ಕನ್ನಡ ಚಿತ್ರರಂಗದ ‘ಒಳ ಮನಸ್ಸು’ ಅನಾವರಣಗೊಂಡಿದೆ

ಭೂಮಿ-ಭಾನು

ಕನ್ನಡ ಚಿತ್ರರಂಗ ಪುರುಷ ಪ್ರಾಧಾನ್ಯ ಕ್ಷೇತ್ರ ಎನ್ನುವುದನ್ನು ಕನ್ನಡ ನಿರ್ಮಾಪಕರು ನಿರೂಪಿಸಿದ್ದಾರೆ. ವಿಜಯಲಕ್ಷ್ಮಿ ಆರೋಪ ಆಧಾರದ ಮೇಲೆ ನಿರ್ಮಾಪಕರ ಸಂಘ ನಟಿ ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಲು ಅವಕಾಶ ನೀಡಬಾರದೆಂದು ನಿರ್ಧಿರಿಸಿದೆ. ದರ್ಶನ್ ಕುಟುಂಬ ಕಲಹಕ್ಕೆ ಆತನಿಗೆ ನಟಿ ನಿಖಿತಾ ಜೊತೆ ‘ಸಖ್ಯ’ (?) ಕಾರಣ ಎಂದು ಕೇಳಿ ಬರುತ್ತಿದ್ದ ಗುಸುಗುಸುಗೆ ಈಗ ನಿರ್ಮಾಪಕ ಸಂಘದ ನಿರ್ಧಾರದಿಂದ ‘ಹುಸಿ ಅಧಿಕೃತತೆ’ ಸಿಕ್ಕಿಬಿಟ್ಟಿದೆ. ಇನ್ನುಮುಂದೆ ಯಾರು ಬೇಕಾದರೂ ನಿಖಿತ ಬಗ್ಗೆ ಕೇವಲವಾಗಿ ಮಾತನಾಡಬಹುದು!

ಕನ್ನಡ ಚಿತ್ರರಂಗ ಎಂತಹ ಮೂಲಭೂತವಾದಿ, ಅಜ್ಷಾನಿ, ದುಷ್ಟ, ಕ್ರೂರ ನಿರ್ಮಾಪಕರ ಕೈಯಲ್ಲಿ ಬಳಲುತ್ತಿದೆ ಎನ್ನವುದಕ್ಕೆ ಇದು ಸಣ್ಣ ಉದಾಹರಣೆ.

ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಟಿವಿ ವಾಹಿನಿ ಚರ್ಚೆಯೊಂದರಲ್ಲಿ ಮಾತನಾಡುತ್ತ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಿಚಿತ್ರ ನೋಡಿ, ಅದೇ ದೂರನ್ನು ಮಾನ್ಯ ವಿಜಯಲಕ್ಷ್ಮಿಯವರು ಅದೇ ಸಂಜೆ ಹೊತ್ತಿಗೆ ಹಿಂಪಡೆದರು. ತಾವು ಬಾತ್ ರೂಂನಲ್ಲಿ ಬಿದ್ದದ್ದು ಎಂದು ನ್ಯಾಯಾಧೀಶರ ಮುಂದೆ ಹೇಳಿದರು. ಹಾಗಾದರೆ ವಿಜಯಲಕ್ಷ್ಮಿ ಬಾತ್ ರೂಂನಲ್ಲಿ ಬೀಳುವುದಕ್ಕೂ, ನಿಖಿತ ಕಾರಣವಾ?

ಮುನಿರತ್ನ ಮುಂದುವರೆದು ಮಾತನಾಡುತ್ತ ದರ್ಶನ್ ತುಂಬಾ ಒಳ್ಳೆಯವರು. ಅವರ ಜೊತೆ ಚಿತ್ರ ಮಾಡುವಾಗ ನಮಗೆ ಯಾವುದೇ ಕಿರಿಕಿರಿ ಇರುವುದಿಲ್ಲ ಎಂದು ದರ್ಶನ್ ಗೆ ಪ್ರಶಂಸ ಪತ್ರ ನೀಡಿದರು. ಸಿಗರೇಟಿನಿಂದ ಹೆಂಡತಿಯನ್ನು ಸುಟ್ಟ ನಟ, ಕುಡಿದು ಹೆಂಡತಿಯನ್ನು ಹೊಡೆಯುವ ನಟ (ಪೊಲೀಸ್ ಗೆ ನೀಡಿದ ಹೇಳಿಕೆಯಲ್ಲಿ ದರ್ಶನ್ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ) ಇವರಿಗೆ ಒಳ್ಳೆಯವನು.

ಮತ್ತೊಬ್ಬ ನಿರ್ಮಾಪಕ ಸೂರಪ್ಪ ಬಾಬು ಸಂಘದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ‘ನಮ್ಮ ಮನೆಯ ಹೆಣ್ಣು ಮಗಳ ಹಿತ ಮುಖ್ಯ’ ಎನ್ನುತ್ತಾರೆ. ಅವರು ‘ನಮ್ಮ ಮಗಳ ಹೆಣ್ಣು ಮಗಳು’ ಎನ್ನುತ್ತಿರುವುದು ವಿಜಯಲಕ್ಷ್ಮಿ ಬಗ್ಗೆ. ಅವರು ಮಾತು ಮುಂದುವರೆಸುತ್ತ ‘ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಅನೇಕರು ಟೀಕೆ ಮಾಡುವುದು ಸಹಜ. ಕೆಲವು ಬಹಿರಂಗ ಪಡಿಸಲಾಗದ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.

