Daily Archives: September 10, 2011

ಬಲಪಂಥೀಯ ಕೋಮುವಾದಿ ನೆಲೆ ಹಾಗೂ ಎಂ. ಗೋಪಾಲಕೃಷ್ಣ ಅಡಿಗರ “ಮತ್ತೆ ಮೊಳಗಲಿ ಪಾಂಚಜನ್ಯ” : ಭಾಗ – 2

– ಡಾ. ಎಂ.ಡಿ. ಒಕ್ಕುಂದ

ಭಾಗ – 1

(ಮುಂದುವರೆದುದು…)

ಅಭಿವ್ಯಕ್ತಿ ವಿಧಾನ – ಸ್ಮೃತಿಕೋಶದ ಬಳಕೆ
ಕಾವ್ಯ ಪರಂಪರೆಯ ಸ್ಮೃತಿಕೋಶಗಳಿಗೆ ಹೋಗಿ ಅಲ್ಲಿಯ ನುಡಿ, ನುಡಿಗಟ್ಟು ಮತ್ತು ಅಲಂಕಾರಗಳನ್ನು ಕವಿಗಳು ತಮ್ಮ ಕವಿತೆಗಳಲ್ಲಿ ಬಳಸಿಕೊಳ್ಳುತ್ತಾರೆ. ತನ್ನ ಚಿಂತನೆ, ಸಂವೇದನೆಗಳಿಗೆ ಪರಂಪರೆಯಿಂದ ನ್ಯಾಯಬದ್ಧತೆಯನ್ನು ಪಡೆಯುವ ಒತ್ತಡದಲ್ಲಿ ಈ ಬಗೆಯ ಅಭಿವ್ಯಕ್ತಿಯ ದಾರಿಗಳು ತೆರೆದುಕೊಂಡಂತಿವೆ. ಅಡಿಗರ ಕವಿತೆಯ “ಮತ್ತೆ ಮೊಳಗಲಿ ಪಾಂಚಜನ್ಯ” ಎಂಬ ತಲೆಬರಹವೇ ಕನ್ನಡ ಕಾವ್ಯಪರಂಪರೆಯ ಸ್ಮೃತಿಕೋಶವನ್ನು ಕೆದಕುತ್ತದೆ. ಭಾರತದ ಎಲ್ಲ “ಹಿಂದೂ”ಗಳು ಒಟ್ಟಾಗಿ ವೀರಾವೇಶದಿಂದ ಮುಸ್ಲಿಮರನ್ನು ಸರ್ವನಾಶಮಾಡುವ, ಮೂಲೋತ್ಪಾಟನೆ ಮಾಡುವ, ಬರ್ಬರ ಹಿಂಸೆಯನ್ನು ಪ್ರಚೋದಿಸುವ ಕೋಮುವಾದಿ ಚಿಂತನೆಯ ಪ್ರತಿಪಾದನೆಗೆ ಪರಂಪರೆಯಿಂದ ನ್ಯಾಯಬದ್ಧತೆಯನ್ನು ಪಡೆಯುವ ಹುನ್ನಾರದ ಭಾಗವಾಗಿ ಅಡಿಗರು ಈ ದಾರಿಯನ್ನು ಅನುಸರಿಸಿದಂತಿದೆ. ಕೌರವ, ಪಾಂಡವರ ನಡುವೆ ನಡೆದ ಭೀಕರ ಕುರುಕ್ಷೇತ್ರ ಯುದ್ಧಕ್ಕೆ ಕೃಷ್ಣ ಪಾಂಚಜನ್ಯವನ್ನು ಊದಿ ಯುದ್ಧ ಘೋಷಣೆ ಮಾಡಿದ್ದ. ಈ ಸ್ಮೃತಿಯನ್ನು ಕಾವ್ಯದಲ್ಲಿ ಬಳಸುವ ಮೂಲಕ ಅಡಿಗರು ಹಿಂದೂ-ಮುಸ್ಲಿಂ ಧಾರ್ಮಿಕ ಸಮುದಾಯಗಳನ್ನು ಪಾಂಡವರು ಮತ್ತು ಕೌರವರು ಎಂದು ವರ್ಗೀಕರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದು ಧರ್ಮಯುದ್ಧ. ಈ ಯುದ್ಧದಲ್ಲಿ ಮುಸ್ಲಿಮರ ನಾಶ ಶತಃಸಿದ್ಧವೆಂಬ ದನಿಯನ್ನೂ ಹೊರಡಿಸುತ್ತಾರೆ. ದಾಯಾದಿ ಅರಸುಗಳ ಅರಸೊತ್ತಿಗೆಯ ಕಾಳಗದ ರೂಪಕವನ್ನು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಎರಡು ಧಾರ್ಮಿಕ ಸಮುದಾಯಗಳ ಮಧ್ಯದಲ್ಲಿ ಹಿಂಸೆಗೆ ಪ್ರಚೋದನೆ ನೀಡಲು ಬಳಸಿಕೊಳ್ಳುತ್ತಾರೆ. ಕುವೆಂಪು ಕೂಡ “ಪಾಂಚಜನ್ಯ” ಕವಿತೆ ಬರೆದಿದ್ದರು. ವಸಾಹತುಶಾಹಿ ರಕ್ಕಸರ ನಿರ್ನಾಮಕ್ಕಾಗಿ ಅವರಿಂದ ಬಿಡುಗಡೆ ಪಡೆಯಲು ಭಾರತದ ಎಲ್ಲ ಜಾತಿಮತ ಪಂಥಗಳ ಸಮುದಾಯಗಳು