Daily Archives: October 16, 2011

ಜೀವನದಿಗಳ ಸಾವಿನ ಕಥನ – 7

ಡಾ.ಎನ್.ಜಗದೀಶ್ ಕೊಪ್ಪ

ಇದು ಗುಜರಾತ್‌ನ ನರ್ಮದಾ ಸರೋವರ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸ್ಥಳಾಂತರಗೊಂಡ ಸ್ಥಳೀಯ ನಿವಾಸಿಗಳ ನೋವಿನ ಕಥನ.

“ಅಣೆಕಟ್ಟು ನಿರ್ಮಾಣಕ್ಕಾಗಿ ಸರಕಾರ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿತು. ನಾವು ಬದುಕಿ ಬಾಳಿದ್ದ ಪವರ್ಟ ಎಂಬ ಗ್ರಾಮದಿಂದ ನೂರಾರು ಕಿ.ಮೀ. ದೂರದ ಮಣಿಬೇಲಿ ಎಂಬ ಪ್ರದೆಶಕ್ಕೆ ನಮ್ಮ ಕುಟುಂಬಗಳನ್ನು ಸ್ಥಳಾಂತರಿಸಿದೆ. ನದಿ, ಅರಣ್ಯಗಳಿಂದ ಸುತ್ತುವರೆದಿದ್ದ ನಮ್ಮ ಗ್ರಾಮಕ್ಕೆ ತೀರ ವಿರುದ್ಧವಾದ ಪ್ರಾದೇಶಿಕ ಲಕ್ಷಣಗಳುಳ್ಳ ಅಪರಿಚಿತ ಗುಡ್ಡ ಗಾಡು ಪ್ರದೇಶ ಈ ಮಣಿಬೇಲಿ. ನಮ್ಮ ಮಕ್ಕಳು ನದಿಯಲ್ಲಿ ಈಜಾಡಿ, ದನ ಕರುಗಳನ್ನು ಮೇಯಿಸಿಕೊಂಡು, ಅರಣ್ಯದಿಂದ ಉರುವಲು ಕಟ್ಟಿಗೆಗಳನ್ನು ತರುತ್ತಿದ್ದರು. ನಾವಿದ್ದ ಪವರ್ಟ ಗ್ರಾಮದ ಭೂಮಿ ಫಲವತ್ತಾಗಿತ್ತು. ಆ ಭೂಮಿ ಯಾವುದೇ ಗೊಬ್ಬರ ಬೇಡುತ್ತಿರಲಿಲ್ಲ.

“ಈಗ ಇಲ್ಲಿ ಈ ಹೊಸ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹಿಡಿದು ದನಕರುಗಳಿಗೂ ಸಹ ನಾವು ಕೊಳವೆ ಬಾವಿಯನ್ನು ಆಶ್ರಯಿಸಬೇಕಾಗಿದೆ.

“ನಾವಿದ್ದ ಗ್ರಾಮದಲ್ಲಿ ದೊರೆಯುತ್ತಿದ್ದ ಬಿದಿರು, ನಾರು, ಗಿಡ ಮೂಲಿಕೆ ಸಸ್ಯಗಳು, ಕಾಡು ಪ್ರಾಣಿಗಳು ನಮ್ಮ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಈಗ ಈ ಅಪರಿಚಿತ ಸ್ಥಳದಲ್ಲಿ ಎಲ್ಲದಕ್ಕೂ ಹಣ ತೆರಬೇಕಾಗಿದೆ. ಮೊದಲೇ ಅನಕ್ಷರಸ್ಥ, ಬಡವರಾದ ನಾವು ಹಣ ಎಲ್ಲಿಂದ ತರಬೇಕು? ಇಲ್ಲಿಗೆ ಬಂದ ಮೊದಲ ವರ್ಷದಲ್ಲೇ 38 ಮಕ್ಕಳು ಸಾವನ್ನಪ್ಪಿದವು. ಹತ್ತಿರದ ಪಟ್ಟಣಕ್ಕೆ ಹೋಗಬೇಕಾದರೆ ಬಸ್ ಹಿಡಿದು ಹೋಗಬೇಕು. ಪುನರ್ವಸತಿ ಪ್ರದೇಶದಲ್ಲಿ ನಮಗೆ ನೀಡಲಾಗುತ್ತಿದೆ ಎಂದು ಹೇಳಿದ್ದ ಭೂಮಿ, ನಿವೇಶನ, ರಸ್ತೆ, ನೀರು, ವಿದ್ಯುತ್ ಇವಲ್ಲಾ ಕನಸಿನ ಮತಾಗಿದೆ. ಸರಕಾರವನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿರುವ ನಾವು ಒಂದು ರೀತಿಯ ಬಯಲು ಬಂಧೀಖಾನೆಯ ಖೈದಿಗಳು.”

