ರಥಯಾತ್ರೆ ಎಂಬ ವೃದ್ಧಾಪ್ಯದ ವ್ಯಸನ

-ಡಾ. ಎನ್.ಜಗದೀಶ್ ಕೊಪ್ಪ

ವ್ಯಯಕ್ತಿಕವಾಗಿ ಹಾಗೂ ತಾತ್ವಿಕವಾಗಿ ನಮ್ಮ ಸಿಟ್ಟು ಮತ್ತು ತಕಾರಾರುಗಳು ಏನೇ ಇರಲಿ ಭಾರತೀಯ ಜನತಾ ಪಾರ್ಟಿ ಎಂಬ ಪಕ್ಷದಲ್ಲಿ ಗೌರವಿಸಬೇಕಾದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು ವಾಜಪೇಯಿ, ಮತ್ತೊಬ್ಬರು ಎಲ್.ಕೆ.ಅಧ್ವಾನಿ. ಈ ಇಬ್ಬರು ಮಹನೀಯರು ತಮ್ಮ ತತ್ವ ಸಿದ್ಧಾಂತಗಳ ಜೊತೆಗೆ, ಸಾರ್ವಜನಿಕ ಬದುಕಿನಲ್ಲಿ ಒಬ್ಬ ರಾಜಕಾರಣಿಗೆ ಇರಬೇಕಾದ ಬದ್ಧತೆ, ಪ್ರಾಮಾಣಿಕತೆ, ಶುದ್ಧ ಚಾರಿತ್ರ್ಯ, ಇವುಗಳನ್ನು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದವರು.

ವಾಜಪೇಯಿ ಈ ದೇಶದ ಪ್ರಧಾನ ಮಂತ್ರಿಯ ಹುದ್ದೆ ಅಲಂಕರಿಸಿ ವೃದ್ಧಾಪ್ಯದ ಕಾರಣಕ್ಕಾಗಿ ರಾಜಕೀಯದಿಂದ ನಿವೃತ್ತಿಗೊಂಡಿದ್ದರೆ, ಕಳೆದ ಒಂದು ದಶಕದಿಂದ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾದ ಅಧ್ವಾನಿಯವರು ಇದೀಗ ತಮ್ಮ ಪಕ್ಷದಲ್ಲಿ ಹುದ್ದೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಬಿ.ಜೆ.ಪಿ. ಪಕ್ಷದ ವರ್ತಮಾನದ ವಾಸ್ತವ.

10 ವರ್ಷದ ಹಿಂದೆ “ಭಾರತ ಬೆಳುಗುತಿದೆ” ಎಂಬ ಘೋಷಣೆ ಇಟ್ಟುಕೊಂಡು ಎಷ್ಟೇ ಪ್ರಚಾರ ಮಾಡಿದರೂ ಎನ್.ಡಿ.ಎ. ಮೈತ್ರಿಕೂಟವನ್ನು ಭಾರತೀಯ ಮತದಾರ ತಿರಸ್ಕರಿಸಿ, “ಅಮ್ ಆದ್ಮಿ” ಎಂಬ ಘೋಷಣೆಗೆ ಒಲಿದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ. ಇದರಿಂದಾಗಿ ಮುಂದಿನ ಪ್ರಧಾನಿ ಎಂದು ಎಲ್ಲೆಡೆ ಪ್ರತಿಬಿಂಬಿಸಿದ್ದ ಅಧ್ವಾನಿ ಕನಸು ನುಚ್ಚು ನೂರಾಯಿತು. ಆದರೆ, ಅವರು ಎದೆಗುಂದಲಿಲ್ಲ. 84ರ ಈ ಇಳಿ ವಯಸ್ಸಿನಲ್ಲೂ ತಮ್ಮ ಆರೋಗ್ಯ ಮತ್ತು ತತ್ವ ಸಿದ್ದಾಂತಗಳನ್ನು ಕಾಪಾಡಿಕೊಂಡು ಬಂದು ಮತ್ತೊಮ್ಮೆ ರಥಯಾತ್ರೆ ಮೂಲಕ ಯುದ್ಧಕ್ಕೆ ಅಣಿಯಾಗಿದ್ದಾರೆ.

ಸೋಜಿಗದ ಸಂಗತಿಯೆಂದರೆ, ಪಕ್ಷಕ್ಕೆ ಮರಳಿರುವ ಉಮಾಭಾರತಿ ಹೊರತಪಡಿಸಿದರೆ, ಯಾವೊಬ್ಬ ರಾಷ್ಟ್ರೀಯ ನಾಯಕರು ಅಧ್ವಾನಿ ನಮ್ಮ ಪಕ್ಷದ ಮುಂದಿನ ಪ್ರಧಾನಿ ಎಂದು ಹೇಳಲು ಸಿದ್ಧರಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ತೆರೆಮರೆಯಲ್ಲಿ ಪ್ರಧಾನಿ ಹುದ್ದೆಗೆ ಪೈಪೋಟಿ ನಡೆಸಿರುವುದು ಅಧ್ವಾನಿಯವರಿಗೆ ನುಂಗಲಾರಾದ ತುತ್ತಾಗಿದೆ. ಯು.ಪಿ.ಎ. ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಎಂದು ಅವರು ಘೋಷಿಸಿಕೊಂಡಿದ್ದರೂ, ಇದು ತಮ್ಮ ಅಸ್ತಿತ್ವಕ್ಕಾಗಿ ಅಧ್ವಾನಿ ನಡೆಸಿರುವ ಹೋರಾಟ ಎಂಬುದನ್ನ ಎಲ್ಲರೂ ಬಲ್ಲರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಬಿ.ಜೆ.ಪಿ ಪಕ್ಷದಿಂದ ಕಿತ್ತುಕೊಂಡಿರುವ ನಮ್ಮ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲಾ  ಮುಖಂಡರ ಬಾಯಿಗೆ ಬೀಗ ಜಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಕರ್ನಾಟಕ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕ ತಲೆತಗ್ಗಿಸುವಂತಹದ್ದು.