ಸಾಮರಸ್ಯದಿಂದ ಒಗ್ಗೂಡಿ ಹೋರಾಡುವ ಕರೆಯನ್ನು ಕೊಟ್ಟಿದ್ದರು. ಅಲ್ಲಿಯ ಆವೇಶ, ಪ್ರಚೋದನೆಗಳಿಗೆ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ಭಕ್ತಿಗಳ ರಾಷ್ಟ್ರೀಯವಾದಿ ನೈತಿಕತೆಯ ಚೌಕಟ್ಟಿತ್ತು. ಅಡಿಗರು ಆ “ಪಾಂಚಜನ್ಯ”ವನ್ನು ಮತ್ತೆ ಮೊಳಗಿಸಿದ್ದು ವಸಾಹತೋತ್ತರ ಭಾರತದಲ್ಲಿ ಜಾತ್ಯಾತೀತ ಸಂವಿಧಾನದಡಿಯಲ್ಲಿ ಕೂಡಿಬಾಳುತ್ತಿರುವ ಬಹುಸಂಖ್ಯಾತ ಧಾರ್ಮಿಕ ಸಮುದಾಯವು ಅಲ್ಪಸಂಖ್ಯಾತ-ಧಾರ್ಮಿಕ ಸಮುದಾಯದ ಮೇಲೆ ಆಕ್ರಮಣ ಮಾಡುವ ಕರೆಯನ್ನು ನೀಡಲು. “ಹಿಂದೂಗಳು ಮಾತ್ರ ಭಾರತೀಯರು, ಉಳಿದ ಧರ್ಮದವರು ಪರಕೀಯರು ಅವರನ್ನು ದೇಶಬಿಟ್ಟು ಓಡಿಸಬೇಕು”5 ಎಂಬ ಸಂಘಪರಿವಾರ ತಾತ್ವಿಕತೆಯನ್ನು ಪ್ರತಿಪಾದಿಸಲು. ಬ್ರಿಟಿಷರಂತೆ ಮುಸ್ಲಿಮರೂ ಹೊರಗಿನವರು ಎಂಬುದು ಇಲ್ಲಿಯ ಚಿಂತನೆ. ಮುಸ್ಲಿಂ ಧರ್ಮದ ಅರಸರು ಭಾರತದಲ್ಲಿ ಅರಸೊತ್ತಿಗೆಗಳನ್ನು ಸ್ಥಾಪಿಸಿ ಭಾರತೀಯರೇ ಆಗಿ ಹೋದ ಚಾರಿತ್ರಿಕ ವಾಸ್ತವವನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ವಿಧಾನವಿದು. ವಸಾಹಾತುಶಾಹಿ ದೌರ್ಜನ್ಯ ಹಾಗೂ ಲೂಟಿಗಳಿಗೆ ಅನ್ಯಧರ್ಮದವರೆಂಬ ಕಾರಣಕ್ಕೆ ದೇಶೀ ಅರಸೊತ್ತಿಗೆಗಳನ್ನು ಸಮೀಕರಿಸುವ ಉದ್ದೇಶಪೂರ್ವಕ ಯತ್ನ ಇಲ್ಲಿದೆ. ಸಮಕಾಲೀನ ಸಮಾಜದ ಬಹುಸಂಖ್ಯಾತ ಧರ್ಮದ ಸಮುದಾಯಗಳನ್ನು ಕೋಮುವಾದೀಕರಿಸುವ ಪ್ರಕ್ರಿಯೆಯ ಭಾಗವಾಗಿ ಅಡಿಗರು “ಪಾಂಚಜನ್ಯ”ದ ರೂಪಕವನ್ನು ಪರಂಪರೆಯ ಸ್ಮೃತಿಯಿಂದ ಬಳಸಿಕೊಳ್ಳುತ್ತಾರೆ. ಮೂಲದಲ್ಲಿ ಬಳಕೆಯಾದ ಅರ್ಥಕ್ಕಿಂತ ಭಿನ್ನವಾದ ಮಾತ್ರವಲ್ಲ ವಿರುದ್ಧವಾದ ಆಶಯಗಳಿಗೆ “ಪಾಂಚಜನ್ಯ” ಬಳಕೆಯಾಗಿದೆ. ಪರಂಪರೆಯ ನುಡಿಗಟ್ಟು ರೂಪಕಗಳು ಕವಿಯೊಬ್ಬನ ತಾತ್ವಿಕ ನಿಲುವುಗಳ ಕಾರಣಕ್ಕೆ ಕಾಲದಿಂದ ಕಾಲಕ್ಕೆ ಬೇರೆ ಬೇರೆ ಅರ್ಥಗಳನ್ನು ಪಡೆಯುತ್ತವೆ. ಕುವೆಂಪು ಕಾವ್ಯದಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆಯ ಪರವಾಗಿದ್ದ “ಪಾಂಚಜನ್ಯ”ದ ರೂಪಕ ಇಲ್ಲಿ ಧಾರ್ಮಿಕ ಹಿಂಸೆಯ ಪ್ರಚೋದನಾತ್ಮಕ ರೂಪಕವಾಗಿ ಪರಿವರ್ತನೆಯಾಗಿದೆ. “ಪಾಂಚಜನ್ಯ” ಎಂಬುದು ಸಂಘ ಪರಿವಾರದ ಮುಖವಾಣಿ ಪತ್ರಿಕೆಯ ಹೆಸರಾಗಿರುವದು ಕೂಡ ಆಕಸ್ಮಿಕವಿರಲಾರದು.

