ಎಲ್ಲರಿಗೂ ಸಿಗಬೇಕು ಸೂರು, ಮರೆತಿರಾ ಜಸ್ಟಿಸ್ ಪಾಟೀಲರೆ?

– ಭೂಮಿ ಬಾನು

ಲೋಕಾಯುಕ್ತ ಶಿವರಾಜ್ ವಿ.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದರ ನಂತರ ಒಂದು ಎಂಬಂತೆ ಮೂರು ನಿವೇಶನ/ಮನೆಗಳನ್ನು ಬೆಂಗಳೂರಿನಲ್ಲಿ ಅವರು ಗೃಹನಿರ್ಮಾಣ ಸಹಕಾರ ಸಂಘಗಳ ಬೈಲಾ ಉಲ್ಲಂಘಿಸಿ ಪಡೆದಿದ್ದಾರೆ ಎನ್ನುವ ಆರೋಪ ಅವರನ್ನು ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ.

ಬೆಂಗಳೂರು ಮಿರರ್ ಪತ್ರಿಕೆಗೆ ಈ ಸುದ್ದಿಯನ್ನು ವಿಸ್ತೃತವಾಗಿ ಮೊದಲು ಪ್ರಕಟಿಸಿದ ಕೀರ್ತಿ ಸಲ್ಲಬೇಕು. ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಯಿತು. ಹಾಗೆ ಚರ್ಚೆ ಆರಂಭವಾದ ನಂತರವಷ್ಟೆ ಲೋಕಾಯುಕ್ತರಿಗೆ ಒಂದು ನಿವೇಶನವನ್ನು ಹಿಂತಿರುಗಿಸಬೇಕು ಎಂಬ ಆಲೋಚನೆ ಬಂತು. ಮುಂದುವರಿದು, ರಾಜೀನಾಮೆ ಕೊಟ್ಟರು. ತಮ್ಮ ನಿರ್ಧಾರವನ್ನು ಪ್ರಕಟಿಸುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಹೇಳಬೇಕು ಎಂದುಕೊಂಡದಷ್ಟನ್ನೆ ಹೇಳಿ ಎದ್ದು ಹೋದರು. ತಮ್ಮ ವಿರುದ್ಧದ ದುರುದ್ದೇಶಪೂರಕ ಪ್ರಚಾರದಿಂದ ತುಂಬಾ ನೋವಾಗಿದೆ. ಇಂತಹ ಅಹಿತವಾದ ಸಂದರ್ಭದಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಭಾವಿಸಿದ್ದೇನೆ ಎಂದರು. ಅವರು ಈ ಎಲ್ಲಾ ಘಟನಾವಳಿಗಳಿಗೆ ಕಾರಣರಾದವರನನ್ನು ಕೇಳಬಯಸಿದ್ದು, “ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸುತ್ತಾರೋ ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಡುವವರ ವ್ಯಕ್ತಿತ್ವಕ್ಕೆ ಕಳಂಕ ತರಲು ಯತ್ತಿಸುತ್ತಾರೋ?”

ತಾನು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತವನು, ಆದರೆ ತನಗೆ ಬೆಂಬಲ ಸಿಗಲಿಲ್ಲ. ಬದಲಿಗೆ ತನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ನಡೆಯಿತು ಎನ್ನುವ ಭಾವನೆ ಅವರ ಮಾತಿನಲ್ಲಿದೆ. ಸನ್ಯಾನ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ. ‘ನಾನು ನನ್ನ ಪ್ರಮಾಣವಚನಕ್ಕೆ ಬದ್ಧನಾಗಿರುತ್ತೇನೆ’ ಎಂದು ಅವರು ಒತ್ತಿ ಹೇಳಿದ್ದರು. ಅವರು ಹಾಗೆ ಹೇಳುವ ಅಗತ್ಯ ಏನೂ ಇರಲಿಲ್ಲ. ಏಕೆಂದರೆ, ಅವರಿಂದ ಆ ಹುದ್ದೆ ನಿರೀಕ್ಷಿಸುವುದೇ ಅದನ್ನು, ಮತ್ತೇನನ್ನೂ ಅಲ್ಲ.

