Daily Archives: September 22, 2011

ರಾಜಕಾರಣ – ರಜೆಕಾಲದಲ್ಲಿ ಹೋಗಿ ಬರುವ ರಮ್ಯ ತಾಣವಲ್ಲ!

-ಭೂಮಿ ಬಾನು

ಚಿತ್ರ ನಟಿ ರಮ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಕಾಂಗ್ರೆಸ್ನ ಕೆಲ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅವರು ತಮ್ಮ ಅಸಹನೆಯನ್ನು ಅಲ್ಲಲ್ಲಿ ಹೊರಹಾಕಿದ್ದಾರೆ. ಸಂಸದ ಹೆಚ್.ವಿಶ್ವನಾಥ್ ಲಘುವಾಗಿ ಕಮೆಂಟ್ ಪಾಸ್ ಮಾಡಿದರೆ, ಉಗ್ರಪ್ಪ ತುಸು ಗಂಭೀರವಾಗಿಯೇ ಅಸಮಾಧಾನ ತೆರೆದಿಟ್ಟಿದ್ದಾರೆ.

ಅಸಹನೆ, ಅಸಮಾಧಾನಕ್ಕೆ ಮುಖ್ಯ ಕಾರಣ ರಮ್ಯ ಎಲ್ಲಿಂದಲೋ ಬಂದವರು ಎನ್ನುವ ಕಾರಣಕ್ಕೆ. ಸಿನಿಮಾಗಳಿಂದ ಪಡೆದ ಪಾಪುಲಾರಿಟಿಯ ಲಾಭ ಪಡೆದು ತನ್ನ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಮಟ್ಟಿಗೆ ಬಹು ಮುಖ್ಯ ಘಟನೆಯೇನೋ ಎನ್ನುವಂತೆ ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ರಮ್ಯ ಯಶಸ್ವಿಯಾದರು. ಅವರ ಹಿಂದೆ ಟಿವಿ ಸಂದರ್ಶಕಿಯಾದ ತೇಜಸ್ವಿನಿಯನ್ನು ಚುನಾವಣೆಗೆ ನಿಲ್ಲಿಸಿ ದೇವೇಗೌಡರಂತಹ ಪ್ರಬಲ ಸ್ಪರ್ಧಿಯನ್ನು ಸೋಲಿಸಲು ಕಾರಣಕರ್ತರಾಗಿದ್ದ ಡಿ.ಕೆ.ಶಿವಕುಮಾರ್ ಇದ್ದರು ಎನ್ನುವುದೂ ಪಕ್ಷದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣ. ಕಾಲ ಕ್ರಮೇಣ ಚಿತ್ರನಟಿಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನಗಳು ಸಿಕ್ಕಬಹುದು. ಹಾಗೆಲ್ಲ ಆದರೆ, ಎಷ್ಟೋ ವರ್ಷಗಳಿಂದ ಊರಿನ ಹಿರಿಯರಿಗೆ ವೃದ್ಧಾಪ್ಯ ವೇತನ ಮಾಡಿಸಿ, ಗಂಗಾ-ಕಲ್ಯಾಣ ಯೋಜನೆ ಅಡಿ ಬೋರ್ ಕೊರೆಸಿ ಕರೆಂಟು ಕೊಡಿಸಲು ಓಡಾಡಿ, ಚುನಾವಣೆ ಬಂದಾಗ ಬ್ಯಾನರ್ ಕಟ್ಟಿ, ಬಾವುಟ ಹಿಡಿದು ಊರೂರು ಅಲೆದವರ ಪಾಡೇನು ಎನ್ನುವುದು ಸಹಜವಾಗಿಯೇ ಏಳುವ ಪ್ರಶ್ನೆ. ಇದೇ ಪ್ರಶ್ನೆ ಅಪ್ಪ, ಅಜ್ಜ ಮಾಡಿದ ಹೆಸರಿನ ಬಲದ ಮೇಲೆ ಪಕ್ಷ ಸೇರಿ, ಟಿಕೆಟ್ ಗಿಟ್ಟಿಸುವ ಸಂಬರ್ಭಗಳು ಬಂದಾಗೆಲ್ಲಾ ಎದುರಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಸಿನಿಮಾ ಪಾಪುಲಾರಿಟಿ ಅಥವಾ ನಾಮ ಬಲದಿಂದ ಪಕ್ಷ ರಾಜಕಾರಣದಲ್ಲಿ ಮನ್ನಣೆಗಳಿಸಿದವರಿಗೆ ಇರುವ ವ್ಯತ್ಯಾಸಗಳೆಲ್ಲಾ ಅವರು ಎದುರಿಸುವ ಮೊದಲ ಚುನಾವಣೆ ನಂತರ ಮುರಿದು ಬೀಳುತ್ತವೆ. ಮೊದಲ ಚುನಾವಣೆಯಲ್ಲಿ ಅವರು ಇತರೆ ಸಾಮಾನ್ಯ ಕಾರ್ಯಕರ್ತರಂತೆ ಪರಿಚಯಿಸಿಕೊಳ್ಳುವ ಅಗತ್ಯ ಬೀಳದೆ ಇರಬಹುದು. ಆದರೆ ನಂತರದ ಚುನಾವಣೆಗಳಲ್ಲಿ ಆತ ಅಥವಾ ಆಕೆ ಕೇವಲ ರಾಜಕಾರಣಿ. ಸಿನಿಮಾ ಖ್ಯಾತಿ, ಟಿವಿ ಆಂಕರ್ ಖ್ಯಾತಿ ಯಾವುದೂ ಲಾಭಕ್ಕೆ ಬರುವುದಿಲ್ಲ. ಅಧಿಕಾರಾವಧಿಯಲ್ಲಿ ಅವರ ನಡೆ, ನುಡಿ ಅಷ್ಟೇ ಮುಖ್ಯ.ಪಕ್ಷ ಅಥವಾ ಆಡಳಿತದಲ್ಲಿ ಮೇಲೇರಲು ಕೂಡಾ ಸಿನಿಮಾ ಜಗತ್ತಿನ ಜನಪ್ರಿಯತೆ ಸಹಾಯಕ್ಕೆ ಬರುವುದಿಲ್ಲ. ಉದಾಹರಣೆಗೆ ಅಂಬರೀಷ್ ಅಥವಾ ಸಿ.ಪಿ ಯೋಗೇಶ್ವರ ಮಂತ್ರಿ ಸ್ಥಾನ ಪಡೆದದ್ದು ಅವರು ಚಿತ್ರನಟರೆಂದಲ್ಲ. ಅದಕ್ಕೆ ಅವರ ಸೀನಿಯಾರಿಟಿ (ಅಂಬರೀಷ್) ಮತ್ತು ಪಕ್ಷಾಂತರ (ಯೋಗೇಶ್ವರ) ಕಾರಣಗಳಿದ್ದವು.

