Daily Archives: October 26, 2011

ಅಭಿಮಾನಿಗಳು ಮತ್ತು ಅವತಾರಗಳು

-ಡಾ.ಎನ್.ಜಗದೀಶ್ ಕೊಪ್ಪ

ಇದು ನಾವು ಬದುಕುತ್ತಿರವ ವರ್ತಮಾನದ ಸಮಾಜದ ಅಧೋಗತಿಯೋ? ಅಥವಾ ನಮ್ಮ ಜನಸಾಮಾನ್ಯರ ವೈಚಾರಿಕ ಪ್ರಜ್ಞೆಯ ದಾರಿದ್ರ್ಯವೋ? ಅರ್ಥವಾಗುತ್ತಿಲ್ಲ.. ಕಳೆದ 21 ರ ಶುಕ್ರವಾರ ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕಿನಕೆರೆಯ 20 ಮಂದಿ ಗ್ರಾಮಸ್ಥರು, ಯಡಿಯೂರಪ್ಪ ಅಭಿಮಾನಿಗಳು ಎಂಬ ಬ್ಯಾನರ್ ಅಡಿಯಲ್ಲಿ ಅಲ್ಲಿನ ಮಣ್ಣನ್ನು ತಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಾಗಿಲಿನಲ್ಲಿ ಕಾದಿದ್ದರು.
ಯಡಿಯೂರಪ್ಪನವರ ಕೈಯಲ್ಲಿ ಆ ಮಣ್ಣನ್ನು ಮುಟ್ಟಿಸಿ ನಂತರ ಹಂಚಿಕೊಳ್ಳುವ ಬಯಕೆ ಅವರದಾಗಿತ್ತು (ಬಹುಶಃ ತಿನ್ನಲಿಕ್ಕೆ ಇರಬಹುದು). ಈ ಅಂಧಾಭಿಮಾನವನ್ನು ಹೇಗೆಂದು ವ್ಯಾಖ್ಯಾನಿಸಲಿ? ನಾಡಿನಲ್ಲಿ ಕಣ್ಣೆದುರೇ ಕರಗಿ ಹೋಗುತ್ತಿರುವ ವೈಚಾರಿಕ ಪ್ರಜ್ಞೆಯ ದುರಂತವೆನ್ನಲೆ?

