Three Gorges Dam

ಜೀವನದಿಗಳ ಸಾವಿನ ಕಥನ – 4

– ಡಾ.ಎನ್.ಜಗದೀಶ್ ಕೊಪ್ಪ

ಎರಡನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ ಜಲವಿದ್ಯುತ್ಗಾಗಿ ಅಸಂಖ್ಯಾತ ಅಣೆಕಟ್ಟುಗಳು ನಿರ್ಮಾಣಗೊಂಡವು. ರಷ್ಯಾದ ಮಹಾನದಿಯಾದ ವೋಲ್ಗಾ ನದಿಯೊಂದಕ್ಕೇ ಆರು ಅಣೆಕಟ್ಟೆಗಳನ್ನು ನಿರ್ಮಿಸಲಾಯಿತು.

ಯೂರೋಪ್, ಅಮೆರಿಕಾ, ರಷ್ಯಾವನ್ನು ಹೊರತುಪಡಿಸಿದರೆ, ಏಷ್ಯಾದ ಬಹುತೇಕ ರಾಷ್ಟ್ರಗಳು 19 ಮತ್ತು 21ನೇ ಶತಮಾನದಲ್ಲಿ ಬ್ರಿಟೀಷ್ ವಸಾಹತು ಪ್ರದೇಶಗಳಾಗಿದ್ದ ಕಾರಣ, ಇಲ್ಲಿ ಬ್ರಿಟೀಷರ ಅವಶ್ಯಕತೆಗೆ ತಕ್ಕಂತೆ (ಭಾರತವೂ ಸೇರಿ) ಹಲವು ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಬ್ರಿಟೀಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಒಣ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಿ, ರೈತರಿಗೆ ಕಬ್ಬು ಮತ್ತು ಹತ್ತಿ ಬೆಳೆಯಲು ಪ್ರೋತ್ಸಾಹಿಸಿದರು. ಇದರಲ್ಲಿ ಅವರ ಸ್ವ-ಹಿತಾಸಕ್ತಿಯೂ ಅಡಗಿತ್ತು. ಇಂಗ್ಲೆಂಡ್‌ನ ಕೈಗಾರಿಕೆಗಳಿಗೆ ತಮ್ಮ ವಸಾಹತು ಪ್ರದೇಶಗಳಿಂದ ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುವುದು ಅವರ ಗುರಿಯಾಗಿತ್ತು.

1902ರಲ್ಲಿ ಇದೇ ಬ್ರಿಟೀಷರು ಈಜಿಪ್ಟ್‌ನ ನೈಲ್ ನದಿಗೆ ಐಸ್ವಾನ್ ಅಣೆಕಟ್ಟು ನಿರ್ಮಿಸಿ, ಅಲ್ಲಿ ಹತ್ತಿ ಬೆಳೆಯುವಂತೆ ಪ್ರೋತ್ಸಾಹಿಸಿ, ಲಂಕಾಷ್ವರ್ ಮಿಲ್‌ಗಳಿಗೆ ಹತ್ತಿ ಪೂರೈಕೆಯಾಗುವಂತೆ ನೋಡಿಕೊಂಡರು.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ಉಂಟಾದ ರಾಜಕೀಯ ವಿದ್ಯಾಮಾನಗಳಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಬ್ರಿಟೀಷರಿಂದ ಮುಕ್ತಿ ಪಡೆದವು. ಅಷ್ಟರ ವೇಳೆಗೆ ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಅಣೆಕಟ್ಟುಗಳ ನಿರ್ಮಾಣವೊಂದೇ ಮಾರ್ಗ ಮತ್ತು ಮುಕ್ತಿ ಎಂಬ ಪರಿಕಲ್ಪನೆ ಚಾಲ್ತಿಯಲ್ಲಿದ್ದ ಕಾರಣ, ಇದು ಸ್ವಾತಂತ್ರ್ಯಾ ನಂತರ ಭಾರತದ ನಾಯಕರ ಮೇಲೂ ಪ್ರಭಾವ ಬೀರಿತು. ಈ ಕಾರಣಕ್ಕಾಗಿಯೇ 1947 ರಿಂದ 1980 ರವರೆಗೆ ರಾಷ್ಟ್ರದ ಒಟ್ಟು ಖರ್ಚಿನಲ್ಲಿ ಶೇ.15 ರಷ್ಟನ್ನು ಭಾರತ ಸರಕಾರ ಅಣೆಕಟ್ಟುಗಳ ನಿರ್ಮಾಣಕ್ಕೇ ಮೀಸಲಾಗಿಟ್ಟಿತು. 1980 ರ ವೇಳೆಗೆ ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಬೃಹತ್ ಗಾತ್ರದ ಅಣೆಕಟ್ಟುಗಳು ನಿರ್ಮಾಣಗೊಂಡವು.