ಕರ್ನಾಟಕದಲ್ಲಿ ಚಿತ್ರನಟರು ಆಗಾಗ ರಾಜಕಾರಣ ಪ್ರವೇಶಿಸಿದ್ದುಂಟು. ಆದರೆ ಪಕ್ಕದ ರಾಜ್ಯಗಳಲ್ಲಿ ನಡೆದಿರುವಂತೆ ಯಾರೊಬ್ಬರೂ ಬಹುಕಾಲ ಅಧಿಕಾರದಲ್ಲಿಲ್ಲ. ಹಾಗೆ ಚುನಾವಣೆ ಎದುರಿಸಿ ಅಧಿಕಾರ ಹಿಡಿದವರು ತಮ್ಮ ಕ್ಷೇತ್ರದಲ್ಲಿ, ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ಪೂರೈಸಿದವರೂ ಅಲ್ಲ. ಉದಾಹರಣೆಗೆ ಅಂಬರೀಷ್. ತಾನು ಹಿರಿಯ, ಜನಪ್ರಿಯ ನಾಯಕ ಆದರೂ ಕೇಂದ್ರದಲ್ಲಿ ಮಂತ್ರಿ ಪಟ್ಟ ಕೊಟ್ಟಿಲ್ಲ ಎಂದು ಅಸಮಾಧಾನ ಪಟ್ಟುಕೊಂಡೇ ಇದ್ದವರು, ಮಂತ್ರಿಯಾದಾಗ ಮಾಡಿದ್ದೇನು – ರಾಜೀನಾಮೆಯ ನಾಟಕ. ಅವರು ಆ ಸಂದರ್ಭದಲ್ಲಿ ತಮ್ಮ ನಡೆ ನಾಟಕ ಅಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದು ನಾಟಕವೇ ಆಗಿತ್ತು ಎನ್ನಲು ಕಾರಣವೆಂದರೆ ಅವರು ರಾಜೀನಾಮೆಯನ್ನು ಅಂಗೀಕರಣವಾಗುವಂತೆ ನೋಡಿಕೊಳ್ಳಲೇ ಇಲ್ಲ. ತಾಂತ್ರಿಕವಾಗಿ ಮಂತ್ರಿ ಸ್ಥಾನದಲ್ಲಿ, ಸಂಸದರಾಗಿ ಮುಂದುವರಿದರು. ಯಾರಾದರೂ ಕೇಳಿದರೆ ನಾನಾಗಲೇ ರಾಜೀನಾಮೆ ಕೊಟ್ಟಾಗಿದೆ ಎನ್ನುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಬಂದರು. ನೀವು ರಾಜೀನಾಮೆ ನೀಡಿದ್ದೀರಲ್ಲ ಎಂದು ಪತ್ರಕರ್ತರು ಕೇಳಿದಾಗ ಒಂದಿಷ್ಟೂ ಭಿಡೆ ಇಲ್ಲದೆ ‘ನಾನಿನ್ನೂ ಸದಸ್ಯ, ಇಲ್ಲಿದೆ ನೋಡಿ ಐಡೆಂಟಿಟಿ ಕಾರ್ಡ್’ ಎಂದು ಕೆಮರಾ ಮುಂದೆ ಕೈ ತೋರಿದರು.

ಬಹಳ ಕಾಲ ರಾಜಕಾರಣದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡಿದವರಿಗೆ ಇಂತಹ ನಡೆವಳಿಕೆಗಳು ಬೇಸರ ಹುಟ್ಟಿಸುತ್ತವೆ. ಸಿನಿಮಾದವರು ಸೀರಿಯಸ್ಸಾಗಿ ರಾಜಕಾರಣ ಮಾಡುವುದು ಯಾವಾಗ? ಮತ್ತೊಬ್ಬ ನಟ ಶಶಿಕುಮಾರ್ ದೂ ಇದೇ ನಡವಳಿಕೆ. ಒಂದು ಚಿತ್ರದ ಶೂಟಿಂಗ್ ಗೆಂದು ಚಿತ್ರದುರ್ಗದ ಹತ್ತಿರ ಬಂದಿದ್ದ ಸಮಯದಲ್ಲಿಯೇ ಜೆ.ಎಚ್ ಪಟೇಲರು ಫೋನ್ ಮಾಡಿ ನೀನು ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸು ಎಂದರು. ಶಶಿಕುಮಾರ್ ನಾಮಪತ್ರ ಸಲ್ಲಿಸದರು. ಗೆದ್ದೂ ಬಿಟ್ಟರು. ಅಲ್ಲಿವರೆಗೆ ಆ ನಟ ಜೆಡಿ(ಯು) ಸೇರಿರಲಿಲ್ಲ. ಚಿತ್ರನಟನೆಂಬ ಖ್ಯಾತಿ ಮತ್ತು ಮೂರು ಬಾರಿ ಒಂದೇ ವ್ಯಕ್ತಿಯನ್ನು ಆರಿಸಿದ್ದ ಮತದಾರರು ಹೊಸಮುಖಕ್ಕೆ ಮಣೆ ಹಾಕಿದರು. ಮೇಲಾಗಿ ಜಾತಿಬೆಂಬಲವೂ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಚಿತ್ರನಟನಿಗೆ ಅದೇ ಖ್ಯಾತಿ ಉಳಿಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತರು. ಸಂಸದರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಖರ್ಚು ಮಾಡಿ ಅಲ್ಲಲ್ಲಿ ಸಮುದಾಯ ಭವನ ಕಟ್ಟಿಸಿ ಕಮಿಷನ್ ಪಡೆದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಚಿತ್ರದುರ್ಗದ ಜನತೆ ಅನುಭವಿಸುತ್ತಿರುವ ನೀರಾವರಿ ಸಮಸ್ಯೆ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ.

