Gwangyang Steelworks

ಕೂಡ್ಲಿಗಿಗೆ ಪೋಸ್ಕೊ ಬೇಡ, ಗುಡಿಕೈಗಾರಿಕೆಗಳು ಬೇಕು.

ಪ್ರಜಾವಾಣಿ (ವಾಚಕರವಾಣಿ 24.08.2011)ಯ ಬಿ.ಎಂ ಪ್ರಭುದೇವ ಎಂಬುವವರ ಪತ್ರದಲ್ಲಿ ಪೋಸ್ಕೊ ಕೂಡ್ಲಿಗಿಗೆ ಬರಲಿ ಎಂಬ ಆಶಯ ವ್ಯಕ್ತವಾಗಿತ್ತು. ಕೂಡ್ಲಿಗಿಗೆ ಪೋಸ್ಕೋ ಕಂಪನಿ ಬರುತ್ತದೆಯಂತೆ, ಅದಕ್ಕಾಗಿ ಭೂಮಿಯನ್ನು ಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆಯಂತೆ ಮುಂತಾದ ಗಾಳಿ ಮಾತುಗಳು ಈ ಭಾಗದಲ್ಲಿ ಪ್ರಚಲಿತದಲ್ಲಿವೆ. ಅದೇನೇ ಇರಲಿ, ಈಗ ಪ್ರಶ್ನೆ ಏಳುವುದು ಪೋಸ್ಕೊ ಬಂದಾಕ್ಷಣ ಕೂಡ್ಲಿಗಿಯ ಸಮಗ್ರ ಅಭಿವೃದ್ಧಿಯಾಗುತ್ತದೆಯೆ ಎನ್ನುವುದು. ಹಾಗೆ ಅಂದುಕೊಂಡರೆ ಅದೊಂದು ಭ್ರಮೆ. ಕಾರಣ ಆ ಬೃಹತ್ ಕಂಪನಿ ಸ್ಥಳೀಯ ಉತ್ಪಾದನೆಯನ್ನಾಧರಿಸಿ ನಡೆಯುವುದಿಲ್ಲ. ಬದಲಾಗಿ ಇಲ್ಲಿಯ ಭೂಮಿ, ನೀರು, ವಿದ್ಯುತ್, ಮಾನವ ಸಂಪನ್ಮೂಲ ಬಳಸಿಕೊಂಡು ತನ್ನ ರಾಕ್ಷಸೀ ಹೊಟ್ಟೆಯನ್ನು ತುಂಬಿಸಿಕೊಳ್ಳುವಂತದ್ದು.

ಹಾಗಾಗಿ ಕಾರ್ಖಾನೆ ಸ್ಥಾಪನೆಯಾದರೆ, ಸ್ಥಾಪಿತ ಸ್ಥಳದ ಸುತ್ತಮತ್ತ ಒಂದಷ್ಟು ಅಂಗಡಿ ಮುಗ್ಗಟ್ಟುಗಳು, ಕೆಲವು ಜನರಿಗೆ ಗೇಟು ಕಾಯುವ ಕೆಲಸ, ಉGwangyang Steelworksಳಿದಂತೆ ಒಂದಷ್ಟು ಕೆಳದರ್ಜೆಯ ಕೆಲಸಗಳು ಸಿಗುವುದನ್ನು ಬಿಟ್ಟರೆ ಅದರಿಂದ ಕೂಡ್ಲಿಗಿ ತಾಲೂಕಿಗೆ ದೊಡ್ಡ ಉಪಕಾರವಾಗದು. ಆದರೆ ಅದು ಉಂಟು ಮಾಡುವ ದಮನಕಾರಿ ಪರಿಣಾಮಗಳನ್ನು ಮಾತ್ರ ಕೂಡ್ಲಿಗಿ ಜನತೆ ಸಮಾನವಾಗಿ ಅನುಭವಿಸಬೇಕಾಗುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಬಳ್ಳಾರಿ ಜಿಲ್ಲೆ ತೋರಣಗಲ್ಲು ಸಮೀಪದ ಜಿಂದಾಲ್‌ನ ಸುತ್ತಮುತ್ತಲ ಹಳ್ಳಿಗಳು ರೋಗಿಷ್ಟಗಳಾಗಿ ನರಳುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ.

