ದಲಿತರ ಬಹಿಷ್ಕಾರ ಮತ್ತು ‘ದೊಡ್ಡ ಜನರ’ ಜವಾಬ್ದಾರಿ

– ಭೂಮಿ ಬಾನು

ಅರಕಲಗೂಡು ತಾಲೂಕಿನ ಸಿದ್ದಾಪುರದಲ್ಲಿ ಮುಂದುವರಿದ ಜಾತಿಯವರು ದಲಿತರನ್ನು ಇತ್ತೀಚೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿದರು. ದಲಿತ ಸಮುದಾಯದ ಒಂಭತ್ತೋ-ಹತ್ತು ಕುಟುಂಬಗಳ ಸದಸ್ಯರಿಗೆ ಹಳ್ಳಿಯ ಯಾವುದೇ ಅಂಗಡಿಯ ಮಾಲೀಕ ಏನನ್ನೂ ಮಾರುವಂತಿಲ್ಲ. ಹಿಟ್ಟಿನ ಗಿರಣಿ ಮಾಲಿಕ ದಲಿತರ ದವಸ ಬೀಸುವಂತಿಲ್ಲ. ಕ್ಷೌರಿಕ ದಲಿತರಿಗೆ ಬ್ಲೇಡು ತಾಕಿಸುವಂತಿಲ್ಲ. ಇಂತಹದೇ ಹಲವು ಕಟ್ಟುಪಾಡುಗಳು.

ಸಿದ್ದಾಪುರ, ಸರಗೂರು ಗ್ರಾಮ ಪಂಚಾಯಿತಿಗೆ ಸೇರುವ ಒಂದು ಹಳ್ಳಿ. ಆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇದೇ ಸಿದ್ದಾಪುರದವರು. ಹೆಸರು ಚೆಲುವಯ್ಯ. ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರು. ಬಹಿಷ್ಕಾರ ಘೋಷಣೆಯಾದ ಮಾರನೆಯ ದಿನ ಹಿಟ್ಟಿನ ಗಿರಣಿಗೆ ಅವರು ನಾಲ್ಕು ಕೆಜಿ ರಾಗಿ ತಗೊಂಡು ಹೋಗಿ ಬೀಸಿಕೊಡುವಂತೆ ಕೋರಿದ್ದಾರೆ. ಗಿರಣಿ ಮಾಲಿಕ ಒಬ್ಬ ಮುಸಲ್ಮಾನ. ಅವನಿಗೆ ಚೆಲುವಯ್ಯನ ಬಗ್ಗೆ ವೈಯಕ್ತಿಕ ದ್ವೇಷವೇನೂ ಇಲ್ಲ. “ಕ್ಷಮಿಸಿ, ನಾನು ನಿಮ್ಮ ರಾಗಿ ಬೀಸೋಕೆ ಆಗೋಲ್ಲ. ನೀವೇನೋ ನಾಲ್ಕು ಕೆಜಿ ರಾಗಿ ಬೀಸೋಕೆ ಹತ್ತು ರೂಪಾಯಿ ಕೊಡ್ತೀರಿ. ಆದರೆ, ನಿಮ್ಮ ರಾಗಿ ನಾನು ಬೀಸಿದ್ದಕ್ಕೆ ಊರ ದೊಡ್ಡವರ ಪಂಚಾಯಿತಿಗೆ 1,001 ರೂಪಾಯಿ ದಂಡ ಕಟ್ಟಬೇಕಾಗುತ್ತೆ..” ಎಂದು ಗೋಗರೆದ.

ಆ ಪಂಚಾಯಿತಿಯ ಪ್ರಥಮ ಪ್ರಜೆ ಚೆಲುವಯ್ಯನದು ಈ ಪರಿಸ್ಥಿತಿ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರ ಎದುರು ತಮ್ಮ ಸಂಕಟ ತೋಡಿಕೊಂಡು ಚೆಲುವಯ್ಯ ಕಣ್ಣೀರು ಹಾಕಿದರು. ತಮ್ಮ ಮಾತಿನಲ್ಲಿ ಅವರು ತಪ್ಪಿಯೂ ತಮ್ಮ ಸಮುದಾಯಕ್ಕೆ ಬಹಿಷ್ಕಾರ ಹಾಕಿದ ಮುಂದುವರಿದವರ ಬಗ್ಗೆ ಒಮ್ಮೆಯೂ ಏಕವಚನ ಬಳಸಲಿಲ್ಲ.

