Daily Archives: October 8, 2011

ಸಾವೆಂಬುದು ಬದುಕಿನಲ್ಲಿ ಬರುವ ಏಕೈಕ ಆಮಂತ್ರಣ

ತಂತ್ರಜ್ಙಾನ ರಂಗದಲ್ಲಿ ದಂತ ಕಥೆಯಂತೆ ಬದುಕಿ ಇದೇ 5 ರಂದು ತೀರಿಹೋದ ಸ್ಟೀವ್ ಜಾಬ್ಸ್‌ದು ತನ್ನ ಹೊಸ ಹೊಸ ಅವಿಷ್ಕಾರಗಳ ಮೂಲಕ ಇಂದಿನ ತಲೆಮಾರಿನ ಹೃದಯಗಳಲ್ಲಿ ಶಾಶ್ವತ ನಿಲ್ಲುವಂತಹ ವ್ಯಕ್ತಿತ್ವ. ಸಾವಿನ ತೂಗುಕತ್ತಿಯ ಕೆಳಗೇ ಬದುಕು ದೂಡುತ್ತಾ ಜಗತ್ತಿನ ಮಾಹಿತಿ ರಂಗಕ್ಕೆ ಐಪ್ಯಾಡ್, ಐಪಾಡ್, ಐಪೊನ್ ಗಳನ್ನು ನೀಡಿದ ಅಪ್ರತಿಮ ಸಾಹಸಿ, ಸ್ಟೀವ್. 2005 ರ ಜೂನ್ 12 ರಂದು ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿ.ವಿ.ಯ ಘಟಿಕೋತ್ಸವದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳಲು ಸಿದ್ಧವಾಗಿದ್ದ ಯುವ ಜನಾಂಗವನ್ನು ಕುರಿತು ಸ್ಟೀವ್ ಮಾಡಿದ ಭಾಷಣ ಇಂದಿಗೂ ಪ್ರಸಿದ್ಧವಾಗಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

ಡಾ.ಎನ್. ಜಗದೀಶ್ ಕೊಪ್ಪ

ನಾನು 17 ನೇ ವಯಸ್ಸಿನಲ್ಲಿ ಓದಿದ ವಾಕ್ಯ ನನಗಿನ್ನೂ ನೆನಪಿದೆ. ಆ ಸಾಲುಗಳು ಹೀಗಿದ್ದವು: “ಈ ದಿನವೇ ನನ್ನ ಕಡೆಯ ದಿನವೆಂದು ನೀನು ಬದುಕಿದರೇ ನಿನ್ನ ನಿರ್ಧಾರ ಸರಿ.”‘ ಕಳೆದ 33 ವರ್ಷಗಳಿಂದಲೂ ನನ್ನನ್ನು ಈ ಸಾಲುಗಳು ಕಾಡುತ್ತಾ ಬದುಕನ್ನ ಮುನ್ನೆಡೆಸಿವೆ. ಪ್ರತಿ ದಿನ ಬೆಳಿಗ್ಗೆ ಕನ್ನಡಿಯ ಮುಂದೆ ನಿಂತು ನಾನು ಕೇಳಿಕೊಳ್ಳುತ್ತೇನೆ, ” ಈದಿನ ನಿನ್ನ ಕೊನೆಯ ದಿನವಿರಬಹುದೆ?” ಆವಾಗ ನನ್ನ ಒಳ ಮನಸ್ಸು ಹೇಳುತ್ತದೆ, “ಇಲ್ಲ ಇನ್ನೂ ಹಲವಾರು ದಿನಗಳು ಸರತಿಯ ಸಾಲಿನಲ್ಲಿ ಕಾಯುತ್ತಿವೆ,” ಎಂದು. ಆಗ ನನಗನಿಸುತ್ತದೆ, ಹೌದು, ನನ್ನಿಂದ ಕೆಲವು ಬದಲಾವಣೆಗಳು ಆಗಬೇಕಾಗಿದೆಯೆಂದು. ನಾನು ಸಧ್ಯದಲ್ಲೇ ಸಾಯುತ್ತೀನಿ ಎಂದು ನಾನು ಬಲ್ಲೆ, ಈ ಕಾರಣಕ್ಕಾಗಿ ಬದುಕಿನಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಾಚಿ ತಬ್ಬಿಕೊಳ್ಳುತಿದ್ದೇನೆ. ಏಕೆಂದರೆ, ಸಾವಿನ ಸಮ್ಮುಖದಲ್ಲಿ ಸಂತೋಷ, ಮುಜುಗರ, ವೈಫಲ್ಯ ಇವೆಲ್ಲವೂ ಗೌಣ. ಹಾಗಾಗಿ ಬದುಕಿನ ವಾಸ್ತವ ಸಂಗತಿಗಳ ಬಗ್ಗೆ ಯೋಚಿಸುತ್ತೇನೆ. ಸಾವಿನ ಮೂಲಕ ಬದುಕಿನಲ್ಲಿ ಎದುರಿಸಬೇಕಾದ ಹಲವಾರು ಸಂಗತಿಗಳು ದೂರವಾಗುತ್ತವೆ. ನೀನು ಈಗಾಗಲೇ ಬತ್ತಲೆಯಾಗಿರುವಾಗ ನಿನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನೀನು ನಡೆಯಲೇಬೇಕು ಎಂಬುದು ನನ್ನ ಅಂತರಂಗದ ಧ್ವನಿಯಾಗಿದೆ.

