ಜೀವನದಿಗಳ ಸಾವಿನ ಕಥನ – 2

ಡಾ.ಎನ್. ಜಗದೀಶ್ ಕೊಪ್ಪ

ಪರಿಸರ ಕುರಿತಂತೆ ಅಪಾರ ಕಾಳಜಿ ಹೊಂದಿದ್ದ, ದುಡಿಯುವ ವರ್ಗದ ಆರಾಧ್ಯ ದೈವವಾಗಿದ್ದ ಚಿಂತಕ, ದಾರ್ಶನಿಕ ಕಾರ್ಲ್‌ಮಾರ್ಕ್ಸ್ ತನ್ನ “ಎಕನಾಮಿಕ್ ಅಂಡ್ ಪಿಲಾಸಫಿಕ್ ಮಾನ್ಯುಸ್ಕ್ರಿಪ್ಟ್” ಕೃತಿಯಲ್ಲಿ “ಮಾನವ ಪ್ರಕೃತಿಯೊಡನೆ ಜೀವಿಸುತ್ತಾನೆ. ಪ್ರಕೃತಿಯೆಂಬುದು ಅವನಲ್ಲಿ ಅಂತರ್ಗತವಾಗಿದೆ. ಅವನು ಈ ಭೂಮಿಯ ಮೇಲೆ ಬದುಕುಳಿಯಬೇಕಾದರೆ ಪ್ರಕೃತಿಯೊಡನೆ ನಿರಂತರವಾಗಿ ಸಂವಾದದಲ್ಲಿ ಇರಬೇಕು”, ಎಂದಿದ್ದ. ಮಾರ್ಕ್ಸ್‌ನ ಸಂಗಾತಿ ಏಂಗಲ್ಸ್ ಕೂಡ “ನಮ್ಮ ಬದುಕಿನ ಮೂಲಭೂತ ಅಗತ್ಯವಾದ ಭೂಮಿಯನ್ನು, ಅದರ ಕೊಡುಗೆಗಳನ್ನು ವ್ಯಾಪಾರದ ಸರಕನ್ನಾಗಿ ಮಾಡಿದ್ದೇ ಆದರೆ ಅಂದೇ ಮನುಕುಲದ ಅವನತಿ ಪ್ರಾರಂಭ” ಎಂದು ಎಚ್ಚರಿಸಿದ್ದ. ವಿಷಾದದ ಸಂಗತಿ ಎಂದರೆ ಈ ಮಹಾನ್ ದಾರ್ಶನಿಕರು ಎಚ್ಚರಿಸುವ ಮೊದಲೇ ಅವನತಿಯ ಅಧ್ಯಾಯ ಆರಂಭವಾಗಿತ್ತು.

ಕಳೆದ 50 ವರ್ಷಗಳ ಅವಧಿಯಲ್ಲಿ ಈ ಭೂಮಿಯ ಮೇಲಿನ ಅನೇಕ ಅಪರೂಪದ ಜೈವಿಕ ಸಂತತಿಗಳು ನಾಶವಾಗಿವೆ. ಸಾವಿರಾರು ಪ್ರಭೇಧಗಳು ವಿನಾಶದ ಅಂಚಿನಲ್ಲಿವೆ. ನಮ್ಮ ನದಿ, ಬೆಟ್ಟ, ಸರೋವರ ಇವೆಲ್ಲವೂ ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡು ವಿರೂಪಗೊಂಡಿವೆ. ಆಧುನಿಕ ಜಗತ್ತಿನ ಮೂಲ ಮಂತ್ರವಾದ “ಅಭಿವೃದ್ಧಿ” ಎಂಬ ರಕ್ಕಸನ ಬಾಯಿಗೆ ದಿನ ನಿತ್ಯದ ಆಹಾರವಾಗತೊಡಗಿವೆ.