ಇಷ್ಟೆಲ್ಲಕ್ಕೂ ಕಾರಣ, ದಲಿತರು ಕುಲವಾಡಿಕೆ ಮಾಡಲು ನಿರಾಕರಿಸಿದ್ದು. ಹಲವು ವರ್ಷಗಳಿಂದ ದಲಿತ ಸಮುದಾಯದ ಕೆಲ ಕುಟುಂಬಗಳು ಸತ್ತವರಿಗೆ ಗುಳಿ ತೋಡುವುದು, ಹಬ್ಬಗಳಂದು ಊರ ಗುಡಿಗೆ ಚಪ್ಪರ ಹಾಕುವುದು, ನಾಯಿ ಅಥವಾ ಇತರೆ ಪ್ರಾಣಿ ಸತ್ತರೆ ಶುಚಿ ಮಾಡುವ ಕೆಲಸಗಳನ್ನು ಮಾಡಿಕೊಂಡು ಬಂದಿವೆ. ಕ್ರಮೇಣ ಈ ಕೆಲಸ ಮಾಡುತ್ತಿದ್ದವರು ವೃದ್ಧರಾದರು. ಅವರ ಮಕ್ಕಳು ಹಾಗೂ-ಹೀಗೂ ವಿದ್ಯಾವಂತರಾದರು. ವೃದ್ಧರ ಕೈಯಲ್ಲಿ ಕೆಲಸ ಮಾಡಲಾಗೋಲ್ಲ. ವಿದ್ಯಾವಂತ ಮಕ್ಕಳು ಜಾಗೃತರಾಗಿ ನಾವೇಕೆ ಈ ಕೆಲಸ ಮಾಡಬೇಕು ಎಂದು ಪ್ರಶ್ನೆ ಹಾಕಿದರು. ಈ ಬೆಳವಣಿಗೆ ಮುಂದುವರಿದ ಜನಾಂಗದವರಿಗೆ ಸಹಿಸಲಾಗಲಿಲ್ಲ.

ಐನೂರಕ್ಕೂ ಹೆಚ್ಚು ಕುಟುಂಬಗಳಿರುವ ಹಳ್ಳಿಯಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಏನು ತಾನೇ ಮಾಡಲು ಸಾಧ್ಯ. ದಲಿತರ ಮನೆ ಮಂದಿ ಪ್ರತಿದಿನ ಕೂಲಿ ಮಾಡುವುದು ಇದೇ ಮುಂದುವರಿದ ಜಾತಿ ಜನರ ಜಮೀನುಗಳಲ್ಲಿ. ಬಹಿಷ್ಕಾರದ ಪರಿಣಾಮ ಕೂಲಿಯೂ ಕಟ್. ಅವರು ಬದುಕುವುದು ಹೇಗೆ?

ಇಂತಹದೇ ಪ್ರಕರಣ ಇದೇ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕೇವಲ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಕುಲವಾಡಿಕೆ ಮಾಡಲು ನಿರಾಕರಿಸಿದ್ದ ಒಂಭತ್ತು ಕುಟುಂಬಗಳಿಗೆ ಆ ಊರಿನ ಮುಖಂಡರು ಬಹಿಷ್ಕಾರ ಹಾಕಿದ್ದರು. ಈ ಪ್ರಕರಣ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ವಿ.ಸೋಮಣ್ಣ ಆ ಹಳ್ಳಿಗೆ ಭೇಟಿ ನೀಡಿದರು. ಎರಡೂ ಸಮುದಾಯದ ಮುಖಂಡರನ್ನು ಸೇರಿಸಿ ಊರಿನ ಅಭಿವೃದ್ಧಿ ಬಗ್ಗೆ ಭಾಷಣ ಮಾಡಿ ಆಶ್ವಾಸನೆ ನೀಡಿದರು. ಆ ಹಳ್ಳಿಯನ್ನು ದತ್ತು ತೆಗೆದುಕೊಂಡು ಉದ್ಧಾರ ಮಾಡುತ್ತೇನೆ ಎಂದರು. ಅಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ತಕ್ಷಣವೇ ಊರಿನ ಅಭಿವೃದ್ಧಿಗೆ ಬೇಕಾದ ಕಾರ್ಯಯೋಜನೆ ಸಿದ್ಧಪಡಿಸಿ ಎಂದು ತಾಕೀತು ಮಾಡಿದರು. ಕಂಡ ಕಂಡವರನ್ನೆಲ್ಲಾ ಅಮಾನತ್ತು ಮಾಡ್ತೀನಿ ಎಂದು ಧಮಕಿ ಹಾಕಿದರು. ಕೆಳಹಂತದ ಇಬ್ಬರ ಅಮಾನತ್ತಿಗೆ ಆದೇಶವನ್ನೂ ನೀಡಿದರು.