ಇನ್ನು ಜಗ್ಗೇಶ್. ಕಾಡಿಬೇಡಿ ಕಾಂಗ್ರೆಸ್ ಟಿಕೆಟ್ ಪಡೆದವರು, ಬೇಡಿ-ಕಾಡಿ ಗೆದ್ದರು. ಆದರೆ ಈ ಕಾಮಿಡಿ ನಟನಿಗೆ ಮತದಾರನ ಬಗ್ಗೆ ಗೌರವ ಇರಲಿಲ್ಲ. ಯಡಿಯೂರಪ್ಪ, ಅಶೋಕ್ ತಮ್ಮ ಕ್ಷೇತ್ರ ಉದ್ಧಾರ ಮಾಡ್ತಾರೆ ಅಂದ್ರು ಎನ್ನುವ ಕಾರಣಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಇಂತಹವರಿಂದ ಜನರು ತಾನೇ ಏನು ನಿರೀಕ್ಷಿಸಿಯಾರು? ಈಗ ರಮ್ಯ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಒಂದು ಪಕ್ಷದ ಕಾರ್ಯಕರ್ತೆ ಎಂದರೆ, ನಾಯಕಿ ಆದರೆ ಅಥವಾ ಜನಪ್ರತಿನಿಧಿ ಯಾದರೆ ದಿನದ ಬಹುಕಾಲ ಜನರ ಮಧ್ಯೆ ಇರಬೇಕು. ಹಿರಿಯ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷ ಸೋತರೆ ಹೊಣೆ ಹೊರಬೇಕು. ಮಗನ ಸ್ಕೂಲ್ ಅಡ್ಮಿಷನ್ ಶಿಫಾರಸ್ಸು ಕೇಳುವವರಿಂದ ಹಿಡಿದು, ರಸ್ತೆ ಮೂಲೆಯಲ್ಲಿ ಕಸದ ಗುಂಡಿ ಕ್ಲೀನ್ ಮಾಡಿಲ್ಲ ಎಂದು ದೂರುವವರನ್ನೂ ತಾಳ್ಮೆಯಿಂದ ಕೇಳಬೇಕು. ಏಕೆಂದರೆ ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ಕೊಟ್ಟಿದ್ದಾರೆ, ಅವರು ರಮ್ಯ ಅವರನ್ನು ಒಕ್ಕಲಿಗ ಡಾಮಿನೆಂಟ್ ಕ್ಷೇತ್ರದಲ್ಲಿ ಲೋಕಸಭೆಗೆ ನಿಲ್ಲಿಸುತ್ತಾರಂತೆ. ಬೆಂಗಳೂರಿನ ಯಾವುದೋ ಒಂದು ಕ್ಷೇತ್ರದಲ್ಲಿ ಮುಂದೆ ನಿಂತರೆ ಅಚ್ಚರಿಯೇನಿಲ್ಲ. (ಅವರು ಸದ್ಯ ಶಾಂತಿನಗರ ಬ್ಲಾಕ್ ಸದಸ್ಯೆ).

ರಾಜಕಾರಣ ರಜೆಕಾಲದಲ್ಲಿ ಹೋಗಿ ಬರುವ ರಮ್ಯತಾಣವಲ್ಲ. ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅಪೇಕ್ಷಿಸುವ ಕ್ಷೇತ್ರ. ರಮ್ಯ ಅವರಾದರೂ ಗಂಭೀರ ರಾಜಕಾರಣಿಯಾಗಲಿ.

ಮಾಧ್ಯಮಗಳು ಮತ್ತು ಭಾಷೆ

-ಡಾ. ಎನ್. ಜಗದೀಶ್ ಕೊಪ್ಪ

21 ನೇ ಶತಮಾನದಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಪತ್ರಿಕೆ, ರೇಡಿಯೊ, ದೃಶ್ಯಮಾಧ್ಯಮ ಮತ್ತು ಅಂತರ್ಜಾಲ ಇವೆಲ್ಲವೂ ಇಂದಿನ ನಾಗರಿಕ ಜಗತ್ತಿನ ಅವಿಭಾಜ್ಯ ಅಂಗಗಳಾಗಿವೆ. ಮಾಹಿತಿ ತಂತ್ರಜ್ಞಾನದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಮಾಹಿತಿಯ ಮಹಾಪೂರ ಮನೆಬಾಗಿಲಿಗೆ ಮಾತ್ರವಲ್ಲ, ಬೆರಳ ತುದಿಗೆ ಬಂದು ಕುಳಿತಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವೆ ಸಂವಹನ ಸೇತುವೆಯಾಗಿ ಕಾರ್‍ಯ ನಿರ್ವಹಿಸುತಿದ್ದ ರೇಡಿಯೊ, ಮತ್ತು ಪತ್ರಿಕೆಗಳ ವ್ಯಾಪ್ತಿ ವಿಸ್ತಾರಗೊಂಡಿದ್ದು ದೃಶ್ಯ ಮಾಧ್ಯಮ ಕೂಡ ಪ್ರಭಾವಿ ಮಾಧ್ಯಮವಾಗಿ ರೂಪುಗೊಂಡಿದೆ.

ಮಾಧ್ಯಮಗಳ ಮುಖ್ಯ ಗುರಿಯೇ ಸಂಹವನವಾಗಿರುವಾಗ ಅಲ್ಲಿ ಭಾಷೆಗೆ ಮಹತ್ವದ ಸ್ಥಾನವಿದೆ. ಅದು ಪತ್ರಿಕೆಯಾಗಿರಬಹುದು ಅಥವಾ ರೇಡಿಯೊ ಇಲ್ಲವೆ ದೃಶ್ಯಮಾಧ್ಯಮದ ಭಾಷೆಯಾಗಿರಬಹುದು. ಭಾರತ ಅಥವಾ ಕರ್ನಾಟಕದಂತಹ ಬಹು ಸಂಸ್ಕೃತಿಯ ನೆಲದಲ್ಲಿ ಪ್ರತಿ 25 ಕಿಲೊಮೀಟರ್ ವ್ಯಾಪ್ತಿಗೆ ಭಾಷೆಯ ಪ್ರಭೇದ ಬದಲಾಗುವುದನ್ನು ನಾವು ಕಾಣಬಹುದು. ಉತ್ತರ ಕರ್ನಾಟಕ ಭಾಷೆ, ದಕ್ಷಿಣ ಕರ್ನಾಟಕದ ಭಾಷೆ, ಕರಾವಳಿ ತೀರದ ಭಾಷೆ ಹೀಗೆ ಇವೆಲ್ಲವು ಕನ್ನಡ ಭಾಷೆಯಾಗಿದ್ದರೂ, ಆಯಾ ಪ್ರಾದೇಶಿಕ ಭಾಷೆಯ ಮೇಲೆ ಸ್ಥಳೀಯ ಅನ್ಯ ಭಾಷೆಗಳ ಪ್ರಭಾವ ಇದ್ದೇ ಇರುತ್ತದೆ,
ಮುಂಬೈ ಕರ್ನಾಟಕದಲ್ಲಿ ಮರಾಠಿ, ಹೈದರಾಬಾದ್ ಕರ್ನಾಟಕದಲ್ಲಿ ಉರ್ದು, ಕೋಲಾರ-ಬಳ್ಳಾರಿ ಪ್ರದೇಶಗಳಲ್ಲಿ ತೆಲುಗು ಭಾಷೆಯ ಪ್ರಭಾವವಿದೆ,