ತಲೆಯೆತ್ತುತ್ತಿರುವ ಮೂರನೇ ದರ್ಜೆಯ ಸಂಸ್ಕೃತಿಯೆದುರಿನ ನಮ್ಮ ಅಸಹಾಯಕತೆ ಎನ್ನಬೇಕೆ?
ಇತ್ತೀಚಿನ ದಿನಗಳಲ್ಲಿ ಯಾವುದೇ ರಂಗದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿಗಳ ಪಾಲಿಗೆ ಅಭಮಾನಿಗಳು ಎಂಬ ಸಂಗತಿ ವಿಮೋಚನೆಯಾಗದ ಶಾಪದಂತಾಗಿದೆ, ತನ್ನ ಅಭಿಮಾನಿಗಳನ್ನು ದೇವರೆಂದು ಕರೆದ ತಮ್ಮ ಬದುಕಿನುದ್ದಕ್ಕೂ ಆರಾಧಿಸಿದ ಡಾ. ರಾಜ್ ಕುಮಾರ್ ರವರಿಗೆ ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಈ  ಅಭಿಮಾನಿಗಳು ಕೊಟ್ಟ ಬಳುವಳಿ ಎಂತಹದ್ದು ಎಂಬುದು ಕನ್ನಡಿಗರೆಲ್ಲಾ  ಬಲ್ಲ ಸಂಗತಿ. ರಾಜ್ ಕುಟಂಬಕ್ಕೆ ಅಂತಿಮ ಗೌರವ ಸಲ್ಲಿಸಲು ಬಿಡದ ಇಂತಹ ಅಭಿಮಾನಿಗಳು ಜಗತ್ತಿನಲ್ಲಿ ಯಾರಿಗೂ ಬೇಡ ಎಂದು ಆ ಕ್ಷಣದಲ್ಲಿ ಎಲ್ಲರಿಗೂ ಅನಿಸಿದ್ದು ನಿಜ.
ಅಭಿಮಾನವೆಂಬುದು ವ್ಯಕ್ತಿಯೊಬ್ಬನ ಅನನ್ಯ ಸಾಧನೆ ಕುರಿತಂತೆ ಜನ ಸಾಮಾನ್ಯರ ಅಂತರಂಗದ ಆರಾಧನೆ ಹೊರತು, ಅದು ಬಹಿರಂಗ ಪ್ರದರ್ಶನವಲ್ಲ. ಸಂಗೀತ, ನೃತ್ಯ,  ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಹೀಗೆ ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪೂರ್ವ ಸಾಧನೆ ಮಾಡಿದವರನ್ನು ಮೆಚ್ಚುವುದು, ಅವರ ಬದ್ಧತೆಯ ಬಗ್ಗೆ ಶ್ಲಾಘನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂಸ್ಕೃತಿಕ ಅಭಿರುಚಿ, ಇಂತಹ ಅಭಿಮಾನ ಸಾಧಕರಿಗೆ ತಾವು ಸಾಗುತ್ತಿರುವ ಮಾರ್ಗದಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ತಂದುಕೊಡುವಂತಹದ್ದು..
ಆದರೆ ಇಂದು ನಮ್ಮ ಮುಂದೆ ನಡೆಯುತ್ತಿರುವುದು ದಿಢೀರನೆ ಹುಟ್ಟಿಕೊಂಡ ಕಟೌಟ್ ಹಾಗೂ ಫ್ಲೆಕ್ಸ್ ಸಂಸ್ಕೃತಿಯ  ನಾಯಕರ ಕುರುಡು ಆರಾಧನೆ ಮಾತ್ರ. ಇದು ಸಾಮಾಜಿಕ ಬದುಕಿನ ಸ್ವಾಸ್ಥವನ್ನು ಕೆಡಿಸುವಂತಿದೆ. ಈ ಸಮಾಜಕ್ಕೆ, ಈ ನಾಡಿಗೆ, ಅಥವಾ ಈ ನೆಲಕ್ಕೆ ಈ ರೀತಿಯ ಹುಸಿ ಸಂಸ್ಕೃತಿಯ ನಾಯಕರ ಕೊಡುಗೆ ಏನು? ಅವರ ಅಭಿಮಾನಿಗಳು ಎನಿಸಿಕೊಂಡವರಿಗೂ ಸಹ ಉತ್ತರ ಗೊತ್ತಿಲ್ಲ. ಏಕೆಂದರೆ ಅಭಿಮಾನಗಳ ಸಂಘ ಎಂಬುದು ಕೆಲವರ ಪಾಲಿಗೆ ಲಾಭದಾಯಕ ದಂಧೆಯಾಗಿದೆ.
ಸುಮ್ಮನೆ ಹಾಗೆ ಈ ಪಟ್ಟಿ ಗಮನಿಸಿ, ಯಡಿಯೂರಪ್ಪ ಅಭಿಮಾನಿಗಳಸಂಘ, ವಿದಾನಸೌಧದ ಕಚೇರಿಯಲ್ಲಿ ಸಚಿವ ಸೋಮಣ್ಣ ಪಕ್ಷದ ಕಾರ್ಯಕರ್ತನಿಂದ ಚಪ್ಪಲಿ ಏಟು ತಿಂದದ್ದಕ್ಕೆ, ಪ್ರತಿಭಟಿಸುವ ಸಲುವಾಗಿ ಹುಟ್ಟಿಕೊಂಡ ಸೋಮಣ್ಣ ಅಭಿಮಾನಿಗಳ ಸಂಘ, ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ, ರೇಣುಕಾಚಾರ್ಯ ಅಭಿಮಾನಿಗಳ ಸಂಘ (ಈ ಸಂಘ ಈ ಬಾರಿಯ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಬ್ಯಾನರ್ ಹಿಡಿದು  ಕಲಾವಿದರ ಜೊತೆ  ಸಾಗಿತು.) ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅಭಿಮಾನಿಗಳ ಸಂಘ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ, ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ, ಈ ಪಟ್ಟಿಯನ್ನು ನೀವು ರಾಜ್ಯದ ಎಲ್ಲಾ ಶಾಸಕರಿಗೆ, ಸಚಿವರಿಗೆ ಮತ್ತು ಸಂಸದರಿಗೂ ಅನ್ವಯಿಸಬಹುದು. ಯಾವ ಪುರುಷಾರ್ಥಕ್ಕೆ ಈ ಅಭಿಮಾನಿಗಳ ಸಂಘಗಳು?
ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲುಪಾಲಾದ ನಟನೊಬ್ಬನಿಗೆ ಗುಡಿ ಗೋಪುರಗಳ ಮುಂದೆ ಕಾಯಿ ಹೊಡೆದು ಕ ರ್ಪೂರ ಹಚ್ಚಿದ, ಕಣ್ಣೀರ ಧಾರೆ ಸುರಿಸಿದ ಅಭಿಮಾನಿಗಳನ್ನು ನೀವೆಲ್ಲಾ ಗಮನಿಸಿದ್ದೀರಿ ಇದು ಈ ನಾಡಿನ ಸಾಮಾಜಿಕ ಅಥವಾ ಸಾಂಸ್ಕೃತಿಕ ಲೋಕದ  ಬದುಕು ಅಧಃಪತನದ ಪಾತಾಳಕ್ಕೆ ಇಳಿದಿರುವ ಸಂಕೇತವೆ  ಎಂಬುದರ ಕುರಿತು ನಾಡಿನ ಎಲ್ಲಾ ಪ್ರಜ್ಞಾವಂತರು ಗಂಭೀರವಾಗಿ ಆಲೋಚಿಸಬೇಕಾದ ವಿಷಯ.
ಮನುಷ್ಯನೊಬ್ಬನ ವರ್ತನೆಯ  ತಿಕ್ಕಲುತನದ ಪರಮಾವಧಿ ಎನ್ನಬಹುದಾದ ಈ ಅತಿರೇಕ ಹುಟ್ಟಿಕೊಂಡದ್ದು ನಮ್ಮ ನೆರೆಯ ತಮಿಳುನಾಡಿನಲ್ಲಿ. 1950ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯನ್ನು ರಾಮಸ್ವಾಮಿ ಪೆರಿಯಾರ್ ಹುಟ್ಟುಹಾಕಿದ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಪಳಗಿ  ಪ್ರವರ್ಧಮಾನಕ್ಕೆ ಬಂದ ಸಿ.ಎನ್. ಅಣ್ಣಾದೊರೆ, ಮತ್ತು ಎಂ. ಕರುಣಾನಿಧಿ ತಮ್ಮ ಅಸ್ಖಲಿತ ಹಾಗೂ ಅದ್ಘುತ ತಮಿಳು ಭಾಷಣಗಳಿಂದ ಅಲ್ಲಿನ ಜನರ ಮನಗೆದ್ದರು, ಇದೇ ವೇಳೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಹೇರಿದ್ದನ್ನು ತೀವ್ರವಾಗಿ ಖಂಡಿಸಿ, ತಮಿಳು ಭಾಷೆ, ಸಂಸ್ಕೃತಿ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದರು. ಜೊತೆಗೆ ಈ ಇಬ್ಬರು ನಾಯಕರು ತಮಿಳು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದರ ಮೂಲಕ ಚಳುವಳಿಯ ಸಂದೇಶಗಳನ್ನು ತಮಿಳರ ಮನಮುಟ್ಟುವಂತೆ ಮಾಡಿದರು. ಇವರ ಎಲ್ಲಾ ಸಿನಿಮಾಗಳಿಗೆ ಎಂ.ಜಿ.ರಾಮಚಂದ್ರನ್ ನಾಯಕನಾದದ್ದು ವಿಶéೇಷ. ಇದು ಅಲ್ಲಿನ ಜನರಲ್ಲಿ ನಾಯಕರ ಬಗ್ಗೆ ಅಭಿಮಾನ ಬೆಳೆಯಲು ಕಾರಣವಾಯಿತು. ಇವರ ಈ ಹೋರಾಟ 1967ರಲ್ಲಿ ತಮಿಳುನಾಡಿನಲ್ಲಿ ಪ್ರಪಥಮ ಬಾರಿಗೆ ಕಾಂಗ್ರೇಸೇತರ ಡಿ.ಎಂ.ಕೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿ, ಅಣ್ಣಾದೊರೆ ಮುಖ್ಯಮಂತ್ರಿಯಾದರು. ಆದರೆ ಕೇವಲ ಎರಡು ವರ್ಷದಲ್ಲಿ ಅಂದರೆ 1969ರಲ್ಲಿ ಅಣ್ಣಾದೊರೆ ಆಕಸ್ಮಿಕವಾಗಿ ನಿಧನರಾದಾಗ 26 ಮಂದಿ ತಮಿಳು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 12 ಮಂದಿ ಚಲಿಸುವ ರೈಲಿನಿಂದ ಬಿದ್ದು ಸಾವಿಗೆ ಶರಣಾಗಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಅಂದಿನ ಮದ್ರಾಸ್ ನಗರದ ಮೆರೀನಾ ಬೀಚ್ ಬಳಿ 14 ಲಕ್ಷ ಅಭಿಮಾನಿಗಳು ಸೇರಿದ್ದು ಇಂದಿಗೂ ವಿಶ್ವದಾಖಲೆ.

