Daily Archives: November 1, 2011

ಕನ್ನಡ ಶಾಲೆಗಳಿಗೆ ಬಿತ್ತು ಬೀಗ – ಕನ್ನಡ ಭಾಷೆಗೆ ಬಂತು ಕುತ್ತು

 -ಹುಲಿಕಲ್ ನಟರಾಜ್

“ನಾನು ಕೂಲಿ ಕೆಲಸ ಮಾಡ್ಕೊಂಡು ಜೀವ್ನ ಮಾಡ್ದೆ.  ಕೂಲಿ ಮಾಡಿದ್ರೂ ಪರವಾಗಿಲ್ಲ, ನನ್ನ ದುಡ್ಡೆಲ್ಲಾ ಅವ್ನಿಗೆ ಓದಕ್ಕೆ ಸುರುದ್ರೂ ಪರವಾಗಿಲ್ಲ ನನ್ನ ಮಗ ಇಂಗ್ಲಿಷ್ ಶಾಲೆನಲ್ಲೇ ಓದ್ಬೇಕ್,”

“ನೋಡ್ರಿ ಪಕ್ಕದ ಮನೆ ಹುಡ್ಗಿ ಇಂಗ್ಲಿಷ್ನಲ್ಲಿ ಹ್ಯಾಂಗ್ ಮಾತ್ನಾಡ್ತಾಳೆ. ನನ್ನ ಮಗಳೂ ಅವಳ್ಗೆ ಎದೆ ಸೀಳಿದ್ರೂ ಒಂದಕ್ಷರ ಬರಲ್ಲ. ಅವ್ಳ್ನ ಇಂಗ್ಲಿಷ್ ಶಾಲ್ಗೆ  ಸೇರ್ಸಿ ಅಂತಾ ಬಡ್ಕೊಂಡೆ.  ನನ್ನ ಮಾತು ಯಾರೂ ಕೇಳ್ಲಿಲ್ಲ.”

ಇದು ಇಂದಿನ ಗಂಡ ಹೆಂಡತಿ ನಡುವಿನ ಮಾತು.

ಇಂಗ್ಲಿಷ್ ಶಾಲೇಲಿ ಓದಿದ್ರೆ ಮಹಾ ಬುದ್ದಿವಂತ. ಕನ್ನಡ ಶಾಲೇಲಿ ಓದಿದ್ರೆ ಬಹಳ ದಡ್ಡ ಎಂಬ ಮಾತು ಎಲ್ಲರ ಮನದಲ್ಲಿ ಹಾಸುಹೊಕ್ಕಾಗಿದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವ ನುಡಿ ಬಹಳ ಹಿಂದಿನದು. ಈಗ ಇಂಗ್ಲಿಷ್‌ಗಾಗಿ ಮಕ್ಕಳನ್ನ ಇಂಗ್ಲಿಷ್ ಶಾಲೆಗೆ ಸೇರಿಸಿ ನಿಮ್ಮ ಮಗ-ಮಗಳು ಕಲ್ಪವೃಕ್ಷವಾಗುತ್ತಾರೆ ಎಂಬ ಮಾತು ಜನಜನಿತ.

ಕನ್ನಡ ಬೆಳೆಸಬೇಕು, ರಕ್ಷಣೆ ಮಾಡಬೇಕು, ಕನ್ನಡವೇ ನನ್ನ ಉಸಿರು, ಕನ್ನಡ ತಾಯಿ ಸೇವೆಯೇ ನಮ್ಮ ಸಂಘದ ಧ್ಯೇಯ, ಕನ್ನಡ ಮಾತನಾಡುವವರಿಗೆ ಕೆಲಸ ಕೊಡಬೇಕು ಎಲ್ಲೆಲ್ಲೂ ಕನ್ನಡ ಇರ್ಬೇಕು, ಕನ್ನಡಕ್ಕಾಗಿ ನನ್ನ ಪ್ರಾಣ ಬೇಕಾದ್ರೆ ಬಿಡುತ್ತೀವಿ ಎಂದೆಲ್ಲ ಕನ್ನಡ ಭಾಷೆ ಬಗ್ಗೆ ಉಗ್ರ ಹೇಳಿಕೆ ನೀಡುವವರೂ ತಮ್ಮ ಮಕ್ಕಳನ್ನ ಇಂದು ಇಂಗ್ಲಿಷ್ ಶಾಲೆಗೆ  ಸೇರಿಸಿದ್ದಾರೆ. ಇನ್ನು  ಅಂತಹವರು ಕನ್ನಡದ ಶಾಲೆಗಳ ಬಗ್ಗೆ ಮಾತನಾಡಲು ಸಾಧ್ಯನಾ?