ಇದು 1992 ರಲ್ಲಿ ಪುನರ್ವಸತಿ ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಗ್ರಾಮಸ್ಥರು ಹೇಳಿಕೊಂಡ ನೋವಿನ ಕತೆ. ಇಂತಹ ದುರಂತ ಕೇವಲ ಭಾರತಕ್ಕೆ ಅಥವಾ ಗುಜರಾತ್‌ಗೆ ಸೀಮಿತವಾಗಿಲ್ಲ. ಇದು ಜಗತ್ತಿನೆಲ್ಲೆಡೆ ಅಣೆಕಟ್ಟು ನಿರ್ಮಾಣದ ನೆಪದಲ್ಲಿ ಅತಂತ್ರರಾದವರ ಆಕ್ರಂದನ.

ಕಳೆದ 70 ವರ್ಷಗಳ ಅವಧಿಯಲ್ಲಿ ಈ ರೀತಿ ನಿರಾಶ್ರಿತರಾದವರಲ್ಲಿ ಬಹುತೇಕ ಮಂದಿ ಅರಣ್ಯವಾಸಿಗಳು ಕೃಷಿಕಾರ್ಮಿಕರು ಮತ್ತು ಬಡ ಗ್ರಾಮಸ್ಥರು. ಯಾವುದೇ ರಾಜಕೀಯ ಇಲ್ಲವೆ ಹೋರಾಟದ ಬಲವಿಲ್ಲದವರು.

ಮೇಲ್ನೋಟಕ್ಕೆ ನಮಗೆ ಕಾಣಸಿಗುವವರು ಇಂತಹವರು ಮಾತ್ರ. ಪರೋಕ್ಷವಾಗಿ, ಅಣೆಕಟ್ಟು ನಿರ್ಮಾಣವಾದ ನಂತರ ಸಿಬ್ಬಂದಿ ವಸತಿಗಾಗಿ ನಿರ್ಮಿಸಿದ ಪಟ್ಟಣಕ್ಕೆ, ರಸ್ತೆಗೆ, ವಿದ್ಯುತ್ ಕಂಬ ಮತ್ತು ವಿದ್ಯುತ್ ಸರಬರಾಜು ಮುಂತಾದ ವ್ಯವಸ್ಥೆಗಳಿಗೆ ಭೂಮಿ ಕಳೆದುಕೊಂಡ ನತದೃಷ್ಟರು ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದವರ ಪಟ್ಟಿಯಲ್ಲಿ ಬರುವುದಿಲ್ಲ. ಇವರೆಲ್ಲ ಈಗ ನಗರದಿಂದ ನಗರಕ್ಕೆ ಚಲಿಸುವ ವಲಸೆ ಕಾರ್ಮಿಕರಾಗಿ ಇಲ್ಲವೇ ಕೊಳೆಗೇರಿಗಳ ನಿವಾಸಿಗಳಾಗಿ ಬದುಕು ದೂಡುತ್ತಿದ್ದಾರೆ. ನಿಸರ್ಗದ ಕೊಡುಗೆಗಳಾದ ನೀರು, ನದಿಯಲ್ಲಿ ದೊರೆಯುವ ಮೀನು, ತಮ್ಮ ದನ ಕರುಗಳಿಗೆ ದೊರೆಯುತ್ತಿದ್ದ ಹಸಿರು ಮೇವು, ಕಾಡಿನಲ್ಲ ಸಿಗುತ್ತಿದ್ದ ಹಲವು ಬಗೆಯ ಹಣ್ಣುಗಳಿಂದ ವಂಚಿತರಾದ ಇವರ ಬದುಕಿನ ನೋವು, ಕಣ್ಣೀರು ಆಧುನಿಕ ಯುಗದ ಅಬ್ಬರದ ನಡುವೆ ನಿಶ್ಯಬ್ಧವಾಗಿದೆ.

ಈವರೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾಗಿರುವ ಕುಟುಂಬಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ ಖಚಿತ ಮಾಹಿತಿಯನ್ನು ಯಾವುದೇ ಸರಕಾರಗಳು ಬಹಿರಂಗಗೊಳಿಸಿಲ್ಲ.  ಇವರು ನೀಡುವ ಸಂಖ್ಯೆಗೂ, ನಿಜವಾಗಿ ನಿರ್ವಸತಿಗರಾದವರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಭಾರತ ಮತ್ತು ಚೀನಾ ದೇಶಗಳಲ್ಲಿ ಅತಂತ್ರರಾದಷ್ಟು ಜನ ಬೇರಾವ ದೇಶಗಳಲ್ಲೂ ಆಗಿಲ್ಲ. ದೆಹಲಿ ಮೂಲದ ಸಾಮಾಜಿಕ ಅಧ್ಯಯನ ಸಂಸ್ಥೆಯ ಸಮೀಕ್ಷೆ ಪ್ರಕಾರ 1947 ರಿಂದ 2000 ಇಸವಿಯವರೆಗೆ ಭಾರತದಲ್ಲಿ ಒಂದೂವರೆ ಕೋಟಿ ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದೀಚೆಗೆ ಅಂದಾಜು 50 ಲಕ್ಷ ಜನತೆ ನಿರಾಶ್ರಿತರಾಗಿದ್ದಾರೆ. ವಿಶ್ವಬ್ಯಾಂಕ್‌ಗೆ ಚೀನಾ ಸರಕಾರ ನೀಡಿದ ಮಾಹಿತಿಯಂತೆ 1950 ರಿಂದ 1989 ರವರೆಗೆ 1 ಕೋಟಿ 20 ಲಕ್ಷ ಜನರು ಚೀನಾದಲ್ಲಿ ಅತಂತ್ರರಾಗಿದ್ದಾರೆ ಎಂದು ತಿಳಿಸಿದೆ. ಆದರೆ ಚೀನಾದಲ್ಲಿ ಈ ಕುರಿತಂತೆ ಹಲವು ದಶಕಗಳ ಕಾಲ ಅಧ್ಯಯನ ನಡೆಸಿರುವ ಸಮಾಜ ಶಾಸ್ತ್ರಜ್ಞ ಡೈಕ್ವಿಂಗ್, 4 ರಿಂದ 6 ಕೋಟಿ ಜನತೆ ಚೀನಾದಲ್ಲಿ ಅಣೆಕಟ್ಟು ನಿರ್ಮಾಣದಿಂದ ಅತಂತ್ರರಾಗಿದ್ದಾರೆ ಎಂದು ದೃಢಪಡಿಸಿದ್ದಾನೆ.

