Daily Archives: October 23, 2011

ದಲಿತರ ಬಹಿಷ್ಕಾರ ಮತ್ತು ‘ದೊಡ್ಡ ಜನರ’ ಜವಾಬ್ದಾರಿ

– ಭೂಮಿ ಬಾನು

ಅರಕಲಗೂಡು ತಾಲೂಕಿನ ಸಿದ್ದಾಪುರದಲ್ಲಿ ಮುಂದುವರಿದ ಜಾತಿಯವರು ದಲಿತರನ್ನು ಇತ್ತೀಚೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿದರು. ದಲಿತ ಸಮುದಾಯದ ಒಂಭತ್ತೋ-ಹತ್ತು ಕುಟುಂಬಗಳ ಸದಸ್ಯರಿಗೆ ಹಳ್ಳಿಯ ಯಾವುದೇ ಅಂಗಡಿಯ ಮಾಲೀಕ ಏನನ್ನೂ ಮಾರುವಂತಿಲ್ಲ. ಹಿಟ್ಟಿನ ಗಿರಣಿ ಮಾಲಿಕ ದಲಿತರ ದವಸ ಬೀಸುವಂತಿಲ್ಲ. ಕ್ಷೌರಿಕ ದಲಿತರಿಗೆ ಬ್ಲೇಡು ತಾಕಿಸುವಂತಿಲ್ಲ. ಇಂತಹದೇ ಹಲವು ಕಟ್ಟುಪಾಡುಗಳು.

ಸಿದ್ದಾಪುರ, ಸರಗೂರು ಗ್ರಾಮ ಪಂಚಾಯಿತಿಗೆ ಸೇರುವ ಒಂದು ಹಳ್ಳಿ. ಆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇದೇ ಸಿದ್ದಾಪುರದವರು. ಹೆಸರು ಚೆಲುವಯ್ಯ. ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರು. ಬಹಿಷ್ಕಾರ ಘೋಷಣೆಯಾದ ಮಾರನೆಯ ದಿನ ಹಿಟ್ಟಿನ ಗಿರಣಿಗೆ ಅವರು ನಾಲ್ಕು ಕೆಜಿ ರಾಗಿ ತಗೊಂಡು ಹೋಗಿ ಬೀಸಿಕೊಡುವಂತೆ ಕೋರಿದ್ದಾರೆ. ಗಿರಣಿ ಮಾಲಿಕ ಒಬ್ಬ ಮುಸಲ್ಮಾನ. ಅವನಿಗೆ ಚೆಲುವಯ್ಯನ ಬಗ್ಗೆ ವೈಯಕ್ತಿಕ ದ್ವೇಷವೇನೂ ಇಲ್ಲ. “ಕ್ಷಮಿಸಿ, ನಾನು ನಿಮ್ಮ ರಾಗಿ ಬೀಸೋಕೆ ಆಗೋಲ್ಲ. ನೀವೇನೋ ನಾಲ್ಕು ಕೆಜಿ ರಾಗಿ ಬೀಸೋಕೆ ಹತ್ತು ರೂಪಾಯಿ ಕೊಡ್ತೀರಿ. ಆದರೆ, ನಿಮ್ಮ ರಾಗಿ ನಾನು ಬೀಸಿದ್ದಕ್ಕೆ ಊರ ದೊಡ್ಡವರ ಪಂಚಾಯಿತಿಗೆ 1,001 ರೂಪಾಯಿ ದಂಡ ಕಟ್ಟಬೇಕಾಗುತ್ತೆ..” ಎಂದು ಗೋಗರೆದ.

ಆ ಪಂಚಾಯಿತಿಯ ಪ್ರಥಮ ಪ್ರಜೆ ಚೆಲುವಯ್ಯನದು ಈ ಪರಿಸ್ಥಿತಿ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರ ಎದುರು ತಮ್ಮ ಸಂಕಟ ತೋಡಿಕೊಂಡು ಚೆಲುವಯ್ಯ ಕಣ್ಣೀರು ಹಾಕಿದರು. ತಮ್ಮ ಮಾತಿನಲ್ಲಿ ಅವರು ತಪ್ಪಿಯೂ ತಮ್ಮ ಸಮುದಾಯಕ್ಕೆ ಬಹಿಷ್ಕಾರ ಹಾಕಿದ ಮುಂದುವರಿದವರ ಬಗ್ಗೆ ಒಮ್ಮೆಯೂ ಏಕವಚನ ಬಳಸಲಿಲ್ಲ.