ಪ್ರೀತಿ ಸಿಗೋದು ಮಾತೃ ಭಾಷೇಲಿ

ಆದುನಿಕ ಜಗತ್ತಿನ ಜಾಗತೀಕರಣದ ಯುಗದಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹದ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳು  ಅಲ್ಪ ಸ್ವಲ್ಪ  ತಮ್ಮ ಅಸ್ತಿತ್ವ ಉಳಿಸಿಕೊಂಡು ಬಂದರೂ ಇನ್ನು ಕೆಲವೇ ದಿನಗಳಲ್ಲಿ ಮುಚ್ಚುವ ಕಾಲ ದೂರವಿಲ್ಲ. ಕನ್ನಡ ಶಾಲೆಯಲ್ಲಿ ಓದಿದ ಜನ ಐಎಎಸ್ ಐಪಿಎಸ್ ಉತ್ತೀರ್ಣರಾಗಿ ಉನ್ನತ ಅಧಿಕಾರಿಗಳಾಗಿದ್ದಾರೆ. ನೀವು ಯಾವುದೇ ಮಾತೃ ಭಾಷೆಯ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಸಂಘಟನಾ ಪ್ರವೃತ್ತಿ, ಹಂಚಿ ತಿನ್ನುವ ಮನೋಭಾವ, ಮನುಷ್ಯ ಮನುಷ್ಯನಾಗಿ ಬಾಳುವ ಮನೋವೃತ್ತಿ ಆ ಮಕ್ಕಳಲ್ಲಿ ಇರುತ್ತದೆ. ಏಕೆಂದರೆ ಬಡತನದ ಬೇಗೆಯಲ್ಲಿ  ಕಷ್ಟವನ್ನು ಸಹಿಸಿಕೊಂಡು ತಮ್ಮ ಜೊತೆ ಇರುವುದನ್ನೇ ಹಂಚಿತಿನ್ನುವ ಗುಣವನ್ನು ತಮ್ಮ ಭಾಷೆ ಕಲಿಸುತ್ತದೆ. ಅಲ್ಲದೆ ಕಷ್ಟಗಳ ಪರಿಪಾಠ ಬಳುವಳಿಯಾಗಿ ಬಂದಿರುವುದರಿಂದ  ಕಷ್ಟಸುಖಗಳ ನಡುವೆ ತಂದೆ ತಾಯಿ ಹೊಡೆದಾಟದ ನಡುವೆಯೂ ಅವರ ಪ್ರೀತಿ ಒಡನಾಟದ  ಜೀವನ ಮಕ್ಕಳಿಗೂ ಬಳುವಳಿಯಾಗಿರುತ್ತದೆ.

ಕನ್ನಡ ಶಾಲೆಗಳು ಏಕೆ ಮುಚ್ಚುತ್ತಿವೆ ?