ಅಷ್ಟೇ ಏಕೆ 40 ವರ್ಷಗಳ ಹಿಂದೆ ನನ್ನ ತಲೆಮಾರು ಬಾಲ್ಯದಲ್ಲಿ ಕಂಡ ತುಂಬೆ, ತುಳಸಿ, ಸಂಪಿಗೆ, ಜಾಜಿಮಲ್ಲಿಗೆ, ತಾವರೆ, ಬಣ್ಣ ಬಣ್ಣದ ಚಿಟ್ಟೆ – ಪತಂಗ, ದೇಸಿ ಸಂತತಿಯ ಹಸು, ಕರು, ಎಮ್ಮೆ, ನಮ್ಮ ನಾಟಿ ತಳಿಗಳ ಬಿತ್ತನೆ ಬೀಜಗಳು, ನಮ್ಮ ಹಬ್ಬ, ಹಸೆ, ಹಾಡು, ಇವೆಲ್ಲವೂ ಮರೆಯಾಗಿ ನಮ್ಮ ಸ್ಮೃತಿಯೆಂಬ ಕಪಾಟಿನೊಳಗೆ ಜೀವಂತವಿರುವ ಕನವರಿಕೆಗಳು ಮಾತ್ರವಾಗಿವೆ.

20 ಮತ್ತು 21 ನೇ ಶತಮಾನವೆಂದರೆ ಮನುಕುಲವೆಂಬುದು ಉನ್ಮಾದದಿಂದ ಪ್ರಕೃತಿಯ ಮೇಲೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಮತ್ತು ವಿಫಲತೆಗಳ ಯುಗ ಎಂಬಂತಾಗಿದೆ. ಇದಕ್ಕೆ ಇತ್ತೀಚಿನ ಸಾಕ್ಷಿ ಎಂದರೆ ಜಪಾನ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪ ಮತ್ತು ಸುನಾಮಿ.

ಪ್ರಕೃತಿಯಲ್ಲಿನ ಜೀವಜಾಲವೆಂಬುದು ಮಾನವನ ಪ್ರತಿಸ್ಪರ್ಧಿಯಲ್ಲ. ಅದರಲ್ಲಿ ಅವನೂ ಒಂದು ಭಾಗ ಎಂಬ ಈ ನೆಲದ ಮೂಲ ಸಂಸ್ಕೃತಿಯನ್ನು, ಕಾಳಜಿಯನ್ನು ಮರೆತ ಆಧುನಿಕ ಜಗತ್ತಿನ ನಾಗರೀಕತೆಗೆ ಕಬಳಿಕೆಯೊಂದೇ ಗುರಿಯಾಗಿದೆ. ಬದಲಾದ ನಮ್ಮ ಬದುಕಿನ ಕ್ರಮ ಹಾಗೂ ಚಿಂತನಾ ಲಹರಿಗಳಿಂದ ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿದ್ದ “ಅವಿಭಕ್ತ ಕುಟುಂಬ” ಪದ್ಧತಿ ಸಧ್ಯ ಛಿದ್ರಗೊಂಡಿದ್ದು, ಹೆಚ್ಚಿದ ಉಪಭೋಗ ಪ್ರಕೃತಿ ಮೇಲಿನ ದಾಳಿಗೆ ಪರೋಕ್ಷ ಕಾರಣವಾಗಿದೆ.

ಕೇವಲ ಅರ್ಧ ಶತಮಾನದ ಹಿಂದಿನ ಸಮಾಜದ ಕುಟುಂಬಗಳಲ್ಲಿ ಮೂಲಭೂತ ಬೇಡಿಕೆಗಳಾದ ಆಹಾರ, ನೀರು, ವಿದ್ಯುತ್, ಉರುವಲು ಮುಂತಾದ ಅಗತ್ಯತೆಗಳು ಮಿತಿಯಲ್ಲಿದ್ದವು. ಪ್ರಕೃತಿಯಿಂದ ಒಂದನ್ನು ಪಡೆದರೆ, ಅದೇ ಪ್ರಕೃತಿಗೆ ಹಿಂತಿರುಗಿ ಎರಡನ್ನು ನೀಡುವ ಪದ್ಧತಿ ನಮ್ಮ ಜನಪದರಲ್ಲಿ ಚಾಲ್ತಿಯಲ್ಲಿತ್ತು.

ಏಕ ಕುಟುಂಬ ಪದ್ಧತಿ ಜೊತೆಗೆ ಅಮೆರಿಕಾ ದೇಶ ಜಗತ್ತಿಗೆ ಕಲಿಸಿದ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಕುಲದ ಬೇಡಿಕೆಗಳಿಗೆ ಇತಿ-ಮಿತಿ ಇಲ್ಲದಂತಾಗಿದೆ.