ಇಷ್ಟೆಲ್ಲಕ್ಕೂ ಕಾರಣ, ದಲಿತರು ಕುಲವಾಡಿಕೆ ಮಾಡಲು ನಿರಾಕರಿಸಿದ್ದು. ಹಲವು ವರ್ಷಗಳಿಂದ ದಲಿತ ಸಮುದಾಯದ ಕೆಲ ಕುಟುಂಬಗಳು ಸತ್ತವರಿಗೆ ಗುಳಿ ತೋಡುವುದು, ಹಬ್ಬಗಳಂದು ಊರ ಗುಡಿಗೆ ಚಪ್ಪರ ಹಾಕುವುದು, ನಾಯಿ ಅಥವಾ ಇತರೆ ಪ್ರಾಣಿ ಸತ್ತರೆ ಶುಚಿ ಮಾಡುವ ಕೆಲಸಗಳನ್ನು ಮಾಡಿಕೊಂಡು ಬಂದಿವೆ. ಕ್ರಮೇಣ ಈ ಕೆಲಸ ಮಾಡುತ್ತಿದ್ದವರು ವೃದ್ಧರಾದರು. ಅವರ ಮಕ್ಕಳು ಹಾಗೂ-ಹೀಗೂ ವಿದ್ಯಾವಂತರಾದರು. ವೃದ್ಧರ ಕೈಯಲ್ಲಿ ಕೆಲಸ ಮಾಡಲಾಗೋಲ್ಲ. ವಿದ್ಯಾವಂತ ಮಕ್ಕಳು ಜಾಗೃತರಾಗಿ ನಾವೇಕೆ ಈ ಕೆಲಸ ಮಾಡಬೇಕು ಎಂದು ಪ್ರಶ್ನೆ ಹಾಕಿದರು. ಈ ಬೆಳವಣಿಗೆ ಮುಂದುವರಿದ ಜನಾಂಗದವರಿಗೆ ಸಹಿಸಲಾಗಲಿಲ್ಲ.

ಐನೂರಕ್ಕೂ ಹೆಚ್ಚು ಕುಟುಂಬಗಳಿರುವ ಹಳ್ಳಿಯಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಏನು ತಾನೇ ಮಾಡಲು ಸಾಧ್ಯ. ದಲಿತರ ಮನೆ ಮಂದಿ ಪ್ರತಿದಿನ ಕೂಲಿ ಮಾಡುವುದು ಇದೇ ಮುಂದುವರಿದ ಜಾತಿ ಜನರ ಜಮೀನುಗಳಲ್ಲಿ. ಬಹಿಷ್ಕಾರದ ಪರಿಣಾಮ ಕೂಲಿಯೂ ಕಟ್. ಅವರು ಬದುಕುವುದು ಹೇಗೆ?

ಇಂತಹದೇ ಪ್ರಕರಣ ಇದೇ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕೇವಲ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಕುಲವಾಡಿಕೆ ಮಾಡಲು ನಿರಾಕರಿಸಿದ್ದ ಒಂಭತ್ತು ಕುಟುಂಬಗಳಿಗೆ ಆ ಊರಿನ ಮುಖಂಡರು ಬಹಿಷ್ಕಾರ ಹಾಕಿದ್ದರು. ಈ ಪ್ರಕರಣ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ವಿ.ಸೋಮಣ್ಣ ಆ ಹಳ್ಳಿಗೆ ಭೇಟಿ ನೀಡಿದರು. ಎರಡೂ ಸಮುದಾಯದ ಮುಖಂಡರನ್ನು ಸೇರಿಸಿ ಊರಿನ ಅಭಿವೃದ್ಧಿ ಬಗ್ಗೆ ಭಾಷಣ ಮಾಡಿ ಆಶ್ವಾಸನೆ ನೀಡಿದರು. ಆ ಹಳ್ಳಿಯನ್ನು ದತ್ತು ತೆಗೆದುಕೊಂಡು ಉದ್ಧಾರ ಮಾಡುತ್ತೇನೆ ಎಂದರು. ಅಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ತಕ್ಷಣವೇ ಊರಿನ ಅಭಿವೃದ್ಧಿಗೆ ಬೇಕಾದ ಕಾರ್ಯಯೋಜನೆ ಸಿದ್ಧಪಡಿಸಿ ಎಂದು ತಾಕೀತು ಮಾಡಿದರು. ಕಂಡ ಕಂಡವರನ್ನೆಲ್ಲಾ ಅಮಾನತ್ತು ಮಾಡ್ತೀನಿ ಎಂದು ಧಮಕಿ ಹಾಕಿದರು. ಕೆಳಹಂತದ ಇಬ್ಬರ ಅಮಾನತ್ತಿಗೆ ಆದೇಶವನ್ನೂ ನೀಡಿದರು.

