Daily Archives: October 30, 2011

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 9

-ಡಾ.ಎನ್.ಜಗದೀಶ್ ಕೊಪ್ಪ

ಅಣೆಕಟ್ಟುಗಳು ಜಗತ್ತಿನೆಲ್ಲೆಡೆ ನದಿಗಳನ್ನು ಮಾತ್ರ ಕೊಲ್ಲಲಿಲ್ಲ. ಇದರ ಜೊತೆಜೊತೆಗೆ ಮನುಕುಲದ ಪೂವರ್ಿಕರು ಎಂದೇ ಜಾಗತಿಕ ಸಮುದಾಯ ನಂಬಿಕೊಂಡು ಬಂದಿದ್ದ, ಅರಣ್ಯವಾಸಿಗಳಾದ ಆದಿವಾಸಿ ಬುಡಕಟ್ಟು ಜನಾಂಗವನ್ನು ಕೂಡ ಹೇಳ ಹಸರಿಲ್ಲದಂತೆ ನಿರ್ನಾಮ ಮಾಡಿದವು.

ಅಣೆಕಟ್ಟುಗಳ ನಿಮರ್ಾಣದ ಇತಿಹಾಸದಲ್ಲಿ, ಗ್ವಾಟೆಮಾಲದಲ್ಲಿ ನಡೆದ ನರಮೇಧ ನಾಗರಿಕ ಜಗತ್ತು ತಲೆ ತಗ್ಗಿಸುವಂತಹದ್ದು. 1980ರ ದಶಕದಲ್ಲಿ ನಡೆದ ಈ ದುರಂತ ಘಟನೆ, ಅಭಿವೃದ್ಧಿಯ ವಾರಸುದಾರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿ ದಾಖಲಾಗಿದೆ.

ಗ್ವಾಟೆಮಾಲದ ರಿಯೊನಿಗ್ರೊ ಎಂಬ ಅರಣ್ಯದಲ್ಲಿನ ಆದಿವಾಸಿಗಳ ವಸತಿ ಪ್ರದೇಶದಲ್ಲಿ ನಡೆದ 376 ಮಂದಿಯ (ಮಹಿಳೆಯರೂ, ಪುರುಷರು, ಮಕ್ಕಳೂ ಸೇರಿದಂತೆ) ನರಮೇಧ ಅಲ್ಲಿನ ಮಾಯ ಅಚಿ ಎಂಬ ಬುಡಕಟ್ಟು ಜನಾಂಗಕ್ಕೆ ಇಂದಿಗೂ ದುಸ್ವಪ್ನವಾಗಿ ಕಾಡುತ್ತಿದೆ.

ವಿಶ್ವಬ್ಯಾಂಕ್, ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಇಟಲಿ ಸರಕಾರದ ಧನ ಸಹಾಯದೊಂದಿಗೆ ಗ್ವಾಟೆಮಾಲ ಸರಕಾರ ಚಿಕ್ಸೊಯ್ ಅಣೆಕಟ್ಟು ನಿಮರ್ಿಸಲು 1976 ರಲ್ಲಿ ಯೋಜನೆ ರೂಪಿಸಿದಾಗ ನರಮೇಧದ ಅಧ್ಯಾಯ ಪ್ರಾರಂಭವಾಯಿತು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe1976 ರಲ್ಲಿ ಸರಕಾರದ ಅಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆಯ ಇಂಜಿನಿಯರ್ಗಳು ನೇರವಾಗಿ ಹೆಲಿಕಾಪ್ಟರ್ನಲ್ಲಿ ರಿಯೊನಿಗ್ರೊ ಗ್ರಾಮಕ್ಕೆ ಬಂದಿಳಿದು, ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಎಲ್ಲರೂ ಜಾಗ ಖಾಲಿ ಮಾಡಬೇಕು ಎಂದು ಹೇಳಿದಾಗಲೇ ಸರಕಾರ ಮತ್ತು ಆದಿವಾಸಿಗಳ ನಡುವೆ ಸಂಘರ್ಷ ಶುರುವಾಯಿತು. ಸರಕಾರವು ಇವರಿಗೆ ಕೊಡಲು ನಿರ್ಧರಿಸಿದ ಪರಿಹಾರದ ಮೊತ್ತ, ಹೊಸದಾಗಿ ತೋರಿಸಿದ ಸ್ಥಳದ ಬಗ್ಗೆ ಅತೃಪ್ತಿಗೊಂಡ ಅಲ್ಲಿನ ಮೂಲನಿವಾಸಿಗಳು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಹಲವಾರು ಬಾರಿ ನಡೆದ ಸಂಧಾನ ಸಭೆಗಳು ವಿಫಲಗೊಂಡ ನಂತರ ಸರಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಯಿತು. ಇದಕ್ಕಾಗಿ ಸರಕಾರ ತುಳಿದ ಹಾದಿ ಮಾತ್ರ ಅನೈತಿಕ ಮಾರ್ಗವಾಗಿತ್ತು. ನಿರಂತರ 4 ವರ್ಷಗಳ ಸಂಘರ್ಷಣೆಯ ನಂತರ, ಸರಕಾರ ಗ್ವಾಟೆಮಾಲದಲ್ಲಿ ನಡೆಯುತ್ತಿದ್ದ ಗೆರಿಲ್ಲಾ ಬಂಡುಕೋರರಿಗೆ ಆಹಾರ, ಆಶ್ರಯ ನೀಡುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಮೂಲನಿವಾಸಿಗಳಿಗೂ ಬಂಡುಕೋರರು ಎಂಬ ಹಣೆಪಟ್ಟಿ ಹಚ್ಚಿತು.

