Daily Archives: September 4, 2011

ಆರಕ್ಷಣ್ ಸಿನಿಮಾ ಮತ್ತು ಶಿಕ್ಷಕರ ದಿನ

“ಇನ್ನುಮುಂದೆ ನೀನು ಶಿಕ್ಷಣ ಕ್ಷೇತ್ರದಿಂದ ಹೊರಗೆ. You will remain a zero” – ಎಂಬರ್ಥದ ಟೀಕೆಗಳಿಂದ ಬೇಸತ್ತ ಪ್ರಿನ್ಸಿಪಾಲ್ ಉಚಿತವಾಗಿ ಬಡ ಮತ್ತು ದಲಿತ ಮಕ್ಕಳಿಗೆ ಪಾಠ ಹೇಳಲು ಆರಂಭಿಸುತ್ತಾರೆ. ಅವರ ಪ್ರಯತ್ನ ಬೃಹತ್ ಪ್ರಮಾಣದ ಯಶಸ್ಸು ನೀಡುತ್ತದೆ. ಸಾವಿರಾರು ರೂಗಳನ್ನು ತೆತ್ತು ಕೋಚಿಂಗ್ ಪಡೆಯಲಾಗದ ನೂರಾರು ವಿದ್ಯಾರ್ಥಿಗಳು ಇವರ ಪ್ರಯತ್ನದ ಸದುಪಯೋಗ ಪಡೆಯುತ್ತಾರೆ. ಇದು ಆರಕ್ಷಣ ಸಿನಿಮಾದ ಕತೆ.

ಅದು ಮೇಲ್ನೋಟಕ್ಕೆ ತಿಳಿಯುವಂತೆ ‘highly cinematic’ ಎಂದು ಹೇಳಿಬಿಡಬಹುದಾದರೂ, ಈ ನೆಲದ ಶಿಕ್ಷಕರಿಗೆ ಉತ್ತಮ ಸಂದೇಶ, ಪ್ರೇರಣೆ ಇಲ್ಲಿದೆ ಎನ್ನುವುದನ್ನು ಒಪ್ಪಲೇಬೇಕು. ಸೋಮವಾರ (ಸೆ.5) ಶಿಕ್ಷಕರ ದಿನ. ಆ ಕಾರಣ ಆ ಸಂದೇಶಕ್ಕೆ ಮಹತ್ವ ಇದೆ. ಈ ಚಿತ್ರದಲ್ಲಿ ಪ್ರಿನ್ಸಿಪಾಲ್ (ಅಮಿತಾಬ್ ಬಚ್ಚನ್) ಚೇಂಬರ್ ನಲ್ಲಿ ಶಿಕ್ಷಕರ ದಿನಾಚರಣೆಗೆ ಕಾರಣರಾದ ಸರ್ವೆಪಲ್ಲಿ ರಾಧಾಕೃಷ್ಣ ರ ಚಿತ್ರಪಟ ಇದೆ ಅಮಿತಾಬ್ ಬಚ್ಚನ್ ಮಾತನಾಡುವ ದೃಶ್ಯಗಳಲ್ಲಿ ಹಿನ್ನೆಲೆಯಲ್ಲಿ ರಾಧಾಕೃಷ್ಣರ ಚಿತ್ರಪಟ ಮತ್ತೆ ಮತ್ತೆ ಕಾಣುತ್ತದೆ. ಚಿತ್ರ ನಿರ್ದೇಶಕರು ಆ ಚಿತ್ರಪಟದ ಮೂಲಕ ಶಿಕ್ಷಕ-ವೀಕ್ಷಕರಿಗೆ ಏನನ್ನೋ ಹೇಳಲು ಬಯಸುತ್ತಾರೆ ಎನ್ನುವುದು ಸ್ಪಷ್ಟ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಉತ್ತಮ ಸಂಬಳ ಪಡೆಯುತ್ತಿದ್ದಾರೆ. (ಆಫ್ಕೋರ್ಸ್ ‘ಉತ್ತಮ’ ಎನ್ನುವುದು ಸಾಪೇಕ್ಷ). ಆದರೆ ಜನರ ಮಧ್ಯೆ ಚಾಲ್ತಿಯಲ್ಲಿರುವ ಒಂದು ಮಾತು ಶಿಕ್ಷಕರು, ಅದರಲ್ಲೂ ಪ್ರಥಮ ದರ್ಜೆ ಕಾಲೇಜುಗಳ ಬಹುತೇಕ ಉಪನ್ಯಾಸಕರು, ತಮ್ಮ ಪಗಾರಕ್ಕೆ ನ್ಯಾಯ ಒದಗಿಸುವುದಿಲ್ಲ. ಕೊಳ್ಳೇಗಾಲ, ಹುಮ್ನಾಬಾದ್, ಕೊರಟಗೆರೆ – ಇಂತಹ ಸಣ್ಣ ಊರುಗಳಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹತ್ತಿರಹತ್ತಿರ ಒಂದು ಲಕ್ಷ ರೂ ಸಂಬಳ ಪಡೆಯುತ್ತಾರೆ ಎಂದರೆ ಬೇರೆಯವರು ಕಣ್ಣು ಕುಕ್ಕುವುದು ಸಹಜ. ಆದರೆ ಅದೇ ಐಐಟಿ ಅಥವಾ ಐಸೆಕ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರ ಬಗ್ಗೆ ಇಂತಹ ಧೋರಣೆ ಕಡಿಮೆ.