ಸಿದ್ಧಾಂತ ಪ್ರತಿಪಾದನೆ ಮತ್ತು ಸರಳೀಕರಣ
ಒಂದು ನಿರ್ದಿಷ್ಟವಾದ ಸಿದ್ಧಾಂತವನ್ನು ಪ್ರತಿಪಾದಿಸುವ ಏಕೈಕ ಕಾರಣಕ್ಕೆ ಕವಿತೆಯನ್ನು ಬರೆಯಲು ಹೊರಟರೆ ಕವಿತೆ ಸಹಜವಾಗಿ ರೂಪದ ದೃಷ್ಟಿಯಿಂದ ಸರಳೀಕರಣಕ್ಕೆ ಒಳಗಾಗುತ್ತದೆ. ಸಮಕಾಲೀನ ಬದುಕನ್ನು ಅರ್ಥೈಸಿಕೊಳ್ಳಲು, ವ್ಯಾಖ್ಯಾನಿಸಲು, ಸಂವೇದಿಸಲು ಸಿದ್ಧಾಂತ ಒಂದು ದೃಷ್ಟಿಕೋನವಾಗುವದು ಬೇರೆ. ಸಿದ್ಧಾಂತದ ಪ್ರತಿಪಾದನೆಗಾಗಿಯೇ ಕಾವ್ಯದ ರೂಪವನ್ನು ಬಳಸಿಕೊಳ್ಳುವದು ಬೇರೆ. ಹೀಗಾಗಿ ಅಡಿಗರ ಈ ಕವಿತೆ ಬಲಪಂಥೀಯ ಸಿದ್ಧಾಂತ ಪ್ರತಿಪಾದನೆಯ ಕಾರಣದಿಂದ ಬಲಪಂಥೀಯ ರಾಜಕೀಯ ಪಕ್ಷದ ಪಾಂಪ್ಲೆಟ್ಟಿನಂತೆ ಭಾಸವಾಗುತ್ತದೆ. ಕಾವ್ಯದ ಸಹಜ ಬಂಧ, ಬಿಗುವು ರೂಪಕಾತ್ಮಕತೆಗಳೆಲ್ಲ ಕಳೆದುಹೋಗುತ್ತವೆ. ಅಡಿಗರು ಸಂಘಪರಿವಾರದ ತಾತ್ವಿಕತೆಯ ಹಲವಾರು ವಿಧಾನಗಳನ್ನು ಉದ್ದೇಶಪೂರ್ವಕವಾಗಿಯೇ ಕ್ರೋಢೀಕರಿಸುವ ಯತ್ನ ಮಾಡಿರುವದರಿಂದ ಕವಿತೆಯು ಹೆಚ್ಚು ಮಾಹಿತಿ ಹಾಗೂ ಚಿಂತನೆಗಳನ್ನು ಒಳಗೊಳ್ಳುವ ಹಂಬಲವನ್ನು ಪ್ರಕಟಿಸುತ್ತದೆ. ಇಲ್ಲಿ ಚಿಂತನೆ ಮುಖ್ಯವೇ ಹೊರತು ಕಾವ್ಯವಲ್ಲ. ರಾಜಕೀಯ ಪಕ್ಷಗಳು ಹಾಗೂ ಸಾಸ್ಕೃತಿಕ ಸಂಘಟನೆಗಳಿಗಿರುವಂತೆ ಕಾವ್ಯದ ರೂಪಕ್ಕೂ ತನ್ನದೇ ಪ್ರಣಾಳಿಕೆ ಇರಬಹುದೆಂಬ ಸೂಕ್ಷ್ಮವನ್ನು ಮರೆತಾಗ ಕಾವ್ಯ ಕಣ್ಮರೆಯಾಗಿ ತತ್ತ್ವವೇ ವಿಜೃಂಭಿಸಿಬಿಡುವ ಅಪಾಯವನ್ನು ಈ ಕವಿತೆಯಲ್ಲಿ ಗಮನಿಸಬಹುದಾಗಿದೆ. ಯಾವುದೇ ಸಾಹಿತ್ಯ ಪ್ರಕಾರದ ಪ್ರಣಾಳಿಕೆಯೆಂದರೆ, ಮಾನವೀಯತೆಯ ಪ್ರತಿಪಾದನೆ. ಜೀವಪರಚಿಂತನೆಗಳ ಪ್ರತಿಪಾದನೆ. ಬದುಕನ್ನು ಸುಂದರಗೊಳಿಸುವ ಹಂಬಲ. ಆದರೆ ಇದಕ್ಕೆ ವಿರುದ್ಧವಾಗಿ ಹಿಂಸೆಯನ್ನು ಕೊಲೆಗಡುಕತನವನ್ನು ಪ್ರತಿಪಾದಿಸುವ ಸಿದ್ಧಾಂತದ ಪ್ರಣಾಳಿಕೆ ಕಾವ್ಯದಲ್ಲಿ ಪ್ರತಿಪಾದನೆಗೊಂಡಾಗ ಅದು ಕಾವ್ಯವಾಗಿರುವುದೇ ಇಲ್ಲ. ಆ ದೃಷ್ಟಿಯಿಂದ ಅಡಿಗರ ಈ ಬರಹವನ್ನು ಸಾಹಿತ್ಯ ಅಥವಾ ಕವಿತೆ ಎಂದು ಒಪ್ಪಿಕೊಳ್ಳುವದೇ ಕಷ್ಟ. “ಮನುಷ್ಯನನ್ನು ಮನುಷ್ಯನನ್ನಾಗಿ ಜೀವಂತ ಇಡುವ ಕೆಲಸವನ್ನು ಕಾವ್ಯ ಮಾಡುತ್ತದೆ” ಎಂಬ ಎಲಿಯಟ್‌ನ ಮಾತನ್ನು ನೆನಪಿಸಿಕೊಂಡರೆ ಮನುಷ್ಯರನ್ನು ರಾಕ್ಷಸರನ್ನಾಗಿ ಪರಿವರ್ತಿಸುವ ಬರವಣಿಗೆಗಳು ಸಾಹಿತ್ಯವೆಂಬ ಪ್ರಕಾರದಾಚೆಗೆ ಇಡಲು ಯೋಗ್ಯವಾದವುಗಳಾಗಿರುತ್ತವೆ.

