Daily Archives: November 6, 2011

ಜೀವನದಿಗಳ ಸಾವಿನ ಕಥನ – 10

– ಡಾ.ಎನ್. ಜಗದೀಶ್ ಕೊಪ್ಪ

ಇದು ಉತ್ಪ್ರೇಕ್ಷೆಯ ಮಾತಲ್ಲ. ಇಂದು ಜಗತ್ತಿನೆಲ್ಲೆಡೆ ಅಣೆಕಟ್ಟಿನ ಯೋಜನೆಯಿಂದ ಸಂತ್ರಸ್ತರಾದ ಬಹುತೇಕ ಮಂದಿ ಹೇಳಹಸರಿಲ್ಲದಂತೆ ಕಣ್ಮರೆಯಾಗಿದ್ದಾರೆ. ಹಲವರನ್ನು ನಗರದ ಕೊಳೆಗೇರಿಗಳು ನುಂಗಿಹಾಕಿದರೆ, ಮತ್ತೆ ಕೆಲವರು ನಗರದಿಂದ ನಗರಕ್ಕೆ ವಲಸೆ ಹೋಗುವ ಕಾರ್ಮಿಕರಾಗಿ ಪರಿವರ್ತನೆ ಹೊಂದಿದ್ದಾರೆ.

ಪುನರ್ವಸತಿ ಪ್ರದೇಶದಲ್ಲಿ ಸರಕಾರಗಳು ನೀಡಿದ ಪರಿಹಾರ ಧನದಿಂದ ಹೊಸ ಬದುಕನ್ನು ರೂಪಿಸಿಕೊಂಡವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವು ಪುನರ್ವಸತಿ ಪ್ರದೇಶಗಳಲ್ಲಿ ಸಂತ್ರಸ್ತರ ಬದಲು ಹೊರಗಿನಿಂದ ಬಂದವರೇ ಬದುಕುತ್ತಿದ್ದಾರೆ. ಒರಿಸ್ಸಾದ ರೆಂಗಿಲಿ ಅಣೆಕಟ್ಟಿನ ಪುನರ್ವಸತಿ ಪ್ರದೇಶದಲ್ಲಿ ಒಂದೇ ಒಂದು ಕುಟುಂಬವೂ ಇಲ್ಲದಿರುವುದು ಸಮೀಕ್ಷೆಯಿಂದ ಧೃಡಪಟ್ಟಿದೆ. ಇಲ್ಲಿನ ಬಹುತೇಕ ಫಲಾನುಭವಿಗಳು ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.

ಚೀನಾ ಸರಕಾರ ಅಧಿಕೃತವಾಗಿ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ ಚೀನಾದಲ್ಲಿ ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದವರ ಪೈಕಿ ಶೇ.30ರಷ್ಟು ಮಂದಿ ಪರಿಹಾರ ಧನದಿಂದ ಹೊಸಬದುಕು ರೂಪಿಸಿಕೊಂಡಿದ್ದರೆ, ಶೇ.30 ರಷ್ಟು ಮಂದಿ ಸಂತೃಪ್ತ ಬದುಕು ರೂಪಿಸಲು ಹೆಣಗುತ್ತಿದ್ದಾರೆ. ಉಳಿದ ಶೇ.40 ರಷ್ಟು ಮಂದಿ ನಗರಗಳ ಕೊಳಗೇರಿಯಲ್ಲಿ ಬಡತನದ ರೇಖೆಯ ಕೆಳಗೆ ಬದುಕು ದೂಡುತ್ತಿದ್ದಾರೆ.

ಜಾಗತಿಕ ಮಟ್ಟದ ಸಮೀಕ್ಷೆಯಿಂದ ದೃಢ ಪಟ್ಟಿರುವ ಅಸಲಿ ಸಂಗತಿಯೆಂದರೆ, ಈವರೆಗೆ ಅಣೆಕಟ್ಟು ಯೋಜನೆಗಳಿಂದ ನೆಲೆ ಕಳೆದುಕೊಂಡವರ ಪೈಕಿ ಶೆ.80 ರಷ್ಟು ಅರಣ್ಯವಾಸಿಗಳು, ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಇವರೆಲ್ಲಾ ಅರಣ್ಯದಲ್ಲಿ ದೊರೆಯುತ್ತಿದ್ದ ಪುಕ್ಕಟೆ ಉರುವಲು ಕಟ್ಟಿಗೆ, ಹಣ್ಣು ಹಂಪಲು, ಗೆಡ್ಡೆ-ಗೆಣಸು, ತಮ್ಮ ಜಾನುವಾರುಗಳಿಗೆ ಯಥೇಚ್ಛವಾಗಿ ದೊರೆಯುತ್ತಿದ್ದ ಮೇವು ಮತ್ತು ನೀರಿನಿಂದ ಬಡತನದ ನಡುವೆಯೂ ಸರಳ ಸಂತೃಪ್ತ ಜೀವನ ಸಾಗಿಸುತ್ತಿದರು. ಆದರೆ ಪರಿಹಾರ ಧನ ಪಡೆದು ಹೊಸ ಸ್ಥಳಗಳಿಗೆ ಸ್ಥಳಾಂತರಗೊಂಡ ನಂತರ ಪ್ರತಿಯೊಂದಕ್ಕೂ ಹಣ ತೆರಬೇಕಾದ ಅಸಹಾಯಕ ಸ್ಥಿತಿಯಲ್ಲಿ, ಇತ್ತ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ.

