ನ್ಯಾ.ಕಟ್ಜು ಅವರ ಮಾತಿನಲ್ಲಿ ಟೀಕಿಸುವಂತಹ ಕಟುವಾದ್ದೇನಿದೆ?

– ಲೋಕವಿರೊಧಿ

ಪ್ರೆಸ್ ಕೌನ್ಸಿಲ್ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಾಟ್ಜು ಅವರ ಇಂದಿನ ಮಾಧ್ಯಮ ಕುರಿತ ಅಭಿಪ್ರಾಯಗಳು ಸಂಚಲವನ ಉಂಟುಮಾಡಿವೆ. ರಾಷ್ಟ್ರಮಟ್ಟದ ಪತ್ರಕರ್ತ ಸಂಘಟನೆಗಳು ಕಟ್ಜು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದರೆ, ಮತ್ತೊಂದು ವರ್ಗದಿಂದ ಅವರ ಮಾತುಗಳಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಚುರುಮುರಿ ಬ್ಲಾಗ್ ಆನ್ ಲೈನ್ ಪೋಲ್ ನಲ್ಲಿ ಸಂಗ್ರಹಿಸಿರುವ ಅಭಿಪ್ರಾಯಗಳನ್ನು ಗಮನಿಸಿದರೆ (ಸೋಮವಾರ ರಾತ್ರಿ 10ರವರೆಗೆ) ಪ್ರತಿಕ್ರಿಯಿಸಿದವರ ಪೈಕಿ ಶೇ. 75 ರಷ್ಟು ಮಂದಿ ನ್ಯಾ.ಕಟ್ಜು ಅವರ ಅಭಿಪ್ರಾಯಗಳಿಗೆ ಸಂಪೂರ್ಣ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ವಿರೋಧ ವ್ಯಕ್ತಪಡಿಸಿದವರು ಕೇವಲ 6.08 ರಷ್ಟು ಮಾತ್ರ. ಉಳಿದಂತೆ ಭಾಗಶಃ ಒಪ್ಪುವವರು ಶೇ.15.88 ಮತ್ತು ಭಾಗಶಃ ಒಪ್ಪದಿರುವವರು 3.04 ರಷ್ಟು.  ಚುರುಮುರಿಯ ಓದುಗರಲ್ಲಿ ಬಹುತೇಕರು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಮಾಧ್ಯಮದ ಬಗ್ಗೆ ಆಸಕ್ತಿ ಉಳ್ಳವರು. ಹಾಗಾಗಿ ಆ ಬ್ಲಾಗ್ ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

ಸಿಎನ್ಎನ್ ಐಬಿನ್ ಶುಕ್ರವಾರ ಪ್ರಸಾರ ಮಾಡಿದ ಲಾಸ್ಟ್ ವರ್ಡ್ ಕಾರ್ಯಕ್ರಮದಲ್ಲಿ ದಿ ಹಿಂದೂ ಪತ್ರಿಕೆ ಎಡಿಟರ್ ಇನ್ ಚೀಫ್ ಎನ್. ರಾಮ್ ಕೂಡಾ ನ್ಯಾ.ಕಟ್ಜು ಅವರ ಬಹುತೇಕ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದರು. ಬಹುತೇಕರಲ್ಲಿ ಸುಪ್ತವಾಗಿದ್ದ ಅಥವಾ ವೈಯಕ್ತಿಕ ನೆಲೆಯಲ್ಲಿಯೇ ಚರ್ಚೆಗೆ ಒಳಗಾಗಿರಬಹುದಾದ ಅಭಿಪ್ರಾಯಗಳು ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ಸಂದರ್ಶನದ ಕಾರಣ ಮುಖ್ಯವಾಹಿನಿಗೆ ಬಂದಿವೆ.