ಇದರ ಪರಿಣಾಮವೆಂದರೆ, ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞರಿಗೆ ಅಣೆಕಟ್ಟುಗಳ ನಿರ್ಮಾಣ ಕುರಿತಂತೆ ಸಲಹೆ, ತಂತ್ರಜ್ಞಾನ ನೀಡುವ ವೃತ್ತಿ ಒಂದು ಬೃಹತ್ ದಂಧೆಯಾಗಿ ಬೆಳೆಯಿತು. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿರುವ ಚೀನಾ ದೇಶಕ್ಕೆ 1949 ರವರೆಗೆ ರಷ್ಯಾ, ಹಾಗೂ 1960 ರವರೆಗೆ ಅಮೆರಿಕಾದ ಇಂಜಿನಿಯರ್ಗಳು ಸಲಹೆ ನೀಡಿದ್ದಾರೆ.

ಚೀನಾದಲ್ಲಿ 1960 ರಿಂದ 1990 ರವರೆಗೆ ವರ್ಷವೊಂದಕ್ಕೆ 600 ಅಣೆಕಟ್ಟುಗಳು ನಿರ್ಮಾಣಗೊಂಡವು. ಅಲ್ಲಿನ ಹಳದಿ ನದಿಗೆ ನಿರ್ಮಿಸಲಾದ ಜಗತ್ತಿನ ಬೃಹತ್ ಅಣೆಕಟ್ಟು 2005 ರಲ್ಲಿ ಪೂರ್ಣಗೊಂಡಿತು.

ಜಗತ್ತಿನಾದ್ಯಂತ ಅಣೆಕಟ್ಟುಗಳ ನಿರ್ಮಾಣಕ್ಕೆ ವಿಶ್ಚಬ್ಯಾಂಕ್ ಆರ್ಥಿಕ ನೆರವು ನೀಡುವ ಸಂಸ್ಥೆಯಾಗಿದೆ. ಇಂದು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಣೆಕಟ್ಟುಗಳ ನಿರ್ಮಾಣಕ್ಕಾಗಿ 75 ಶತಕೋಟಿ ಡಾಲರ್ ಹಣವನ್ನು ವಿಶ್ವಬ್ಯಾಂಕ್ ಸಾಲವಾಗಿ ನೀಡಿದೆ. ಇದಲ್ಲದೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಆಹಾರ ಮತ್ತು ಕೃಷಿ ಸಂಘಟನೆ(ಎಫ್.ಎ.ಒ.), ವಿಶ್ವ ಸಂಸ್ಥೆ ಅಭಿವೃದ್ಧಿ ಯೋಜನೆಯಡಿ(ಯು.ಎನ್.ಡಿ.ಪಿ.), ಅಮೆರಿಕಾದ ವಿಎಸ್.ಎ.ಐ.ಡಿ. ಸಂಸ್ಥೆ, ಇಂಗ್ಲೆಡ್ನ ಓವರ್ ಸೇಸ್ ಡೆವಲಪ್ಮೆಂಟ್ ಏಡ್ ಸಂಸ್ಥೆಗಳು ಸಹ ಸಾಲದ ನೆರವು ನೀಡುತ್ತಿವೆ.

ಈ ರೀತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಾಯ ನೀಡುತ್ತಿರುವ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು, ಅಣೆಕಟ್ಟುಗಳ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದು ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಅಣೆಕಟ್ಟುಗಳ ನಿರ್ಮಾಣ ವೆಚ್ಚ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ಆಗುತ್ತಿರುವುದು  ಸಹ ಟೀಕೆಗೆ ಗುರಿಯಾಗಿದೆ.