ಅಣೆಕಟ್ಟು ಯೋಜನೆಗಳಿಂದ ಭೂಮಿ ಕಳೆದುಕೊಂಡವರಲ್ಲಿ ಬಹುತೇಕ ಅನಕ್ಷರಸ್ಥ ರೈತರೇ ಆಗಿರುವುದರಿಂದ, ಭ್ರಷ್ಟ ಅಧಿಕಾರಿಗಳು, ವಕೀಲರು, ರಿಯಲ್ ಎಸ್ಟೇಟ್ ಏಜೆಂಟರುಗಳ ದೊಡ್ಡ ಭೂಮಾಫಿಯಾವೊಂದು ಜಗತ್ತಿನೆಲ್ಲೆಡೆ ಈಗ ತಲೆಯೆತ್ತಿದೆ. ಯೋಜನೆಗಾಗಿ ಸರಕಾರ ನಿಗದಿ ಪಡಿಸಿದ ಭೂ ವಿಸ್ತೀರ್ಣ ಕುರಿತಂತೆ ಅಧಿಸೂಚನೆ ಹೊರಬೀಳುತ್ತಿದ್ದಂತೆ, ಅಣೆಕಟ್ಟು ಸ್ಥಳದ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಆಗಮಿಸುವ ಈ ಮಾಫಿಯಾ ತಂಡದ ಸದಸ್ಯರು, ರೈತರಿಗೆ ಹಣ ನೀಡಿ, ಅವರಿಂದ ಭೂಮಿ ಖರೀದಿಸಿ, ಅಧಿಕಾರಿಗಳೊಂದಿಗೆ ಶಾಮೀಲಾಗಿ, ಬಂಜರು ಭೂಮಿಯನ್ನು ಕೃಷಿ ಭೂಮಿಯೆಂದು ದಾಖಲೆಗಳನ್ನು ಪರಿವರ್ತಿಸಿ, ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.

Almatti-Dam

Almatti Dam

ಆಲಮಟ್ಟಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಬಾಗಲಕೋಟೆ ಸುತ್ತ-ಮುತ್ತ ಈ ರೀತಿ ದಂಧೆ ನಡೆದು ನೂರಾರು ವಕೀಲರು ಕೋಟ್ಯಾಧೀಶರಾಗಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿಶ್ವಬ್ಯಾಂಕ್, ಕರ್ನಾಟಕ ಮತ್ತು ಕೇಂದ್ರ ಸರಕಾರಕ್ಕೆ ಯೋಜನೆ ಮುಗಿಯುವವರೆಗೂ, ಪುನರ್ವಸತಿ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಬಿ.ಎಂ.ಜಾಮ್‌ದಾರ್ ಎಂಬ ಪ್ರಾಮಾಣಿಕ ಅಧಿಕಾರಿಯನ್ನು ಬದಲಾಯಸಬಾರದೆಂದು ಷರತ್ತು ವಿಧಿಸಿತ್ತು. ಜಾಮ್‌ದಾರ್ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ದೊರೆಯಿತು. ಇಂದಿಗೂ ಬಾಗಲಕೋಟೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಸ್.ಎಮ್. ಜಾಮ್‌ದಾರ್ ಎಂಬ ಪರಿಶುದ್ಧ ಹಸ್ತದ, ಜಿಗಟು ವ್ಯಕ್ತಿತ್ವದ ಐ.ಎ.ಎಸ್. ಅಧಿಕಾರಿ ದಂತಕತೆಯಾಗಿದ್ದಾರೆ.(ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಇವರ ಪಾತ್ರ ಮಹತ್ವದ್ದು.)