ಒಂದು ವರ್ಷದ ಹಿಂದೆ ಬೆಳಗಿನ ಜಾವ ಆಸ್ಪತ್ರೆಯಲ್ಲಿ ನನ್ನ ದೇಹವನ್ನು ತಪಾಸಣೆಗೆ ಒಳಪಡಿಸಿದಾಗ ನನ್ನ ಮೆದೋಜೀರಕ ಗ್ರಂಥಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ದೃಢಪಟ್ಟಿತು. ನನಗೆ ಮೇದೋಜೀರಕ ಗ್ರಂಥಿ ಅಂದರೆ ಏನೆಂಬುದು ಗೊತ್ತಿರಲಿಲ್ಲ, ವೈದ್ಯರು ಈ ಬಗ್ಗೆ ವಿವರಿಸಿ, ಬಹಳ ದಿನ ಬದುಕುವ ಆಸೆಯನ್ನ ನಾನು ತ್ಯಜಿಸುವಂತೆ ಸೂಚಿಸಿದರು. ಅವರ ಸೂಚನೆ ಸಾವಿಗೆ ಸಿದ್ಧವಾಗಿರು ಎಂಬಂತಿತ್ತು. ಜೊತೆಗೆ ನನ್ನ ಮಕ್ಕಳಿಗೆ, ಪತ್ನಿಗೆ ಮುಂದಿನ ಹತ್ತು ವರ್ಷಗಳಲ್ಲಿ ನಾನು ಏನು ಹೇಳಬೇಕೆಂದಿದ್ದೆ ಅವೆಲ್ಲವನ್ನು ಕೆಲವೇ ತಿಂಗಳಲ್ಲಿ ಹೇಳಿ ಮುಗಿಸು ಎಂಬಂತಿತ್ತು. ಇದರಿಂದ ನನ್ನ ಕುಟುಂಬಕ್ಕೆ ಒಳಿತಾಗಿ ನನ್ನ ಸಾವಿನ ದಾರಿ ಸುಗಮವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿತ್ತು. ಆ ದಿನ ಸಂಜೆಯವರೆಗೆ ಆಸ್ಪತ್ರೆಯಲ್ಲಿ ನನ್ನನ್ನು ಇರಿಸಿಕೊಂಡು ನನ್ನ ಗಂಟಲಿನ ಹಾಗೂ ಹೊಟ್ಟೆಯ ಒಳ ಭಾಗದ ಮಾಂಸದ ತುಣುಕುಗಳನ್ನು ತೆಗೆದು, ಜೈವಿಕ ಪರೀಕ್ಷೆಗೆ ಒಳಪಡಿಸಲಾಯ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ನನ್ನ ಪತ್ನಿಗೆ ವೈದ್ಯರು ಹೊಸ ಭರವಸೆಯೊಂದನ್ನು ಕೊಟ್ಟರು. ಶಸ್ರಚಿಕಿತ್ಸೆ ಮೂಲಕ ರೋಗಕ್ಕೆ ತುತ್ತಾಗಿರುವ ಭಾಗಗಳನ್ನು ತೆಗೆದು ಇನ್ನಷ್ಟು ಹೊಸ ಜೀವಕೋಶಗಳನ್ನು ಬೆಳೆಸುವುದರ ಮೂಲಕ ಸಾವನ್ನು ಒಂದಷ್ಟು ವರ್ಷಗಳ ಕಾಲ ಮುಂದೂಡಬಹುದೆಂಬುದೇ ವೈದ್ಯರ ಭರವಸೆಯಾಗಿತ್ತು. ನಿರಾಸೆಯ ಕಡಲಲ್ಲಿ ಮುಳುಗಿದ್ದವನಿಗೆ ಅದೊಂದು ಸಣ್ಣ ಭರವಸೆಯ ಬೆಳಕು ನನ್ನ ಪಾಲಿಗೆ.