ಸಾಮಾನ್ಯವಾಗಿ ಅಣೆಕಟ್ಟು ನಿರ್ಮಾಣವಾಗುವ ಅರಣ್ಯ ಅಥವಾ ನದಿಯ ಇಕ್ಕೆಲಗಳ ಸರಕಾರಿ ಭೂಮಿಯಲ್ಲಿ ವಾಸಿಸುವ ಅಥವಾ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಬಡವರಾಗಿದ್ದು, ಅವರ ಬಳಿ ಈ ಭೂಮಿಯ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿರುವುದಿಲ್ಲ. ಹಾಗಾಗಿ ಇವರು ಯಾವುದೇ ಪರಿಹಾರದಿಂದ ವಂಚಿತರಾಗಿದ್ದು, ಸರಕಾರದ ನಿರ್ವಸತಿಗರ ಪಟ್ಟಿಯಲ್ಲಿ ಇವರು ಸೇರುವುದಿಲ್ಲ. ಇಂತಹ ನತದೃಷ್ಟ ಕುಟುಂಬಗಳ ಅಂಕಿ-ಅಂಶ ಈವರೆಗೆ ನಿಖರವಾಗಿ ಎಲ್ಲಿಯೂ ಸಿಗದ ಕಾರಣ ಖಚಿತ ಅಂಕಿ-ಅಂಶಗಳಿಗೆ ತೊಡಕಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಗುಜರಾತ್‌ನ ನರ್ಮದಾ ಅಣೆಕಟ್ಟಿನ ಯೋಜನೆ.

1961 ರಲ್ಲಿ ಅಣೆಕಟ್ಟು ಕಾಮಗಾರಿ ಸಿಬ್ಬಂದಿ ವಸತಿ ನಿರ್ಮಾಣಕ್ಕಾಗಿ ಜಾಗ ತೆರವುಗೊಳಿಸಿದ 800 ಕುಟುಂಬಗಳಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಅವರು ವಾಸಿಸುತ್ತಿದ್ದ ನಿವೇಶನ-ಮನೆಗೆ ಹಕ್ಕು ಪತ್ರ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಅಭಯಾರಣ್ಯದಲ್ಲಿ ಕಾಡಿನ ಕಿರು ಉತ್ಪನ್ನಗಳನ್ನೇ ನಂಬಿ ಬದುಕಿದ್ದ 10 ಸಾವಿರ ಆದಿವಾಸಿಗಳನ್ನು ಯಾವುದೇ ಪರಿಹಾರ ಅಥವಾ ನಿವೇಶನ ನೀಡದೆ ಒಕ್ಕಲೆಬ್ಬಿಸಲಾಯಿತು.

1 ಲಕ್ಷದ 40 ಸಾವಿರ ರೈತರು ನರ್ಮದಾ ಅಣೆಕಟ್ಟು ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದಾರೆ. ಇವರಲ್ಲಿ 25 ಸಾವಿರ ರೈತರ ಜಮೀನು 5 ಎಕರೆಗಿಂತ ಕಡಿಮೆ. ಇವರನ್ನು ನಂಬಿ ಬದುಕಿದ್ದ ಕೃಷಿ ಕಾರ್ಮಿಕರು ನಗರಗಳತ್ತ ವಲಸೆ ಹೋದರು. ಕೃಷಿಭೂಮಿಯಲ್ಲದೆ ಅನೇಕ ನಗರ-ಪಟ್ಟಣಗಳು, ಹಳ್ಳಿಗಳೂ ನರ್ಮದಾ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ನಗರ- ಪಟ್ಟಣಗಳಲ್ಲಿ ಬದುಕಿದ್ದ ಅನೇಕ ವ್ಯಾಪಾರಿಗಳು, ಕಾರ್ಮಿಕರು ಯಾವುದೇ ಪರಿಹಾರಕ್ಕೆ ಅನರ್ಹರಾಗಿದ್ದರು. ಜಲಾಶಯ ನಿರ್ಮಾಣವಾದ ನಂತರ ನದಿ ನೀರು ಸಮುದ್ರ ಸೇರುವವರೆಗಿನ ನದಿ ಇಕ್ಕೆಲಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವಿಸಿದ್ದ ಮೀನುಗಾರರ ಕುಟುಂಬಗಳೂ ಸಹ ಈ ವೃತ್ತಿಯಿಂದ ವಂಚಿತರಾಗಿ, ಅನಿವಾರ್ಯವಾಗಿ ಬೇರೆ ವೃತ್ತಿಯನ್ನು ಆಯ್ಕೆ ಮಾಡಕೊಳ್ಳಬೇಕಾಯಿತು. 1985 ರಲ್ಲಿ ವಿಶ್ವಬ್ಯಾಂಕ್ ನರ್ಮದಾ ಅಣೆಕಟ್ಟು ಯೋಜನೆಗೆ ಸಾಲ ನೀಡುವ ಸಂದರ್ಭದಲ್ಲಿ, ಯೋಜನೆಯಿಂದ ನಿರಾಶ್ರಿತವಾಗುವ ಕುಟುಂಬಗಳ ಸಂಖ್ಯೆ 6,603 ಎಂದು ತಿಳಿಸಿತ್ತು. 1996 ರಲ್ಲಿ ಇದೇ ವಿಶ್ವಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಈ ಯೋಜನೆಯಿಂದ 41,500 ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡಿವೆ ಎಂದು ತಿಳಿಸಿತು.