ಅಷ್ಟು ಸಂಬಳ ಪಡೆದರೂ ದಿನಕ್ಕೆ ಎರಡೋ-ಮೂರೋ ಗಂಟೆ ಪಾಠ ಮಾಡುತ್ತಾರಷ್ಟೆ. ಅವರ ಓದು, ಅಧ್ಯಯನ ಸದೃಢ ಯುವ ಶಕ್ತಿಯನ್ನು ನಿರ್ಮಿಸುವಲ್ಲಿ ಸೋತಿದೆ ಎನ್ನುವ ಆರೋಪಗಳು ಆಗಾಗ್ಗೆ ಕೇಳಿ ಬರುತ್ತವೆ. ಹಾಗಾದರೆ ಶಿಕ್ಷಕರು ಏನು ಮಾಡಬೇಕು? ಈ ಪ್ರಶ್ನೆಗೆ ‘ಆರಕ್ಷಣ’ ಚಿತ್ರದಲ್ಲಿ ಒಂದು ಸಲಹೆ ಇದೆ. ಕಲಿಕೆಯಲ್ಲಿ ಹಿಂದುಳಿದ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬಹುದು.

ಕೊನೆಮಾತು: ಇತ್ತೀಚೆಗೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮನೆ ಕಟ್ಟಿದರು. ಕಾರನ್ನೂ ಕೊಂಡರು. ಕೊಲೀಗ್ ಒಬ್ಬರು ‘ನೀವ್ಯಾಕೆ ಕಂಪೂಟರ್ ತಗೋಬಾರದು? ನಿಮ್ಮ ಅಧ್ಯಯನಕ್ಕೂ, ಮಕ್ಕಳಿಗೂ ಉಪಯೋಗ ಆಗುತ್ತೆ. ‘ ಎಂದರು.  ಇದಕ್ಕೆ ಉತ್ತರಿಸಿದ ಪ್ರಾಧ್ಯಾಪಕರು, “ಮಕ್ಕಳ ಕಣ್ಣಿಗೆ ಕಂಪ್ಯೂಟರಿಂದ ತೊಂದರೆ ಆಗುತ್ತೆ ಅದಕ್ಕೆ ಲೇಟ್ ಮಾಡಿದೆ” ಎಂದರು. ನಗಬೇಕೋ, ಅಳಬೇಕೋ ನೀವೇ ಹೇಳಿ.