1980ರ ಮಾರ್ಚ್ ತಿಂಗಳಲ್ಲಿ ಆದಿವಾಸಿಗಳ ಗ್ರಾಮಕ್ಕೆ ಬಂದ ಮೂವರು ಮಿಲಿಟರಿ ಪೋಲೀಸರು, ಅಣೆಕಟ್ಟು ನಿಮರ್ಾಣದ ಸ್ಥಳದಿಂದ ಕಬ್ಬಿಣ ಕಳುವಾಗಿದೆ ಎಂಬ ನೆಪದಲ್ಲಿ ಕೆಲವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಬಂಧನಕ್ಕೆ ವಿರೋಧ ವ್ಯಕ್ತ ಪಡಿಸಿದ ನಿವಾಸಿಗಳು ಪ್ರತಿದಾಳಿ ನಡೆಸಿದರು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಓರ್ವ ಪೋಲೀಸ್ ನದಿಯಲ್ಲಿ ಮುಳುಗಿ ಸತ್ತ.

ಈ ಘಟನೆಯ ನಂತರ, ನಾಲ್ಕು ತಿಂಗಳ ಕಾಲ ತಣ್ಣಗಿದ್ದ ಸರಕಾರ ಮತ್ತೆ ಸಂಧಾನದ ನೆಪದಲ್ಲಿ, ಇಬ್ಬರು ಬುಡಕಟ್ಟು ಜನಾಂಗದ ನಾಯಕರನ್ನು ತಮ್ಮ ದಾಖಲೆಗಳ ಸಮೇತ ಅಣೆಕಟ್ಟು ಸ್ಥಳಕ್ಕೆ ಬರಲು ಆಹ್ವಾನಿಸಿತು. ಅವರಿಂದ ಬಲವಂತವಾಗಿ ಸಹಿ ಪಡೆದ ಸರಕಾರ, ಆ ಇಬ್ಬರು ನಾಯಕರನ್ನು ಒಂದುವಾರ ಕಾಲ ಗುಪ್ತ ಸ್ಥಳದಲ್ಲಿ ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿ ಕೊಂದು ಹಾಕಿತು.

