ಹೂವು, ಕುಂಕುಮ ಮತ್ತು ಮಹಿಳಾ ಸಬಲೀಕರಣ

-ಶಾಲಿ

ಸಾಮಾನ್ಯವಾಗಿ ಹಬ್ಬ ಹರಿದಿನಗಳ ಸಂಭ್ರಮ,, ಹೂವು, ಕುಂಕುಮ, ದೇವರ ಪೂಜೆಯ ಸಡಗರ ಮುತ್ತೈದೆ ಮತ್ತು ಕನ್ಯಾಮುತ್ತೈದೆಯರಿಗೇ ಮೀಸಲಾಗಿರುತ್ತದೆ.  ಮಂಗಳೂರಿನ ಕುದ್ರೋಳಿ ಶ್ರೀ ನಾರಾಯಣ ಗುರು ದೇವಸ್ಥಾನದಲ್ಲಿ ಈ ಬಾರಿ ನವರಾತ್ರಿ ಆಚರಣೆ ವಿಭಿನ್ನವಾಗಿತ್ತು. ಅಲ್ಲಿ ವಿಧವೆಯರಿಗೆ ಧಾರ್ಮಿಕ ಆಚರಣೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ವಿಧವೆಯರೇ ಮುಂದೆ ನಿಂತು ಚಂಡಿಕಾ ಹೋಮಕ್ಕೆ ಪೂರ್ಣಾಹುತಿ ನೀಡಿದರು. ಅವರೇ ಶ್ರೀ ಗೋಕರ್ಣನಾಥೇಶ್ವರ ದೇವರು ಮತ್ತು ಅನ್ನಪೂರ್ಣೇಶ್ವರಿ ದೇವರನ್ನು ಹೊತ್ತ ಬೆಳ್ಳಿರಥವನ್ನು ಎಳೆದರು. ಎಲ್ಲ ವಿಧವೆಯರಿಗೆ ಅವಕಾಶ ಸಿಗುವಂತಾಗಬೇಕು ಎನ್ನುವ ಕಾರಣಕ್ಕಾಗಿ ದೇವಸ್ಥಾನಕ್ಕೆ ರಥವನ್ನು ಐದು ಸುತ್ತು ಎಳೆಯಲಾಯಿತು. ಅದಾದ ನಂತರ ಕುದ್ರೋಳಿ ದೇವಸ್ಥಾನದ ಮುಖ್ಯಸ್ಥರಾದ ಕಾಂಗ್ರೆಸ್ ಬಿ. ಜನಾರ್ದನ ಪೂಜಾರಿ ವಿಧವೆಯರಿಗೆ ಹೂವು, ಸೀರೆ, ಅರಿಶಿಣ ಕುಂಕುಮ ನೀಡಿದರು.

ಸಾಂಪ್ರದಾಯಿಕವಾಗಿ ಪ್ರಗತಿಪರ ಯೋಚನೆಗಳಿಗೆ ಅಷ್ಟೇನೂ  ಬೋಲ್ಡ್ ಆಗಿ ತೆರೆದುಕೊಳ್ಳದ ಕರಾವಳಿಯಲ್ಲಿ ಇಂತಹ ಒಂದು ಆಚರಣೆ ನಿಜಕ್ಕೂ ಐತಿಹಾಸಿಕ ನಡೆ. ಅಳಿಯ ಕಟ್ಟು ಆಚರಣೆಯನ್ನೇ ಮಾತೃಪ್ರಧಾನ ಕುಟುಂಬಗಳು ಎಂದು ಬಿಂಬಿಸಲಾಗುತ್ತಿದ್ದರೂ  ಕೌಟುಂಬಿಕ ಚಟುವಟಿಕೆಗಳಲ್ಲಿ ಮಹಿಳೆಗೆ ಪ್ರಾಧಾನ್ಯತೆ ಕಡಿಮೆಯೇ. ಕೇರಳದ ಧಾರ್ಮಿಕ ಅಚರಣೆಗಳಿಂದ ಗಾಢವಾಗಿ ಪ್ರಭಾವಿತವಾಗಿರುವ ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಒಂದಲ್ಲ ಒಂದು ನೆಪ ಹೇಳಿ ಮಹಿಳೆಯನ್ನು ಬಹು ದೂರ ತಳ್ಳಿವೆ. ಇಂಗ್ಲಿಷ್‌ಗೆ ಹೆಸರಾದ, ಮಿಷಿನರಿ ಪ್ರಭಾವಕ್ಕೆ ಒಳಗಾದ, ಮಾಡರ್ನ್ ಚಿಂತನೆಗಳಿಗೆ ಹೆಸರಾದ ಮಂಗಳೂರಿನಲ್ಲಿಯೂ ಮಹಿಳೆ ಎಂದ ತಕ್ಷಣ ಆಕೆ ಪುರುಷನ ಅಂಕೆಯಲ್ಲಿರುವ, ಎರಡನೇ ದರ್ಜೆಯ ಪ್ರಜೆ ಎನ್ನುವ ನಂಬಿಕೆಯೇ ಇದೆ.