ಇವತ್ತಿಗೂ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗಾಲಿ ಜನಾರ್ಧನರೆಡ್ಡಿ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ದು, ಕೃಷ್ಣಯ್ಯ ಶೆಟ್ಟಿ, ಮೊಕದ್ದಮೆ ಎದುರಿಸುತ್ತಿರುವ ಶಾಸಕ ಸಂಪಂಗಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸಲು ಸಿದ್ದವಾಗುತ್ತಿರುವ ಹಾಲಪ್ಪ, ಇವರನ್ನು ನೈತಿಕತೆಯ ಆಧಾರದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗದಿರುವ ಸ್ಥಿತಿಯಲ್ಲಿ ಪಕ್ಷ ಇರುವಾಗ ಭ್ರಷ್ಠಾಚಾರದ ಕುರಿತು ಬಿ.ಜೆ.ಪಿ ನಾಯಕರು ಮಾತನಾಡುವುದು ನಿಜಕ್ಕೂ ನಗೆಪಾಟಿಲಿನ ಸಂಗತಿ.

ಆರೋಪಿ ಮತ್ತು ಆಪಾದಿತ ಎಂಬ ಕಾನೂನಿನ ಪರಿಭಾಷೆಯ ಪದಗಳನ್ನು ರಕ್ಷಣೆಗೆ ಗುರಾಣಿ ಮಾಡಿಕೊಂಡಿರುವ ಬಿ.ಜೆ.ಪಿ ಪಕ್ಷ ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಎಂಬ ಅನೈತಿಕಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿ ಉಪಚುನಾವಣೆಗಳ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನ ಖರ್ಚು ಮಾಡಿಸಿದ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ. (ಕೊಪ್ಪಳ ಉಪಚುನಾವಣೆಗೆ ಖರ್ಚಾದ ಹಣದಮೊತ್ತ 65 ಲಕ್ಷ ರೂಪಾಯಿ, ಇದು ಚನಾವಣಾ ಆಯೋಗ ಸಿಬ್ಬಂದಿಗಾಗಿ ಖರ್ಚು ಮಾಡಿದ ಹಣ.)

ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯ ಬಿ.ಜೆ.ಪಿ. ನಾಯಕರು ನಮ್ಮ ಸಂವಿಧಾನದ ಮೂಲ ಆಧಾರಗಳಾದ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವವನ್ನು ಮರೆತು ರಾಜ್ಯದ ವಿ.ವಿ.ಗಳಿಗೆ ಉಪಕುಲಪತಿಗಳ ನೇಮಕ ಹಾಗೂ ಇತರೆ ಉನ್ನತ ಹುದ್ದೆಗಳ ನೇಮಕದಲ್ಲಿ ಒಂದೇ ಜಾತಿಗೆ ಪ್ರಾಧಾನ್ಯ ನೀಡಿದ್ದರ ಬಗ್ಗೆ ಜೊತೆಗೆ ಎಗ್ಗಿಲ್ಲದೆ ಮಠ ಮಾನ್ಯಗಳಿಗೆ ಪ್ರಸಾದದಂತೆ ರಾಜ್ಯ ಬೊಕ್ಕಸದ ಹಣವನ್ನು ಹಂಚಿದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳ್ಲಬೇಕಾಗಿದೆ.

ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪನವರ ನಂತರ, ಧಾರ್ಮಿಕ ನಾಯಕನ್ನು ಹೊರತು ಪಡಿಸಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಯಾವುದೇ ರಂಗದಲ್ಲಿ ಒಬ್ಬ ಗಣ್ಯ ವೈಕ್ತಿ ಬಿ.ಜೆ.ಪಿ ಸರ್ಕಾರಕ್ಕೆ ಏಕೆ ಸಿಗಲಿಲ್ಲ?

ಕರ್ನಾಟಕದ ಬೆಳವಣಿಗೆ ಕುರಿತು ಮೊದಲಿನಿಂದಲೂ ಅಸಮಾಧಾನ ವ್ಯಕ್ತ ಪಡಿಸಿದ ಏಕೈಕ ನಾಯಕರೆಂದರೆ ಎಲ್.ಕೆ. ಅಧ್ವಾನಿ ಮಾತ್ರ. ಅವರ ಮಾತಿಗೆ ಪಕ್ಷ ಮೊದಲೇ ಬೆಲೆ ನೀಡಿದ್ದರೆ, ಪಕ್ಷಕ್ಕೆ ಇಂದು ರಾಷ್ಟಮಟ್ಟದಲ್ಲಿ ಈ ರೀತಿಯ ಮುಜುಗರ ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ.

ಪಕ್ಷದ ರಾಷ್ಟೀಯ ಅಧ್ಯಕ್ಷರಾದ ನಿತೀನ್ ಗಡ್ಕರಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ರಾಜ್ಯ ನಾಯಕರ ಜೊತೆ ಚೌಕಾಶಿ ಶುರುವಿಟ್ಟುಕೊಂಡು ನಾಗಪುರದಲ್ಲಿ ತಮ್ಮ ಪುತ್ರನ ವಿವಾಹಕ್ಕೆ 13 ಕೋಟಿ ರೂ.ಹಣ ಖರ್ಚು ಮಾಡಿದಾಗಲೇ ಪಕ್ಷ ವಾಜಪೇಯಿ ಮತ್ತು ಅಧ್ವಾನಿ ಕಾಲದಲ್ಲಿ ಕಾಪಾಡಿಕೊಂಡು ಬಂದಿದ್ದ ನೈತಿಕತೆಯ ನೆಲೆಗಟ್ಟು ಕುಸಿದು  ಹೋಗಿದೆ ಎಂದು ನಾಗರೀಕರಿಗೆ ಮನದಟ್ಟಾಗಿ ಹೋಯಿತು.

