ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ

– ಪರಶುರಾಮ ಕಲಾಲ್

’ಪತ್ರಕರ್ತರಾಗಿ ಬರುವವರು ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಓದಿಕೊಂಡಿರುವುದಿಲ್ಲ. ಇತ್ತೀಚೆಗಂತೂ ಬರುವ ಪತ್ರಕರ್ತರಿಗೆ ರಾಜಕೀಯ ಪರಿಜ್ಞಾನವೂ ಇರುವುದಿಲ್ಲ,’ ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಪತ್ರಕರ್ತ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಪಂಪ, ರನ್ನ ಗೊತ್ತಿಲ್ಲ ಎಂಬ ದಿಗ್ಭ್ರಮೆಯನ್ನು ಸಂಪಾದಕರೊಬ್ಬರು ಬರೆದುಕೊಂಡಿದ್ದರು. ಅವರ ಪತ್ರಿಕೆಯೇ ಇತ್ತೀಚೆಗೆ ವರದಿಗಾರರು/ಉಪ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹಿರಾತಿನಲ್ಲಿ ವಯಸ್ಸಿನ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಾರೆ. ಈ ವಯಸ್ಸಿನಲ್ಲಿ ಬರುವ ಯುವಕರಿಗೆ ಪಂಪ, ರನ್ನ ಹೇಗೆ ಗೊತ್ತಾಗಲು ಸಾಧ್ಯ? ಅದೃಷ್ಟವಶಾತ್ ತೆಳ್ಳಗೆ, ಬೆಳ್ಳಗೆ ನೋಡಲು ಚೆಂದ ಇರಬೇಕು ಎಂದು ಹೇಳದಿರುವುದು ನಮ್ಮ ಪುಣ್ಯ ಎಂದೇ ಭಾವಿಸಬೇಕಾಗಿದೆ.

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ. ಅವರು ಆಯಾ ಎಡಿಷನ್‌ಗಳ ಫೇಜ್ ತುಂಬಿಸುತ್ತಾ ಹೋಗಬೇಕು. ಹೀಗೆ ನಿವ್ವಳ ಗುಡ್ಡೆ ಹಾಕುವ ಕೆಲಸಕ್ಕೆ ವರದಿಗಾರರು ಬೇಕಾಗಿದ್ದಾರೆ ಹೊರತು ಅವರು ಹೇಗೆ ಬರೆಯಬಲ್ಲರು? ಅವರಲ್ಲಿ ಒಳನೋಟ ಇರುವ ಬರವಣಿಗೆ ತೆಗೆಯಲು ಸಾಧ್ಯವೇ? ಅವರನ್ನು ಹೇಗೆ ಮಾನಿಟರ್ ಮಾಡಬೇಕು. ಸಿದ್ಧಗೊಳಿಸಬೇಕು ಎಂಬ ಕಳಕಳಿ ಈಗ ಯಾವ ಪತ್ರಿಕೆಯಲ್ಲೂ ಉಳಿದಿಲ್ಲ.

ಉಪ ಸಂಪಾದಕರು/ ಜಿಲ್ಲಾ ವರದಿಗಾರರು ಕೂಡಾ ಸ್ಥಳೀಯ ಪೇಜು ತುಂಬಿಸುವವರಾಗಿಯೇ ಹೋಗಿದ್ದಾರೆ. ಬಿಡಿ ಸುದ್ದಿಗಾರರಂತೂ ಒಂದೆರಡು ಫೋಟೋ, ಎರಡುಮೂರು ಸುದ್ದಿ ಹಾಕಿ, ನಿಟ್ಟಿಸಿರು ಬಿಡುತ್ತಾರೆ.