ಜಗತ್ತಿನ ಜನ ಸಂಖ್ಯೆಯಲ್ಲಿ ಶೇ.4ರಷ್ಟು ಇರುವ ಅಮೆರಿಕಾದ ಜನತೆ, ನೈಸರ್ಗಿಕ ಕೊಡುಗೆಗಳಲ್ಲಿ ಶೇ.40ರಷ್ಟು ಪಾಲನ್ನು ಕಬಳಿಸುತ್ತಿದ್ದಾರೆ. ವಾತಾವರಣ ಕಲುಷಿತಗೊಳಿಸುವುದರಲ್ಲಿ ಅವರ ಪಾಲು ಶೇ.27ರಷ್ಟು. ಇಂತಹ ನಾಗರೀಕತೆಯ ಅತಿಲಾಲಸೆ, ವ್ಯಾಪಾರೀಕರಣಗೊಂಡ ಜಗತ್ತು, ಭೋಗ ಸಂಸ್ಕೃತಿ ಇವುಗಳಿಂದ ಪಕೃತಿ ನಲುಗಿ ಹೋಗಿದೆ.

ವರ್ತಮಾನದ ಜಗತ್ತಿನಲ್ಲಿ ದೊರೆಯುತ್ತಿರುವ 1.4 ಬಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಶೇ 3ರಷ್ಟು ಮಾತ್ರ ಶುದ್ಧ ನೀರಾಗಿದೆ. ಶೇ.3ರಷ್ಟು ಪಾಲಿನ ಈ ನೀರಿನಲ್ಲಿ ಶೇ.77.2ರಷ್ಟು ಮಂಜುಗೆಡ್ಡೆರೂಪದಲ್ಲಿ, ಶೇ.0.35ರಷ್ಟು ಸರೋವರಗಳಲ್ಲಿ, ಶೇ.0.1ರಷ್ಟು ನದಿ-ಕೊಳ್ಳಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಅಭಾವ ಕಾಣಿಸಿಕೊಂಡದ್ದು 1980ರ ದಶಕದಲ್ಲಿ. ಕುಡಿಯುವ ನೀರಿನ ಮೂಲಗಳಾಗಿದ್ದ ನಮ್ಮ ನದಿಗಳು, ಜಲಾಶಯಗಳು ಅರಣ್ಯ ನಾಶ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಲುಷಿತಗೊಂಡವು.

ನಮ್ಮ ಪೂರ್ವಿಕರು ಸಾಮಾನ್ಯವಾಗಿ ದೇಗುಲಗಳನ್ನು ನದಿತೀರಗಳಲ್ಲಿ ನಿರ್ಮಿಸಿ, ನದಿಗಳಿಗೆ ಅರ್ಪಿಸಿರುವುದನ್ನು ನಾವು ದೇಶದ ಎಲ್ಲೆಡೆ ಕಾಣಬಹುದು. ನಮ್ಮ ಪೂರ್ವಜರು ನದಿ ನೀರಿನ ಬಳಕೆ ಕುರಿತಂತೆ ನಿರ್ಮಿಸಿದ ದೇಸಿ ತಂತ್ರಜ್ಞಾನ ಇಂದಿನ ನೀರಾವರಿ ತಂತ್ರಜ್ಞಾನಕ್ಕೆ ಮೂಲವಾಗಿದೆ ಎಂದು ನೀರಾವರಿ ತಜ್ಞ ಅರ್ಥರ್ ಕಾಟನ್ 1874ರಲ್ಲಿ ದಾಖಲಿಸಿದ್ದಾನೆ. ನಮ್ಮ ದಕ್ಷಿಣ ಭಾರತದ ಕೃಷ್ಣ, ಕಾವೇರಿ ನದಿ ಪಾತ್ರಗಳಲ್ಲಿ ನಿರ್ಮಿಸಿದ ಕಿರು ಜಲಾಶಯ, ಅಣೆಕಟ್ಟುಗಳು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪೂರಕವಾಗಿವೆ. ದೆಹಲಿ ಮೂಲದ “ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್” ಸಂಸ್ಥೆಯ ಸ್ಥಾಪಕ ದ.ಅನಿಲ್ ಅಗರ್‌ವಾಲ್ 90ರ ದಶಕದಲ್ಲಿ ಭಾರತದ ಪರಿಸರ ಕುರಿತಂತೆ “ಸಿಟಿಜನ್ ರಿಪೋರ್ಟ್ಸ್” ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದು ಇದೇ ಸಂದರ್ಭದಲ್ಲಿ “ಡೈಯಿಂಗ್ ವಿಸಡಮ್” ಹೆಸರಿನ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನೀರಾವರಿ ಪದ್ಧತಿ, ಕೆರೆ-ಕಟ್ಟೆ, ಕಾಲುವೆಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಇದ್ದು ಓದುಗರಲ್ಲಿ ವಿಸ್ಮಯ ಮೂಡಿಸುತ್ತದೆ. ಅಂದಿನ ವಿಜಯನಗರದ ಸಾಮಂತರು, ತಮಿಳುನಾಡಿನ ಚೋಳರು, ಪಾಂಡ್ಯರು ಮುಂತಾದವರ ಆಳ್ವಿಕೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಬಳಸುವ ನೀರು ಇವುಗಳ ಕುರಿತಂತೆ ಅಳವಡಿಸಿಕೊಂಡಿದ್ದ ದೇಸಿ ತಂತ್ರಜ್ಞಾನ ಇಂದಿಗೂ ಮಾದರಿಯಾಗಿದೆ.