ಆದರೆ ನೆನಪಿರಲಿ, ಅಂದಿನಿಂದ ಇದುವರೆಗೆ ಸೋಮಣ್ಣ ಆ ಹಳ್ಳಿ ಕಡೆಗೆ ಮತ್ತೆ ತಿರುಗಿ ನೋಡಿಲ್ಲ. ಆ ನಂತರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭಗಳಲ್ಲೂ ಆ ಬಗ್ಗೆ ಮಾತನಾಡಿಲ್ಲ.
ಒಕ್ಕಲಿಗ, ಲಿಂಗಾಯುತ ಹಾಗೂ ಕುರುಬ ಜನಾಂಗದವರು ಹೆಚ್ಚಿನ ಪ್ರಭಾವಿಗಳಾಗಿರುವ ಅರಕಲಗೂಡು ತಾಲೂಕಿನಲ್ಲಿ ಆಗಾಗ ಇಂತಹ ಪ್ರಕರಣಗಳು ಕೇಳಿ ಬರುತ್ತಿವೆ. ಆದರೆ ಆ ಪ್ರಬಲ ಸಮುದಾಯಗಳ ರಾಜಕೀಯ ನಾಯಕರು ತಮ್ಮ ಜನಾಂಗದವರಿಗೆ ತಿಳಿ ಹೇಳುವಂತಹ ಕೆಲಸ ಒತ್ತಟ್ಟಿಗಿರಲಿ, ಇಂತಹ ಪ್ರಕರಣಗಳನ್ನು ಖಂಡಿಸಲೂ ಆಸಕ್ತಿ ತೋರಿಸಿಲ್ಲ.
ಲೋಕಸಭೆಯಲ್ಲಿ ಹಾಸನವನ್ನು ಪ್ರತಿನಿಧಿಸುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಕೆರಗೋಡು ಹಾಗೂ ಸಿದ್ದಾಪುರದ ಘಟನೆಗಳ ಬಗ್ಗೆ ಮಾತನಾಡಲೇ ಇಲ್ಲ. ತಮ್ಮ ಮತಬಾಂಧವರ ಪೈಕಿ ಕೆಲವರು ಅಸ್ಪೃಶ್ಯತೆ ಎಂಬ ಪಿಡುಗಿಗೆ ಬಲಿಯಾಗಿ ಶೋಷಣೆಗೆ ಒಳಗಾಗುವುದನ್ನು ನೋಡಿದಾಗಲೂ ಇವರಿಗೆ ಏನೂ ಅನ್ನಿಸುವುದಿಲ್ಲವೆ?

ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಚಾಲಕ ಎನ್. ಮಹೇಶ್ ಸಿದ್ದಾಪುರದ ಘಟನೆ ತರುವಾಯ ದೌರ್ಜನ್ಯ ಮುಕ್ತ ಸಮಾಜದೆಡೆಗೆ ಎಂಬ ಹೆಸರಿನಡಿ ಸಿದ್ದಾಪುರದಿಂದ ಹಾಸನದವರೆಗೆ ಪಾದಯಾತ್ರೆ ನಡೆಸಿದರು. ಅವರು ತಮ್ಮ ಹೋರಾಟದ ವೇಳೆ ಕೇಳಿದ ಪ್ರಶ್ನೆ ಇಷ್ಟೆ – ಮೇಲ್ಜಾತಿ ಜನ ನಾಯಕರಿಗೆ ಶೋಷಣೆ ಮುಕ್ತ ಸಮಾಜ ಸ್ಥಾಪಿಸುವ ಹೊಣೆ ಇಲ್ಲವೆ?
ದೇವೇಗೌಡ, ಎಚ್.ಡಿ.ರೇವಣ್ಣ – ಹೀಗೆ ಅನೇಕರ ಹೆಸರನ್ನು ಉದ್ಧರಿಸಿ ಅವರು ಪ್ರಶ್ನೆ ಹಾಕಿದರು. ಉತ್ತರ ಕರ್ನಾಟಕದಲ್ಲಿ ಬೆಳಕಿಗೆ ಬಂದ ಇಂತಹ ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಸಮುದಾಯದವರು. ಆ ಸಮುದಾಯಕ್ಕೆ ನೂರಾರು ಮಠಗಳ ಬೆಂಬಲ, ಮಾರ್ಗದರ್ಶನ ಇದೆ. ಹಾಗಾದರೆ ಆ ಎಲ್ಲಾ ಮಠಗಳ ಸ್ವಾಮಿಗಳು ತಮ್ಮ ಭಕ್ತ ಸಮುದಾಯದವರಿಗೆ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಸಾಧ್ಯವಿಲ್ಲವೆ? ಅಥವಾ ಕಾರ್ಯ ಚುನಾವಣೆ ವೇಳೆ ಭಕ್ತರಿಗೆ ಅವರು ಅಯ್ಕೆ ಮಾಡಬೇಕಾದ ಅಭ್ಯರ್ಥಿಯನ್ನು ಸೂಚಿಸುವುದಷ್ಟೇ ಸ್ವಾಮೀಜಿಗಳ ಕೆಲಸವೆ?