ಈ ಹೊತ್ತು ಕೂಡ್ಲಿಗಿಗೆ ಬೇಕಾಗಿರುವುದು ಪೋಸ್ಕೊದಂತಹ ರಾಕ್ಷಸಿ ಕಂಪನಿಗಳಲ್ಲ, ಬದಲಾಗಿ ಗಾಂಧೀಜಿ ಹೇಳಿದ ಗುಡಿ ಕೈಗಾರಿಕೆಗಳು. ಈ ನೆಲೆಯಲ್ಲಿ ಕೂಡ್ಲಿಗಿಯ ನಿಧಾನಗತಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು. ಕೂಡ್ಲಿಗಿ ಹಿಂದುಳಿದ ತಾಲೂಕುಗಳಲ್ಲಿ ಒಂದು. ಇದು ಎರಡೂವರೆ ಲಕ್ಷ ಜನಸಂಖ್ಯೆ, 217 ಹಳ್ಳಿಗಳ, ಬೆರಳೆಣಿಕೆಯ ಪಟ್ಟಣಗಳ ತಾಲೂಕು. ಇಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಈ ಚರ್ಚೆ ಇಂದು ಅಗತ್ಯ.

ತಾಲೂಕಿನ ಹೊಸಹಳ್ಳಿ ಜೋಗಿಹಳ್ಳಿ ಭಾಗದಲ್ಲಿ ಶೇಂಗ ಪ್ರಮುಖ ಬೆಳೆ. ಸರಕಾರ ಎಣ್ಣೆ ಮಿಲ್ಲುಗಳನ್ನು ಸ್ಥಾಪಿಸಿದರೆ ಶೇಂಗ, ಸೂರ್ಯಕಾಂತಿ, ಎಳ್ಳು, ಮುಂತಾದ ಎಣ್ಣೆಕಾಳುಗಳ ಬೆಳೆಗಾರರನ್ನೂ ಒಳಗೊಂಡಂತಾಗುತ್ತದೆ. ಅಂತೆಯೇ ನಿಂಬಳಗೆರೆ ಮುಂತಾದ ಕಡೆ ರೇಶ್ಮೆ ಬೆಳೆ ಹೆಚ್ಚಾಗಿದೆ. ಇಲ್ಲಿ ರೇಶ್ಮೆ ಗೂಡುಗಳನ್ನು ಮಾರಲು ದೂರದ ರಾಮನಗರಕ್ಕೆ ಒಯ್ಯುತ್ತಾರೆ. ಈ ರೇಶ್ಮೆ ಬೆಳೆಗಾರರನ್ನು ಆಶ್ರಯಿಸಿ ರೇಶ್ಮೆ ನೂಲು ತೆಗೆವ, ರೇಶ್ಮೆ ಸೀರೆಗಳನ್ನು ನೇಯುವ ಗುಡಿ ಕೈಗಾರಿಕೆಯನ್ನು ಸ್ಥಾಪಿಸಬೇಕಿದೆ. ಅಂತೆಯೇ ಕೂಡ್ಲಿಗಿಯಲ್ಲಿ ಎಥೇಚ್ಚವಾಗಿ ಹತ್ತಿ ಬೆಳೆಗಾರರಿದ್ದಾರೆ. ಹಾಗಾಗಿ ಸರಕಾರ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಅಗತ್ಯವಿದೆ. ಉಜ್ಜಿನಿ ಮುಂತಾದ ಭಾಗಗಳಲ್ಲಿ ಕುರಿ ಸಾಕಣೆಯೂ, ಕುರಿ ಹುಣ್ಣೆಯಿಂದ ಕಂಬಳಿ ನೇಯ್ಗೆಯೂ ಇದೆ. ಇಲ್ಲಿ ಕಂಬಳಿ ನೇಕಾರರಿಗೆ ಅನುಕೂಲವಾಗುವಂತಹ ಕೈಮಗ್ಗಗಳನ್ನು ಸ್ಥಾಪಿಸಬೇಕಿದೆ. ಅಂತೆಯೇ ಕಂಬಳಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಬೇಕಿದೆ.

