ಸಂಪಾದಕೀಯ ಬಳಗದ ಪತ್ರ ಮತ್ತು ಇನ್ನೊಂದಷ್ಟು ಅಸಹ್ಯ/ಅಸಹನೀಯ ವಿಷಯಗಳು…

-ರವಿ ಕೃಷ್ಣಾರೆಡ್ಡಿ

ಕಳೆದ ವಾರ ಬರೆದ “ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ“ಕ್ಕೆ “ಸಂಪಾದಕೀಯ ಬಳಗ“ದವರು ಶನಿವಾರದಂದು ಪತ್ರವೊಂದನ್ನು ಬರೆದು ಅದನ್ನು ಅವರ ಬ್ಲಾಗಿನಲ್ಲೂ ಪ್ರಕಟಿಸಿದ್ದರು. ಕಳೆದ ನಾಲ್ಕೈದು ದಿನದಿಂದ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದುದ್ದರಿಂದ ಮತ್ತು ಕೆಲವು ತಾಂತ್ರಿಕ ಅಡಚಣೆಗಳಿಂದಾಗಿ ಅದನ್ನು ಇಲ್ಲಿ ಪ್ರಕಟಿಸುವುದಾಗಲಿ, ಪ್ರತಿಕ್ರಿಯಿಸುವುದಾಗಲಿ ಸಾಧ್ಯವಾಗಿರಲಿಲ್ಲ. ಈಗಲೂ ಆ ಸಮಸ್ಯೆಗಳು ಮುಂದುವರೆಯುತ್ತಿದ್ದರೂ ಇನ್ನೂ ತಡ ಮಾಡುವುದು ಬೇಡ ಎಂದು ಒಂದು ಪುಟ್ಟ ಟಿಪ್ಪಣಿಯೊಂದಿಗೆ ಅದನ್ನು ಇಲ್ಲಿ ಕೊಡುತ್ತಿದ್ದೇನೆ.

ನಮ್ಮ ರಾಜಕಾರಣ, ಸಮಾಜ, ಸಾಂಸ್ಕೃತಿಕ ಲೋಕ, ಮಾಧ್ಯಮ ರಂಗ, ಎಲ್ಲವೂ ಅಧಃಪತನದತ್ತ ದೌಡಾಯಿಸುತ್ತಲೇ ಇವೆ. ಇದು ನಿರಾಶೆಯಿಂದ ಹುಟ್ಟಿರುವ ಮಾತಲ್ಲ. ವಾಸ್ತವ. ರಾಜ್ಯದ ಬಿ.ಜೆ.ಪಿ. ಸರ್ಕಾರ ಮತ್ತು ಅದನ್ನು ನಿಯಂತ್ರಿಸುವ ಕೈಗಳು ಒಂದು ಸಮಾಜದಲ್ಲಿ ಯಾವುದು ಇದಕ್ಕಿಂತಲೂ ಕನಿಷ್ಟಮಟ್ಟಕ್ಕೆ ಹೋಗಲು ಸಾಧ್ಯ ಎಲ್ಲ ಎನ್ನುವ ಗೆರೆ ಇರುತ್ತದೊ ಅದನ್ನು ಪ್ರತಿ ಬಾರಿಯೂ ಇಳಿಸುತ್ತಲೇ ಹೋಗುತ್ತಿದೆ. ಸಮಾಜದ ವಿವಿಧ ರಂಗಗಳಿಗೂ ಅದರ ಪ್ರಭಾವ ವಿಸ್ತರಿಸುತ್ತಿದೆ. ಸಂಪಾದಕೀಯದವರ ಪತ್ರವಂತೂ ಮಾಧ್ಯಮವಲಯದದ ಇನ್ನಷ್ಟು ಅಸಹ್ಯಗಳನ್ನು ಪ್ರಸ್ತಾಪಿಸಿದೆ. ಇದೊಂದು ಆತ್ಮವಂಚಕರು, ದುಷ್ಟರು, ನಯವಂಚಕರು, ಸಮಾಜದ ಆಯಕಟ್ಟಿನ ಜಾಗಗಳಲ್ಲಿ ಕುಳಿತು ನಿಯಂತಿಸುತ್ತಿರುವ ಸಂದರ್ಭ. ಇದು ಮನುಷ್ಯ ಅಥವ ಸಮುದಾಯ ಪ್ರಯತ್ನದಿಂದ ಬದಲಾಗುತ್ತದೆ ಎನ್ನುವ ಆಸೆ ನನ್ನಲ್ಲಿಲ್ಲ. ಪ್ರಕೃತಿಯೇ ಸರಿ ಮಾಡಬೇಕೆನೊ? ಬಹುಸಂಖ್ಯಾತರಿಗೆ ಇಲ್ಲಿನ ಮೌಲ್ಯಗಳ ಅಧೋಗತಿ ಬಾಧಿಸುತ್ತಿರುವುದಿರಲಿಲಿ, ಅದೊಂದು ಗಮನಹರಿಸಬೇಕಾದ ವಿಷಯ ಎಂತಲೂ ಅನ್ನಿಸುತ್ತಿಲ್ಲ. ಅದಕ್ಕೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಿಗುತ್ತಿರುವ ಪರ-ವಿರೋಧ ಪ್ರತಿಕ್ರಿಯೆಗಳೇ ಸಾಕ್ಷಿ.