ಎಲ್ಲರಿಗೂ ಎಲ್ಲ ಪ್ರದೇಶಗಳಿಗೆ ಅನ್ವಯವಾಗುವ ಹಾಗೆ ಭಾಷೆಯನ್ನು ಬಳಸಬೇಕಾದ ನೈತಿಕ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಪತ್ರಿಕೆಗಳಲ್ಲಿ ಬಳಸುವ ಭಾಷೆಯಲ್ಲಿ ಆಡು ಭಾಷೆಯನ್ನು ಯಥಾವತ್ತಾಗಿ ಬಳಸಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಶುದ್ಧ ಸಾಹಿತ್ಯ ಭಾಷೆಯನ್ನೂ ಬಳಸಲಾಗದು. ಅತ್ಯಂತ ಸರಳವಾದ ಎಲ್ಲಾ ವರ್ಗದ ಜನರಿಗೆ ತಲುಪುವ ಭಾಷೆ ಯಾವಾಗಲೂ ಪತ್ರಿಕೆಯ ಜೀವಾಳ. ಈ ಅಂಶವನ್ನು ಸ್ವಾತಂತ್ರ ಪೂರ್ವದಿಂದಲೂ ಪತ್ರಿಕೆಗಳು ಪಾಲಿಸುತ್ತಾ ಬಂದಿವೆ. ಏಕೆಂದರೆ ಭಾಷೆಯೆಂಬುದು ಕೇವಲ ಸಂವಹನ ಕಲೆಯಷ್ಟೇ ಅಲ್ಲ, ಅದು ಭಾವಗಳ ಅಭಿವ್ಯಕ್ತಿಯ ಪ್ರಾಣ. ಪತ್ರಕರ್ತರು ಕೇವಲ ಸುದ್ಧಿಯನ್ನಷ್ಟೇ ಜಗತ್ತಿಗೆ ತಲುಪಿಸುವುದಿಲ್ಲ, ಅದರ ಜೊತೆ ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರೋಕ್ಷವಾಗಿ ತಳುಕು ಹಾಕಿಕೊಂಡಿದೆ. ಭಾಷೆಯ ಔಚಿತ್ಯ ಮೀರದೆ ಸಂವಹನ ಕಲೆಯಲ್ಲಿ ತೊಡಗಿಸಿಕೊಳ್ಳಬೇಕಾದ ಗುರುತರ ಹೊಣೆ ಪತ್ರಕರ್ತನ ಮೇಲಿದೆ.

ಕಳೆದ ಒಂದು ದಶಕದಲ್ಲಿ ಪತ್ರಿಕೆಗಳ ಭಾಷೆ ಮತ್ತು ತಲೆ ಬರಹಗಳನ್ನು ಗಮನಿಸಿದಾಗ ಪತ್ರಿಕೆಗಳಿಗೆ ಭಾಷೆಯ ಬಗ್ಗೆ ಇರುವ ಉದಾಸೀನತೆ ಎದ್ದು ಕಾಣುತ್ತದೆ. ತಲೆ ಬರಹಗಳು ಪ್ರಾಸಕ್ಕೆ, ಶಬ್ಧ ಚಮತ್ಕಾರಕ್ಕೆ ಜೋತು ಬಿದ್ದಿದ್ದು, ಇವೆಲ್ಲವೂ ಓದುಗರನ್ನು ಗೊಂದಲಕ್ಕೀಡು ಮಾಡುತ್ತಿವೆ.
ಈ ಸಂದರ್ಭದಲ್ಲಿ ಅಲ್ಲಮನ ವಚನದ ಸಾಲುಗಳು ನೆನಪಿಗೆ ಬರುತ್ತವೆ:

ಶಬ್ಧ ಸಂಭ್ರಮದಲ್ಲಿ ಹಿಂದುಗಾಣರು, ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ ಮೂರುಲೋಕವೆಲ್ಲಾ
ಬರು ಸೂರೆವೋಯಿತ್ತು ಗುಹೇಶ್ವರಾ

ನಾವು ಬಳಸುವ ಭಾಷೆಗೆ ಘನತೆಯಷ್ಟೇ ಮುಖ್ಯವಲ್ಲ. ಅದು ಔಚಿತ್ಯದ ಎಲ್ಲೆಯನ್ನು ಮೀರಬಾರದು. ಆದರೆ, ನಮ್ಮ ಮಾಧ್ಯಮಗಳಿಗೆ ಈ ಬಗ್ಗೆ ಪರಿವೆಯೇ ಇಲ್ಲ. ಭಾಷೆಯ ಮತ್ತು ಸಂವಹನ ಕುರಿತಂತೆ ವಿಷಾದದಿಂದ ಹೇಳಬೇಕಾದ ಸಂಗತಿಯೆಂದರೆ, ಆಧುನಿಕ ತಂತ್ರಜ್ಞಾನದಿಂದಾಗಿ ಭಾಷೆಗೆ ಇದ್ದ ಸಾಮರ್ಥ್ಯ ನಶಿಸಿಹೋಗುತ್ತಿದೆ, ಭಾಷೆ ಇಂದು ಮಾಹಿತಿ ಹಂಚುವ ವಾಹಕವಾಗಿ ಮಾತ್ರ ಕಾರ್‍ಯನಿರ್ವಹಿಸುತ್ತಿದೆ. ಇದರಿಂದಾಗಿ ಮಾತಿನ ರೂಪಕ ಸಾಧ್ಯತೆಗಳು ಅಳಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಭಾಷೆ ಎಂಬುದು ತೀರ ಮೇಲ್ಪದರದ, ಮಹತ್ವವಲ್ಲದ ವಿವರಗಳಿಗೆ, ಸಂಗತಿಗಳಿಗೆ ಸೀಮಿತವಾಗುವ ಸಾಧ್ಯತೆಗಳು ಉಂಟು. ಇಂದಿನ ದೃಶ್ಯ ಮಾಧ್ಯಮಗಳಲ್ಲಿ ಘಟಿಸುತ್ತಿರುವುದು ಕೂಡ ಇದೆ.