ಕೂಡ್ಲಿಗಿ ತಾಲೂಕು ಹುಣಸೆ ವ್ಯಾಪಾರಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿ. ಈ ಹುಣಸೆ ವ್ಯಾಪಾರದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಿದೆ. ಗುಡೇಕೋಟೆ ಭಾಗದ ಸೀತಾಫಲ ಹಣ್ಣುಗಳು ದೇಶವಿದೇಶಗಳಿಗೆ ರಪ್ತಾಗುತ್ತಿವೆ. ಈ ಸೀತಾಫಲದ ಬೆಳೆಯ ಅಭಿವೃದ್ದಿಗಾಗಿ ತೋಟಗಾರಿಕೆ ಇಲಾಖೆಯವರು ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಗುಡೇಕೋಟೆಯ ಜೇನು ತುಂಬಾ ಪ್ರಸಿದ್ಧ. ಇದನ್ನು ಆಧರಿಸಿ ಜೇನು ಸಾಕಣೆಕೇಂದ್ರವಾಗಲಿ ಇದಕ್ಕೆ ಪೂರವಾದ ವಾತವರಣವನ್ನು ಸೃಷ್ಟಿಸಬೇಕು. ಈಗ ಮೆಕ್ಕೆಜೋಳದ ಬೆಳೆ ಹೆಚ್ಚಾಗಿದೆ. ಮೆಕ್ಕೆಜೋಳದ ಉಪ ಉತ್ಪನ್ನಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಕೊಟ್ಟೂರಿನ ಮಂಡಕ್ಕಿ (ಪುರಿ) ಹೆಚ್ಚು ಪ್ರಸಿದ್ಧಿ. ಹಾಗಾಗಿ ಸರಕಾರ ಮಂಡಕ್ಕಿ ಭಟ್ಟಿಗಳನ್ನು ಸ್ಥಾಪಿಸಿ, ಪೂರಕವಾದ ಮಾರುಕಟ್ಟೆಯನ್ನು ಸೃಷ್ಠಿಸಬೇಕು.

