ಹಾವಿನ ನಂಜುಂಡ ಈ ನಂಜಪ್ಪ!

ನಾವು ನಮ್ಮ ಅರಿವಿಗೆ ನಿಲುಕದ ಎಷ್ಟೋ ಸಂಗತಿಗಳನ್ನು ದೆವ್ವ ಅಥವಾ ದೇವರಿಗೆ ಆರೋಪಿಸಿ ಅದು ಅಲೌಕಿಕ ಶಕ್ತಿ ಎಂದೇ ಪ್ರತಿಪಾದಿಸುತ್ತೇವೆ. ಇದಕ್ಕೆ ವಿದ್ಯಾವಂತರೂ ಹೊರತಲ್ಲ. ನೀವು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತರಾದರೂ ಕೆಲವು ವಿಸ್ಮಯಕಾರಕ ಸಂಗತಿಗಳ ಹಿಂದಿನ ವಾಸ್ತವಾಂಶ ಗೊತ್ತೇ ಆಗುವುದಿಲ್ಲ. ಅಂತಹುದೊಂದು ಘಟನೆ ಅಲ್ಲಿ ನನಗೆ ಎದುರಾಗಿತ್ತು.

ಆತ ಎಷ್ಟೋ ಮಂದಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಆದರೆ ಅವರಿಗೂ ಪರಿಹರಿಸಲಾಗದಂತಹ ಒಂದು ಕಗ್ಗಂಟಾದ ಸಮಸ್ಯೆ ಅವರ ಬೆನ್ನು ಹತ್ತಿತ್ತು. ಆ ದಿನ ನಾನೊಂದು ಶಾಲೆಯಲ್ಲಿ ಪವಾಡಗಳ ಹಿಂದಿನ ರಹಸ್ಯಗಳನ್ನು ಅನಾವರಣ ಮಾಡುತ್ತಿದ್ದೆ. ಕಾರ್ಯಕ್ರಮ ಮುಗಿದ ಕೂಡಲೇ ಆ ವೈದ್ಯರು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಬಿಚ್ಚಿಟ್ಟರು.

ಅವರ ಬಳಿಗೆ ಒಬ್ಬ ರೋಗಿ ಬಂದಿದ್ದ. ಅವನಿಗೆ ಯಾರೂ ವಿವರಿಸಲಾಗದಂತಹ ವಿಚಿತ್ರ ಕಾಯಿಲೆ! ಭಾನಾಮತಿಯೇ ಇರಬಹುದು! ನಿಜಕ್ಕೂ ನಿಮಗೆ ಇದೊಂದು ಸವಾಲು ಎನ್ನುತ್ತಲೇ ಅವರು ನನ್ನನ್ನು ಕರೆದೊಯ್ದರು. ನನಗಂತೂ ಬಹಳ ಕುತೂಹಲ ಹುಟ್ಟಿತು. ಏನಿರಬಹುದು?

ಮೈಸೂರಿನಿಂದ ನೂರು ಕಿಲೋಮೀಟರ್ ದೂರದಲ್ಲಿ ಪಾಲ್ಕಿ ಎಂಬ ಗ್ರಾಮ. ಅಲ್ಲಿ ನಂಜಪ್ಪ ಎಂಬವನಿಗೇ ಈ ವಿಚಿತ್ರ ಕಾಯಿಲೆ. ಆತ ಕೆಲ ತಿಂಗಳ ಹಿಂದೆ ಗಟ್ಟಿಮುಟ್ಟಾಗಿದ್ದ ಆಳು. ಕೃಷಿ ಕೆಲಸ ಮಾಡುತ್ತಾ ಇದ್ದುದರಲ್ಲಿ ನೆಮ್ಮದಿಯಿಂದಲೇ ಇದ್ದ. ಆದರೆ ಈ ವಿಚಿತ್ರ ಕಾಯಿಲೆ ಹತ್ತಿಕೊಂಡಿದ್ದೇ ನೋಡಿ, ಊಟ ಸೇರದಾಯಿತು. ಸದಾ ಮಂಕು ಬಡಿದ ಹಾಗೆ ಕುಳಿತಿರುತ್ತಾನೆ. ಮನೆಯವರಿಗೆಲ್ಲಾ ಆತಂಕ ಹುಟ್ಟಿಸಿದ್ದಾನೆ. ಕೊನೆಗೆ ಈತ ಬದುಕುವನೋ ಇಲ್ಲವೋ ಎಂಬಂತೆ ಇದ್ದಾನೆ. ಅರವತ್ತು ಕೆಜಿ ತೂಕವಿದ್ದವನು ಈಗ ಮೂವತ್ತಕ್ಕೆ ಇಳಿದಿದ್ದಾನೆ… ಇತ್ಯಾದಿ ವಿವರಗಳನ್ನು ನೀಡಿದರು.