ನ್ಯಾ.ಕಟ್ಜು ಅವರ ಅಭಿಪ್ರಾಯಗಳನ್ನು ಟೀಕಿಸುವ ಸಂಪಾದಕರ ಗಿಲ್ಡ್ ಮತ್ತಿತರ ಸಂಘಟನೆಗಳು ಅವರು (ನ್ಯಾ.ಕಟ್ಜು) ಎತ್ತಿರುವ ಬಹುಮುಖ್ಯ ಆರೋಪ ರೂಪದ ಪ್ರಶ್ನೆಗಳನ್ನು ಎದುರಿಸಲೇ ಇಲ್ಲ. ನ್ಯಾಯಮೂರ್ತಿಯವರು ಮಾಡಿರುವ ಬಹುಮುಖ್ಯ ಮೂರು ಅಂಶಗಳು – ಮಾಧ್ಯಮ ಜನವಿರೋಧಿ, ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಸಮುದಾಯವನ್ನು ವಿಭಜಿಸುತ್ತದೆ ಮತ್ತು ಅನೇಕ ಪತ್ರಕರ್ತರ ಬೌದ್ಧಿಕ ಮಟ್ಟ ತೀರಾ ಸಾಮಾನ್ಯ.

1. ಮಾಧ್ಯಮ ಜನವಿರೋಧಿ:
ಎಲ್ಲಾ ಚಾನೆಲ್ ಗಳು, ಎಲ್ಲಾ ಸುದ್ದಿ ಸಂಸ್ಥೆಗಳು ಜನವಿರೋಧಿ ಎಂದು ಅವರು ಹೇಳಿಲ್ಲ. ‘ಬಹುತೇಕ’ ಎನ್ನುವ ಪದ ಬಳಸಿದ್ದಾರೆ. ಜನರ ನಿಜ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕ್ರಿಕೆಟ್ ಆಟಗಾರರನ್ನು, ಸಿನಿಮಾ ತಾರೆಯರನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲವೇ? ಐಶ್ವರ್ಯ ರೈಗೆ ಹುಟ್ಟುವ ಮಗು/ಮಕ್ಕಳ ಬಗ್ಗೆ ಬಿತ್ತರವಾದಷ್ಟು ವರದಿಗಳು, ಗ್ರಾಮೀಣ ಭಾರತದಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ವರದಿಗಳು ಪ್ರಕಟಗೊಂಡಿಲ್ಲ. ಐಶ್ವರ್ಯ ರೈ ನ ಮುಗುಳ್ನಗು ನೋಡಿಕೊಂಡು, ಹಳ್ಳಿಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಮಗುವಿಗೆ ಜನ್ಮ ನೀಡುವಾಗಲೇ ಪ್ರಾಣ ಕಳೆದುಕೊಳ್ಳುವ ಹೆಣ್ಣು ಮಕ್ಕಳ ದುಃಖ ಮರೆಯಬೇಕೆ? ಹಾಗಾದರೆ, ನ್ಯಾ.ಕಟ್ಜು ಅವರ ಅಭಿಪ್ರಾಯದಲ್ಲಿ ತಪ್ಪೇನಿದೆ?

2. ಕೋಮು ಭಾವನೆ ಬಿತ್ತನೆ:
ಭಾರತದ ಯಾವುದೇ ಭಾಗದಲ್ಲಿ ಬಾಂಬ್ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಮಾಧ್ಯಮ ಕಚೇರಿಗಳಿಗೆ ಈ-ಮೇಲ್ ಬರುತ್ತದೆ. ಈ-ಮೇಲ್ ಆಧರಿಸಿ ಸುದ್ದಿ ಸಂಸ್ಥೆಗಳು ಬಾಂಬ್ ದಾಳಿಯ ಹಿಂದೆ ಯಾರಿದ್ದಾರೆ ಎಂದು ಘೋಷಿಸಿಬಿಡುತ್ತದೆ. ಹಾಗೆ ತೇಲಿ ಬರುವ ಯಾವುದೇ ಒಂದು ಸಂಘಟನೆಯ ಹೆಸರು ಮೇಲ್ನೋಟಕ್ಕೆ ಮುಸ್ಲಿಂ ಸಂಘಟನೆ ಎಂದು ಹೇಳಲು ಯಾರಿಗೂ ಕಷ್ಟವಲ್ಲ. ಹೀಗೆ ಇಲ್ಲಿ ನಡೆಯುವ ಬಾಂಬ್ ದಾಳಿಗಳಿಗೆ ಮುಸ್ಲಿಂ ಸಂಘಟನೆಯೊಂದು ಹೊಣೆ ಎಂಬಂತೆ ಮಾಧ್ಯಮಗಳು ಯಾವುದೇ ಅಧಿಕೃತತೆ ಇಲ್ಲದ ಈ-ಮೇಲ್ ಆಧರಿಸಿ ಬಿಂಬಿಸುತ್ತಿರುವುದು ಸುಳ್ಳೇ? ಹಾಗಾದರೆ, ನ್ಯಾ.ಕಟ್ಜು ಮಾತುಗಳಲ್ಲಿ ತಪ್ಪು ಹುಡುಕುವ ಪ್ರಯತ್ನವೇಕೆ?