ಜೀವನದಿಗಳ ಸಾವಿನ ಕಥನ – 1

ಡಾ.ಎನ್. ಜಗದೀಶ್ ಕೊಪ್ಪ

ಇದು ಜೀವನದಿಗಳ ಸಾವಿನ ಕಥನವಷ್ಟೇ ಅಲ್ಲ, ಮನುಕುಲದ ಅವಸಾನದ ಕಥನ ಕೂಡ ಹೌದು. ಒಬ್ಬನ ಹಿತಕ್ಕಾಗಿ ಹಲವರ ಬದುಕನ್ನು ಬಲಿಕೊಡುವ ವಿಕೃತ ದುರಂತಗಾಥೆ. ಯಾವ ಜಾಗದಲ್ಲಿ ಮನುಕುಲದ ನಾಗರೀಕತೆ ಜನ್ಮತಾಳಿತೋ, ಅದೇ ಜಾಗದಲ್ಲಿ ಸಂಸ್ಕೃತಿ ಅವಸಾನಗೊಳ್ಳುತ್ತಿರುವ ನೋವಿನ ಕಥೆ.

ಹರಿಯುವ ನೀರಿಗೆಲ್ಲಾ ಗಂಗೆಯೆಂದು ಹೆಸರಿಟ್ಟು ಪೂಜಿಸಿದ ಈ ನೆಲದಲ್ಲಿ ಮಾತೃ ಸ್ವರೂಪದ ನದಿ ಎಂಬಾಕೆಯ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಹಂತ-ಹಂತವಾಗಿ ನಡೆಯುತ್ತಿರುವ ಅತ್ಯಾಚಾರ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪೃಥ್ವಿಯ ಎಲ್ಲೆಡೆ ಇತಿಹಾಸದುದ್ದಕ್ಕೂ ನಿರಂತರವಾಗಿ ಅಡೆ ತಡೆಯಿಲ್ಲದೆ ಸಾಗಿದ ಅವಿರತ ಅನಾಚಾರ.

ಮನುಷ್ಯನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾದಂತೆ, ಆಧುನಿಕ ಜಗತ್ತಿನ ಮಾನವನಲ್ಲಿ ಪ್ರಕೃತಿಯನ್ನು ಮಣಿಸಬೇಕೆಂಬ ಅಹಂಕಾರ ತಲೆ ಎತ್ತಿದೆ. ಇದರ ಫಲವಾಗಿ ನಿಸರ್ಗದ ಕೊಡುಗೆಗಳ ಜೊತೆಜೊತೆಯಲ್ಲಿ ಪ್ರಕೃತಿ ವಿಕೋಪಗಳನ್ನೂ ಅವನು ಅನುಭವಿಸಬೇಕಾಗಿದೆ.

ನಾವು ಈ ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ. ಅದನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸಬೇಕಾದದ್ದು ನಮ್ಮ ಹೊಣೆ ಎಂಬ ಪ್ರಜ್ಞೆ ವಿಸ್ಮೃತಿಗೆ ಜಾರಿರುವುದೇ ಪರಿಸರದ ದುರಂತಕ್ಕೆ ಮೂಲ ಕಾರಣವಾಗಿದೆ.

ನಾಗರೀಕ ಸಮಾಜದಲ್ಲಿ ಹೆಚ್ಚಿದ ಅನುಭೋಗ ಪ್ರವೃತ್ತಿ ಪರಿಸರದ ಮೇಲಿನ ಪೈಶಾಚಿಕ ದಾಳಿಗೆ ಮೂಲವಾಗಿದ್ದು,  ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟದಷ್ಟು ಪ್ರಮಾಣ ಈಗ ಕೇವಲ 50 ವರ್ಷಗಳಲ್ಲಿ ಜರುಗಿದೆ.

ಮನುಷ್ಯ ಕಾಲಿಟ್ಟ ಜಾಗ ಅದು ಅರಣ್ಯವಿರಲಿ, ಪರ್ವತವಿರಲಿ, ನದಿಯಿರಲಿ ಸುರಕ್ಷಿತವಾಗಿಲ್ಲ. ಮನುಕುಲದ ವಾರಸುದಾರರೆಂದು ಹೇಳಿಕೊಳ್ಳುವ ನಾವು ಕಾಲಿಟ್ಟ ಸ್ಥಳಗಳಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎಂಬ ವಾಸ್ತವಿಕ ಕಟು ಸತ್ಯವನ್ನು ನೆನಪಿಗೆ ತಂದುಕೊಳ್ಳಲಾಗದಷ್ಟು ಅಹಂಕಾರದ ಅಟ್ಟಕ್ಕೆ ದೂಡಲ್ಪಟ್ಟಿದ್ದೇವೆ.

ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕುವ ಪರಿಸರ ಎಲ್ಲವನ್ನೂ ವಿಷಮಯಗೊಳಿಸಿ, ಭೂಮಿಯನ್ನು ಸುಡುಗಾಡನ್ನಾಗಿ ಮಾಡಿ ನಾಗರೀಕತೆಯ ಸೋಗಿನಲ್ಲಿ ಅನಾಗರೀಕತೆಯ ಬದುಕು ನಡೆಸುತ್ತಿದ್ದೇವೆ.

ಈ ಭೂಮಿಯ ಮೇಲೆ ಪ್ರಾಣಿಗಳ ಜೊತೆ ಜೊತೆಯಲ್ಲಿ ಮನುಷ್ಯ ಜೀವಿ ಅಸ್ತಿತ್ವಕ್ಕೆ ಬಂದಿದ್ದು 20 ಸಾವಿರ ವರ್ಷಗಳ ಹಿಂದೆ. ಪ್ರಾರಂಭಿಕ ದಿನಗಳಲ್ಲಿ ಪ್ರಾಣಿಯಂತೆ ಬದುಕಿದ್ದ ಆತನ ಮೆದುಳೊಳಗೆ ವಿವೇಚನೆ ಮೂಡಿ, ಪ್ರಕೃತಿಯ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುವ ಬುದ್ಧಿ ಮೊಳೆತದ್ದು ಕೇವಲ 10 ಸಾವಿರವರ್ಷಗಳ ಹಿಂದೆ. ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿ, ಗುಡುಗು-ಸಿಡಿಲು, ಮಳೆ-ಗಾಳಿಗೆ ಅಂಜಿ ಗುಹೆಗಳಲ್ಲಿ ವಾಸವಾಗಿದ್ದ ಅವನ ಕೈಗೆ ಕಬ್ಬಿಣದ ಲೋಹ ಯಾವಾಗ ಆಯುಧವಾಗಿ ದೊರೆಯಿತೊ, ಅಂದೇ ನಾಗರೀಕತೆಯ ಅಧ್ಯಾಯ  ಕೂಡ ಪ್ರಾರಂಭವಾಯಿತು.

ಶಿಲಾಯುಗದಿಂದ ಲೋಹಯುಗಕ್ಕೆ ಸ್ಥಿತ್ಯಂತರಗೊಂಡ ಮಾನವನ ಬದುಕಿನಲ್ಲಿ ನಾಗರೀಕತೆಯ ಬೀಜ ಮೊಳಕೆಯೊಡೆದದ್ದೇ ತಡ, ತನ್ನ ಜೊತೆಯಲ್ಲಿ ಬದುಕಿದ್ದ ಸಾಧು ಪ್ರಾಣಿಗಳನ್ನು ಪಳಗಿಸಿ, ಗೆಡ್ಡೆ-ಗೆಣಸುಗಳನ್ನು ಆರಿಸುವ ಬದುಕಿಗೆ ವಿದಾಯ ಹೇಳಿ, ತಾನಿದ್ದ ಜಾಗದಲ್ಲೇ ಉತ್ತಿ, ಬಿತ್ತಿ ಬೆಳೆಯಬಾರದೇಕೆ ಎಂಬ ಪ್ರಶ್ನೆಯ ಮಿಂಚು ಅವನ ತಲೆಯೊಳಗೆ ಸುಳಿದಾಗ ಪ್ರಕೃತಿಯ ಮೇಲಿನ ದಾಳಿಯ ಮೊದಲ ಅಧ್ಯಾಯಕ್ಕೆ ನಾಂದಿಯಾಯಿತು.

ಜಗತ್ತಿನ ಯಾವುದೇ ನಾಗರೀಕತೆಯ ಹುಟ್ಟು ಮತ್ತು ಅವಸಾನಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲವೂ ನದಿ ತೀರದಲ್ಲಿಯೇ ಜನಿಸಿ, ಅಲ್ಲೇ ಅವಸಾನಗೊಂಡಿವೆ. ಹಾಗಾಗಿ ನದಿಗಳೆಂದರೆ ಕೇವಲ ನೀರಿನ ಮೂಲವಲ್ಲ, ಅವು ಮನುಕುಲದ ಹುಟ್ಟು-ಸಾವಿನ ತೊಟ್ಟಿಲುಗಳು ಕೂಡ ಹೌದು.

