Daily Archives: October 1, 2011

ರಾಜಕೀಯ ಸಂತ ಕಾಮರಾಜರ ನೆನಪು

[36 ವರ್ಷಗಳ ಹಿಂದೆ ಗಾಂಧಿ ಜಯಂತಿಯ ದಿನದಂದು ನಿಧನರಾದ ಕಾಮರಾಜ ನಾಡಾರ್, ಕೇವಲ ತಮಿಳುನಾಡಿನ ಆದರ್ಶವಾಗಿರಲಿಲ್ಲ. ಹಿಂದುಳಿದ ವರ್ಗದ, ಬಡತನದ ಹಿನ್ನೆಲೆಯ, ಹೆಚ್ಚು ವಿದ್ಯಾಭ್ಯಾಸವೂ ಇಲ್ಲದಿದ್ದ ಕಾಮರಾಜರು ಕೇವಲ ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯ ರಾಜಕಾರಣ ಮತ್ತು ಆಡಳಿತದಿಂದ ಭಾರತದ ಜನಮನವನ್ನು ಗೆದ್ದಿದ್ದು ಮತ್ತು ಪ್ರಭಾವಿಸಿದ್ದು ಇತಿಹಾಸ. ಆದರ್ಶವಾದಿ ರಾಜಕೀಯ ನಾಯಕರೇ ಇಲ್ಲವಾಗುತ್ತಿರುವ ಬರ್ಭರ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಈ ಗಾಂಧಿ ಜಯಂತಿಯ ಸಮಯದಲ್ಲಾದರೂ ಗಾಂಧಿ, ಕಾಮರಾಜರಂತಹವರು ನೆನಪಾಗಲಿ, ಆ ಆದರ್ಶ ಮತ್ತು ಸಾರ್ವಜನಿಕ ಸೇವೆಯಲ್ಲಿನ ಬದ್ಧತೆ ಮತ್ತು ಪ್ರಾಮಾಣಿಕತೆಗಳು ಮತ್ತೊಮ್ಮೆ ಜ್ವಲಿಸಲಿ ಎಂದು ಆಶಿಸುತ್ತಾ, ಗಾಂಧಿ ಜಯಂತಿ ಪ್ರಯುಕ್ತವಾಗಿಯೇ ಕಾಮರಾಜರ ಕುರಿತ ಈ ಲೇಖನ ಬರೆದ ಜಗದೀಶ್ ಕೊಪ್ಪರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ತಿಳಿಸುತ್ತೇನೆ. -ರವಿ ಕೃಷ್ಣಾ ರೆಡ್ಡಿ.]

– ಡಾ. ಎನ್.ಜಗದೀಶ್ ಕೊಪ್ಪ

ಕಳೆದ ಒಂದು ವರ್ಷದಿಂದ ಪ್ರಾಚೀನ ತಮಿಳು ಕಾವ್ಯದ ಅಧ್ಯಯನದಲ್ಲಿ ತೊಡಗಿಕೊಂಡಿರುವ ನನಗೆ ತಮಿಳು ಕಾವ್ಯದ ಉಗಮದ ಬಗ್ಗೆ ಅಪಾರ ಆಸಕ್ತಿ . ಸಂಸ್ಕೃತ ಮತ್ತು ಭಾರತೀಯ ಕಾವ್ಯ ಮೀಮಾಂಸೆಯ ನೆರಳು ಸಹ ಸೋಂಕದೆ ಹುಟ್ಟಿದ ಭಾರತೀಯ ಭಾಷೆಯ ಕಾವ್ಯಗಳೆಂದರೆ, ಒಂದರಿಂದ ಮೂರನೇ ಶತಮಾನದಲ್ಲಿ ಸೃಷ್ಟಿಯಾದ ತಮಿಳು ಸಂಗಂ ಕಾವ್ಯ ಮತ್ತು ಹನ್ನೊಂದನೇ ಶತಮಾನದಲ್ಲಿ ಕನ್ನಡ ಬಾಷೆಯಲ್ಲಿ ಮೂಡಿಬಂದ ವಚನ ಸಾಹಿತ್ಯ.