ನಾನು “ವರ್ತಮಾನ”ದಲ್ಲಿ ಬರೆದ ಪತ್ರಕ್ಕೆ ಮೊದಲೇ ಊಹಿಸಿದಂತೆ ಪ್ರತಿಕ್ರಿಯಿಸಬೇಕಾದವರ್ಯಾರೂ ಪ್ರತಿಕ್ರಿಯಿಸಿಲ್ಲ. ಅದನ್ನು ಬಹಳ ಜನ ನೋಡಿಲ್ಲ ಎಂದು ಹೇಳುವ ಹಾಗಿಲ್ಲ. ಅದನ್ನು ಗಣನೀಯ ಸಂಖ್ಯೆಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹುಶ: ಬೆಂಗಳೂರಿನ ಪತ್ರಕರ್ತರ ವಲಯದಲ್ಲಿ ನೋಡಬೇಕಾದವರೆಲ್ಲ ನೋಡಿದ್ದಾರೆ. ಆದರೆ, ಮೊದಲೇ ಹೇಳಿದಂತೆ ಇಂತಹ ವಿಷಯಗಳು ಇವತ್ತಿನ ಬಹುತೇಕ ಪತ್ರಕರ್ತರಿಗೆ ಪ್ರಮುಖ ವಿಷಯಗಳೇ ಅಲ್ಲ. ಸ್ವಾರ್ಥಸಾಧನೆಗೆ ಸಂಬಂಧ ಪಡದ ಎಲ್ಲವೂ ಅಮುಖ್ಯವೆ. ಆದರೆ “ಸಂಪಾದಕೀಯ ಬಳಗ” ಸುದೀರ್ಘ ಎನ್ನಬಹುದಾದ ಲೇಖನವನ್ನೇ ಬರೆದಿದ್ದಾರೆ. ಅವರಿಗೆ ಧನ್ಯವಾದ ಎನ್ನಲೇ? ಗೊತ್ತಾಗುತ್ತಿಲ್ಲ. ಅವರ ಕರ್ತವ್ಯವನ್ನು ಮತ್ತು ವೈಯಕ್ತಿಕ ಪ್ರಾಮಾಣಿಕತೆಯನ್ನು, ಅನಾಮಿಕವಾಗಿಯಾದರೂ ಸರಿ, ನಿರ್ವಹಿಸಿದ್ದಾರೆ, ಅಲ್ಲವೆ?. ಇಂತಹ ಧ್ವನಿಗಳು ಹೆಚ್ಚಲಿ ಎನ್ನುವುದರ ಜೊತೆಜೊತೆಗೇ, ಇದನ್ನು ಬಹಿರಂಗ ವೇದಿಕೆಗಳಲ್ಲಿ ನೇರಾನೇರವಾಗಿ ಪ್ರಸ್ತಾಪಿಸುವವರು ಮತ್ತು ಅಂತಹ ಸತ್ಯಕ್ಕಾಗಿ ಹೋರಾಡುವವರು ಬರಲಿ ಎಂದಷ್ಟೇ ಆಶಿಸುತ್ತೇನೆ. ಆದರೂ, ಸಂಪಾದಕೀಯ ಬಳಗ ಇಂತಹುದೊಂದು ಚರ್ಚೆಯನ್ನು ಮುಂದುವರೆಸುತ್ತಿರುವುದರಿಂದ ಅವರಿಗೆ ನನ್ನ ಅಭಿನಂದನೆಗಳು.

ಸಂಪಾದಕೀಯ ಬ್ಲಾಗ್‌ನಲ್ಲಿರುವ ಅವರ ಪತ್ರದ ಕೊಂಡಿ ಇದು. ಅಲ್ಲಿ ಕೆಲವು ಕಾಮೆಂಟ್‌ಗಳೂ ಇವೆ.

