Daily Archives: September 27, 2011

“ವರ್ತಮಾನ”ದ ಇಂದಿನ ವರ್ತಮಾನ…

ಸ್ನೇಹಿತರೆ,

“ವರ್ತಮಾನ” ನಾನು ಅಂದುಕೊಂಡಷ್ಟು ವೇಗದಲ್ಲಲ್ಲದಿದ್ದರೂ ಸಮಾಧಾನಕರವಾಗಿ ವಿಕಾಸವಾಗುತ್ತಾ ಹೋಗುತ್ತಿದೆ. ಬಹುಶಃ ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಈಗಾಗಲೆ ಮೂರು ಸರಣಿ ಲೇಖನಗಳು ಪ್ರಕಟವಾಗುತ್ತಿವೆ. ನಾಲ್ಕನೆಯದು ಈ ವಾರ ಆರಂಭವಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಮಾನಮನಸ್ಕರು ಪಾಲ್ಗೊಳ್ಳುತ್ತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಸುಮಾರು ಹತ್ತು ದಿನಗಳನ್ನು ನಾನು ಕರ್ನಾಟಕದ ಬೇರೆಬೇರೆ ಕಡೆ ಪ್ರವಾಸದಲ್ಲಿಯೇ ಕಳೆದದ್ದರಿಂದಾಗಿ ವೈಯಕ್ತಿಕವಾಗಿ ಏನನ್ನೂ ಬರೆಯಲಾಗಲಿಲ್ಲ. ಆದರೆ, ಹೊಸಹೊಸ ಸ್ನೇಹಿತರು ಮತ್ತು ಸಮಾನಮನಸ್ಕರು, ನಮ್ಮಂತಹುದೇ ಆಶಯವುಳ್ಳವರು ಪರಿಚಯವಾಗುತ್ತಲೇ ಹೋಗುತ್ತಿದ್ದಾರೆ. ಯಾವುದೇ ಹಣಕಾಸಿನ ಅಪೇಕ್ಷೆಯಿಲ್ಲದೆ ವಾರಕ್ಕೆ ನಾಲ್ಕಾರು ಗಂಟೆಗಳನ್ನು ನಾವು ಒಪ್ಪಿಕೊಂಡ ಮೌಲ್ಯ ಮತ್ತು ನೀತಿಗಳಿಗಾಗಿ ನೀಡಲು ಜನ ಜೊತೆಯಾಗುತ್ತಲೇ ಇದ್ದಾರೆ.

ಈ ಮಧ್ಯೆ, ಅನಾಮಿಕರು ನಡೆಸುವ “ಸಂಪಾದಕೀಯ” ಬ್ಲಾಗ್ ವರ್ತಮಾನದ ಬಗ್ಗೆ ಬರೆದು ಒಂದೆರಡು ಮಾತು ಬರೆದು ನಮಗೆ ಬೆಂಬಲ, ಪ್ರೋತ್ಸಾಹ, ಮತ್ತು ಪ್ರಚಾರ ನೀಡಿದೆ. ಅವರಿಗೆ ಧನ್ಯವಾದಗಳು. ಕೆಲವು ತುಡಿತಗಳುಳ್ಳ ಜನರಿಗೆ ಅನಾಮಿಕರಾಗಿ ಅಲ್ಲದೆ ಕೆಲವೊಂದು ವಿಚಾರಗಳನ್ನು ಹೇಳಲಾಗದ ಅನಿವಾರ್ಯತೆ ನಮ್ಮಲ್ಲಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇಲ್ಲದಿದ್ದರೂ, ಅವರ ಅನಿವಾರ್‍ಯತೆ ಮತ್ತು ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಅವರ ಅನಿವಾರ್ಯತೆಗಳು ಕ್ರಮೇಣ ಕಳಚಿಕೊಳ್ಳಲಿ ಎಂದು ಹಾರೈಸುತ್ತೇನೆ.

