ಮಾಧ್ಯಮಗಳು ಮತ್ತು ಭಾಷೆ

-ಡಾ. ಎನ್. ಜಗದೀಶ್ ಕೊಪ್ಪ

21 ನೇ ಶತಮಾನದಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಪತ್ರಿಕೆ, ರೇಡಿಯೊ, ದೃಶ್ಯಮಾಧ್ಯಮ ಮತ್ತು ಅಂತರ್ಜಾಲ ಇವೆಲ್ಲವೂ ಇಂದಿನ ನಾಗರಿಕ ಜಗತ್ತಿನ ಅವಿಭಾಜ್ಯ ಅಂಗಗಳಾಗಿವೆ. ಮಾಹಿತಿ ತಂತ್ರಜ್ಞಾನದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಮಾಹಿತಿಯ ಮಹಾಪೂರ ಮನೆಬಾಗಿಲಿಗೆ ಮಾತ್ರವಲ್ಲ, ಬೆರಳ ತುದಿಗೆ ಬಂದು ಕುಳಿತಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವೆ ಸಂವಹನ ಸೇತುವೆಯಾಗಿ ಕಾರ್‍ಯ ನಿರ್ವಹಿಸುತಿದ್ದ ರೇಡಿಯೊ, ಮತ್ತು ಪತ್ರಿಕೆಗಳ ವ್ಯಾಪ್ತಿ ವಿಸ್ತಾರಗೊಂಡಿದ್ದು ದೃಶ್ಯ ಮಾಧ್ಯಮ ಕೂಡ ಪ್ರಭಾವಿ ಮಾಧ್ಯಮವಾಗಿ ರೂಪುಗೊಂಡಿದೆ.

ಮಾಧ್ಯಮಗಳ ಮುಖ್ಯ ಗುರಿಯೇ ಸಂಹವನವಾಗಿರುವಾಗ ಅಲ್ಲಿ ಭಾಷೆಗೆ ಮಹತ್ವದ ಸ್ಥಾನವಿದೆ. ಅದು ಪತ್ರಿಕೆಯಾಗಿರಬಹುದು ಅಥವಾ ರೇಡಿಯೊ ಇಲ್ಲವೆ ದೃಶ್ಯಮಾಧ್ಯಮದ ಭಾಷೆಯಾಗಿರಬಹುದು. ಭಾರತ ಅಥವಾ ಕರ್ನಾಟಕದಂತಹ ಬಹು ಸಂಸ್ಕೃತಿಯ ನೆಲದಲ್ಲಿ ಪ್ರತಿ 25 ಕಿಲೊಮೀಟರ್ ವ್ಯಾಪ್ತಿಗೆ ಭಾಷೆಯ ಪ್ರಭೇದ ಬದಲಾಗುವುದನ್ನು ನಾವು ಕಾಣಬಹುದು. ಉತ್ತರ ಕರ್ನಾಟಕ ಭಾಷೆ, ದಕ್ಷಿಣ ಕರ್ನಾಟಕದ ಭಾಷೆ, ಕರಾವಳಿ ತೀರದ ಭಾಷೆ ಹೀಗೆ ಇವೆಲ್ಲವು ಕನ್ನಡ ಭಾಷೆಯಾಗಿದ್ದರೂ, ಆಯಾ ಪ್ರಾದೇಶಿಕ ಭಾಷೆಯ ಮೇಲೆ ಸ್ಥಳೀಯ ಅನ್ಯ ಭಾಷೆಗಳ ಪ್ರಭಾವ ಇದ್ದೇ ಇರುತ್ತದೆ,
ಮುಂಬೈ ಕರ್ನಾಟಕದಲ್ಲಿ ಮರಾಠಿ, ಹೈದರಾಬಾದ್ ಕರ್ನಾಟಕದಲ್ಲಿ ಉರ್ದು, ಕೋಲಾರ-ಬಳ್ಳಾರಿ ಪ್ರದೇಶಗಳಲ್ಲಿ ತೆಲುಗು ಭಾಷೆಯ ಪ್ರಭಾವವಿದೆ,

