ಮಂಗಳೂರು ದಸರೆಯ ನೆಪದಲ್ಲಿ

-ಚಿದಂಬರ ಬೈಕಂಪಾಡಿ

‘ಮೈಸೂರು ದಸರಾ ಎಷ್ಟೊಂದು ಸುಂದರಾ…!’ ಹೀಗೆಂದು ಬಾಲ್ಯದಿಂದಲೂ ಕೇಳುತ್ತಲೇ ಬೆಳೆದವನು. ಬುದ್ಧಿ ಬಲಿತಹಾಗೆ ಊರುಕೇರಿಗಳನ್ನು ಸುತ್ತಾಡಿದ ಮೇಲೆ ಮೈಸೂರು ದಸರಾವನ್ನೇ ಹೋಲುವ ನಾಡಹಬ್ಬ ದಸರಾ ಮೆರವಣಿಗೆ, ಶಾರದಾ ಮಹೋತ್ಸವ, ನವದುರ್ಗೆಯರ ಆರಾಧನೆ ಹಲವುಕಡೆಗಳಲ್ಲಿ ಹಲವು ವಿಧಗಳಲ್ಲಿ ನಡೆಯುವುದನ್ನು ಕಂಡಿದ್ದೇನೆ.  ಮೈಸೂರು ದಸರಾಕ್ಕೆ ಮೈಸೂರು ದಸರೆಯೇ ಸಾಟಿ, ಇದರಲ್ಲಿ ಎರಡುಮಾತಿಲ್ಲ.

ಮೈಸೂರು ದಸರಾ ರಾಜರುಗಳ ಬಳುವಳಿಯಾಗಿ ಇದೀಗ ಸರ್ಕಾರದ ಸಂಪೂರ್ಣ ವೆಚ್ಚದಲ್ಲಿ ನಡೆಯುತ್ತಿದೆ. ಮೈಸೂರು ದಸರಾಕ್ಕೆ ಅದೆಷ್ಟುಕೋಟಿ ಸರ್ಕಾರದ ಬೊಕ್ಕಸದ ಹಣ ವಿನಿಯೋಗವಾಗಿದೆ ಎನ್ನುವುದನ್ನು ಹಣಬಿಡುಗಡೆ ಮಾಡಿದವರು, ಖರ್ಚುಮಾಡಿದವರು ಮಾತ್ರ ಬಲ್ಲರು. ನನಗೆ ಗೊತ್ತಿರುವ ಅಲ್ಪ ಮಾಹಿತಿಯೆಂದರೆ ಮೈಸೂರು ದಸರಾದಲ್ಲಿ ಹಣ ಮಾಡಿಕೊಳ್ಳದವನು ಹುಂಬನಿರಬೇಕು ಅಥವಾ ನಾಲಾಯಕ್ ಇರಬೇಕು. ಇಲ್ಲದಿದ್ದರೆ ವರುಷಕ್ಕೊಮ್ಮೆ ಮಾತ್ರ ಬರುವ ಮೈಸೂರು ದಸರಾ ಮೈಸೂರಿನ ಕೆಲವು ಸರ್ಕಾರಿ ಅಧಿಕಾರಿಗಳಿಂದ ಹಿಡಿದು (ದಸರಾಕ್ಕೆ ಸಂಬಂಧಿಸಿದ ಆಯಕಟ್ಟಿನ ಹುದ್ದೆಗಳಲ್ಲಿರುವವರು) ಟ್ಯಾಬ್ಲೋ ನಿರ್ಮಿಸುವ ಕಾರ್ಮಿಕರು, ಜಾನಪದ ಕಲಾತಂಡಗಳಲ್ಲಿ ಭಾಗವಹಿಸುವ ಕಲಾವಿದರತನಕ ಲಕ್ಷೀ ಬೇಡವೆಂದರೂ ಹುಡುಕಿಕೊಂಡು ಬರುತ್ತಾಳೆ. ಮೈಸೂರು ದಸರೆಯಲ್ಲಿ ವೋಚರ್ ಮಾಡುವ ಕಲಾನಿಪುಣರಿಗೇನು ಕೊರತೆಯಿಲ್ಲ. ಈ ಕಾರಣದಿಂದಲೇ ಬಡಪಾಯಿ ಮಾವುತರೂ ಕೂಡಾ ಮುಷ್ಕರ ಮಾಡುವ ಹಂತ ತಲಪುತ್ತಾರೆ.