ದೃಶ್ಯ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಸುತ್ತಿರುವವರನ್ನು ಗಮನಿಸಿದರೆ, ಇವರೆಲ್ಲಾ ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ಬರುವ ಪ್ಯಾರನ ಸಂತತಿಯವರೆನೊ? ಎಂಬ ಸಂಶಯ ಮೂಡುತ್ತದೆ. ಕಾದಂಬರಿಯಲ್ಲಿ ನಾಯಕನ ಮನೆ ಆಳಾಗಿ ಕೆಲಸ ಮಾಡುವ ಪ್ಯಾರನಿಗೆ ನಾಯಕ ಹೇಳುತ್ತಾನೆ, “ಮರ ಹತ್ತಿ ನೋಡು ಜೇನು ನೊಣದ ಶಬ್ಧ ಎಲ್ಲಿಂದ ಬರುತ್ತಿದೆ,” ಎಂದು, ಮರ ಹತ್ತಿದ ಪ್ಯಾರ ಹೇಳುತ್ತಾನೆ, “ಕಾಣ್ತದೆ ಸಾರ್ ಆದರೆ ಕಾಣಕಿಲ್ಲ,” ಅಂತಾ. ಈ ಸಂದರ್ಭದಲ್ಲಿ ನಾಯಕ ಹೇಳುವುದು ಹೀಗೆ, “ಥೂ ನಿನ್ನ ಕನ್ನಡ ಭಾಷೇನ ಕುತ್ತಿಗೆ ಪಟ್ಟಿ ಹಿಡಿದು ದುಡಿಸಿಕೊಳ್ತಾ ಇರೋನು ನೀನೊಬ್ಬನೆ ನೋಡು,” ಎಂದು.

ಮಾಧ್ಯಮಗಳ ಮೂಲಕ ಇಡೀ ಜಗತ್ತನ್ನೇ ಬದಲಿಸಿ ಬಿಡಬಹುದೆಂಬ ಭ್ರಮೆಯಲ್ಲಿರುವ ಪತ್ರಕರ್ತ, ಮೊದಲು ಭಾಷೆಯ ಅಗಾಧತೆ ಮತ್ತು ಮಿತಿಯನ್ನು ಅರಿಯಬೇಕು. ಭಾಷೆ ಮತ್ತು ಮಾತಿನ ಇತಿ-ಮಿತಿ ಬಲ್ಲ ಅಲ್ಲಮ ತನ್ನ ವಚನದಲ್ಲಿ ಹೀಗೆ ಪ್ರಶ್ನಿಸುತ್ತಾನೆ:

ಘನತರದ ಚಿತ್ರ ಬರೆಯಬಹುದಲ್ಲದೆ
ಪ್ರಾಣದ ಚಿತ್ರವ ಬರೆಯಬಹುದೆ ಅಯ್ಯ ?

ನಾವು ಆನೆಯ ಚಿತ್ರ ಬರೆಯಬಹುದು ಅಷ್ಟೇ. ಮಾತಿನ ಮೂಲಕ ಅಥವಾ ಅಕ್ಷರದ ಮೂಲಕ ಅದರ ಪ್ರಾಣವ ಸೃಷ್ಟಿಸಲಾರೆವು. ಇಂತಹ ಎಚ್ಚರಿಕೆ ಇದ್ದಾಗ ಮಾತ್ರ ಭಾಷೆ ತನ್ನಷ್ಟಕೆ ತಾನು ವಿಸ್ತರಿಸುತ್ತಾ ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಪತ್ರಿಕೆಗಿಂತ ಆಕಾಶವಾಣಿ ಮತ್ತು ದೃಶ್ಯಮಾಧ್ಯಮಗಳು ತಾವು ಬಳಸುವ ಭಾಷೆಯಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಪತ್ರಿಕೆಗಳು ಕೇವಲ ಅಕ್ಷರ ಬಲ್ಲವರಿಗೆ ಸೀಮಿತವಾಗಿರುತ್ತವೆ. ಆದರೆ ಆಕಾಶವಾಣಿ ಹಾಗು ದೃಶ್ಯಮಾಧ್ಯಮಗಳು ಅನಕ್ಷರಸ್ತರಿಗೂ ತಲುಪಬಲ್ಲ ಮಾಧ್ಯಮಗಳು. ವಾಷಿಂಗ್ಟನ್‌ನಲ್ಲಿ  ಬಾಂಬ್ ಸ್ಪೋಟ ಎಂದರೆ ಅನಕ್ಷರಸ್ತ ಏನೆಂದು ಗ್ರಹಿಸಬೇಕು? ವಾಷಿಂಗ್ಟನ್ ಅಂದರೆ, ಮನೆಯೆ? ಕಾರೆ? ಅಥವಾ ಹಡಗೆ? ಇಂತಹ ಪ್ರಶ್ನೆಗಳು ಅನಕ್ಷರಸ್ತ ಕೇಳುಗ ಅಥವಾ ವೀಕ್ಷಕನಲ್ಲಿ ಏಳುವುದು ಸಹಜ. ವಾಷಿಂಗ್ಟನ್ ನಗರ ಎಂದು ಬಳಸವ ಎಚ್ಚರಿಕೆ ಈ ಮಾಧ್ಯಮಗಳಲ್ಲಿ ಇರಬೇಕು.ಈ ಕಾರಣಕ್ಕಾಗಿಯೇ ರೇಡಿಯೊ ಮತ್ತು ದೃಶ್ಯ ಮಾಧ್ಯವಗಳು ಸಾಧ್ಯವಾದಷ್ಟು ಸರಳ ಕನ್ನಡ ಭಾಷೆಯನ್ನು ಅಪೇಕ್ಷಿಸುತ್ತವೆ.