ರೂಪ, ರಸ, ಸ್ಪರ್ಶ, ಗಂಧ ಇವುಗಳ ಹಂಗಿಲ್ಲದೆ ಕಾವ್ಯ ಕಟ್ಟಿದ ತಮಿಳರು ಕಣ್ಣೆದುರುಗಿನ ಬೆಟ್ಟ, ಕಾಡು, ಮಳೆ, ಕಡಲು, ಗಿಡ ಮರ, ಬಳ್ಳಿ ಇವುಗಳನ್ನ ರೂಪಕ, ಪ್ರತಿಮೆಗಳನ್ನಾಗಿ ಬಳಸಿಕೊಂಡು ಕಾವ್ಯ ಕಟ್ಟಿದ ರೀತಿ ಆಶ್ಚರ್ಯ ಮೂಡಿಸುತ್ತದೆ. ಈ ಕಾವ್ಯ ಪರಂಪರೆ ಇಂದಿಗೂ ಕೂಡ ತಮಿಳು ಜನಪದರಲ್ಲಿ ಗುಪ್ತಗಾಮಿನಿಯಾಗಿ  ಜೀವನದಿಯಂತೆ ಅವರ ಹಬ್ಬ, ಹುಟ್ಟು, ಸಾವು, ಮತ್ತು ಆ ಕ್ಷಣಕ್ಕೆ ಕಟ್ಟಿ ಹಾಡುವ ಹಾಡುಗಬ್ಬಳಲ್ಲಿ ಹರಿದುಬಂದಿದೆ.

ಇಂತಹ ಹಾಡುಗಳನ್ನು ಹುಡುಕಿಕೊಂಡು ಫಕೀರನಂತೆ ಪ್ರತಿ ಮೂರು ತಿಂಗಳಿಗೆ ತಮಿಳುನಾಡು ಅಲೆಯುವ ನನಗೆ ಅಲ್ಲಿನ ಹಿರಿಯ ಜೀವಗಳನ್ನು ಮಾತಿಗೆ ಎಳೆದಾಗ ಅವರು ಸದಾ ನೆನಪಿಗೆ ತಂದುಕೊಳ್ಳುವುದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜ ನಾಡಾರ್‌ರವರನ್ನು. ವಿಶೇಷವಾಗಿ ಮಧುರೈ, ನಾಗರಕೊಯಿಲ್, ಕನ್ಯಾಕುಮಾರಿ, ತಿರುನಲ್ವೇಲಿ, ರಾಮನಾಥಪುರ ಜಿಲ್ಲೆಗಳ ಜನರ ಎದೆಯಲ್ಲಿ ಕಾಮರಾಜರು ಇಂದಿಗೂ ಜೀವಂತವಾಗಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಮಧುರೈ ನಗರದಲ್ಲಿದ್ದಾಗ ಅರ್ಧ ದಿನ ಅವರ ಹುಟ್ಟೂರಾದ ವಿರುದನಗರಕ್ಕೆ ಬೇಟಿ ನೀಡುವ ಕಾರ್ಯಕ್ರಮ ರೂಪಿಸಿಕೊಂಡಿದ್ದೆ. ಮಧುರೈ ನಗರದಿಂದ ಕೇವಲ 42 ಕಿ.ಮಿ. ದೂರದ ವಿರುಧನಗರ ಹಲವಾರು ದೇಗುಲಗಳಿಂದ ಆವೃತ್ತವಾಗಿರುವ ಪುಟ್ಟ ಪಟ್ಟಣ. ಕನ್ಯಾಕುಮಾರಿಗೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಸಿಗುವ ಈ ಊರು ನಮ್ಮ ಉತ್ತರ ಕರ್ನಾಟಕದ ಪ್ರದೇಶವನ್ನು ನೆನಪಿಗೆ ತರುತ್ತದೆ. ಕಪ್ಪುನೆಲ, ಬಳ್ಳಾರಿ ಜಾಲಿಯ ಮುಳ್ಳುಗಿಡ, ಉರಿವ ಬಿಸಿಲು, ಕಾಡುವ ಬಡತನ, ಎಲ್ಲವೂ ಇಲ್ಲಿನ ಜನರ ಬದುಕಿನಲ್ಲಿ ತಳಕು ಹಾಕಿಕೊಂಡಿವೆ. ಆದರೆ ಈ ಸ್ಥಿತಿ ಉತ್ತರ ಭಾಗದ ಮಧುರೈ ಜಿಲ್ಲೆಯಲ್ಲಿ ಇಲ್ಲ. ನೀರಾವರಿ, ಮಳೆಯಾಶ್ರಿತ ಭೂಮಿ, ಪಳನಿ ಹಾಗು ಕೊಡೈಕೆನಲ್ ಬೆಟ್ಟಗಳ ಸಾಲಿನಿಂದ ಆವೃತ್ತವಾಗಿರುವ ಈ ಪ್ರದೇಶ ಕೆಂಪು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ.