ಕನ್ನಡ ಶಾಲೆಯಲ್ಲಿ ವೃತ್ತಿ ಮಾಡುತ್ತಿರುವ ಶಿಕ್ಷಕನಿಂದ ಹಿಡಿದೂ ಕನ್ನಡ ಶಾಲೆಗಳು ಉಳಿಯಬೇಕು ಎಂದು ಆಂದೋಲನ ಮಾಡುತ್ತಿರುವ ಸಂಘಟನೆಗಳವರೆಗೆ ಯಾರೂ ತಮ್ಮ ಮಕ್ಕಳನ್ನು ಕನ್ನಡ  ಶಾಲೆಗೆ ಸೇರಿಸಿಲ್ಲ  ಕನ್ನಡ ಶಾಲೆಯಲ್ಲಿ ಬೋದಿಸುತ್ತಿರುವ  ಶಿಕ್ಷಕನಿಗೆ ವೃತ್ತಿಯಲ್ಲಿ ಬದ್ದತೆ ,ಪ್ರಾಮಾಣಿಕತೆ ಅರ್ಪಣಾ ಮನೋಭಾವ ಇದ್ದರೂ  ತನ್ನ ಮಗುವನ್ನು ಕನ್ನಡ ಶಾಲೆಗೆ  ಸೇರಿಸದೆ ಬೇರೆ ಮಗುವನ್ನು ಸೇರಿಸಿ ಎಂದು ಕೇಳುವ ನೈತಿಕ ಸ್ಥೆರ್ಯ ಎಲ್ಲಿಂದ ಬರಬೇಕು, ಕನ್ನಡ ಶಾಲೆಯಿಂದ ಲಕ್ಷಾಂತರ ಜೀವನ ನಡೆಸುತ್ತಿರುವ ಅಧಿಕಾರಿಗಳವರೆವಿಗೂ ತಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಸೇರಬೇಕು ಎನ್ನುವ ಗುಣ ಇರುವುದರಿಂದಲೇ ಸದರಿ ಸಾಲಿನಲ್ಲಿ 1250  ಕನ್ನಡ ಶಾಲೆಗಳು ಮುಚ್ಚುತ್ತಿವೆ.

ಶಾಲೆಯ ಹೊರಗೆ ಹೆಚ್ಚು ಕೆಲಸ

ಸರ್ಕಾರಿ ಶಿಕ್ಷಕರು ಶಾಲೆಯಲ್ಲದೆ  ಜನಗಣತಿಯಿಂದ ಹಿಡಿದು ದನಗಣತಿವರೆಗೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.ಇದರ ಮದ್ಯೆ ತಮ್ಮ ಸ್ವಂತ ಕೆಲಸಕ್ಕೆ ಹೆಚ್ಚು ಹೊತ್ತು ಕೊಡುತ್ತಾರೆ .ಖಾಸಗಿ ಶಾಲೆಯ ಶಿಕ್ಷಕರ ಸೇವೆ  ಪಾಠಕ್ಕಾಗಿ ಹೆಚ್ಚು ಕಾಲ ಮೀಸಲಿಡಬೇಕಾಗುತ್ತದೆ, ಮಕ್ಕಳು ರ್‍ಯಾಂಕ್ ಬಂದರೆ ಅವರಿಗೆ ಶಾಲೆಯಲ್ಲಿ ವೇತನ ಇಲ್ಲದಿದ್ದರೆ ಶಾಲೆಯಿಂದ ಗೇಟ್ ಪಾಸ್. ಖಾಸಗಿ ಶಾಲೆಯಲ್ಲಿ ತರಬೇತಿ ಪಡೆಯದವರೇ ಹೆಚ್ಚು . ಸರ್ಕಾರಿ ಶಾಲೆಗೆ ಆಯ್ಕೆಯಾಗಿ ಉಳಿದ ಶಿಕ್ಷಕರು ಖಾಸಗಿ ಶಾಲೆಯಲ್ಲಿರುತ್ತಾರೆ . ರ್‍ಯಾಂಕ್ ಪಡೆದ ಬುದ್ದಿವಂತ ತರಬೇತಿ ಪಡೆದ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿಯೇ ಹೆಚ್ಚು . ಆದರೆ ಫಲಿತಾಂಶ ಖಾಸಗಿ ಶಾಲೆಯಲ್ಲಿ 100 ಸರ್ಕಾರಿ ಶಾಲೆಯಲ್ಲಿ ಶೂನ್ಯ. ಇಂದು ಜನ ಸಾಮಾನ್ಯನಿಗೂ ಸರ್ಕಾರಿ ಶಾಲೆ ಮೇಲೆ ನಂಬಿಕೆ ಇಲ್ಲದ್ದು. ಅಲ್ಲದೆ ಇಂದು ಖಾಸಗಿ ಶಾಲೆಯ ಟ್ರಂಡ್ ಬಹಳವಾಗಿರುವುದು.

