ಮಂಟೇಸ್ವಾಮಿ ಪರಂಪರೆಯೂ ಆಧ್ಯಾತ್ಮಿಕ ದಂಗೆಕೋರ ಮಾರ್ಗವೂ

ಕೆ.ಎಲ್.ಚಂದ್ರಶೇಖರ್ ಐಜೂರ್

ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಉಜ್ಜನನ್ನು ಶಿವಶರಣನನ್ನಾಗಿಸಲೇಬೇಕೆಂಬ ಹಟವಿಡಿದಿರುವ ರುದ್ರನ ಅಸಹಾಯಕತೆ ಮತ್ತು ಹೆಂಡ ಮಾಂಸ ಬಿಟ್ಟು ಶಿವಶರಣನಾಗಲು ಒಪ್ಪದ ಉಜ್ಜ ನಮ್ಮನ್ನು ಕಾಡುವಷ್ಟೇ “ನನ್ನನ್ನು ಪ್ರೀತಿಸುವಾಗ ಹೊಲೆಯರ ರುದ್ರನಾಗಿದ್ದವ ಬಲಾತ್ಕಾರಿಸುವಾಗ ಶಿವಶರಣ ರುದ್ರನಾಗಿದ್ದ,” ಎಂದು ಹೇಳಿ ಬಸವಣ್ಣನನ್ನೇ ಬೆಚ್ಚಿಬೀಳಿಸಿ ರುದ್ರನ ತಲೆದಂಡಕ್ಕೆ ಕಾರಣವಾಗುವ ಉಷಾ ಕೂಡ ನಮ್ಮನ್ನು ಕಾಡಬಲ್ಲಳು. ಎಲ್ಲ ಕಾಲದ ಮುಳ್ಳಿನ ಮೇಲೂ ನಿಂತುಪ್ರಶ್ನೆ ಮಾಡಬಲ್ಲ ಹೆಣ್ಣಿನಂತೆ ಕಾಣುವ ಉಷಾ ಹೊಲೆಯರ ರುದ್ರನನ್ನು ಪ್ರೀತಿಸಿ ಶಿವಶರಣ ರುದ್ರನನ್ನು ಕಳೆದುಕೊಳ್ಳುವ ದಿಟ್ಟೆ. ಕೆಲವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ “ನಿಮ್ಮ ಜಾತಿಯ ಬಗ್ಗೆ ಕೀಳರಿಮೆ ಇತ್ತಾ? ಇದೆಯಾ?” ಎಂಬ ಪ್ರಶ್ನೆಯೊಂದಕ್ಕೆ ದೇವನೂರ ಮಹಾದೇವ ಅವರು “ಇತ್ತು. ಈಗ ಮೇಲರಿಮೆ ಇದೆ. ನನ್ನ ಜಾತಿ ಯಾರನ್ನೂ ಕೊಂದಿಲ್ಲ. ಅವಮಾನಿಸಿಲ್ಲ. ಸುಲಿದಿಲ್ಲ, ತಿಂದಿಲ್ಲ,” ಎಂಬ ಉತ್ತರ ನೀಡಿದ್ದರು. ದೇವನೂರರು ಹೀಗೆ ಉತ್ತರ ಕೊಡುವವರೆಗೂ ಯಾವ ದಲಿತನಿಗೂ ತನ್ನ ಜಾತಿಯನ್ನು ಮೇಲರಿಮೆಯ ಕಣ್ಣುಗಳಿಂದ ನೋಡಬಹುದೆಂಬ ಸ್ಪಷ್ಟ ಆಕಾರಗಳೆ ದಕ್ಕಿರಲಿಲ್ಲ.