ಇಂಥ ಕರಾವಳಿಯಲ್ಲಿ ವಿಧವೆಯರಿಗೆ ಸೀರೆ ನೀಡುವುದರ ಜೊತೆಗೆ ಅವರಿಗೆ ಹೂವು, ಕುಂಕುಮವನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಎಷ್ಟೋ ವರ್ಷಗಳಿಂದ ಹೂವು ಮುಡಿಯದವರು ಅಂದು ಧೈರ್ಯವಾಗಿ ಹೂ ಮುಡಿದರು. ಹಸಿರು ಬಳೆ ತೊಡಲು ಪ್ರಯತ್ನಿಸಿದರು. ಗಾಜಿನ ಬಳೆ ಹಾಕದೇ ಒರಟಾದ ಕೈಗಳಲ್ಲಿ ಬಳೆ ಹಾಕಲು ಪ್ರಯಾಸ ಪಟ್ಟರು. ಹೂ ಮುಡಿದವರು ದೇವಸ್ಥಾನದಿಂದ ಆಚೆ ಬಂದ ಕೂಡಲೇ ಮುಜುಗರದಿಂದ ಹೂ ತೆಗೆದರು.  ಇವೆಲ್ಲ ಅಲ್ಲಿ ಕಂಡ ಚಿತ್ರಣಗಳು. ಆದರೆ ಒಟ್ಟು ಪ್ರಕ್ರಿಯೆಯ ಪರಿಣಾಮಗಳು ಅಗಾಧವಾದುದು. ವಿಧವೆ ಅಮಂಗಳೆ ಎನ್ನುವ ನಂಬಿಕೆ ಇತ್ತೀಚೆಗೆ ಮೇಲ್ನೋಟಕ್ಕೆ ಅಷ್ಟೇನೂ ಗಾಢವಾಗಿಲ್ಲದೇ ಇದ್ದರೂ ಧಾರ್ಮಿಕ ವಿಧಿ ವಿಧಾನಗಳಲ್ಲಿ, ಧಾರ್ಮಿಕ ಪೂಜಾ ಸ್ಥಳಗಳಲ್ಲಿ ಅವರ ಪಾಡು ಇನ್ನೂ ಹಾಗೇ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಸೀರೆವಿತರಣೆಯ ಸಂಭ್ರಮದ ನಡುವೆಯೇ ಮೊನ್ನೆ ಕುದ್ರೋಳಿಯಲ್ಲಿ ಒಂದು ದೃಶ್ಯ ಕಾಡುವಂತಿತ್ತು. ಅಲ್ಲಿಗೆ ಬಂದವರ ಪೈಕಿ ಗ್ರಾಮೀಣ ಪ್ರದೇಶದಿಂದ ಬಂದ ಒಂದು ಕುಟುಂಬ. ಒಬ್ಬಳು ವಿಧವೆ ಅವಳ ಅಕ್ಕ ಮತ್ತು ಅಕ್ಕನ ಮಕ್ಕಳ ಜೊತೆಗೆ ಅಲ್ಲಿಗೆ ಬಂದಿದ್ದಳು. ರಥ ಎಳೆಯಲು ಎಲ್ಲರೂ ಸಾಲು ನಿಲ್ಲುವ ಸಂದರ್ಭದಲ್ಲಿ ಅಕ್ಕ ಮತ್ತು ಮಕ್ಕಳು ಆಕೆಯನ್ನು ರಥ ಎಳೆಯಲು ಹೋಗುವಂತೆ ಹುರಿದುಂಬಿಸುತ್ತಿದ್ದರು. ಅವಳು ಅಳುಕಿದಾಗ, ಏ ಅದು ನಿನ್ನಂಥವರಿಗೇ ಎಳೆಯುವುದಕ್ಕಿರುವ ರಥ. ಯಾಕೆ ಅಳುಕು… ಹೋಗಿ ಚಿಕ್ಕಮ್ಮಾ ಅಂತ ಮಕ್ಕಳು ಮುಂದೆ ದೂಡುತ್ತಿದ್ದರು.