ಆ ಪತ್ರದ ಪೂರ್ಣ ಪಾಠ ಇದು:

ಮಾಧ್ಯಮ ನಿಸ್ಪೃಹತೆ: ರವಿಕೃಷ್ಣಾರೆಡ್ಡಿ ಬರೆದ ಪತ್ರಕ್ಕೆ ಒಂದು ಉತ್ತರ

ಕೆಲವು ದಿನಗಳ ಹಿಂದೆ ವರ್ತಮಾನದಲ್ಲಿ ರವಿಕೃಷ್ಣಾರೆಡ್ಡಿಯವರು ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ ಎಂಬ ಲೇಖನ ಬರೆದಿದ್ದರು. ಪತ್ರಕರ್ತರಿಗೆ ಹಲವು ಪ್ರಶ್ನೆಗಳನ್ನು ಅವರು ಒಡ್ಡಿದ್ದರು, ಯಾರಾದರೂ ಉತ್ತರಿಸಬಹುದೆಂಬ ನಿರೀಕ್ಷೆಯಲ್ಲಿ. ಯಾರೂ ಉತ್ತರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯನ್ನು ನಾವೇ ಹೊತ್ತು ಈ ಮಾರುತ್ತರವನ್ನು ಬರೆದಿದ್ದೇವೆ. ರವಿಕೃಷ್ಣಾರೆಡ್ಡಿಯವರು ಎತ್ತಿರುವ ಪ್ರಶ್ನೆಗಳು ಗಂಭೀರವಾದವೂ, ಚರ್ಚಾಯೋಗ್ಯವೂ, ಈ ಕ್ಷಣದ ಅಗತ್ಯವೂ ಆಗಿರುವುದರಿಂದ ಅವೆಲ್ಲ ಚರ್ಚೆಯೇ ಆಗದೇ ಉಳಿಯಬಾರದು ಎಂಬುದು ನಮ್ಮ ಕಾಳಜಿ. ಎಂದಿನಂತೆ ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ.

ಪ್ರಿಯ ರವಿಕೃಷ್ಣಾ ರೆಡ್ಡಿಯವರೇ,

ನಮಸ್ಕಾರ,
ನೀವು ಎತ್ತಿರುವ ಪ್ರಶ್ನೆಗಳು ಸಕಾಲಿಕವಾಗಿವೆ, ಸರಳವಾಗಿವೆ. ನಿಮ್ಮ ಪತ್ರದ ಮೊದಲ ಭಾಗದಲ್ಲಿ ಎತ್ತಿರುವ ಪ್ರಶ್ನೆ ಇವತ್ತಿನ ಮಾಧ್ಯಮ ಸಂಸ್ಥೆಗಳನ್ನು ಆಳುತ್ತಿರುವವರು ಯಾರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದ ಆಲಂ ಪಾಷ ವಿರುದ್ಧ ಸಮಯ ಟಿವಿಯಲ್ಲಿ ಮಾತ್ರವೇಕೆ ಸುದ್ದಿ ಬರುತ್ತೆ ಎಂದು ನೀವು ಕೇಳುತ್ತೀರಿ. ಮುರುಗೇಶ್ ನಿರಾಣಿಯವರ ಪಾಲುದಾರಿಕೆ ಇರುವ ಸಮಯ ಟಿವಿಯಲ್ಲದೆ ಬೇರೆಲ್ಲಿ ಬರಲು ಸಾಧ್ಯ ಎಂಬುದು ಸ್ಪಷ್ಟ ಉತ್ತರ. ಮಾಧ್ಯಮ ಸಂಸ್ಥೆಗಳು ಈಗೀಗ ಹಲವರ ಕೈಗಳ ದಾಳವಾಗಿವೆ. ಇಲ್ಲೂ ಅದೇ ಆಗಿದೆ.

ನೀವು ಕಸ್ತೂರಿ ಟಿವಿಯ ಸುದ್ದಿಗಳನ್ನು ನೋಡಿರಬಹುದು. ಅಲ್ಲೂ ಹಾಗೇನೇ. ಅಲ್ಲಿ ಕುಮಾರಸ್ವಾಮಿ ವಿರುದ್ಧ ಯಾರ‍್ಯಾರು ಇದ್ದಾರೋ ಅವರೆಲ್ಲರೂ ಟಾರ್ಗೆಟ್ ಆಗುತ್ತಾರೆ. ಕುಮಾರಸ್ವಾಮಿ ಒಂದು ಪತ್ರಿಕಾಗೋಷ್ಠಿ ನಡೆಸಿದರೆ ಗಂಟೆಗಟ್ಟಲೆ ಆ ಗೋಷ್ಠಿಯನ್ನು ಅದು ಪ್ರಸಾರ ಮಾಡುತ್ತದೆ. ತೀರಾ ಜೆಡಿಎಸ್ ಕಾರ್ಯಕರ್ತರೇ ಈ ಭಟ್ಟಂಗಿ ಚಾನಲ್‌ನ ನ್ಯೂಸ್‌ಗಳನ್ನು ನೋಡುತ್ತಾರೋ ಇಲ್ಲವೋ ಅದು ಅನುಮಾನ.