ಒಂದು ಮನೆ ಇದ್ದಾಗ್ಯೂ ಜುಡಿಶಿಯಲ್ ಲೇಔಟ್ ನಲ್ಲಿ ನಿವೇಶನ ಪಡೆದದ್ದು ಈಗ ಚರ್ಚೆಯ ವಿಷಯಗಳಲ್ಲಿ ಒಂದು. ಆ ಸಂದರ್ಭದಲ್ಲಿ ತಾನೂ ಯಾವುದೇ ಅಫಿಡವಿಟ್ಟು ಸಲ್ಲಿಸಿರಲಿಲ್ಲ ಎಂದು ಹೇಳಿದ್ದಾರೆ. ಭಾರತದ ಸಂವಿಧಾನ ಒಪ್ಪಿ ಈ ನೆಲದಲ್ಲಿ ಬದುಕುತ್ತಿರುವ ಎಲ್ಲರಿಗೂ ಕಾನೂನು ಒಂದೆ. ಕಾನೂನು ಗೊತ್ತಿದ್ದು ತಪ್ಪು ಮಾಡಿರಲಿ, ಅಥವಾ ಗೊತ್ತಿಲ್ಲದೆ ಮಾಡಿರಲಿ ಪರಿಣಾಮ ಒಂದೆ. ಪ್ರಸ್ತುತ ಸಂದರ್ಭ ಚರ್ಚೆಯಲ್ಲಿರುವ ವ್ಯಕ್ತಿ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದವರು. ಅವರು ಕಾನೂನು ಗೊತ್ತಿರಲಿಲ್ಲ ಎಂದರೆ ನಂಬಬೇಕೆ? ಸತ್ಯವನ್ನು ಮರೆಮಾಚಿ ನಿವೇಶನ ಪಡೆದದ್ದು ಭಾರತೀಯ ದಂಡ ಸಂಹಿತೆ ಸೆ.200 ರ ಪ್ರಕಾರ ಅಪರಾಧ. ಸನ್ಮಾನ್ಯರ ಪ್ರಕರಣದಲ್ಲಿ ಈ ಅಪರಾಧ ಎರಡು ಬಾರಿ ಆಗಿದೆ. ಒಮ್ಮೆ ಜುಡಿಶಿಯಲ್ ಲೇಔಟ್ ಪ್ರಕರಣದಲ್ಲಿ ಮತ್ತೊಮ್ಮೆ ವಯ್ಯಾಳಿಕಾವಲ್ ನಿವೇಶನ ಕೊಳ್ಳುವಾಗ.

ಈ ನೆಲದ ಎಲ್ಲಾ ಗೃಹನಿರ್ಮಾಣ ಸಹಕಾರ ಸಂಘಗಳಿಗೆ ಒಂದು ಸಾಮಾನ್ಯ ಬೈಲಾ ಇದೆ. ಅದರ ಪ್ರಕಾರ ಈಗಾಗಲೇ ಆ ಸಂಘದ ಕಾರ್ಯವ್ಯಾಪ್ತಿಯಲ್ಲಿ ನಿವೇಶನ/ಮನೆ ಇರುವವರು ಮತ್ತೊಂದು ನಿವೇಶನಕ್ಕೆ ಅರ್ಹರಲ್ಲ. ಎಲ್ಲರಿಗೂ ಸೂರು ದೊರಕುವಂತಾಗಬೇಕು ಎಂಬುದು ಈ ನಿಯಮದ ಮೂಲ ಉದ್ದೇಶ. ಆದರೆ ತನ್ನಿಂದ ಏನೂ ತಪ್ಪಾಗಿಲ್ಲ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಮೂಲ ಉದ್ದೇಶಕ್ಕೆ ಧಕ್ಕೆಯಾಗಿರುವುದಂತೂ ಸತ್ಯ. ಜುಡಿಶಿಯಲ್ ಲೇಔಟ್ ನಲ್ಲಿ ಬರೋಬ್ಬರಿ 9,400 ಚದರ ಅಡಿಗಳ ನಿವೇಶನ ಇವರಿಗಿದೆ. ಅಷ್ಟು ವಿಸ್ತೀರ್ಣದ ನಿವೇಶನದಲ್ಲಿ 30X40 ರ ಎಂಟು ನಿವೇಶನ ಮಾಡಿ ಎಂಟು ಕುಟುಂಬಕ್ಕೆ ನೀಡಬಹುದಿತ್ತು! ಜೊತೆಗೆ ಆ ಸಂಘದವರು ಸರ್ಕಾರದ ಅನುಮತಿ ಇಲ್ಲದೆ ರೈತರಿಂದ 36 ಎಕರೆ ಜಮೀನು ಖರೀದಿಸಿದ್ದರು. ಇಂತಹ ಅಕ್ರಮಗಳಿಂದ ರೂಪುಗೊಂಡ ಲೇಔಟ್ ನ ಫಲಾನುಭವಿಗಳ ಪಟ್ಟಿಯಲ್ಲಿ ಅನೇಕ ನ್ಯಾಯಾಧೀಶರು ಇರುವುದೇ ದುರಂತ.