ಎಲ್ಲರಿಗೂ ಎಲ್ಲ ಪ್ರದೇಶಗಳಿಗೆ ಅನ್ವಯವಾಗುವ ಹಾಗೆ ಭಾಷೆಯನ್ನು ಬಳಸಬೇಕಾದ ನೈತಿಕ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಪತ್ರಿಕೆಗಳಲ್ಲಿ ಬಳಸುವ ಭಾಷೆಯಲ್ಲಿ ಆಡು ಭಾಷೆಯನ್ನು ಯಥಾವತ್ತಾಗಿ ಬಳಸಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಶುದ್ಧ ಸಾಹಿತ್ಯ ಭಾಷೆಯನ್ನೂ ಬಳಸಲಾಗದು. ಅತ್ಯಂತ ಸರಳವಾದ ಎಲ್ಲಾ ವರ್ಗದ ಜನರಿಗೆ ತಲುಪುವ ಭಾಷೆ ಯಾವಾಗಲೂ ಪತ್ರಿಕೆಯ ಜೀವಾಳ. ಈ ಅಂಶವನ್ನು ಸ್ವಾತಂತ್ರ ಪೂರ್ವದಿಂದಲೂ ಪತ್ರಿಕೆಗಳು ಪಾಲಿಸುತ್ತಾ ಬಂದಿವೆ. ಏಕೆಂದರೆ ಭಾಷೆಯೆಂಬುದು ಕೇವಲ ಸಂವಹನ ಕಲೆಯಷ್ಟೇ ಅಲ್ಲ, ಅದು ಭಾವಗಳ ಅಭಿವ್ಯಕ್ತಿಯ ಪ್ರಾಣ. ಪತ್ರಕರ್ತರು ಕೇವಲ ಸುದ್ಧಿಯನ್ನಷ್ಟೇ ಜಗತ್ತಿಗೆ ತಲುಪಿಸುವುದಿಲ್ಲ, ಅದರ ಜೊತೆ ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರೋಕ್ಷವಾಗಿ ತಳುಕು ಹಾಕಿಕೊಂಡಿದೆ. ಭಾಷೆಯ ಔಚಿತ್ಯ ಮೀರದೆ ಸಂವಹನ ಕಲೆಯಲ್ಲಿ ತೊಡಗಿಸಿಕೊಳ್ಳಬೇಕಾದ ಗುರುತರ ಹೊಣೆ ಪತ್ರಕರ್ತನ ಮೇಲಿದೆ.

ಕಳೆದ ಒಂದು ದಶಕದಲ್ಲಿ ಪತ್ರಿಕೆಗಳ ಭಾಷೆ ಮತ್ತು ತಲೆ ಬರಹಗಳನ್ನು ಗಮನಿಸಿದಾಗ ಪತ್ರಿಕೆಗಳಿಗೆ ಭಾಷೆಯ ಬಗ್ಗೆ ಇರುವ ಉದಾಸೀನತೆ ಎದ್ದು ಕಾಣುತ್ತದೆ. ತಲೆ ಬರಹಗಳು ಪ್ರಾಸಕ್ಕೆ, ಶಬ್ಧ ಚಮತ್ಕಾರಕ್ಕೆ ಜೋತು ಬಿದ್ದಿದ್ದು, ಇವೆಲ್ಲವೂ ಓದುಗರನ್ನು ಗೊಂದಲಕ್ಕೀಡು ಮಾಡುತ್ತಿವೆ.
ಈ ಸಂದರ್ಭದಲ್ಲಿ ಅಲ್ಲಮನ ವಚನದ ಸಾಲುಗಳು ನೆನಪಿಗೆ ಬರುತ್ತವೆ:

ಶಬ್ಧ ಸಂಭ್ರಮದಲ್ಲಿ ಹಿಂದುಗಾಣರು, ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ ಮೂರುಲೋಕವೆಲ್ಲಾ
ಬರು ಸೂರೆವೋಯಿತ್ತು ಗುಹೇಶ್ವರಾ