ಈ ನೆಲದಲ್ಲಿ ಬಡತನ, ಹಸಿವು ಹೇಗೆ ಒಬ್ಬ ಶ್ರೇಷ್ಠ ಮನುಷ್ಯನನ್ನು ರೂಪಿಸಬಲ್ಲದು ಎಂಬುದಕ್ಕೆ ಕಾಮರಾಜ ನಾಡರ್ ನಮ್ಮೆದುರು ಸಾಕ್ಷಿಯಾದ್ದಾರೆ. ಇವರು ಬದುಕಿದ್ದ ರೀತಿ, ಮೈಗೂಡಿಸಿಕೊಂಡಿದ್ದ ಸರಳ ಜೀವನ, ನಾಡಿನ ಜನತೆಯ ಶ್ರೇಯಸ್ಸಿಗಾಗಿ ತಮ್ಮ ತನು ಮನವನ್ನು ಅರ್ಪಿಸಿಕೊಂಡ ಬಗೆ ಇವತ್ತಿಗೂ ಭಾರತದ ರಾಜಕಾರಣಿಗಳಿಗೆ ದಾರಿ ದೀಪವಾಗಬಲ್ಲದು.

ಮಧುರೈ ನಗರದಲ್ಲಿ ಕಾಮರಾಜರ ಮನೆಗೆ ಹೋಗುವ ದಾರಿ ಕುರಿತಂತೆ ಮಾಹಿತಿ ಕಲೆಹಾಕಿಕೊಂಡಿದ್ದರಿದ ವಿರುಧನಗರದ ಬಸ್ ನಿಲ್ದಾಣದಲ್ಲಿ ಇಳಿದು ಬಜಾರ್ ರಸ್ತೆಯ ಮೂಲಕ ಸಾಗಿ, ರಸ್ತೆ ಕೊನೆಗೊಳ್ಳುವ ಜಾಗದಲ್ಲಿದ್ದ  ಪುಷ್ಕರಣಿ ಬಳಿ ನಿಂತುಬಿಟ್ಟೆ. ಕಾಮರಾಜರ ಮನೆಯೆಂದರೇ ಅದೊಂದು ಬೃಹತ್ ವಿಸ್ತಾರವಾದ ಬಂಗಲೆ ಎಂಬುದು ನನ್ನ ಕಲ್ಪನೆಯಾಗಿತ್ತು. ಮಹಿಳಾ ಪೊಲಿಸ್ ಪೇದೆಯೊಬ್ಬಳು ರಸ್ತೆಯೆದುರುಗಿನ ಗಲ್ಲಿಯೊಂದನ್ನು ತೋರಿಸಿ ಅಲ್ಲಿ ಕಾಮರಾಜರ ಪುಟ್ಟ ಮನೆಯಿದೆ ಎಂದು ಮಾರ್ಗದರ್ಶನ ಮಾಡಿದಳು. ಕೇವಲ ಎಂಟು ಅಡಿ ಅಗಲದ ಆ ಒಣಿಯಲ್ಲಿ ನಡೆದು ಅವರ ಮನೆ ಎದುರು ನಿಂತಾಗ ನನಗೆ  ಅಚ್ಚರಿ ಕಾದಿತ್ತು.