ಇಂತಹ ದಯನೀಯ ಸ್ಥಿತಿಯಲ್ಲಿ ಮುಂದಿನ ಪ್ರಧಾನಿಯಾಗಲು ಹೊರಟಿರುವ ಪಕ್ಷದ ಹಿರಿಯ ನಾಯಕ ಅಧ್ವಾನಿಯವರ ಹಾದಿ ಸುಗುಮವಾಗಿಲ್ಲ. ಕಾಲ ಬದಲಾದಂತೆ ತಲೆಮಾರುಗಳ ಚಿಂತನೆ ಕೂಡ ಬದಲಾಗುತ್ತಿದೆ. ಈ ಕಟು ವಾಸ್ತವ ಸ್ಥಿತಿಯನ್ನು ಅಧ್ವಾನಿಯವರು ಜೀರ್ಣಿಸಿಕೊಳ್ಳಬೇಕಾಗಿದೆ.

8 thoughts on “ರಥಯಾತ್ರೆ ಎಂಬ ವೃದ್ಧಾಪ್ಯದ ವ್ಯಸನ

  1. Ananda Prasad

    ಗುರಿ ಮಾತ್ರವಲ್ಲ ಗುರಿಯೆಡೆಗೆ ಸಾಗುವ ದಾರಿಯೂ ಶುದ್ಧವಾಗಿರಬೇಕು ಎಂದು ಗಾಂಧೀಜಿಯವರು ಹೇಳಿದ್ದಾರೆ. ಆದರೆ ಅಡ್ವಾಣಿಯವರು ರಾಜಕೀಯ ಲಾಭಕ್ಕೋಸ್ಕರ ಧಾರ್ಮಿಕ ಅಂಶಗಳನ್ನು ಹಿಡಿದುಕೊಂಡು ಹೊರಟಾಗಲೇ ದಾರಿ ತಪ್ಪಿದ್ದರು. ಹೀಗಾಗಿ ಅವರೊಬ್ಬ ಅಪ್ರತಿಮ ನಾಯಕ ಎನ್ನಲು ಸಾಧ್ಯವಿಲ್ಲ. ಧಾರ್ಮಿಕ ಉನ್ಮಾದವನ್ನು ಕೆರಳಿಸಿ ಅಧಿಕಾರದೆಡೆಗೆ ಹೋಗಬೇಕೆಂಬ ಧೋರಣೆ ಎಂದಿಗೂ ಆರೋಗ್ಯಕರವಾದದ್ದಲ್ಲ, ಇಂಥ ಧೋರಣೆ ಒಬ್ಬ ಧೀಮಂತ ನಾಯಕನ ಲಕ್ಷಣವೂ ಅಲ್ಲ. ಗುಜರಾತಿನಲ್ಲಿ ನಡೆದ ದಂಗೆಯ ಅವಧಿಯಲ್ಲಿಯೂ ಅಡ್ವಾಣಿಯವರು ಮೌನವಾಗಿದ್ದರು. ಇದೂ ಕೂಡ ಒಬ್ಬ ಧೀಮಂತ ನಾಯಕನ ಗುಣ ಲಕ್ಷಣಗಳಿಗೆ ವಿರುದ್ಧವಾದದ್ದು.-ಆನಂದ ಪ್ರಸಾದ್