ನಾವು ಬಳಸುವ ಭಾಷೆಗೆ ಘನತೆಯಷ್ಟೇ ಮುಖ್ಯವಲ್ಲ. ಅದು ಔಚಿತ್ಯದ ಎಲ್ಲೆಯನ್ನು ಮೀರಬಾರದು. ಆದರೆ, ನಮ್ಮ ಮಾಧ್ಯಮಗಳಿಗೆ ಈ ಬಗ್ಗೆ ಪರಿವೆಯೇ ಇಲ್ಲ. ಭಾಷೆಯ ಮತ್ತು ಸಂವಹನ ಕುರಿತಂತೆ ವಿಷಾದದಿಂದ ಹೇಳಬೇಕಾದ ಸಂಗತಿಯೆಂದರೆ, ಆಧುನಿಕ ತಂತ್ರಜ್ಞಾನದಿಂದಾಗಿ ಭಾಷೆಗೆ ಇದ್ದ ಸಾಮರ್ಥ್ಯ ನಶಿಸಿಹೋಗುತ್ತಿದೆ, ಭಾಷೆ ಇಂದು ಮಾಹಿತಿ ಹಂಚುವ ವಾಹಕವಾಗಿ ಮಾತ್ರ ಕಾರ್‍ಯನಿರ್ವಹಿಸುತ್ತಿದೆ. ಇದರಿಂದಾಗಿ ಮಾತಿನ ರೂಪಕ ಸಾಧ್ಯತೆಗಳು ಅಳಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಭಾಷೆ ಎಂಬುದು ತೀರ ಮೇಲ್ಪದರದ, ಮಹತ್ವವಲ್ಲದ ವಿವರಗಳಿಗೆ, ಸಂಗತಿಗಳಿಗೆ ಸೀಮಿತವಾಗುವ ಸಾಧ್ಯತೆಗಳು ಉಂಟು. ಇಂದಿನ ದೃಶ್ಯ ಮಾಧ್ಯಮಗಳಲ್ಲಿ ಘಟಿಸುತ್ತಿರುವುದು ಕೂಡ ಇದೆ.

ದೃಶ್ಯ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಸುತ್ತಿರುವವರನ್ನು ಗಮನಿಸಿದರೆ, ಇವರೆಲ್ಲಾ ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ಬರುವ ಪ್ಯಾರನ ಸಂತತಿಯವರೆನೊ? ಎಂಬ ಸಂಶಯ ಮೂಡುತ್ತದೆ. ಕಾದಂಬರಿಯಲ್ಲಿ ನಾಯಕನ ಮನೆ ಆಳಾಗಿ ಕೆಲಸ ಮಾಡುವ ಪ್ಯಾರನಿಗೆ ನಾಯಕ ಹೇಳುತ್ತಾನೆ, “ಮರ ಹತ್ತಿ ನೋಡು ಜೇನು ನೊಣದ ಶಬ್ಧ ಎಲ್ಲಿಂದ ಬರುತ್ತಿದೆ,” ಎಂದು, ಮರ ಹತ್ತಿದ ಪ್ಯಾರ ಹೇಳುತ್ತಾನೆ, “ಕಾಣ್ತದೆ ಸಾರ್ ಆದರೆ ಕಾಣಕಿಲ್ಲ,” ಅಂತಾ. ಈ ಸಂದರ್ಭದಲ್ಲಿ ನಾಯಕ ಹೇಳುವುದು ಹೀಗೆ, “ಥೂ ನಿನ್ನ ಕನ್ನಡ ಭಾಷೇನ ಕುತ್ತಿಗೆ ಪಟ್ಟಿ ಹಿಡಿದು ದುಡಿಸಿಕೊಳ್ತಾ ಇರೋನು ನೀನೊಬ್ಬನೆ ನೋಡು,” ಎಂದು.

ಮಾಧ್ಯಮಗಳ ಮೂಲಕ ಇಡೀ ಜಗತ್ತನ್ನೇ ಬದಲಿಸಿ ಬಿಡಬಹುದೆಂಬ ಭ್ರಮೆಯಲ್ಲಿರುವ ಪತ್ರಕರ್ತ, ಮೊದಲು ಭಾಷೆಯ ಅಗಾಧತೆ ಮತ್ತು ಮಿತಿಯನ್ನು ಅರಿಯಬೇಕು. ಭಾಷೆ ಮತ್ತು ಮಾತಿನ ಇತಿ-ಮಿತಿ ಬಲ್ಲ ಅಲ್ಲಮ ತನ್ನ ವಚನದಲ್ಲಿ ಹೀಗೆ ಪ್ರಶ್ನಿಸುತ್ತಾನೆ:

ಘನತರದ ಚಿತ್ರ ಬರೆಯಬಹುದಲ್ಲದೆ
ಪ್ರಾಣದ ಚಿತ್ರವ ಬರೆಯಬಹುದೆ ಅಯ್ಯ ?