ಮಂಡ್ಯದಲ್ಲಿ ಇತ್ತೀಚೆಗೆ ದಲಿತರೊಬ್ಬರು ಕ್ಷೌರ ಮಾಡಿಸಿಕೊಳ್ಳಲು ಹೋದಾಗ ಅವನ ಮೂಗಿಗೇ ಕತ್ತರಿ ಹಾಕಿದ ಪ್ರಕರಣ ವರದಿಯಾಗಿದೆ. ವಿಚಿತ್ರ ನೋಡಿ, ಕ್ಷೌರ ಸಮುದಾಯದವರೂ ಹಿಂದುಳಿದವರೇ. ಅವರು ತನ್ನಂತೆ ಅಥವಾ ತನಗಿಂತ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ?
ಕ್ಷೌರ ಸಮುದಾಯ ಹಾಗೂ ದಲಿತರ ನಡುವೆ ಸಾಮರಸ್ಯ ಸಾಧಿಸಲು ಮಂಡ್ಯದಲ್ಲಿ ನಾಲ್ಕು ದಿನಗಳ ಹಿಂದೆ ವಿಶಿಷ್ಟ ಕಾರ್ಯಕ್ರಮ ಏರ್ಪಟ್ಟಿತ್ತು. ಕೆಲ ಪ್ರಜ್ಞಾವಂತರು ಸೇರಿಕೊಂಡು ಏರ್ಪಡಿಸಿದ್ದ ಕಾರ್ಯಕ್ರಮವದು. ಅಲ್ಲಿ ಕ್ಷೌರ ಸಮುದಾಯದವರು ದಲಿತರ ಕ್ಷೌರ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾಂಗ್ರೆಸ್ ನ ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ಎರಡೂ ಸಮುದಾಯಗಳೂ ಹಿಂದುಳಿದಿವೆ. ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಏಳ್ಗೆ ಸಾಧ್ಯ ಎನ್ನುವುದನ್ನು ತಿಳಿ ಹೇಳುವ ಪ್ರಯತ್ನ ಆ ಕಾರ್ಯಕ್ರಮ. ಇಂತಹ ಕಾರ್ಯ ಅಲ್ಲಲ್ಲಿ, ಆಗಾಗ ನಡೆಯುತ್ತಿರಬೇಕು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 8

ಡಾ.ಎನ್.ಜಗದೀಶ್ ಕೊಪ್ಪ

ಅಭಿವೃದ್ಧಿ ಮತ್ತು ಆಧುನಿಕತೆ ಮನುಷ್ಯನನ್ನು ನೆಲದ ಸಂಸ್ಕೃತಿಯಿಂದ ದೂರ ಮಾಡಿದ್ದು ಮಾತ್ರವಲ್ಲದೆ, ಪ್ರಕೃತಿಯ ಕೊಡುಗೆಗಳಾದ ನೆಲ- ಜಲ, ಗಾಳಿ, ಗಿಡ-ಮರ ಇವೆಲ್ಲವೂ ತನ್ನ ಉಪಭೋಗಕ್ಕಾಗಿ ಇರುವ ಪುಕ್ಕಟೆ ಸವಲತ್ತುಗಳು ಎಂಬ ಅಹಂ ಅನ್ನು ಅವನೆದೆಗೆ ಕಸಿ ಮಾಡಿಬಿಟ್ಟವು. ಹೀಗಾಗಿ 21 ನೇ ಶತಮಾನದ ನಾಗರಿಕರಿಗೆ ಕಾಡು, ಬೆಟ್ಟ, ಗುಡ್ಡ, ಕಣಿವೆ, ಕಂದರಗಳಲ್ಲಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಿಸರ್ಗದ ಮಕ್ಕಳಾದ ಆದಿವಾಸಿಗಳೆಂದರೆ ತಾತ್ಸಾರ.

ಇವತ್ತಿನ ಮೂಲ ಮಂತ್ರವಾಗಿರುವ ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ತತ್ತರಿಸಿದವರೇ ಈ ಮಣ್ಣಿನ ಮಕ್ಕಳು. ಜಗತ್ತಿನೆಲ್ಲೆಡೆ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಚರಿತ್ರೆಯಲ್ಲಿ ಈ ಮೂಕ ಮಕ್ಕಳ ಅರಣ್ಯ ರೋದನವಿದೆ, ರಕ್ತ ಸಿಕ್ತ ಅಧ್ಯಾಯದ ಭಾಗಗಳಿವೆ.