ಅಲ್ಲಿಗೆ ಹೋದೆವು. ನಂಜಪ್ಪ ನಿಸ್ತೇಜವಾಗಿದ್ದ. ಬದುಕಿನ ನಿತ್ಯದ ವ್ಯಾಪಾರಗಳಲ್ಲಿ ಆತನಿಗೆ ಆಸಕ್ತಿಯೇ ಹೊರಟುಹೋಗಿತ್ತು.

ಕಾರಣ ಇಷ್ಟೇ. ಒಂದು ದಿನ ಹೊಲದಿಂದ ನಡೆದುಕೊಂಡು ಬರುತ್ತಿರುವಾಗ ಒಂದು ಕೇರೆಹಾವು ಕಚ್ಚಿಬಿಟ್ಟಿತ್ತು. ಅದು ವಿಷಪೂರಿತ ಹಾವು ಅಲ್ಲದಿದ್ದರೂ ಅದು ನಾಗರಹಾವೇ ಎಂದು ಆತ ನಂಬಿದ್ದ. ನಿಜಕ್ಕೂ ನಾಗರಹಾವು ಕಚ್ಚಿದ್ದರೆ ಆತ ಚಿಕಿತ್ಸೆ ಪಡೆಯದೆ ಇಷ್ಟು ದಿನ ಬದುಕಲು ಸಾಧ್ಯವೇ ಇರಲಿಲ್ಲ. ಅದರಲ್ಲಿ ವಿಷವಿದ್ದಲ್ಲಿ!

ತನಗೆ ಹಾವು ಕಡಿದಿದೆ. ಅದರ ವಿಷ ಮೈನಲ್ಲಿದೆ. ನಾನು ಸತ್ತುಹೋಗಬಹುದು ಎಂಬ ಕೊರಗು ಅವನಲ್ಲಿ ಮೂಡಿತ್ತು. ಇದರಿಂದ ರಾತ್ರಿಯೆಲ್ಲಾ ಕೂಗಾಡುತ್ತಿದ್ದ. ಹಾವಿನ ಭಯ ಅವನನ್ನು ಕಂಗೆಡಿಸಿತ್ತು. ಹಾದಿಬೀದಿಯಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ.

ಇದರಿಂದ ಇಡೀ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು. ನಂಜಪ್ಪ ಊಟ, ನಿದ್ರೆಯ ಕಡೆಗೆ ಆಸಕ್ತಿ ಕಳೆದುಕೊಂಡಿದ್ದ. ಅಜ್ಞಾನ ಒಮ್ಮೊಮ್ಮೆ ನಮ್ಮನ್ನು ಎಂತಹ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದಕ್ಕೆ ನಂಜಪ್ಪ ಜೀವಂತ ಉದಾಹರಣೆಯಾಗಿದ್ದ. ಇದು ನಿಜಕ್ಕೂ ಮಾನಸಿಕ ಕಾಯಿಲೆಯೇ ಹೊರತು ದೈಹಿಕ ಕಾಯಿಲೆ ಅಲ್ಲವೇ ಅಲ್ಲ ಎಂದು ನನಗೆ ಅರ್ಥವಾಗಿತ್ತು. ಅದನ್ನು ದೂರ ಮಾಡುವುದು ಹೇಗೆ ಎಂಬುದೇ ನಮ್ಮ ಮುಂದಿದ್ದ ಸಮಸ್ಯೆ.

ವಿಶೇಷ ಎಂದರೆ ಇದನ್ನು ಭಾನಾಮತಿ ಎಂದು ಯಾರೋ ನಂಬಿಸಿದ್ದರು. ಅದನ್ನು ಕುಟುಂಬವೂ ನಂಬಿಕೊಂಡಿತ್ತು. ಭಾನಾಮತಿಯಿಂದ ಬಿಡುಗಡೆ ಪಡೆಯಲೂ ಅವರು ಮಾಡಿದ ಪ್ರಯತ್ನಗಳು ಒಂದೆರಡಲ್ಲ.

ನನಗೆ ನಂಜಪ್ಪನನ್ನು ನೋಡುತ್ತಲೇ ಒಂದು ಉಪಾಯ ಹೊಳೆಯಿತು. ಅದನ್ನು ಯಾರಿಗೂ ಹೇಳದೆ ಜಾರಿಗೆ ತಂದೆ.