ಈ ಘಟನೆ ನಡೆದ ಎರಡು ವರ್ಷಗಳ ನಂತರ ಸರಕಾರ, 1982ರ ಫೆಬ್ರವರಿ ತಿಂಗಳಿನಲ್ಲಿ 73 ಮಂದಿ ಮಹಿಳೆಯರು, ಪುರುಷರು, ಎಕ್ಯೂಕ್ ಎಂಬ ನಗರಕ್ಕೆ ಬಂದು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಆದೇಶ ಹೊರಡಿಸಿತು. ರಿಯೊನಿಗ್ರೊ ಹಳ್ಳಿಯಿಂದ ಮಿಲಿಟರಿ ಪೋಲೀಸರ ಕಛೇರಿಗೆ ಹೋದ 73 ಮಂದಿಯಲ್ಲಿ ಬದುಕುಳಿದು, ಹಳ್ಳಿಗೆ ಹಿಂದಿರುಗಿದ್ದು ಏಕೈಕ ಮಹಿಳೆ ಮಾತ್ರ. ಗ್ವಾಟೆಮಾಲ ಸರಕಾರದ ಸಿವಿಲ್ ಡಿಫೆನ್ಸ್ ಪೆಟ್ರೊಲ್ ಎಂಬ ಮಿಲಿಟರಿ ಪೋಲಿಸ್ ಪಡೆ ಎಲ್ಲರನ್ನೂ ನಿರ್ಧಕ್ಷಿಣ್ಯವಾಗಿ ಕೊಂದುಹಾಕಿತು. ಇದು ಸಾಲದೆಂಬಂತೆ ಅದೇ 1982ರ ಮಾರ್ಚ್ 13 ರಂದು 10 ಸೈನಿಕರು ಹಾಗೂ 25 ಪೋಲೀಸ್ ತುಕಡಿಯೊಂದಿಗೆ ಬಂದಿಳಿದ ನರಹಂತಕರು ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಬೇಟೆಯಾಡಿದರು. ಗಂಡಸರು ಮತ್ತು ಮಹಿಳೆಯರನ್ನು ಬಂದೂಕಿನ ಹಿಡಿಯಿಂದ, ಲಾಠಿಯಿಂದ ಬಡಿದು ಕೊಂದರೆ, ಮಕ್ಕಳ ಕೊರಳಿಗೆ ಹಗ್ಗ ಹಾಕಿ ಮರಕ್ಕೆ ನೇತುಹಾಕುವುದರ ಮೂಲಕ ಕೊಂದರು. 107 ಹಸುಳೆಗಳನ್ನು ಈ ಸಂದರ್ಭದಲ್ಲಿ ಹೊಸಕಿ ಹಾಕಲಾಯಿತು. ಈ ನರಮೇಧದಲ್ಲಿ ಬದುಕುಳಿದದ್ದು ಇಬ್ಬರು ಮಹಿಳೆಯರು ಮಾತ್ರ.

ನಾಗರಿಕ ಜಗತ್ತಿನ ಸಂಪರ್ಕವಿರಲಿ, ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವಿರದ ಅಮಾಯಕ ಮೂಲನಿವಾಸಿಗಳ ನೋವಿನ ದೌರ್ಜನ್ಯಕ್ಕೆ ಪ್ರತಿಭಟಿಸಿ ಆಗ ಗ್ವಾಟೆಮಾಲದಲ್ಲಿ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಸರಕಾರವನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾರಿಗೂ ಇರಲಿಲ್ಲ. ಈ ನರಮೇಧ ಘಟನೆ ಸಂಭವಿಸಿದ ಎರಡು ತಿಂಗಳ ನಂತರ, ಮತ್ತೆ ದಾಳಿನಡೆಸಿದ ಮಿಲಿಟರಿ ಪೋಲಿಸರು 35 ಮಕ್ಕಳು ಸೇರಿದಂತೆ, 95 ಮಂದಿ ಆದಿವಾಸಿಗಳನ್ನು, ತಾವು ಬದುಕಿದ್ದ  ಹಳ್ಳಿಯಲ್ಲೇ ಸಾಲಾಗಿ ನಿಲ್ಲಿಸಿ ಹಣೆಗೆ ಗುಂಡಿಕ್ಕಿ ಕೊಂದರು. ಕೊನೆಗೆ ಗ್ವಾಟೆಮಾಲ ಸರಕಾರದ ವಿರುದ್ಧ ದನಿ ಎತ್ತಿದ ಎಡಪಂಥೀಯ ಪಕ್ಷದ ಕಾರ್ಯಕರ್ತರು, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿ ಈ ನರಮೇಧದ ಬಗ್ಗೆ ವಿಶ್ವದ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಮೆರಿಕಾದ ಸ್ವಯಂ ಸೇವಾ ಸಂಸ್ಥೆ ವಿಟ್ನೆಸ್ ಫಾರ್ ದಿ ಪೀಪಲ್ಸ್ ರಂಗಪ್ರವೇಶ ಮಾಡಿ ಈ ಅಣೆಕಟ್ಟು ಯೋಜನೆಗೆ ಹಣಕಾಸಿನ ನೆರವು ನೀಡಿದ ವಿಶ್ವಬ್ಯಾಂಕ್ ಸೇರಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ವೇಳೆಗಾಗಲೇ ಹತ್ಯೆಯಾದ 369 ಆದಿವಾಸಿಗಳು ಸೇರಿದಂತೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ 72 ಸಾವಿರ ನಾಗರೀಕರು 1980ರಿಂದ 1984ರ ಅವಧಿಯೊಳಗೆ ಹತ್ಯೆಯಾಗಿದ್ದರು, ಇಲ್ಲವೆ ಕಾಣೆಯಾಗಿದ್ದರು. ಸ್ವಯಂ ಸೇವಾ ಸಂಸ್ಥೆ ನಡೆಸಿದ ತನಿಖೆಯ ಮೂಲಕ ಧೃಡಪಟ್ಟ ಅಸಲಿ ಸಂಗತಿಯೆಂದರೆ ಈ ನರಮೇಧ ಮತ್ತು ಸಂಘರ್ಷದ ಹಿಂದೆ ಸರಕಾರದ ಹಲವಾರು ಅಧಿಕಾರಿಗಳ ಕೈವಾಡವಿದ್ದು, ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗುವ ಮಂದಿಗೆ ನೀಡಲಾಗುವ ಪರಿಹಾರವನ್ನು ತಮ್ಮದಾಗಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳೇ ಗಲಾಟೆಗೆ ಪ್ರಚೋದನೆ ನೀಡಿ ಫಲಾನುಭವಿಗಳನ್ನು ಹತ್ಯೆಗೈದಿದ್ದರು.