    Reply
  2. ದಿನೇಶ್ ಕುಕ್ಕುಜಡ್ಕ

    ಮಾನ್ಯ ಆನಂದ್ ಪ್ರಸಾದಜೀ ಅವರೇ, ಸಾಕ್ಷಾತ್ ಗಾಂಧೀಜಿಯಂಥ ಗಾಂಧೀಜಿ ಕೂಡಾ ಜೀವನದುದ್ದಕ್ಕೂ ತಪ್ಪುಗಳನ್ನು ಮಾಡುತ್ತಾ -ಎಡವುತ್ತಾ-ಮತ್ತೆ ತಿದ್ದಿಕೊಳ್ಳುತ್ತಾ- ಅಂತಿಮವಾಗಿ ಒಬ್ಬ ಅಪ್ಪಟ ಮಾನವಮೂರ್ತಿಯಾಗಿ ರೂಪುಗೊಂಡರು! ನಾನಿಲ್ಲಿ ಅಡ್ವಾಣಿಯವರನ್ನು ಸಮರ್ಥಿಸಿಕೊಳ್ಳಲು ಈ ವಾದವನ್ನು ಎಳೆದು ತಂದಿಲ್ಲ. ಆದರೆ,ಸದ್ಯ ದೇಶದ ರಾಜಕೀಯ ಹಿಡಿದಿರುವ ದಾರಿಯನ್ನು ಗಮನಿಸಿದಾಗ,ಮೇಲ್ನೋಟಕ್ಕೆ ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿ ಮೈತ್ರಿಕೂಟದಿಂದ ಪ್ರಧಾನಿ ಅಭ್ಯರ್ಥಿಯೊಬ್ಬ ಶೇ.ತೊಂಬತ್ತೊಂಬತ್ತರಷ್ಟು ಭರವಸೆಯೊಂದಿಗೆ ಸಜ್ಜಾಗಬಹುದೆಂಬ ಸನ್ನಿವೇಶ ಎದುರಾಗಿರುವಾಗ ವಿರೋಧಿಗಳಿಗೂ ಕಾಣಿಸಿಕೊಳ್ಳುವ ಮುಖವೆಂದರೆ, ಅದು ಅಡ್ವಾಣಿಯವರದು ಮಾತ್ರ! ನೈತಿಕವಾಗಿ ತೀರಾ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ ರಥಯಾತ್ರೆಯಂಥ ಒಂದಿಷ್ಟು ಹಾಸ್ಯಾಸ್ಪದವೆನ್ನಿಸುವ ಪ್ರಯೋಗವನ್ನೇ ಕೈಗೊಂಡಿರಬಹುದು.ಆದರೆ,ಅವರ ಪಕ್ಷವೂ ಅಲ್ಲಿ-ಇಲ್ಲಿ ಭ್ರಷ್ಟಾಚಾರದಲ್ಲಿ ಸೇರಿರುವದನ್ನು ದೇಶದ ಜನ ಈಗಾಗಲೇ ಗಮನಿಸಿರುವ ಹಿನ್ನೆಲೆಯಲ್ಲಿ,ವೈಯಕ್ತಿಕವಾಗಿ ಅಡ್ವಾಣಿಯವರಿಗೆ ಇದರಿಂದೆಲ್ಲಾ ತನ್ನನ್ನು ಪ್ರತ್ಯೇಕಿಸಿಕೊಂಡು ಬಿಂಬಿಸಿಕೊಳ್ಳಲೇಬೇಕಾದ ಸ್ವಂತದ ತರಾತುರಿಯಿತ್ತು ಎನ್ನುವುದು ನಾಳೆ ನಿರ್ಮಾಣಗೊಳ್ಳಬಹುದಾದ ಇತಿಹಾಸದ ಹಿನ್ನೆಲೆಯಲ್ಲಿ ನಾವು ವಿವೇಚಿಸಬೇಕಾದ ಅಂಶ.ಅದೇನೇ ಇರಲಿ,ಪ್ರಧಾನಿ ಪಟ್ಟದ ವರ್ಣರಂಜಿತ ಚಿತ್ರ ಕಣ್ಣೆದುರು ನಿಧಾನ ಸ್ಪಷ್ಟಗೊಳ್ಳುತ್ತಿರುವ ಈ ಹೊತ್ತು ಆ ಪಕ್ಷದಲ್ಲಿ ಕನಿಷ್ಟ ಅಡ್ವಾನಿಯವರ ಸಮೀಪಕ್ಕೂ ಬರುವ ಅರ್ಹತೆಯಿಲ್ಲದ ,ಒಂದಿಷ್ಟು ಭ್ರಷ್ಟರೂ ಎನಿಸಿಕೊಂಡ ಅವಕಾಶವಾದಿಗಳೆಲ್ಲಾ ಎದ್ದು ಬಿದ್ದು ತೊಡೆ ತಟ್ಟುವುದು ಕಂಡರೆ, ಮುಂದೆ ದೇಶ ಈಗಿರುವುದಕ್ಕಿಂತಲೂ ಹೀನಾಯ ಪರಿಸ್ಥಿತಿಗೆ ತಳ್ಳಲ್ಪಡುವುದನ್ನು ಕಲ್ಪಿಸಿಕೊಳ್ಳುವುದಕ್ಕೇ ಕಷ್ಟವಾವಾಗುತ್ತಿದೆ!ಈ ರಾಜಕೀಯ ಆಟ-ಮೇಲಾಟಗಳ ಕೊನೆಗೊಮ್ಮೆ ನಾಳೆ ಕೇಂದ್ರದಲ್ಲಿ ಬಿಜೆಪಿಯನ್ನಾಗಲೀ-ಅದರ ಮೈತ್ರಿಕೂಟವನ್ನಾಗಲೀ ಕಡುವೈರಿಗಳೂ ಒಪ್ಪಿಕೊಳ್ಳಲೇಬೇಕಾದ ಸನ್ನಿವೇಶ ಎದುರಾದರೆ,ಹಲವು ತಪ್ಪುಗಳ ನಡುವೆಯೂ ಆಳದಲ್ಲಾದರೂ ಒಂದಿಷ್ಟು ನೈತಿಕತೆಗೆ ಅಂಜುವ-ತಿದ್ದಿಕೊಳ್ಳುವ ಕುರುಹುಗಳಿರುವಂತೆ ತೋರುವ ಅಡ್ವಾಣಿಯವರೇ ಹೊರತು ಬೇರ್ಯಾರ ಮೂಖವೂ ಎದುರಿಗೆ ಬಾರದು.ವಿಮರ್ಶೆಯ ಮೂಸೆಯಲ್ಲಿ ಸಿಕ್ಕು ತಿಕ್ಕುವಿಕೆಯ ನೋವಿಗೆ ಒಡ್ಡಿಕೊಂಡರೂ ಕಂದಿಹೋಗದ ಮುಖ ಅಡ್ವಾಣಿಯವರದು! ಈಗಲ್ಲದಿದ್ದರೂ ಇತಿಹಾಸದಲ್ಲದು ಇನ್ನಷ್ಟು ನಿಚ್ಚಳವಾಗುವುದರಲ್ಲಿ ಅನುಮಾನವಿಲ್ಲ.

    Reply
  3. Ananda Prasad

    ಅಡ್ವಾಣಿಯವರು ಪ್ರಧಾನ ಮಂತ್ರಿ ಅಭ್ಯರ್ಥಿಯಾದರೆ ಅದನ್ನು ಒಪ್ಪಿಕೊಳ್ಳಲು ಮಿತ್ರ ಪಕ್ಷಗಳು ಹಿಂಜರಿಯುವುದು ಖಚಿತ ಮಾತ್ರವಲ್ಲ ಮಿತ್ರ ಪಕ್ಷಗಳು ಮೈತ್ರಿ ಮಾಡಿಕೊಳ್ಳಲೂ ಹಿಂಜರಿಯುವ ಸಾಧ್ಯತೆ ನಿಚ್ಚಳವಾಗಿದೆ. ಭಾ.ಜ. ಪ. ತನ್ನ ಸ್ವಂತ ಬಲದ ಮೇಲೆ ಚುನಾವಣೆ ಗೆಲ್ಲಲು ಸಾಧ್ಯವಾದರೆ ಮಾತ್ರ ಅಡ್ವಾಣಿಯವರು ಪ್ರಧಾನ ಮಂತ್ರಿಯಾಗಬಹುದು ಅದೂ ಅವರ ಪಕ್ಷದ ಸಮ್ಮತಿಯಿದ್ದರೆ. ಅಡ್ವಾಣಿಯವರಿಗೆ ಉಗ್ರ ಹಿಂದುತ್ವವಾದಿ ಇಮೇಜ್ ಇರುವುದರಿಂದ ಹಾಗೂ ಅವರು ಪ್ರಧಾನಿಯಾದರೆ ಅವರು ಕೆಲವು ಉಗ್ರ ಹಿಂದುತ್ವದ ಹಿಡನ್ ಅಜೆಂಡಾಗಳನ್ನೂ ಜಾರಿಗೆ ತರುವ ಸಾಧ್ಯತೆ ಇರುವುದರಿಂದ ಭಾ. ಜ. ಪ. ತನ್ನ ಸ್ವಂತ ಬಲದ ಮೇಲೆ ಸರಕಾರ ರಚಿಸುವಸ್ಟು ಬಹುಮತ ಪಡೆಯಲಾರದು.- ಆನಂದ ಪ್ರಸಾದ್

