“ಲಕ್ಷ್ಮಿಪತಿಯರಿಗೆ ಗಂಡಾಂತರ” ಮತ್ತು “ತಪ್ಪು, ಆದರೆ ಮಹಾಪರಾಧವೇನಲ್ಲ”

-ಭಾರತಿ ದೇವಿ ಪಿ.

‘ರಾಮಾಯಣ ಯುದ್ಧಕ್ಕೆ ಸೀತೆಯ ಚಪಲವೇ ಕಾರಣ, ಮಹಾಭಾರತದ ದುರಂತಕ್ಕೆ ನಾಂದಿ ಹಾಡಿದ್ದು ದ್ರೌಪದಿಯೇ’ ಎಂಬ ಹುಂಬ ವಾದದ ಮುಂದುವರಿಕೆಯಂತೆ ‘ಲಕ್ಷ್ಮಿಪತಿಯರಿಗೆ ತಪ್ಪಿದ್ದಲ್ಲ ಗಂಡಾಂತರ’ ಎಂಬ ಫರ್ಮಾನನ್ನು ಕನ್ನಡದ ಸುದ್ದಿ ವಾಹಿನಿಯೊಂದು ಹೊರಡಿಸಿದೆ. ಜೊತೆಗೆ, ನಿಮ್ಮ ಹೆಂಡತಿಯ ಹೆಸರು ಲಕ್ಷ್ಮಿಯೇ? ಎಂದು ಕೇಳುವುದರ ಮೂಲಕ ‘ನೀವು ಹುಶಾರಾಗಿರಿ’ ಎಂಬ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ, ಇಲ್ಲಿಗೆ ಗಂಡಂದಿರು ಮಾಡಿದ ಅನಾಚಾರಕ್ಕೆಲ್ಲ ಅವರ ದುರಾಸೆ,  ಅಧಿಕಾರ ಲಾಲಸೆ, ದುಷ್ಟತನ ಕಾರಣವಲ್ಲ, ಪತ್ನಿಯ ಹೆಸರು ಲಕ್ಷ್ಮಿ ಎಂದು ಇರುವುದೇ ಕಾರಣ ಎಂಬ ಅಪೂರ್ವ ಸಂಶೋಧನೆ ನಡೆಸಿ ತೀರ್ಮಾನ ಹೊರಡಿಸಿದೆ.