3. ಮೂಢ, ಅಂಧ ಆಚರಣೆಗಳಿಗೆ ಮಹತ್ವ:
ನ್ಯಾ.ಕಾಟ್ಜು ಅವರು ಮಾಡಿರುವ ಮತ್ತೊಂದು ಗಂಭೀರ ಆರೋಪ ಮೂಢ ಆಚರಣೆಗಳಿಗೆ ಮಾಧ್ಯಮ ಅನಗತ್ಯ ಮಹತ್ವ ನೀಡುತ್ತಿದೆ. ಇದನ್ನಂತೂ ಯಾರೂ ಸುಳ್ಳು ಎಂದು ಸಾಧ್ಯವಿಲ್ಲ. ಬಹುತೇಕ ಚಾನೆಲ್ ಗಳ ಬೆಳಗಿನ ಕೆಲ ಗಂಟೆಗಳು ಜ್ಯೋತಿಷಿಗಳಿಗೆ ಮೀಸಲು. ತಲೆ ಬುಡ ಇಲ್ಲದ ಶಾಸ್ತ್ರ ಹೇಳುತ್ತಾ ನೋಡುಗರನ್ನು ದಿಕ್ಕು ತಪ್ಪಿಸುತ್ತಾರೆ ಅವರು. ನ್ಯಾ.ಕಾಟ್ಜು ಅವರು ಹೇಳೋದು, ಆಧುನಿಕ ಪ್ರಜಾಪ್ರಭುತ್ವದತ್ತ ಸಾಗುತ್ತಿರುವ ಭಾರತದ ಮಾಧ್ಯಮ ನಡೆದುಕೊಳ್ಳಬೇಕಾದ ರೀತಿ ಇದಲ್ಲ ಎನ್ನುವುದು ನ್ಯಾಯಮೂರ್ತಿಯವರ ವಾದ.

4. ಅನೇಕ ಪತ್ರಕರ್ತರ ತಿಳವಳಿಕೆ ತೀರ ಕಡಿಮೆ.
ಇದು ಚರ್ಚಾಸ್ಪದ ವಿಚಾರ. ಮಾಧ್ಯಮದಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳು ಹಾಗೂ ಮಾಧ್ಯಮ ಮಂದಿ ಮಂಡಿಸುವ ಅಭಿಪ್ರಾಯದ, ವಿಷಯವನ್ನು ವಿಶ್ಲೇಷಿಸುವ ವಿಧಾನ – ಹೀಗೆ ಕೆಲವು ಸಂಗತಿಗಳ ಆಧಾರದ ಮೇಲೆ ನ್ಯಾ.ಕಟ್ಜು ಅವರು ಮಾಧ್ಯಮ ಕ್ಷೇತ್ರದಲ್ಲಿರುವ ಅನೇಕರಿಗೆ ಆರ್ಥಿಕ ಸಿದ್ಧಾಂತ, ರಾಜ್ಯಶಾಸ್ತ್ರ..ಹೀಗೆ ಯಾವ ವಿಚಾರದಲ್ಲೂ ನಿಪುಣರಲ್ಲ. ಇದೇ ಹೊತ್ತಿನಲ್ಲಿ ಅವರು ಮಾಧ್ಯಮ ಕ್ಷೇತ್ರದ ಎಲ್ಲರೂ ಹೀಗೆ ಎಂದು ಹೇಳಲಿಲ್ಲ. ಬದಲಿಗೆ ಕೆಲವರು ಅತ್ಯಂತ ಪ್ರಾಜ್ಞರು ಇದ್ದಾರೆ ಎಂದರು. ಜೊತೆಗೆ ಗ್ರಾಮೀಣ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಪಿ.ಸಾಯಿನಾಥ್ ರವರ ಹೆಸರನ್ನೂ ಉಲ್ಲೇಖಿಸಿದರು. ಆದರೆ ನ್ಯಾ.ಕಟ್ಜು ಅವರನ್ನು ಟೀಕಿಸುತ್ತಿರುವ ಬಹುತೇಕರು ಈ ಅಂಶವನ್ನು ಗಮನಿಸಲೇ ಇಲ್ಲ.