ಯಾವ ಸಿದ್ಧಾಂತವನ್ನು ಕವಿತೆಯಲ್ಲಿ ಪ್ರತಿಪಾದಿಸುತ್ತೇವೆ ಎಂಬುದರ ಆಧಾರದ ಮೇಲೆ ಕೂಡ ಕಾವ್ಯದ ರೂಪ ಮೈದಾಳುತ್ತದೆ. ಮಾರ್ಕ್ಸ, ಅಂಬೇಡ್ಕರ್, ಲೋಹಿಯಾ, ಗಾಂಧಿ, ಬುದ್ಧ, ಬಸವ ಮುಂತಾದ ಜೀವಪರಚಿಂತಕರ ಚಿಂತನೆಗಳನ್ನು ಪ್ರತಿಪಾದಿಸುವಾಗ ಕೂಡ ಕಾವ್ಯದ ರೂಪ ಸರಳೀಕರಣಕ್ಕೊಳಗಾಗಬಹುದು. ಆದರೆ ಅಲ್ಲಿಯ ಆಶಯದ ನೈತಿಕತೆಯ ಕಾರಣಕ್ಕೆ ಅಂಥ ಬರಹಗಳಿಗೆ ಸಾಹಿತ್ಯದಾಚೆಗೆ ನಿಲ್ಲುವ ಅಗತ್ಯ ಕಂಡು ಬರುವುದಿಲ್ಲ. ಶೋಷಿತ ಜನತೆಯ ಪರವಾದ ಸೈದ್ಧಾಂತಿಕತೆ ಒಂದು ದೃಷ್ಟಿಕೋನ ಮಾತ್ರವಾಗಿ ಬದುಕಿನ ವಾಸ್ತವಗಳನ್ನು ಮನುಷ್ಯನ ಅಂತರಂಗ ಬಹಿರಂಗಗಳನ್ನು ಶೋಧಿಸುವ ದಾರಿಯಾದಾಗ ಉತ್ತಮ ಕಾವ್ಯ ಹುಟ್ಟಬಹುದು. ಜನಪರ ಸಿದ್ಧಾಂತವು ಕಾವ್ಯಕ್ಕೆ ಶತ್ರುವೂ ಅಲ್ಲ. ಮಿತ್ರನೂ ಅಲ್ಲ. ಆದರೆ ಕವಿಯೊಬ್ಬ ಬದುಕಿನ ಸಂದರ್ಭದಲ್ಲಿ ಅದನ್ನು ಶೋಧನೆಗೆ ಒಡ್ಡುವದರ ಮೇಲೆ ಅವಲಂಭಿಸಿರುತ್ತದೆ. ಮಾರ್ಕ್ಸವಾದಿ ಸೈದ್ಧಾಂತಿಕತೆ ಕೂಡ ಕಳಪೆ ಸಾಹಿತ್ಯ ಸೃಷ್ಟಿಗೆ ಕಾರಣವಾಗಿರಬಹುದು. ಆದರೆ ಅಲ್ಲಿ ಶ್ರೇಷ್ಠ ಸಾಹಿತ್ಯವೂ ಹುಟ್ಟಬಲ್ಲದು. ಆದರೆ ಶೋಷಕಪರ ಸಿದ್ಧಾಂತ ಮೂಲದಲ್ಲಿಯೇ ಅಮಾನವೀಯವಾಗಿರುವದಿಂದ ಅದರಿಂದ ಯಾವದೇ ಅತ್ಯುತ್ತಮ ಬರಹವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅಡಿಗರ ಈ ಕವಿತೆಯ ಅಭಿವ್ಯಕ್ತಿ ಕ್ರಮ ಕೂಡ ಧಾರ್ಮಿಕ ಹಿಂಸೆಯ ಪ್ರತಿಪಾದನೆಯ ಕಾರಣಕ್ಕೆ “ಕಾವ್ಯ”ವೆಂಬ ರೂಪದಾಚೆಯ ಬರಹವಾಗಿದೆ.

