ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ!

-ಪರಶುರಾಮ ಕಲಾಲ್.

ಹಂಪಿ ಎಂದೊಡನೆ ಅನೇಕರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದಾಚೆಗೂ ಹಂಪಿ ಎನ್ನುವುದು ಇತ್ತು ಎಂದು ನಾವು ಯೋಚಿಸಲಾರದಷ್ಟು ಕಳೆದ 60 ವರ್ಷದಲ್ಲಿ ಇತಿಹಾಸಕಾರರೆಂಬ ಕೆಲವು ಭಯೋತ್ಪಾದಕರು ಹಂಪಿಗೆ ವಿಜಯನಗರದ ಪಟ್ಟ ಕಟ್ಟಿ ಅಲ್ಲಿಯೇ ಬಿಡಾರ ಹೂಡಿ ಬಿಟ್ಟಿದ್ದಾರೆ.

ಶಿಲಾಯುಗದ ಕಾಲದಲ್ಲೂ ಹಂಪಿ ಜೀವಂತವಾಗಿತ್ತು ಎನ್ನುವುದಕ್ಕೆ ಅನೇಕ ಪ್ರಾಚೀನ ಕುರುಹುಗಳು ಸಾಕಷ್ಟು ದೊರಕಿವೆ. ಕಲ್ಲುಗುಂಡುಗಳನ್ನು ಪೇರಿಸಿಟ್ಟಂತೆ ಕಾಣುವ ಸಾಲು ಸಾಲು ಬೆಟ್ಟಗಳು, ಇವುಗಳನ್ನು ಸೀಳಿಕೊಂಡು ಹರಿಯುವ ತುಂಗಭದ್ರೆ, ಇತಿಹಾಸ ನಿರ್ಮಾಣಕಾರರು ಎಂದು ಅಹಂಕಾರ ಪ್ರದರ್ಶಿಸುತ್ತಾ ಬಂದವರನ್ನು ಕೆಲವೊಮ್ಮೆ ಉಕ್ಕಿ ಹರಿದು ಅವರ ಸೊಕ್ಕು ಮುರಿದು ಹಾಕುತ್ತಾ ಬಂದಿದ್ದಾಳೆ ಈ ಪುಣ್ಯಾತಗಿತ್ತಿ.

ಹಂಪಿಯು ಜನಪದರಿಗೆ ಪಂಪಾಪತಿ, ಹಂಪಮ್ಮರ ನೆಲೆ ಎನಿಸಿದೆ. ತುಂಗಭದ್ರೆಯು ಇವರಿಗೆ ಹಂಪಿ ಹೊಳೆಯಾಗಿದೆ. ಹಂಪಿಯಲ್ಲಿ ನಡೆಯುವ ಫಲಪೂಜೆಯು ಪಂಪಾಪತಿ-ಹಂಪಮ್ಮರ ನಿಶ್ಚಿತಾರ್ಥವಾದರೆ ಜಾತ್ರೆಯು ಅವರ ವಿವಾಹವಾಗಿದೆ. ಜನರು ತಮ್ಮ ಮನೆಯೊಂದರ ಮದುವೆ ಸಂಭ್ರಮ ಎನ್ನುವಂತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಪಟ್ಟಣದ ಎಲ್ಲಮ್ಮ, ಹತ್ತುಕೈ ತಾಯಮ್ಮ ಶಕ್ತಿದೇವತೆಗಳು ಇವತ್ತಿಗೂ ಕುರಿ-ಕೋಳಿ ಬೇಡುತ್ತಿವೆ. ಜನರು ಅವರ ಕೋರಿಕೆ ಈಡೇರಿಸಿ ಎಡೆ ಹಾಕುತ್ತಾರೆ. ರಾಮಾಯಣ, ಮಹಾಭಾರತ ಕಥೆಯಂತೂ ಹಂಪಿ ತುಂಬಾ ವ್ಯಾಪಿಸಿ ಬಿಟ್ಟಿದೆ. ಸೀತೆ ಸೆರಗು, ವಾಲಿ ಗವಿ, ರಾವಣ ಉಚ್ಚೆ ಹೊಯ್ದ ಹೊಂಡ ಇತ್ಯಾದಿ.