“ಸಂಪಾದಕೀಯ” ಬ್ಲಾಗ್ ಯಾರದು ಎನ್ನುವ ಬಗ್ಗೆ ನನಗೆ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವೂ ಈಗ ಇಲ್ಲ. (ಅದು ಎಂದೂ ಇರಲಿಲ್ಲ ಎಂದು ಹೇಳಲಾರೆ.) ಆದರೆ ಒಂದು ಮಾತಂತೂ ಹೇಳಬೇಕು: ಹಲವಾರು ಸಂದರ್ಭಗಳಲ್ಲಿ “ಸಂಪಾದಕೀಯ” ಬರೆಯುವವರು, ಅನಾಮಿಕವಾಗಿದ್ದರೂ ಸಹ, ಬಹಳ ಸಂಯಮದಿಂದ ಮತ್ತು ಪ್ರಬುದ್ಧತೆಯಿಂದ ಬರೆದಿದ್ದಾರೆ. ತಮ್ಮ ಒಲವು-ನಿಲುವುಗಳನ್ನು ಒಪ್ಪದಿದ್ದವರನ್ನು ವಿಮರ್ಶಿಸುವಾಗಲೂ ಸಹ ಅವರು ಇಂತಹ ಅನಾಮಿಕ ಬ್ಲಾಗ್‌ಗಳಿಗೆ ಹೊರತಾದ ಸಂಯಮ ಸಾಧಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ತಮ್ಮ ಇತರೆ ಮಾಧ್ಯಮ ಸಹೋದ್ಯೋಗಿಗಗಳನ್ನು ವಿಮರ್ಶಿಸುವಾಗ ಮತ್ತು ಮಾಧ್ಯಮಸಂಸ್ಥೆಗಳ ಹಗರಣಗಳನ್ನು ಬರೆಯುವಾಗ ನಮ್ಮ ಪತ್ರಕರ್ತರು ಈ ಮಟ್ಟದ ಸಂಯಮ ತೋರಿಸಿ ಅಂತಹ ವಿಚಾರಗಳನ್ನೂ ಎತ್ತಿಕೊಳ್ಳುವ ಧೈರ್ಯ ತೋರಿಸಿದರೆ, ನಮ್ಮ ಕನ್ನಡ ಮಾಧ್ಯಮರಂಗ ತನ್ನ ಹೊಲಸನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಆದರೆ, ಆ ಆಶಾವಾದ ಈಗ ಸದ್ಯಕ್ಕೆ ಅವಾಸ್ತವವಾದದ್ದು. “ವರ್ತಮಾನ” ಇಂತಹುದನ್ನು ಮಾಡಬೇಕು. ನಮಗೆ ಸರಿಯಾದ ಜನ ಸಿಗಬೇಕು ಅಷ್ಟೆ. ಆಧಾರಸಹಿತವಾಗಿ ಇರುವುದನ್ನು, ಅದು ಯಾರ ವಿರುದ್ಧವೇ ಆಗಲಿ, ಪ್ರಕಟಿಸುವ ಪ್ರಾಮಾಣಿಕತೆ “ವರ್ತಮಾನ” ಎಂದಿಗೂ ಉಳಿಸಿಕೊಳ್ಳುತ್ತದೆ.