ಐದು ಸಾವಿರ ವರ್ಷಗಳ ಹಿಂದೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ತೀರದಲ್ಲಿ ಹುಟ್ಟಿದ ಮೆಸಪೊಟೋಮಿಯಾ ನಾಗರೀಕತೆ, ಈಜಿಪ್ಟ್‌ನ ನೈಲ್ ನದಿ ಬಳಿ ಜನಿಸಿದ ಈಜಿಪ್ಟ್ ನಾಗರೀಕತೆ, ದಕ್ಷಿಣ ಅಮೆರಿಕದ ಇಂಕಾ ಮತ್ತು ಮಾಯಾ ನಾಗರೀಕತೆ, ಗ್ರೀಕ್‌ನ ರೋಮ್ ನಾಗರೀಕತೆ, ಭಾರತದ ಸಿಂಧೂ ನದಿ ತೀರದ ಹರಪ್ಪ, ಮೆಹಂಜೋದಾರೊ ನಾಗರೀಕತೆ ಇವುಗಳ ಮೂಲ ಬೇರುಗಳು ಜಗತ್ತಿನ ಹಲವಾರು ನದಿಗಳಲ್ಲಿ ಅಡಕವಾಗಿದೆ. ಮನುಷ್ಯ ಸಂಸ್ಕೃತಿಯ ಜನನಕ್ಕೆ ಕಾರಣವಾದ ಇದೇ ಜೀವ ನದಿಗಳು ಅವನ ಸಂಸ್ಕೃತಿ ಮತ್ತು ನಾಗರೀಕತೆಯ ಅವಸಾನಕ್ಕೂ ಕಾರಣವಾಗಿವೆ. ಈ ಸಂದರ್ಭದಲ್ಲಿ ಲೆವಿಸ್ ಮಮ್‌ಪೆಡ್ ಎಂಬ ಲೇಖಕ ತನ್ನ “ಟೆಕ್ನಿಕ್ ಅಂಡ್ ಸಿವಿಲೈಜೇಷನ್” ಕೃತಿಯಲ್ಲಿ “ಕಬ್ಬಿಣ ಮತ್ತು ಕಲ್ಲಿದ್ದಲಿನ ಆವಿಷ್ಕಾರ ನಾಗರೀಕತೆ ವಿಕಾಸ ಮತ್ತು ವಿನಾಶಕ್ಕೆ ಕಾರಣಮಯ” ಎನ್ನುವ ಮಾತು ಇಲ್ಲಿ ಪ್ರಸ್ತುತ.