ಈ ಪೇಜ್ ನೋಡಿಕೊಳ್ಳುವ ಉಪ ಸಂಪಾದಕ ಮಹಾಶಯರು ಬೇಗನೇ ಪೇಜು ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿ ಬಣವಿ ತರಹ ಸುದ್ದಿಗಳನ್ನು ಜೋಡಿಸಿ, ಕೈ ತೊಳೆದು ಕೊಂಡು ಹೋಗಿ ಬಿಡುತ್ತಾರೆ. ಈ ಎಡಿಷನ್ ಹಾವಳಿಯಿಂದ ಈ ಸ್ಥಳೀಯ ಪೇಜ್‌ಗಳು ಎಷ್ಟು ಹಾಳಾಗಿವೆ ಎಂದರೆ ಅಲ್ಲಿ ಕಾಗುಣಿತ ದೋಷ ಸೇರಿದಂತೆ ಪತ್ರಿಕೆಗಳಿಗೆ ಇರುವ ತನ್ನದೇ ಆದ ಭಾಷೆಯೇ (ಸ್ಟೈಲ್‌ಷೀಟ್) ಮಾಯವಾಗಿ ಹೋಗಿರುತ್ತದೆ.

ನಮ್ಮ ಬಳ್ಳಾರಿ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ ಪ್ರಜಾವಾಣಿ ಎರಡು ಪುಟಗಳನ್ನು ಬಳ್ಳಾರಿ ಜಿಲ್ಲೆಗೆ ಮೀಸಲಿಟ್ಟಿದೆ (2-3ನೇ ಪೇಜ್‌ಗಗಳು). ಜಾಹಿರಾತು ಹೆಚ್ಚಾದರೆ ಮತ್ತೇ ಎರಡು ಪೇಜ್‌ಗಳನ್ನು ಹೆಚ್ಚಿಗೆ ಕೊಡುತ್ತದೆ. ವಿಜಯ ಕರ್ನಾಟಕದ್ದಂತೂ ಇನ್ನೂ ವಿಚಿತ್ರ. ಯಾವ ಪುಟದಲ್ಲಿ ಯಾವುದು ಲೋಕಲ್, ಯಾವುದು ಸ್ಟೇಟ್ ನ್ಯೂಸ್ ಎಂದು ಗೊತ್ತಾಗದಷ್ಟು ಮಿಕ್ಸ್  ಮಾಡಿ ಹಾಕಲಾಗಿರುತ್ತೆ. ಕೆಲವೊಮ್ಮೆ ಮುಖ ಪುಟದಲ್ಲಿ ಬಂದಿರುವ ಸುದ್ದಿ ಇನ್ನೊಂದು ಎಡಿಷನ್‌ನಲ್ಲಿ ಮಂಗಮಾಯ ಆಗಿರುತ್ತದೆ. ಕನ್ನಡಪ್ರಭ, ಉದಯವಾಣಿಯದು ಕೂಡಾ ಇದೇ ಕಥೆ.

ಗಣಿಗಾರಿಕೆಯ ಉಬ್ಬರ ಇರುವಾಗ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾದ ಅನೇಕ ಅಂಶಗಳನ್ನು ಬಿಡಿ ಸುದ್ದಿಗಾರರು ಬರೆದಿದ್ದಾರೆ. ಈ ಸುದ್ದಿಗಳು ಬಂದಿವೆ ಕೂಡಾ. ರಾಜ್ಯಮಟ್ಟದ ಸುದ್ದಿಯನ್ನಾಗಿ ಮಾಡಬಹುದಾದ ಗಮನ ಸೆಳೆಯುವ ಸುದ್ದಿಗಳೇ ಅವು. ಬರೆಯುವ ಶೈಲಿಯಲ್ಲಿ ಹೆಚ್ಚುಕಡಿಮೆ ಇರಬಹುದು. ಡೆಸ್ಕ್‌ನಲ್ಲಿ ಇರುವ ಉಪ ಸಂಪಾದಕರು ಅದರ ಮಹತ್ವ ನೋಡಿ, ಪುನಃ ಬರೆಸಿ, ಅದನ್ನು ರಾಜ್ಯ ಸುದ್ದಿಯನ್ನಾಗಿ ಮಾಡಬೇಕಿತ್ತು. ಆದರೆ ಪೇಜ್ ತುಂಬಿಸುವ ಧಾವಂತ, ಬಿಡಿ ಸುದ್ದಿಗಾರರ ಬಗ್ಗೆ ಇರುವ ಉಪೇಕ್ಷೆ ಎಲ್ಲವೂ ಸ್ಥಳೀಯ ಪೇಜ್‌ಗಳಲ್ಲಿ ಬಂದು ಅಂತಹ ಸುದ್ದಿಗಳು ಕಳೆದು ಹೋಗಿ ಬಿಡುತ್ತವೆ. ಎಷ್ಟು ಸುದ್ದಿಗಳು ಹೀಗೆ ಕಳೆದು ಹೋಗಿವೆ?