ಆಧುನಿಕ ಯುಗದ ನದಿಗಳೆಂದರೆ ನಮ್ಮೆಲ್ಲರ ಮಲ-ಮೂತ್ರಗಳನ್ನು, ನಗರ, ಪಟ್ಟಣಗಳಿಂದ ಹೊರಹಾಕುವ ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಸಾಗಿಸುವ ವಾಹಕಗಳು ಎಂಬಂತಾಗಿವೆ. ನದಿಯೆಂದರೆ ಅದು ಕೇವಲ ನೀರಿನ ಹರಿವಲ್ಲ. ಅದಕ್ಕೆ ಅದರದೇ ಆದ ಮಾತೃತ್ವ ಗುಣವಿದೆ. ನದಿನೀರಿಗೆ ವಿಷವನ್ನಾದರೂ ಬೆರೆಸಿ, ಅಮೃತವನ್ನಾದರೂ ಬೆರೆಸಿ ಅದೆಲ್ಲವನ್ನೂ ತನ್ನದಗಿಸಿಕೊಳ್ಳುವ ಗುಣ ನದಿಯ ಒಡಲೊಳಗೆ ಅಂತರ್ಗತವಾಗಿದೆ. ನದಿಯ ನೀರಿನ ಮೇಲೆ ಹಣತೆ ಹಚ್ಚಿಟ್ಟು ತೇಲಿ ಬಿಟ್ಟಾಗ ನದಿ ಸಂಭ್ರಮಿಸುವುದಿಲ್ಲ. ಅದೇ ರೀತಿ ಉರಿವ ಕೊಳ್ಳಿಯ ಜೊತೆ ಅರೆಬೆಂದ ಶವಗಳನ್ನು ನದಿಗೆ ಎಸೆದಾಗ ಅದು ಬೇಸರಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು “ನದಿಗೆ ನೆನಪಿನ ಹಂಗಿಲ್ಲ” ಎಂದಿದ್ದರು. ನದಿಗಳು ಮನುಕುಲದೊಂದಿಗೆ ಥಳಕು ಹಾಕಿಕೊಂಡು ಮನುಷ್ಯನ ಜೊತೆ ಅವಿನಾಭಾವ ಸಂಬಂಧ ಇರುವುದರಿಂದಲೇ ಮಾನವ ಜನಾಂಗಕ್ಕೆ ನದಿಯೆಂದರೆ ಅದು ಮಾತೃ ಸ್ವರೂಪಿಣಿ ಎಂಬ ಪರಿಕಲ್ಪನೆ ಮೂಡಿತು.