ಇದೇ ಪರಂಪರೆ 1987ರಲ್ಲಿ ನಟ ಹಾಗೂ ತಮಿಳುನಾಡಿನ  ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ನಿಧನರಾದಾಗ ಮುಂದುವರೆದು 19 ಮಂದಿ ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 7 ಮಂದಿ ಸೀಮೆಎಣ್ಣೆ ಸುರಿದುಕೊಂಡು ಸಾವನ್ನಪ್ಪಿದರು. ಇಂತಹ ಅತಿರೇಕದ ಅಭಿಮಾನ ಸಿನಿಮಾ ನಟರ ಮೂಲಕ ಮುಂದುವರಿದು, ಅದು ಕನರ್ಾಟಕದಲ್ಲೂ ಹುಚ್ಚು ಹೊಳೆಯಾಗಿ ಹರಿಯುತ್ತಾ ಇದೀಗ ನಮ್ಮ ನಟರುಗಳನ್ನು ಮತ್ತು ರಾಜಕೀಯ ನಾಯಕರನ್ನು ಆವರಿಸಿಕೊಂಡಿದೆ. ಅಭಿಮಾನಿ ಸಂಘವನ್ನು ನೇರವಾಗಿ ತಿರಸ್ಕರಿದ ಏಕೈಕ ದಕ್ಷಿಣಭಾರತದ ನಟನೆಂದರೆ, ಕಮಲ್ ಹಾಸನ್ ಮಾತ್ರ. ಇಂತಹ ವಿವೇಚನೆ ನಮ್ಮ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ. ಜೊತೆಗೆ ಈ ಅಭಿಮಾನಿಗಳ ಅತಿರೇಕಗಳನ್ನು ರೋಚಕತೆಯಿಂದ ಬಿಂಬಿಸುವ ನಮ್ಮ ದೃಶ್ಯ ಮಾಧ್ಯಮಗಳು ಕೂಡ ಒಮ್ಮೆ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಕೆಂಪು ದೀಪದ ಗೂಟದ ಕಾರಿನ ನೆಪದಲ್ಲಿ..

