ಸಾಲದಿಂದ ಬೆನ್ನೇರಿದ ಭಾನಾಮತಿ!

ಅದು ನನ್ನ ವಾರ್ಷಿಕ ರಜೆಯ ಸಮಯ. ಕುಟುಂಬ ಸಮೇತ ಗೋವಾ ಟ್ರಿಪ್ ಮಾಡಬೇಕು ಎನ್ನುವುದು ನನ್ನ ಆಲೋಚನೆ. ಆದರೆ ಒಂದೇ ಒಂದು ಫೋನ್ ಕಾಲ್ ನನ್ನ ಯೋಜನೆಯನ್ನು ವಿಫಲಗೊಳಿಸಿತು. ಅದು ಬಳ್ಳಾರಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಕರೆ.

ಅಲ್ಲಿ ಹೋದರೆ ಒಂದು ವಿಸ್ಮಯ ಎದುರಾಯಿತು. ಅಲ್ಲಿನ ಜನರ ಮುಂದೆ ಕಾರ್ಯಕ್ರಮ ನೀಡಿದ ನಂತರ, “ಸರ್, ನೀವು ಈ ದೆವ್ವ, ಮಾಟ, ಮಂತ್ರ ನಂಬಲ್ಲ ಅಲ್ಲವಾ? ಗಾಣಗಾಪುರಕ್ಕೆ ಬನ್ನಿ. ಅಲ್ಲಿ 25 ವಯಸ್ಸಿನ ಹುಡುಗ ಮರ ತಿರುಗುಮುರುಗಾಗಿ ಹತ್ತುತ್ತಾನೆ. ಇದಕ್ಕೆ ಏನು ಹೇಳ್ತೀರಿ?” ಎಂದರು. ಆ ಹುಡುಗನ ವಿಶಿಷ್ಟ ಶಕ್ತಿಗೆ ಬೇರೆ ಕಾರಣಗಳಿರಬಹುದು. ಆದರೆ ಅದಕ್ಕೂ ಅತೀಂದ್ರಿಯ ಶಕ್ತಿಗಳಿಗೂ ಸಂಬಂಧವಿಲ್ಲ ಎನ್ನೋದು ನನ್ನ ದೃಢ ನಂಬಿಕೆ. ಆದರೂ ಅವನನ್ನು ಭೇಟಿ ಮಾಡುವ ಕುತೂಹಲ ನನ್ನಲ್ಲೂ ಇತ್ತು.

ಬಳ್ಳಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಗಾಣಗಾಪುರಕ್ಕೆ ಹೊರಟೆ. ಗಾಣಗಾಪುರದ ದೇವಾಲಯದಲ್ಲಿ ಸಮಯದಲ್ಲಿ ದೇವಸ್ಥಾನದಲ್ಲಿ ಘಂಟೆ ನಗಾರಿಗಳು ಜೋರಾಗಿ ಶಬ್ದ ಮಾಡುತ್ತಿದ್ದವು. ಅದೇ ಸಮಯದಲ್ಲಿ ಒಂದು ಹುಡುಗ ದಿಢೀರನೆ ಓಡಿಹೋಗಿ ಮರ ಉಲ್ಟಾ ಹತ್ತಿ ಮರದ ತುದಿಯಲ್ಲಿ ಹುಚ್ಚನಂತೆ ಕುಣೀಯೊಕೆ ಶುರು ಮಾಡಿದ. ಅಲ್ಲಿದ್ದ ಜನರು ಕುತೂಹಲದಿಂದ ಅದನ್ನು ವೀಕ್ಷಿಸುತ್ತಿದ್ದರು.