ಬ್ರೆಜಿಲ್, ಪೆರುಗ್ವೆ ರಾಷ್ಟ್ರಗಳ ಗಡಿಭಾಗದಲ್ಲಿ ನದಿಯೊಂದಕ್ಕೆ 12,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಒಂದು ಅಣೆಕಟ್ಟು (ಇದರ ವೆಚ್ಚ 20 ಶತಕೋಟಿ ಡಾಲರ್) ಹಾಗೂ ಚೀನಾದಲ್ಲಿ 18,200 ಮೆಗಾವ್ಯಾಟ್ ವಿದ್ಯುತ್ ಉತ್ಫಾದನೆಗೆ ನಿರ್ಮಿಸಿದ ಮೂರು ಅಣೆಕಟ್ಟುಗಳು (ಇವುಗಳ ವೆಚ್ಚ 50 ಶತಕೋಟಿ ಡಾಲರ್), ಇವುಗಳ ಹಿಂದೆ ವ್ಯಾಪಕ ಭ್ರಷ್ಟಾಚಾರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ. ಆಯಾ ರಾಷ್ಟ್ರಗಳ ರಾಜಕೀಯ ಅಸ್ಥಿರತೆ, ಬದಲಾಗುವ ಸರಕಾರದ ಜನಪ್ರತಿನಿಧಿಗಳ ಮನೋಭಾವದಿಂದಾಗಿ ಯಾವುದೇ ಅಣೆಕಟ್ಟು ನಿಗದಿತ ವೇಳೆಗೆ ಪೂರ್ಣಗೊಂಡ ಇತಿಹಾಸವೇ ಇಲ್ಲ. ಈಗಾಗಿ ಅಂದಾಜು ವೆಚ್ಚ ಮಿತಿಮೀರಿ, ಸಾಲದ ಮೇಲಿನ ಬಡ್ಡಿಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕೂಡ ಮಿತಿ ಮೀರುತ್ತಿದೆ.

ಹಿಂದೊಮ್ಮೆ ಅಣೆಕಟ್ಟುಗಳು ಭಾರತದ ಪಾಲಿನ ಗುಡಿ-ಗೋಪುರಗಳು ಎಂದು ಹಾಡಿ ಹೊಗಳಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ “ಬೃಹತ್ ಅಣೆಕಟ್ಟುಗಳ ಬಗ್ಗೆ ನಾನು ಮರುಚಿಂತನೆ ನಡೆಸುತ್ತಿದ್ದೇನೆ ಎಂದಿದ್ದರಲ್ಲದೇ, ನಾವು ದೊಡ್ಡ ಕಾರ್ಯ ಯೋಜನೆಗಳನ್ನು ನಿರ್ಮಿಸಬಲ್ಲೆವು ಅಷ್ಟೆ. ಆದರೆ ಇವುಗಳಿಂದ ಅರ್ಧದಷ್ಟು ಪ್ರಮಾಣದ ಪ್ರತಿಫಲವಿಲ್ಲ ಎಂಬುದು ಮನದಟ್ಟಾಗಿದೆ” ಎಂದು ಸಂಸತ್ತಿನಲ್ಲಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು (1958).