  • ಸರ್ಕಾರ  ಶಾಲೆಗಳಿಗೆ ಭೌತಿಕ ಸವಲತ್ತು ನೀಡಿದರೆ ಸಾಲದು ಶಾಲೆಯಲ್ಲಿರುವ ಶಿಕ್ಷಕರಿಗೆ  ಶಾಲೆಯ ಉಳಸುವಿಕೆ ಹಾಗೂ ಕರ್ತವ್ಯದಲ್ಲಿ ಭದ್ದತೆ ಬಗ್ಗೆ ತರಬೇತಿ ನೀಡಬೇಕು.
  • ತಾನು ಕಲಿಸುವ ಮತ್ತು ವೇತನ ಪಡೆಯುತ್ತಿರುವ  ಶಾಲೆಯ ಅಸ್ಥಿತ್ವದ ಬಗ್ಗೆ ಶಿಕ್ಷಕರು ಚಿಂತಿಸ ಬೇಕು.
  • ಸರ್ಕಾರ ಕೇವಲ ರ್‍ಯಾಂಕ್ ನೀಡುವ ಶಾಲೆಗಳಿಗಿಂತ ಬದುಕು ರೂಪಿಸುವ ಶಾಲೆಗಳಿಗೆ ಒತ್ತು  ನೀಡಬೇಕು.
  • ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಕನ್ನಡ  ಶಾಲೆಗಳಿಗೆ ಹೆಚ್ಚು ಅನುದಾನ ನೀಡಬೇಕು.
  • ಪೋಷಕರು ರ್‍ಯಾಂಕ್‌ಗೆ ಮಾರು ಹೋಗದೆ ಮಗುವಿಗೆ  ಪ್ರೀತಿ ಕೊಟ್ಟು ಪ್ರೀತಿ ಪಡೆಯುತ್ತಾ ಮಾನವೀಯ ಸಂಬಂಧಗಳ ಉಳಿವಿಗೆ ಗಮನ ನೀಡಬೇಕು.
  • ಶಿಕ್ಷಕರು  ವೇತನ ವಿಳಂಬವಾದರೆ  ಸಂಘಟನೆ  ಮಾಡಿಕೊಂಡು ಹೇಗೆ ತಮ್ಮ ಸವಲತ್ತು ಪಡೆಯುತ್ತಾರೋ ಹಾಗೇ ಶಾಲೆ ಉಳಿಸಿ ಅಭಿವೃದ್ದಿಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು.
  • ಶಿಕ್ಷಕರು ಮತ್ತು  ಜನಪ್ರತಿನಿದಿಗಳು, ಜನಸಾಮಾನ್ಯರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು  ಕನ್ನಡ ಶಾಲೆಗೆ ಸೇರಿಸಬೇಕು,
  • ಶಿಕ್ಷಕರು  ಕಲಿಕೆಯಲ್ಲಿ ಸದಾ ವಿದ್ಯಾರ್ಥಿಯಾಗಿ ಹೊಸತನ್ನು ಅಳವಡಿಸಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮತ್ತು ಸಂಶೋಧನೆ ಮಾಡುತ್ತಾ ಮಕ್ಕಳಿಗೆ ಹೊಸತನ್ನು ಕಲಿಸಿದರೆ ಶಾಲೆ ಉಳಿಯುತ್ತವೆ.