ಭಾರತ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ ಅಣೆಕಟ್ಟು ಯೋಜನೆಗಳಿಂದ ನಿರ್ವಸತಿಗರಾದವರಲ್ಲಿ ಶೇ.40 ರಷ್ಟು ಆದಿವಾಸಿ ಜನರಿದ್ದಾರೆ. ನಾವು ಅರಿಯಬೇಕಾದ ಸತ್ಯವೇನೆಂದರೆ, ಭಾರತದ ಜನಸಂಖ್ಯೆಯ ಶೇ.6 ರಷ್ಟು ಮಂದಿ ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳಿದ್ದಾರೆ. ಇಂದಿನ ಬಹುತೇಕ ಅಭಿವೃದ್ಧಿ ಯೋಜನೆಗೆ ಬಲಿಪಶುಗಳಾಗುತ್ತಿರುವವರಲ್ಲಿ ಈ ನತದೃಷ್ಟರು ಮುಂಚೂಣಿಯಲ್ಲಿದ್ದಾರೆ. ಇಂತಹ ದುರಂತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಪಿಲಿಫೈನ್ಸ್ ದೇಶದಲ್ಲಿರುವ 47 ಲಕ್ಷ ಆದಿವಾಸಿಗಳಲ್ಲಿ 58 ಸಾವಿರ ಮಂದಿಯನ್ನು ಹಾಗೂ ವಿಯೆಟ್ನಾಂನಲ್ಲಿ 1 ಲಕ್ಷದ 22 ಸಾವಿರ ಮಂದಿಯನ್ನು ಅಣೆಕಟ್ಟು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಗಿದೆ.

ನಾಗರೀಕತೆಯ ಸೋಂಕಿಲ್ಲದೆ, ಆಧುನಿಕ ಬದುಕಿನ ಕ್ರಮಗಳಿಗಿಂತ ವಿಭಿನ್ನವಾಗಿ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಈ ಜನತೆ ತಮ್ಮ ಮೂಲ ನೆಲೆಗಳಿಂದ ಪಲ್ಲಟಗೊಂಡ ನಂತರ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಆಧುನಿಕ ಬದುಕಿನ ಆಹಾರ, ಉಡುಗೆ-ತೊಡುಗೆ, ಆಚಾರ-ವಿಚಾರಗಳಿಗೆ ಹೊಂದಿಕೊಳ್ಳಲಾಗದ ಬುಡಕಟ್ಟುಗಳ ಸಂತತಿ ನಶಿಸಿ ಹೋಗುತ್ತಿದೆ. ಅನೇಕ ಸರಕಾರಗಳು ಇವರಿಗೆ ಮನೆ, ಕೃಷಿಭೂಮಿ ಮುಂತಾದ ಸವಲತ್ತುಗಳನ್ನು ನೀಡಿದ್ದರೂ ತಾವು ಹಿಂದೆ ವಾಸಿಸುತ್ತಿದ್ದ ಭೂಮಿಯ ಬಗ್ಗೆ, ಅಲ್ಲಿನ ಗಿಡ-ಮರಗಳ ಬಗೆಗಿನ ವಿಚಿತ್ರ ಆಕರ್ಷಣೆಯ ಜೊತೆಗೆ ಪ್ರತಿಯೊಂದಕ್ಕೂ ದೈವಿಕ ಶಕ್ತಿ ಇದೆ ಎಂದು ನಂಬಿ ಪೂಜಿಸಿಕೊಂಡು ಬಂದಿದ್ದ ಪದ್ಧತಿ ಇವುಗಳಿಂದ ವಂಚಿತರಾದದ್ದೇ ಬುಡಕಟ್ಟು ಜನಾಂಗಕ್ಕೆ ದೊಡ್ಡ ಆಘಾತವಾಗಿದೆ. ಮಾನಸಿಕ ಒತ್ತಡ ಮತ್ತು ರೋಗ, ಅನೇಕ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿರುವ ಈ ಜನತೆ ನಿಸರ್ಗದಲ್ಲಿ ದೊರೆಯುತ್ತಿದ್ದ ಗಿಡ ಮೂಲಿಕೆಗಳಿಂದ ವಂಚಿತರಾಗಿ ಸಾವಿಗೆ ಶರಣಾಗುತ್ತಿದ್ದಾರೆ.

ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಬ್ರೆಜಿಲ್ ದೇಶದ ಮೂಲ ನಿವಾಸಿಗಳ ಅವಸಾನದ ಕಥನ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boeದಕ್ಷಿಣ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಬ್ರೆಜಿಲ್ ಇಂದಿಗೂ ಮೂಲ ನಿವಾಸಿಗಳ ಸಂಸ್ಕೃತಿಯಿಂದ ಪ್ರೇರಿತವಾದ ನಾಡು. ಅಲ್ಲಿನ ಜನತೆಯ ನಡೆ-ನುಡಿ, ಆಹಾರ, ಉಡುಪು ಎಲ್ಲವುಗಳಲ್ಲಿ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಆಚರಣೆಗಳು ಮಿಳಿತಗೊಂಡಿವೆ. ಕಳೆದ 40 ವರ್ಷಗಳ ಅವಧಿಯಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಫಲವಾಗಿ ಉದ್ಭವಿಸಿದ ಸಾಮಾಜಿಕ ಕ್ಷೊಭೆಯೊಂದು ಅಲ್ಲಿನ ಸರಕಾರಕ್ಕೆ ಸವಾಲಾಗಿದೆ.

