Daily Archives: September 29, 2011

ವ್ಯಂಗ್ಯ (ವಿ)ಚಿತ್ರ

-ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

ಮಂಟೇಸ್ವಾಮಿ ಪರಂಪರೆಯೂ ಆಧ್ಯಾತ್ಮಿಕ ದಂಗೆಕೋರ ಮಾರ್ಗವೂ

ಕೆ.ಎಲ್.ಚಂದ್ರಶೇಖರ್ ಐಜೂರ್

ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಉಜ್ಜನನ್ನು ಶಿವಶರಣನನ್ನಾಗಿಸಲೇಬೇಕೆಂಬ ಹಟವಿಡಿದಿರುವ ರುದ್ರನ ಅಸಹಾಯಕತೆ ಮತ್ತು ಹೆಂಡ ಮಾಂಸ ಬಿಟ್ಟು ಶಿವಶರಣನಾಗಲು ಒಪ್ಪದ ಉಜ್ಜ ನಮ್ಮನ್ನು ಕಾಡುವಷ್ಟೇ “ನನ್ನನ್ನು ಪ್ರೀತಿಸುವಾಗ ಹೊಲೆಯರ ರುದ್ರನಾಗಿದ್ದವ ಬಲಾತ್ಕಾರಿಸುವಾಗ ಶಿವಶರಣ ರುದ್ರನಾಗಿದ್ದ,” ಎಂದು ಹೇಳಿ ಬಸವಣ್ಣನನ್ನೇ ಬೆಚ್ಚಿಬೀಳಿಸಿ ರುದ್ರನ ತಲೆದಂಡಕ್ಕೆ ಕಾರಣವಾಗುವ ಉಷಾ ಕೂಡ ನಮ್ಮನ್ನು ಕಾಡಬಲ್ಲಳು. ಎಲ್ಲ ಕಾಲದ ಮುಳ್ಳಿನ ಮೇಲೂ ನಿಂತುಪ್ರಶ್ನೆ ಮಾಡಬಲ್ಲ ಹೆಣ್ಣಿನಂತೆ ಕಾಣುವ ಉಷಾ ಹೊಲೆಯರ ರುದ್ರನನ್ನು ಪ್ರೀತಿಸಿ ಶಿವಶರಣ ರುದ್ರನನ್ನು ಕಳೆದುಕೊಳ್ಳುವ ದಿಟ್ಟೆ. ಕೆಲವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ “ನಿಮ್ಮ ಜಾತಿಯ ಬಗ್ಗೆ ಕೀಳರಿಮೆ ಇತ್ತಾ? ಇದೆಯಾ?” ಎಂಬ ಪ್ರಶ್ನೆಯೊಂದಕ್ಕೆ ದೇವನೂರ ಮಹಾದೇವ ಅವರು “ಇತ್ತು. ಈಗ ಮೇಲರಿಮೆ ಇದೆ. ನನ್ನ ಜಾತಿ ಯಾರನ್ನೂ ಕೊಂದಿಲ್ಲ. ಅವಮಾನಿಸಿಲ್ಲ. ಸುಲಿದಿಲ್ಲ, ತಿಂದಿಲ್ಲ,” ಎಂಬ ಉತ್ತರ ನೀಡಿದ್ದರು. ದೇವನೂರರು ಹೀಗೆ ಉತ್ತರ ಕೊಡುವವರೆಗೂ ಯಾವ ದಲಿತನಿಗೂ ತನ್ನ ಜಾತಿಯನ್ನು ಮೇಲರಿಮೆಯ ಕಣ್ಣುಗಳಿಂದ ನೋಡಬಹುದೆಂಬ ಸ್ಪಷ್ಟ ಆಕಾರಗಳೆ ದಕ್ಕಿರಲಿಲ್ಲ.