    Reply
  4. Narendra Kumar.S.S

    Ananda Prasad says:> ಧಾರ್ಮಿಕ ಉನ್ಮಾದವನ್ನು ಕೆರಳಿಸಿ
    ಧರ್ಮವು ಉನ್ಮಾದವನ್ನು ಕೆರಳಿಸುವುದಿಲ್ಲ. ಯಾವುದು ಎಲ್ಲವನ್ನೂ ಧರಿಸುತ್ತದೋ ಅದೇ ಧರ್ಮ.
    ಧೃತಿ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ | ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮ ಲಕ್ಷಣಂ||
    ಗಾಳಿಗೆ ಬೀಸುವ ಧರ್ಮ, ಮೋಡಗಳಿಗೆ ಮಳೆ ಸುರಿಸುವುದು ಧರ್ಮ, ವಿದ್ಯಾರ್ಥಿಗೆ ವಿದ್ಯಾರ್ಜನೆ ಮಾಡುವುದು ಧರ್ಮ,…..

    ನೀವು ಪ್ರಾಯಶಃ ಧರ್ಮವನ್ನು ಇಂಗ್ಲಿಷಿನ Religionಗೆ ಹೋಲಿಸಿ ಗೊಂದಲಕ್ಕೀಡಾಗಿದ್ದೀರಿ ಎನಿಸುತ್ತದೆ. ಹೀಗಾಗಿ, ಮತ-ಪಂಥ-ಜಾತಿಗಳ ವಿಷಯದಲ್ಲಿ ಮಾತನಾಡಿದಂತೆ ಧರ್ಮದ ವಿಷಯದಲ್ಲಿಯೂ ಮಾತನಾಡುತ್ತಿರುವಿರಿ.
    ಧರ್ಮವು ಇವೆಲ್ಲವನ್ನೂ ಒಳಗೊಂಡಿರುವುದು – ಎಲ್ಲ ಜಾತಿಗಳು, ಎಲ್ಲ ಪಂಥಗಳೂ, ಎಲ್ಲ ಮತಗಳೂ, ಎಲ್ಲ ಭಾಷೆಗಳೂ, ಎಲ್ಲ ಪ್ರದೇಶಗಳು ಇದರಲ್ಲಿ ಒಳಗೊಂಡಿದೆ.
    ದೇವರನ್ನು ನಂಬುವವರು ಮತ್ತು ನಂಬದವರು – ಇಬ್ಬರೂ ಧರ್ಮದ ಅಡಿ ಬರುತ್ತಾರೆ.
    ಧರ್ಮವು ಕರ್ತವ್ಯವನ್ನು ನೆನಪಿಸುತ್ತದೆ, ನೀತಿಯನ್ನು ತಿಳಿಸುತ್ತದೆ.
    ಸ್ವಾತಂತ್ರ್ಯ ಬಂದಂದಿನಿಂದ “ಜಾತ್ಯಾತೀತವಾದದ” ಹೆಸರಿನಲ್ಲಿ ಧರ್ಮವನ್ನು ಜನಜೀವನದಿಂದ, ರಾಜಕೀಯದಿಂದ ಬೇರ್ಪಡಿಸುವ ಪ್ರಯತ್ನ ನಡೆದಿರುವ ಪರಿಣಾಮವೇ
    ಇಂದಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಿದ್ರೋಹಗಳಿಗೆ ಕಾರಣವಾಗಿದೆ.
    ಈ ಎಲ್ಲಾ ಅನೀತಿ, ಅತ್ಯಾಚಾರಗಳು ತೊಲಗಬೇಕಾದರೆ, ಧರ್ಮವನ್ನು ಮತ್ತೆ ಪ್ರತಿಷ್ಠಾಪಿಸಬೇಕು, ಮಕ್ಕಳಾದಾಗಿನಿಂದಲೇ ಧರ್ಮದಿಂದ ನಡೆಯುವುದನ್ನು ಕಲಿಸಬೇಕು ಮತ್ತು ಆಗ್ರಹಿಸಬೇಕು. ಅದಾಗದೆ, ದೇಶವು ಭ್ರಷ್ಟಾಚಾರದಿಂದ ಹೊರಬರಲು ಸಾಧ್ಯವಿಲ್ಲ.
    ಅಣ್ಣಾ ಹಜಾರೆಯವರ ಸತ್ಯಾಗ್ರಹದಿಂದ ಹೊಸ ಕಾನೂನು ರೂಪುಗೊಳ್ಳಬಹುದು. ಆದರೆ, ಆ ಕಾನೂನನ್ನು ಅನುಷ್ಠಾನಕ್ಕೆ ತರಬಲ್ಲ ಪ್ರಾಮಾಣಿಕ ವ್ಯಕ್ತಿಗಳು ಎಲ್ಲಿರುವರು?

    ಹೀಗಾಗಿ, ಧರ್ಮವೆಂಬುದು ನೀವಂದುಕೊಂಡಷ್ಟು ಕೆಟ್ಟ ವಿಷಯವಲ್ಲ ಮತ್ತು ಹಗುರವಾದ ವಿಷಯವೂ ಅಲ್ಲ.