ಯೂರೋಪಿಯನ್ನರ ಆಕ್ರಮಣ ಹಾಗೂ ವಸಾಹತುಶಾಹಿಯ ದಬ್ಬಾಳಿಕೆ ಇವುಗಳಿಂದ ಪಾರಾಗಿ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷ ಬದುಕಿದ್ದ ವೈಮಿರಿ-ಅಟ್ರೋರಿ ಬುಡಕಟ್ಟು ಜನಾಂಗ ಜಲಾಶಯ ಮತ್ತು ಅಣೆಕಟ್ಟುಗಳಿಂದಾಗಿ ಅತಂತ್ರವಾಗಿದೆ. 1905 ರಲ್ಲಿ 6 ಸಾವಿರದಷ್ಟಿದ್ದ ವೈಮಿರಿ ಮತ್ತು ಅಟ್ರೋರಿ ಜನಾಂಗದ ಜನಸಂಖ್ಯೆ 1985 ರ ವೇಳೆಗೆ ಕೇವಲ 374 ಕ್ಕೆ ಇಳಿದಿತ್ತು. ಈ ಜನಾಂಗವನ್ನು ಉಳಿಸಲು ಬ್ರಜಿಲ್ ಸರಕಾರ ಕಾಡಿನಲ್ಲಿ ಅವರ ಬದುಕಿಗೆ ಪೂರಕವಾಗುವಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರೂ ಪ್ರತಿಫಲ ಮಾತ್ರ ಶೂನ್ಯವಾಗಿದೆ. ನದಿಗಳಲ್ಲಿ ದೊರೆಯುತ್ತಿದ್ದ ಮೀನು, ಆಮೆ ಮತ್ತು ಅವುಗಳ ಮೊಟ್ಟೆ ಈ ಜನಾಂಗದ ಪ್ರಮುಖ ಆಹಾರವಾಗಿತ್ತು. ಈಗ ಬದುಕುಳಿದವರ ಸಂಖ್ಯೆ ಬರಿ 97 ಮಾತ್ರ.

ಇದಕ್ಕಿಂತ ಭಿನ್ನವಾದ ಕತೆ ಬಾಂಗ್ಲಾ ದೇಶದ ಚಕ್ಮಾ ಬುಡಕಟ್ಟು ಜನಾಂಗದ್ದು. ಈ ಜನರ ಸಮಸ್ಯೆ ಕೇವಲ ಬಾಂಗ್ಲಾಕ್ಕೆ ಸೀಮಿತವಾಗಿರದೆ ಭಾರತಕ್ಕೂ ಸಮಸ್ಯೆಯಾಗಿದೆ. ಬಾಂಗ್ಲಾದ ಆಗ್ನೇಯ ಪ್ರಾಂತ್ಯದ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿ ಹರಿಯುತ್ತಿರುವ ನದಿಯೊಂದಕ್ಕೆ ಅಮೆರಿಕಾದ ನೆರವಿನೊಂದಿಗೆ ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಿದ ಕಪ್ಟಾಯ್ ಅಣೆಕಟ್ಟಿನಿಂದಾಗಿ 1 ಲಕ್ಷ ಚಕ್ಮಾ ಬುಡಕಟ್ಟು ಜನಾಂಗ ನೆಲೆ ಕಳೆದುಕೊಂಡಿತು. ಸರಕಾರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಎಡವಿದ ಪರಿಣಾಮವಾಗಿ ನಗರಕ್ಕೆ ವಲಸೆ ಬಂದ, ಮೂಲತಃ ಬೌದ್ಧ ಧರ್ಮವನ್ನು ಆಚರಿಸಿಕೊಂಡು ಬಂದಿದ್ದ ಚಕ್ಮಾ ಜನಾಂಗಕ್ಕೂ ಮತ್ತು ಸ್ಥಳೀಯ ಮುಸ್ಲಿಮರಿಗೂ ಘರ್ಷಣೆ ಏರ್ಪಟ್ಟು ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಚಕ್ಮಾ ನಿವಾಸಿಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದು ಇವರನ್ನು ವಾಪಸ್ ಕಳಿಸಲಾಗದೆ ಇತ್ತ ಪುನರ್ವಸತಿಯನ್ನು ಕಲ್ಪಿಸಲಾಗದ ಸ್ಥಿತಿಯನ್ನು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಎರಡು ಸರಕಾರಗಳೂ ಎದುರಿಸುತ್ತಿವೆ. ಬಾಂಗ್ಲಾ ಮತ್ತು ಬ್ರೆಜಿಲ್‌ನ ಬುಡಕಟ್ಟು ಜನಾಂಗದ ಕತೆಗಿಂತ ಬೇರೆಯದೇ ಆದ ನೋವಿನ ಕತೆ ಅಮೆರಿಕಾದ ಇತಿಹಾಸದಲ್ಲಿ ದಾಖಲಾಗಿದೆ.