ಅಲ್ಲಿದ್ದವರನ್ನು ವಿಚಾರಿಸಿದೆ. “ಸರ್, ಇಲ್ಲಿ 20 ವರ್ಷದಿಂದ, 12 ಘಂಟೆಗೆ ಸರಿಯಾಗಿ ದತ್ತ ಮಹಾರಾಜರಿಗೆ ಆರತಿ ನಡೆಯುತ್ತೆ. ಆ ಸಮಯದಲ್ಲಿ ನಗಾರಿಗಳು ಬಾರಿಸುತ್ತಿದ್ದಂತೆ ಇಲ್ಲಿರುವ ಕೆಲವರು ಮೈಮೇಲೆ ದೇವರು, ದೆವ್ವ ಬಂದ ಹಾಗೆ ಆಡುತ್ತಾರೆ.” ಎಂದರು. ಸುಮಾರು 40 ಜನರು ಈ ರೀತಿ ಆಡೋದನ್ನ ನಾನು ನೋಡಿದೆ. ಅದರಲ್ಲಿ ಕೆಲವರನ್ನು ಮಾತನಾಡಿಸಿದೆ. ಮತ್ತೊಂದು ಕಡೆ ಹುಡುಗ  ತಿರುಗಾ ಮುರುಗಾ ಮರ ಹತ್ತಿ ತುದಿಯಲ್ಲಿ ಹುಚ್ಚನಂತೆ ಕುಣೀತಾ ಇದ್ದ.  ನಗಾರಿಗಳ ಶಬ್ದ ನಿಂತಾಗ ಅಲ್ಲಿರುವ ಜನರು ಮಾಮೂಲು ಸ್ಥಿತಿಗೆ ಬಂದರು. ಆ ಹುಡುಗನನ್ನು ಸುಮಾರು ಅಧ ಗಂಟೆಯಿಂದ ಗಮನಿಸುತ್ತಿದ್ದೆ. ಅವನು ಮರದಿಂದ ಕೆಳಗೆ ಇಳಿಯುತ್ತಿದ್ದಂತೆ ಅವನನ್ನು ಸಮಾಧಾನವಾಗಿ ಮಾತನಾಡಿಸಿದೆ…

“ಯಾವೂರಪ್ಪ ನಿಂದು, ಬಹಳ ಜೋರಾಗಿ ಕುಣೀತಾ ಇದ್ದೆ?”
“ಮಹಾರಾಷ್ಟ್ರ.”
“ಎಷ್ಟು ತಿಂಗಳಿಂದ ಇಲ್ಲಿದ್ದೀಯಾ?”
“ಮೂರು ತಿಂಗಳಿಂದ”
“ಇಲ್ಲಿಗೆ ಯಾಕೆ ಬಂದೆ?”
“ಏನು ಅಂತ ಹೇಳ್ಲಿ ಸರ್, ನೀವೇನಾದರು ನನ್ನ ಕಥೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ.” ಕುತೂಹಲ ಹುಟ್ಟಿಸಿದ.
“ಅಂತ ಕಥೆ ಏನಪ್ಪ ನಿಂದು?”
“ಏನು ಹೇಳಲಿ ಸರ್, ಮೂರುತಿಂಗಳ ಹಿಂದೆ ನನ್ನ ಹೊಟ್ಟೆ ಶೇಕ್ ಆಗೋದು, ಎದೆ ಜೋರಾಗಿ ಬಡಿದುಕೊಳ್ಳೋದು ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಸರಿಯಾಗಿ ಊಟ ಸೇರಲ್ಲ.”
“ನಿನ್ನ ಜೊತೆ ಯಾರಿದ್ದಾರೆ?”
“ನನ್ನ ಇಬ್ಬರು ಗೆಳೆಯರ ಜೊತೆಯಲ್ಲಿದ್ದೇನೆ. ಇಲ್ಲಿರುವವರೂ ನನ್ನ ಗೆಳೆಯರೇ.”
“ಇದೆಲ್ಲ ಸರಿ ಕಣಪ್ಪ. ಅರ್ಧ ಗಂಟೆ ಮುಂಚೆ ಮರ ಹತ್ತಿ ಕುಣೀತಾ ಇದ್ದೆ. ಈಗ ಮಾಮೂಲಾಗಿ ಮಾತನಾಡುತ್ತಿದ್ದೀಯ. ಇದು ಹೇಗೆ?”
“ಸರ್, ನಗಾರಿಗಳ ಸದ್ದು ಕೇಳಿದರೆ ಈ ತರ ಆಗುತ್ತದೆ,” ಎಂದ.
“ನನಗೂ ಶಬ್ದ ಕೇಳಿಸಿತು. ಆದರೆ ನಾನೇನು ಕುಣಿದಿಲ್ಲ …ಅದ್ಯಾಕೆ ನೀನು ಮಾತ್ರ?”
“ಸರ್, ನನಗೆ ಗೊತ್ತಿರುವವರು ಯಾರೋ ಭಾನಾಮತಿ ಮಾಡಿಸಿದ್ದಾರೆ. ಅದರಿಂದ ಹೀಗಾಗುತ್ತಿದೆ,” ಎಂದ. ಆ ಹುಡುಗ ಭಾನಾಮತಿಯ ಭ್ರಮೆಯಲ್ಲಿದ್ದ.