    ಇನ್ನು ಎರಡನೆಯ ವಿಷಯ, ಭಾಜಪ ಹಾಗೂ ಅದ್ವಾಣಿಯವರು ಮಾತನಾಡುವ ಹಿಂದುತ್ವ.
    ಇಲ್ಲಿ ಹಿಂದುತ್ವ ಎನ್ನುವುದು ಜಾತಿಯಾಗಲೀ, ಮತವಾಗಲೀ, ಪಂಥವಾಗಲೀ, ಧರ್ಮವಾಗಲೀ ಅಥವಾ ಯಾವುದೋ ದೇವರನ್ನು ಪೂಜಿಸುವ ಜನರಿಗಾಗಲೀ ಸಂಬಂಧಿಸಿದ್ದಲ್ಲ.
    ಅದು ಇಲ್ಲಿನ ರಾಷ್ಟ್ರೀಯತೆಗೆ ಸಂಬಂಧಿಸಿದ್ದು. ಅದಕ್ಕೆ ಮತ್ತೊಂದು ಹೆಸರು ಭಾರತೀಯತೆ.
    ಈ ದೇಶದ ಎಲ್ಲರೂ ಇಲ್ಲಿನ ರಾಷ್ಟ್ರೀಯರು ಮತ್ತು ಎಲ್ಲರೂ (ಎಲ್ಲ ಮತ-ಪಂಥ-ಜಾತಿಗಳಿಗೆ ಸೇರಿದವರು) ಹಿಂದುಗಳು.
    ಹೀಗಾಗಿ ನಮ್ಮ ದೇಶಕ್ಕೆ ಹಿಂದುಸ್ಥಾನವೆಂದೂ ಹೆಸರು.

    ಹಿಂದು ಎನ್ನುವ ವಿಷಯದ ಕುರಿತು ಮಾತನಾಡುವಾಗ, ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದರೆ ಈ ಗೊಂದಲಗಳಾಗುವುದಿಲ್ಲ.

    Reply
  5. Ananda Prasad

    ನೀವು ಹೇಳಿದ ಧರ್ಮದ ಬಗ್ಗೆ ಅಥವಾ ಹಿಂದುತ್ವದ ಬಗ್ಗೆ ನನ್ನ ತಕರಾರು ಏನೂ ಇಲ್ಲ. ಆದರೆ ಭಾ.ಜ. ಪ. ಆ ಅರ್ಥದಲ್ಲಿ ಧರ್ಮವನ್ನಾಗಲಿ, ಹಿಂದುತ್ವವನ್ನಾಗಲಿ ಪ್ರತಿಪಾದಿಸುತ್ತಿರುವುದು ಕಂಡುಬರುತ್ತಿಲ್ಲ. ಗುಜರಾತಿನಲ್ಲಿ ದಂಗೆ ನಡೆದಾಗ, ಬಾಬರಿ ಮಸೀದಿ ಉರುಳಿಸಿದಾಗ ನಡೆದ ಗಲಭೆಗಳು ಧರ್ಮದ ಉನ್ಮಾದದ ಕೆಟ್ಟ ಪರಿಣಾಮಗಳನ್ನು ತೋರಿಸುತ್ತವೆ. ಜನರಿಗೆ ಸುಲಭವಾಗಿ ಅರ್ಥವಾಗುವುದು ಇಂಥ ಉನ್ಮಾದದ ಧರ್ಮವೇ ಹೊರತು ನಿಜವಾದ ಧರ್ಮವಲ್ಲ. ಹೀಗಾಗಿ ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವುದು ದೇಶದ ಹಿತದೃಷ್ಟಿಯಿಂದ ಎಂದಿಗೂ ಸಮಂಜಸವಲ್ಲ. ಇದು ಎಲ್ಲ ಧೀಮಂತ ನಾಯಕರ, ದೇಶಭಕ್ತರ ದೃಷ್ಟಿಕೋನವಾಗಿದೆ. ಜಾತ್ಯಾತೀತತೆ ನಮ್ಮ ದೇಶಕ್ಕೆ ಅನಿವಾರ್ಯ. ಇದು ನಮ್ಮ ದೇಶಕ್ಕೆ ಮಾತ್ರವಲ್ಲ ಮಾನವೀಯತೆಯೆಡೆಗೆ ಸಾಗಬೇಕಿರುವ ಎಲ್ಲ ದೇಶಗಳಿಗೂ ಇದು ಅನಿವಾರ್ಯ. ಮಾನವ ಹೆಚ್ಚು ವಿಚಾರಶೀಲನಾಗುತ್ತಾ ಹೋದಂತೆ ಧರ್ಮದ ಕಬಂಧ ಬಾಹುಗಳಿಂದ ಕಳಚಿಕೊಂಡು ಮಾನವತೆಯೆಡೆಗೆ ಸಾಗಬೇಕಾಗಿದೆ. ಜಾತ್ಯತೀತತೆ ವಿಕಾಸಗೊಂಡ ಮಾನವರ ಪ್ರಧಾನ ಲಕ್ಷಣವೂ ಹೌದು.