ಇನ್ನು ಮೆಟ್ರೋ ನಗರಗಳಲ್ಲಿ ನಾಯಿ ಕೊಡೆಯಂತೆ ತಲೆಯೆತ್ತಿರುವ ಎಫ್.ಎಂ. ಛಾನಲ್‌ಗಳು ಬಳಸುವ ಭಾಷೆಯ ಬಗ್ಗೆ ಒಂದು ಸಂಶೋಧನೆಯನ್ನು ಮಾಡಬಹುದು.ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಯುವಕ, ಯುವತಿಯರನ್ನು ಕರೆತಂದು, ಇವರ ಮಾತೃಭಾಷೆ ಕನ್ನಡವೆಂಬ ಏಕೈಕ ಕಾಣಕ್ಕೆ ರೇಡಿಯೊ ಜಾಕಿಗಳನ್ನಾಗಿ ಮಾಡಿದ್ದಾರೆ.ಇವರ ಬಾಯಲ್ಲಿ ಉದುರುವ ಕನ್ನಡದ ಆಣಿಮುತ್ತುಗಳನ್ನು ವರನಟ ಡಾ.ರಾಜಕುಮಾರ್ ಈಗ ಬದುಕಿದ್ದು ಕೇಳಿದ್ದರೆ, ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳುತಿದ್ದರು. ಇವರ ಕನ್ನಡ ಭಾಷೆಯ ನಡುವೆ ಇಂಗ್ಲೀಷ್ ನುಸುಳಿದ್ದರೆ ಸಹಿಸಬಹುದಿತ್ತು. ಆದರೆ ಇವರ ಕನ್ನಡ ಎಫ್.ಎಂ ಛಾನಲ್‌ಗಳಲ್ಲಿ ಇಂಗ್ಲೀಷ್ ಭಾಷೆಯದೇ ಪಾರುಪತ್ಯ.. ಇದು ನಮ್ಮ ಮಾಧ್ಯಮಗಳ ದುರಂತ.

ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ ಅದು ಇಂದಿನ ವಿಶ್ವದ ಪರಮ ಸೃಷ್ಟಿಗಳಲ್ಲಿ ಒಂದು. ಮಾನವ ತನ್ನ ಭಾವನೆಗಳ ಅಭಿವ್ಯಕ್ತಿಗೆ ಕಂಡುಕೊಂಡ ಅನನ್ಯ ಮಾರ್ಗ. ಭಾಷೆಗೆ ಬಡವ-ಬಲ್ಲಿದ ಎಂಬ ಬೇಧ ಭಾವ ಇಲ್ಲ, ಭಾಷೆ ಜಗತ್ತಿನ ಭೌತಿಕ ವಸ್ತುಗಳಂತೆ ನಾಶವಾಗುವಂತಹದಲ್ಲ. ಅದು ಮನುಷ್ಯ ಮತ್ತು ಸಂಸ್ಕೃತಿಯೊಂದಿಗೆ ವಿಕಾಸಗೊಳ್ಳುತ್ತಾ ಮುಂದುವರಿಯುವಂತಹದ್ದು. ಭಾಷೆ ಯಾವುದೇ ಆಗಿರಲಿ ಅದರ ಲಕ್ಷಣವೆಂದರೆ ಇತರೆ ಭಾಷೆಗಳನ್ನು ತನ್ನೊಳಗೆ ವಿಲೀನಗೊಳಿಸುತ್ತಾ, ತನ್ನಲ್ಲಿರುವ ಅಂಶಗಳನ್ನು ಇತರೆ ಭಾಷೆಗೆ ಧಾರೆ ಎರೆಯುತ್ತಾ ಹೋಗುತ್ತದೆ.

ವರ್ತಮಾವದ ನೋವಿನ ಸಂಗತಿಯೆಂದರೆ, ಇಂದು ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಪದವಿ ಕಾಲೇಜುಗಳಲ್ಲಿ ಮತ್ತು 15ಕ್ಕೂ ಹೆಚ್ಚು ವಿ.ವಿ. ಹಾಗೂ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಪತ್ರಿಕೋದ್ಯಮ ಬೋಧಿಸಲ್ಪಡುತ್ತಿದೆ. ಆದರೆ  ಮಾಧ್ಯಮಗಳಲ್ಲಿ ಭಾಷೆ ಬಳಕೆ  ಕುರಿತಂತೆ ಯಾವುದೇ ಪಠ್ಯಗಳಿಲ್ಲ. ಇಂಗ್ಲೀಷ್ ಭಾಷೆ ಬಳಕೆ ಕುರಿತಂತೆ ವ್ಯಾಕರಣ, ಶಬ್ಧದೋಷ ಕುರಿತು ಏನೆಲ್ಲಾ ಬೋಧನಾ ಮಾದರಿಗಳು ಇರುವಾಗ ಕನ್ನಡದಲ್ಲಿ ಏಕಿಲ್ಲ?  ಏಕೆಂದರೆ ಯಾರೂ ಯೋಚಿಸಲೇ ಇಲ್ಲ. ಜಾಗತೀಕರಣದ ಅವಸರದ ಇಂದಿನ ಯುಗದಲ್ಲಿ ಎಲ್ಲವೂ ಆ ಕ್ಷಣದಲ್ಲಿ ತಯಾರಾಗಿ ಉಣ ಬಡಿಸುವ ಆಹಾರದಂತಿದೆ.

ಭಾಷೆ ಬಳಕೆ ಕುರಿತಂತೆ ತಜ್ಣರಾದ ಡಾ. ಕೆ.ವಿ. ನಾರಾಯಣರವರ ಮಾತುಗಳು ಇಲ್ಲಿ ಪ್ರಸ್ತುತ. ಭಾಷೆ ಕುರಿತಂತೆ ಸಾಮಾನ್ಯ ಜನರ ಅರಿವಿನಲ್ಲಿ ಹಲವು ಕೊರತೆಗಳಿವೆ. ಇಂತಹ ಅಪಕಲ್ಪನೆಗಳು ವ್ಯಕ್ತಿಗತ ಹಂತದಿಂದ ಹಿಡಿದು ಸಾಮುದಾಯಿಕ ನೆಲೆಯಲ್ಲೂ ಕೂಡ ಇರುತ್ತದೆ. ಭಾಷೆಯ ಶುದ್ಧತೆಯ ಪರಿಕಲ್ಪನೆ ಎಂದರೆ, ಮಾತನಾಡುವಾಗ ಇಲ್ಲವೆ ಬರೆಯುವಾಗ ಅದರ ಶುದ್ಧ ರೂಪದಲ್ಲಿ ಬಳಸಬೇಕು ಎಂಬುದು ಎಲ್ಲಾ ಕಾಲದಲ್ಲೂ ಎದ್ದು ಕಾಣುವ ನಿಲುವು.

ಭಾಷೆ ಮತ್ತು ಸಂವಹನ ಕುರಿತು ಹೇಳುವುದಾದರೆ ಆಧುನಿಕ ತಂತ್ರ ಜ್ಞಾನದಿಂದಾಗಿ ಭಾಷೆಗೆ ಇದ್ದ ಸಾಮರ್ಥ್ಯ ನಶಿಸಿ ಹೋಗುತ್ತಿದೆ. ಭಾಷೆ ಇಂದು ಮಾಹಿತಿ ಹಂಚುವ ವಾಹಕವಾಗಿ ಬಳಕೆಯಾಗುತಿದ್ದು, ಮಾತಿನ ರೂಪಕದ ಸಾಧ್ಯತಗಳನ್ನು ನಾಶಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷೆ ತೀರ ಮೇಲು ಪದರದ, ಮಹತ್ವವಲ್ಲದ ಸಂಗತಿಗಳಿಗೆ ಸೀಮಿತವಾಗುತ್ತದೆ. ಇಂದು ಮಾಧ್ಯಮಗಳಲ್ಲಿ ಜರುಗುತ್ತಿರುವುದು ಇದೇ ದುರಂತ.