ಆದರೆ ನೆನಪಿರಲಿ, ಅಂದಿನಿಂದ ಇದುವರೆಗೆ ಸೋಮಣ್ಣ ಆ ಹಳ್ಳಿ ಕಡೆಗೆ ಮತ್ತೆ ತಿರುಗಿ ನೋಡಿಲ್ಲ. ಆ ನಂತರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭಗಳಲ್ಲೂ ಆ ಬಗ್ಗೆ ಮಾತನಾಡಿಲ್ಲ.
ಒಕ್ಕಲಿಗ, ಲಿಂಗಾಯುತ ಹಾಗೂ ಕುರುಬ ಜನಾಂಗದವರು ಹೆಚ್ಚಿನ ಪ್ರಭಾವಿಗಳಾಗಿರುವ ಅರಕಲಗೂಡು ತಾಲೂಕಿನಲ್ಲಿ ಆಗಾಗ ಇಂತಹ ಪ್ರಕರಣಗಳು ಕೇಳಿ ಬರುತ್ತಿವೆ. ಆದರೆ ಆ ಪ್ರಬಲ ಸಮುದಾಯಗಳ ರಾಜಕೀಯ ನಾಯಕರು ತಮ್ಮ ಜನಾಂಗದವರಿಗೆ ತಿಳಿ ಹೇಳುವಂತಹ ಕೆಲಸ ಒತ್ತಟ್ಟಿಗಿರಲಿ, ಇಂತಹ ಪ್ರಕರಣಗಳನ್ನು ಖಂಡಿಸಲೂ ಆಸಕ್ತಿ ತೋರಿಸಿಲ್ಲ.
ಲೋಕಸಭೆಯಲ್ಲಿ ಹಾಸನವನ್ನು ಪ್ರತಿನಿಧಿಸುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಕೆರಗೋಡು ಹಾಗೂ ಸಿದ್ದಾಪುರದ ಘಟನೆಗಳ ಬಗ್ಗೆ ಮಾತನಾಡಲೇ ಇಲ್ಲ. ತಮ್ಮ ಮತಬಾಂಧವರ ಪೈಕಿ ಕೆಲವರು ಅಸ್ಪೃಶ್ಯತೆ ಎಂಬ ಪಿಡುಗಿಗೆ ಬಲಿಯಾಗಿ ಶೋಷಣೆಗೆ ಒಳಗಾಗುವುದನ್ನು ನೋಡಿದಾಗಲೂ ಇವರಿಗೆ ಏನೂ ಅನ್ನಿಸುವುದಿಲ್ಲವೆ?

ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಚಾಲಕ ಎನ್. ಮಹೇಶ್ ಸಿದ್ದಾಪುರದ ಘಟನೆ ತರುವಾಯ ದೌರ್ಜನ್ಯ ಮುಕ್ತ ಸಮಾಜದೆಡೆಗೆ ಎಂಬ ಹೆಸರಿನಡಿ ಸಿದ್ದಾಪುರದಿಂದ ಹಾಸನದವರೆಗೆ ಪಾದಯಾತ್ರೆ ನಡೆಸಿದರು. ಅವರು ತಮ್ಮ ಹೋರಾಟದ ವೇಳೆ ಕೇಳಿದ ಪ್ರಶ್ನೆ ಇಷ್ಟೆ – ಮೇಲ್ಜಾತಿ ಜನ ನಾಯಕರಿಗೆ ಶೋಷಣೆ ಮುಕ್ತ ಸಮಾಜ ಸ್ಥಾಪಿಸುವ ಹೊಣೆ ಇಲ್ಲವೆ?
ದೇವೇಗೌಡ, ಎಚ್.ಡಿ.ರೇವಣ್ಣ – ಹೀಗೆ ಅನೇಕರ ಹೆಸರನ್ನು ಉದ್ಧರಿಸಿ ಅವರು ಪ್ರಶ್ನೆ ಹಾಕಿದರು. ಉತ್ತರ ಕರ್ನಾಟಕದಲ್ಲಿ ಬೆಳಕಿಗೆ ಬಂದ ಇಂತಹ ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಸಮುದಾಯದವರು. ಆ ಸಮುದಾಯಕ್ಕೆ ನೂರಾರು ಮಠಗಳ ಬೆಂಬಲ, ಮಾರ್ಗದರ್ಶನ ಇದೆ. ಹಾಗಾದರೆ ಆ ಎಲ್ಲಾ ಮಠಗಳ ಸ್ವಾಮಿಗಳು ತಮ್ಮ ಭಕ್ತ ಸಮುದಾಯದವರಿಗೆ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಸಾಧ್ಯವಿಲ್ಲವೆ? ಅಥವಾ ಕಾರ್ಯ ಚುನಾವಣೆ ವೇಳೆ ಭಕ್ತರಿಗೆ ಅವರು ಅಯ್ಕೆ ಮಾಡಬೇಕಾದ ಅಭ್ಯರ್ಥಿಯನ್ನು ಸೂಚಿಸುವುದಷ್ಟೇ ಸ್ವಾಮೀಜಿಗಳ ಕೆಲಸವೆ?

ಮಂಡ್ಯದಲ್ಲಿ ಇತ್ತೀಚೆಗೆ ದಲಿತರೊಬ್ಬರು ಕ್ಷೌರ ಮಾಡಿಸಿಕೊಳ್ಳಲು ಹೋದಾಗ ಅವನ ಮೂಗಿಗೇ ಕತ್ತರಿ ಹಾಕಿದ ಪ್ರಕರಣ ವರದಿಯಾಗಿದೆ. ವಿಚಿತ್ರ ನೋಡಿ, ಕ್ಷೌರ ಸಮುದಾಯದವರೂ ಹಿಂದುಳಿದವರೇ. ಅವರು ತನ್ನಂತೆ ಅಥವಾ ತನಗಿಂತ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ?
ಕ್ಷೌರ ಸಮುದಾಯ ಹಾಗೂ ದಲಿತರ ನಡುವೆ ಸಾಮರಸ್ಯ ಸಾಧಿಸಲು ಮಂಡ್ಯದಲ್ಲಿ ನಾಲ್ಕು ದಿನಗಳ ಹಿಂದೆ ವಿಶಿಷ್ಟ ಕಾರ್ಯಕ್ರಮ ಏರ್ಪಟ್ಟಿತ್ತು. ಕೆಲ ಪ್ರಜ್ಞಾವಂತರು ಸೇರಿಕೊಂಡು ಏರ್ಪಡಿಸಿದ್ದ ಕಾರ್ಯಕ್ರಮವದು. ಅಲ್ಲಿ ಕ್ಷೌರ ಸಮುದಾಯದವರು ದಲಿತರ ಕ್ಷೌರ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾಂಗ್ರೆಸ್ ನ ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ಎರಡೂ ಸಮುದಾಯಗಳೂ ಹಿಂದುಳಿದಿವೆ. ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಏಳ್ಗೆ ಸಾಧ್ಯ ಎನ್ನುವುದನ್ನು ತಿಳಿ ಹೇಳುವ ಪ್ರಯತ್ನ ಆ ಕಾರ್ಯಕ್ರಮ. ಇಂತಹ ಕಾರ್ಯ ಅಲ್ಲಲ್ಲಿ, ಆಗಾಗ ನಡೆಯುತ್ತಿರಬೇಕು.

Leave a Reply

Your email address will not be published.