ನೆರೆಯ ಆಂದ್ರದ ಶ್ರೀಶೈಲ ಅಣೆಕಟ್ಟು ಯೋಜನೆಯ ಸಂದರ್ಭದಲ್ಲಿ (1981ರಲ್ಲಿ) ಭೂಮಿ ಕಳೆದುಕೊಂಡ 1 ಲಕ್ಷ ರೈತರಲ್ಲಿ ಪರ್ಯಾಯ ಕೃಷಿ ಭೂಮಿ ಸಿಗದೆ, ಶೇ.80 ರಷ್ಟು ರೈತರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ದೆಹಲಿ ಮೂಲದ ಲೋಕಾಯಣ್ ಸ್ವಯಂ ಸೇವಾ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.

ಮಧ್ಯ ಪ್ರದೇಶದಲ್ಲಿಯೂ ಹರಿಯುವ ನರ್ಮದಾ ನದಿಗೆ 1980 ರಲ್ಲಿ ಬಾರ್ಗಿ ಅಣೆಕಟ್ಟು ನಿರ್ಮಿಸುವ ಸಂದರ್ಭದಲ್ಲಿ ಅಲ್ಲಿನ ಸರಕಾರ, ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಪ್ರತಿಯೊಂದು ಆದಿವಾಸಿ ಕುಟುಂಬಕ್ಕೆ 5 ಎಕರೆ ಪರ್ಯಾಯ ಭೂಮಿ ಒದಗಿಸುವುದಾಗಿ ಭರವಸೆ ನೀಡಿತ್ತು, ಇದನ್ನು ನಂಬಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಸರಕಾರ ನೀಡಿದ್ದು ಒಂದು ನಿವೇಶನ, ಒಂದಿಷ್ಟು ಹಣ ಸಹಾಯ ಮಾತ್ರ. ಯೋಜನೆಯಿಂದ ಮುಳುಗಡೆಯಾಗುವುದು 29 ಸಾವಿರ ಹೆಕ್ಟೇರ್ ಪ್ರದೇಶ ಎಂದು ಹೇಳಲಾಗಿತ್ತು. ಯೋಜನೆ ಪೂರ್ಣಗೊಂಡು ಜಲಾಶಯದಲ್ಲಿ ನೀರು ಸಂಗ್ರಹವಾದಾಗ, ಅರಣ್ಯ ಹಾಗೂ ಕೃಷಿ ಭೂಮಿ ಸೇರಿ ಮುಳುಗಡೆಯಾದದ್ದು ಒಟ್ಟು 87 ಸಾವಿರ ಹೆಕ್ಟೇರ್ ಪ್ರದೇಶ. ಸರಕಾರದ ಸುಳ್ಳು ಆಶ್ವಾಸನೆಗಳಿಂದ 1 ಲಕ್ಷ 14 ಸಾವಿರ ಮಂದಿ ನಿರ್ಗತಿಕರಾದರು.

ಪುನರ್ವಸತಿಗಾಗಿ ಗೋರಕ್‌ಪುರ ಎಂಬಲ್ಲಿ ಭೂಮಿ ನಿಗದಿ ಪಡಿಸಿ, ಅಲ್ಲಿ ವಸತಿ, ಶಾಲೆ, ಸಮುದಾಯಭವನ, ಆಸ್ಪತ್ರೆ ಎಲ್ಲವೂ ನಿರ್ಮಾಣವಾದವು. ಆದರೆ ಅಲ್ಲಿ ಬಂದು ವಾಸಿಸಿದವರು, ಇತರೆಡೆಯಿಂದ ಬಂದ ವಲಸೆ ಕಾರ್ಮಿಕರು.

ಒಟ್ಟಾರೆ ಈ ಯೋಜನೆಗಳಿಂದ ಸಂತ್ರಸ್ತರಾದವರು ಮತ್ತು ನಿರ್ಗತಿಕರಾದವರು ಕೆಳ ಮಧ್ಯಮ ವರ್ಗದ ರೈತರು, ಆದಿವಾಸಿಗಳು ಮಾತ್ರ. 1994 ರಲ್ಲಿ ತಾನು ಕೈಗೆತ್ತುಕೊಂಡಿದ್ದ 192 ಯೋಜನೆಗಳ ಕುರಿತಂತೆ, ಪುನರ್ವಸತಿ ಕುರಿತು ಪರಾಮರ್ಶಿಸಿದ ವಿಶ್ವಬ್ಯಾಂಕ್, ಪರಿಹಾರ ಹಾಗೂ ಪುನರ್ವಸತಿ ವಿಷಯಗಳಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡಿದೆ. ಆದರೆ ಇದರ ಹೊಣೆಗಾರಿಕೆಯನ್ನು ಸ್ಥಳೀಯ ಸರಕಾರಗಳ ಮೇಲೆ ಹಾಕಿದೆ.