ಎರಡು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ, ಎರಡು ಬಾರಿ ಸಂಸತ್ ಸದಸ್ಯರಾಗಿ, ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾಮರಾಜರು ವಾಸವಾಗಿದ್ದ ಆ ಪುಟ್ಟ ಮನೆ ಅಳತೆ ಇದ್ದದ್ದು  ಕೇವಲ 12 ಅಡಿ ಅಗಲ ಮತ್ತು 30 ಅಡಿ ಉದ್ದ ಮಾತ್ರ. ಈ ಮನೆ ಅವರು ಕಟ್ಟಿಸಿದ್ದಲ್ಲ. ಅದೂ ಕೂಡ ತಂದೆಯಿಂದ ಬಳುವಳಿಯಾಗಿ ಬಂದದ್ದು. ಮನೆಯೊಳಗಿನ ದಾಖಲೆಗಳು, ಭಾವಚಿತ್ರಗಳು ಅವರ ಬದುಕಿನ ಬದ್ಧತೆ ಹಾಗೂ ಸರಳತೆಗಳನ್ನು ತೆರದಿಡುತ್ತಿದ್ದವು.

1903ರ ಜುಲೈ15ರಂದು ವಿರುಧನಗರದ ಕುಮಾರಸ್ವಾಮಿ ನಾಡರ್ ಹಾಗು ಶಿವಕಾಮಿ ಅಮ್ಮಾಳ್ ದಂಪತಿಗಳಿಗೆ ಜನಿಸಿದ ಕಾಮರಾಜ್ ಬಾಲ್ಯದಲ್ಲೇ, ಅಂದರೆ ಮಾಧ್ಯಮಿಕ ಶಿಕ್ಷಣದ ಅವಧಿಯಲ್ಲೇ ವಿದ್ಯಾಭ್ಯಾಸ ತ್ಯಜಿಸಿದರು. ತೆಂಗಿನಕಾಯಿ ವ್ಯಾಪಾರಿಯಾಗಿದ್ದ ತಂದೆ ಮಗನನ್ನು ಸಂಬಧಿಕರಾದ ಕರ್ಲುಪ್ಪಯ್ಯ ಎಂಬುವರ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿಸಿದರೆ, ಕಾಮರಾಜ್ ವ್ಯಾಪಾರ ಮಾಡುವುದನ್ನು ಬಿಟ್ಟು ಬಜಾರ್ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದ ಸ್ವಾತಂತ್ರ ಹೋರಾಟಗಾರರನ್ನು ಸೇರಿಕೊಳ್ಳುತ್ತಿದ್ದರು. ಇದರಿಂದ ಚಿಂತಾಕ್ರಾಂತರಾದ ತಂದೆ-ತಾಯಿ ದೂರದ ತಿರುವನಂತಪುರದಲ್ಲಿ ಕೆಲಸಕ್ಕೆ ಸೇರಿಸಿದರು. ಸ್ವಾತಂತ್ರ ಸಂಗ್ರಾಮದತ್ತ ತುಡಿಯುತಿದ್ದ ಕಾಮರಾಜರನ್ನು ಯಾವ ಶಕ್ತಿಗಳೂ ತಡೆಯಲು ಸಾಧ್ಯವಾಗಲಿಲ್ಲ. 15್ನೇ ವಯಸ್ಸಿಗೆ ಕಾಂಗ್ರೇಸ್ ಕಾರ್ಯಕರ್ತನಾಗಿ ಸೇರ್ಪಡೆಯಾದ ಅವರು, 1930 ರಲ್ಲಿ ಗಾಂಧೀಜಿ ದಂಡಿಯಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಸಮಯದಲ್ಲಿ ತಮಿಳುನಾಡಿನ ವೇದಾರಣ್ಯಂನಲ್ಲಿ ಸತ್ಯಮೂರ್ತಿ ನೇತ್ರತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದರು. ವರದರಾಜನಾಯ್ಡುರವರ ಭಾಷಣ ಮತ್ತು ರಾಜಾಜಿಯವರ ಸ್ವಾತಂತ್ರ ಹೋರಾಟ ಇವುಗಳಿಂದ ಸ್ಪೂರ್ತಿ ಪಡೆದಿದ್ದ ಕಾಮರಾಜರು ವಿರುಧನಗರದ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದರೂ ಸಹ, ಊರಿನ ಸೇವೆಗಿಂತ ದೇಶದ ಸೇವೆ ಮುಖ್ಯ ಎಂದು ಭಾವಿಸಿ, ನಂತರದ ದಿನಗಳಲ್ಲಿ ಅಂದರೆ, 1942ರಲ್ಲಿ ನಡೆದ ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡು ಮಹರಾಷ್ಟದ ಅಮರಾವತಿಯ ಜೈಲಿನಲ್ಲಿ ಹಲವು ವರ್ಷಗಳ ಕಾಲ ಸರೆಮನೆ ವಾಸ ಅನುಭವಿಸಿದರು.

ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಅನುಯಾಯಿಯಾಗಿದ್ದ ಕಾಮರಾಜರು ಹಂತ ಹಂತವಾಗಿ ಮೇಲಕ್ಕೇರಿ ಎರಡು ಬಾರಿ ವಿಧಾನಸಭೆ ಸದಸ್ಯರಾಗಿ ನಂತರ 52ರಿಂದ 54ರವರೆಗೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದಾಗಲೇ ಅದೇ ವರ್ಷ 1954ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 1954ರಿಂದ 1963ರವರೆಗೆ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವಧಿಯನ್ನು ತಮಿಳುನಾಡಿನ ಇತಿಹಾಸದಲ್ಲಿ ಸುವರ್ಣಯುಗವೆಂದು ರಾಜಕೀಯ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದ ಅವರಿಗೆ ವ್ಯಕ್ತಿಗತ ಬದುಕಿನ ಬಗ್ಗೆ ಯಾವ ಮಹತ್ವಾಕಾಂಕ್ಷೆ ಇರಲಿಲ್ಲ. ಅವರ ಬಳಿ ಇದ್ದದ್ದು ಎರಡು ಅರ್ಧತೋಳಿನ ಅಂಗಿ, ಎರಡು ಪಂಚೆ, ಹಾಗೂ ಜೇಬಿನಲ್ಲಿರುತಿದ್ದ  ಒಂದು ಹೀರೊ ಪೆನ್ ಮಾತ್ರ. ಇವಿಷ್ಟೇ ಅವರ ಬದುಕಿನ ಕೊನೆಯವರೆಗೂ ಆಸ್ತಿಯಾಗಿದ್ದವು.

ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಅಂದಿನ ಮದ್ರಾಸ್ ನಗರದ ಸಾಮಾನ್ಯ ಮನೆಯಲ್ಲಿ ವಾಸವಾಗಿದ್ದುಕೊಂಡು ತಮ್ಮ ಅಡುಗೆಯನ್ನು ತಾವೇ ತಯಾರಿಸಿಕೊಳ್ಳುತಿದ್ದರು. ಅವರ ಕಾರಿನ ಚಾಲಕನೇ ಅವರ ಮನೆಯ ಸೇವಕ ಮತ್ತು ಆಪ್ತ ಸಹಾಯಕ ಎಲ್ಲವೂ ಆಗಿದ್ದನು.