– ಚಿದಂಬರ ಬೈಕಂಪಾಡಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕೆಲವರಿಗೆ ಅದೇನೋ ಒಂಥಾರಾ… ಅನ್ನಿಸುತ್ತಿರಬೇಕಲ್ಲವೇ?. ನಗೆಯ ಮೂಲಕವೇ ಎಲ್ಲರನ್ನೂ ಗೆಲ್ಲುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುವ ಸದಾನಂದ ಗೌಡರು ಇಡುತ್ತಿರುವ ಒಂದೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಪಕ್ಷ ರಾಜಕಾರಣ ಅದೇನೇ ಇದ್ದರೂ ಮುಖ್ಯಮಂತ್ರಿಯಾಗಿ ಅವರು ಕರ್ನಾಟಕವನ್ನು ಹೇಗೆ ಮುನ್ನಡೆಸುತ್ತಾರೆನ್ನುವುದು ಬಹುಮುಖ್ಯವಾಗುತ್ತದೆ.

ನೆನೆಪಿರಬಹುದು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಿನ ಪಂಚಾಯತ್‌ರಾಜ್ ವ್ಯವಸ್ಥೆ ಅವರ ನಿಧನದ ನಂತರ ಹೇಗಾಗಿಹೋಯಿತು ಎನ್ನುವುದು.
ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಕನಸುಕಂಡ ದಿವಂಗತ ರಾಮಕೃಷ್ಣ ಹೆಗಡೆಯವರಿಗೆ ಸಾಥ್ ನೀಡಿದ ದಿವಂಗತ ಅಬ್ದುಲ್ ನಜೀರ್ ಸಾಬ್ ಯಾನೇ ನೀರು ಸಾಬ್ ನಂತರ ಪಂಚಾಯತ್‌ರಾಜ್ ವ್ಯವಸ್ಥೆ ಮೊನಚುಕಳೆದುಕೊಂಡು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾಗಿದೆ.