ಭಾಷೆ ಕುರಿತಂತೆ ಹೈದರಾಬಾದ್ ವಿಶ್ವ ವಿದ್ಯಾಲಯದ ಮಾಜಿ ಉಪ ಕುಲಪತಿ ಭ.ಕೃಷ್ಣಮೂರ್ತಿ ಹಲವು ಮಹತ್ವದ ಸಂಗತಿಗಳನ್ನ ಚರ್ಚಿಸಿದ್ದಾರೆ. ಅವು ಈ ಕೆಳಗಿನಂತಿವೆ:

  1. ನಾವು ಆದಿವಾಸಿ ಅಥವಾ ಅನಾಗರೀಕ ಎಂದು ಕರೆಯಬಹುದಾದ ಸಮಾಜಗಳಿವೆಯೇ ಹೊರತು ಯಾವುದೇ ಭಾಷೆಯನ್ನು ಅಪೂರ್ಣ ಎಂದು ಕರೆಯಲಾಗುವುದಿಲ್ಲ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಮನುಷ್ಯ ಜಾತಿಯಲ್ಲಿ ನಡೆಯುವ ಯಾವುದೇ ಸಂವಹನ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಅಗತ್ಯವಾದ ರಚನೆಯನ್ನು ಪಡೆದಿವೆ.
  2. ಭಾಷೆಯು ಒಂದು ಸಂವಹನ ಮಾಧ್ಯಮ ಮಾತ್ರವಲ್ಲ, ಅದೊಂದು ಸಾಂಸ್ಕೃತಿಕ ಸಂಸ್ಥೆ. ಅದು ತನ್ನನ್ನು ಬಳಸುವ ಜನರ ಸಾಮಾಜಿಕ, ಭಾವನಾತ್ಮಕ ಹಾಗು ಬೌದ್ಧಿಕ ಬದುಕಿನ ಅವಿಭಾಜ್ಯ ಅಂಗ.
  3. ಪ್ರತಿಯೊಂದು ಭಾಷೆ ಕೂಡ ಹೊಸ ಹೊಸ ಕ್ಷೇತ್ರಗಳಲ್ಲಿ ಸೂಕ್ತವಾದ ಸಾಂದರ್ಭಿಕ ಭಾಷೆಗಳನ್ನು ಬಳಸಿಕೊಳ್ಳಬಹುದು. ಅಂದರೆ, ಅಗತ್ಯವಾದ ಶೈಲಿ ಮತ್ತು ಪರಿಭಾಷೆಯನ್ನು ರೂಪಿಸಿಕೊಳ್ಳುವ ಶಕ್ತಿ ಭಾಷೆಗೆ ಇರುತ್ತದೆ.
  4. ಭಾಷೆಯೊಂದರ ಜೀವಂತತೆ ಮತ್ತು ಅಭಿವೃದ್ಧಿ, ಭಾಷೆಯನ್ನು ಎಷ್ಟು ವಿಭಿನ್ನ ಕ್ಷೇತ್ರಗಳಲ್ಲಿ ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಬಳಸಲಾಯಿತು ಎಂಬುದರ ಮೇಲೆ ನಿರ್ಧಾರವಾಗುತ್ತದೆ.
  5. ಮಾತೃಭಾಷೆ ಹೊರತು ಪಡಿಸಿ ಜಗತ್ತಿನ ಯಾವ ದೇಶದಲ್ಲೂ ಕೇವಲ ವಿದೇಶಿ ಭಾಷೆಯೊಂದನ್ನು ಶಿಕ್ಷಣ ಮಾಧ್ಯಮವಾಗಿ ಹೊಂದಿದ್ದು ಆರ್ಥಿಕವಾಗಿ ಮತ್ತು  ಕೈಗಾರಿಕ ಪ್ರಗತಿ ಸಾಧಿಸಿರುವುದಕ್ಕೆ ಸಾಕ್ಷಿಗಳು ದೊರೆಯುವುದಿಲ್ಲ.

ದಶಕದ ಹಿಂದೆ ಮಾರ್ಷಲ್ ಮೆಕ್ಲು ಹಾನ್ ಹುಟ್ಟು ಹಾಕಿದ ಜಗತ್ತೇ ಒಂದು ಹಳ್ಳಿ ಎಂಬ ಪರಿಕಲ್ಪನೆಯಲ್ಲಿ ವಾಸ್ತವದ ಹೆಸರಿನಲ್ಲಿ ಭ್ರಮೆಗಳನ್ನು ಹುಟ್ಟು ಹಾಕುವ ಸ್ಥಿತಿಗೆ ಮಾಧ್ಯಮಗಳು ದೂಡಲ್ಪಟ್ಟಿವೆ. ಇವತ್ತಿನ ಮೊಬೈಲ್ ಹಾಗು ಅಂತರ್ಜಾಲಗಳಲ್ಲಿ ಹರಿದಾಡುತ್ತಿರುವ ಕ್ಷಿಪ್ರ ಸಂದೇಶಗಳಲ್ಲಿ ಇಂಗ್ಲೀಷ್ ಭಾಷೆ ಹೇಗೆ ಕೊಲೆಯಾಗುತ್ತಿದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಸಾಕು.

ಮಾತಿನ ರೂಪವನ್ನು ಬರಹಕ್ಕಾಗಲಿ ಅಥವಾ ನಿರ್ಧಿಷ್ಟ ಭಾಷೆಯೊಂದರ ಸಾಹಿತ್ಯ ರಚನೆ ಮಾಡುವಾಗ ಈ ಪ್ರಕ್ರಿಯೆಯ ಹಿಂದೆ ಸೃಜನಶೀಲತೆ ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. ಇಂತಹ ಪ್ರಜ್ಞೆಯೊಂದನ್ನು ಮರೆತರೆ, ಯಾವ ಪತ್ರಕರ್ತ ಅಥವಾ ಮಾಧ್ಯಮ ಬೆಳೆಯಲಾರದು. ಏಕೆಂದರೆ ವ್ಯಕ್ತಿ ಲೇಖಕನಾಗಿರಲಿ, ಕವಿಯಾಗಿರಲಿ, ಪತ್ರಕರ್ತನಾಗಿರಲಿ, ಭಾಷೆಯೊಂದನ್ನ ಸಂವಹನವಾಗಿ ಬಳಸುವುದರ ಜೊತೆಗೆ ಬೆಳೆಸುವುದು ಸಹ ಅವನ ಸಾಂಸ್ಕೃತಿಕ ಹೊಣೆಗಾರಿಯಾಗಿರುತ್ತದೆ.