ನಾವು ಆನೆಯ ಚಿತ್ರ ಬರೆಯಬಹುದು ಅಷ್ಟೇ. ಮಾತಿನ ಮೂಲಕ ಅಥವಾ ಅಕ್ಷರದ ಮೂಲಕ ಅದರ ಪ್ರಾಣವ ಸೃಷ್ಟಿಸಲಾರೆವು. ಇಂತಹ ಎಚ್ಚರಿಕೆ ಇದ್ದಾಗ ಮಾತ್ರ ಭಾಷೆ ತನ್ನಷ್ಟಕೆ ತಾನು ವಿಸ್ತರಿಸುತ್ತಾ ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಪತ್ರಿಕೆಗಿಂತ ಆಕಾಶವಾಣಿ ಮತ್ತು ದೃಶ್ಯಮಾಧ್ಯಮಗಳು ತಾವು ಬಳಸುವ ಭಾಷೆಯಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಪತ್ರಿಕೆಗಳು ಕೇವಲ ಅಕ್ಷರ ಬಲ್ಲವರಿಗೆ ಸೀಮಿತವಾಗಿರುತ್ತವೆ. ಆದರೆ ಆಕಾಶವಾಣಿ ಹಾಗು ದೃಶ್ಯಮಾಧ್ಯಮಗಳು ಅನಕ್ಷರಸ್ತರಿಗೂ ತಲುಪಬಲ್ಲ ಮಾಧ್ಯಮಗಳು. ವಾಷಿಂಗ್ಟನ್‌ನಲ್ಲಿ  ಬಾಂಬ್ ಸ್ಪೋಟ ಎಂದರೆ ಅನಕ್ಷರಸ್ತ ಏನೆಂದು ಗ್ರಹಿಸಬೇಕು? ವಾಷಿಂಗ್ಟನ್ ಅಂದರೆ, ಮನೆಯೆ? ಕಾರೆ? ಅಥವಾ ಹಡಗೆ? ಇಂತಹ ಪ್ರಶ್ನೆಗಳು ಅನಕ್ಷರಸ್ತ ಕೇಳುಗ ಅಥವಾ ವೀಕ್ಷಕನಲ್ಲಿ ಏಳುವುದು ಸಹಜ. ವಾಷಿಂಗ್ಟನ್ ನಗರ ಎಂದು ಬಳಸವ ಎಚ್ಚರಿಕೆ ಈ ಮಾಧ್ಯಮಗಳಲ್ಲಿ ಇರಬೇಕು.ಈ ಕಾರಣಕ್ಕಾಗಿಯೇ ರೇಡಿಯೊ ಮತ್ತು ದೃಶ್ಯ ಮಾಧ್ಯವಗಳು ಸಾಧ್ಯವಾದಷ್ಟು ಸರಳ ಕನ್ನಡ ಭಾಷೆಯನ್ನು ಅಪೇಕ್ಷಿಸುತ್ತವೆ.

ಇನ್ನು ಮೆಟ್ರೋ ನಗರಗಳಲ್ಲಿ ನಾಯಿ ಕೊಡೆಯಂತೆ ತಲೆಯೆತ್ತಿರುವ ಎಫ್.ಎಂ. ಛಾನಲ್‌ಗಳು ಬಳಸುವ ಭಾಷೆಯ ಬಗ್ಗೆ ಒಂದು ಸಂಶೋಧನೆಯನ್ನು ಮಾಡಬಹುದು.ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಯುವಕ, ಯುವತಿಯರನ್ನು ಕರೆತಂದು, ಇವರ ಮಾತೃಭಾಷೆ ಕನ್ನಡವೆಂಬ ಏಕೈಕ ಕಾಣಕ್ಕೆ ರೇಡಿಯೊ ಜಾಕಿಗಳನ್ನಾಗಿ ಮಾಡಿದ್ದಾರೆ.ಇವರ ಬಾಯಲ್ಲಿ ಉದುರುವ ಕನ್ನಡದ ಆಣಿಮುತ್ತುಗಳನ್ನು ವರನಟ ಡಾ.ರಾಜಕುಮಾರ್ ಈಗ ಬದುಕಿದ್ದು ಕೇಳಿದ್ದರೆ, ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳುತಿದ್ದರು. ಇವರ ಕನ್ನಡ ಭಾಷೆಯ ನಡುವೆ ಇಂಗ್ಲೀಷ್ ನುಸುಳಿದ್ದರೆ ಸಹಿಸಬಹುದಿತ್ತು. ಆದರೆ ಇವರ ಕನ್ನಡ ಎಫ್.ಎಂ ಛಾನಲ್‌ಗಳಲ್ಲಿ ಇಂಗ್ಲೀಷ್ ಭಾಷೆಯದೇ ಪಾರುಪತ್ಯ.. ಇದು ನಮ್ಮ ಮಾಧ್ಯಮಗಳ ದುರಂತ.

ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ ಅದು ಇಂದಿನ ವಿಶ್ವದ ಪರಮ ಸೃಷ್ಟಿಗಳಲ್ಲಿ ಒಂದು. ಮಾನವ ತನ್ನ ಭಾವನೆಗಳ ಅಭಿವ್ಯಕ್ತಿಗೆ ಕಂಡುಕೊಂಡ ಅನನ್ಯ ಮಾರ್ಗ. ಭಾಷೆಗೆ ಬಡವ-ಬಲ್ಲಿದ ಎಂಬ ಬೇಧ ಭಾವ ಇಲ್ಲ, ಭಾಷೆ ಜಗತ್ತಿನ ಭೌತಿಕ ವಸ್ತುಗಳಂತೆ ನಾಶವಾಗುವಂತಹದಲ್ಲ. ಅದು ಮನುಷ್ಯ ಮತ್ತು ಸಂಸ್ಕೃತಿಯೊಂದಿಗೆ ವಿಕಾಸಗೊಳ್ಳುತ್ತಾ ಮುಂದುವರಿಯುವಂತಹದ್ದು. ಭಾಷೆ ಯಾವುದೇ ಆಗಿರಲಿ ಅದರ ಲಕ್ಷಣವೆಂದರೆ ಇತರೆ ಭಾಷೆಗಳನ್ನು ತನ್ನೊಳಗೆ ವಿಲೀನಗೊಳಿಸುತ್ತಾ, ತನ್ನಲ್ಲಿರುವ ಅಂಶಗಳನ್ನು ಇತರೆ ಭಾಷೆಗೆ ಧಾರೆ ಎರೆಯುತ್ತಾ ಹೋಗುತ್ತದೆ.

ವರ್ತಮಾವದ ನೋವಿನ ಸಂಗತಿಯೆಂದರೆ, ಇಂದು ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಪದವಿ ಕಾಲೇಜುಗಳಲ್ಲಿ ಮತ್ತು 15ಕ್ಕೂ ಹೆಚ್ಚು ವಿ.ವಿ. ಹಾಗೂ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಪತ್ರಿಕೋದ್ಯಮ ಬೋಧಿಸಲ್ಪಡುತ್ತಿದೆ. ಆದರೆ  ಮಾಧ್ಯಮಗಳಲ್ಲಿ ಭಾಷೆ ಬಳಕೆ  ಕುರಿತಂತೆ ಯಾವುದೇ ಪಠ್ಯಗಳಿಲ್ಲ. ಇಂಗ್ಲೀಷ್ ಭಾಷೆ ಬಳಕೆ ಕುರಿತಂತೆ ವ್ಯಾಕರಣ, ಶಬ್ಧದೋಷ ಕುರಿತು ಏನೆಲ್ಲಾ ಬೋಧನಾ ಮಾದರಿಗಳು ಇರುವಾಗ ಕನ್ನಡದಲ್ಲಿ ಏಕಿಲ್ಲ?  ಏಕೆಂದರೆ ಯಾರೂ ಯೋಚಿಸಲೇ ಇಲ್ಲ. ಜಾಗತೀಕರಣದ ಅವಸರದ ಇಂದಿನ ಯುಗದಲ್ಲಿ ಎಲ್ಲವೂ ಆ ಕ್ಷಣದಲ್ಲಿ ತಯಾರಾಗಿ ಉಣ ಬಡಿಸುವ ಆಹಾರದಂತಿದೆ.