ನಾನು ಯುವಕನಾಗಿದ್ದಾಗ “Whole Earth Catalog” (ಜಗತ್ತಿನ ವಿಷಯಗಳು) ಎಂಬ ಪುಸ್ತಕ ಪ್ರಕಟವಾಗಿತ್ತು. ನನ್ನ ತಲೆಮಾರಿನ ಪಾಲಿಗೆ ಅದೊಂದು ಬೈಬಲ್. ಇದನ್ನು ಸಿದ್ಧಪಡಿಸಿದವರು ಇಲ್ಲೇ ಸಮೀಪದ ಮೆನ್ಲೊ ಪಾರ್ಕ್ ನಲ್ಲಿರುವ ಸ್ಟೀವರ್ಟ್ ಬ್ರಾಂಡ್. ಅವರು ಈ ಪುಸ್ತಕಕ್ಕೆ ಕಾವ್ಯದ ಸ್ಪರ್ಶ ನೀಡಿದ್ದರು. 1960ರ ನಂತರ ನಾವೆಲ್ಲ ಬಲ್ಲಂತೆ ಪರ್ಸನಲ್ ಕಂಪ್ಯೂಟರ್‌ಗಳು ಆವಿಷ್ಕಾರಗೊಂಡು, ಟೈಪ್‌ರೈಟರ್‌ಗಳು, ಪೋಲಾರೈಡ್ ಕ್ಯಾಮೆರಾಗಳು, ಕತ್ತರಿಗಳು ನೇಪಥ್ಯಕ್ಕೆ ಸರಿದವು. ಸ್ಟೀವರ್ಟ್ ಮತ್ತು ಅವನ ತಂಡ ಜಗತ್ತಿನ ವಿಷಯಗಳು ಕುರಿತಾದ ಕೊನೆಯ ಸಂಪುಟವನ್ನು 1970ರಲ್ಲಿ ಹೊರತಂದಿತು. ಅದು ಇವತ್ತಿನ ಗೂಗಲ್‌ನ ಪುಸ್ತಕ ರೂಪ, ಗೂಗಲ್ ಬರುವುದಕ್ಕೆ 35 ವರ್ಷಗಳ ಹಿಂದೆಯೇ, ಎನ್ನಬಹುದು. ಅದೊಂದು ಆದರ್ಶವಾದಿಯಾಗಿತ್ತು. ಹಾಗೆಯೇ ಉಪಯುಕ್ತ ಸಲಕರಣೆಗಳಿಂದ ಮತ್ತು ಉತ್ತಮ ಚಿಂತನೆಗಳಿಂದ ತುಂಬಿತುಳುಕುತ್ತಿತ್ತು. ನನಗೆ ಆ ಕೊನೆಯ ಸಂಪುಟದ ಹಿಂಬದಿಯ ರಕ್ಷಾ ಪುಟದಲ್ಲಿ ಪ್ರಕಟವಾಗಿದ್ದ ಬೆಟ್ಟ ಹತ್ತುತ್ತಿರುವ ಯುವಕರ ಚಿತ್ರಹಾಗೂ ಅದರ ಕೆಳಗೆ ಮುದ್ರಿಸಿದ್ದ “ಸದಾ ಹಸಿವಿನಿಂದಿರು ಮತ್ತು ಸದಾ ಮೂರ್ಖನಂತಿರು” ಎಂಬ ವಾಕ್ಯ ಈಗಲೂ ನೆನಪಿದೆ. ಇಲ್ಲಿ ಹಸಿವೆಂದರೆ ಜ್ಞಾನದ ಹಸಿವು. ಮೂರ್ಖನಂತೆ ಬದುಕುವುದೆಂದರೆ ನಮ್ಮ ಅಹಂಗಳನ್ನು ತ್ಯಜಿಸುವುದು ಎಂದರ್ಥ. ಇಂತಹ ನಾಣ್ಣುಡಿಗಳು ನಿಮ್ಮ ಬದುಕನ್ನು ಮುನ್ನಡೆಸಲಿ ಎಂದು ಹಾರೈಸುತ್ತೇನೆ. ವಂದನೆಗಳು.

(ಚಿತ್ರಕೃಪೆ: ವಿಕಿಪೀಡಿಯ)