ಆ ಕ್ಷಣಕ್ಕೆ ನನ್ನ ಮನಸ್ಸಲ್ಲಿ ಎದ್ದ ಹತ್ತಾರು ಪ್ರಶ್ನೆಗಳಲ್ಲಿ ಕೆಲವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ :

  • ವಿಧವೆಯರಿಗೆ ಧಾರ್ಮಿಕ ಕ್ರಿಯೆಗಳಲ್ಲಿ ಅವಕಾಶ ನೀಡುವ ಭರಾಟೆಯಲ್ಲಿ `ಇದು ವಿಧವೆಯರ ರಥ’ ಎಂದೇ ಮುಂದಿನ ವರ್ಷಗಳಲ್ಲಿ ಇದು ಬಿಂಬಿತವಾಗುವ ಅಪಾಯವಿದೆಯಲ್ಲವೇ? ಹಾಗಾದರೆ ಒಟ್ಟಿನಲ್ಲಿ ಏನು ಸಾಧಿಸಿದ ಹಾಗಾಯಿತು? ಅದರಿಂದ ವಿಧವೆಯರಿಗೆ ಏನು ಲಾಭವಾದೀತು?
  • ಕುದ್ರೋಳಿ ದೇವಸ್ಥಾನದಲ್ಲಿ ವಿಧವೆಯರಿಗೆ ಸೀರೆ ಕೊಡುತ್ತಾರಂತೆ; ಅದು ಮುತ್ತೈದೆಯರು ತೆಗೆದುಕೊಳ್ಳುವ ಸೀರೆಯಲ್ಲ ಎನ್ನುವ ನಂಬಿಕೆ ಗಟ್ಟಿಯಾದಲ್ಲಿ ಅದರಿಂದ ಯಾವ ಸುಧಾರಣೆಯಾದೀತು ?

ಹೀಗಾಗಿ ಪೂಜಾರಿಯವರ ದೃಷ್ಟಿಕೋನ ಇತ್ಯಾತ್ಮಕವಾದುದಾದರೂ ಅದು ಒಟ್ಟಿನಲ್ಲಿ ಸಮಗ್ರತೆ ಹೊಂದಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸೀರೆ ವಿತರಣೆಯ ಸಂದರ್ಭದಲ್ಲಿ ಮುಖ್ಯವಾಹಿನಿಯ ಜತೆಗೆ ಅಂದರೆ ಮುತ್ತೈದೆಯರು, ಕನ್ಯಾಮುತ್ತೈದೆಯರ ಜೊತೆಜೊತೆಗೇ ವಿಧವೆಯರೂ ಸೇರಿ ಎಲ್ಲರೂ  ಒಟ್ಟಾಗಿ ಭಾಗವಹಿಸುವ  ಅವಕಾಶ ಕಲ್ಪಿಸಿದಾಗ ತಾರತಮ್ಯ ಮರೆಯಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆರಂಭಿಸುವಾಗ ಸಮಗ್ರ ಮತ್ತು ದೂರದೃಷ್ಟಿಕೋನದ ಅಗತ್ಯವಿದೆ. ಶೋಷಿತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉಮೇದಿನಲ್ಲಿ ಅದು ಶೋಷಿತರನ್ನು ಸಮಾಜದಲ್ಲಿ ಮತ್ತಷ್ಟು ಪ್ರತ್ಯೇಕಗೊಳಿಸಬಾರದು ಎನ್ನುವ ಸೂಕ್ಷ್ಮತೆ ಮತ್ತು ಎಚ್ಚರ ಇಂತಹ ಕಾರ್ಯಕ್ರಮಗಳನ್ನು ರೂಪಿಸುವಾಗ ಬೆಂಬಲವಾಗಿ ಇರಬೇಕಾಗುತ್ತದೆ.

ಏನೇ ಇದ್ದರೂ ಕಡು ಸಂಪ್ರದಾಯವಾದೀ ಊರಿನಲ್ಲಿ ಪೂಜಾರಿಯವರ ಹೆಜ್ಜೆ ಖಂಡಿತ ಶ್ಲಾಘನಾರ್ಹ. ನಿಯಮಗಳನ್ನು ಮುರಿದಾಗಿದೆ. ಹೊಸಿಲು ದಾಟಿಯಾಗಿದೆ. ಇನ್ನು ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ದೇವಸ್ಥಾನಗಳು, ಧರ್ಮಾಧಿಕಾರಿಗಳು ಮತ್ತು ಮಠಮಾನ್ಯಗ

ಳ ಕೈಯಲ್ಲಿದೆ. ರಾಜಕಾರಣಿಯಾಗಿ ಪೂಜಾರಿ ಸಾಮಾಜಿಕ ಬದ್ಧತೆಯಿಂದ ನೋಡಬಲ್ಲರಾದರೆ ಮಠಾಧಿಪತಿಗಳು ತಂತಮ್ಮ ಸಮುದಾಯ ಉದ್ಧಾರದ ನೆಪದಲ್ಲಾದರೂ ಹೊಸ ಹೆಜ್ಜೆ ಇಡುವುದಕ್ಕೆ ಇನ್ನಾದರೂ ಮುಂದಾಗಬೇಕುದ್ಎನಿಸುತ್ತದೆ.   ಕರಾವಳಿಯ ಧರ್ಮಾಧಿಕಾರಿಗಳು ಸೀರೆ ನೀಡುವ ಕಾರ್ಯಕ್ರಮದಲ್ಲಿ ವಿಧವೆಯರಿಗೆ ಇರುವ ನಿಷೇಧ ಇನ್ನಾದರೂ ತೆರವಾಗಬೇಕಾಗಿದೆ.