ಇತ್ತೀಚಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಗಳಲ್ಲಿ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಡಿಯೂರಪ್ಪ ಆರೋಪಿಯಾಗಿ ಜೈಲಿಗೆ ಹೋಗಿದ್ದಾರೆ, ಇದು ಅವಮಾನಕರ ಎಂಬುದು ನಿಜ. ಆದರೆ ಇಡೀ ಪುಟದಲ್ಲಿ ಯಡಿಯೂರಪ್ಪ ಸರಳುಗಳ ಹಿಂದೆ ಕುಳಿತಿರುವ ಚಿತ್ರ ಪ್ರಕಟಿಸುವ ಅಗತ್ಯವಿತ್ತಾ? ಈ ಎರಡು ಮೀಡಿಯಾ ಸಂಸ್ಥೆಗಳು ಯಡಿಯೂರಪ್ಪ ಅವರನ್ನು ಗಲ್ಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಬಹಳ ಸ್ಪಷ್ಟವಾಗಿ ತೋರುತ್ತದೆ. ಯಾಕೆ ಹೀಗೆ? ಇದಕ್ಕೇನು ಕಾರಣ? ಒಂದು ವೇಳೆ ಯಡಿಯೂರಪ್ಪ ಬದಲಾಗಿ ಅನಂತಕುಮಾರ್ ಹುಡ್ಕೋ ಹಗರಣದ ವಿಷಯದಲ್ಲೋ, ಇನ್ನೊಂದರಲ್ಲೋ ಜೈಲಿಗೆ ಹೋಗಿದ್ದರೆ ಇದೇ ರೀತಿ ಅಪಮಾನಕಾರಿಯಾದ ವರದಿಗಳನ್ನು ಈ ಮಾಧ್ಮಮ ಸಂಸ್ಥೆಗಳು ಪ್ರಕಟಿಸುತ್ತಿದ್ದವೇ?

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆ ಇದೆ, ನೋಡಿ. ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?

ಇವತ್ತು ಮಾಧ್ಯಮಸಂಸ್ಥೆಗಳನ್ನು ನಿಯಂತ್ರಿಸುತ್ತಿರುವವರು ರಾಜಕಾರಣಿಗಳು. ಹಿಂದೆಲ್ಲ ರಾಜಕಾರಣಿಗಳು ಬರೇ ರಾಜಕಾರಣಿಗಳಾಗಿದ್ದರು. ಈಗ ಅವರು ಪಾರ್ಟ್‌ಟೈಮ್ ಉದ್ಯಮಿಗಳು, ಪಾರ್ಟ್‌ಟೈಮ್ ರಾಜಕಾರಣಿಗಳು. ಮಾಧ್ಯಮ ಸಂಸ್ಥೆಗಳನ್ನು ಹಿಡಿತಕ್ಕೆ ತಂದುಕೊಂಡು ತಮ್ಮ ರಾಜಕಾರಣ ಮತ್ತು ಉದ್ಯಮ ಎರಡನ್ನೂ ರಕ್ಷಣೆ ಮಾಡಿಕೊಳ್ಳೋದು ಅವರ ಉದ್ದೇಶ. ಆಲಂಪಾಷ ವಿಷಯದಲ್ಲಿ ನಡೆದಿರುವುದು ಅದೇ.

ಇನ್ನು ಈ ವಿದ್ಯಮಾನವನ್ನು ಬೇರೆ ಮಾಧ್ಯಮಗಳೇಕೆ ವರದಿ ಮಾಡಲಿಲ್ಲವೆಂಬ ನಿಮ್ಮ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ. ಎಲ್ಲರದೂ ಒಂದಲ್ಲ ಒಂದು ಹುಳುಕು. ಒಬ್ಬರ ಹುಳುಕನ್ನು ಮತ್ತೊಬ್ಬರು ಜಾಹೀರು ಮಾಡಿದರೆ ಆ ಒಬ್ಬರು ಸುಮ್ಮನಿರಲು ಹೇಗೆ ಸಾಧ್ಯ? ಅವರು ಇವರದನ್ನು ಬಯಲು ಮಾಡುತ್ತಾರೆ, ಅಲ್ಲವೇ? ಎಲ್ಲೋ ಪ್ರಜಾವಾಣಿಯಂಥ ಪತ್ರಿಕೆ ಆಗಲೋ ಈಗಲೋ ಸಣ್ಣ ಪ್ರಮಾಣದ ಧ್ವನಿಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಎತ್ತುವುದನ್ನು ಬಿಟ್ಟರೆ ನೀವು ಬೇರೆ ಸಂಸ್ಥೆಗಳಿಂದ ಇಂಥ ಒಳಬಂಡಾಯವನ್ನು ಹೇಗೆ ಕಾಣಲು ಸಾಧ್ಯ?