ಇಂತಹದ್ದೇ ಭಾವನೆಯನ್ನು ರಷ್ಯಾದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಕಿತಾ ಕೃಶ್ನೇವ್ ವೋಲ್ಗಾ ನದಿಗೆ ಕಟ್ಟಲಾದ ಅಣೆಕಟ್ಟನ್ನು ನಾಡಿಗೆ ಅರ್ಪಿಸುವ ಸಂದರ್ಭದಲ್ಲಿ “ಇಂತಹ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳಿಗಿಂತ, ನದಿಗಳ ನೈಜ ಸ್ಥಿತಿಯನ್ನು ನಾಶ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನೈಸರ್ಗಿಕ ವಿನಾಶಕ್ಕೆ ಬೆಲೆಕಟ್ಟಲಾಗದು” ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರವಾದಿಗಳಿಂದ ಹುಟ್ಟಿಕೊಂಡ ಪ್ರತಿಭಟನೆಯಿಂದಾಗಿ  ಬೃಹತ್ ಅಣೆಕಟ್ಟುಗಳ ಭ್ರಮೆ ನಿಧಾನವಾಗಿ ಕಳಚತೊಡಗಿದೆ. ಪರಿಸರವಾದಿಗಳ ಉಗ್ರ ಹೋರಾಟದ ಫಲವಾಗಿ ಆಸ್ಟ್ರೇಲಿಯಾದ ಪ್ರಾಂಕ್ಲಿನ್ ಅಣೆಕಟ್ಟು, ಥೈಲಾಂಡ್ನ ನಾಮ್ ಚೊಹಾನ್, ಹಂಗೇರಿಯ ನ್ಯಾಗಿ ಮರೇಗ್, ಭಾರತದ ಕೇರಳ ರಾಜ್ಯದ ಮೌನ ಕಣಿವೆಯ ಅಣೆಕಟ್ಟು, ಬ್ರೆಜಿಲ್ನ ಬಾಬಾಕ್ಸರ್, ರಷ್ಯಾದ ಕಟೂನ್, ಪ್ರಾನ್ಸ್ನ ಸರ್ರೆಡಿ-ಲ-ಪೆರ್ರೆ ಹೀಗೆ ಅನೇಕ ಅಣೆಕಟ್ಟುಗಳ ನಿರ್ಮಾಣ ಯೋಜನೆ ರದ್ದಾಗಿ, ಅಲ್ಲಿನ ಜೀವನದಿಗಳ ಸಹಜ ಹರಿಯುವಿಕೆಗೆ ವರದಾನವಾಗಿದೆ.

ನಮ್ಮ ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನ ಬಗೆಗಿನ ವಿರೋಧ ಜಾಗತಿಕ ಮಟ್ಟದಲ್ಲಿ ಬಿಂಬಿತವಾಗಿ (ನರ್ಮದಾ ಬಚಾವ್ ಆಂಧೋಲನ-ಮೇಧಪಾಟ್ಕರ್ ನೇತೃತ್ವದಲ್ಲಿ), ಈ ಯೋಜನೆಗೆ ಹಣಕಾಸಿನ ನೆರವು ನೀಡಿದ್ದ ವಿಶ್ವಬ್ಯಾಂಕ್ ಯೋಜನೆ ಕುರಿತಂತೆ ಮರುಚಿಂತನೆ ನಡೆಸಿದೆ. ಇದೇ ರೀತಿ ನೇಪಾಳದಲ್ಲಿ ಕೂಡ ಅರುಣ್ ಎಂಬ ಅಣೆಕಟ್ಟು ಯೋಜನೆ ರದ್ದಾಯಿತು.

ಅಣೆಕಟ್ಟುಗಳ ನಿರ್ಮಾಣದಿಂದ ಪರಿಸರದ ಏರು-ಪೇರು, ಅರಣ್ಯನಾಶ, ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಪ್ರದೇಶ, ಅಲ್ಲಿನ ಜೈವಿಕ ವೈವಿಧ್ಯತೆ, ಸಸ್ಯ ಪ್ರಭೇದಗಳು, ಯೋಜನೆಯಿಂದ ನಿರ್ವಸತಿಗರಾಗುವ ಲಕ್ಷಾಂತರ ಕುಟುಂಬಗಳ ಬದುಕು, ಅವರ ಪುನರ್ವಸತಿಯ ಸವಾಲುಗಳು ಇವೆಲ್ಲವೂ ಬೃಹತ್ ಅಣೆಕಟ್ಟಿನ ವಿರೋಧಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳು.