ಇದೇ ಚರ್ಚೆಯಲ್ಲಿ ನಟಿ ಸುಷ್ಮಾ ಒಂದು ಸೂಕ್ತ ಪ್ರಶ್ನೆ ಎತ್ತಿದರು. ನಿಖಿತ ಏನು ದರ್ಶನ್ ನ್ನು ರೇಪ್ ಮಾಡಿಲ್ಲ. ದರ್ಶನ್ ಏನು ಸಣ್ಣ ಹುಡುಗನಲ್ಲ. ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣ ಆತನೇ. ಆದರೆ ಶಿಕ್ಷೆ ಬೇರೆಯವರಿಗೆ ಕೊಡ್ತೀರಲ್ಲ? ನಿರ್ಮಾಪಕರಿಂದ ಈ ಪ್ರಶ್ನೆಗೆ ಉತ್ತರ ಇಲ್ಲ.

ವಿಜಯಲಕ್ಷ್ಮಿ ಮೊದಲು ಗಂಡ ಹೊಡೆದ, ಸಿಗರೇಟಿನಿಂದ ಸುಟ್ಟ, ಗನ್ ತೋರಿಸಿ ಹೆದರಿಸಿದ ಎಂದೆಲ್ಲಾ ದೂರು ಕೊಟ್ಟರು. ಅವಲ್ಲಿ ಕೆಲವನ್ನು ಮಾಡಿದ್ದಾಗಿ ದರ್ಶನ್ ಒಪ್ಪಿಕೊಂಡದ್ದೂ ಆಗಿದೆ (ವರದಿಗಳ ಪ್ರಕಾರ). ಆದರೆ ಆತನಿಗೆ ಶಿಕ್ಷೆ ಆಗದಂತೆ ತಡೆಯಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅಂಬರೀಷ್ ಸೇರಿದಂತೆ ಅನೇಕರು ಮಾಧ್ಯಮದ ಎದುರು ಮಾತನಾಡುತ್ತಾ ‘ಗಂಡ-ಹೆಂಡತಿ ಮನಸ್ತಾಪ ಎಲ್ಲಾ ಮನೆಗಳಲ್ಲೂ ಕಾಮನ್’ ಎಂದರು. ಹೌದಾ, ಹೀಗೆ ಹೇಳಿಕೆ ನೀಡಿದವರೆಲ್ಲರ ಮನೆಯಲ್ಲೂ ಹೀಗೆ ನಡೆಯುತ್ತಿದೆಯಾ? ಅವರೆಲ್ಲಾ ಹೆಂಡತಿಗೆ ಸಿಗರೇಟಿನಿಂದ ಸುಡುತ್ತಾರಾ? ಕಿವಿ ಹರಿಯುತ್ತಾರ? ಅಥವಾ ಆಗಾಗ ಅವರ ಹೆಂಡತಿಯರು ಬಚ್ಚಲು ಮನೆಯಲ್ಲಿ ಬೀಳುತ್ತಿರುತ್ತಾರ?

ಕನ್ನಡ ಚಿತ್ರರಂಗದ ಒಳ ಮನಸ್ಸು ಈ ಘಟನೆಯಿಂದ ಅನಾವರಣಗೊಳ್ಳುತ್ತಿದೆ.

One thought on “ಕನ್ನಡ ಚಿತ್ರರಂಗದ ‘ಒಳ ಮನಸ್ಸು’ ಅನಾವರಣಗೊಂಡಿದೆ

  1. bhuvana

    ತಾರತಮ್ಯದ ಪರಮಾವಧಿ ಅಂದ್ರೆ ಇದೇನಾ…ಹೆಣ್ಣು ಎಷ್ಟಂಥ ಸಹಿಸಬೇಕು. ಹೇಳಿಕೊಳ್ಳೋದು ಕೆಲವೇ ಆದರೂ ಹೇಳಿಕೊಳ್ಳಲಿಕ್ಕೆ ಆಗದ್ದು ಸಾವಿರಾರು. ಆ ಕೆಲವಕ್ಕೇ ಅಲ್ಲೋಲ ಕಲ್ಲೋಲ ಎಬ್ಬಿಸುವ ಪುರುಷ ಪ್ರಪಂಚ ( ಕೆಲವರನ್ನು ಹೊರತುಪಡಿಸಿ..?) ಎಚ್ಚೆತ್ತು ಕೊಳ್ಳುವುದು ಯಾವಾಗ..? ಕೆಲವು ಅವಕಾಶವಾದಿ ಮಹಿಳೆಯರೂ ಇದಕ್ಕೆ ಹೊರತಲ್ಲ.
    ಸಮಾನತೆ ಎನ್ನುವುದು ಬಾಹ್ಯದಿಂದ ಬರುವಂಥದ್ದಲ್ಲ, ಆಂತರ್ಯ ಸರಿಯಿರಬೇಕು ಅಲ್ಲವಾ..ಮೊದಲು ಮನುಷ್ಯತ್ವದ ಪಾಠ ಕಲಿತರೆ ಸಾಕು ಸ್ವಾರ್ಥ, ಒಣ ಅಹಂಕಾರ ತಂತಾನೆ ಮೂಲೆ ಗುಂಪಾಗುತ್ತದೆ.
    `ಎಲ್ಲದಕ್ಕೂ ಜವಾಬ್ಗಾರಿ ಹೊರುವುದರೊಂದಿಗೇ ಕೊನೆಗೆ ಹೊಣೆಗಾರಳಾಗುವುದೂ ಹೆಣ್ಣೇ’- ಎಷ್ಟು ಚೆನ್ನಾಗಿ ಬಿಂಬಿಸಿವೆಯಲ್ಲ ಪುರುಷ ಮನಸ್ಸುಗಳು…

    Reply

Leave a Reply

Your email address will not be published. Required fields are marked *