ಇನ್ನು ನಿಮ್ಮ ಪತ್ರದ ಎರಡನೇ ಭಾಗಕ್ಕೆ ಬರುವುದಾದರೆ ಅಲ್ಲೂ ನಿಮಗೆ ನಿರಾಶಾದಾಯಕ ಉತ್ತರಗಳೇ ಲಭಿಸುತ್ತವೆ. ಸಹ ಪತ್ರಕರ್ತನಿಗೆ ಅನ್ಯಾಯವಾದಾಗ ಯಾಕೆ ಯಾರೂ ಧ್ವನಿ ಎತ್ತುವುದಿಲ್ಲ ಎನ್ನುತ್ತೀರಿ ನೀವು. ಯಾರು ಧ್ವನಿ ಎತ್ತಬೇಕು? ಧ್ವನಿ ಎತ್ತಬಹುದಾದ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಅದನ್ನು ಹಲವರು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಗೇಲಿ ಮಾಡುವುದೂ ಉಂಟು. ಮುಖ್ಯವಾಹಿನಿಯ ಪತ್ರಕರ್ತರ ಪೈಕಿ ಬಹುತೇಕರು ಇಲ್ಲಿ ಸದಸ್ಯರೇ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಹೆಸರೇ ಇಲ್ಲದ ಅಥವಾ ಇಲ್ಲವೇ ಇಲ್ಲದ ಪತ್ರಿಕೆಗಳವರೇ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು. ಜಿಲ್ಲಾ ಮಟ್ಟದಲ್ಲಿ ಈ ಸಂಘಟನೆ ಅಲ್ಪಸ್ವಲ್ಪ ಕ್ರಿಯಾಶೀಲವಾಗಿದೆ, ಆದರೆ ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡವರು ಇಲ್ಲ. ಎಲ್ಲೋ ಯಾರೋ ಪತ್ರಕರ್ತನ ಕೊಲೆಯಾದರೆ ಒಂದು ಸಾಂಕೇತಿಕ ಪ್ರತಿಭಟನೆ, ವಿಧಾನಸೌಧಕ್ಕೆ ಪ್ರವೇಶಪತ್ರ ಕೊಡಲಿಲ್ಲವೆಂದರೆ ಒಂದು ಪ್ರತಿಭಟನೆ, ಬಸ್ ಪಾಸ್ ಕೊಡಿ ಎಂದು ಒಂದು ಪ್ರತಿಭಟನೆ… ಇಂಥವುಗಳನ್ನು ಬಿಟ್ಟು ಯೂನಿಯನ್ ಬೇರೆ ಏನನ್ನೂ ಮಾಡಿದ್ದನ್ನು ಯಾರೂ ಕಂಡಿಲ್ಲ.

ನೀವು ಮಾನಸ ಪುದುವೆಟ್ಟು ಕೆಲಸ ಕಳೆದುಕೊಂಡ ವೃತ್ತಾಂತ ಬರೆದಿದ್ದೀರಿ. ಗಂಡ ಬರೆದ ಸುದ್ದಿಗೆ ಹೆಂಡತಿಯ ತಲೆದಂಡವಾಗುವುದು ಎಷ್ಟು ಕ್ರೂರ ಮತ್ತು ಅಮಾನವೀಯ ಎಂದು ಈ ಯೂನಿಯನ್‌ನ ಪದಾಧಿಕಾರಿಗಳಿಗೆ, ಅದರಲ್ಲೂ ಗಂಗಾಧರ ಮೊದಲಿಯಾರ್‌ರಂಥ ಹಿರಿಯರಿಗೆ ಅನಿಸುವುದೇ ಇಲ್ಲ. ಪ್ರತಿಭಟನೆ ಬೇಡ, ಯಾಕೆ ಹೀಗೆ ಮಾಡಿದ್ರಿ ಎಂದು ಸಮಯದ ಮ್ಯಾನೇಜ್‌ಮೆಂಟನ್ನು ಕೇಳಲಾರದಷ್ಟು ಇವರ ಬಾಯಿ ಸತ್ತಿದೆ. ಯೂನಿಯನ್ ಇರೋದು ಮತ್ತೆ ಯಾವ ಪುರುಷಾರ್ಥಕ್ಕೆ ಅಂತ ನೀವು ಕೇಳಬಹುದು. ಕೆಜಿ ರಸ್ತೆಯಲ್ಲಿದ್ದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯೂನಿಯನ್‌ನವರಿಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದಕ್ಕೂ ಕೋರ್ಟಿಗೇರುವ, ಸಣ್ಣಪುಟ್ಟದಕ್ಕೂ ಜಗಳ ಮಾಡಿಕೊಂಡು ಕೂರುವ ಯೂನಿಯನ್‌ನವರಿಗೆ ಮಾನಸ ಅವರ ಸಮಸ್ಯೆ ಬಗೆಹರಿಸುವ ಸಮಯವಾದರೂ ಎಲ್ಲಿದೆ ಹೇಳಿ?