    Reply
  6. Narendra Kumar.S.S

    ಜಾತ್ಯಾತೀತತೆಯ ಹೆಸರಿನಲ್ಲಿ ಧರ್ಮವನ್ನು ತೆಗೆದು ಹಾಕಿದರೆ, ನಮ್ಮ ದೇಶವು ಆತ್ಮವಿಲ್ಲದ ಶರೀರದಂತಾಗುತ್ತದೆ.
    ಮಹಾತ್ಮಾ ಗಾಂಧಿಯವರು ಸಹ ಸನಾತನ ಧರ್ಮದ ಬಗ್ಗೆಯೇ ಸದಾ ಮಾತನಾಡುತ್ತಿದ್ದರು ಮತ್ತು “ರಾಮ ರಾಜ್ಯ” ಆಗಬೇಕೆನ್ನುತ್ತಿದ್ದರು.
    ಸರ್ವಧರ್ಮಸಮಭಾವದಲ್ಲಿ ಬೆಳೆದು ಬಂದಿರುವ ನಮ್ಮ ದೇಶದಲ್ಲಿ ಜಾತ್ಯಾತೀತತೆ ಎನ್ನುವುದನ್ನು ಹೊಸದಾಗಿ ತರಬೇಕಿಲ್ಲ.
    ಹಾಗಿಲ್ಲದಿದ್ದಲ್ಲಿ, ಇಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು, ಕ್ರೈಸ್ತರು, ಪಾರಸಿಗಳು ಮತೀಯ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ.
    ಭಾರತದ್ದೇ ಭಾಗವಾಗಿದ್ದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ, ಭಾರತದಿಂದ ಪ್ರತ್ಯೇಕವಾದ ಕೂಡಲೇ ಏನಾಯಿತೆಂಬುದನ್ನು ನೋಡಿ.
    ಅಲ್ಲಿ ಹಿಂದುಗಳು ಬಹುಸಂಖ್ಯಾತರಾಗಿರುತ್ತಿದ್ದಲ್ಲಿ ಹಾಗಾಗುತ್ತಿರಲಿಲ್ಲ.
    ಜಾತ್ಯಾತೀತತೆಯ ಪಾಠಗಳು ಬೇಕಿರುವುದು ಆ ರೀತಿಯ ಮತೀಯ ರಾಷ್ಟ್ರಗಳಿಗೇ ಹೊರತು, ಸಹಜವಾಗಿಯೇ ಜಾತ್ಯಾತೀತವಾಗಿರುವ ಭಾರತಕ್ಕಾಗಲೀ, ಹಿಂದುಗಳಿಗಾಗಲೀ ಅಲ್ಲ.

    ನೀವು ಬಾಬರಿ ಮಸೀದಿಯ ವಿಷಯವನ್ನು ಎತ್ತಿರುವಿರಿ.
    ಮೊದಲನೆಯದಾಗಿ ನೀವು ತಿಳಿದಿರಬೇಕಾದ ಸಂಗತಿಯೆಂದರೆ, ಅದು ಮಸೀದಿಯಲ್ಲ.
    ಕುರಾನಿನ ಪ್ರಕಾರ ವಿವಾದಗ್ರಸ್ತ ಪ್ರದೇಶ ಮಸೀದಿಯಾಗಲು ಸಾಧ್ಯವಿಲ್ಲ; ವಿಗ್ರಹವಿರುವ ಕಟ್ಟಡ ಮಸೀದಿಯಾಗಲು ಸಾಧ್ಯವಿಲ್ಲ.
    ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ೧೫೨೬ರಿಂದ ೧೯೯೨ ಡಿಸೆಂಬರ್ ೬ರವರೆಗೆ ಅಲ್ಲಿ ಒಮ್ಮೆಯೂ ನಮಾಜ಼್ ನಡೆದಿಲ್ಲ.
    ೧೯೪೮ರಲ್ಲಿ ಸರ್ವೋಚ್ಛ ನ್ಯಾಯಾಲಯವೇ ತಿಳಿಸಿದಂತೆ, ಆ ಕಟ್ಟಡದ ೩ ಕಿ.ಮೀ ತ್ರಿಜ್ಯ (ಅಯೋಧ್ಯಾ ಪರಿಕ್ರಮ)ದೊಳಗೆ ಯಾವ ಮುಸಲ್ಮಾನನೂ ಪ್ರವೇಶಿಸುವಂತಿಲ್ಲ.
    ಅಲ್ಲಿರುವ ಪೋಲಿಸ್ ಠಾಣೆಯ ಹೆಸರು “ಜನ್ಮಸ್ಥಾನ್ ಪೊಲೀಸ್ ಠಾಣೆ”.
    ಅಲ್ಲಿರುವ ಪ್ರತಿಯೊಂದು ರಾಮನಿಗೇ ಸಂಬಂಧಿಸಿದ್ದು.
    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಹೋರಾಟವನ್ನು ಪ್ರಾರಂಭಿಸಿದ್ದು ಬಿಜೆಪಿಯಲ್ಲವೇ ಅಲ್ಲ.
    ಬಿಜೆಪಿ ಹುಟ್ಟುವುದಕ್ಕೂ ಮೊದಲಿನಿಂದ, ಸ್ವಾತಂತ್ರ್ಯಪೂರ್ವಕ್ಕೂ ಮುಂಚಿನಿಂದ ನಡೆದಿರುವ ಹೋರಾಟವಿದು.
    ಮತ್ತು ಅಯೋಧ್ಯೆಯ ವಿಷಯವನ್ನು ನೋಡುವಾಗ ಅದನ್ನು ಹಿಂದು-ಮುಸ್ಲಿಮ್ ಘರ್ಷಣೆ ಎಂದು ನೋಡುವುದೇ ತಪ್ಪು.
    ಬಾಬರ್ ಈ ದೇಶದ ಆಕ್ರಮಣಕಾರಿ, ಶತೃ. ಈ ದೇಶದ ಪ್ರತಿಯೊಬ್ಬನಿಗೂ ಆತ ಶತೃವೇ.
    ಅಯೋಧ್ಯೆಯ ದೇವಸ್ಥಾನವನ್ನು ಆತನು ಕೆಡವಿದ್ದು ಈ ದೇಶಕ್ಕೆ ಅಪಮಾನಗೈಯ್ಯಲೆಂದೇ – ನಮ್ಮ ಮಾತೃಭೂಮಿಗಾದ ಅಪಮಾನವನ್ನು ತೆಗೆದು ಹಾಕುವುದು ಈ ದೇಶದ ಪ್ರತಿಯೊಬ್ಬ ರಾಷ್ಟ್ರೀಯನ ಕರ್ತವ್ಯ. ಈ ದೇಶದ ಮುಸಲ್ಮಾನರಿಗೂ ಆಗಿರುವ ಅಪಮಾನವಿದು ಮತ್ತು ಹೀಗಾಗಿ ಅವರೂ ನಮ್ಮೊಡನೆ ಸೇರಬೇಕಲ್ಲವೇ?
    ಮುಸಲ್ಮಾನರನ್ನು ಪ್ರತ್ಯೇಕವಾಗಿಟ್ಟು, ಅವರಲ್ಲಿ ಪ್ರತ್ಯೇಕತಾ ಮನೋಭಾವನೆ ಬೆಳೆಸುವ ಕಾಂಗ್ರೆಸ್ಸು, ಅವರನ್ನು ಹಿಂದುಗಳೊಡನೆ ಸೇರಲು ಬಿಟ್ಟಿಲ್ಲ.
    ಅವರಿಗೆ ಸತ್ಯವನ್ನು ತಿಳಿಸಿ, ಅವರೂ ಹಿಂದುಗಳೊಡನೆ ಸೇರುವಂತಾದರೆ ಅನೇಕ ಸಮಸ್ಯೆಗಳು ದೂರವಾದೀತು.
    ಕೇವಲ ಜಾತ್ಯಾತೀತವಾದದ ಮಂತ್ರವನ್ನು ಜಪಿಸುವುದರಿಂದ ಏನೂ ಸಾಧನೆಯಾಗುವುದಿಲ್ಲ.