ಸರ್ಕಾರಿ ಉತ್ಸವಗಳು ಅಧಿಕಾರಿಗಳ ಹಣ ಮಾಡುವ ದಂಧೆಗೆ ಹೇಗೆ ಸಹಕಾರಿಯಾಗುತ್ತವೆ ಎನ್ನುವುದನ್ನು ತಿಳಿಯಬೇಕಾದರೆ ಮಂಗಳೂರಲ್ಲಿ ಜರಗುವ ಕರಾವಳಿ ಉತ್ಸವ, ಬೀಚ್ ಉತ್ಸವ, ಹಂಪಿ ಉತ್ಸವಗಳ ಲೆಕ್ಕಾಚಾರಗಳನ್ನು ಲೋಕಾಯುಕ್ತರು ತನಿಖೆ ಮಾಡಬೇಕು. ‘ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ’ ಎನ್ನುವ ಮಾತು ಇಂಥ ಸರ್ಕಾರಿ ಉತ್ಸವಗಳಿಗೆ ಒಪ್ಪುತ್ತದೆ. ಶಾಮಿಯಾನದಿಂದ ಹಿಡಿದು ಕಲಾವಿದರನ್ನು ಗೊತ್ತುಪಡಿಸುವ ತನಕ ಪರ್ಸೆಂಟೇಜ್ ವ್ಯವಹಾರ ಗುಟ್ಟೇನೂ ಅಲ್ಲ. ಇದರ ರುಚಿ ಉಂಡಿರುವ ಮಂದಿ ಇಂಥ ಉತ್ಸವಗಳು ವರ್ಷದಲ್ಲಿ ಎರಡು ಸಲ ಬರಬಾರದೇ ಅಂದೊಕೊಂಡರೆ ಅಚ್ಚರಿಯೇನೂ ಇಲ್ಲ.

ಆದರೆ ಸರ್ಕಾರದ ಬಿಡಿಗಾಸೂ ಇಲ್ಲದೆ ನಡೆಯುವ ಉತ್ಸವಗಳು, ಮಂಗಳೂರು ದಸರಾದಂಥ ಜನರ ಸಹಭಾಗಿತ್ವದ ಉತ್ಸವಗಳು ನಿಜಕ್ಕೂ ಅನುಕರಣೀಯ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಮಂಗಳೂರು ದಸರಾ ವರುಷದಿಂದ ವರುಷಕ್ಕೆ ಕಳೆಕಟ್ಟಿಕೊಳ್ಳುತ್ತಿದೆ. ಹಾಗೆಂದು ಈ ದಸರೆಗೆ ಸರ್ಕಾರದ ಚಿಕ್ಕಾಸೂ ಸಿಗುವುದಿಲ್ಲ. ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಮಂಗಳೂರು ದಸರಾಕ್ಕೆ ಪ್ರತೀ ವರ್ಷ ನಿರ್ಧಿಷ್ಟ ಅನುದಾನ ಸಿಗುವಂತೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಧರಂಸಿಂಗ್ ಸಾವರಿಸ್ಕೊಂಡು ಬೇಡಿಕೆ ಓದುವಷ್ಟರಲ್ಲಿ ಅಧಿಕಾರ ಕಳೆದುಕೊಂಡರು. ಬಹುಷ: ಕುದ್ರೋಳಿ ಗೋಕರ್ಣನಾಥನಿಗೂ ಸರ್ಕಾರದ ಅನುದಾನ ಇಷ್ಟವಿಲ್ಲವೇನೋ ಅಂದುಕೊಳ್ಳೋಣ ಬಿಡಿ.

ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರನ್ನು ರಾಜಕೀಯವಾಗಿ ಒಪ್ಪುವುದು ಬಿಡುವುದು ಪ್ರತಿಯೊಬ್ಬರಿಗಿರುವ ವೈಯಕ್ತಿಕ ಸ್ವಾತಂತ್ರ್ಯ. ಅವರನ್ನು ಟೀಕೆ ಮಾಡುವವರು ಮೌನಿಯಾಗುವಂತೆ ಮಾಡುವ ಅತ್ಯಂತ ಭಿನ್ನಕಾರ್ಯಕ್ರಮಗಳನ್ನು ಪೂಜಾರಿ ರೂಪಿಸಿಬಿಡುತ್ತಾರೆ. ಇಂಥ ಆಲೋಚನೆಗಳಿಗೆ ಯಾರುಹೊಣೆಯೋ ಗೊತ್ತಿಲ್ಲ, ಆದರ ಗುಟ್ಟು ಬಿಡುವುದಿಲ್ಲ, ಗುಟ್ಟುತಿಳಿಯುವ ಅಗತ್ಯವೂ ಇಲ್ಲ ಅನ್ನಿ. ಆದರೆ ಅವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಂದ ಯಾರಿಗೆಷ್ಟು ಪ್ರಯೋಜನವೆಂದು ಪ್ರಶ್ನೆ ಮಾಡುವವರೂ ಇದ್ದಾರೆ. ಹೀಗೆ ಪ್ರಶ್ನೆ ಮಾಡುವುದೂ ಕೂಡಾ ಅವರವರ ಇಚ್ಛೆಗೆ ಬಿಡಬಹುದಾದ ಸಂಗತಿ.