ಜಗತ್ತಿನ ಯಾವುದೇ ಪುರಾಣವಿರಲಿ, ಮಹಾಕಾವ್ಯವಿರಲಿ ಅಲ್ಲಿ ನದಿಗಳ ಪಾತ್ರ ಇದ್ದೇ ಇರುತ್ತದೆ. ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನ “ರಿವರ್‍ಸ್ ಆಫ್ ಎಂಪೈರ್” ಕೃತಿಯಲ್ಲಿ ನದಿ ಅಥವಾ ನೀರಿನ ಇತಿಹಾಸವಿಲ್ಲದೆ ಯಾವುದೇ ಮನುಕುಲದ ಇತಿಹಾಸ ಪೂರ್ಣವಾಗಲಾರದು ಎಂದಿದ್ದಾನೆ.

ಜಗತ್ತಿನ ಪ್ರ-ಪ್ರಥಮ ಮಹಾಕಾವ್ಯ ಎನಿಸಿಕೊಂಡ ಮೆಸಪೊಟೋಮಿಯಾ ನಾಗರೀಕತೆಯಲ್ಲಿ ಸೃಷ್ಟಿಯಾಗಿ ಹಲವಾರು ಶತಮಾನಗಳ ಕಾಲ ಮಣ್ಣಿನ ಹಲಗೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಬಂದ “ಗಿಲ್ಗಮೇಶನ ಮಹಾಕಾವ್ಯ” ದಲ್ಲಿ ನದಿಗಳ ಪ್ರವಾಹ ಪ್ರಧಾನ ಅಂಶವಾಗಿ ಮೂಡಿಬಂದಿದೆ. ಭಾರತದ ಗಂಗಾನದಿ, ಈಜಿಪ್ಟ್‌ನ ನೈಲ್‌ನದಿ, ರಷ್ಯಾದ ಓಲ್ಗಾ, ದಕ್ಷಿಣ ಅಮೆರಿಕಾದ ಅಮೆಜಾನ್, ಚೀನಾದ ಹಳದಿನದಿ, ಇಥಿಯೋಪಿಯಾದ ಐನಾಸ್ ಹೀಗೆ ನದಿ ಪಾತ್ರಗಳಲ್ಲಿನ ಜನಜೀವನ, ಸಂಸ್ಕೃತಿ, ಸಾಮ್ರಾಜ್ಯಗಳ ಉದಯ-ಪತನ, ಐತಿಹ್ಯ ಪುರಾಣ, ಸಾಂಸ್ಕೃತಿಕ ಆಚರಣೆ ಎಲ್ಲವುಗಳೂ ನದಿಗಳ ಇತಿಹಾಸದ ಜೊತೆ ಮಿಳಿತಗೊಂಡಿವೆ.

20ನೇ ಶತಮಾನದ ಆದಿಯಿಂದ ಬೃಹತ್ ಅಣೆಕಟ್ಟುಗಳ ನೆಪದಲ್ಲಿ ನದಿಗಳನ್ನು ಮಣಿಸಿ, ಅವುಗಳ ಸಹಜ ಹರಿವಿಗೆ ತಡೆಯೊಡ್ಡಿ ಸಾವಿಗೆ ಕಾರಣೀಭೂತನಾದ ಆಧುನಿಕ ಯುಗದ ನವ ನಾಗರೀಕನಿಗೆ ನಮ್ಮ ಪೂರ್ವಿಕರ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಗಮನಿಸುವ ತಾಳ್ಮೆ ಮತ್ತು ವಿವೇಚನೆ ಇಲ್ಲ. ಅವನ ಪಾಲಿಗೆ ಇದು ಅರ್ಥಹೀನ ಸಂಗತಿ. ಒಬ್ಬನ ಹಿತಕ್ಕೆ ಹತ್ತು ಜನರ ಹಿತವನ್ನು ಬಲಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಇತಿಹಾಸ ಕುರಿತ ಕಾಳಜಿ, ಪರಿಸರದ ಬಗೆಗಿನ ಪ್ರೀತಿ ಯಾರಿಗೂ ಬೇಡವಾದ ಸಂಗತಿಗಳು.

(ಮುಂದುವರಿಯುವುದು)

(ಚಿತ್ರಕೃಪೆ : ವಿಕಿಪೀಡಿಯ)

Leave a Reply

Your email address will not be published. Required fields are marked *