5. ಮಾಧ್ಯಮದ ಅತಿರೇಕದ ವರ್ತನೆ ನಿಯಂತ್ರಣಕ್ಕೆ ವಿಶೇಷ ಅಧಿಕಾರ:
ಕನ್ನಡದಲ್ಲಿಯೇ ಅನೇಕ ಟ್ಯಾಬ್ಲಾಯ್ಡ್ ಗಳಿವೆ. ಅನೇಕ ಬಾರಿ ಯಾವುದೇ ಸೂಕ್ತ ಆಧಾರ ಇಲ್ಲದೆ ಆರೋಪ ಮಾಡಿ ಮಾನಹಾನಿ ಪ್ರಕರಣಗಳಿವೆ. ಅಷ್ಟೇ ಅಲ್ಲ ಇತ್ತೀಚೆಗೆ ಚಾನೆಲ್ ಗಳು ಕೆಲವೊಮ್ಮೆ ಇದೇ ಧಾಟಿಯಲ್ಲಿ ವರ್ತಿಸುತ್ತಿವೆ. ಟಿಆರ್‌ಪಿಗಾಗಿ ಅಸಂಬದ್ಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇತ್ತೀಚೆಗೆ ಕನ್ನಡದ ಒಂದು ಸುದ್ದಿ ವಾಹಿನಿ ಲಕ್ಷ್ಮೀ ಹೆಸರಿನ ಪತ್ನಿಯನ್ನು ಹೊಂದಿರುವ ಗಂಡಂದಿರಿಗೆಲ್ಲಾ ಗಂಡಾಂತರ ತಪ್ಪಿದಲ್ಲ ಎಂದು ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ನೂರಾರು ಉದಾಹರಣೆ ನೀಡಬಹುದು. ಇಂತಹ ಭಾನಗಡಿಗಳನ್ನು ಮಾಡಿದಾಗ ಮಾಧ್ಯಮದ ಕಿವಿ ಹಿಂಡುವುದು ಯಾರು?