ನಂತರ ನಾನು ಅವನೊಂದಿಗೆ ಅಲ್ಲಿಗೇ ಮಾತು ನಿಲ್ಲಿಸಿ ಅವನ ಗೆಳೆಯನನ್ನು ಕರೆದು ಮಾತನಾಡಿಸಿದೆ.

“ನೋಡಪ್ಪ ನಿನ್ನ ಗೆಳೆಯನಿಗೆ ಯಾವ ಭಾನಾಮತಿಯೂ ಆಗಿಲ್ಲ. ಅವನು ಬೇಕಂತಲೇ ಹೀಗೆ ಆಡುತ್ತಿದ್ದಾನೆ ಎಂದು ನನಗೆ ಗೊತ್ತು. ನಿಜ ಹೇಳು. ನಾನು ಯಾರಿಗೂ ಹೇಳೋಲ್ಲ. ಅವು ಏಕೆ ಹೀಗೆ ಆಡುತ್ತಿದ್ದಾನೆ?”

ನಿಜ ಹೇಳದಿದ್ದರೆ ಇದನ್ನು ಟಿ.ವಿ.ಯಲ್ಲಿ ಹಾಕಿಸಿ ಪ್ರಚಾರ ಮಾಡುವ ಬೆದರಿಕೆಯನ್ನೂ ಹಾಕಿದೆ. ಆಗ ದಾರಿಗೆ ಬಂದ.

“ಸರ್, ಅವನು ಊರಲ್ಲಿ ತಂದೆ ತಾಯಿಗೆ ಗೊತ್ತಿಲ್ಲದ ಹಾಗೆ ಕಂಡವರ ಹತ್ತಿರವೆಲ್ಲ ಮೈ ತುಂಬಾ ಸಾಲ ಮಾಡೊಕೊಂಡಿದ್ದ. ಆ ಸಾಲ ತೀರಿಸಲಾಗದೆ ಭಾನಾಮತಿ ಎಂಬ ನೆಪ ಹುಡುಕಿಕೊಂಡ. ಯಾರಾದರೂ ಸಾಲ ವಾಪಸ್ ಕೇಳೋಕೆ ಬಂದರೆ ವಿಚಿತ್ರವಾಗಿ ಆಡುತ್ತಿದ್ದ. ಅದರಿಂದ ಜನಗಳು ಅವನ ಹತ್ತಿರ ಕೇಳೋದೆ ಬಿಟ್ಟಿಬಿಟ್ಟರು,” ಎಂದ.

ಮತ್ತೂ ವಿಶೇಷ ಎಂದರೆ, ಅವನು ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡಿದ್ದಾನೆ. ಯೋಗಶಕ್ತಿಯನ್ನು ಬಳಸಿಕೊಂಡು ಮೈಮೇಲೆ ತನ್ನ ತಾನೆ ಮ್ಯೆಯನ್ನು ನಡುಗಿಸೋದು. ನರಗಳೆಲ್ಲ ಕಾಣುವ ಹಾಗೆ ಮಾಡುವುದು. ಹೊಟ್ಟೆ ಅಲ್ಲಾಡಿಸುವುದು… ಇತ್ಯಾದಿ ವಿದ್ಯೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

Leave a Reply

Your email address will not be published. Required fields are marked *