ಕಂಬಾರರಿಗೆ ಜ್ಞಾನಪೀಠ

ಕನ್ನಡವೂ ಸೇರಿದಂತೆ ಒಟ್ಟು ಭಾರತೀಯ ಸಮಾಜದ ಬಹು ಸಂಖ್ಯಾತ ಅಂಚಿನ ಸಮುದಾಯ ತನ್ನ ಸೃಜನಶೀಲತೆ, ಪ್ರತಿರೋಧಕ ಶಕ್ತಿ, ಸತ್ವವನ್ನು ಕಳೆದುಕೊಂಡು ದಿಕ್ಕು ಕಾಣದ ಸ್ಥಿತಿಯಲ್ಲಿರುವ ಹೊತ್ತಿದು. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಆಂತರಿಕ ಪುರೋಹಿತಶಾಹಿ ಹಾಗೂ ಬಾಹ್ಯ ವಸಾಹತುಶಾಹಿಗೆ ಪ್ರತಿಲೋಮತೆಯನ್ನು ಬಹುಜನರ ಅಂಚಿನ ಸಂಸ್ಖೃತಿಯಲ್ಲಿ ಕಂಡು, ತಂದು ತಮ್ಮ ಬರಹಗಳಲ್ಲಿ ಮುಖ್ಯವಾಗಿ ನೆಲೆಗೊಳಿಸಿದ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಿಜಕ್ಕೂ ಸಂತೋಷದಾಯಕ. ಈ ಪ್ರಶಸ್ತಿ ಅಂಚಿನ ಸಮುದಾಯದಿಂದ ಬಂದ ಮೊದಲ ಕನ್ನಡದ ಮುಖ್ಯ ಲೇಖಕರಾದ ಕುವೆಂಪುವಿನ ನಂತರ ಕಂಬಾರರಿಗೆ ಬಂದಿರುವುದು ಆಕಸ್ಮಿಕವೇನಲ್ಲ. ಈ ಪ್ರಶಸ್ತಿ ಕಂಬಾರರನ್ನು ಕುವೆಂಪುವಿನ ನಂತರ ಆ ಸಮುದಾಯದ ವಾರಸುದಾರರನ್ನಾಗಿಸಿದೆ. ಕುವೆಂಪು ಮತ್ತು ಕಂಬಾರರಿಬ್ಬರೂ ಅಂಚಿನ ಸಂಸ್ಕೃತಿಯ ಚಿಂತಕರೂ ಹೌದು.

ಕುವೆಂಪು ಅವರು ಪ್ರಧಾನ ಕಥನಮಾತೃಕೆ ಮರೆಮಾಚಿದ ಅಂಚಿನ ಸಮುದಾಯದ ಸೃಜನಶೀಲ ಧಾರೆಯನ್ನು ಸತ್ವವನ್ನೂ ಪತ್ತೆ ಹಚ್ಚಿ ಪ್ರಧಾನ ಮಾತೃಕೆಯೊಂದಿಗೆ ಸಾರ್ಥಕ ಸಂಘರ್ಷವನ್ನುಏರ್ಪಡಿಸಿದವರು. ಕಂಬಾರರು ಅಂಚಿನ ಸಮುದಾಯದ ಜೀವಂತ ಕಥನವನ್ನೇ ಆಶ್ರಯಿಸಿ ಪ್ರತಿರೋಧ ಒಡ್ಡಿದವರು. ಕುವೆಂಪು ಬಹುಸಂಖ್ಯಾತ ಸಮುದಾಯದ ಸಿದ್ಧಾಂತಿಯಾದರೆ ಕಂಬಾರರು ವಕ್ತಾರರಾಗಿದ್ದಾರೆ ಎನ್ನಬಹುದು.

ಕಂಬಾರರ ಕಾವ್ಯ ದೇಶೀ ಭಾಷೆ ಮತ್ತು ವಸ್ತುವನ್ನು ಪ್ರಧಾನವಾಗಿ ಆಶ್ರಯಿಸಿದೆ. ಹಾಗೆಂದ ಮಾತ್ರಕ್ಕೆ ಕಂಬಾರರು ದೇಶೀ ಸಂಸ್ಕೃತಿ ಒಳಗಿನ ಲೋಪಗಳನ್ನು ಒಪ್ಪಿದವರಲ್ಲ. ಅವರ ಕಾವ್ಯ ನಮ್ಮ ಸಮಾಜದ ಪಾಳೇಗಾರಿಕೆ ಪುರೋಹಿತಶಾಹಿಯನ್ನು ಪ್ರಬಲವಾಗಿ ವಿರೋಧಿಸಿದೆ. ಅದಕ್ಕೆ ಬದಲಾಗಿ ಬಹುಸಂಖ್ಯಾತ ಕಥಾ ಪ್ರಭುತ್ವವಾಗದಿ ನೆಲೆಯನ್ನು ಎತ್ತಿ ಹಿಡಿದಿದೆ. ಇದಕ್ಕೂ ಮುಖ್ಯವಾಗಿ ಕಂಬಾರರ ಕಾವ್ಯ ಎಂದೂ ಜೀವಪರವಾಗಿದೆ. ಯಾಕೆಂದರೆ ನವ್ಯ ಭರಾಟೆಯ ಹೊತ್ತಿನಲ್ಲೇ ಕಾವ್ಯ ಬರೆಯಲು ಆರಂಭಿಸಿದ ಕಂಬಾರರು ಕಾಮದಂತಹ ವಿಷಯವನ್ನು ಸಮಷ್ಟಿಯ ಸಮಚಿತ್ತದೊಡನೆ ವ್ಯಷ್ಟಿಯ ಮಹತ್ವವನ್ನೂ ಪರಿಗಣಿಸಿ ಸಮ್ಮಿಲನಗೊಳಿಸಿದವರು. ಇಂತಹ ಜೀವಪರತೆಯೇ ಕನ್ನಡ ಸಮಾಜದ ಎಲ್ಲಾ ಕಾಲದ ಜೀವಪರತೆಯೂ ಹೌದು.

– ನಂದೀಶ್ ಹಂಚೆ