ಸ್ಥಳಾಂತರಗೊಂಡ ರೈತರ ದೊಡ್ಡ ಬವಣೆಯೆಂದರೆ ತಾವು ಪಾರಂಪರಿಕವಾಗಿ ತಮ್ಮ ಕೃಷಿಭೂಮಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳನ್ನು ಬೆಳೆಯಲಾರದ ಅಸಹಾಯಕ ಸ್ಥಿತಿ. ಇವರಿಗೆ ಸರಕಾರಗಳು ಪರ್ಯಾಯವಾಗಿ ಭೂಮಿ ನೀಡಿದ್ದರೂ ಕೂಡ ಬಹುತೇಕ ಎಲ್ಲಾ ಭೂಮಿಗಳು ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಗಳು.

1992 ರಲ್ಲಿ ವಿಯೆಟ್ನಾಂನ ಹೊಯಾಬಿನ್ ಅಣೆಕಟ್ಟು ಕಟ್ಟಿದ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ಬೆಳೆಯಾಗಿದ್ದ ಭತ್ತದ ಬೆಳೆಯಿಂದ ರೈತರು ವಂಚಿತರಾದರು. ಅವರಿಗೆ ನೀಡಿದ್ದ ಬಂಜರು ಭೂಮಿಯಲ್ಲಿ ಮೆಕ್ಕೆಜೋಳ ಮಾತ್ರ ಬೆಳೆಯಲು ಸಾಧ್ಯವಾಗಿತ್ತು. ಅನ್ನವೇ ಅವರಿಗೆ ಪ್ರಮುಖ ಆಹಾರವಾಗಿದ್ದ ಸಂದರ್ಭದಲ್ಲಿ ಈ ಸಂತ್ರಸ್ತರು ಮೆಕ್ಕೆಜೋಳವನ್ನೇ ತಿಂದು ಬದುಕಬೇಕಾಯಿತು.

ಬಹುತೇಕ ಜಗತ್ತಿನೆಲ್ಲೆಡೆ ಕಂಡು ಬಂದಿರುವ ಒಂದು ಸಾಮ್ಯತೆಯೆಂದರೆ, ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದ ಜನತೆ ಹೊಸ ಜಾಗದ ಪರಿಸರ, ನೀರು, ಆಹಾರಕ್ಕೆ ಹೊಂದಿಕೊಳ್ಳಲಾಗದೆ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದು. ಈ ಕುರಿತಂತೆ ನಮ್ಮ ನರ್ಮದಾ ಅಣೆಕಟ್ಟು ಯೋಜನೆಯ ನಿರಾಶ್ರಿತರ ಕುರಿತ ವರದಿ ಚಿಂತಾಜನಕ ಮಾತ್ರವಲ್ಲ ಭಯಾನಕವೂ ಆಗಿದೆ. ಕರಿಬಾ ಎಂಬ ಮೂಲ ಗ್ರಾಮದಿಂದ ಸ್ಥಳಾಂತರಗೊಂಡ ಜನತೆ, ಕೇವಲ 2 ತಿಂಗಳ ಅವಧಿಯಲ್ಲಿ ನಿದ್ರಾಹೀನತೆ, ಸಿಡುಬುರೋಗಗಳಿಗೆ ತುತ್ತಾಗಿ ಒಂದು ವರ್ಷದಲ್ಲಿ 121 ಮಂದಿ ಮೃತಪಟ್ಟರು. ಇವರಲ್ಲಿ ಬಹಳಷ್ಟು ಮಂದಿ ಮಕ್ಕಳು ಮತ್ತು ವೃದ್ಧರೇ ಆಗಿದ್ದರು.  1984 ರಲ್ಲಿ ಪರ್ವೆಟ ಎಂಬ ಪುನರ್ವಸತಿ ಶಿಬಿರದಲ್ಲಿ 17 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 11 ಮಕ್ಕಳು 4 ವರ್ಷಗಳ ಒಳಗಿನವರಾಗಿದ್ದರು. ಇವುಗಳ ಜೊತೆಗೆ ಬಹುತೇಕ ನಿರಾಶ್ರಿತರಿಗೆ ಅಣೆಕಟ್ಟು ಕೆಳಗಿನ ನದಿ ಪಾತ್ರದ ದಡದಲ್ಲಿ ಪುನರ್ವಸತಿ ಕಲ್ಪಿಸಿದ್ದು, ಜಲಾಶಯದಿಂದ ನೀರು ಹೊರಬಿಟ್ಟ ವೇಳೆ ಉಂಟಾಗುವ ಪ್ರವಾಹದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