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡುವುದರ ಹೊರತಾಗಿ ಬೇರೆ ಅಧಿಕಾರ ಇಲ್ಲ. ಆ ಕಾರಣ ‘ವಿಶೇಷ ಸಂದರ್ಭದಲ್ಲಿ’ ಮಾತ್ರ ಬಳಸಲು ಕೆಲ ಅಧಿಕಾರಗಳು ಬೇಕು ಎಂದು ಕೇಂದ್ರ ಸರಕಾರವನ್ನು ಕೇಳುವ ಇರಾದೆ ನ್ಯಾ.ಕಟ್ಜು ಅವರದು.  ಈ ಸಂದರ್ಭ ಸೃಷ್ಟಿಯಾಗಲು ತಮ್ಮ ಜವಾಬ್ದಾರಿ ಮರೆತ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರೇ ಕಾರಣ. ಮಾಧ್ಯಮ ಸಂಸ್ಥೆಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳದೇ ಇರುವಾಗ ಪ್ರಭುತ್ವ ಅಂತಹದೊಂದು ಪ್ರಯತ್ನಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ಟಿಆರ್‌ಪಿಗಾಗಿ ತಲೆಕೆಟ್ಟ ಜ್ಯೋತಿಷಿಗಳನ್ನು ಕರೆತಂದು ಸ್ಟುಡಿಯೋದಲ್ಲಿ ಅಸಹ್ಯಗಳನ್ನು ಸೃಷ್ಟಿಸುತ್ತಿರುವಾಗ, ಅಪರಾಧದ ವರದಿಗಳಲ್ಲಿ ಮಹಿಳೆಯರನ್ನು ಹೀಗಳೆಯುವ ಭಾಷೆ ಬಳಸುತ್ತಿರುವಾಗ, ಕೋಮುಭಾವನೆ ಕೆರಳಿಸಿ ರಾಜಕೀಯ ಪಕ್ಷಗಳ ಏಜೆಂಟರಂತೆ ಚಾನೆಲ್ ಗಳು ವರ್ತಿಸುತ್ತಿರುವಾಗ… ನಿಯಂತ್ರಣ ಬೇಕು ಎನಿಸುವುದಿಲ್ಲವೆ? ನ್ಯಾ.ಕಟ್ಜು ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸರಕಾರದ ನಿಯಂತ್ರಣ ಅಪಾಯಕಾರಿ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾದರೆ, ಈಗಲಾದರೂ ಮಾಧ್ಯಮ ಕೇಂದ್ರ ನೇತಾರರು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಂಡು ಸಂಯಮ ಕಳೆದುಕೊಳ್ಳದೆ ಕಾರ್ಯಕ್ರಮ ಬಿತ್ತರ ಮಾಡುವ ನಿಟ್ಟಿನಲ್ಲಿ ಒಂದಿಷ್ಟು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬೋಣವೆ?

ಚಿತ್ರ ಕೃಪೆ: ಸಿಎನ್ಎನ್ ಐಬಿಎನ್.

3 thoughts on “ನ್ಯಾ.ಕಟ್ಜು ಅವರ ಮಾತಿನಲ್ಲಿ ಟೀಕಿಸುವಂತಹ ಕಟುವಾದ್ದೇನಿದೆ?