ಅಂದ ಹಾಗೆ, ಮುಖ್ಯವಾದ ವಿಷಯ ಇದೇನೆ, “ವರ್ತಮಾನ”ದ ಜೊತೆ ಕೈಜೋಡಿಸುವ ಜನ ಈಗ ಹಿಂದೆಂದಿಗಿಂತ ಹೆಚ್ಚಿಗೆ ಬೇಕಾಗಿದ್ದಾರೆ. ನೀವು ಲೇಖಕರೇ ಆಗಬೇಕಿಲ್ಲ. ನಮ್ಮ ಲೇಖಕ ಮಿತ್ರರು ನುಡಿ ಇಲ್ಲವೆ ಬರಹದಲ್ಲಿರುವ ಲೇಖನಗಳನ್ನು ಕಳುಹಿಸುತ್ತಾರೆ. ನಾವು ಅದನ್ನು ಯೂನಿಕೋಡ್‌ಗೆ ಪರಿವರ್ತಿಸಿ ಪ್ರಕಟಿಸಬೇಕಾಗುತ್ತದೆ. ಅದು ಒಮ್ಮೊಮ್ಮೆ ಒಂದಷ್ಟು ಸಮಯ ಬೇಡುತ್ತದೆ. ಒಂದು ಲೇಖನವನ್ನು ಪ್ರಕಟಿಸಲು (ಯೂನಿಕೋಡ್ ಪರಿವರ್ತನೆ, ಕೋಟ್ಸ್‌ಗಳನ್ನು, ಸಂಖ್ಯೆಗಳನ್ನು ಉಳಿಸಿಕೊಳ್ಳುವುದು, ಲೇಖನವನ್ನು ಫಾರ್ಮ್ಯಾಟ್ ಮಾಡುವುದು, ಫೋಟೋಗಳನ್ನು ಸೇರಿಸುವುದು, ಇತ್ಯಾದಿ) ಕನಿಷ್ಟ ಸರಾಸರಿ ಅರ್ಧ ಘಂಟೆಯಾದರೂ ಹಿಡಿಯುತ್ತದೆ. ಇಂತಹ ಕೆಲಸಕ್ಕೆ ನಮಗೆ ಒಂದಿಷ್ಟು ಕಾಯಕದಾನಿಗಳ ಅವಶ್ಯಕತೆ ಇದೆ. ಹಾಗೆಯೆ, ಈಗ ನನ್ನ ಬಳಿ ಸುಮಾರು ಮೂರು ಗಂಟೆಗಳ ವಿಡಿಯೋ ಇದೆ. ಮ್ಯಾಗ್ಸೆಸೇ ಪುರಸ್ಕೃತ ಹರೀಶ್ ಹಂದೆಯವರೊಡನೆ ಮಾತನಾಡಿರುವುದೇ ಸುಮಾರು ಎರಡು ಗಂಟೆಗಳದಿದೆ. ಇದನ್ನು ಹತ್ತು-ಹದಿನೈದು ನಿಮಿಷಗಳ ಸೆಗ್ಮೆಂಟ್‌ಗಳಿಗೆ ಎಡಿಟ್‌ ಮಾಡಿ, ಯೂಟ್ಯೂಬ್‌ಗೆ ಏರಿಸುವ ಕೆಲಸದಲ್ಲಿ ಸಹಾಯ ಬೇಕಿದೆ. ಇದೇನೂ ಹೆಚ್ಚಿನ ತಾಂತ್ರಿಕ ಪರಿಣತಿ ಬೇಡುವುದಿಲ್ಲ. ಇದನ್ನು ವಿಂಡೋಸ್ ಮೂವಿ ಮೇಕರ್ ಬಳಸಿಕೊಂಡು ಮಾಡುವುದು ಹೇಗೆ ಎಂದು ಹತ್ತು-ಹದಿನೈದು ನಿಮಿಷದಲ್ಲಿ ನಾನೇ ಹೇಳಿಕೊಡಬಲ್ಲೆ. ಆಸಕ್ತ ಗೆಳೆಯರು ದಯವಿಟ್ಟು ಸಂಪರ್ಕಿಸಿ. ಬಹಳ ಸಹಾಯವಾಗುತ್ತದೆ. ಇಂತಹ ಕೆಲಸಗಳಿಗೆ ಸ್ನೇಹಿತರು ಕೈಜೋಡಿಸುತ್ತ ಹೋದಂತೆ ಈ ವೆಬ್‌ಸೈಟ್ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ಸಾಂಘಿಕವಾಗಿ, ಸಮುದಾಯದ ವೇದಿಕೆಯಾಗಿ, ಸ್ವತಂತ್ರವಾಗಿ ಮೂಡಿಬರಲು ಸಾಧ್ಯವಾಗುತ್ತದೆ. ನಿಮಗೆ ಇದು ಸಾಧ್ಯ ಎಂದಾದರೆ, ಈ ವಿನಂತಿಯನ್ನೇ ನಿಮಗೆಂದೇ ಬರೆದ ವೈಯಕ್ತಿಕ ಪತ್ರ ಎಂದುಕೊಳ್ಳಿ. ಸಂಪರ್ಕಿಸಿ.

ಹಾಗೆಯೇ, ಕನ್ನಡದಲ್ಲಿ ಬರೆಯುವ ನಮ್ಮ ಬರಹಗಾರ ಮಿತ್ರರು ತಮ್ಮ ಲೇಖನಗಳನ್ನು ಯೂನಿಕೋಡ್‌ನಲ್ಲಿ ಬರೆದು ಕಳುಹಿಸಿದರೆ, ಮತ್ತೂ ಉಪಕಾರವಾಗುತ್ತದೆ.