The Sardar Sarovar Dam, partially completed in August 2008

ಸ್ಥಳಾಂತರದಿಂದ ಆದ ಮತ್ತೊಂದು ದೊಡ್ಡ ಅನಾಹುತವೆಂದರೆ ಅಗೋಚರವಾಗಿ ಸಂಭವಿಸಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳು. ಇಂದಿಗೂ ಕೂಡ ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದೆ. ಆದರೆ  ಸಂತ್ರಸ್ತರಿಗೆ ಪರಿಹಾರದ ಹಣವನ್ನು ನೀಡುವಾಗ ಪುರುಷರನ್ನು ಮಾತ್ರ ಗಣನೆಗೆ ತೆಗೆದುಕೊಂಡ ಪರಿಣಾಮವಾಗಿ, ಕೆಲವೊಮ್ಮೆ ಯಜಮಾನನ ದುಶ್ಚಟ, ವ್ಯಸನಗಳ ಕಾರಣದಿಂದ ಕುಟುಂಬದ ಮಹಿಳೆಯರು, ಮಕ್ಕಳು ಹಸಿವಿನಿಂದ ಬಳಲುವಂತಾಗಿದೆ. ಜೊತೆಗೆ ತಾವು ಬದುಕಿದ್ದ ಹಳ್ಳಿಯಲ್ಲಿ ಆಚರಿಸುತ್ತಿದ್ದ ಹಬ್ಬ, ಸಾಂಸ್ಕೃತಿಕ ಆಚರಣೆಗಳನ್ನು ಬಿಟ್ಟು, ಹೊಸಜಾಗದಲ್ಲಿ ಇವರಂತಯೇ ಸ್ಥಳಾಂತರಗೊಂಡ ಬೇರೆ ಹಳ್ಳಿಗಳ, ಬೇರೆ ಧರ್ಮ, ಜಾತಿಯ ಅಪರಿಚಿತ ಜನರ ಜೊತೆ ಒಟ್ಟಿಗೆ ಬದುಕಬೇಕಾದ ಸಂದರ್ಭದಲ್ಲಿ ಆವರಿಸಿಕೊಂಡ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಈ ಕುರಿತಂತೆ ಒರಿಸ್ಸಾದ ರೆಂಗಿಲಿ ಅಣೆಕಟ್ಟು ಯೋಜನೆಯ ನಿರಾಶ್ರಿತರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿರುವ ಒರಿಸ್ಸಾದ ಸಮಾಜ ಶಾಸ್ತ್ರಜ್ಞರಾದ ಎನ್.ಕೆ. ಬೆಹುರ ಮತ್ತು ಪಿ.ಕೆ.ನಾಯಕ್, ಪರಿಹಾರದ ಹಣ ಹಂಚಿಕೆಯ ಸಂಬಂಧ ಕುಟುಂಬ ಸದಸ್ಯರಲ್ಲಿ ಕಲಹ, ಒಡೆದುಹೋದ ಅವಿಭಕ್ತ ಕುಟುಂಬ ಪದ್ಧತಿ, ಹೊಸ ಪರಿಸರದಲ್ಲಿ ಪೋಷಿಸಿಕೊಂಡು ಬಂದಿದ್ದ ಜಾತಿ ಪದ್ಧತಿಯನ್ನು ಮುಂದುವರಿಸಲಾಗದ ಅಸಹಾಯಕತೆ, ಪತನಗೊಂಡ ಅವರ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಇವೆಲ್ಲವನ್ನೂ ಗುರುತಿಸಿದ್ದಾರೆ. ಹಾಗಾಗಿ ಒಂದು ಯೋಜನೆಯ ಸಫಲತೆಯ ಹಿಂದೆ ಅನೇಕ ವಿಕಾರ ಮತ್ತು ವಿಷಾದದ ಮುಖಗಳಿವೆ ಎಂಬುದನ್ನು ಅಭಿವೃದ್ಧಿಯ ಬಾಲ ಬಡುಕರು ಚಿಂತಿಸಬೇಕಾಗಿದೆ.

 (ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ ಮತ್ತು ರವಿ ಕೃಷ್ಣಾರೆಡ್ಡಿ