ನಗರದ ಜನತೆಗೆ ಕುಡಿಯುವ ನೀರಿಗಾಗಿ ಅಮೆರಿಕಾದ ಉತ್ತರ ಡಕೋಟ ಪ್ರದೇಶದಲ್ಲಿ ನಿರ್ಮಿಸಿದ ಗ್ಯಾರಿಸನ್ ಅಣೆಕಟ್ಟಿನಿಂದಾಗಿ ಅಮೆರಿಕನ್ ಮೂಲನಿವಾಸಿಗಳಾದ ಮಂಡಾನ್ಸ್, ಅರಿಕಾಸ್, ಹಿಡಸ್ಟಾಸ್ ಜನಾಂಗಗಳನ್ನು ಅಮೆರಿಕಾ ಸರಕಾರ ಅಪೋಷನ ತೆಗೆದುಕೊಂಡಿದೆ.

ಜಲಾಶಯ ನಿರ್ಮಾಣವಾದ ನದಿ ಪಾತ್ರದಲ್ಲಿ ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆಯನ್ನು ನಂಬಿ ಬದುಕಿದ್ದ ಈ ಜನಾಂಗ ತನ್ನ ಅಸಹಾಯಕ ಸ್ಥಿತಿಯಲ್ಲಿ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ವಾಸಿಸಲು ಅನುಮತಿ ಕೇಳಿತು. ಜೊತೆಗೆ ಹಿನ್ನೀರಿನಲ್ಲಿ ಮುಳುಗುವ ಮರಗಳನ್ನು ಕಡಿದು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಪ್ರಾರ್ಥಿಸಿಕೊಂಡಿತು. ಎಲ್ಲಾ ಬೇಡಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಅಮೆರಿಕನ್ ಸರಕಾರ ಬುಡಕಟ್ಟು ಜನಾಂಗದ ಪ್ರತಿನಿಧಿಯಿಂದ ಬಲವಂತವಾಗಿ ಸಹಿ ಪಡೆದು ಅಲ್ಲಿನ ನಿವಾಸಿಗಳನ್ನು, ಜಾನುವಾರುಗಳನ್ನು ಹೊರದಬ್ಬಿತು.

1948 ರಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ಕಛೇರಿಯಲ್ಲಿ ಅಂದಿನ ಆಂತರಿಕ ಆಡಳಿತ ಕಾರ್ಯದರ್ಶಿ ಕ್ಯಾಪ್‌ ಕೃಗ್ ಎದುರು ತಮ್ಮೆಲ್ಲ ವಸತಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾರ್ವಭೌಮ ಹಕ್ಕು ಸರಕಾರಕ್ಕಿದೆ ಎಂದು ಬುಡಕಟ್ಟು ಜನಾಂಗದ ನಾಯಕ ಜಾರ್ಜ್ ಗಿಲ್ಲೆಟ್ ಸಹಿ ಮಾಡಿದ ಸನ್ನಿವೇಶವನ್ನು ರೆಸಿನಾರ್ ಎಂಬ ಲೇಖಕ ತನ್ನ “ದಿ ಅಮೆರಿಕನ್ ವೆಸ್ಟ್ ಅಂಡ್ ಇಟ್ಸ್ ಡಿಸಪ್ಪಿಯರಿಂಗ್ ವಾಟರ್” ಎಂಬ ಕೃತಿಯಲ್ಲಿ ಈ ರೀತಿ ಬಣ್ಣಿಸಿದ್ದಾನೆ. “ಕಾರ್ಯದರ್ಶಿ ಕೃಗ್ ಎದುರು ತಲೆ ಬಗ್ಗಿಸಿ ನಿಂತಿದ್ದ ದೃಢವಾದ ಮೈಕಟ್ಟಿನ ಬುಡಕಟ್ಟು ಜನಾಂಗದ ನಾಯಕ ಒಪ್ಪಂದ ಪತ್ರಕ್ಕೆ ಭಾರವಾದ ಹೃದಯದಿಂದ ಸಹಿ ಮಾಡಿದನು. ಸಹಿಗೆ ಮುನ್ನ ಇಂದಿನಿಂದ ನಮ್ಮ ಜನಾಂಗದ ಭವಿಷ್ಯಕ್ಕೆ ಬೆಳಕೆಂಬುದು ಕನಸಿನ ಮಾತು ಎಂದು ನೊಂದು ನುಡಿದನು. ಸಹಿ ಮಾಡಬೇಕಾದ ಮೇಜಿನ ಮೇಲೆ ಡಜನ್‌ ಗಟ್ಟಲೆ ಪೆನ್‌ಗಳನ್ನು ಇಡಲಾಗಿತ್ತು. ಅವುಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ತನ್ನ ಎಡಗೈ ಹಸ್ತದಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ-ಬಿಕ್ಕಿ ಅಳುತ್ತಾ ಬಲಗೈನಲ್ಲಿ ಪತ್ರಕ್ಕೆ ಸಹಿ ಮಾಡಿದನು”.