ಭಾಷೆ ಬಳಕೆ ಕುರಿತಂತೆ ತಜ್ಣರಾದ ಡಾ. ಕೆ.ವಿ. ನಾರಾಯಣರವರ ಮಾತುಗಳು ಇಲ್ಲಿ ಪ್ರಸ್ತುತ. ಭಾಷೆ ಕುರಿತಂತೆ ಸಾಮಾನ್ಯ ಜನರ ಅರಿವಿನಲ್ಲಿ ಹಲವು ಕೊರತೆಗಳಿವೆ. ಇಂತಹ ಅಪಕಲ್ಪನೆಗಳು ವ್ಯಕ್ತಿಗತ ಹಂತದಿಂದ ಹಿಡಿದು ಸಾಮುದಾಯಿಕ ನೆಲೆಯಲ್ಲೂ ಕೂಡ ಇರುತ್ತದೆ. ಭಾಷೆಯ ಶುದ್ಧತೆಯ ಪರಿಕಲ್ಪನೆ ಎಂದರೆ, ಮಾತನಾಡುವಾಗ ಇಲ್ಲವೆ ಬರೆಯುವಾಗ ಅದರ ಶುದ್ಧ ರೂಪದಲ್ಲಿ ಬಳಸಬೇಕು ಎಂಬುದು ಎಲ್ಲಾ ಕಾಲದಲ್ಲೂ ಎದ್ದು ಕಾಣುವ ನಿಲುವು.

ಭಾಷೆ ಮತ್ತು ಸಂವಹನ ಕುರಿತು ಹೇಳುವುದಾದರೆ ಆಧುನಿಕ ತಂತ್ರ ಜ್ಞಾನದಿಂದಾಗಿ ಭಾಷೆಗೆ ಇದ್ದ ಸಾಮರ್ಥ್ಯ ನಶಿಸಿ ಹೋಗುತ್ತಿದೆ. ಭಾಷೆ ಇಂದು ಮಾಹಿತಿ ಹಂಚುವ ವಾಹಕವಾಗಿ ಬಳಕೆಯಾಗುತಿದ್ದು, ಮಾತಿನ ರೂಪಕದ ಸಾಧ್ಯತಗಳನ್ನು ನಾಶಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷೆ ತೀರ ಮೇಲು ಪದರದ, ಮಹತ್ವವಲ್ಲದ ಸಂಗತಿಗಳಿಗೆ ಸೀಮಿತವಾಗುತ್ತದೆ. ಇಂದು ಮಾಧ್ಯಮಗಳಲ್ಲಿ ಜರುಗುತ್ತಿರುವುದು ಇದೇ ದುರಂತ.

ಭಾಷೆ ಕುರಿತಂತೆ ಹೈದರಾಬಾದ್ ವಿಶ್ವ ವಿದ್ಯಾಲಯದ ಮಾಜಿ ಉಪ ಕುಲಪತಿ ಭ.ಕೃಷ್ಣಮೂರ್ತಿ ಹಲವು ಮಹತ್ವದ ಸಂಗತಿಗಳನ್ನ ಚರ್ಚಿಸಿದ್ದಾರೆ. ಅವು ಈ ಕೆಳಗಿನಂತಿವೆ:

  1. ನಾವು ಆದಿವಾಸಿ ಅಥವಾ ಅನಾಗರೀಕ ಎಂದು ಕರೆಯಬಹುದಾದ ಸಮಾಜಗಳಿವೆಯೇ ಹೊರತು ಯಾವುದೇ ಭಾಷೆಯನ್ನು ಅಪೂರ್ಣ ಎಂದು ಕರೆಯಲಾಗುವುದಿಲ್ಲ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಮನುಷ್ಯ ಜಾತಿಯಲ್ಲಿ ನಡೆಯುವ ಯಾವುದೇ ಸಂವಹನ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಅಗತ್ಯವಾದ ರಚನೆಯನ್ನು ಪಡೆದಿವೆ.
  2. ಭಾಷೆಯು ಒಂದು ಸಂವಹನ ಮಾಧ್ಯಮ ಮಾತ್ರವಲ್ಲ, ಅದೊಂದು ಸಾಂಸ್ಕೃತಿಕ ಸಂಸ್ಥೆ. ಅದು ತನ್ನನ್ನು ಬಳಸುವ ಜನರ ಸಾಮಾಜಿಕ, ಭಾವನಾತ್ಮಕ ಹಾಗು ಬೌದ್ಧಿಕ ಬದುಕಿನ ಅವಿಭಾಜ್ಯ ಅಂಗ.
  3. ಪ್ರತಿಯೊಂದು ಭಾಷೆ ಕೂಡ ಹೊಸ ಹೊಸ ಕ್ಷೇತ್ರಗಳಲ್ಲಿ ಸೂಕ್ತವಾದ ಸಾಂದರ್ಭಿಕ ಭಾಷೆಗಳನ್ನು ಬಳಸಿಕೊಳ್ಳಬಹುದು. ಅಂದರೆ, ಅಗತ್ಯವಾದ ಶೈಲಿ ಮತ್ತು ಪರಿಭಾಷೆಯನ್ನು ರೂಪಿಸಿಕೊಳ್ಳುವ ಶಕ್ತಿ ಭಾಷೆಗೆ ಇರುತ್ತದೆ.
  4. ಭಾಷೆಯೊಂದರ ಜೀವಂತತೆ ಮತ್ತು ಅಭಿವೃದ್ಧಿ, ಭಾಷೆಯನ್ನು ಎಷ್ಟು ವಿಭಿನ್ನ ಕ್ಷೇತ್ರಗಳಲ್ಲಿ ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಬಳಸಲಾಯಿತು ಎಂಬುದರ ಮೇಲೆ ನಿರ್ಧಾರವಾಗುತ್ತದೆ.
  5. ಮಾತೃಭಾಷೆ ಹೊರತು ಪಡಿಸಿ ಜಗತ್ತಿನ ಯಾವ ದೇಶದಲ್ಲೂ ಕೇವಲ ವಿದೇಶಿ ಭಾಷೆಯೊಂದನ್ನು ಶಿಕ್ಷಣ ಮಾಧ್ಯಮವಾಗಿ ಹೊಂದಿದ್ದು ಆರ್ಥಿಕವಾಗಿ ಮತ್ತು  ಕೈಗಾರಿಕ ಪ್ರಗತಿ ಸಾಧಿಸಿರುವುದಕ್ಕೆ ಸಾಕ್ಷಿಗಳು ದೊರೆಯುವುದಿಲ್ಲ.