ಮಾನಸ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲೇ ನಿಮಗೆ ಸೋಮಶೇಖರ ಪಡುಕೆರೆ ಎಂಬ ಪತ್ರಕರ್ತರ ವಿಷಯ ಹೇಳಬೇಕು. ಕ್ರೀಡಾ ವರದಿಗಾರಿಕೆಯಲ್ಲಿ ಪಳಗಿದ್ದವರು ಸೋಮಶೇಖರ್. ಕನ್ನಡಪ್ರಭದಲ್ಲಿ ಸರಿಸುಮಾರು ದಶಕದ ಅನುಭವವಿದೆ. ಸಹಪತ್ರಕರ್ತರ ನಡುವೆ ಒಳ್ಳೆಯ ಹೆಸರು ಪಡೆದವರು. ಇತ್ತೀಚಿಗೆ ಏಕಾಏಕಿ ಅವರಿಂದ ರಾಜೀನಾಮೆ ಪಡೆಯಲಾಯಿತು. ಕಾರಣಕ್ಕಾಗಿ ಹುಡುಕುವ ಅಗತ್ಯವೂ ಇಲ್ಲ. ಹೀಗೆ ಪತ್ರಕರ್ತರನ್ನು ಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿ ಇರುತ್ತದೆ. ನಿನ್ನೆ ಮಾನಸ, ಇವತ್ತು ಸೋಮಶೇಖರ್, ನಾಳೆ ಇನ್ಯಾರೋ? ಹೀಗೆ ಮಾಧ್ಯಮಗಳಿಂದ ದೂರವಾಗಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹೋಗುವವರು ಹೋಗುತ್ತಲೇ ಇದ್ದಾರೆ, ಕೇಳುವವರು ಯಾರೂ ಇಲ್ಲ. ತೀರಾ ಹೀಗೆ ಮಾಧ್ಯಮ ಬಿಟ್ಟು ಹೋದವರನ್ನೂ ಗೇಲಿ ಮಾಡುವ ಬಾಣಗಳನ್ನು ಹೊಡೆಯುವ ಕ್ರೂರ ಮನಸ್ಸು ಘನತೆವೆತ್ತ ಪತ್ರಕರ್ತರಿಗೇ ಇರುವಾಗ ಬೇರೇನು ಹೇಳೋದು? ಸೋಮಶೇಖರ್‌ರಂಥವರಿಗೆ ಬಕೆಟ್ ಹಿಡಿದು ನಿಂತು ಅಭ್ಯಾಸವಿಲ್ಲ. ಬಕೆಟ್ ಹಿಡಿಯದವರನ್ನು ಮ್ಯಾನೇಜ್‌ಮೆಂಟುಗಳು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ರೆಡ್ಡಿಯವರೇ, ಎಲ್ಲ ಪತ್ರಕರ್ತರೂ ಈಗ ಕಾಂಟ್ರಾಕ್ಟ್ ಕೂಲಿಯಾಳುಗಳು. ಬಾಡಿಗೆ ಮನೆಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ೧೧ ತಿಂಗಳ ಕಾಂಟ್ರಾಕ್ಟು ಕೂಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಕೆಲಸ ಖಾಯಂ ಆದರೂ ಸಂಭ್ರಮಿಸಬೇಕಾದ ಅಗತ್ಯವಿಲ್ಲ. ಸಂಸ್ಥೆಯಿಂದ ಹೊರಗೆ ಎಸೆಯಲು ಮ್ಯಾನೇಜ್‌ಮೆಂಟುಗಳಿಗೆ ಏನೇನೂ ಕಷ್ಟವಿಲ್ಲ. ಒಳಗೇ ಸಣ್ಣಪ್ರಮಾಣದಲ್ಲಿ ಕಿರುಕುಳ ಶುರು ಮಾಡಿದರೆ ತಾವೇ ತಾವಾಗಿ ಪತ್ರಕರ್ತರು ಹೊರಹೋಗುತ್ತಾರೆ. ಹಠ ಹಿಡಿದು ಕುಳಿತವರಿಗೆ ಡಿಸ್‌ಮಿಸ್ ಮಾಡುವ ಬೆದರಿಕೆ ಒಡ್ಡಿ ರಾಜೀನಾಮೆ ಪಡೆಯಲಾಗುತ್ತದೆ. ಒನ್ಸ್ ಎಗೇನ್, ಇಂಥ ಪತ್ರಕರ್ತರ ಸಹಾಯಕ್ಕೆ ಯಾವ ಯೂನಿಯನ್ ಕೂಡ ಬರೋದಿಲ್ಲ.