ಅವರು ಮುಖ್ಯಮಂತ್ರಿಯಾಗಿದ್ದಾಗ ಜರುಗಿದ ಒಂದು ಘಟನೆ ತಮಿಳುನಾಡು ರಾಜ್ಯದ ಇತಿಹಾಸವನ್ನೇ ಬದಲಾಯಿಸಿಬಿಟ್ಟಿತು. ಸ್ವತಃ ಬಡತನದ ಕುಟುಂಬದಿಂದ ಬಂದಿದ್ದ ಕಾಮರಾಜರ ಮನೆಯೆದುರು ಒಂದು ದಿನ  ಬೆಳಿಗ್ಗೆ ಮಧ್ಯ ವಯಸ್ಸಿನ ವಿದವೆಯೊಬ್ಬಳು ತನ್ನ ಏಳು ವರ್ಷ ಮಗ ಹಾಗೂ ಎರಡು ವರ್ಷದ ಹೆಣ್ಣುಮಗುವಿನೊಂದಿಗೆ ಬಂದು, “ಸ್ವಾಮೀ, ನಾನು ಅನಾಥೆ, ಈ ನನ್ನ ಮಗ ಶಾಲೆಗೆ ಹೋಗಬೇಕೆಂದು ಹಠ ಹಿಡಿದಿದ್ದಾನೆ. ಹೊಟ್ಟೆಗೆ ಅನ್ನವಿಲ್ಲ, ಮಲಗಲು ಸೂರಿಲ್ಲ. ಏನಮಾಡಲಿ?”  ಎಂದು ಕಣ್ಣೀರಿಡುತ್ತಾ, ಕೈ ಜೋಡಿಸಿ ಅವರೆದುರು ನಿಂತುಬಿಟ್ಟಳು. ವಿಧಾನಸಭೆಗೆ ಹೊರಟು ನಿಂತಿದ್ದ ಕಾಮರಾಜರು ಆ ಬಾಲಕನ ಕೈ ಹಿಡಿದು ಕರೆದುಕೊಂಡು ಹೋಗಿ ಸ್ಥಳೀಯ ಶಾಲೆಗೆ ಸೇರಿಸಿ ಅವನ ವಿದ್ಯಾಭ್ಯಾಸದ ಹೊಣೆ ಹೊತ್ತರು. ಆ ಬಾಲಕನ ಶಿಕ್ಷಣದ ಖರ್ಚು ಸರಿದೂಗಿಸಲು ಅವರು ಊಟದ ಜೊತೆ ಸೇವಿಸುತಿದ್ದ ಅರ್ಧ ಆಣೆ ಬೆಲೆಯ ಮೊಟ್ಟೆಯನ್ನು ತ್ಯಜಿಸಿದರು. ಏಕೆಂದರೆ, ಅವರು ಪಡೆಯುತಿದ್ದ ಸಂಬಳದಲ್ಲಿ ತನ್ನ ವಿಧವೆ ತಾಯಿಯ ಜೀವನ ನಿರ್ವಹಣೆಗೆ  ಹಣ ಕಳಿಸಿ, ಸೇವಕನ ಸಂಬಳವನ್ನು ತಾವೇ ನೀಡಬೇಕಾಗಿತ್ತು.

ಈ ಘಟನೆ ಜರುಗಿದ ಒಂದು ತಿಂಗಳಿನಲ್ಲಿ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಉಚಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು, ಅಲ್ಲದೆ, ಮಧ್ಯಾಹ್ನದ ವೇಳೆ ಉಪಹಾರ ವ್ಯವಸ್ಥೆ ಮಾಡಿದರು. ಇದೂ ಕೂಡ ದೇಶದಲ್ಲೇ ಪ್ರಥಮ ಬಾರಿ ಜಾರಿಯಾದದ್ದು. ಇದಲ್ಲದೆ, ತಮಿಳುನಾಡಿನಲ್ಲಿ ರಾಜಾಜಿ ಕಾಲದಲ್ಲಿ ಇದ್ದ  6 ಸಾವಿರ ಶಾಲೆಗಳನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿ, 22 ಸಾವಿರ ಶಾಲೆಗಳಿರುವಂತೆ ನೋಡಿಕೊಂಡರು. ಇದರ ಪರಿಣಾಮ ತಮಿಳುನಾಡಿನಲ್ಲಿ ಶೇ.7 ರಷ್ಟು ಇದ್ದ ಸಾಕ್ಷರತೆಯ ಪ್ರಮಾಣ ಅವರ ಕಾಲದಲ್ಲಿ  ಶೇ.37ಕ್ಕೆ ಏರಿತು. ಶಿಕ್ಷಣದ ಜೊತೆಗೆ  ಕೃಷಿ ಹಾಗೂ ಕೈಗಾರಿಕೆಗೂ ಒತ್ತು ನೀಡಿದ್ದ ಕಾಮರಾಜರು ಮೆಟ್ಟೂರು ಜಲಾಶಯ ಸೇರಿದಂತೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿ ಒಣ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಿದರು. ಕೊಯಮತ್ತೂರು ಇಂದು ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಬೆಳೆಯಲು ಇವರೇ ಕಾರಣಕರ್ತರಾದರು.