ಇವೆಲ್ಲವೂ ಮೇಲ್ನೋಟಕ್ಕೆ ತಕ್ಷಣದ ಪರಿಣಾಮವೆನಿಸಿದರೂ, ದೀರ್ಘಾವಧಿ ಕಾಲದಲ್ಲಾಗುವ ಸಾಮಾಜಿಕ ಪರಿಣಾಮಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ದೀರ್ಘಕಾಲಿಕ ಸಾಮಾಜಿಕ ಪರಿಣಾಮಗಳಿಂದ ಬಳಲುವವರು ಜಲಾಶಯ ಅಥವಾ ಅಣೆಕಟ್ಟುಗಳ ಕೆಳಗಿನ ನದಿಪಾತ್ರದ ಜನರು.

ಆಫ್ರಿಕಾ ಖಂಡದ ನೈಜೀರಿಯಾದಲ್ಲಿ ನದಿಯ ಪ್ರವಾಹವನ್ನು ತಡೆಗಟ್ಟುವ ಉದ್ದೇಶದಿಂದ ನೈಜಿರ್ ನದಿಗೆ ಕಟ್ಟಲಾದ ಕ್ವೆಂಜೆ (kainji) ಅಣೆಕಟ್ಟಿನಿಂದ, ನದಿಯ ನೀರಿನ ಹರಿಯುವಿಕೆ ಸ್ಥಗಿತಗೊಂಡ ಪರಿಣಾಮ 50 ಸಾವಿರ ಮಂದಿ ಅನಾಥರಾಗುವ ಸ್ಥಿತಿ ಬಂತು. ನದಿಯ ಇಕ್ಕೆಲಗಳಲ್ಲಿ ವ್ಯವಸಾಯ, ಜಾನುವಾರು ಸಾಕಾಣಿಕೆ, ಮೀನುಗಾರಿಕೆ ವೃತ್ತಿಯಿಂದ ಬದುಕಿದ್ದ ಈ ಜನತೆ ತಮ್ಮ ಮೂಲ ಕಸುಬುಗಳಿಂದ ವಂಚಿತರಾದರು. ಈ ಪ್ರದೇಶವೊಂದರಲ್ಲೇ ವರ್ಷವೊಂದಕ್ಕೆ 1 ಲಕ್ಷ ಟನ್ ಕುರಿ, ಮೇಕೆ, ದನದ ಮಾಂಸ ಯೂರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. 1968 ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ಈ ಪ್ರಮಾಣ ಕೇವಲ 30 ಸಾವಿರ ಟನ್‌ಗೆ ಕುಸಿಯಿತು.

ಇದೇ ನೈಜೀರಿಯಾದಲ್ಲಿ ಸೊಕೊಟೊ ನದಿಗೆ ಕಟ್ಟಲಾದ ಬಕಲೋರಿ ಅಣೆಕಟ್ಟಿನಿಂದಾಗಿ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳ ಚಟುವಟಿಕೆ ಸ್ತಬ್ಧಗೊಂಡವು.