ಸ್ವಾತಂತ್ರ್ಯ ದೊರೆತು 64 ವರ್ಷಗಳಾದ ಮೇಲಾದರೂ ಸಮಾಜದಲ್ಲಿ ದಲಿತರ, ಮಹಿಳೆಯರ ಸ್ಥಾನಮಾನ ಉತ್ತಮಗೊಂಡಿದೆ ಎಂಬ ಭರವಸೆ ಹುಸಿಯಾಗುವ ಬಗೆಯಲ್ಲಿ ಈ ಬಗೆಯ ಘಟನೆಗಳು ಕಾಣಿಸುತ್ತವೆ. ಇತ್ತೀಚೆಗಿನ ದರ್ಶನ್ ಪ್ರಕರಣದಲ್ಲಿ ಒಂದೆಡೆ ಚಿತ್ರರಂಗದ ‘ಗಣ್ಯರು’ ಅವರ ಪತ್ನಿ ವಿಜಯಲಕ್ಷ್ಮಿಗೆ ಬಾತ್‌ರೂಮ್‌ನಲ್ಲಿ ಬಿದ್ದುದಾಗಿ ಹೇಳಿಕೆ ನೀಡುವಂತೆ ಒತ್ತಡ ಹೇರಿದರೆ ಇನ್ನೊಂದೆಡೆ ಇದಕ್ಕೆಲ್ಲ ಕಾರಣ ನಿಖಿತಾ ಎಂದು ಅವರಿಗೆ ಚಿತ್ರರಂಗದಿಂದ ಬಹಿಷ್ಕಾರ ಹಾಕುತ್ತದೆ. ಏಕೆಂದರೆ ‘ಗಂಡ ಹೆಂಡತಿಗೆ ಹೊಡೆಯುವುದು ಸಹಜ’ವಾದ ಸಂಗತಿ ಎಂದು ಇವರಿಗೆ ಕಾಣುತ್ತದೆ. ಗಂಡಸಿನದು ಯಾವುದೇ ತಪ್ಪಿಲ್ಲದೆ ಅವನನ್ನು ತನ್ನ ಮೈಮಾಟಗಳಿಂದ ಸೆಳೆದು, ಸಂಸಾರಕ್ಕೆ ಹುಳಿ ಹಿಂಡುವವಳು ಇನ್ನೊಬ್ಬ ಹೆಣ್ಣು ಎಂದು ಅವರಿಗೆ ಅನಿಸುತ್ತದೆ. ಕನ್ನಡ ಚಿತ್ರರಂಗದ ಅಪ್ರಬುದ್ಧತೆ ಹೊಸದೇನೂ ಅಲ್ಲ ಎಂದಿಟ್ಟುಕೊಳ್ಳೋಣ. ಆದರೆ ಕರ್ನಾಟಕದ ಹೆಸರಾಂತ ಪತ್ರಿಕೆಯೊಂದು ಜನರ ಸಮೀಕ್ಷೆ ನಡೆಸಿ ದರ್ಶನ್ ಮಾಡಿದ್ದು ‘ತಪ್ಪು, ಆದರೆ ಮಹಾಪರಾಧವೇನಲ್ಲ’ ಎಂಬ ನಿಲುವಿಗೆ ಬಂದಿರುವುದು ಆಘಾತವುಂಟುಮಾಡುತ್ತದೆ. ಮಾಧ್ಯಮಗಳು ನ್ಯಾಯಾಧೀಶರಂತೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೊಡುತ್ತಿರುವುದು ಆತಂಕ ಹುಟ್ಟಿಸುತ್ತದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಿಡಬೇಕಾದ ಮಾಧ್ಯಮಗಳು ಸ್ವಾತಂತ್ರ ದೊರೆತು ಇಷ್ಟು ವರ್ಷಗಳಾದ ಹಂತದಲ್ಲಿ ಪ್ರಬುದ್ಧತೆಯನ್ನು ಮೆರೆಯಬೇಕಿತ್ತು. ಬದಲಿಗೆ ಇಂದು ಜನರಲ್ಲಿ ಬೇರೂರಿರುವ ಮೌಢ್ಯಗಳನ್ನು ಬಲಪಡಿಸುತ್ತಾ ಹಣ ಗಳಿಸುವತ್ತ ಸಾಗುತ್ತಿವೆ. ಅಷ್ಟೇ ಅಲ್ಲ, ಜನಸಾಮಾನ್ಯರ ಬದುಕಿನಲ್ಲಿ ಆಟ ಆಡುತ್ತಿವೆ. ‘ಲಕ್ಷ್ಮಿ ಪತಿಯರಿಗೆ ಕಾಟ ತಪ್ಪಿದ್ದಲ್ಲ’ ಕಾರ್ಯಕ್ರಮ ನಡೆದಾಗ ಬಂದ ಹಲವಾರು ಆತಂಕಿತ ಫೋನ್ ಕರೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಈ ಕಾರ್ಯಕ್ರಮದಿಂದಾಗಿ ಲಕ್ಷ್ಮಿ ಎಂಬ ಹೆಂಗಸಿನ ಗಂಡ ತನ್ನ ಸೋಲಿಗೆ ಅನುದಿನವೂ ಪತ್ನಿಯನ್ನು ದೂರುತ್ತಿದ್ದರೆ ಆಕೆಗಾಗುವ ಮಾನಸಿಕ ಹಿಂಸೆಯನ್ನು ಈ ಕಾರ್ಯಕ್ರಮದ ರೂವಾರಿಗಳು ಸರಿಪಡಿಸುತ್ತಾರೆಯೇ? ಅಥವಾ ಲಕ್ಷ್ಮಿ ಎಂಬ ಹೆಸರಿರುವ ಹುಡುಗಿಗೆ ಮದುವೆಯಾಗುವುದು ಕಷ್ಟವಾದರೆ ಅದರ ಹೊಣೆಯನ್ನು ಇವರು ಹೊರುತ್ತಾರೆಯೇ?

ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು ಅವರು ‘ಮಾಧ್ಯಮಗಳ ಕೆಲಸ ಜನರು ಏನು ಬಯಸುತ್ತಾರೆ, ಅದನ್ನು ಕೊಡುವುದಲ್ಲ. ಜನರಿಗೆ ಏನು ಬೇಕು ಅದನ್ನು ನೀಡುವುದು’ ಎಂದು ಒಂದೆಡೆ ಹೇಳಿದ್ದರು. ಇದಕ್ಕೆ ತದ್ವಿರುದ್ಧವಾಗಿ ಇಂದಿನ ಮಾಧ್ಯಮಗಳು ಜನರ ಬದುಕಿಗೆ ಬೇಕಾದ ತಿಳುವಳಿಕೆ ಕೊಡುವುದಕ್ಕೆ ಬದಲಾಗಿ ಅವರ ಬದುಕನ್ನು ಈ ಬಗೆಯಲ್ಲಿ ಕಲಕುವ ಪ್ರಯತ್ನ ಮಾಡುತ್ತಿವೆ. ಜೊತೆಗೆ, ಇನ್ನೊಬ್ಬರ ವೈಯಕ್ತಿಕ ಬದುಕಿಗೆ ಎಷ್ಟರ ಮಟ್ಟಿಗೆ ಪ್ರವೇಶಿಸಬಹುದು ಎಂಬ ವಿವೇಕ ಮಾಧ್ಯಮಗಳಲ್ಲಿ ಇಲ್ಲದಿರುವುದು ವ್ಯಕ್ತಿಯ ಬದುಕಿನ ಘನತೆ, ಪಾವಿತ್ರ್ಯವನ್ನೇ ಅಲ್ಲಗಳೆಯುವ ಪ್ರಜಾಪ್ರಭುತ್ವ ವಿರೋಧಿ ಮೌಲ್ಯ.

ವಾಸ್ತವವಾಗಿ, ಜನಾರ್ದನ ರೆಡ್ಡಿಯ ಪತ್ನಿ, ಗ್ಯಾನಳ್ಳಿ ತಮ್ಮಯ್ಯ ಇವರೆಲ್ಲರ ಪತ್ನಿಯರು ತಮ್ಮ ಗಂಡಂದಿರು ಮಾಡಿದ ತಪ್ಪಿನಿಂದ ಈ ಪಡಬಾರದ ಸಂಕಟ ಪಡುತ್ತಿರುವುದೂ ಅಲ್ಲದೆ, ಈಗ ತಮ್ಮ ಹೆಸರುಗಳಿಂದ ತಾವೇ ಗಂಡಂದಿರ ಅನಾಚಾರಕ್ಕೆ ಹೊಣೆಯನ್ನೂ ಹೊತ್ತುಕೊಳ್ಳಬೇಕಾಗಿದೆ. ಅವರ ಮೇಲೆ ಅನ್ಯಥಾ ಆರೋಪ ಹೊರಿಸುವಾಗ ಕನಿಷ್ಟ ವಿವೇಕವನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತೋರಿಸಿಲ್ಲ.

ಕಾರ್ಲ್ ಸಾಗನ್ ತನ್ನ “ದಿ ಡೆಮನ್ ಹಾಂಟೆಡ್ ವರ್ಲ್ಡ್” ಎಂಬ ಪುಸ್ತಕದಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಪ್ರಜಾಪ್ರಭುತ್ವ ಇವೆರಡೂ ಪ್ರತಿಪಾದಿಸುವ ಮೌಲ್ಯಗಳು ಒಂದೇ ಎಂದು ಹೇಳುತ್ತಾನೆ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದು ಪ್ರಜಾಪ್ರಭುತ್ಚದ ಮೌಲ್ಯಗಳನ್ನು ಬಲಪಡಿಸುತ್ತದೆ. ಅದರ ಬದಲಿಗೆ ಇಂದು ಅಧ್ಯಯನ ನಡೆಸಬೇಕಾಗಿರುವುದು ಮೌಢ್ಯವನ್ನೇ ಪ್ರತಿಪಾದಿಸುತ್ತಾ ಪಾಳೇಗಾರಿಕೆಯ ಮೌಲ್ಯಗಳನ್ನೇ ಬಲಪಡಿಸುವತ್ತ ಮಾಧ್ಯಮಗಳು ಸಾಗುತ್ತಿರುವುದರ ಬಗೆಗೇ ಹೊರತು ಯಾರ ಹೆಸರು ಏನು, ಅದು ಹಾಗಿರುವುದರಿಂದಲೇ ಏನು ಅನರ್ಥವಾಗಿದೆ ಎಂಬ ತಳವಿಲ್ಲದ ಸಂಗತಿಗಳ ಬಗೆಗೆ ಅಲ್ಲ.