ನಾನು ಸಣ್ಣವನಿದ್ದಾಗ ಅವುಟುಗಾಲು ಭರಮಪ್ಪ ಎನ್ನುವ ವಯಸ್ಸಾದ ವ್ಯಕ್ತಿಯೊಬ್ಬ ಹಂಪಿ ತೋರಿಸಲು ಕರೆದೊಯ್ದು ವಿಜಯ ವಿಠ್ಠಲ ದೇವಸ್ಥಾನದ ಹಿಂದೆ ನದಿಯಲ್ಲಿ ನಿಂತಿರುವ ಕಲ್ಲು ಕಂಭಗಳನ್ನು ತೋರಿಸಿ ಆ ಕಡೆ ಇರುವುದೇ ಲಂಕಾ ಪಟ್ಟಣ ಎಂದು ಹೇಳಿದ್ದ. ಆತ ಹೇಳಿದ್ದ ಪ್ರದೇಶ ಋಷ್ಯಮೂಕ ಪರ್ವತವಾಗಿತ್ತು. ಅಲ್ಲಿಗೆ ಯಾರೂ ಹೋಗಿಲ್ಲ, ಹೋದವರು ಹಿಂದಕ್ಕೆ ಬಂದಿಲ್ಲ ಎಂದು ಹೇಳಿ ನನ್ನನ್ನು ಆ ಪ್ರದೇಶದ ಬಗ್ಗೆ ಭಯಭೀತಿ ಉಂಟಾಗುವಂತೆ ಮಾಡಿದ್ದ. ಸೇತುವೆ ಯಾಕೆ ಹಾಳಾಯಿತು ಎಂದು ಬಾಲಕನ ಸಹಜ ಕುತೂಹಲದಿಂದ ಆಗ ಕೇಳಿದ್ದೆ. ರಾವಣ ಸತ್ತ ನಂತರ ರಾಮ ವಾಪಸ್ಸು ಬಂದಾಗ ಇನ್ನೂ ಸೇತುವೆ ಯಾಕೆ ಬೇಕು, ಇದನ್ನು ಹೊಡೆದಾಕಿ ಎಂದು ವಾನರ ಸೇನೆಗೆ ತಿಳಿಸಿದ. ಅದರಂತೆ ಸೇತುವೆ ಹೊಡೆದು ಹಾಕಲಾಯಿತು. ಹಂಪಿಯಲ್ಲಿರುವ ಕಲ್ಲುಬಂಡೆಗಳ ಬೆಟ್ಟಗಳು ಸೇತುವೆ ನಿರ್ಮಾಣಕ್ಕೆಂದು ತರಲಾಗಿತ್ತು. ಹೆಚ್ಚಾಗಿದ್ದರಿಂದ ಅವುಗಳನ್ನು ಎಲ್ಲಿ ಬೇಕು ಅಲ್ಲಿ ಚೆಲ್ಲಿದ್ದರಿಂದ ಇಷ್ಟೊಂದು ಕಲ್ಲುಗುಂಡುಗಳ ಬೆಟ್ಟಗಳಾಗಿವೆ ಎಂದು ಸಹ ಹೇಳಿದ್ದ.

ಸೇತುವೆ ಪುನಃ ಕಟ್ಟಲು ಬರುವುದಿಲ್ಲವೇ? ನಾನು ಕೇಳಿದ್ದೆ. ಸೇತುವೆಯನ್ನು ಇನ್ನು ಮುಂದೆ ಯಾರೋ ಕಟ್ಟಲು ಆಗುವುದಿಲ್ಲ, ಕಟ್ಟಿದರೆ ಆ ಸೇತುವೆ ಉಳಿಯುವುದಿಲ್ಲ, ಇಂತಹ ಸೇತುವೆ ಕಟ್ಟುವವರೆಲ್ಲಾ ರಕ್ತಕಾರಿ ಸತ್ತು ಹೋಗಿದ್ದಾರೆ, ಎಲ್ಲಿಯಾದರೂ ದೈವಕ್ಕೆ ಎದುರಾಗಿ ಉಳಿಯುವುದು ಉಂಟೇ ಎನ್ನುವುದು ಆತನ ಮಾತಿನ ತಾತ್ಪರ್ಯವಾಗಿತ್ತು.

ಇದೆಲ್ಲಾ ಈಗ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ, ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆ ಕುಸಿದು 30ಕ್ಕೂ ಹೆಚ್ಚು ಕಾರ್ಮಿಕರು ಜಲಸಮಾಧಿಯಾದ ದುರಂತ ಘಟಿಸಿದ್ದರಿಂದ.