ರಾಜ್ಯಮಟ್ಟದ ಸುದ್ದಿಗಳಿಗಾಗಿ ಎಷ್ಟು ಪೇಜ್‌ಗಳನ್ನು ಮೀಸಲಿಟ್ಟಿವೆ. ಯಾವುದು ರಾಜ್ಯದ ಸುದ್ದಿ? ಇದು ಒಂದು ಪ್ರಶ್ನೆಯಾದರೆ ಮತ್ತೊಂದು ಅಂಕಣಕೋರರ ಹಾವಳಿ. ಪ್ರಜಾವಾಣಿಯನ್ನು ಹೊರತು ಪಡೆಸಿ, ಉಳಿದ ದಿನ ಪತ್ರಿಕೆಗಳನ್ನು ನೋಡಿ ಅಲ್ಲಿ ಮುಕ್ಕಾಲು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಅಂಕಣಕಾರರೇ ಸಾಗುವಳಿ ಮಾಡುತ್ತಿರುತ್ತಾರೆ. ಈ ಅಂಕಣಕೋರರ ಹಾವಳಿಯಿಂದಾಗಿ ಜಿಲ್ಲಾ ವರದಿಗಾರರು, ಉಪ ಸಂಪಾದಕರು ಕೂಡಾ ಏನೂ ಬರೆಯದ ಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ಥಳೀಯ ಪೇಜ್‌ಗಳಲ್ಲಿಯೇ ಅವರು ಕೃಷಿ ಮಾಡಲಾರಂಭಿಸುತ್ತಾರೆ. ಬೈಲೈನ್ ಹಾಕಿಕೊಂಡು ಚರಂಡಿ, ಟ್ರಾಫಿಕ್, ಹಂದಿಗಳ ಹಾವಳಿ ಎಂದೆಲ್ಲಾ ಬರೆದುಕೊಳ್ಳುತ್ತಾರೆ. ಅಂಕಣಕೋರನೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು ಕೇಳಿ, ಅಯ್ಯೋ ಎಲ್ಲಿಗೆ ಬಂತು ಜರ್ನಲಿಸಂ ಪ್ರತಾಪ ಅಂತಾ ಲೊಚಗುಡುವುದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯ?

ಹೀಗೆ ಪ್ರಶ್ನೆಗಳು ಸಾಕಷ್ಟು ಎದ್ದು ಬರುತ್ತವೆ. ಒಡನೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಸಹ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

3 thoughts on “ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ

  1. ರಾಜಾರಾಂ ತಲ್ಲೂರು

    ಲೇಔಟ್ ಆರ್ಟಿಸ್ಟ್ ಗಳು/ಪುಟ ಕಟ್ಟ ಬೇಕಾದವರು ಸಂಪಾದಕ ಹುದ್ದೆಗಳಲ್ಲಿ ಬಂದು ಕುಳಿತರೆ ಏನಾಗಬೇಕೋ ಅದೆಲ್ಲ ಆಗತೊಡಗಿದೆ. ಯಾಕೋ ಪತ್ರಿಕೋದ್ಯಮಿ ಮಾಲಕವರ್ಗದವರು ವಿದೇಶಗಳಲ್ಲಿ ಸುತ್ತಾಡತೊಡಗಿದ ಮೇಲೆ (ಕಳೆದ ಏಳೆಂಟು ವರ್ಷಗಳಿಂದೀಚೆಗೆ)ಪತ್ರಿಕೆಗಳ ಲೇಔಟ್ ಬಗ್ಗೆ ಅವರ ಕಾಳಜಿ ಹೆಚ್ಚತೊಡಗಿದೆ!