ಯಾಕಿಷ್ಟು ಪೀಠಿಕೆಯೆಂದರೆ ಮೊನ್ನೆ ತಾನೇ ಬೆಂಗಳೂರಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಸಭೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರಗಿದಾಗ ಗಮನ ಸೆಳೆದ ಒಂದು ಬೇಡಿಕೆ. ‘ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಕಾರಿಗೆ ಕೆಂಪು ದೀಪ ಅಳವಡಿಸಲು ಅನುಮತಿ ಕೊಡಬೇಕು’ ಎನ್ನುವುದು. ಸಭೆಯ ಕಲಾಪವನ್ನು
ಟಿವಿಯಲ್ಲಿ ಗಮನಿಸುತ್ತಿದ್ದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಾತನಾಡುತ್ತಾ (ನಗು ನಗುತ್ತಲೇ) ‘ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೆಂಪುದೀಪವಿರುವ ಗೂಟದ ಕಾರು ಬೇಕೆನ್ನುತ್ತಿದ್ದಾರೆ. ನಿಜ, ಗೂಟದ ಕಾರಲ್ಲಿ ತಿರುಗಾಡಬೇಕೆನ್ನುವ ಆಸೆ ಅವರಿಗಿದೆ, ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರ ಕಾರುಗಳಿಗೆ ಕೆಂಪು
ದೀಪ ಅಳವಡಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಕೆಲಸ ಕಾರ್ಯಗಳನ್ನು ಮಾಡಲಾಗುವುದು’. ಮುಂದೆ ಟಿವಿ ವಾರ್ತಾ ವಾಚಕಿಯ ಮುಖ-ಧ್ವನಿ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗ ೧೯೮೭ರಲ್ಲಿ ಜ್ಯಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಕೆಂಪು ದೀಪ ಅಳವಡಿಸಿದ, ಜಿಲ್ಲಾಪಂಚಾಯತ್ ಲೋಗೋ ಇರುವ ಬಾವುಟ ಸಿಕ್ಕಿಸಿಕೊಂಡ ಗೂಟದ ಕಾರಿತ್ತು. ರಾಜ್ಯ ಸಚಿವರಿಗಿರುವ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದ್ದರು. ಹಳ್ಳಿಯ ಕಿರಿದಾದ ರಸ್ತೆಗಳಲ್ಲಿ ಕೆಂಪುದೀಪದ ಗೂಟದ ಕಾರು ಕಂಡು ಮಕ್ಕಳು ರೋಮಾಂಚನಗೊಳ್ಳುತ್ತಿದ್ದರು. ಕಾರು ನಿಂತ ಕೂಡಲೇ ಕಾರಿನ ಬಾಗಿಲು ತೆರೆಯಲು ಹಳ್ಳಿಯ ಪುಢಾರಿಗಳು ಮುಗಿಬೀಳುತ್ತಿದ್ದರು. ಜಿಲ್ಲಾಪಂಚಾಯತ್ ಅಧ್ಯಕ್ಷರು ಕಾರಿನಿಂದ ಇಳಿಯುತ್ತಿದ್ದಂತೆಯೇ ಜಿಲ್ಲಾಮಂತ್ರಿಗೆ ಅದ್ದೂರಿ ಸ್ವಾಗತ ನೀಡಲಾಗುತ್ತಿತ್ತು.