ಕಳೆದ ವಾರ ಆಲಮಟ್ಟಿ-ಬಾಗಲಕೋಟೆ-ಮುಧೋಳ-ಜಮಖಂಡಿ-ಬಿಜಾಪುರಗಳ ಪ್ರವಾಸದಲ್ಲಿದ್ದೆ. ಅಲ್ಲಿ ಕಂಡದ್ದು ಮತ್ತು ಕೇಳಿದ್ದರ ಬಗ್ಗೆ ಈಗಾಗಲೆ ಬರೆಯಬೇಕಾಗಿತ್ತು. ಕನಿಷ್ಠ ಪಕ್ಷ ಮುಧೋಳ ತಾಲ್ಲೂಕಿನ ಚಾರಿತ್ರಿಕ ಸ್ಥಳವಾದ ಹಲಗಲಿ ಊರಿನ ಬಗ್ಗೆಯಾದರೂ ಬರೆಯಬೇಕಿತ್ತು. ಕೆಲಸದ ಒತ್ತಡದಿಂದಾಗಿ ಮತ್ತು ಬರವಣಿಗೆಗೆ ಬೇಕಾದ ಮಾನಸಿಕ ಸ್ಥಿತಿಯ ಅಭಾವದಿಂದಾಗಿ ಇನ್ನೂ ಆಗಿಲ್ಲ. ಆದಷ್ಟು ಬೇಗ ಬರೆಯಬೇಕು ಎಂದುಕೊಳ್ಳುತ್ತಿದ್ದೇನೆ. ಹೆಚ್ಚಿನ ಸಮಯ ಮಾತು ಮತ್ತು ಭೇಟಿಯಲ್ಲಿ ಕಳೆಯುತ್ತಿದೆ.

ಈ ಶನಿವಾರ ಮತ್ತೆ ಪ್ರವಾಸ ಹೋಗುತ್ತಿದ್ದೇನೆ. ಈ ಬಾರಿ ಉಡುಪಿ-ಮಂಗಳೂರು, ಮತ್ತು ನಂತರ ಬೇಲೂರು-ಹಳೇಬೀಡು-ಹಾಸನದ ಸುತ್ತಮುತ್ತ. ಭಾನುವಾರ, ಗಾಂಧಿ ಜಯಂತಿಯಂದು ಉಡುಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವುದಿದೆ. ಅದಕ್ಕಿಂತ ಮೊದಲು ದಾರಿಯಲ್ಲಿ ಅರವಿಂದ ಚೊಕ್ಕಾಡಿಯವರ ಭೇಟಿ ಆಗಬಹುದು. ಕಾರ್ಕಳದಲ್ಲಿ ಒಂದಿಬ್ಬರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಮಂಗಳೂರಿನಲ್ಲೂ ಸ್ನೇಹಿತರ ಭೇಟಿಗೆ ವ್ಯವಸ್ಥೆ ಆಗುತ್ತಿದೆ. ಈ ಬಾರಿ ಕುಟುಂಬದವರೊಂದಿಗೆ ಹೋಗುತ್ತಿರುವುದರಿಂದ ಸಾಕಷ್ಟು ಸಮಯ ಕಳೆಯಲು ಆಗದಿದ್ದರೂ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಸಮಯ ಇದ್ದೇ ಇರುತ್ತದೆ.

ಕೊನೆಯದಾಗಿ, ಲೇಖನಗಳನ್ನು ಕಳುಹಿಸುತ್ತೇವೆ ಎಂದ ಮಿತ್ರರಿಗೆ ಈ ಮೂಲಕ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ನನ್ನ ಒಂದಷ್ಟು ಒತ್ತಡಗಳು ಕಮ್ಮಿಯಾದರೆ, ಈ ವೆಬ್‌ಸೈಟ್‌ನ ಇತರೆ ಆಡಿಯೊ-ವಿಡಿಯೋ ಸಾಧ್ಯತೆಗಳತ್ತ, ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಸ್ನೇಹಿತರನ್ನು ವರ್ತಮಾನಕ್ಕೆ ಪರಿಚಯಿಸುವುದರತ್ತ, ಮತ್ತು ಕೆಲವೊಂದು ದಾಖಲೆ ಸಮೇತ ಪ್ರಕಟಿಸಬಹುದಾದ ಪ್ರಕಟಣೆಗಳತ್ತ ಒಂದಷ್ಟು ಗಮನ ಹರಿಸಬಹುದು.

ನಮಸ್ಕಾರ,
ರವಿ…

ಇವು ಕಳೆದ ವಾರದ ಪ್ರವಾಸದ ಕೆಲವು ಚಿತ್ರಗಳು:

http://www.facebook.com/media/set/?set=a.193219764084030.49338.100001880229123&l=0af359f1e1&type=1

Anna_Hazare

ಅಣ್ಣಾ… ನಿನ್ನ ಉಪವಾಸ ಮಲಿನ ಮನಸ್ಸುಗಳನ್ನು ತಿಳಿಗೊಳಿಸಲಿ.

