ್ವಾತಂತ್ರ್ಯಾನಂತರ ಸರಕಾರದ ವಿರುದ್ಧ ಪಿತೂರಿ ನಡೆಸಿದರು ಎಂಬ ಆಪಾದೆನೆಯಿಂದ 4 ವರ್ಷಗಳ ಕಾಲ ಜೈಲು ವಾಸವನ್ನೂ ಕೂಡ ಅನುಭವಿಸಿದರು. ಮನುಷ್ಯನ ಮುಕ್ತ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸುತ್ತಿದ್ದ ಈ ಮಹಾನ್ ಕವಿ ಫೈಜ್ ಬರೆದ

ಕಸಿದುಕೊಂಡರೇನು ನನ್ನ ಲೇಖನಿ ಮತ್ತು ಕಾಗದ
ಅದ್ದಿಕೊಂಡಿದ್ದೇನೆ ಬೆರಳುಗಳನ್ನು
ನನ್ನೆದೆಯ ಬಿಸಿ ರಕ್ತದಲ್ಲಿ
ನಾಲಿಗೆಗೆ ಬೀಗ ಹಾಕಿ ಬಾಯಿ ಹೊಲಿದರೇನು
ಇಟ್ಟಿದ್ದೇನೆ ಪ್ರತಿಯೊಂದು ಸರಪಳಿಯ ಕೊಂಡಿಯಲ್ಲಿ
ಮಾತನಾಡುವ ನಾಲಿಗೆಗಳನ್ನು

ಈ ಕವಿತೆ ಅವರ ಪ್ರಖರ ಚಿಂತನೆಗೆ, ಆಧುನಿಕ ಮನೋಭಾವಕ್ಕೆ ಹಿಡಿದ ಕನ್ನಡಿಯಂತಿದೆ. ಇಂತಹ ಮಹಾನ್ ಕವಿ 1984ರಲ್ಲಿ ಇಲ್ಲವಾದರೂ, ನಮ್ಮ ನಡುವೆ ಕಾವ್ಯದ ಮೂಲಕ ಜೀವಂತವಾಗಿದ್ದಾರೆ.

-ಡಾ.ಎನ್.ಜಗದೀಶ್ ಕೊಪ್ಪ