ಜಿಲ್ಲಾಪಂಚಾಯತ್ ಅಧ್ಯಕ್ಷರೆಂದರೆ ಜಿಲ್ಲೆಯ ಪ್ರಥಮಪ್ರಜೆ. ಪ್ರೊಟೋಕಾಲ್ ಪ್ರಕಾರ ಅವರಿಗೆ ಗಣ್ಯರನ್ನು ಬರಮಾಡಿಕೊಳ್ಳಲು ಅವಕಾಶವಿತ್ತು. ಹಿರಿಯ ಐಎಎಸ್  ಅಧಿಕಾರಿ ಮುಖ್ಯಕಾರ್ಯದರ್ಶಿಯಾಗಿದ್ದರು. ಜಿಲ್ಲಾಪಂಚಾಯತ್ ವ್ಯಾಪ್ತಿಗೆ ಬರುವ ಅಧಿಕಾರಿಗಳು, ಸಿಬ್ಬಂಧಿಗಳಿಗೆ ರಜೆ ಮಂಜೂರುಮಾಡುವ ಅಧಿಕಾರ ಜಿಲ್ಲಾಪಂಚಾಯತ್ ಅಧ್ಯಕ್ಷರಿಗಿತ್ತು. ಶಿಕ್ಷಕರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಡಿಎಲ್‌ಆರ್‌ಸಿ ಸಮಿತಿ ಅಸ್ತಿತ್ವದಲ್ಲಿತ್ತು. ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ರಸ್ತೆ, ಚರಂಡಿ, ಡಾಮರೀಕರಣ, ಕಿಂಡಿ ಅಣೆಕಟ್ಟು, ಕೊಳವೇ ಬಾವಿ ಕೊರೆಯುವುದು, ನೀರು ಸರಬರಾಜು ಮಾಡುವುದು ಇತ್ಯಾದಿ..ಇತ್ಯಾದಿಗಳೆಲ್ಲವೂ ಜಿಲ್ಲಾಪಂಚಾಯತ್ ಸದಸ್ಯರ ಸಲಹೆ ಆಧರಿಸಿ ಅನುಷ್ಠಾನಕ್ಕೆ ತರುವ ಅವಕಾಶವಿತ್ತು, ಎಲ್ಲದಕ್ಕೂ ಜಿಲ್ಲಾಪಂಚಾಯತ್‌ಗೇ ಪರಮಾಧಿಕಾರ.

ಜಿಲ್ಲಾಪಂಚಾಯತ್ ಸಭೆ ತೆಗೆದುಕೊಂಡ ನಿರ್ಣಯವನ್ನು ಜ್ಯಾರಿಗೆ ತರಲು ಮುಖ್ಯಕಾರ್ಯದರ್ಶಿ (ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಬದ್ಧರಿದ್ದರು. ಸರ್ಕಾರದ ಗಮನಕ್ಕೆ ತರಬಹುದು. ಸರ್ಕಾರದ ಯಾವುದೇ ಸುತ್ತೋಲೆಗಳು, ಆದೇಶಗಳು ಜಿಲ್ಲಾಪಂಚಾಯತ್ ಮೇಲೆ ಸವಾರಿ ಮಾಡುವಂತಿರಲಿಲ್ಲ. ಶಾಸಕರು ಜಿಲ್ಲಾಪಂಚಾಯತ್ ಸಭೆಗೆ ಕಾಯಂ ಆಹ್ವಾನಿತರು. ಶಾಸಕರು ಸಲಹೆ ಕೊಡಬಹುದು ಹೊರತು ಜಿಲ್ಲಾಪಂಚಾಯತ್ ಸದಸ್ಯರ ಭಾವನೆಗಳಿಗೆ ವಿರೋಧ ಮಾಡುವಂತಿಲ್ಲ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ.

ಇದು ಗಾಂಧಿ ಕಂಡಿದ್ದ ರಾಮರಾಜ್ಯ, ಜನರ ಕೈಗೇ ಅಧಿಕಾರ ಎನ್ನುವ ನಿಜವಾದ ಅರ್ಥ. ಆರುತಿಂಗಳಿಗೊಮ್ಮೆ ಕಡ್ಡಾಯವಾಗಿ ಗ್ರಾಮ ಸಭೆ ನಡೆಯಬೇಕು, ಆ ಸಭೆಯಲ್ಲಿಯೇ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆಮಾಡಬೇಕು. ಈ ಕಾರಣಕ್ಕಾಗಿಯೇ ಅಂದು ಜಿಲ್ಲಾಪಂಚಾಯತ್ ಸದಸ್ಯರ ಮನೆ ಮುಂದೆ ಬೆಳಗಾಗುವ ಮುನ್ನವೇ ಜನಜಂಗುಳಿ ಇರುತ್ತಿತ್ತು. ಶಾಸಕರು ಹಳ್ಳಿಯ ಜನರಿಗೆ ಅನಿವಾರ್ಯವಾಗಿರಲಿಲ್ಲ. ಅವರಿಗೆ ಜಿಲ್ಲಾಪಂಚಾಯತ್ ಸದಸ್ಯನೇ ಶಾಸಕ, ಜಿಲ್ಲಾಪಂಚಾಯತ್ ಅಧ್ಯಕ್ಷರೇ ಜಿಲ್ಲೆಯ ಮುಖ್ಯಮಂತ್ರಿ.