ಮಂಗಳೂರು ಕುದ್ರೋಳಿ ಕ್ಷೇತ್ರವನ್ನು ನವೀಕರಣ ಮಾಡುವ ನೇತೃತ್ವವನ್ನು ವಹಿಸಿಕೊಂಡ ಜನಾರ್ಧನ ಪೂಜಾರಿಯವರು ಸಮರ್ಥವಾಗಿ ನಿಭಾಯಿಸಿದರು ಎನ್ನುವುದು ಜಗಜ್ಜಾಹೀರು. ಮಂಗಳೂರು ದಸರಾ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸಿದ್ದೂ ಕೂಡಾ ಜನಾರ್ಧನ ಪೂಜಾರಿಯವರ ವೈಯಕ್ತಿಕ ಆಲೋಚನೆ. ಆಡಂಬರ, ದುಂದುವೆಚ್ಚವೆಂದೆಲ್ಲ ಟೀಕೆಗಳು ಕೇಳಿಬಂದಿದ್ದವು. ಆದರೆ ಮೈಸೂರಲ್ಲಿ ಸರ್ಕಾರದ ಬೊಕ್ಕಸದ ಕೋಟಿಕೋಟಿ ರೂಪಾಯಿ ಸೋರಿಕೆಯಾಗುವುದನ್ನು ಟೀಕಿಸಬೇಕು ಅಥವಾ ಪ್ರಶ್ನಿಸಬೇಕು ಎನ್ನುವ ಕಲ್ಪನೆಯೂ ಟೀಕೆಮಾಡುವವರಿಗೆ ಹೊಳೆಯದಿರುವುದು ನಿಜಕ್ಕೂ ಸೋಜಿಗವೇ ಸರಿ.

ಹಣವಂತರಿಂದ ದೇಣಿಗೆ ಸಂಗ್ರಹಿಸಿ ಪೂಜಾರಿಯವರು ನಡೆಸುವ ಮಂಗಳೂರು ದಸರಾದಿಂದ ಯಾರಿಗೆ ಲಾಭ ಅಥವಾ ದಸರಾ ನಡೆಸದಿದ್ದರೆ ಏನಾದೀತು ಎಂದೇನಾದರೂ ಪ್ರಶ್ನಿಸಿದರೆ ಉತ್ತರಕೊಡುವುದು ಮೂರ್ಖತನವಾಗುತ್ತದೆ. ಲಾಭ ಅಥವಾ ನಷ್ಟದ ಪ್ರಶ್ನೆಗಿಂತಲೂ ನಮ್ಮ ಭವಿಷ್ಯದ ಪೀಳಿಗೆಗೆ ನಾಡಹಬ್ಬದ ಕಲ್ಪನೆಯನ್ನು ಕಟ್ಟಿಕೊಡುವುದು ಬಹುಮುಖ್ಯ ಅಂದುಕೊಳ್ಳುತ್ತೇನೆ. ಮೈಸೂರಿನ ಅಂಬಾರಿ, ಜಂಬೂಸವಾರಿ, ಆಗಿನ ಮಹಾರಾಜರುಗಳ ದರ್ಬಾರ್ ವೈಭವವನ್ನು ಈಗಿನ ಪೀಳಿಗೆಗೆ ಚಿತ್ರಗಳಷ್ಟೇ ಹೇಳಬೇಕು. ಆದರೂ ದಸರಾದ ಮೂಲಕ ಆನೆ, ಅಂಬಾರಿ, ಜಂಬೂಸವಾರಿ ನೋಡುವ ಅವಕಾಶವಾಗುತ್ತಿದೆ ಎನ್ನುವುದೇ ಬಹುಮುಖ್ಯ ಲಾಭ. ಹಾಗೆಯೇ ಮಂಗಳೂರು ದಸರಾ ಕೂಡಾ.