ಟಿಆರ್‌ಪಿ ಆಧಾರದಲ್ಲಿ ಜನಪ್ರಿಯತೆಯನ್ನು ನಿರ್ಧರಿಸುವ ಕಾಲದಲ್ಲಿ ಇಂದು ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಿರುವುದರ ಮಾನದಂಡ ಅದನ್ನು ಎಷ್ಟು ಹೆಚ್ಚು ಜನ ಮೆಚ್ಚಿದ್ದಾರೆ ಎಂಬುದಷ್ಟೇ ಆಗಿಲ್ಲ. ಅದನ್ನು ಅತಿ ಹೆಚ್ಚು ಜನ ತೆಗಳಿದರೂ ಆ ಕಾರ್ಯಕ್ರಮ ಯಶಸ್ವಿಯಾಯಿತೆಂದೇ ಭಾವಿಸಲಾಗುತ್ತದೆ. ಒಟ್ಟಿನಲ್ಲಿ ಒಳ್ಳೆಯ ರೀತಿಯಲ್ಲೇ ಆಗಲೀ, ಕೆಟ್ಟ ರೀತಿಯಲ್ಲೇ ಅಗಲಿ, ಅತಿ ಹೆಚ್ಚು ಜನರನ್ನು ಸೆಳೆದು ನೋಡುವಂತಾಗಿಸುವುದೇ ಚಾನೆಲ್ಗಳ ಗುರಿ. ಹೀಗಾಗಿ ಈ ಬಗೆಯ ಕಾರ್ಯಕ್ರಮಗಳನ್ನು ವಿಮರ್ಶಿಸುವ ನಾವೂ ಪರೋಕ್ಷವಾಗಿ ಅದನ್ನು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇವೆ ಎಂಬುದೇ ಇಲ್ಲಿನ ವ್ಯಂಗ್ಯ.

ಈ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರನ್ನು ಕರೆದು ಮಾತಾಡಿಸಿದಂತೆ ಒಬ್ಬ ವಿಚಾರವಾದಿಗೆ ಅವಕಾಶ ಇರಲಿಲ್ಲ. ಅದರಲ್ಲೂ ಅಲ್ಲಿಗೆ ಬಂದಿದ್ದ ಜ್ಯೋತಿಷಿಯೊಬ್ಬರು ‘ಲಕ್ಷ್ಮಿ ಅನ್ನುವ ಹೆಸರು ಶುಭವಾದದ್ದೇ ಆಗಿದ್ದರೂ ಗಂಡ ಹೆಂಡತಿಯನ್ನು ಲಕ್ಷ್ಮಿ, ಬಾರೇ ಹೋಗೇ ಅನ್ನುವುದರಿಂದ ಆ ಹೆಸರು ಅಪಮೌಲ್ಯಗೊಂಡು ತೊಂದರೆಯುಂಟಾಗುತ್ತದೆ’ ಎಂದೆಲ್ಲ ಬಾಲಿಶವಾಗಿ ಮಾತಾಡಿದ್ದರು. ಇಡೀ ಕಾರ್ಯಕ್ರಮವನ್ನು ಟಿಆರ್‌ಪಿಗಾಗಿಯೇ ಮಾಡಿದ್ದರೂ ಇಡೀ ಚರ್ಚೆಯಲ್ಲಿ ಒಂದು ಭಿನ್ನ ದನಿಗೆ ಅವಕಾಶ ಮಾಡಿಕೊಡುವ ಅವಕಾಶವಿತ್ತು. ಆದರೆ ಹಾಗಾಗಲಿಲ್ಲ.

ಮುರ್ಡೋಕ್ ಪ್ರಕರಣದ ಬಗ್ಗೆ ಜಿ.ಎನ್.ಮೋಹನ್ ಬರೆಯುತ್ತಾ “ಸಿಟಿಜನ್ ಕೇನ್” ಎಂಬ ಚಿತ್ರದ ಉದಾಹರಣೆ ನೀಡಿ ಅದರಲ್ಲಿ ‘ಪತ್ರಿಕೆಗೆ ಅತಿರಂಜಿತ ಸುದ್ದಿ ಸಿಗದಾಗ ಮಾಲೀಕ ತಾನೇ ಕೊಲೆ ಮಾಡಿಸಿ ಸುದ್ದಿ ಮಾಡುವ ಸ್ಥಿತಿ’ಗೆ ತಲುಪುವುದನ್ನು ವಿವರಿಸಿದ್ದರು. ಆದರೆ ಅವರೇ ಮುಖ್ಯಸ್ಥರಾಗಿರುವ ಸಮಯ ವಾಹಿನಿಯಲ್ಲಿ ಟಿಆರ್‌ಪಿಗಾಗಿ ಇಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದು ನಿರಾಸೆ ಹುಟ್ಟಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ಬಯಸುವ ನಾವು ನೋಡುಗರಾಗಿ, ಓದುಗರಾಗಿ ಹುರುಳಿಲ್ಲದ ಕಾರ್ಯಕ್ರಮಗಳನ್ನು, ಬರಹಗಳನ್ನು ಗಟ್ಟಿದನಿಯಿಂದ ವಿರೋಧಿಸುವ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