ನಾನು ತಳವಾರ ಘಟ್ಟದ ಒಂದು ಕಲ್ಲುಗುಂಡಿನ ಮೇಲೆ ಕುಳಿತು ಇದನ್ನೆಲ್ಲಾ ನೆನಪು ಮಾಡಿಕೊಳ್ಳುವ ಹೊತ್ತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಬಂದರು. ದೋಣಿ ಹತ್ತಿ ಹೊಳೆಯಲ್ಲಿ ಒಂದು ಸುತ್ತು ವಿಹಾರ ನಡೆಸಿದರು. ಅದನ್ನೇ ನಮ್ಮ ಪತ್ರಕರ್ತ ಮಿತ್ರರು ಫೋಟೊ ತೆಗೆದು ಪರಿಶೀಲನೆ, ಕಾರ್ಯಾಚರಣೆ ಉಸ್ತುವಾರಿ ಎಂದೆಲ್ಲಾ ಬರೆದು ಹಾಕಿದರು.

ಆನೆಗೊಂದಿ-ಹಂಪಿಯ ನಡುವೆ ಯಾವುದೋ ರಾಜ ನಿರ್ಮಿಸಿದ್ದ ಕಲ್ಲಿನ ಸೇತುವೆ, ವಿರೂಪಾಪುರ ಗಡ್ಡೆಗೆ ಸಂಪರ್ಕಿಸಲು ಋಷ್ಯಮೂಕ ಪರ್ವತಕ್ಕೆ ಹೊಂದಿಕೊಂಡಿದ್ದ ಕಲ್ಲಿನ ಸೇತುವೆ ಯಾಕೆ ಹಾಳಾದವು? ಈಗಲೂ ಅವಶೇಷಗಳಾಗಿ ಶತಮಾನದುದ್ದಕ್ಕೂ ಸೇತುವೆ ಹೊತ್ತಿದ್ದ ಕಲ್ಲಿನ ಬಂಡೆಗಳು ಇನ್ನೂ ಸಾಕ್ಷಿಯಾಗಿ ನಿಂತುಕೊಂಡು ಚರಿತ್ರೆಯ ಇಂತಹ ಕಥೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತಿವೆ. ಇದನ್ನು ಕೇಳುವ ಸೂಕ್ಷ್ಮ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆಯೇ? ಇತಿಹಾಸ ಎಂದೊಡನೆ ಭೂತ ಮೈವೆತ್ತವರಂತೆ ಆಡುವುದು ಬಿಟ್ಟು ಬೇರೇನೂ ನಮಗೆ ಕಾಣಿಸುತ್ತಿಲ್ಲ ಯಾಕೇ?

ಯುನೆಸ್ಕೋ ಪ್ರತಿನಿಧಿ ಜಿಂಕು ತಾನಿಗುಚ್ಚಿ ಈ ಹಿಂದೆ ಹಂಪಿಗೆ ಬಂದಿದ್ದಾಗ ಆಕೆಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು (ಪತ್ರಕರ್ತನಾಗಿದ್ದರಿಂದ). ಆಕೆಯೇ ಮುಂದೆ ಹಂಪಿಯನ್ನು ವಿಶ್ವಪರಂಪರೆಯ ಆಪಾಯದ ಸ್ಮಾರಕಗಳ ಪಟ್ಟಿಯಲ್ಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಳಿ ಜ್ವರ ಬರುವಂತೆ ಮಾಡಿದ ಪುಣ್ಯಾತಗಿತ್ತಿ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಈ ಯುನೆಸ್ಕೂ ಹೆಂಗಸಿಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನೂ ಅರ್ಥವಾಗುತ್ತಿಲ್ಲ, ಸ್ವಲ್ಪ ನೀವೇ ಮಾತನಾಡಿ ಒಪ್ಪಿಸಿ, ಪ್ರೆಸ್‌ನವರೆಂದರೆ ಆಕೆ ಗೌರವ ಕೊಡುತ್ತಾಳೆ ಎಂದು ಪುಸಲಾಯಿಸಿ ನನ್ನನ್ನು ಆಕೆಯ ಬಳಿ ಬಿಟ್ಟಿದ್ದ.