– ಚಿದಂಬರ ಬೈಕಂಪಾಡಿ

ಅಂದು ಬದುಕಿಗೆ ವಿದಾಯ ಹೇಳಲು ಕಾಗದ ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ ಅಣ್ಣಾ ಹಜಾರೆ ಅನೇಕ ದಶಕಗಳಿಂದ ನಖ ಶಿಖಾಂತ ಹರಡಿಕೊಂಡಿರುವ ಭ್ರಷ್ಟಾಚಾರದ ಬೇರನ್ನು ಕೀಳಲು ಪಣತೊಟ್ಟದ್ದು ಐತಿಹಾಸಿಕ ಘಟನೆ. ಹದಿಮೂರು ದಿನಗಳ ಕಾಲ ರಾಮಲೀಲಾ ಮೈದಾನದಲ್ಲಿ ಉಪವಾಸ ಮಾಡಿದ ಅಣ್ಣಾ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮಾಧಿಕಾರ ಹೊಂದಿದೆ, ಅಂಥ ಸಂಸತ್ತನ್ನೇ ನಡುಗಿಸಿದವರು ಅಣ್ಣಾ ಎಂದು ಅವರನ್ನು ಸುತ್ತುವರಿದಿದ್ದವರು ಬೆನ್ನುತಟ್ಟಿಕೊಳ್ಳಬಹುದು. ಸಂವಿಧಾನಿಕ ಸಂಸ್ಥೆಯ ಗಡಿದಾಟಿ ಹೋಗುವುದು ಕೂಡಾ ಐತಿಹಾಸಿಕ ಘಟನೆ, ಅಂಥ ಯತ್ನ ನಡೆದದ್ದು ಮಾತ್ರ ವಿಷಾದನೀಯ.

ಹಳ್ಳಿಗಾಡಿನ ಅಣ್ಣಾ ದಿಲ್ಲಿವಾಲಾಗಳು ತಡಬಡಾಯಿಸುವಂತೆ ಮಾಡಿದರು ನಿಜ, ಅಣ್ಣಾ ಅವರ ಹೋರಾಟಕ್ಕೆ ಮಂಡಿಯೂರಿದ ಸರ್ಕಾರ ಕೂಡಾ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಆದರೆ ಈ ದಾಖಲೆ ಋಣಾತ್ಮಕ ಸಂದೇಶವನ್ನು ರವಾನಿಸುತ್ತದೆ ಎನ್ನುವುದನ್ನು ಮರೆಯಬಾರದು. ಒಂದು ವಿಮಾನ ಅಪಹರಣ ಮಾಡಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡು ಬೇಡಿಕೆಗಳ ಈಡೇರಿಕೆಗಾಗಿ ಆಡಳಿತ ವ್ಯವಸ್ಥೆಯನ್ನು ಮಂಡಿಯೂರುವಂತೆ ಮಾಡುವ ಕ್ರಮಕ್ಕಿಂತ ಭಿನ್ನವಾದುದು ರಾಮಲೀಲಾ ಮೈದಾನದ ಸತ್ಯಾಗ್ರಹ ಎಂದು ಅನೇಕರಿಗೆ ಅನ್ನಿಸಿದರೆ ತಪ್ಪಲ್ಲ.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುಡಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅಣ್ಣಾ ಅವರ ಸತ್ಯಾಗ್ರಹವನ್ನು ಕಟುವಾಗಿ ಟೀಕಿಸಿದ್ದು ಒಂದು ವರ್ಗವನ್ನು ಸಿಟ್ಟಿಗೇಳಿಸಿತು. ‘ಬೆವಕೂಫ್ ’ ಎನ್ನುವ ದಾಟಿಯಲ್ಲಿ ರಾಮಲೀಲಾ ಮೈದಾನದಿಂದ ಬುದ್ಧಿವಂತರು ಕಿರುಚಿಕೊಂಡಾಗ ಸ್ವತ: ಅಣ್ಣಾ ಅವರು ಕೇಳಿಸಿಕೊಂಡಿದ್ದರೆ ಕ್ಷಮೆಯಾಚಿಸುತ್ತಿದ್ದರೇನೋ ?. ಯಾಕೆಂದರೆ ಇಳಿವಯಸ್ಸಿನ ಅಣ್ಣಾ ಪ್ರಧಾನಿಯರ ಬಗ್ಗೆ ಆಡಿದ ಮಾತಿಗೆ ಮನನೊಂದುಕೊಂಡರು. ಸಂಸತ್ತಿನ ಹೊರಗಿರುವವರ ಹಟಮಾರಿತನದ ಬೇಡಿಕೆಗಳನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಬೇಡಿಕೆಗಳು ಮಂಡನೆಯಾಗಲು ಅನುವಾಗುತ್ತದೆ ಎನ್ನುವ ರಾಹುಲ್ ಧ್ವನಿ ತಳ್ಳಿಹಾಕುವಂತಿಲ್ಲ.