ನಮ್ಮನಡುವಿನ ಸೂಕ್ಷ್ಮಗಣ್ಣಿನ ಲೇಖಕ ಹುಲಿಕುಂಟೆ ಮೂರ್ತಿ ತಮ್ಮ ಸ್ನಾತಕೋತ್ತರಪದವಿಯ ಸಲುವಾಗಿ “ಮಂಟೇಸ್ವಾಮಿ ಪರಂಪರೆಯಲ್ಲಿ ’ಜಾತಿ’ ಕುರಿತ ಅಧ್ಯಯನ”ವನ್ನೇ ತಮ್ಮ ಸಂಶೋಧನೆಯ ವಸ್ತುವಾಗಿಸಿಕೊಂಡಿದ್ದಾರೆ. ಸಂಶೋಧನೆಯೆಂದರೆ ಸಮುದಾಯವೊಂದು ಕಳೆದುಕೊಂಡ ಹಾಡನ್ನು ಹುಡುಕಿ ಹೊರಡುವುದು. ಇಂಥದೊಂದು ಪ್ರಯತ್ನಕ್ಕೆ ತಾವು ನಿಂತ ನೆಲದಿಂದಲೇ ಶೋಷಿತ ಸಮುದಾಯದ ಸಾಂಸ್ಕೃತಿಕನಾಯಕರನ್ನು ಹುಡುಕುವ ಭಾಗವಾಗಿ ಆದಿಮ ಸಂಸ್ಕೃತಿಯ ನೆಲಮೂಲದ ಜಾತಿಯ ಬಾಗಿಲುಗಳಿಂದಲೇ ಲೇಖಕರು ಪ್ರವೇಶಿಸಿದ್ದಾರೆ. ಲೇಖಕರು ಕಟ್ಟಿಕೊಟ್ಟಿರುವ ಈ ಪಠ್ಯ “ಮಂಟೇಸ್ವಾಮಿ ಕಾವ್ಯ, ಧರೆಗೆ ದೊಡ್ಡವರ ಕತೆ, ಮಂಟೇಸ್ವಾಮಿ ಪರಂಪರೆ, ನೀಲಗಾರರು-ಸಾಂಸ್ಕೃತಿಕ ಪದಕೋಶ ಮತ್ತು ಚಿಕ್ಕಲ್ಲೂರು ಜಾತ್ರೆ”ಗಳಂತೆ ವಿಶಾಲ ಚೌಕಟ್ಟಿನ ಕೃತಿಯಲ್ಲದಿದ್ದರೂ ಕೂಡ “ಪರಂಜ್ಯೋತಿ” ಆ ಕೃತಿಗಳ ದೊಂದಿ ಹಿಡಿದು ತಳ ಸಮುದಾಯಗಳ ಪರಂಪರೆಯೊಂದರ ಜಾತಿ ಕಥಾನಕವನ್ನು ಸರಾಗವಾಗಿ ಹೇಳಿದೆ. ಈ ಕೃತಿಗಳೆಲ್ಲದರಿಂದಲೂ ಪಡೆದ ಸ್ಫೂರ್ತಿ ಮಂಟೇಸ್ವಾಮಿ ಪರಂಪರೆಯನ್ನು ಶೋಷಿತ ಸಮುದಾಯಗಳೇ “ಪರಂಜ್ಯೋತಿ”ಯಾಗಿ ಸೃಷ್ಟಿಸಿಕೊಳ್ಳುತ್ತವೆ ಎಂಬುದಕ್ಕೆ ಲೇಖಕರು ಹೆಚ್ಚಿನ ಪುರಾವೆಗಳನ್ನು ಒದಗಿಸಿದ್ದಾರೆ. “ಯಾವ ಬಸವಣ್ಣ ಅಸ್ಪೃಶ್ಯರಿಗೆ ತಮ್ಮ ಅಸ್ಮಿತೆಯ ಭಾಗವಾಗಿದ್ದ ಆಹಾರ ಮತ್ತು ಆಚರಣೆಗಳನ್ನು ಬಿಟ್ಟು ಬಂದು ಶರಣರಾಗಿ ಎಂದು ಕರೆ ನೀಡಿದನೋ ಆ ಪ್ರಕ್ರಿಯೆಯನ್ನು ಮಂಟೇದರು ಲೇವಡಿ ಮಾಡಿ ’ನಾವು ನಮ್ಮ ಯಾವುದನ್ನೂ ಬಿಡಬೇಕಾಗಿಲ್ಲ; ನಮ್ಮ ಬದುಕಿನ ಮೌಲ್ಯಗಳು ಕೀಳೇನಲ್ಲ; ಅವೇ ನಿಜ ಶ್ರೇಷ್ಟತೆಯನ್ನು ಹೊಂದಿರುವಂತಹವು.’ ಎಂದರು. ಅದೇ ನಡೆಯಲ್ಲಿ ಈಗಾಗಲೇ ವಿಕಲತೆಗೆ ಒಳಗಾಗಿದ್ದ ಸಮುದಾಯಗಳಿಗೆ ಮರಳಿ ಶಕ್ತಿ ತುಂಬುತ್ತಾರೆ,” ಎಂಬ ಕೋಟಿಗಾನಹಳ್ಳಿ ರಾಮಯ್ಯನವರ ಮಾತುಗಳು ಮಂಟೇಸ್ವಾಮಿ ಪರಂಪರೆಯೆಡೆಗೆ ಬೆರಗು ಮೂಡಿಸುತ್ತವೆ.

“ಹೆಂಡ, ಮಾಂಸ ಎಲ್ಲವನ್ನೂ ಉನ್ನತೀಕರಿಸುವ, ಆಧ್ಯಾತ್ಮೀಕರಿಸುವ ಮೂಲಕ ಜಾತಿಪದ್ಧತಿಯ ಅವಮಾನಗಳನ್ನೂ ದಾಟುವ ಪ್ರಯತ್ನವನ್ನು ಮಂಟೇಸ್ವಾಮಿ ಮಾಡುತ್ತಾರೆ. ಜಾತಿ ಒಳಗಡೆ ಇದ್ದು ಜಾತಿಯಿಂದ ಆಚೆಗೆ ಹೋಗುವ ಒಂದು ಆಧ್ಯಾತ್ಮಿಕ ದಂಗೆಯ ಮಾರ್ಗವನ್ನುಮಂಟೇಸ್ವಾಮಿ ಪರಂಪರೆ ಹೇಳುತ್ತದೆ,” ಎಂಬ ಡಿ.ಆರ್.ನಾಗರಾಜರ ಮಾತುಗಳು ಮಂಟೇಸ್ವಾಮಿ ಪರಂಪರೆಯ ಮರುಹುಡುಕಾಟಕ್ಕೆ ನಮ್ಮನ್ನು ಸಜ್ಜುಗೊಳಿಸಬಲ್ಲದು.

ಪರಂಜ್ಯೋತಿ
ಲೇಖಕರು: ಹುಲಿಕುಂಟೆ ಮೂರ್ತಿ
ಪ್ರಕಾಶಕರು
ಅಂಕ ಪ್ರಕಾಶನ
ನಂ.೯೫೫, ಕಾಳಿದಾಸನಗರ, ೪ನೇ ಮುಖ್ಯರಸ್ತೆ,
ಹೊಸಕೆರೆ ಹಳ್ಳಿ, ಬನಶಂಕರಿ ೩ನೇ ಹಂತ,
ಬೆಂಗಳೂರು-೮೫.
ಪುಟಗಳು:೭೯ ಬೆಲೆ:ರೂ.೫೦ ಪ್ರಕಟಣೆ:೨೦೦೯

Leave a Reply

Your email address will not be published. Required fields are marked *