ಸೈನಿಕ ಭಾಷೆ
ಈ ಕವಿತೆಯ ಭಾಷೆಯನ್ನು ಗಮನಿಸಬೇಕು. ಅದು ಸೈನಿಕ ಭಾಷೆಯಲ್ಲಿದೆ. ವೈರಿ ಸಂಹಾರಕ್ಕೆ ಸೈನಿಕಮುಖ್ಯಸ್ಥ ಆಜ್ಞೆ ನೀಡುವ ರೀತಿಯಲ್ಲಿದೆ. ಆವೇಶ ಉನ್ಮಾದಗಳು ತುಂಬಿ ತುಳುಕುತ್ತವೆ. ದ್ವೇಷವೇ ಮೈವೆತ್ತಂತಿದೆ. ಈ ಕವಿತೆಯ ಶಬ್ದಶಬ್ದ ಅಕ್ಷರಕ್ಷರದಲ್ಲೂ ಮತಾಂಧತೆ ಮತ್ತು ಧಾರ್ಮಿಕ ಹಿಂಸೆಯ ಉನ್ಮಾದ ತುಂಬಿ ತುಳುಕುತ್ತದೆ. ಇದೊಂದು ಬಗೆಯ ಸರ್ವಾಧಿಕಾರಿ ಭಾಷೆಯಾಗಿದೆ. ಸಂಘಪರಿವಾರದ ನಾಯಕರು ತಮ್ಮ ಭಾಷಣಗಳಲ್ಲಿ ಹಿಂದೂ ಸಮುದಾಯವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಬಳಸುವ ಉದ್ರೇಕಕಾರಿ ಪ್ರಚೋದನಾತ್ಮಕ ಭಾಷೆಗಿಂತಲೂ ಕೆಟ್ಟ ಭಾಷೆ ಇಲ್ಲಿದೆ. ಸಂಸ್ಕೃತದ ಪಾರಮ್ಯದಲ್ಲಿ ಅದರ ಕೊಲೆಗಡುಕತನ ಸಂವಹನವಾಗುವದಿಲ್ಲ. ರುಂಡತೆಗೆಯುವ, ಕೈಕತ್ತರಿಸುವ, ಕಣ್ಣುಕೀಳುವ ಚಿತ್ರ ಹಿಂಸೆಯ ಭಾಷೆಗಿಂತಲೂ ಅಮೂಲಾಗ್ರ ಮೂಲೋತ್ಪಾಟನೆಯ ಉದ್ದೇಶದ ಈ ಭಾಷೆ ಹೆಚ್ಚು ಕ್ರೌರ್‍ಯವನ್ನು ಒಳಗೊಂಡಿದೆ. ಪ್ರಾಚೀನ ಕನ್ನಡ ಕವಿಗಳು ಎರಡು ರಾಜಮನೆತನಗಳ ನಡುವಿನ ಭಯಂಕರ ಯುದ್ಧವನ್ನು ವರ್ಣಿಸುವಾಗಲೂ ಎಲ್ಲೋ ಆಳದಲ್ಲಿ ಯುದ್ಧದ ಹಿಂಸೆಗೆ ಬೇಸತ್ತು ಯುದ್ಧ ವಿರೋಧಿ ನಿಲುವನ್ನು ಸೂಕ್ಷ್ಮವಾಗಿ ಪ್ರತಿಪಾದಿಸುತ್ತಿದ್ದರು. ರಾಜಪ್ರಭುತ್ವದ ಕಾಲದಲ್ಲಿ ಯುದ್ಧಗಳ ಹೆಸರಿನಲ್ಲಿ ನಡೆಯುವ ಸಾಮಾನ್ಯ ಜನತೆಯ ಮಾರಣ ಹೋಮಕ್ಕೆ ಕವಿಗಳ ಅಂತಃಕರಣ ಸ್ಪಂದಿಸುತ್ತಿತ್ತು. ಆದರೆ ಪ್ರಜಾಪ್ರಭುತ್ವ ಯುಗದಲ್ಲಿ ಜನತೆಯ ನಡುವಿನ ಭಯಂಕರ ಹಿಂಸೆಗೆ ಪ್ರಚೋದಿಸುವ ಅಡಿಗರಂಥವರ ಅಂತಃಕರಣ ಸಿದ್ಧಾಂತದ ಕಣ್ಣುಪಟ್ಟಿಯ ಕಾರಣದಿಂದ ಜಾಗೃತವಾಗದೇ ಹೋಗಿದೆ.

ಲಂಕೇಶ್, ಅಡಿಗರ ಕಾವ್ಯವನ್ನು ಕುರಿತು ಬರೆಯುತ್ತ ಅವರ ಭಾಷೆಯ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ನೀಡಿದ್ದಾರೆ. “ಅಡಿಗರ ಪದ್ಯಗಳನ್ನು ಓದುವಾಗ ನನಗೆ ವಿಚಿತ್ರ ಅನ್ನಿಸುವದು ಅವರ ಭಾಷೆ ಮತ್ತು ಪ್ರತಿಮೆಗಳು. ಶಂಕರಾಚಾರ್‍ಯರಂತೆ ತಮ್ಮ ಧರ್ಮವನ್ನು ಚೇತರಿಸುವ ಗೀಳು… ಮತ್ತೆ ಮತ್ತೆ ಬರುವ ಅಶ್ವತ್ಥ ವಿವರ್ತ, ಪುತ್ರಕಾಮೇಷ್ಠಿ, ಪಿತೃಪಿತಾಮಹರು ಇತ್ಯಾದಿ.”6 “ಅಡಿಗರು ಕವಿಯಾಗಿ ಬೆಳೆದಂತೆ ಸಮಾಜದ ಪರಿಸರದ ಬಗೆಗಿನ ಧೋರಣೆಗಳನ್ನು ಪ್ರಜಾತಂತ್ರ, ಜಾತಿವ್ಯವಸ್ಥೆ, ರಾಜಕೀಯ ಇತ್ಯಾದಿಗಳನ್ನು ಕುರಿತಾದ ಅವರು ಗ್ರಹಿಸಿರುವ ರೀತಿಯನ್ನು ಅವರ ಒಟ್ಟಾರೆ ಸಂಸ್ಕೃತ-ವೈದಿಕ ವಾಙ್ಮಯದ ಜೊತೆ ಅಭ್ಯಸಿಸಿದರೆ ಅವರ ಮನಃಸ್ಥಿತಿ ಮತ್ತು ಅವರ ಕಾವ್ಯದ ಮೌಲ್ಯಮಾಪನ ಸಾಧ್ಯವಾಗುತ್ತದೆ.”7 ಅಡಿಗರ ಕಾವ್ಯವನ್ನಾವರಿಸಿರುವ ಅವರ ಕಾವ್ಯದ ರೂಪವನ್ನು ವ್ಯಾಪಿಸಿರುವ ಸಂಸ್ಕೃತ ಭಾಷಾ ಕೋಶ, ಪ್ರತಿಮಾ ರೂಪಕಗಳು ಅವರ ಸಂವೇದನಾಕ್ರಮವನ್ನು ವಿವರಿಸುತ್ತವೆ.