4 thoughts on ““ಲಕ್ಷ್ಮಿಪತಿಯರಿಗೆ ಗಂಡಾಂತರ” ಮತ್ತು “ತಪ್ಪು, ಆದರೆ ಮಹಾಪರಾಧವೇನಲ್ಲ”

  1. Ananda Prasad

    ಇದೊಂದು ಉತ್ತಮ ಬರಹ. ಇದೇ ರೀತಿಯ ಸಾತ್ವಿಕ ಸಿಟ್ಟು ಹಾಗೂ ಆಕ್ರೋಶ ಕರ್ನಾಟಕದ ಗಣ್ಯ ವ್ಯಕ್ತಿಗಳಿಂದ ಟಿವಿ ಮಾಧ್ಯಮ ಹಬ್ಬಿಸುತ್ತಿರುವ ಮೂಢನಂಬಿಕೆಗಳ ವಿರುದ್ಧ ವ್ಯಕ್ತವಾಗಬೇಕಾಗಿತ್ತು, ಆದರೆ ಅಂಥ ಪ್ರತಿಕ್ರಿಯೆ ಕರ್ನಾಟಕದ ಸಾರಸ್ವತ ಲೋಕದಿಂದಾಗಲಿ, ಪ್ರಜ್ಞಾವಂತ ನಾಗರಿಕರಿಂದಾಗಲಿ ವ್ಯಕ್ತವಾಗುತ್ತಿಲ್ಲ. ಅನ್ಯಾಯದಲ್ಲಿ ಪಾಲುಗೊಳ್ಳದೆ ಇದ್ದರೂ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವುದೂ ಅನ್ಯಾಯಕ್ಕೆ ಪ್ರೋತ್ಸಾಹ ಕೊಟ್ಟಂತೆಯೇ ಆಗುವುದರಿಂದ ಟಿವಿ ಮಾಧ್ಯಮದಿಂದ ಇಂಥ ಕಾರ್ಯಕ್ರಮಗಳು ಎಗ್ಗಿಲ್ಲದೆ ಪ್ರಸಾರವಾಗುತ್ತವೆ. ನಮ್ಮ ನಾಗರೀಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಕೆಲಸ ಸಾರಸ್ವತ ಲೋಕದ ಖ್ಯಾತನಾಮರಿಂದ ಆಗಬೇಕಾಗಿದೆ. ಕುವೆಂಪುರವರಂಥ ಸಾಹಿತಿಗಳು ಇಂದು ಇದ್ದಿದ್ದರೆ ಇದನ್ನೆಲ್ಲಾ ನೋಡಿಕೊಂಡು ಪ್ರತಿಕ್ರಿಯಿಸದೆ ಸುಮ್ಮನಿರುತ್ತಿರಲಿಲ್ಲ.

    Reply
  2. Vasanth

    You have rightly pointed out how media is running after TRPs. it is very sad that Samaya TV under the leadership of G. N. Mohan is running after TRPs and telecasting very low grade programms. For money they can do anything and compromise to any level.

    Reply
  3. B Jayalakshmi

    ”The ideology of people who are interested in communications only as a way of controlling people, or making money out of them” says Raymond Williams which reflects how our Medias are working even today. The little article of yours throws much light upon the male-chauvinistic ideas of the Medias. As a system of communication it need to focus on the reality of what exactly happening in our society rather than transmitting false ideologies to the innocent common people by forcing them to accept as a ‘common sense’. In this way your article is a laudable one since it enlightens at the same time condemns this commercial- oriented Medias…

    Reply
  4. Pingback: ನ್ಯಾ.ಕಟ್ಜು ಅವರ ಮಾತಿನಲ್ಲಿ ಟೀಕಿಸುವಂತಹ ಕಟುವಾದ್ದೇನಿದೆ? « ವರ್ತಮಾನ – Vartamaana

Leave a Reply to Vasanth Cancel reply

Your email address will not be published. Required fields are marked *