ಭ್ರಷ್ಟಾಚಾರಿಗಳ ಕುತ್ತಿಗೆಗೆ ಕುಣಿಕೆ ಹಾಕಲು ಅಗತ್ಯವಾದ ಹಗ್ಗಹೊಸೆಯಲು ಸಂಸತ್ತು ಒಪ್ಪಿಕೊಂಡಿತು ನಿಜ, ಆದರೆ ಇಂಥ ಹಗ್ಗ ಹೊಸೆಯುವವರಲ್ಲಿ  ಲಾಲೂ, ಪಾಸ್ವಾನ್, ಅಮರ್ ಸಿಂಗ್ ಮುಂತಾದವರು ಕೈಜೋಡಿಸುತ್ತಾರೆ ಎಂದಾದಾಗ ಒಂದಷ್ಟು ಸಂಶಯಗಳು ಮೂಡುವುದು ಸಹಜ. ಯಾಕೆಂದರೆ ಇಂಥವರು ಬಿಳಿ ದಿರಿಸು ತೊಟ್ಟು ಹೊಳೆದರೂ ಅವರ ಮೈಮೇಲಿನ ಕಲೆಗಳು ಮಾತ್ರ ಮರೆಯಾಗುವುದಿಲ್ಲ. ಜನರ ನೆನಪುಗಳು ಬಹುಕಾಲ ಬಾಳುವಂಥವಲ್ಲ ಅಂದುಕೊಂಡರೂ ಇವರನ್ನು ಮೆತ್ತಿಕೊಂಡಿರುವ ಹಗರಣಗಳು ಮರೆತುಬಿಡುವಂಥವಲ್ಲ.

ಅಣ್ಣಾ ಟೀಮಿನ ಸಚ್ಚಾರಿತ್ರ್ಯರ ನಡುವೆಯೇ ಪ್ರಶ್ನಿಸಲು ಅರ್ಹರ ಮುಖಗಳಿರುವುದೂ ಸತ್ಯ. ಒಂದು ಕಾಲದಲ್ಲಿ ಜನರಿಂದ ಮೆಚ್ಚುಗೆ ಗಳಿಸಿದವರು ಸ್ವಯಂಸೇವೆಯ ಹೆಸರಲ್ಲಿ ಸುಂದರವಾದ ಬದುಕು ಸವೆಸಿದರೆ ಅದನ್ನು ಉದಾರವಾಗಿ ಕಾಣಲು ಸಾಧ್ಯವೇ?. ಭಾರತದ ಹಳ್ಳಿಯ ಜನರ ಜೋಲು ಮುಖ, ಕೊಳಚೆ, ಜೋಪಡಿಯ ಮುಗ್ಧ ಮಕ್ಕಳನ್ನು ಸಾಗರದಾಚೆ ತೋರಿಸಿ ಬದುಕುವ ಈ ನೆಲದ ಜೀವಗಳ ಬಗ್ಗೆ ಕನಿಕರ ಪಡಬೇಕಲ್ಲವೇ?.

ಇದೆಲ್ಲವನ್ನು ಬದಿಗಿಟ್ಟು ಅಣ್ಣಾ ಸೂತ್ರಗಳನ್ನು ಒಪ್ಪಿಕೊಂಡ ಮಾತ್ರಕ್ಕೇ ದೇಶ, ರಾಜ್ಯ, ಜಿಲ್ಲಾಮಟ್ಟದಲ್ಲಿಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಭ್ರಷ್ಟಾಚಾರದ ಸುಕ್ಕುಗಳು ಬಿಡಿಸಿಕೊಳ್ಳುತ್ತವೆ ಎಂದಾಗಲೀ, ಹಳ್ಳಿಯ ಪಂಚಾಯಿತಿ ಕಚೇರಿಯ ಗುಮಾಸ್ತ ಮಿಸ್ಟರ್ ಕ್ಲೀನ್ ಆಗಿಬಿಡುತ್ತಾನೆ ಅಂದುಕೊಳ್ಳುವಂತಿಲ್ಲ. ಒಂದಷ್ಟು ಮಂದಿ ರಾಮಲೀಲಾ ಮೈದಾನದಲ್ಲಿ ಟಿವಿ ಕ್ಯಾಮರಾಗಳ ಮುಂದೆ ಪ್ರಮಾಣ ಮಾಡಿದ ಮಾತ್ರಕ್ಕೆ ಭ್ರಷ್ಟಾಚಾರ ಸಾರಾಸಗಟಾಗಿ ಅಳಿಸಿಹೋಗುತ್ತದೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