ನೀವು ಬೆಂಗಳೂರು ವರದಿಗಾರರ ಕೂಟದ ಹೆಸರು ಕೇಳಿರಬಹುದು. ಸಖತ್ತು ಬಲಶಾಲಿ ಸಂಘಟನೆ ಅದು. ಎಷ್ಟು ಬಲಶಾಲಿ ಎಂದರೆ ತನ್ನ ಸದಸ್ಯರೆಲ್ಲರಿಗೂ ಕೆಎಚ್‌ಬಿ ಸೈಟು ಕೊಡಿಸುವಷ್ಟು ಬಲಶಾಲಿ. ಆದರೆ ಪತ್ರಕರ್ತರಿಗೆ ಅನ್ಯಾಯವಾದಾಗ ಈ ಸಂಘಟನೆಯೂ ಧ್ವನಿ ಎತ್ತಿದ್ದನ್ನು ಯಾರೂ ಕಂಡಿಲ್ಲ. ಇದು ಕೇವಲ ವರದಿಗಾರರ ಕೂಟ. ಇಲ್ಲಿ ವರದಿಗಾರರಿಗೆ ಮಾತ್ರ ಸದಸ್ಯತ್ವ, ಉಪಸಂಪಾದಕರಿಗೂ ಸದಸ್ಯತ್ವ ಕೊಡಲಾಗುವುದಿಲ್ಲ. ಒಂದುವೇಳೆ ವರದಿಗಾರನಿಗೆ ಡೆಸ್ಕ್‌ಗೆ ವರ್ಗಾವಣೆಯಾದರೆ ಆತನ ಸದಸ್ಯತ್ವವೇ ಅನರ್ಹಗೊಳ್ಳುತ್ತದಂತೆ. ಹೀಗೆ ತನ್ನ ಸದಸ್ಯರೊಂದಿಗೇ ಅಮಾನವೀಯವಾಗಿ ನಡೆದುಕೊಳ್ಳಬಹುದಾದ ಬೈಲಾ ಇರುವ ಸಂಘಟನೆ, ಸದಸ್ಯರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಸಾಧ್ಯವಾ? ಇದು ಪ್ರಶ್ನೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ ತಾನಿರುವುದೇ ಪತ್ರಕರ್ತರ ಮನರಂಜನೆಗೆ, ಹೀಗಾಗಿ ಬೇರೆ ಉಸಾಬರಿ ನಮಗೆ ಬೇಕಿಲ್ಲ ಎಂದು ಮಾತಿಗೇ ಮೊದಲೇ ಹೇಳುವುದರಿಂದ ಅದರಿಂದಲೂ ನ್ಯಾಯ ದೊರಕೀತೆಂಬ ನಂಬಿಕೆ ಇಲ್ಲ.

ಪತ್ರಿಕಾರಂಗದಲ್ಲಿ ಯಾಕೆ ಅನರ್ಹರು, ಅಸಮರ್ಥರು, ಭ್ರಷ್ಟರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಷ್ಟು ಹೇಳಬೇಕಾಯಿತು. ಒಂದು ವಾಸ್ತವ ಏನೆಂದರೆ ಪತ್ರಕರ್ತರು ಈಗೀಗ ಕೂಲಿಯಾಳುಗಳ, ಜೀತದಾಳುಗಳ ಸ್ವರೂಪದಲ್ಲಿ ಬಳಕೆಯಾಗುತ್ತಿದ್ದಾರೆ. ಮೀಡಿಯ ಅನ್ನೋದು ಬಿಜಿನೆಸ್ಸಾಗಿ ಬಹಳ ಕಾಲವೇ ಆಯಿತು. ಆದರೆ ಈಗ ಅದು ಧನದಾಹಿ ರಾಜಕಾರಣದ ಒಂದು ಭಾಗ. ಹೀಗಾಗಿ ಸತ್ಯವಷ್ಟೆ ಸುದ್ದಿಯಾಗಬೇಕು ಎಂದೇನೂ ಇಲ್ಲ. ಈ ಕಟುಸತ್ಯ ಗೊತ್ತಿರುವ ಯಾವ ಪತ್ರಕರ್ತನೂ ಸ್ವಂತ ಬುದ್ಧಿಯಿಂದ ಸುದ್ದಿ ಮಾಡಲಾರ, ನಿಷ್ಠುರವಾದಿಯಾಗಿ ಇಲ್ಲಿ ಉಳಿದುಕೊಳ್ಳಲಾರ.

ಕ್ಷಮಿಸಿ, ನಿಮಗೆ ಉತ್ತರ ಬರೆಯುವ ಭರದಲ್ಲಿ ಈ ಪತ್ರ ಇನ್ನೊಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದಂತೆ ಅನಿಸುತ್ತಿದೆ.