ಅಸ್ಪ್ರಶ್ಯತೆ, ಮೇಲು-ಕೀಳು ತಾಂಡವಾಡುತ್ತಿದ್ದ ಮಂಗಳೂರಲ್ಲಿ ಅಂದು ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪಿಸಿದಂಥ ಕುದ್ರೋಳಿ ಕ್ಷೇತ್ರದಲ್ಲಿ ಈಗ ಮಂಗಳೂರು ದಸರಾ ನಡೆಯುತ್ತಿದೆ. ಬದಲಾವಣೆಗಳು ಸಾಕಷ್ಟು ಆಗಿವೆ, ಅಂತೆಯೇ ಜನರೂ ಕೂಡಾ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ. ಮಂಗಳೂರು ದಸರಾ ಮಂಗಳೂರಿಗರ ಮಾತ್ರವಲ್ಲ ಕರಾವಳಿಯ ಜನರ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಕರ್ನಾಟಕ, ಕೇರಳ ರಾಜ್ಯದ ಜನಪದ ತಂಡಗಳು, ಕರಾವಳಿಯ ಸಾಂಪ್ರದಾಯಿಕ ವೇಷ ಭೂಷಣಗಳು, ಹುಲಿವೇಶ ಹೀಗೆ ಕೆಲವೇ ವರ್ಷಗಳಲ್ಲಿ ಮರೆಯಾಗಿಬಿಡುವ ಜನಪದ ವೇಷಗಳು ನವರಾತ್ರಿಯ ಹೆಸರಲ್ಲಿ ಅದರಲ್ಲೂ ಮಂಗಳೂರ ದಸರಾದ ನೆಪದಲ್ಲಿ ಜೀವಂತವಾಗಿವೆ.

ಸಾಮಾಜಿಕ ಸುಧಾರಣೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಈ ಕ್ಷೇತ್ರದಲ್ಲಿ ಈ ವರ್ಷ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಗೌರವದಿಂದ ನಡೆಸಿಕೊಂಡು ಅವರು ಅಮಂಗಳೆಯರಲ್ಲವೆಂದು ಹೇಳಿ ಸೀರೆ, ಕುಂಕುಮ, ಬಳೆ, ಹೂವು ನೀಡಿರುವುದು, ಅವರಿಂದಲೇ ರಥ ಎಳೆಸಿರುವ ಜನಾರ್ಧನ ಪೂಜಾರಿಯವರ ನಡೆ ಚಿಂತನೆಗೆ ಕಾರಣವಾಗಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು ಕಣ್ಣೀರು ಸುರಿಸುತ್ತಾ ರಥ ಎಳೆದಿರುವುದು ನಾಡಿನಲ್ಲಿ ಇಂಥವರ ಬಗ್ಗೆ ಹೊಸ ಚಿಂತನೆಗೆ ಮಂಗಳೂರು ದಸರಾ ನಾಂದಿಯಾಗಿದೆ.

ದಸರಾ ಉತ್ಸವದ ಆಚರಣೆಗಳು ನವದುರ್ಗೆಯರ ಆರಾಧನೆ ಮೂಲಕ ನಾಡಿನ ಹಳ್ಳಿಗಳಲ್ಲಿ ನಡೆಯುತ್ತದೆ. ಆದರೆ ಅವುಗಳಿಗೆ ಪ್ರಚಾರದ ಕೊರತೆ. ಮೈಸೂರು, ಮಡಿಕೇರಿ, ಮಂಗಳೂರು, ಧಾರವಾಡ ಮುಂತಾದ ಕಡೆಗಳಲ್ಲಿ ನಡೆಯುವ ಉತ್ಸವಗಳು ಹೆಚ್ಚು ಜನಾಕರ್ಷಣೆ ಪಡೆದುಕೊಂಡಿವೆ. ಸ್ಥಳೀಯವಾಗಿ ಇಂಥ ಉತ್ಸವಗಳು ನಡೆಯುವುದು ಸಾಂಪ್ರದಾಯಿಕ ವೇಷ ಭೂಷಣಗಳನ್ನು, ಮೂಲಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇವು ಪ್ರಯೋಜನಕಾರಿ.

ಸಂಪತ್ತನ್ನು ಸಂಪಾದಿಸಬಹುದು, ಆದರೆ ಸಂಸ್ಕೃತಿ ನಾಶವಾದರೆ ಅದಕ್ಕೆ ಮರುಹುಟ್ಟುಕೊಡುವುದು ಹೇಳುವಷ್ಟು ಸುಲಭವಲ್ಲ. ಈ ಕಾರಣಕ್ಕಾಗಿಯೇ ದಸರಾದಂಥ ಕಾರ್ಯಕ್ರಮಗಳು ಅನಿವಾರ್ಯ ಮತ್ತು ಔಚಿತ್ಯಪೂರ್ಣ ಭವಿಷ್ಯದ ದೃಷ್ಟಿಯಲ್ಲಿ.
(ಚಿತ್ರಕೃಪೆ: ವಿಕಿಪೀಡಿಯ)

Leave a Reply

Your email address will not be published.