ಹುಟ್ಟು, ವಿನಾಶ, ಮರುಹುಟ್ಟುಗಳ ಹೋರಾಟದಲ್ಲಿ ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅದರ ದುರ್ಬಳಕೆ ಕೂಡ ಹೆಚ್ಚಾಯಿತು. ಪ್ರಕೃತಿಯ ಒಂದು ಭಾಗವಾಗಿಯೇ ಬದುಕಿದ ನಮ್ಮ ಮೂಲನಿವಾಸಿಗಳು, ಪರಿಸರಕ್ಕೆ ಧಕ್ಕೆಯಾಗದ ರೀತಿ ಬದುಕಿದ್ದರು. ಇಂದಿಗೂ ಕೂಡ ಅರಣ್ಯವಾಸಿಗಳಲ್ಲಿ ಇಂತಹ ಸಂಸ್ಕೃತಿಯನ್ನು ನಾವು ನೋಡಬಹುದು. ಅವರು ಒಂದು ಮರ ಕಡಿಯುವ ಮುನ್ನ ಅದಕ್ಕೆ ಪ್ರತಿಯಾಗಿ ಎರಡು ಸಸಿ ನೆಡುವ ಸಂಸ್ಕೃತಿ ಹಾಗೂ ಬೇಸಾಯ ಮಾಡಿದ ಭೂಮಿಯನ್ನು ಹಲವಾರು ವರ್ಷ ತೊರೆದು ಬೇರೆಡೆ ಬೇಸಾಯ ಮಾಡುವ ಕ್ರಮವನ್ನು ನಾವು ಆದಿವಾಸಿಗಳ ಬದುಕಿನಲ್ಲಿ ಇಂದೂ ಸಹ ಕಾಣಬಹುದಾಗಿದೆ. ಪ್ರಕೃತಿಯ ಕುರಿತಾದ ಈ ಜ್ಞಾನ ಪರಂಪರೆಯನ್ನು ಅವರಿಗೆ ಯಾರೂ ಧಾರೆ ಎರೆಯಲಿಲ್ಲ. ಪರಿಸರದ ಮಕ್ಕಳಂತೆ ಬದುಕಿದ ಅವರ ಎದೆಯೊಳಗೆ ಈ ಜ್ಞಾನ ತಾನಾಗಿಯೇ ಮೊಳೆತದ್ದು. ಈ ನೆಲದ ನಿಜ ಮಕ್ಕಳನ್ನು ನಾಗರೀಕ ಸೋಗಿನ ನಾವು “ಅನಾಗರೀಕರೆಂದು” ಕರೆಯುವ ಪ್ರವೃತ್ತಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ “ಪ್ರಕೃತಿ ಜೀವ ಸಂಕುಲಗಳನ್ನು ಪೋಷಿಸಿಕೊಂಡು ಬಂದಿರುವುದು ಮಾನವನ ಒಳಿತಿಗಾಗಿ ಇದರ ದುರುಪಯೋಗ ಸಲ್ಲದು” ಎಂದಿದ್ದ.

ಎಲ್ಲವೂ ತನ್ನ ಕಾಲಡಿಯಲ್ಲಿರಬೇಕು ಎಂಬ ಭ್ರಮೆಯನ್ನು ಬೆನ್ನತ್ತಿರುವ ಮನುಕುಲ ತಾನು ಸವೆಸಿದ ಹಾದಿಯನ್ನು, ನಡೆದ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ನೋಡಲಾರದ ಸೊಕ್ಕನ್ನು ಬೆಳೆಸಿಕೊಂಡಿದೆ.

ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ “ಹ್ಯೂಮನಿಟಿ ಅಂಡ್ ನೇಚರ್” ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬಾತ “ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ” ಎಂದು ವಾದಿಸಿದ್ದಾನೆ.

ಇಂತಹ ಅಪಕ್ವ ಪಾಶ್ಚಿಮಾತ್ಯ ಚಿಂತನೆಯ ಧಾರೆಗಳನ್ನು ನಿರಾಕರಿಸಿದ್ದ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ “ಯೂರೋಪಿಯನ್ನರು ಯಾವ ನೆಲವನ್ನು ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.

ಮನುಕುಲದ ಇಂತಹ ನಿರಂತರ ದಾಳಿಯ ಚರಿತ್ರೆಯನ್ನು ಅವಲೋಕಿಸಿರುವ ಇತಿಹಾಸ ತಜ್ಞ ಎಲಿಂಗ್‌ಟನ್ ಮನುಕುಲದ ಐದು ಶತಮಾನಗಳನ್ನು “ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ ಯುಗ” ಎಂದು ವಿಂಗಡಿಸಿದ್ದು, ಈಗ ಮನುಕುಲ ಹಾಗೂ ಪರಿಸರದ ಉಳಿವಿಗಾಗಿ ಪರಿಸರಶಾಹಿ ಯುಗ ರೂಪುಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾನೆ.

ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಇದೀಗ ಮನುಕುಲವನ್ನು ಭೋಗದ ಹುಚ್ಚುಕುದುರಯನ್ನೇರುವಂತೆ ಮಾಡಿವೆ. ಎಲ್ಲವನ್ನೂ ವ್ಯಾಪಾರದ ಸರಕುಗಳಂತೆ ನೋಡುವ ನಮ್ಮ ಆರ್ಥಿಕ ತಪ್ಪು ಪರಿಕಲ್ಪನೆಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲಿನ ಪೈಶಾಚಿಕ ದಾಳಿ ವರ್ತಮಾನದ ಜಗತ್ತನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.

(ಮುಂದುವರಿಯುವುದು)