    Reply
  2. vaijanath hiremath

    ಮಾನ್ಯರೆ, ಇಲ್ಲಿ ಎದ್ದಿರುವ ಪ್ರಶ್ನೆಗಳು ನಿಜಕ್ಕೂ ಇವೊತ್ತಿನ ದಿನಮಾನಗಳಲ್ಲಿ ವ್ಯಾಪಕ ಚಿಂತನ ಮಂಥನ, ಚರ್ಚೆಗೆ ೊಳಪಡಿಸಬೇಕಾದ ಻ಗತ್ಯವಿದೆ. ಇವೊತ್ತು ನಿಜವಾಗಿಯೂ ಸ್ಟಾಪ್ ಪತ್ರಕರ್ತರು ಎನಿಸಿಕೊಂಡವರು ಪಿಗ್ಮಿ ಅಷ್ಟೇ ಅಲ್ಲ ಪಿಂಪ್ ಏಜೆಂಟರು ಎಂದರೂ ತಪ್ಪಾಗಲ್ಲ. ಯಾಕೆಂದರೆ 1ಕಡೆ ಶತಾಯ ಗತಾಯ ಪುಟ ತುಂಬಿಸಬೇಕು ಇನ್ನೊಂದು ಕಡೆ ತಮ್ಮ ತೆವಲು ತೀರಿಸಿಕೊಳ್ಳಬೇಕು ಸೋ. ಹೀಗಾಗಿ ಅದರಲ್ಲೂ ಕೆಲವರು ಪ್ರಾಮಾಣಿಕ ಕಾಯಕ ಮಾಡುವವರಿದ್ದಾರೆ ಆದರೆ ಬಹುತೇಕರು ತಮಗೆ ಇರುವ ಚೌಕಟ್ಟಿನಲ್ಲಿಯೇ ಮತ್ತೆ ಹಳದಿ ಕೃಷಿ ಮಾಡುವ ಮಾನಗೇಡಿಗಳಿಂದಾಗಿ ರಾಜ್ಯ ಪತ್ರಿಕೆಗಳ ಬಗ್ಗೆ 1ರೀತಿಯ ಪಿಂಪ್ ಭಾವನೆ ಜನರಲ್ಲಿ ಮೂಡುವಂತೆ ಮಾಡುವಲ್ಲಿ ಇಂತಹ ಕೆಲ ತಲೆಹಿಡುಕರು ಕಾರಣರಾಗಿದ್ದಾರೆ. ಉದಾ; ಯಾದಗಿರಿಯ ಪ್ರಮುಖ 1-2ಪತ್ರಿಕೆ ಹಾಗು ಟಿವಿಗೆ ಇರುವ ಏಜೆಂಟರು ಇದಕ್ಕೆ ಉತ್ತಮ ುದಾ. ಇದು ರಾಜ್ಯ ದೇಶ ೆಲ್ಲೆಡೆ ಇರುವ ಸಮಸ್ಯೆಯೇ ಆದರೆ ತೀರ ಹಿಂದುಳಿದ ನಮ್ಮೂರಲ್ಲಿ ಬೇರೆಡೆಯಿಂದ ಬಂದು ವಕ್ಕರಿಸಿಕೊಂಡಿರುವ 1ಪತ್ರಿಕೆಯ ವರದಿಗಾರನಂತೂ ತಲೆ ಹಿಡಿಯುತ್ತಿರುವುದು ನಿಜಕ್ಕೂ ನಮಗೆ ನಾವೇ ನಾಚಿಕೆಯಿಂದ ಛೀ. ಥೂ. ಅಂತಾ ನಮಗೆ ಅನ್ನುಕೊಳ್ಳಬೇಕಾಗಿದೆ ಥೂ…..ಆದರೂ ಪರಶುರಾಮ ರು ಚಪ್ಪಕೊಡ್ಡಲಿ ಬೀಸಿದ್ದಕ್ಕೆ ಅಭಿನಂದಿಸುವೆ… 😉

    Reply
  3. prasad raxidi

    ಬೆಕ್ಕಿಗೆ ಗಂಟೆ ಕಟ್ಟುವವರು ಯಾರು..? ಎಂದಿದ್ದೀರಲ್ಲ ಕಲಾಲ್ ಅವರೆ, ಎಲ್ಲ ವಿಚಾರಗಳಲ್ಲೂ ಅಷ್ಟೆ.. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು ಬೇರೆ ದಾರಿ ಇಲ್ಲ..

    Reply

Leave a Reply to ರಾಜಾರಾಂ ತಲ್ಲೂರು Cancel reply

Your email address will not be published. Required fields are marked *