“ಮತ್ತೆ ಮೊಳಗಲಿ ಪಾಂಚಜನ್ಯ” ಕವಿತೆಯಲ್ಲಿ ಸುಮಾರು ಶೇಕಡಾ ತೊಂಬತ್ತು ಸಂಸ್ಕೃತ ಪದಗಳೇ ಇವೆ. ಪಾಂಚಜನ್ಯ, ದಧೀಚಿ ಕಶೇರು, ರಾಮಬಾಣ, ಅಸಂದಿಗ್ಧ, ಹಿಂದುತ್ವ, ಮಹಾಸಿಂಧುತ್ವ, ಭೋರ್ಗರೆ, ಪರಿಶುದ್ಧ, ಆಕಾಶ, ಶ್ಯಾಮಲ, ಶತಕೋಟಿ ತಾರೆ, ಭರತವರ್ಷ, ಸ್ವರ್ಗಂಗೆಧಾರೆ, ಶುದ್ಧ ನಿರ್ಮಲ ಮಾನಸ ಸರೋವರ, ಅಷ್ಟದಳ ಕಮಲ, ಪರಮ ಪುರುಷಾರ್ಥ, ಪರಾತ್ಪರ ಇತ್ಯಾದಿ. ಅಡಿಗರಿಗೆ ಯಾಕಿಷ್ಟು ಸಂಸ್ಕೃತ ಪ್ರೇಮ? ಮಾರ್ಗಕವಿಗಳಿಗೆ ಸಂಸ್ಕೃತದೊಂದಿಗೆ ಸೆಣಿಸಿ ಗೆಲ್ಲುವ ಒತ್ತಡವಿತ್ತು. ಕುವೆಂಪು ಆಧುನಿಕ ಕಾಲದಲ್ಲೂ ಅಂಥ ಒತ್ತಡಕ್ಕೀಡಾಗಿದ್ದರು. ಆದರೆ ಅಡಿಗರು ಸಂಸ್ಕೃತದಲ್ಲಿಯೇ ಉಸಿರಾಡುವಂತೆ ಭಾಸವಾಗುತ್ತದೆ. ಅಡಿಗರ ಸಂಸ್ಕೃತ ಭಾಷಾಲೋಕ ಕೇವಲ ಕಾವ್ಯಸಂಬಂಧಿಯಾದದ್ದಲ್ಲ. ಅದು ವೈದಿಕ ಪುರಾಣ ಮತ್ತು ಧಾರ್ಮಿಕ ಆವರಣಕ್ಕೆ ಸಂಬಂಧಿಸಿದ್ದು, ವೈದಿಕ ಸಂಸ್ಕೃತಿ ನಶಿಸಿ ಹೋಗುತ್ತಿರುವದರ ಬಗೆಗಿನ ಅಡಿಗರ ಗಾಢವಾದ ವಿಷಾದಕ್ಕೂ ಅವರು ಕಾವ್ಯದಲ್ಲಿ ಸಂಸ್ಕೃತವನ್ನು ಅತಿಯಾಗಿ ಬಳಸುವದಕ್ಕೂ ಆಂತರಿಕ ಸಂಬಂಧವಿದೆ. ಅದು ವೈದಿಕ ಸಂಸ್ಕೃತಿಯ ಪುನರುತ್ಥಾನದ ಭಾಗವೇ ಆಗಿದೆ. ಹಿಂದುತ್ವದ ಪ್ರತಿಪಾದನೆಯನ್ನು ಸಂಸ್ಕೃತ ಭೂಯಿಷ್ಠವಾದ ಭಾಷೆಯಲ್ಲಿ ಮಾತ್ರ ಸಮರ್ಥವಾಗಿ ಅಭಿವ್ಯಕ್ತಿಸಲು ಸಾಧ್ಯವಿರಬಹುದು. ಸಂಘಪರಿವಾರದ ಚಿಂತನೆ ಬರವಣಿಗೆಗಳಲ್ಲಿ ಕೂಡ ಈ ಸಂಸ್ಕೃತದ ಬಳಕೆಯನ್ನು ಗಮನಿಸಬಹುದು. ಸಂಸ್ಕೃತಭೂಯಿಷ್ಠವಾದ ಪದಗಳ ಬಳಕೆ, ವೈದಿಕ ಪುರಾಣ ಪ್ರತಿಮೆಗಳ ಬಳಕೆ ಹಾಗೂ ಹಿಂದುತ್ವ ಪ್ರತಿಪಾದನೆಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಸನಾತನವಾದಿ ಚಿಂತನಾಕ್ರಮ ಹಾಗೂ ಕೋಮುವಾದಿ ಆಶಯಗಳು ಸಂಸ್ಕೃತ ಭಾಷೆಯ ಸಹಜ ಸಂವೇದನೆಗಳಾಗಿರುವದರಿಂದ ನವ ಬ್ರಾಹ್ಮಣ್ಯದ ಪ್ರತಿಪಾದನೆಗೆ ಪ್ರಾಚೀನ ಬ್ರಾಹ್ಮಣ ಭಾಷೆಯನ್ನು ಬಳಸುವದು ಅಡಿಗರಂಥವರಿಗೆ ಅನುಕೂಲಕರವಾಗಿರಬಹುದು. ಧಾರ್ಮಿಕ ಹಿಂಸೆಯ ಪ್ರತಿಪಾದನೆಗೆ ಅಡಿಗರು ಸಂಸ್ಕೃತದ ಸನಾತನವಾದಿ, ಮೂಲಭೂತವಾದಿ, ಭಾಷಾಕೋಶವನ್ನು ಈ ಕವಿತೆಯಲ್ಲಿ ಉಪಯೋಗಿಸಿದ್ದಾರೆ.