ದಶಕದ ಹಿಂದೆ ಮಾರ್ಷಲ್ ಮೆಕ್ಲು ಹಾನ್ ಹುಟ್ಟು ಹಾಕಿದ ಜಗತ್ತೇ ಒಂದು ಹಳ್ಳಿ ಎಂಬ ಪರಿಕಲ್ಪನೆಯಲ್ಲಿ ವಾಸ್ತವದ ಹೆಸರಿನಲ್ಲಿ ಭ್ರಮೆಗಳನ್ನು ಹುಟ್ಟು ಹಾಕುವ ಸ್ಥಿತಿಗೆ ಮಾಧ್ಯಮಗಳು ದೂಡಲ್ಪಟ್ಟಿವೆ. ಇವತ್ತಿನ ಮೊಬೈಲ್ ಹಾಗು ಅಂತರ್ಜಾಲಗಳಲ್ಲಿ ಹರಿದಾಡುತ್ತಿರುವ ಕ್ಷಿಪ್ರ ಸಂದೇಶಗಳಲ್ಲಿ ಇಂಗ್ಲೀಷ್ ಭಾಷೆ ಹೇಗೆ ಕೊಲೆಯಾಗುತ್ತಿದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಸಾಕು.

ಮಾತಿನ ರೂಪವನ್ನು ಬರಹಕ್ಕಾಗಲಿ ಅಥವಾ ನಿರ್ಧಿಷ್ಟ ಭಾಷೆಯೊಂದರ ಸಾಹಿತ್ಯ ರಚನೆ ಮಾಡುವಾಗ ಈ ಪ್ರಕ್ರಿಯೆಯ ಹಿಂದೆ ಸೃಜನಶೀಲತೆ ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. ಇಂತಹ ಪ್ರಜ್ಞೆಯೊಂದನ್ನು ಮರೆತರೆ, ಯಾವ ಪತ್ರಕರ್ತ ಅಥವಾ ಮಾಧ್ಯಮ ಬೆಳೆಯಲಾರದು. ಏಕೆಂದರೆ ವ್ಯಕ್ತಿ ಲೇಖಕನಾಗಿರಲಿ, ಕವಿಯಾಗಿರಲಿ, ಪತ್ರಕರ್ತನಾಗಿರಲಿ, ಭಾಷೆಯೊಂದನ್ನ ಸಂವಹನವಾಗಿ ಬಳಸುವುದರ ಜೊತೆಗೆ ಬೆಳೆಸುವುದು ಸಹ ಅವನ ಸಾಂಸ್ಕೃತಿಕ ಹೊಣೆಗಾರಿಯಾಗಿರುತ್ತದೆ.

One thought on “ಮಾಧ್ಯಮಗಳು ಮತ್ತು ಭಾಷೆ

Leave a Reply

Your email address will not be published. Required fields are marked *