    Reply
  7. Ananda Prasad

    ಜಾತ್ಯತೀತತೆ ಎಂದರೆ ಧರ್ಮವನ್ನು ತೆಗೆದು ಹಾಕಬೇಕೆಂದೇನೂ ಅಲ್ಲ. ಧಾರ್ಮಿಕ ಮೂಢನಂಬಿಕೆಗಳು ದೇಶದ ಪ್ರಭುತ್ವವನ್ನು ಪ್ರಭಾವಿಸಬಾರದು ಎಂಬುದು ಜಾತ್ಯತೀತತೆಯ ಪ್ರಧಾನ ಉದ್ಧೇಶ. ಯಾವುದೊ ಕಾಲದ ಅರ್ಥವಿಲ್ಲದ ಶಾಸ್ತ್ರಗಳು, ಕಂದಾಚಾರಗಳು ದೇಶದ ಪ್ರಭುತ್ವದ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲೆಂದು ಜಾತ್ಯತೀತತೆಯನ್ನು ನಮ್ಮ ಸಂವಿಧಾನದಲ್ಲಿ ಸೇರಿಸಲಾಗಿದೆ. ಗಾಂಧೀಜಿಯವರ ಧರ್ಮದ ಪರಿಕಲ್ಪನೆಗೂ ಭಾ.ಜ. ಪ. ದ ಧರ್ಮದ ಪರಿಕಲ್ಪನೆಗೂ ಅಜಗಜಾಂತರ ವ್ಯತ್ಯಾಸವಿದೆ. ಬಾಬರಿ ಮಸೀದಿಯನ್ನು ಪ್ರಸ್ತಾಪಿಸುವುದು ಧರ್ಮದ ಉನ್ಮಾದದ ಪರಿಣಾಮವನ್ನು ತಿಳಿಸಲು ಅನಿವಾರ್ಯ. ಆ ಕಟ್ಟಡ ಬಾಬರಿ ಮಸೀದಿಯೆಂದೇ ಕರೆಯಲ್ಪಡುತ್ತಿದ್ದುದರಿಂದ ಆ ಹೆಸರಿನಿಂದ ಕರೆದರೆ ಜನರಿಗೆ ಗೊತ್ತಾಗುವುದು. ಬಾಬರಿ ಮಸೀದಿ ವಿವಾದ ಹಿಂದಿನಿಂದ ಇದ್ದರೂ ಅದನ್ನು ಹಿಡಿದುಕೊಂಡು ಜನರನ್ನು ಅಲ್ಲಿಗೆ ಕೊಂಡೊಯ್ದು ದುರಂತಕ್ಕೆ ಕಾರಣವಾದದ್ದು ಭಾ.ಜ.ಪ.ವೇ. ಈ ವಿಷಯದಲ್ಲಿ ವಿವಾದವಿದ್ದರೆ ಅದನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಬೇಕಾದದ್ದು ಧರ್ಮ. ಆದರೆ ಅದನ್ನು ಭಾ.ಜ.ಪ.ದವರು ಮಾಡದೇ ಜನರನ್ನು ಕೆರಳಿಸಿದ್ದು ಧರ್ಮಕ್ಕೆ ವಿರುದ್ಧವಾದದ್ದು. ಆ ವಿಚಾರ ಅಷ್ಟು ಮುಖ್ಯವಾದದ್ದು ಎಂದಾದರೆ ಈ ಬಗ್ಗೆ ಚುನಾವಣೆಗಳಲ್ಲಿ ಮುಖ್ಯ ವಿಚಾರವನ್ನಾಗಿ ಮಾಡಿ ಚುನಾವಣೆಗಳಲ್ಲಿ ಬಹುಮತ ಪಡೆದು ಆ ಕುರಿತು ಸಂಸತ್ತಿನಲ್ಲಿ ಒಂದು ಮಸೂದೆ ಪಾಸು ಮಾಡಿ ಮುಂದುವರಿದಿದ್ದರೆ ಭೀಕರ ಗಲಭೆಗಳು ನಡೆಯುತ್ತಿರಲಿಲ್ಲ. ಈ ವಿಷಯದಲ್ಲಿ ಭಾ. ಜ. ಪ. ದವರು ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

    Reply
  8. jagadishkoppa

    ಪ್ರಿಯ ಮಿತ್ರರೇ ಇಂತಹದೊಂದು ಆರೋಗ್ಯಕರ ಮಂಥನ ನಡೆಸುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ವಿಚಾರ-ವಿನಿಮಯದ ಸಮಯದಲ್ಲಿ ಯಾರೊಬ್ಬರು ಸಭ್ಯತೆಯ ಮತ್ತು ಔಚಿತ್ಯದ ಎಲ್ಲೆ ಮೀರದೆ ಇರೋಣ.

    Reply

Leave a Reply to Narendra Kumar.S.S Cancel reply

Your email address will not be published. Required fields are marked *