1950 ರಿಂದ 70 ರ ದಶಕದವರೆಗೆ ವಿಶ್ವಬ್ಯಾಂಕ್ ನೆರವಿನಿಂದ ಜಾಗತಿಕವಾಗಿ ವರ್ಷವೊಂದಕ್ಕೆ ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗುತ್ತಿದ್ದವು. ಈಗ ಇದರ ಪ್ರಮಾಣ 200 ಕ್ಕೆ ಕುಸಿದಿದೆ. ಅಂದರೆ ಬೃಹತ್ ಅಣೆಕಟ್ಟುಗಳ ಬಗೆಗಿನ ಭ್ರಮೆ ಕಳಚುತ್ತಿದ್ದು, ವಾಸ್ತವಿಕ ಕಟು ಸತ್ಯಗಳು ಮನದಟ್ಟಾಗುತ್ತಿವೆ.

ಅಣೆಕಟ್ಟಿನಿಂದಾಗಿ ಜಲಾಶಯದಲ್ಲಿ ಶೇಖರವಾಗುವ ನೀರಿನ ಪ್ರಮಾಣ, ಅದರಲ್ಲಿನ ಬದಲಾವಣೆ, ಉಷ್ಣಾಂಶದ ಏರಿಳಿತ, ಅಲ್ಲಿನ ಜಲಚರಗಳ ಸ್ಥಿತಿ-ಗತಿ ಮತ್ತು ಅಣೆಕಟ್ಟು ನಿರ್ಮಾಣದಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಗಬಹುದಾದ ನೈಸರ್ಗಿಕ ಬದಲಾವಣೆ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಅಧ್ಯಯನಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇಂತಹ ಅಣೆಕಟ್ಟುಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾಗೂ ನದಿ ನೀರಿನ ಸಹಜ ಹರಿಯುವಿಕೆಗೆ ಅಡ್ಡಿಯಾಗದ ಸಣ್ಣ-ಸಣ್ಣ ಅಣೆಕಟ್ಟು ಮತ್ತು ಜಲಾಶಯಗಳ ಬಗ್ಗೆ ಚಿಂತನೆ ಆರಂಭವಾಗಿದೆ. ಅಲ್ಲದೆ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಜೀವ ವೈವಿಧ್ಯತೆ ಹಾಗೂ ನದಿಗಳ ನೈಜ ಸ್ವರೂಪವನ್ನು ಕಾಪಾಡುವ ಉದ್ದೇಶದಿಂದ ಹಲವಾರು ನದಿಗಳನ್ನು ಅಣೆಕಟ್ಟು ಮುಕ್ತ ನದಿಗಳೆಂದು ಘೋಷಿಸಲಾಗಿದೆ.

ಸ್ಪೀಡನ್ ಮತ್ತು ನಾರ್ವೆ ರಾಷ್ಟ್ರಗಳು ಈ ದಿಶೆಯಲ್ಲಿ ದೃಢ ಹೆಜ್ಜೆ ಇಟ್ಟ ಪ್ರಥಮ ರಾಷ್ಟ್ರಗಳಾಗಿವೆ. ಈಗ ಅಮೆರಿಕಾ ಕೂಡ ಕೆಲವು ನದಿಗಳ 16 ಸಾವಿರ ಕಿ.ಮೀ. ಉದ್ದದ ಮಾರ್ಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿಷೇಧ ಹೇರಿದೆ. ಬೃಹತ್ ಅಣೆಕಟ್ಟು ಎಂಬ ಪರಿಕಲ್ಪನೆ ಹುಟ್ಟುಹಾಕಿ, ಅಂತಹ ಸಾಹಸಕ್ಕೆ ಚಾಲನೆ ನೀಡಿದ್ದ ಅಮೆರಿಕಾ ದೇಶವೇ ಈಗ, ನದಿಗಳು ಮತ್ತು ಅಣೆಕಟ್ಟು ನಿರ್ಮಾಣ ಕುರಿತಂತೆ ತನ್ನ ಆಲೋಚನಾ ದಿಕ್ಕನ್ನೇ ಬದಲಿಸತೊಡಗಿರುವುದು ಸಧ್ಯದ ಸ್ಥಿತಿಯಲ್ಲಿ ಒಂದು ರೀತಿಯ ಸಮಾಧಾನಕರ ಸಂಗತಿ.

(ಚಿತ್ರಕೃಪೆ: ವಿಕಿಪೀಡಿಯ)

Leave a Reply

Your email address will not be published. Required fields are marked *