ಓರ್ವ ಸಾಮಾನ್ಯ ವರದಿಗಾರನಾಗಿ ನಾನು ಜಿಲ್ಲಾಪಂಚಾಯತ್ ಕಾರ್ಯಕಲಾಪಗಳನ್ನು ಅಂದು ಹತ್ತಿರದಿಂದ ಕಂಡು ಅನುಭವಿಸಿದ ಸಂಗತಿಗಳು. ಜಿಲ್ಲಾಪಂಚಾಯತ್ ಸಭೆಗೆ ಬರುವವರು ಅಧ್ಯಕ್ಷರಿಗೆ ಕೈಜೋಡಿಸಿ ವಂದಿಸಿ ಸಭಾಂಗಣ ಪ್ರವೇಶಿಸಬೇಕು, ಹೋಗುವಾಗಲೂ ಹಾಗೆಯೇ ಕೈಮುಗಿದು ನಿರ್ಗಮಿಸಬೇಕು. ವಿಧಾನ ಸಭಾ ಕಲಾಪಗಳ ಪಡಿಯಚ್ಚು ಅಂದಿನ ಜಿಲ್ಲಾಪಂಚಾಯತ್ ಸಭೆಗಳು.

ಅಂದಿನ ದಿನಗಳಲ್ಲಿ ಜಿಲ್ಲಾಪಂಚಾಯತ್ ಸದಸ್ಯರ ವಾದವೈಖರಿ, ವಿಷಯ ಮಂಡನೆ ವಿಧಾಸಭೆಯೊಳಗಿನ ಕಲಾಪದಂತೆಯೇ (ಹಿಂದಿನ ವಿಧಾನ ಸಭೆಯ ಕಲಾಪ- ಇಂದಿನದ್ದಲ್ಲ) ಇರುತ್ತಿತ್ತು. ಪಕ್ಷ ರಾಜಕಾರಣಕ್ಕೆ ಅವಕಾಶವಿರಲಿಲ್ಲ, ಅಭಿವೃದ್ಧಿ ಹೇಗೆ ?, ಎಲ್ಲಿ ಆಗಬೇಕು ?, ಯಾವ ರೀತಿ ಮಾಡಬೇಕು ?, ಅದರಿಂದ ಹಳ್ಳಿಯ
ಜನರಿಗೆ ಆಗುವ ಪ್ರಯೋಜನ ಎಷ್ಟು ?- ಇವುಗಳ ಸುತ್ತಲೇ ಚರ್ಚೆ ಇರುತ್ತಿತ್ತು.

ಈಗ ಹಿಂದಿನ ಜಿಲ್ಲಾಪಂಚಾಯತ್ ಒಂದು ನೆನಪು ಮಾತ್ರ. ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಅವರ ಕಲ್ಪನೆಯ ಜಿಲ್ಲಾಪಂಚಾಯತ್ ಕಳೆದುಹೋಗಿದೆ. ಸರ್ಕಾರದ ಕಪಿಮುಷ್ಠಿಯಲ್ಲಿ ಜಿಲ್ಲಾಪಂಚಾಯತ್ ನಲುಗುತ್ತಿದೆ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಎಷ್ಟು ಬೆಲೆ ಇದೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಸರ್ಕಾರದ ಸುತ್ತೋಲೆ, ಆದೇಶಗಳೇ ಮುಖ್ಯ ಹೊರತು ಸದಸ್ಯರ ಭಾವನೆಗೆ ಈಗ ಕವಡೆ ಕಿಮ್ಮತ್ತು ಇಲ್ಲ.

ಆದ್ದರಿಂದ ಈಗ ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೇಳುತ್ತಿರುವ ಕೆಂಪು ದೀಪದ ಗೂಟದ ಕಾರು ಕೊಡುವುದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿ ಕಷ್ಟವಾಗುವುದಿಲ್ಲ. ಆದರೆ ಇಂಥ ಬೇಡಿಕೆಯಿಟ್ಟು, ಅದು ಈಡೇರಿದರೆ ಸಂತೃಪ್ತರಾಗಿ ಬಿಡುವ  ಅಧ್ಯಕ್ಷರುಗಳಿಗೆ ಒಂದೇ ಒಂದು ಪ್ರಶ್ನೆ ನೀವು ಕೆಂಪುದೀಪದ ಗೂಟದ ಕಾರಿನಲ್ಲಿ ಸುತ್ತಾಡಿದರೆ ಹಳ್ಳಿ ಉದ್ಧಾರವಾಗುವುದೇ?