ಹಂಪಿಯ ವಿಜಯನಗರ ಇತಿಹಾಸದ ಬಗ್ಗೆ ನಾನು ಪ್ರಸ್ತಾಪಿಸುತ್ತಿದ್ದಂತೆ ಅದನ್ನು ತಕ್ಷಣವೇ ಕತ್ತರಿಸಿದ ಆಕೆ, “ನಿಮಗೆಲ್ಲಾ ಏನಾಗಿದೆ ನನಗೆ ಅರ್ಥ ಆಗುತ್ತಿಲ್ಲ. ಹಂಪಿ ಒಂದು ಸ್ಮಾರಕಗಳ ಗುಚ್ಛ. ಕಲ್ಲುಬಂಡೆಗಳ ಸಾಲು ಸಾಲು ಗುಡ್ಡಗಳು, ಭೌಗೋಳಿಕ ನಿಸರ್ಗ ಸಹಜ ಸುಂದರ ಪ್ರದೇಶ. ಇದನ್ನು ಹೀಗೆಯೇ ಉಳಿಸಿಕೊಳ್ಳುವುದು ಬಿಟ್ಟು ಪ್ರವಾಸೋದ್ಯಮದ ಹೆಸರಲ್ಲಿ ಹಣ ಮಾಡುವುದಕ್ಕೆ ಇದೆಲ್ಲಾ ಯಾಕೇ ಬೇಕು? ಸೇತುವೆ ಜನರಿಗೆ ಬೇಕು ಎಂದು ನೀವು ಹೇಳುತ್ತೀರಿ? ಪಾಪ ಅವರು ದೋಣಿಯಲ್ಲಿ ಓಡಾಡುತ್ತಿಲ್ಲವೇ? ಪ್ರವಾಸೋದ್ಯಮದ ಹೆಸರಲ್ಲಿ ಇಲ್ಲಿಗೆ ಮಜ ಮಾಡಲು ಬರುವ ಪ್ರವಾಸಿಗರಿಗೆ ಇದೆಲ್ಲಾ ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವನ್ನು ಸಂರಕ್ಷಿಸುವುದೆಂದರೆ ಇದೇ ಏನು? ನಿಮ್ಮ ಸರ್ಕಾರಗಳಿಗೆ ಬುದ್ಧಿ ನೀವೇ ಹೇಳಬೇಕು.” ಒಂದೇ ಉಸಿರಿನಲ್ಲಿ ಆಕೆ ಹೇಳಿ ಸುಮ್ಮನೆ ನಿಂತಳು. ಜಪಾನ್ ದೇಶದವಳಾದ ಆಕೆ ಈಗ ಪ್ಯಾರಿಸ್‌ನಲ್ಲಿದ್ದಾಳೆ. ತೆಳ್ಳಗೆ, ಬೆಳ್ಳಗೆ ಬಳ್ಳಿಯಂತೆ ಇರುವ ಸುಂದರಿಯೊಬ್ಬಳ ದೇಹದಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಆಕೆಯ ಆಲೋಚನಾ ಶಕ್ತಿಗೆ ಬೆರಗಾಗಿ ಬಿಟ್ಟೆ. ಆಕೆಗೆ ನನ್ನ ಸಹಮತ ಇದೆ ಎನ್ನುವುದನ್ನು ಸೂಚಿಸಿ ವಿದಾಯ ಹೇಳಿದಾಗ ವಿಷಾದದ ನಗೆಯಲ್ಲಿಯೇ “ನಿಮ್ಮಂತವರ ಅಗತ್ಯ ಹಂಪಿಗೆ ಇದೆ,” ಎಂದೇ ಹೇಳಿ ಕಣ್ಣು ಮಿಂಚಿಸಿದಳು. ಒಡನೆ ಅಧಿಕಾರ ವರ್ಗ ಕಂಡೊಡನೆ ದುರ್ಗಿಯಂತೆ ಪುನಃ ಕದಲಿ ಮಾತಿನ ಕಾಳಗಕ್ಕೆ ಇಳಿದು ಬಿಟ್ಟಳು.

“ಕಾಲಿದ್ದವರು ಹಂಪಿಯನ್ನು ನೋಡಬೇಕು,” ಎಂದು ಜನಪದರು ಹೇಳುತ್ತಿರುವ ಮಾತು ನನಗೆ ಅರ್ಥವತ್ತಾಗಿ ಕಾಣತೊಡಗಿ, ದುರ್ಗಮ ಹಂಪಿಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು ಎನ್ನುವ ಅನುಭೂತಿಯೊಂದನ್ನು ಜಿಂಕು ತಾನಿಗುಚ್ಛಿ ಮೂಡಿಸಿ ಬಿಟ್ಟಿದ್ದಳು. ಅವುಟುಗಾಲು ಭರಮಪ್ಪ ಅದಕ್ಕೊಂದು ದೇಶಿ ಪರಂಪರೆ ಜೋಡಿಸಿ ಬಿಟ್ಟಿದ್ದ.