ಕೊನೆ ಮಾತು :  ಮಹಿಳೆಯರ ಸಬಲೀಕರಣ ಅಥವಾ ವಿಧವೆಯರ ವಿಮೋಚನೆ ಕೇವಲ ಸೀರೆ ವಿತರಣೆಯಿಂದಾಗಲೀ, ಹೂವು ಕುಂಕುಮಗಳಿಂದಾಲೀ ಆಗುವುದಿಲ್ಲ ಎನ್ನುವುದು ಬೇರೆ ಮಾತು.

2 comments

  1. ಈ ಕಾರ್ಯಕ್ರಮದ ಮಿತಿಗಳೇನೇ ಇರಲಿ, ಇಂತಹುದೊಂದು ಯೋಚನೆ ಮೂಡಿರುವುದು ಸ್ವಾಗತಾರ್ಹ. ಅದೂ ಇಂತಹ ಪ್ರಯತ್ನ ನಡೆದಿರುವುದು ನಾರಾಯಣ ಗುರು ತತ್ವಗಳನ್ನು ಅಪ್ಪಿಕೊಂಡಿರುವ ಸಮಾಜದಲ್ಲಿ. ಯಾವುದೇ ಇತರ ದೇವಸ್ಥಾನಗಳು, ಮಠಮಾನ್ಯಗಳು ವಿಧವೆಯರನ್ನು,ಬ್ರಾಹ್ಮಣೇತರರನ್ನು ಇನ್ನೂ ದೂರವೇ ಇಟ್ಟಿರುವಾಗ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ‘ಆರಂಭಿಕ ಪ್ರಯತ್ನ’ವಾಗಿ ಇವು ಬೇಕೇ ಬೇಕು. ಇದು ಮುಂದಿನ ಹಂತದಲ್ಲಿ ಇನ್ನಷ್ಟು ಪ್ರಗತಿಪರ ಆಲೋಚನೆ, ಕಾರ್ಯಯೋಜನೆಗಳಿಗೆ ಸೋಪಾನವಾಗಬಹುದು.
    -ಭಾರತೀದೇವಿ.ಪಿ

  2. ಧಾರ್ಮಿಕ ಪೀಠಗಳು, ಮಠಾಧಿಪತಿಗಳು, ಸ್ವಾಮೀಜಿಗಳು ಇವರೆಲ್ಲ ಇರುವುದು ಸಮಾಜದಲ್ಲಿ ಇರುವ ಕಂದಾಚಾರಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಅಥವಾ ಈಗಾಗಲೇ ಇರುವ ಅರ್ಥವಿಲ್ಲದ ಶಾಸ್ತ್ರಗಳನ್ನು, ಮೂಢನಂಬಿಕೆಗಳನ್ನು ಸಡಿಲವಾಗದಂತೆ ಕಾಯ್ದುಕೊಂಡು ಬರಲು ಎಂಬುದು ಅವರ ಕಾರ್ಯಕ್ರಮಗಳನ್ನು ನೋಡಿದರೆ ಗೊತ್ತಾಗುತ್ತದೆ. ಧಾರ್ಮಿಕ ಹಾಗು ಸಾಮಾಜಿಕ ಸುಧಾರಣೆಗಳಿಗೆ ಬಲಿಷ್ಥವಾದ ರಾಷ್ಟ್ರೀಯ ಸಂಘಟನೆಯೊಂದರ ಅಗತ್ಯ ಇದೆ. ಆದರೆ ಇಂದು ನಮ್ಮ ದೇಶದಲ್ಲಿ ಅಂಥ ಒಂದು ಬಲಿಷ್ಠ ಸಂಘಟನೆ ಇಲ್ಲ. ಇರುವ ಬಲಿಷ್ಠ ಸಂಘಟನೆಗಳು ಮೂಢ ನಂಬಿಕೆಗಳನ್ನು ಗಟ್ಟಿಗೊಳಿಸುವಲ್ಲಿ ಆಸಕ್ತವಾಗಿವೆಯೇ ಹೊರತು ಸುಧಾರಣೆಯಲ್ಲಿ ಆಸಕ್ತಿ ಹೊಂದಿಲ್ಲ.

Leave a Reply

Your email address will not be published.