ನಮ್ಮನಡುವಿನ ಸೂಕ್ಷ್ಮಗಣ್ಣಿನ ಲೇಖಕ ಹುಲಿಕುಂಟೆ ಮೂರ್ತಿ ತಮ್ಮ ಸ್ನಾತಕೋತ್ತರಪದವಿಯ ಸಲುವಾಗಿ “ಮಂಟೇಸ್ವಾಮಿ ಪರಂಪರೆಯಲ್ಲಿ ’ಜಾತಿ’ ಕುರಿತ ಅಧ್ಯಯನ”ವನ್ನೇ ತಮ್ಮ ಸಂಶೋಧನೆಯ ವಸ್ತುವಾಗಿಸಿಕೊಂಡಿದ್ದಾರೆ. ಸಂಶೋಧನೆಯೆಂದರೆ ಸಮುದಾಯವೊಂದು ಕಳೆದುಕೊಂಡ ಹಾಡನ್ನು ಹುಡುಕಿ ಹೊರಡುವುದು. ಇಂಥದೊಂದು ಪ್ರಯತ್ನಕ್ಕೆ ತಾವು ನಿಂತ ನೆಲದಿಂದಲೇ ಶೋಷಿತ ಸಮುದಾಯದ ಸಾಂಸ್ಕೃತಿಕನಾಯಕರನ್ನು ಹುಡುಕುವ ಭಾಗವಾಗಿ ಆದಿಮ ಸಂಸ್ಕೃತಿಯ ನೆಲಮೂಲದ ಜಾತಿಯ ಬಾಗಿಲುಗಳಿಂದಲೇ ಲೇಖಕರು ಪ್ರವೇಶಿಸಿದ್ದಾರೆ. ಲೇಖಕರು ಕಟ್ಟಿಕೊಟ್ಟಿರುವ ಈ ಪಠ್ಯ “ಮಂಟೇಸ್ವಾಮಿ ಕಾವ್ಯ, ಧರೆಗೆ ದೊಡ್ಡವರ ಕತೆ, ಮಂಟೇಸ್ವಾಮಿ ಪರಂಪರೆ, ನೀಲಗಾರರು-ಸಾಂಸ್ಕೃತಿಕ ಪದಕೋಶ ಮತ್ತು ಚಿಕ್ಕಲ್ಲೂರು ಜಾತ್ರೆ”ಗಳಂತೆ ವಿಶಾಲ ಚೌಕಟ್ಟಿನ ಕೃತಿಯಲ್ಲದಿದ್ದರೂ ಕೂಡ “ಪರಂಜ್ಯೋತಿ” ಆ ಕೃತಿಗಳ ದೊಂದಿ ಹಿಡಿದು ತಳ ಸಮುದಾಯಗಳ ಪರಂಪರೆಯೊಂದರ ಜಾತಿ ಕಥಾನಕವನ್ನು ಸರಾಗವಾಗಿ ಹೇಳಿದೆ. ಈ ಕೃತಿಗಳೆಲ್ಲದರಿಂದಲೂ ಪಡೆದ ಸ್ಫೂರ್ತಿ ಮಂಟೇಸ್ವಾಮಿ ಪರಂಪರೆಯನ್ನು ಶೋಷಿತ ಸಮುದಾಯಗಳೇ “ಪರಂಜ್ಯೋತಿ”ಯಾಗಿ ಸೃಷ್ಟಿಸಿಕೊಳ್ಳುತ್ತವೆ ಎಂಬುದಕ್ಕೆ ಲೇಖಕರು ಹೆಚ್ಚಿನ ಪುರಾವೆಗಳನ್ನು ಒದಗಿಸಿದ್ದಾರೆ. “ಯಾವ ಬಸವಣ್ಣ ಅಸ್ಪೃಶ್ಯರಿಗೆ ತಮ್ಮ ಅಸ್ಮಿತೆಯ ಭಾಗವಾಗಿದ್ದ ಆಹಾರ ಮತ್ತು ಆಚರಣೆಗಳನ್ನು ಬಿಟ್ಟು ಬಂದು ಶರಣರಾಗಿ ಎಂದು ಕರೆ ನೀಡಿದನೋ ಆ ಪ್ರಕ್ರಿಯೆಯನ್ನು ಮಂಟೇದರು ಲೇವಡಿ ಮಾಡಿ ’ನಾವು ನಮ್ಮ ಯಾವುದನ್ನೂ ಬಿಡಬೇಕಾಗಿಲ್ಲ; ನಮ್ಮ ಬದುಕಿನ ಮೌಲ್ಯಗಳು ಕೀಳೇನಲ್ಲ; ಅವೇ ನಿಜ ಶ್ರೇಷ್ಟತೆಯನ್ನು ಹೊಂದಿರುವಂತಹವು.’ ಎಂದರು. ಅದೇ ನಡೆಯಲ್ಲಿ ಈಗಾಗಲೇ ವಿಕಲತೆಗೆ ಒಳಗಾಗಿದ್ದ ಸಮುದಾಯಗಳಿಗೆ ಮರಳಿ ಶಕ್ತಿ ತುಂಬುತ್ತಾರೆ,” ಎಂಬ ಕೋಟಿಗಾನಹಳ್ಳಿ ರಾಮಯ್ಯನವರ ಮಾತುಗಳು ಮಂಟೇಸ್ವಾಮಿ ಪರಂಪರೆಯೆಡೆಗೆ ಬೆರಗು ಮೂಡಿಸುತ್ತವೆ.

“ಹೆಂಡ, ಮಾಂಸ ಎಲ್ಲವನ್ನೂ ಉನ್ನತೀಕರಿಸುವ, ಆಧ್ಯಾತ್ಮೀಕರಿಸುವ ಮೂಲಕ ಜಾತಿಪದ್ಧತಿಯ ಅವಮಾನಗಳನ್ನೂ ದಾಟುವ ಪ್ರಯತ್ನವನ್ನು ಮಂಟೇಸ್ವಾಮಿ ಮಾಡುತ್ತಾರೆ. ಜಾತಿ ಒಳಗಡೆ ಇದ್ದು ಜಾತಿಯಿಂದ ಆಚೆಗೆ ಹೋಗುವ ಒಂದು ಆಧ್ಯಾತ್ಮಿಕ ದಂಗೆಯ ಮಾರ್ಗವನ್ನುಮಂಟೇಸ್ವಾಮಿ ಪರಂಪರೆ ಹೇಳುತ್ತದೆ,” ಎಂಬ ಡಿ.ಆರ್.ನಾಗರಾಜರ ಮಾತುಗಳು ಮಂಟೇಸ್ವಾಮಿ ಪರಂಪರೆಯ ಮರುಹುಡುಕಾಟಕ್ಕೆ ನಮ್ಮನ್ನು ಸಜ್ಜುಗೊಳಿಸಬಲ್ಲದು.

ಪರಂಜ್ಯೋತಿ
ಲೇಖಕರು: ಹುಲಿಕುಂಟೆ ಮೂರ್ತಿ
ಪ್ರಕಾಶಕರು
ಅಂಕ ಪ್ರಕಾಶನ
ನಂ.೯೫೫, ಕಾಳಿದಾಸನಗರ, ೪ನೇ ಮುಖ್ಯರಸ್ತೆ,
ಹೊಸಕೆರೆ ಹಳ್ಳಿ, ಬನಶಂಕರಿ ೩ನೇ ಹಂತ,
ಬೆಂಗಳೂರು-೮೫.
ಪುಟಗಳು:೭೯ ಬೆಲೆ:ರೂ.೫೦ ಪ್ರಕಟಣೆ:೨೦೦೯