Anna_Hazare

Anna_Hazare

ಭೂಮಿ ನೋಂದಾವಣೆ ಮಾಡುವ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚಗುಳಿತನ ಇಲ್ಲವೇ ಇಲ್ಲವೆಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೇ?. ಈ ಕಚೇರಿಗಳನ್ನು ಲಂಚಮುಕ್ತವನ್ನಾಗಿಸಲು ಕಾನೂನುಗಳಿಂದ ಸಾಧ್ಯವೇ ?. ಅಣ್ಣಾ ತಂಡ ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಲಂಚ ಯಾವ ಸ್ವರೂಪದಲ್ಲಿ ಸಂದಾಯವಾಗಬೇಕೋ ಸಂದಾಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿ, ಲೋಕೋಪಯೋಗಿ, ಕೃಷಿ, ಅರಣ್ಯ, ತೆರಿಗೆ, ಶಿಕ್ಷಣ ಹೀಗೆ ಸರ್ಕಾರದ ಕಚೇರಿಗಳು ಭ್ರಷ್ಟಾಚಾರದ ಕೊಂಪೆಗಳಾಗಿವೆ ಎಂದು ಹೆಸರು ಕೂಗಿ ಕರೆಯಬೇಕೇ?. ಲೋಕಾಯುಕ್ತ, ಲೋಕಪಾಲ ಅಥವಾ ಅಣ್ಣಾ ತಂಡದ್ದೇ ಕಾನೂನು ಬಂದರೂ ಭ್ರಷ್ಟ ಕೈಗಳು ಶುದ್ಧವಾಗುವುದಿಲ್ಲ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಮನಸ್ಸುಗಳು ಭ್ರಷ್ಟವಾಗಿಬಿಟ್ಟಿವೆ ಅನ್ನಿಸುವುದಿಲ್ಲವೇ?. ಕೈಗಳನ್ನು ನಿಯಂತ್ರಿಸುವ ಮನಸ್ಸುಗಳೇ ಮಲಿನವಾಗಿರುವುದರಿಂದ ಅಲ್ಲಿಂದ ರವಾನೆಯಾಗುವ ಸಂದೇಶಗಳೇನು?.

ಮುಗ್ಧ ಅಣ್ಣಾ ಕೊಟ್ಟ ಭ್ರಷ್ಟಾಚಾರ ನಿಯಂತ್ರಣ ಸಂದೇಶವನ್ನು ಅರ್ಥೈಸುವಲ್ಲೂ ಶಾಸಕಾಂಗದೊಳಗೆ ಕೆಲಸ ಮಾಡುವ ಕೆಲವು ಮನಸ್ಸುಗಳು ಎಡವಿದವು. ಸಂಸತ್ತನ್ನೇ ಹೈಜಾಕ್ ಮಾಡುವ ತಂತ್ರವೆಂದು ಟೀಕಿಸಿದ್ದು ಸ್ವಲ್ಪಮಟ್ಟಿಗೆ ಸತ್ಯಕ್ಕೆ ಹತ್ತಿರವಾದರೂ ಸಂಸತ್ತಿನೊಳಗೆ ನಡೆದುಕೊಳ್ಳುವ ನಡವಳಿಕೆಗಳೂ ಕೆಲವೊಮ್ಮೆ ಸಂಯಮದ, ನಡವಳಿಕೆಯ ಗೆರೆ ದಾಟಿರುವುದೂ ನಿಜ. ಓಟಿಗಾಗಿ ನೋಟು, ಚುನಾಯಿತ ಜನಪ್ರತಿನಿಧಿಗಳು ಕುದುರೆಗಳಂತೆ ಬಿಕರಿಯಾಗುವುದು, ಆಮಿಷಗಳಿಗೆ ಬಲಿಯಾಗಿ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಪಕ್ಷಾಂತರ ಮಾಡುವುದು ಕೂಡಾ ಭ್ರಷ್ಟಾಚಾರದಷ್ಟೇ ಅನಿಷ್ಟವಾದುದು ಎಂದರೆ ಯಾರೂ ಸಿಟ್ಟಾಗಬೇಡಿ.