ವೈದಿಕ ಮೂಲದ ಪ್ರತಿಮೆಗಳು
ಅಡಿಗರು ಉಪಮೆ ರೂಪಕ ಪ್ರತಿಮೆಗಳನ್ನು ವೈದಿಕ ಮೂಲದಿಂದಲೇ ಎತ್ತಿಕೊಳ್ಳುತ್ತಾರೆ. “ದಧೀಚಿ ಕಶೇರುವಿನಂತೆ, ದೃಢ ರಾಮಬಾಣದಂತೆ, ಅಸಂದಿಗ್ಧ”, “ಮತ್ತೆ ಮೊಳಗಲಿ ಪಾಂಚಜನ್ಯ”, “ಭರತವರ್ಷದ ಮೇಲೆ ಸ್ವರ್ಗಂಗೆ ಧಾರೆ ಶುದ್ಧ ನಿರ್ಮಲ ಮಾನಸ ಸರೋವರದ ಮೇಲೆ”, “ಅಷ್ಟದಳ ಕಮಲದ ನಿರಾಳ”, “ಕೋಟೆಕೋಟೆಗಳೆಲ್ಲ ಮತ್ತೆ ವಶವಾಗಿ ಶಿಖರ ಶಿಖರಗಳೆಲ್ಲ ಆಗಿ ಸ್ವಾಧೀನ”, “ಪ್ರತಿಪಾಣಿಪೀಠಕ್ಕೂ ಅಷ್ಟಬಂಧ”. ಮುಸ್ಲಿಮರನ್ನು ಸಂಹಾರ ಮಾಡಿ, ಅವರ ಮೂಲೋತ್ಪಾಟನೆಯ ನಂತರ ಹಿಂದುತ್ವವನ್ನು ಸ್ಥಾಪಿಸುವ ಆಶಯವನ್ನು ಪ್ರತಿಪಾದಿಸಲು ಅಡಿಗರು “ದಧೀಚಿಕಶೇರು” “ರಾಮಬಾಣ” “ಪಾಣಿಪೀಠ” “ಅಷ್ಟಬಂಧ”ದಂಥ ಶುದ್ಧ ವೈದಿಕ-ಧಾರ್ಮಿಕ ಪ್ರತಿಮೆಗಳನ್ನು ಸಂಯೋಜಿಸುವದು ಆ ಭಾಷೆಯಲ್ಲಿ ಸಹಜವಾಗಿಯೇ ಮಡುಗಟ್ಟಿರುವ “ಹಿಂಸೆ”ಯ ನೆಲೆಯನ್ನು ಸೂಚಿಸುತ್ತದೆ. ವೈದಿಕ ಸಂಸ್ಕೃತಿಯ ದೇವರುಗಳೆಲ್ಲ “ಶಸ್ತ್ರಾಸ್ತ್ರ ಪಾಣಿಗಳು” “ಸಂಹಾರ ಪ್ರಿಯರು” ಕೊಲೆಪಾತಕತನದಲ್ಲಿ ಪ್ರವೀಣರು. ವರ್ಣಧರ್ಮವನ್ನು ಮೀರುವವರ ವಿರುದ್ಧ ಆ ಶಸ್ತ್ರಾಸ್ತ್ರಗಳು ಪ್ರಯೋಗವಾಗುತ್ತಿದ್ದವು. ಅಡಿಗರು ಈಗ ಮುಸ್ಲಿಮರ ಮೇಲೆ ಅವುಗಳ ಪ್ರಯೋಗಕ್ಕೆ ಕರೆ ನೀಡುತ್ತಾರೆ. ದಲಿತ ಮತ್ತು ಕೆಳವರ್ಗಗಳನ್ನು ಹಿಂಸಿಸಿದ ರೂಪಕಗಳೇ ಅಲ್ಪಸಂಖ್ಯಾತರನ್ನು ಹಿಂಸಿಸಲು ಕಾವ್ಯದಲ್ಲಿ ಬಳಕೆಗೊಳ್ಳುತ್ತವೆ.

ಕವಿಯ ಗೆಲ್ಲುವ ಕಾವ್ಯ
ಅತ್ಯಂತ ಕುತೂಹಲದ ಸಂಗತಿಯೆಂದರೆ ಅಡಿಗರು ಹಿಂದೂ ಮತ್ತು ಮುಸ್ಲಿಮರನ್ನು ಶತ್ರುಗಳಾಗಿ ಎದುರು ಬದರು ನಿಲ್ಲಿಸಿ ಹಿಂದೂಗಳನ್ನೂ ಹಿಂದೂ ಸಂಸ್ಕೃತಿಯನ್ನೂ ವರ್ಣಿಸುವಾಗ ಸಂಪೂರ್ಣ ಸಂಸ್ಕೃತ ಭಾಷೆಯನ್ನು ಬಳಸಿದರೆ ಮುಸ್ಲಿಮರನ್ನು ಅವರ ಸಂಸ್ಕೃತಿಯನ್ನು ಅವಮಾನಿಸಲು ಹೆಚ್ಚು ಕನ್ನಡ ಪದಗಳನ್ನು ಬಳಸುತ್ತಾರೆ. ಉದಾ: ಅವರ ಕಲ್ಪನೆಯ ಹಿಂದೂ ಸಾಮ್ರಾಜ್ಯದ ವಿವರಣೆ ಹೀಗಿದೆ-
ಇಕ್ಕಟ್ಟು ಬಿಕ್ಕಟ್ಟುಗಳ ಕೆಟ್ಟ ಪಟ್ಟಣಗಳ ಜನಾರಣ್ಯ
ದಲ್ಲಿಯೂ ಪ್ರತಿ ಮನೆ ಕೂಡ ಋಷ್ಯಾಶ್ರಮ
ಮುಂದಕ್ಕೆ ಬಹುಭಾಷಾ ಸರಸ್ವತಿಯ ಸದ್ಗ್ರಂಥ ರಾಶಿ
ಹಿಂದೆ ಕೈಚಾಚಿದರೆ ಬಾರುಮಾಡಿಟ್ಟು ಬಂದೂಕು ಲಾಠಿ ಕಠಾರಿ
ವಜ್ರಕಾಯದೊಳಕ್ಕೆ ಆದಿಶೇಷ ಸ್ನಾಯುಗಳ ಮಣಿತ
ಆಕಾಶ ಶಾಮಲನೆಲ ಶತಕೋಟಿತಾರೆ
ಭರತ ವರ್ಷದ ಮೇಲೆ ಸ್ವರ್ಗಂಗೆ ಧಾರೆ
ಶುದ್ಧ ನಿರ್ಮಲ ಮಾನಸ ಸರೋವರದ ಮೇಲೆ
ಅಷ್ಟದಳ ಕಮಲದ ನಿರಾಳ