ನಿಮಗೆ ಸ್ವತಂತ್ರ ಅಧಿಕಾರಬೇಡವೇ ? ಎಲ್ಲಿ ರಸ್ತೆಯಾಗಬೇಕು, ಎಲ್ಲಿ ಚರಂಡಿಯಾಗಬೇಕೆಂದು ನಿರ್ಧರಿಸುವ ಅಧಿಕಾರ ನಿಮಗಿದೆಯೇ? ಜಿಲ್ಲಾಪಂಚಾಯತ್ ಸಭೆಯಲ್ಲಿ ನೀವು ಮಾಡಿದ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೈತೊಳೆದುಕೊಳ್ಳುತ್ತಾರೆ, ಸರ್ಕಾರದ ಸುತ್ತೋಲೆ, ಆದೇಶಗಳನ್ನು ಭಗವದ್ಗೀತೆಯಂತೆ ಕಾಣುತ್ತಾರಲ್ಲಾ ನಿಮ್ಮ ಧ್ವನಿಗೇನು ಬೆಲೆ ಇದೆ ?

ರಾಜ್ಯ ಸರ್ಕಾರದ ಅನುದಾನವನ್ನು ಸದಸ್ಯರಾದವರು ತಮ್ಮ ಕ್ಷೇತ್ರಗಳಿಗೆ ನೇರವಾಗಿ ಹಂಚಿಕೆ ಮಾಡಿಸಿಕೊಳ್ಳಲು ಸಾಧ್ಯವೇ ? ಅಧ್ಯಕ್ಷರೇ ನಿಮ್ಮ ಜಿಲ್ಲಾಪಂಚಾಯತ್‌ನಲ್ಲಿ ಸಾಮಾನ್ಯ ಸಿಬ್ಬಂದಿಯ ಮೇಲೆ ಕ್ರಮ ಜರಗಿಸುವ ಅಧಿಕಾರವಿದೆಯೇ ನಿಮಗೆ ?
ಮುಖ್ಯಮಂತ್ರಿ ಸದಾನಂದ ಗೌಡರು ನಗುನಗುತ್ತಲೇ ಗೂಟದ ಕಾರು ಒದಗಿಸುವ ಸುಳಿವು ಕೊಟ್ಟರು, ಅಧ್ಯಕ್ಷರು ಖುಷಿಯಾದರು, ನನಗೂ ಖುಷಿ. ಆದರೆ ಕಳೆದುಹೋದ ಜಿಲ್ಲಾಪಂಚಾಯತ್ ವ್ಯವಸ್ಥೆಯ ಬಗ್ಗೆ ನೋವಿದೆ.

ಹೊಸದಿಕ್ಕಿನತ್ತ ನಾಡನ್ನು ಮುನ್ನಡೆಸುವ, ರಾಜ್ಯವನ್ನು ಕಟ್ಟಿಬೆಳೆಸುವ ಸಂಕಲ್ಪ ಮಾಡಿರುವ ಸದಾನಂದ ಗೌಡರಿಗೆ, ಕಳೆದುಹೋಗಿರುವ ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಹುಟ್ಟುಹಾಕಿದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹುಡುಕಿಕೊಡಲು ಸಾಧ್ಯವೇ ? ಹೆಗಡೆ, ನಜೀರ್ ಸಾಬ್ ಈಗಲೂ ಹಳ್ಳಿಯ ಜನರಿಗೆ ನೆನಪಾಗುತ್ತಾರೆ ಯಾಕೆಂದರೆ ಅವರು ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ. ಮಂಡೆಕೋಲಿನಂಥ ಕುಗ್ರಾಮದಲ್ಲಿ ಜನಿಸಿ ವಿಧಾನ ಸೌಧದ ಸೂತ್ರಹಿಡಿದಿರುವ ಈ ಕಾಲಘಟ್ಟದಲ್ಲಿ ಹಳ್ಳಿಯ ಜನರ ಪರವಾಗಿ ಒಂದೇ ಒಂದು ಬೇಡಿಕೆ ಜನರ ಕೈಗೆ ನಿಜವಾದ ಅಧಿಕಾರ ಕೊಡಿ, ಸಾಧ್ಯವೇ ?