ಮೂಲತಃ ಈ ಅಣೆಕಟ್ಟು ಯೋಜನೆಯ ರೂಪು ರೇಷೆ ಸುಳ್ಳಿನ ಕಂತೆಗಳ ಮೇಲೆ ರೂಪುಗೊಂಡಿತ್ತು. ಈ ಅಣೆಕಟ್ಟಿನ ನೀಲಿ ನಕಾಶೆಯನ್ನು ಸಿದ್ದಪಡಿಸಿದ್ದು ಜರ್ಮನಿ ಮೂಲದ ಲ್ಯಾಮ್ ಕನ್ಸಾರ್ಟಿಯಮ್ ಎಂಬ ಸಂಸ್ಥೆ. ಇದರ ಅಂಗ ಸಂಸ್ಥೆಯಾದ ಲ್ಯಾಮಿಯರ್ ಇಂಟರ್ನ್ಯಾಷನಲ್ ಎಂಬ ಸಂಸ್ಥೆ ಪರಿಸರ ಹಾನಿ ಹಾಗೂ ಯೋಜನೆಯಿಂದ ನಿರ್ಗತಿಕರಾಗುವ ಸಂಖ್ಯೆ ಕುರಿತಂತೆ ವರದಿ ಸಿದ್ಧಪಡಿಸಿತ್ತು. ಈ ವರದಿಯ ಪ್ರಕಾರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಹಳ್ಳಿಗಳಿಂದ ನಿರ್ವಸತಿಗರಾಗುವ ಸಂಖ್ಯೆ ಕೇವಲ 1,500 ಆದಿವಾಸಿಗಳು ಮಾತ್ರ. ವಾಸ್ತವವಾಗಿ 18 ಸಾವಿರ ಮಂದಿ ಆದಿವಾಸಿಗಳು ಅರಣ್ಯದಲ್ಲಿ ವಾಸವಾಗಿದ್ದರು. ವರದಿಯಲ್ಲಿ ಕೆಲವು ಗ್ರಾಮಗಳಲ್ಲಿ ಜನವಸತಿ ಇಲ್ಲ ಎಂದು ನಮೂದಿಸಲಾಗಿತ್ತು.

ಈ ಅಣೆಕಟ್ಟಿನ ವಿವಾದದಿಂದಾಗಿ ಚಿಕ್ಸೊಯ್ ನರಮೇಧ ಹೆಸರಿನಿಂದ ಪ್ರಸಿದ್ಧವಾದ ಈ ಘಟನೆಯ ಕುರಿತಂತೆ 1979ರಿಂದ 1991ರವರೆಗೆ ಸುಮಾರು 12 ವರ್ಷಗಳ ಕಾಲ ವಿಶ್ವಬ್ಯಾಂಕ್ ಆಗಲಿ ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ ಆಗಲಿ ಇಟಲಿ ಸರಕಾರವಾಗಲಿ ತುಟಿ ಬಿಚ್ಚಲಿಲ್ಲ.