ಮುಸ್ಲಿಂರನ್ನು ಕುರಿತು
ದುರ್ಮತದ ಮತಾಂಧತೆಯ ಮರಳದಿನ್ನೆ, ದಿಬ್ಬ, ಚಾಕು, ಚೈನು, ಕೈಬಾಂಬು
ನಡುಗಡ್ಡೆಗಳು ನೆಗೆದು ಬೀಳಲಿ ಸಮೂಲ
ತಾತ್ಕಾಲಿಕದ ಕೋಟೆ ಬುರುಜುಗಲ್ಲಿ ನೊರಜು ಬುರುಜುಗಳಲ್ಲಿ
ತೊಳೆದು ಹೋಗಲಿ ಒಂದೇ ಸಲ
ಜಿಗಣೆ, ಚೇಳು, ಹೆಡೆಎತ್ತಿ ಬಡಿದ ಘಟಸರ್ಪ
ಮಕ್ಕಳನ್ನೆತ್ತಿಕೊಂಡು ಹೋಗಿ ತಿನ್ನುವ ತೋಳ ಮನೆಗೆ ಬೆಂಕಿ
ಹಚ್ಚಿ ಗಹಗಹಿಸಬಲ್ಲ ಮಾನವ ಪಿಶಾಚಿ ಸೈಕಲ್ ಚೈನು
ಅಲಗು ತಾಗಿಸಿ ತಿವಿದ ಸಾಯಿಸುವ ನಿಶಾಚರ ನಿಕರ

ಅಡಿಗರ ಆಶಯಗಳಿಗೆ ವಿರುದ್ಧವಾಗಿ ಅವರ ಭಾಷಾಕೋಶ ಹಾಗೂ ಕಾವ್ಯದ ಆಕೃತಿ ಬೇರೆಯದೇ ಸತ್ಯವನ್ನು ಹೇಳುತ್ತದೆ. ಸಂಸ್ಕೃತದ ದಟ್ಟ ವಿವರಗಳ ಹಿಂದುತ್ವ, ಭಾಷಿಕವಾಗಿ ಅನ್ಯವೆನ್ನಿಸಿದರೆ, ಕನ್ನಡದಲ್ಲಿ ನಿರೂಪಿತವಾಗುವ “ಮುಸ್ಲಿಂ ಸಂಸ್ಕೃತಿ” ದೇಶೀ ಎನ್ನಿಸಿಕೊಳ್ಳುತ್ತದೆ. ಅದು ಆರ್‍ಯ-ದ್ರಾವಿಡ ದೇವ-ದಾನವ ಸಂಘರ್ಷದ ಪೌರಾಣಿಕತೆ ಮತ್ತು ಚಾರಿತ್ರಿಕತೆಗಳೊಂದಿಗೆ ಸಂಬಂಧ ಪಡೆಯುತ್ತದೆ. ಭಾರತದ ಮೇಲ್ಜಾತಿ ಮೇಲ್ವರ್ಗ ಮತ್ತು ಕೆಳಜಾತಿ ಕೆಳವರ್ಗಗಳ ಸಂಬಂಧವನ್ನು ಶಕ್ತಿ ರಾಜಕಾರಣದ ಕೇಂದ್ರ ಸ್ಥಾನದಲ್ಲಿರುವ ಪುರೋಹಿತರೂ ಪ್ರಭುಗಳೂ ನಿರೂಪಿಸಿದಂತೆ ಕಂಡು ಬರುತ್ತದೆ. ಇದು ಕಾವ್ಯದ ಶಕ್ತಿ. ಕವಿಯ ಪ್ರಣಾಳಿಕೆಯಾಚೆ ಕಾವ್ಯ ತಮ್ಮ ಪ್ರಣಾಳಿಕೆಯನ್ನು ಸ್ಥಾಪಿಸುವ ಕ್ರಮವೂ ಆಗಿದೆ.

(ಚಿತ್ರಕೃಪೆ: www.kamat.com )


 

ಟಿಪ್ಪಣಿಗಳು :
5. ಪಿ. ಲಂಕೇಶ್, ಅಡಿಗರ ಪಥ, ಸಾಹಿತಿ-ಸಾಹಿತ್ಯ-ವಿಮರ್ಶೆ, ಪು. 68
6. ಅದೇ, ಪು. 68
7. ಅಸ್ಘರ್ ಅಲಿ ಇಂಜಿನಿಯರ್, ಮುಸ್ಲಿಂ ಪ್ರತ್ಯೇಕತಾವಾದ ಮತ್ತು ವಿಭಜನೆಯ ಬೇರುಗಳು, ಹೇ ರಾಮ್, ಪು. 24