ಮೊಂಟಾನ್ ವಿಶ್ವವಿದ್ಯಾಲಯದ ಅಮೆರಿಕನ್ ಮೂಲ ನಿವಾಸಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ಯಾಟ್ರಿಕ್ ಮೋರಿಸ್, ಅಮೆರಿಕನ್ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಉತ್ತರ ಡಕೋಟ ಪ್ರಾಂತ್ಯದಲ್ಲಿ ಹರಿಯುವ ಮಿಸ್ಸೊರಿ ನದಿ ಶೇ.70 ರಷ್ಟು ಮೂಲನಿವಾಸಿಗಳಿಗೆ ಮೀನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಮೂಲಕ ಉದ್ಯೋಗ ಒದಗಿಸಿತ್ತು ಎಂದಿದ್ದಾರೆ.

ಕೊಲಂಬಿಯಾ ಪ್ರಾಂತ್ಯದಲ್ಲಿ ಅಮೆರಿಕನ್ನರು ಸಾಲ್ಮನ್ ಜಾತಿಯ ಮೀನುಗಳ ಸಂತತಿ ನಾಶದ ಪಾಪಕ್ಕೂ ಹೊಣೆಯಾಗಿದ್ದಾರೆ. ಶಿಲ್ಲಿನ ನದಿಯೊಂದಕ್ಕೆ ಕಟ್ಟಲಾದ ಗ್ರ್ಯಾಂಡ್ ಕೌಲಿ ಎಂಬ ಅಣೆಕಟ್ಟಿನಿಂದಾಗಿ ಮೀನಿನ ಸಂತತಿ ನಶಿಸಿಹೋಯಿತು.

1940 ರ ಜೂನ್ 17 ರಂದು ಪ್ರಥಮ ಬಾರಿಗೆ ಅಣೆಕಟ್ಟಿನಿಂದ ನೀರು ಹರಿಸಿದಾಗ, ತಾವು ಹಿಂದೆ ಮೀನಿನ ಶಿಕಾರಿ ಮಾಡುತ್ತಿದ್ದ ಕೆಟಲ್ ಜಲಪಾತದ ಬಳಿ ನೆಲದ ಮೂಲ ನಿವಾಸಿಗಳು ಕಳೆದುಹೋದ ತಮ್ಮ ಬದುಕನ್ನು ನೆನೆಯುತ್ತಾ ನದಿಗೆ ಅಶ್ರುಧಾರೆಯನ್ನು ಅರ್ಪಿಸಿದರು.

ಇದು ಬದುಕಿನ ವ್ಯಂಗ್ಯವೋ ಅಥವಾ ದುರಂತವೊ ನೀವೇ ನಿರ್ಧರಿಸಿ. 1951 ರಲ್ಲಿ ಅಮೆರಿಕಾ ಸರಕಾರ ಮೂಲನಿವಾಸಿಗಳಿಗೆ ಪರಿಹಾರವಾಗಿ ದಾಖಲೆಯ 5 ಕೋಟಿ 40 ಲಕ್ಷ ಡಾಲರ್ ಹಣ ಹಾಗೂ ವಾರ್ಷಿಕ ಪರಿಹಾರವಾಗಿ 1.5 ಕೋಟಿ ಡಾಲರ್ ನೆರವು ಘೋಷಿಸಿತ್ತು. ನೋವಿನ ಸಂಗತಿಯೆಂದರೆ ಈ ಪರಿಹಾರವನ್ನು ಪಡೆಯಲು ಬುಡಕಟ್ಟು ಜನಾಂಗದ ಒಂದೇ ಒಂದು ಜೀವ ಕೂಡ ಉಳಿದಿರಲಿಲ್ಲ.

(ಚಿತ್ರಕೃಪೆ: ವಿಕಿಪೀಡಿಯ)

(ಮುಂದುವರಿಯುವುದು)