ಅಸಾಮಾನ್ಯ ಕಳ್ಳನನ್ನು ಹಿಡಿಯಲು ಕಳ್ಳನಿಂದ ಮಾತ್ರ ಸಾಧ್ಯ. ಅಸಾಮಾನ್ಯ ಕಳ್ಳನ ಕಳವಿನ ತಂತ್ರಗಳು ಸಾಮಾನ್ಯ ಕಳ್ಳನಿಗೆ ಮಾತ್ರ ಗೊತ್ತಿರಲು ಸಾಧ್ಯ ಹೊರತು ಕಳ್ಳನಲ್ಲದಿದ್ದವನಿಗೆ ಗೊತ್ತಿರಲು ಅಸಾಧ್ಯ. ಭ್ರಷ್ಟಾಚಾರವನ್ನು ಹತ್ತಿಕ್ಕಲು ಅಣ್ಣಾ ಹಜಾರೆ ಉಪವಾಸ ಮಾಡಿ ಮಸೂದೆ ಜಾರಿಗೆ ಒತ್ತಾಯಿಸಿದ್ದು ಇತಿಹಾಸದ ಒಂದು ಪುಟವಾಗಿ ಪ್ರಸ್ತುತವಾಗುತ್ತದೆ ನಿಜ, ಆದರೆ ಭ್ರಷ್ಟಾಚಾರ ಅಳಿಸಿ ಹಾಕುವುದು ಹಜಾರ್ ಅಣ್ಣಾಗಳು ಉಪವಾಸ ಮಾಡಿದ ಮಾತ್ರಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಭ್ರಷ್ಟಾಚಾರದಿಂದಲೇ ಕೋಟ್ಯಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಕಾಯಿದೆ-ಕಾನೂನುಗಳು ನೆಪವಾಗಬಹುದೇ ಹೊರತು ಪರಿಹಾರ ಕೊಡಲಾರವು. ಹಳ್ಳಿಯ ಸಾಮಾನ್ಯನಿಂದ ಹಿಡಿದು ದಿಲ್ಲಿಯ ಅಸಾಮಾನ್ಯನವರೆಗೆ; ಹಳ್ಳಿಯ ಪುಟ್ಟ ಪಂಚಾಯಿತಿಯಿಂದ ಸಂಸತ್ತಿನೊಳಗೆ ಕುಳಿತುಕೊಳ್ಳುವವರತನಕ; ಹಳ್ಳಿಯ ಮರದ ಕೆಳಗೆ ಕುಳಿತು ಕಾಲಕಳೆಯುವವರಿಂದ ಹಿಡಿದು ರಾಮಲೀಲಾ ಮೈದಾನದಲ್ಲಿ ನಿಂತು ಮಾತನಾಡಬಲ್ಲವರತನಕ ಮನಸ್ಸುಗಳು ತಿಳಿಯಾಗಬೇಕು. ಭ್ರಷ್ಟ ಕೈಗಳಿಗಿಂತಲೂ ಮಲಿನಗೊಂಡಿರುವ ಮನಸ್ಸುಗಳು ಅಪಾಯಕಾರಿ.

ಅಣ್ಣಾ ನಿರ್ಮಲ ಮನಸ್ಸಿನಿಂದ ಮಾಡಿದ ಉಪವಾಸದಿಂದ ಅವರ ದೇಹ ದಣಿಯಿತು, ಸರ್ಕಾರ ಮಣಿಯಿತು ನಿಜ. ಇದಿಷ್ಟೇ ಅಣ್ಣಾ ಅವರ ದೇಹದಂಡನೆಗೆ ಸಿಕ್ಕ ಪ್ರತಿಫಲ ಅಂದುಕೊಳ್ಳಬೇಕೇ?ಖಂಡಿತಕ್ಕೂ ಅಣ್ಣಾ ಮಾಡಿದ ಉಪವಾಸ ಸಾರ್ಥಕವಾಗಬೇಕಾದರೆ ಮಲಿನಗೊಂಡಿರುವ ಮನಸ್ಸುಗಳು ಪರಿಶುದ್ಧವಾಗಬೇಕು. ಅಂಥ ಮನಸ್ಸುಗಳು ಮೊಳಕೆಯೊಡೆಯಲು ರಾಮಲೀಲಾ ಮೈದಾನದಲ್ಲಿ ಅಣ್ಣಾ ಮಲಗಿ ಕಳೆದ ದಿನಗಳು ಪ್ರೇರಣೆಯಾಗಲಿ, ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)