ಅಧಿಕಾರದ ಜೊತೆಗೆ ಪಕ್ಷದ ಹಿತಾಸಕ್ತಿ ಕೂಡ ಮುಖ್ಯ ಎಂದು ನಂಬಿದ್ದ ಕಾಮರಾಜರು ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ ಪಕ್ಷದ ಬೆಳವಣಿಗೆಗೆ ಮುಂದಾದರು. ಇದೇ ರೀತಿ ಎಲ್ಲ ಸಚಿವರೂ ರಾಜಿನಾಮೆ ನೀಡಬೇಕೆಂದು ಕರೆ ಇತ್ತರು. ಇವರ ಈ ನಡೆಯೇ ಇಂದು ಭಾರತದ ರಾಜಕೀಯದಲ್ಲಿ “ಕಾಮರಾಜ್ ಸೂತ್ರ” ಎಂದು ಪ್ರಸಿದ್ಧಿಯಾಗಿದೆ.

ಕಾಮರಾಜರ ಬದ್ಧತೆಯನ್ನು ಮನಗಂಡ ಅಂದಿನ ಪ್ರಧಾನಿ ನೆಹರೂರವರು ಅವರನ್ನು ದೆಹಲಿಗೆ ಕರೆಸಿಕೊಂಡು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. 1964ರಲ್ಲಿ ನೆಹರು ನಿಧನಾನಂತರ ಪ್ರಧಾನಿ ಪಟ್ಟಕ್ಕೆ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ 1965ರಲ್ಲಿ ಆಕಸ್ಮಿಕವಾಗಿ ತೀರಿಕೊಂಡಾಗ, ವಯಸ್ಸು ಮತ್ತು ಹಿರಿತನದ ಆಧಾರದ ಮೇಲೆ ಪ್ರಧಾನಿ ಪದವಿ ಕಾಮರಾಜರವರಿಗೆ ಒಲಿಯಿತು. ಆದರೆ ಅದನ್ನವರು ನಯವಾಗಿ ತಿರಸ್ಕರಿಸಿದರು. ಇದಕ್ಕೆ ಕಾಮರಾಜ್ ಕೊಟ್ಟ ಕಾರಣ ಮಾತ್ರ ಇಂದಿಗೂ ಭಾರತದ ರಾಜಕಾರಣದಲ್ಲಿ ಮಾದರಿಯಾಗುವಂತಹದ್ದು. “ನಾನೋರ್ವ ಅವಿದ್ಯಾವಂತ. ರಾಷ್ಟ್ರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಹಲವು ಭಾಷೆ ಹಾಗೂ ಸಂಸ್ಕೃತಿಗಳ ನಾಡಾದ ಭಾರತದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಕಲಿತಿರಬೇಕು. ಅಂತರಾಷ್ಟ್ರೀಯ ವಿದ್ಯಾಮಾನಗಳಿಗೆ, ರಾಷ್ಟ್ರೀಯ ಅಭಿವೃದ್ದಿಗೆ ಶ್ರಮಿಸುವ ಪರಿಜ್ಞಾನವಿರಬೇಕು. ನಾನೊಬ್ಬ ದಕ್ಷಿಣ ಭಾರತದ ಅಪ್ಪಟ ಹಳ್ಳಿಗ. ಪ್ರಧಾನಿಯಾಗುವ ಯಾವ ಯೋಗ್ಯತೆಯೂ ನನ್ನಲ್ಲಿಲ್ಲ,” ಎಂದು ಹೇಳುವ ಮೂಲಕ ಭಾರತದ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಕಾಮರಾಜರು ಇಂದಿರಾಗಾಂಧಿಯನ್ನು ಪ್ರಧಾನಮಂತ್ರಿಯನ್ನಾಗಿಸಿದರು.