ವಂದನೆಗಳೊಂದಿಗೆ

-ಸಂಪಾದಕೀಯ ಬಳಗ

4 thoughts on “ಸಂಪಾದಕೀಯ ಬಳಗದ ಪತ್ರ ಮತ್ತು ಇನ್ನೊಂದಷ್ಟು ಅಸಹ್ಯ/ಅಸಹನೀಯ ವಿಷಯಗಳು…

  1. Ananda Prasad

    ಭಾರತೀಯರ ವಂಶವಾಹಿಗಳಲ್ಲೇ ಸ್ವಾರ್ಥ, ಗುಂಪುಗಾರಿಕೆ, ಜಾತೀಯತೆ, ಮೇಲು-ಕೀಳು, ವಂಚನೆ ಹರಿಯುತ್ತಿದೆಯೇನೋ ಎನಿಸುತ್ತಾ ಇದೆ. ಭಾರತದ ಇತಿಹಾಸವನ್ನು ನೋಡಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ಪರಿಸ್ಥಿತಿ ಕೆಟ್ಟಿದೆ ಏನೋ ಎನಿಸುತ್ತದೆ. ಆದರೆ ಭಾರತದಲ್ಲಿ ಇಂಥ ಪರಿಸ್ಥಿತಿ ಹಿಂದೆಯೂ ಇತ್ತೆಂದು ಕಾಣುತ್ತದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಗೋಪಾಲಕೃಷ್ಣ ಗೋಖಲೆ, ಅಂಬೇಡ್ಕರ್ ಮೊದಲಾದ ಸಮಾಜದಲ್ಲಿ ಪ್ರಭಾವ ಬೀರಬಲ್ಲ ಧೀಮಂತ ನಾಯಕರು ಇದ್ದ ಕಾರಣ ಭಾರತದಲ್ಲಿ ನೈತಿಕ ಮೌಲ್ಯಗಳು ಮೇಲ್ಮಟ್ಟಕ್ಕೇರಿತ್ತು. ಆದರೆ ಸ್ವಾತಂತ್ರ್ಯ ನಂತರ ದೇಶದಲ್ಲಿ ಇಡೀ ದೇಶವಾಸಿಗಳ ಚಿಂತನೆಗಳನ್ನು, ನಡವಳಿಕೆಗಳನ್ನು ಪ್ರಭಾವಿಸಬಲ್ಲ ಧೀಮಂತ ನಾಯಕರ ಕೊರತೆ ಇರುವುದರಿಂದ ದೇಶದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಇವುಗಳನ್ನು ಮೇಲ್ಮಟ್ಟಕ್ಕೆ ಏರಿಸಲು ಸಂಘಟಿತ ಧೀಮಂತ ನಾಯಕತ್ವದಿಂದ ಸಾಧ್ಯ. ಆದರೆ ಅಂತ ನಾಯಕತ್ವ ಸಧ್ಯಕ್ಕೆ ಭಾರತಲ್ಲಾಗಲಿ, ಕರ್ನಾಟಕದಲ್ಲಿ ಆಗಲಿ ಕಾಣಿಸುತ್ತಿಲ್ಲ.

    Reply
    1. Anonymous

      you are true. corruption is in our genes. it is in our blood. one of the reason for this is India is the overly populated country from the beginning. and the other reason is we are untouched by many terrific natural catastrophes. and war from centuries. we are safe. rather we feel we are safe. for us tomorrow is no different from today.we think tomorrow will be like today only. no fear of earthquake, tsunami, wild fire, volcano eruption, etc etc. so we think, “no need to take care of anything.make your own money and be happy.” we do not take precaution while building public constructions. there is no need. we construct and manufacture everything of poor quality.and make money out of it. it goes on for everything.we are like that. we have to accept it if we want to change it.

      Reply
  2. ananymous

    ಸಂಪಾದಕೀಯ ಬಳಗ ತಾವು ಹಾಕಿಕೊಂಡಿರೋ ಮುಸುಕನ್ನ ಸಮರ್ಥಿಸಿಕೊಳ್ಳೊಕೆ ಮಾತ್ರ ನಿಮ್ಮ ಪತ್ರಕ್ಕೆ ಉತ್ತರ ಕೊಟ್ಟಿದೆ ಅಂತ ನಿಮಗ್ಯಾಕೆ ಅನ್ಸೋಲ್ಲ…. ಸಂಪಾದಕೀಯ ಬಳಗದವರೂ ಸಹ ಭ್ರಷ್ಟರಿರಬಹುದಲ್ಲಾ? ಅವರು ಮಾತ್ರ ಜವಾಬ್ದಾರಿ ತೋರಿಸ್ತಿದ್ದಾರೆ ಅಂತ ನೀವು ಹೇಗೆ ಹೇಳ್ತೀರ?

    Reply
  3. Pingback: ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು… « ವರ್ತಮಾನ – Vartamaana

Leave a Reply

Your email address will not be published. Required fields are marked *