ಇದಕ್ಕಿಂತ ಭಿನ್ನವಾದ ಸಾಮಾಜಿಕ ಹಾಗೂ ನೈಸರ್ಗಿಕ ದುರಂತವೆಂದರೆ ಬ್ರೆಜಿಲ್ ದೇಶದ್ದು. ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಿಸಲಾದ ಸೊಬ್ರಾಡಿನೊ ಅಣೆಕಟ್ಟಿನ ಹಿನ್ನೀರಿನಿಂದ 70 ಸಾವಿರ ಮಂದಿ ಸ್ಥಳಾಂತರಗೊಂಡರೆ, 25 ಸಾವಿರ ಹೆಕ್ಟೇರ್ ಕೃಷಿಭೂಮಿ ಮುಳುಗಡೆಯಾಯಿತು.

ಸಾವೊ ಪ್ರಾನ್ಸಿಸ್ಕೊ ನದಿಗೆ ಕಟ್ಟಿದ ಅಣೆಕಟ್ಟಿನ ಕೆಳಗೆ 800 ಕಿ.ಮೀ. ಉದ್ದದ ನದಿ ಪಾತ್ರದಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಬೆಳೆಗೆ ಸಮರ್ಪಕ ನೀರಿಲ್ಲದೆ, ಭತ್ತದ ಕೃಷಿಯನ್ನೇ ರೈತರು ಕೈ ಬಿಡಬೇಕಾಯಿತು. ಇದರಿಂದಾಗಿ 50 ಸಾವಿರ ಮಂದಿ ಕೃಷಿಕರು, ಮತ್ತು ಕೃಷಿ ಕೂಲಿ ಕಾರ್ಮಿಕರು ಅತಂತ್ರರಾದರು. ಇವರಿಗೆ ಬೇರೆಡೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ನೀಡಲಾಗುವುದೆಂದು ವಿಶ್ವಬ್ಯಾಂಕ್ ಮತ್ತು ಬ್ರೆಜಿಲ್ ಸರಕಾರ ಜಂಟಿಯಾಗಿ ನೀಡಿದ್ದ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿಯಿತು.

ಅಣೆಕಟ್ಟು ನಿರ್ಮಾಣವಾಗಿ, ಜಲಾಶಯದಿಂದ ಹೊರಬಿದ್ದ ನೀರಿನ ಪರಿಣಾಮ 6 ವರ್ಷಗಳ ನಂತರ ಕಾಣಿಸಿಕೊಂಡು, 40 ಸಾವಿರ ಮಂದಿ ವಿವಿಧ ರೋಗಗಳಿಂದ ಬಳಲಿದರು. ಈ ನೀರನ್ನು ಕುಡಿದ ಬಹುತೇಕ ಮಂದಿ ಹೊಟ್ಟೆನೋವಿನಿಂದ, ಚರ್ಮದ ಖಾಯಿಲೆಯಿಂದ ನರಳಿದರೆ, ಸಾವಿರಾರು ಮಕ್ಕಳು ನಿರಂತರ ಬೇಧಿಯಿಂದ ನಿತ್ರಾಣರಾಗಿ ಅಸುನೀಗಿದರು. ಇವೆಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಯರ ಗುಪ್ತಾಂಗಗಳಲ್ಲಿ ಉಂಟಾದ ತುರಿಕೆ, ಗಾಯದಿಂದ ರಕ್ತ, ಕೀವು ಸೋರುವಂತಾಯಿತು. ಈ ಜನತೆಯ ಮುಖ್ಯ ಆಹಾರವಾಗಿದ್ದ ಮೀನು, ಸೀಗಡಿಗಳಿಂದ ಸಿಗುತ್ತಿದ್ದ ಪ್ರೋಟೀನ್‌ನಿಂದ ಮತ್ತು ವಿಟಮಿನ್‌ಗಳಿಂದ  ಸಶಕ್ತರಾಗಿದ್ದ ಇವರು, ತಾವು ಯಾವ ಖಾಯಿಲೆಯಿಂದ, ಯಾವ ಕಾರಣಕ್ಕಾಗಿ ಬಳಲುತ್ತಿದ್ದೇವೆ ಎಂಬುದನ್ನು ಅರಿಯಲಾಗದೆ ಅಸುನೀಗಿದರು.

(ಮುಂದುವರಿಯುವುದು)