ಒಂದು ಹಲ್ಲು ಕಿತ್ತ ನಾಗರಹಾವು ತರಿಸಿದೆ. ನಂಜಪ್ಪ ನಿದ್ರಾವಶವಾಗುವಂತೆ ಮಾಡಿ ಆತನಿಂದಲೇ ಹಾವು ಕಚ್ಚಿದ ಜಾಗವನ್ನು ತೋರಿಸುವಂತೆ ಸೂಚಿಸಿದೆ. ಆತನ ಸುಪ್ತಮನಸ್ಸಿನಲ್ಲಿ ಹಾವು ಬರುವಂತೆ ಮಾಡಿದೆ. ಆತನ ಸುಪ್ತ ಮನಸ್ಸಿನಲ್ಲಿ ಹಾವು ಬಂದಿತು. ಕಚ್ಚಿದ ಜಾಗ ತೋರಿಸುವಂತೆ ಸೂಚಿಸಿದೆ. ತೋರಿಸಿದ. ಆತ ತೋರಿಸಿದ ಸ್ಥಳಕ್ಕೆ ಒಂದು ಬ್ಲೇಡ್‌ನಿಂದ ಗಾಯ ಮಾಡಿದೆ. ಅಲ್ಲಿಂದ ಹೊರಬಂದ ರಕ್ತವನ್ನು ಹಾವಿನ ಮೂತಿಗೆ ಬಳಿದೆ. ನಂತರ ಆತನನ್ನು ಕಣ್ಣು ಬಿಡಲು ಹೇಳಿದೆ.

ಕಣ್ಣು ಬಿಟ್ಟವನೇ ‘ಇದೇ ಹಾವು ನನಗೆ ಕಚ್ಚಿದ್ದು,’ ಎಂದ! ಎದ್ದು ಮನೆಯೆಲ್ಲಾ ಕುಣಿದಾಡಿದ. ಅವನ ಸಂತೋಷ ಮೇರೆ ಮೀರಿತು. ಅವನಿಗೆ ಅ ಹಾವು ಗೊತ್ತಿಲ್ಲವಾದರೂ ಅದೇ ಹಾವು ತನ್ನ ದೇಹದಿಂದ ವಿಷ ಹೀರಿದೆ ಎಂಬ ಸಂಗತಿ ಅವನಲ್ಲಿ ಅಪಾರ ಖುಷಿ ಹುಟ್ಟುಹಾಕಿತ್ತು.

ಮನುಷ್ಯನನ್ನು ಗುರುತು ಹಿಡಿಯಬಹುದು. ಹಾವುಗಳನ್ನೂ ಹೀಗೆ ಒಮ್ಮೆ ನೋಡಿದ ಕೂಡಲೇ ಗುರುತು ಹಿಡಿಯಲು ಸಾಧ್ಯವೇ? ಒಟ್ಟಿನಲ್ಲಿ ನಂಜಪ್ಪನಂತೂ ತನಗೆ ಕಚ್ಚಿದ ಹಾವು ಅದೇ ಎಂದು ನಂಬಿದ. ಸರಿಯಾಗಿ ಹಾವು ಕಚ್ಚಿದ ಸ್ಥಳದಲ್ಲಿ ಅದೇ ಹಾವು ವಿಷ ಹೀರಿದೆ ಎನ್ನುವುದನ್ನೂ ತೋರಿಸಿದೆ. ನಂಜಪ್ಪ ಖುಷಿಯಿಂದ ಕುಣಿದಾಡಿದ. ಇನ್ನು ನಿನ್ನ ಮೈಯಲ್ಲಿ ವಿಷವಿಲ್ಲ. ಇನ್ನು ಭಯ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ. ನಂಜಪ್ಪ ಮಾತ್ರವಲ್ಲದೆ ಆತನ ಕುಟುಂಬ ಸದಸ್ಯರೆಲ್ಲರೂ ಸಂತೋಷಪಟ್ಟರು.

ಈಗ ನಂಜಪ್ಪ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾನೆ. ಒಂದು ತಪ್ಪು ತಿಳಿವಳಿಕೆ ಜೀವಕ್ಕೇ ಎರವಾಗಬಲ್ಲುದು ಎನ್ನುವುದಕ್ಕೆ ನಂಜಪ್ಪನೇ ಉದಾಹರಣೆ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

(ಚಿತ್ರಕೃಪೆ: ವಿಕಿಪೀಡಿಯ)

Leave a Reply

Your email address will not be published. Required fields are marked *