ನಂತರ ಹಂಪಿಯ ಕಲ್ಲುಬಂಡೆಗಳ ಬೆಟ್ಟಗಳನ್ನು ಏರುವುದು. ದುರ್ಗಮ ಪ್ರದೇಶಕ್ಕೆ ನುಗ್ಗುವುದು. ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಕಥಾನಕವನ್ನು ತೀರಾ ಆಪ್ತವಾಗಿ ಕೇಳಿಸಿಕೊಳ್ಳುವ ಹೊಸ ಬಗೆಯ ಕಥಾನಕ ನನ್ನದಾಯಿತು.

ಇಂತಹ ಒಂದು ಸಾಹಸವನ್ನು ಸ್ನೇಹಿತ ಬಣಗಾರ್, ಸಿದ್ದಲಿಂಗಪ್ಪ ಇವರ ಜೊತೆ ಕೈಗೊಂಡಿದ್ದಾಗ ದುರ್ಗಮ ಬೆಟ್ಟ ಏರಿ ದಾರಿ ಕಾಣದೇ ಇಳಿಯಲೂ ಬಾರದೆ ಕಂಗಾಲಾಗಿ ಹೇಗೋ ಮಾಡಿ ಸಮತಟ್ಟು ಪ್ರದೇಶ ಕಂಡುಕೊಂಡು ಅಲ್ಲಿಂದ ಚಾರಣ ಮುಂದುವರೆಸಿ ಇನ್ನೇನೋ ವಾಪಾಸ್ಸಾಗಬೇಕು ಎಂದಾಗ ದಿನಗೂಲಿಗಳು ಹೇಳಿದ್ದ ಭೈರವ ಮೂರ್ತಿ ಕೊನೆಗೂ ಪತ್ತೆಯಾಗಿ ಬಿಟ್ಟಿತು. 12 ಅಡಿಯಷ್ಟು ಎತ್ತರದ ಭವ್ಯ ವೀರಭದ್ರ ದೇವರ ಮೂರ್ತಿ ಅಂತೂ ಕೊನೆಗೆ ಬಂದಿರಲ್ಲ ಎಂದು ನಮ್ಮನ್ನು ನೋಡಿ ನಕ್ಕಂತಾಯಿತು. ಪಕ್ಕಾ ನಾಸ್ತಿಕನಾದ ನನಗೆ ಎಂಥದ್ದೋ ಧನ್ಯತಾ ಭಾವ ಆವರಿಸಿ, ಏನೋ ಕಂಡುಕೊಂಡ ಏನೆಲ್ಲಾ ಭಾವನೆಗಳು ನನ್ನ ಬೇಸರ, ಆಯಾಸವನ್ನು ದೂರ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಬಿಟ್ಟವು. ಇದು ಸ್ನೇಹಿತರ ಅನುಭವವೂ ಆಗಿತ್ತು. ಅಲ್ಲಿಂದ ಹೊರ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಗುಡ್ಡ ಇಳಿಯುವಾಗ ದಾರಿ ಸುಗಮವಾಗಿತ್ತು. ಮನಸ್ಸು ನಿರಾಳವಾಗಿತ್ತು. ಗುಡ್ಡದ ಬದಿಯಲ್ಲಿ ನೀರು ಹಾಗೂ ಬಿಸ್ಕಿಟ್ ಹಿಡಿದು ನಮಗಾಗಿ ಕಾಯುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ದಿನಗೂಲಿಗಳು ನಮ್ಮ ಪುರಾತನರಾಗಿ ಕಾಣಿಸಿಕೊಂಡು ಬಾಯಾರಿದ್ದ ನಮಗೆ ಅಮೃತವನ್ನು ಧಾರೆ ಎರೆದು ಮತ್ತೊಂದು ಧನ್ಯತಾಭಾವ ಮೂಡಿಸಿಬಿಟ್ಟು ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸೇತುವೆ ಮುಖ್ಯ ಎಂದೇ ಕ್ರಿಯೆ ಮೂಲಕ ತೋರಿಸಿಬಿಟ್ಟರು. “ಇವತ್ತಿನ ಸಂದರ್ಭದಲ್ಲಿ ನಮಗೆ ಯಾವ ಸೇತುವೆ ಬೇಕು? ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ,” ಎನಿಸಿಬಿಟ್ಟಿತು.

(ಚಿತ್ರಗಳು: ಲೇಖಕರದು)

Leave a Reply

Your email address will not be published. Required fields are marked *