ಇಷ್ಟಾದರೂ ನ್ಯಾಯಮೂರ್ತಿ ಪಾಟೀಲರು ‘ಭ್ರಷ್ಟಾಚಾರ ವಿರುದ್ಧ ಹೋರಾಡಲು ಬಂದವನನ್ನು ಹೀಗೆ ಕಳಂಕಿತನನ್ನಾಗಿ ಮಾಡಿದಿರಲ್ಲ’ ಎಂದು ಗೋಗರೆಯುವುದು ವಿಪರ್ಯಾಸ. ಅವರಲ್ಲಿ ತಮ್ಮಿಂದ ತಪ್ಪಾಗಿದೆ ಎಂಬ ಭಾವನೆಯೇ ಇಲ್ಲ. ಭ್ರಷ್ಟಾಚಾರದ ವಿರುದ್ಧ ಪ್ರಬಲ ಕಾನೂನಿಗಾಗಿ ಹೋರಾಡಿದ ಅಣ್ಣಾ ಹಜಾರೆ ಪಾಟೀಲರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂಬರ್ಥದ ಹೇಳಿಕೆ ನೀಡಿದ್ದು ಪಾಟೀಲರಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿರಬಹದು. ನಂತರ ರಾಜೀನಾಮೆಯ ಈ ನಿರ್ಧಾರಕ್ಕೆ ಬಂದಿರಬಹುದು. ಒಂದು ಪಕ್ಷ ರಾಜ್ಯಪಾಲರು ರಾಜೀನಾಮೆ ಒಪ್ಪದೆ ಹಿಂಪಡೆಯಿರಿ ಎಂದು ಸಲಹೆ ನೀಡಿದರೆ ಪರಿಸ್ಥಿತಿ ಬದಲಾಗಬಹುದು. ಆದರೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಖಾಲಿಯಾದ ಸ್ಥಾನಕ್ಕಾಗಿ ಸೂಕ್ತ ವ್ಯಕ್ತಿಯನ್ನು ಹುಡುಕಿ ನೇಮಕ ಮಾಡುವ ಹೊಣೆ ರಾಜ್ಯ ಸರ್ಕಾರದ್ದು. ನಿಜಕ್ಕೂ ಇದು ಕಷ್ಟದ ಕೆಲಸ. ಜುಡಿಶಿಯಲ್ ಲೇಔಟ್ ನ ಫಲಾನುಭವಿಗಳಾದ ಒಟ್ಟು ನ್ಯಾಯಾಧೀಶರ ಸಂಖ್ಯೆಯೇ 84! ಕಳಂಕರಹಿತ, ಆರೋಪ ಹಿನ್ನೆಲೆ ಇಲ್ಲದ ನ್ಯಾಯಾಧೀಶರನ್ನು ಹುಡುಕುವುದು ಎಷ್ಟು ಕಷ್ಟದ ಕೆಲಸ ನೋಡಿ!

2 thoughts on “ಎಲ್ಲರಿಗೂ ಸಿಗಬೇಕು ಸೂರು, ಮರೆತಿರಾ ಜಸ್ಟಿಸ್ ಪಾಟೀಲರೆ?

  1. ರಾಜೇಶ್

    ಪ್ರಮಾಣ ಮಾಡಿ ಹೇಳುವುದು ಒಂದು ಅದರಂತೆ ನಡೆಯಲಾಗದ್ದು ಇನ್ನೊಂದು ಅದೇ ಸಂವಿಧಾನ ಎಂದು ಅರ್ಥೈಸಬಹುದೇನೋ?

    Reply
  2. Prashanth Mirle

    ಸುಳ್ಳು ಪ್ರಮಾಣಪತ್ರದ ಜಾಡು ಹಿಡಿಯುವ ಮೂಲಕ ಮಾಧ್ಯಮ ಪ್ರತಿನಿಧಿಗಳು ಕಾರ್ಯಪ್ರೌವೃತ್ತರಾದರೆ ಭವಿಷ್ಯ ಹೊಸ ವಿಷಯಗಳಿಗೆ ಸಾಮಾನ್ಯನಿಗೆ ಹೊಟ್ಟೆ ತುಂಬಿಸುವಷ್ಟು ಅಥವಾ ಜಿರ್ಣಿಸಿಕೊಳ್ಳಲಾಗದಷ್ಟು ವಿಷಯಗಳು ಲಭ್ಯವಾಗಬಹುದು….. ನನ್ನ ಅಭಿಪ್ರಾಯದಲ್ಲಿ ಪಾಟೀಲರು ಪ್ರಸ್ತುತವಾಗಿ ಅಸಹಾಯಕರಾಗಿ ಕಾಣಿಸುತ್ತಿದ್ದಾರೆ….. ಆದರೆ ಅವರ ನಡತೆಯನ್ನು ನಾವು ಗೌರವಿಸಿ ಮೆಚ್ಚಬೇಕಾಗಿರುವುದನ್ನು ಮರೆಯಬಾರದು.

    Reply

Leave a Reply

Your email address will not be published.