ಈಗ ಕೂಡ್ಲಿಗಿಯಲ್ಲಿ ಹೈನುಗಾರಿಕೆ ಹೆಚ್ಚಾಗುತ್ತದೆ. ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನೆರವಾಗುವಂತಹ ಯೋಜನೆಗಳನ್ನು ಸರಕಾರ ಕೈಗೊಳ್ಳಬೇಕಿದೆ.  ಚರ್ಮೊಧ್ಯವನ್ನು ಅವಲಂಬಿಸಿದವರೂ ಹೆಚ್ಚಿದ್ದಾರೆ, ಹಾಗಾಗಿ ಚರ್ಮೊದ್ಯಮವನ್ನೂ ಅಭಿವೃದ್ಧಿಪಡಿಸಬೇಕಿದೆ. ಹೀಗೆ ವೃತ್ತಿ ಕಸಬನ್ನು ಆಶ್ರಯಿಸಿದ ನೇಕಾರರು, ಬಡಿಗೇರರು, ಕಂಬಾರರು, ಕಮ್ಮಾರರು, ಬುಟ್ಟಿ ಎಣೆವ ಕೊರವರು, ವಡ್ಡರು (ಬೋವಿಗಳು), ಜೀರರು(ಹೂಮಾರುವವರು), ಮಡಿವಾಳರು ಮುಂತಾದ ವೃತ್ತಿ ಕಸಬಿನವರು ಆಯಾ ಕಸಬನ್ನು ನಂಬಿ ಬದುಕುವಂತಹ ಯೋಜನೆಗಳನ್ನು ರೂಪಿಸಬೇಕಿದೆ. ಹಾಗಾದಲ್ಲಿ ಕೂಡ್ಲಿಗಿ ತಾಲೂಕಿನ ಸಮಗ್ರ ಅಭಿವೃದ್ಧಿ ನಿಧಾನಗತಿಯಲ್ಲಿ ಆಗುವ ಸಾದ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇಲ್ಲಿ ಹೇಳಿದ ಅಭಿವೃದ್ಧಿಯ ಮಾದರಿ ಕೇವಲ ಕೂಡ್ಲಿಗಿ ತಾಲೂಕಿಗೆ ಮಾತ್ರ ಅನ್ವಯವಾಗದೆ, ಎಲ್ಲಾ ತಾಲೂಕುಗಳ ಅಭಿವೃದ್ಧಿಯ ನೆಲೆಯಲ್ಲೂ ಅನ್ವಯಿಸಬಹುದು. ಈ ಬಗೆಯ ಅಭಿವೃದ್ಧಿಯ ಮಾದರಿಯಿಂದ ಜನರು ತಾವು ನಂಬಿದ, ತಮಗೆ ತಿಳಿದ ವೃತ್ತಿ ಕಸಬುಗಳಲ್ಲಿ ಹೊಸ ನಂಬಿಕೆ ಬರುತ್ತದೆ. ಅವರುಗಳಲ್ಲಿ ತಮ್ಮ ಬದುಕಿನ ಕ್ರಮದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ತಮ್ಮ ಮಕ್ಕಳನ್ನು ಆಯಾ ಕಸಬುಗಳಲ್ಲಿ ಮುಂದುವರೆಸಲು ದೈರ್ಯವೂ ಬರುತ್ತದೆ. ಅವರುಗಳಿಗೆ ಅದಕ್ಕಾಗಿ ಪ್ರತ್ಯೇಕ ತರಬೇತಿಗಳ ಅಗತ್ಯವೂ ಇರುವುದಿಲ್ಲ, ಅದು ಅವರ ಬದುಕಿನ ಭಾಗವೇ ಆಗಿರುತ್ತದೆ. ಈ ಬಗೆಯ ಯೋಜನೆಗಳಲ್ಲಿ ಜನರು ಸ್ವತಃ ಪಾಲುದಾರರಾಗುತ್ತಾರೆ. ಕೇವಲ ಗುಡಿಕೈಗಾರಿಕೆಯಲ್ಲಿ ಕೆಲಸ ಮಾಡುವವರಲ್ಲದೆ, ಆ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವವರೂ ಸಹ ಆ ಕೈಗಾರಿಕೆಯ ಫಲಾನುಭವಿಗಳಾಗುತ್ತಾರೆ. ಆಗ ಆಯಾ ಬೆಳೆ, ಆಯಾ ಕಸುಬನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ.

ಮುಖ್ಯವಾಗಿ ಇಲ್ಲಿ ಹೇಳಿದ್ದನ್ನು ಸರಕಾರ ಮಾಡಲು ಕಾನೂನು ರೀತ್ಯವಾಗಿಯೇ ಹಲವಾರು ಅವಕಾಶಗಳಿವೆ.  ಅಂತೆಯೇ ಇದಕ್ಕಾಗಿ ಕೆಲವು ಹೊಸ ಕಾನೂನು ಕಾಯ್ದೆಗಳನ್ನೂ ಮಾರ್ಪಡಿಸುವ ಅಗತ್ಯವೂ ಇದೆ. ಹೀಗೆ ಹೇಳಿದ ಎಲ್ಲಾ ಬಗೆಯ ಗುಡಿ ಕೈಗಾರಿಕೆಗಳು ಇದ್ದಾಗಲೂ ಅವುಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಜನರೊಂದಿಗೆ ಬೆರೆಯುವ, ಜನರ ಶ್ರಮಸಂಸ್ಕೃತಿಯನ್ನು ಗೌರವಿಸುವ ಮತ್ತು ಆ ಮೂಲಕ ಕ್ರಿಯಾಶೀಲವಾಗಿ ದುಡಿವ ಮನಸ್ಸು ಇಲ್ಲದಿದ್ದರೆ ಅವೂ ಸಹ ಜಿಡ್ಡುಗಟ್ಟುತ್ತವೆ.