ಅಣೆಕಟ್ಟು ಕಾಮಗಾರಿ ನಡೆದ ಸಮಯದಲ್ಲಿ ವರ್ಷವೊಂದರಲ್ಲಿ ಕನಿಷ್ಠ 3 ತಿಂಗಲ ಕಾಲ ವಿಶ್ವಬ್ಯಾಂಕ್ನ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾಮಗಾರಿಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಆದಿವಾಸಿಗಳ ನರಮೇಧಕ್ಕೆ ಮೌನ ಸಾಕ್ಷಿಯಾಗಿದ್ದರು. 1985ರಲ್ಲಿ ಈ ಅಣೆಕಟ್ಟು ಯೋಜನೆಗೆ ಹಣ ಸಾಲದಾದಾಗ ಇಷ್ಟೆಲ್ಲ ಘಟನೆಗಳು ಸಂಭವಿಸಿದ್ದರೂ ಕೂಡ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ನೀಡಿತು. ಈ ಸಾಲ ನೀಡಿಕೆಯ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿತ್ತು. ಏಕೆಂದರೆ ತಾಂತ್ರಿ ಸಹಾಯ ಮತ್ತು ನಿರ್ಮಾಣ ಗುತ್ತಿಗೆಯನ್ನು ಸ್ವಿಡ್ಜರ್‌ಲ್ಯಾಂಡ್ ಮೂಲದ ಮೋಟಾರ್ ಕೊಲಂಬಸ್ ಹಾಗೂ ಅಮೆರಿಕಾದ ಇಂಟರ್ನ್ಯಾಷನಲ್ ಎಂಬ ಬಹು ರಾಷ್ಟ್ರೀಯ ಕಂಪನಿಗಳು ವಹಿಸಿಕೊಂಡಿದ್ದವು.

ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ 1991ರಲ್ಲಿ ಅಣೆಕಟ್ಟು ಕಾಮಗಾರಿ ಮುಕ್ತಾಯಗೊಂಡಾಗ ಸಾಲ ನೀಡಿದ್ದ ವಿಶ್ವಬ್ಯಾಂಕ್ ತಾನು ನೀಡಿದ್ದ ಮುಕ್ತಾಯ ಪ್ರಮಾಣ ಪತ್ರದಲ್ಲಿ “ಗ್ವಾಟೆಮಾಲದ ಚಿಕ್ಸೊಯ್ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದ 1,500 ಮಂದಿ ಆದಿವಾಸಿಗಳು ಘರ್ಷಣೆಯಲ್ಲಿ ಮೃತಪಟ್ಟಿದ್ದು, ಯೋಜನೆ ವಿಳಂಬವಾಗಲು ಸ್ಥಳೀಯರ ಪ್ರತಿರೋಧ ಕಾರಣ,” ಎಂದು ತಿಳಿಸಿ, ಸಂಘರ್ಷದಲ್ಲಿ ಮೃತಪಟ್ಟ ಪುನರ್ವಸತಿ ಉಸ್ತುವಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಶ್ರದ್ಧಾಂಜಲಿ ಕೂಡ ಅರ್ಪಿಸಿತ್ತು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅಮೆರಿಕಾದ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ “ವಿಟ್ನೆಸ್ ಫಾರ್ ದಿ ಪೀಪಲ್ಸ್” 1996ರ ತನ್ನ ವಾರ್ಷಿಕ ವರದಿಯಲ್ಲಿ ಘಟನೆಯ ಬಗ್ಗೆ ಹೀಗೆ ನಮೂದಿಸಿತ್ತು: “ಗ್ವಾಟೆಮಾಲ ದುರಂತದ ಬಗ್ಗೆ ವಿಶ್ವಬ್ಯಾಕ್ಗೆ ಅರಿವಿತ್ತು. ಸಾಲವನ್ನು ವಿಸ್ತರಿಸುವ ಸಮಯದಲ್ಲಿ ಅಲ್ಲಿ ನಡೆದ ಹಿಂಸೆ, ನರಮೇಧದ ಬಗ್ಗೆ ಗೊತ್ತಿಲ್ಲವೆಂದರೆ ಇದು ವಿಶ್ವಬ್ಯಾಂಕ್ನ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ಈ ಹಿಂಸೆಯ ಹಿಂದೆ ವಿಶ್ವಬ್ಯಾಂಕ್ನ ಕೈವಾಡವಿತ್ತು ಎಂದು ನಾವು ನಂಬಬೇಕಾಗುತ್ತದೆ.”

ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಕನಸಿನ ಯೋಜನೆಗೆ ಅಡ್ಡಿಯಾಗುವ ಅಮಾಯಕರನ್ನು ಹೊಸಕಿ ಹಾಕಲು ಸೂತ್ರದಾರನಂತೆ ತೆರೆಯ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಮೆರಿಕಾದ ಕೈಗೂಸಿನಂತೆ ವರ್ತಿಸುವ ವಿಶ್ವಬ್ಯಾಂಕಿನ ವಿಶ್ವ ರೂಪಕ್ಕೆ ಗ್ವಾಟೆಮಾಲ ದುರಂತಕ್ಕಿಂತ ಬೇರೊಂದು ಪುರಾವೆ ಬೇಕಿಲ್ಲ.

(ಮುಂದುವರಿಯುವುದು)