1969ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಇಂದಿರಾಗಾಂಧಿ ಪರ ನಿಂತ ಕಾಮರಾಜರಿಗೆ ನಂತರದ ದಿನಗಳಲ್ಲಿ ಇಂದಿರಾಗಾಂಧಿಯ ಏಕಪಕ್ಷೀಯ ಧೋರಣೆಗಳಿಂದ ಭ್ರಮನಿರಸನವಾಯಿತು. ಅಷ್ಟರ ವೇಳೆಗಾಗಲೇ, ಅಂದರೆ 1967ರಲ್ಲಿ ಅಣ್ಣಾದೊರೆ ನೇತೃತ್ವದ ಡಿ.ಎಂ.ಕೆ. ಪಕ್ಷ ತಮಿಳುನಾಡಿನಲ್ಲಿ ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಂಡಿತ್ತು. 1973ರಲ್ಲಿ ರಾಜಕೀಯ ಬದುಕಿನಿಂದ ನಿವೃತ್ತಿಯಾದ ಕಾಮರಾಜರು ಹುಟ್ಟೂರಾದ ವಿರುಧನಗರಕ್ಕೆ ಬಂದು ತಮ್ಮ ಪುಟ್ಟ ಮನೆಯಲ್ಲಿ ವಿರಾಗಿಯಂತೆ, ರಾಜಕೀಯ ಸಂತನಂತೆ ಸರಳವಾಗಿ ವಾಸಿಸತೊಡಗಿದರು.

1975ರ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಇಹಲೋಕ ತ್ಯಜಿಸಿದ ಕಾಮರಾಜರಿಗೆ ಭಾರತ ಸರಕಾರ 1976ರಲ್ಲಿ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು, ತಮಿಳುನಾಡು ಸರಕಾರ ಚೆನ್ನೈ ನಗರದ ಮೌಂಟ್ ರೋಡಿನಲ್ಲಿ ಬೃಹತ್ತಾದ ಕಾಮರಾಜ ಸ್ಮಾರಕ ಭವನ ನಿರ್ಮಿಸಿತಲ್ಲದೆ, ಸಮುದ್ರ ತೀರದ ಮೆರಿನಾ ಬೀಚ್ ಬಳಿ ಶಾಲಾ ಮಕ್ಕಳ ಹೆಗಲ ಮೇಲೆ ಕೈಯಿಟ್ಟು ನಿಂತ ಕಾಮರಾಜರ ಸುಂದರ ಪ್ರತಿಮೆಯೊಂದನ್ನು ಸ್ಥಾಪಿಸಿ ಗೌರವ ಸೂಚಿಸಿತು. ಇಂದು ತಮಿಳುನಾಡಿನ ಯಾವುದೇ ಊರಿಗೆ ಹೋದರೂ ಕಾಣುವ ಪ್ರತಿಮೆಗಳೆಂದರೆ, ಒಂದು ಕಾಮರಾಜರದು, ಇನ್ನೊಂದು ಅಣ್ಣಾದೊರೈರವರದು. ನಂತರ ಎಂ.ಜಿ.ಆರ್. ಇತ್ಯಾದಿ.

ನಾನು ತಮಿಳುನಾಡಿನಲ್ಲಿ ಸಂಚರಿಸುವಾಗಲೆಲ್ಲಾ, ಕಾಮರಾಜರ ಪ್ರತಿಮೆ ಕಂಡ ತಕ್ಷಣ ಇಂದಿನ ಹಗಲು ದರೋಡೆಯ ನಾಯಕರು ಬೇಡವೆಂದರೂ ನೆನಪಿಗೆ ಬರುತ್ತಾರ ಜೊತೆಗೆ ಜಿಗುಪ್ಸೆ ಮೂಡಿಸುತ್ತಾರೆ.

(ಚಿತ್ರಕೃಪೆ: ಲೇಖಕರದು ಮತ್ತು ವಿಕಿಪೀಡಿಯ)