ಕೂಡ್ಲಿಗಿಯಲ್ಲಿ ಯಾವುದೇ ಗುಡಿ ಕೈಗಾರಿಕೆಗಳು ಇಲ್ಲವೆಂತಲ್ಲ. ಇದ್ದರೂ ಇಲ್ಲದಂತಿರುವುದು ಇಂದಿನ ಸಮಸ್ಯೆ. ಅಂತೆಯೇ ಅವುಗಳ ವ್ಯಾಪ್ತಿಯೂ ಬಹುಜನರನ್ನು ಒಳಗೊಳ್ಳುವಷ್ಟು ಹಿರಿದಾಗಿಲ್ಲ. ಅದರಲ್ಲೂ ಇದ್ದ ಕೆಲವಾದರೂ ಎಣ್ಣೆ ಗಿರಣಿ, ಹತ್ತಿ ಗರಣಿಗಳು ಖಾಸಗಿ ಧಣಿಗಳ ಕೈವಶದಲ್ಲಿವೆ. ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಿನ ಅರಣ್ಯ ಭೂಮಿಯಿದೆ, ಅದನ್ನು ಪುಡಾರಿ ನಾಯಕರುಗಳು ರೈತರ ಹೆಸರಲ್ಲಿ ಸಾಗುವಳಿ ಭೂಮಿಯನ್ನಾಗಿ ಸೃಷ್ಟಿಸಿ ಕೊಳ್ಳೆಹೊಡೆಯುತ್ತಿದ್ದಾರೆ. ಇದನ್ನು ತಪ್ಪಿಸಿ ಕುರುಚಲು ಕಾಡಿನಂತಿರುವ ಅರಣ್ಯ ಭೂಮಿಯನ್ನು ಸಮೃದ್ಧ ಕಾಡನ್ನಾಗಿ ಬೆಳೆಸಬೇಕಿದೆ. ನೀರು ತಡೆಯ ಗೋಕಟ್ಟೆಗಳನ್ನು ಹೆಚ್ಚಾಗಿ ನಿರ್ಮಿಸಿ, ಆ ಮೂಲಕ ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ.

ಈ ಮಾತುಗಳನ್ನು ತಾಲೂಕಿನ ಶಾಸಕರಾದ ಬಿ.ನಾಗೇಂದ್ರ ಅವರು, ತಹಶೀಲ್ದಾರರು, ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ಸದಸ್ಯರುಗಳು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕಿವಿಯಲ್ಲಿ ಹಾಕಿಕೊಂಡು ಕ್ರಿಯಾಶೀಲವಾಗಬೇಕೆನ್ನುವುದು ನನ್ನ ಆಶಯ. ಹೀಗೆ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಮಾತ್ರ ಕೂಡ್ಲಿಗಿ ತಾಲೂಕು ಭವಿಷ್ಯದಲ್ಲಿ ಅಭಿವೃದ್ಧಿಯಾಗಲು ಸಾದ್ಯವಿದೆ. ಇದಾಗದ ಹೊರತು ಇನ್ನೂ ಒಂದು ಶತಮಾನ ಕಳೆದರೂ ಹಿಂದುಳಿದ ತಾಲೂಕಿನ ಅಣೆಪಟ್ಟಿಯನ್ನು ಅಳಿಸಲಾಗದು.

-ಅರುಣ್ ಜೋಳದಕೂಡ್ಲಿಗಿ.
ಸಂಪರ್ಕ: ಜೋಳದಕೂಡ್ಲಿಗಿ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ ಪಿನ್-583134 ಮೊ:9901445702

ಚಿತ್ರಕೃಪೆ : ವಿಕಿಪೀಡಿಯ

Leave a Reply

Your email address will not be published.