 1. Ananda Prasad

  ಭಾರತದ ಇಂದಿನ ದುಸ್ಥಿತಿಗೆ ಮಾಧ್ಯಮಗಳು ಕ್ರಿಯಶೀಲವಾಗಿಲ್ಲದೆ ಇರುವುದೇ ಪ್ರಧಾನ ಕಾರಣ ಅದರಲ್ಲೂ ಮುಖ್ಯವಾಗಿ ಟಿವಿ ಮಾಧ್ಯಮಕ್ಕೆ ಇದು ಹೆಚ್ಚು ಅನ್ವಯ. ಟಿವಿ ಮಾಧ್ಯಮಗಳು ಮನಸ್ಸು ಮಾಡಿದರೆ ಇಂದು ಭಾರತದ ಸ್ಥಿತಿಯನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿದೆ, ಅಂಥ ಶಕ್ತಿ ಟಿವಿ ಮಾಧ್ಯಮಕ್ಕಿದೆ, ಆದರೆ ಅದರ ಬಳಕೆ ಆಗುತ್ತಾ ಇಲ್ಲ. ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ಮಾತು ಸಂಪೂರ್ಣ ಸತ್ಯ ಎಂಬುದರಲ್ಲಿ ಸಂದೇಹವೇ ಇಲ್ಲ. ಟಿವಿ ಮಾಧ್ಯಮದ ಬೇಜವಾಬ್ದಾರಿಗೆ ಕಡಿವಾಣ ಹಾಕಬೇಕಾದ ಅಗತ್ಯ ಖಂಡಿತ ಇದೆ. ಬಂಡವಾಳ ಹಾಕಿದಾಕ್ಷಣ ಟಿವಿ ಮಾಧ್ಯಮದವರು ಹೇಗೆ ಬೇಕೋ ಹಾಗೆ ಅಸಂಬದ್ದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದು ಎಂಬುದು ಸಮಂಜಸವಲ್ಲ. ಟಿವಿ ಮಾಧ್ಯಮದಿಂದ ನಡೆಯುವ ಮೂಢನಂಬಿಕೆಗಳ ಪ್ರಸಾರಕ್ಕೆ ಕಡಿವಾಣದ ಅಗತ್ಯ ದೇಶದ ಹಿತದೃಷ್ಟಿಯಿಂದ ಅಗತ್ಯ. ದೇಶದ ಬಗ್ಗೆ ಚಿಂತನೆ ಮಾಡಲು ನಮ್ಮ ಟಿವಿ ಮಾಧ್ಯಮಕ್ಕೆ ಪುರುಸೊತ್ತು ಇಲ್ಲ, ಆದರೆ ಮೂಢ ನಂಬಿಕೆಗಳು, ಕಂದಾಚಾರಗಳ ಪರವಾಗಿ ಚರ್ಚೆ ಮಾಡಲು ಬೇಕಾದಷ್ಟು ಸಮಯ ಇದೆ. ಕನ್ನಡದ ಟಿವಿ ವಾಹಿನಿಗಳಲ್ಲಿ ಬೆಳಗ್ಗೆ ಒಂಭತ್ತು, ಹತ್ತು ಘಂಟೆವರೆಗೆ ಪ್ರಜ್ಞಾವಂತರು ನೋಡಬಹುದಾದ ಕಾರ್ಯಕ್ರಮಗಳೇ ಪ್ರಸಾರ ಆಗುತ್ತಾ ಇಲ್ಲ. ಭಕ್ತಿ ಗೀತೆಗಳು, ಪೂಜೆ ಪುನಸ್ಕಾರಗಳದ್ದೆ ಈ ಹೊತ್ತಿನಲ್ಲಿ ಕಾರುಬಾರು. ಯಾವುದಕ್ಕೂ ಒಂದು ಮಿತಿ ಎಂಬುದು ಬೇಡವೇ? ಆಕಾಶ ವಾಣಿಯಾದರೆ ಒಂದರ್ಧ ಮುಕ್ಕಾಲು ಘಂಟೆ ಬೆಳಗಿನ ಹೊತ್ತು ಭಕ್ತಿಗೀತೆ ಹಾಕುತ್ತಾರೆ, ಆದರೆ ಟಿವಿ ಮಾಧ್ಯಮದಲ್ಲಿ ಅದಕ್ಕೊಂದು ಮಿತಿಯೇ ಇಲ್ಲ. ಕುವೆಂಪು ಅವರು ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ನಮ್ಮ ದೇವರು ಪೂಜಿಸುವ ಬಾರಾ ಎಂದು ಹೇಳಿದ್ದು ನಮ್ಮ ಟಿವಿ ವಾಹಿನಿಗಳ ಗಮನದಲ್ಲೇ ಇಲ್ಲ. ದೇಶದ ಬಗ್ಗೆ ಚಿಂತನೆ ಮಾಡಲು ದಿನದಲ್ಲಿ ಒಂದರ್ಧ ಘಂಟೆಯಾದರೂ ಮೀಸಲಿಡಬೇಕೆಂದು ನಮ್ಮ ಟಿವಿ ವಾಹಿನಿಗಳಿಗೆ ಅನಿಸಿಯೇ ಇಲ್ಲ, ಆದರೆ ಜ್ಯೋತಿಷ್ಯದ ಬಗ್ಗೆ ದಿನ ನಿತ್ಯ ಅರ್ಧ ಘಂಟೆ, ಒಂದು ಘಂಟೆ ಸಮಯ ಮೀಸಲಿಡುತ್ತಾರೆ. ಇಂಥ ಮಾಧ್ಯಮ ಇರುವಲ್ಲಿವರೆಗೆ ದೇಶದ ಸ್ಥಿತಿಯಲ್ಲಿ ಬದಲಾವಣೆ ಆಗಲಾರದು.

  Reply
 2. ದಿನೇಶ್ ಕುಕ್ಕುಜಡ್ಕ

  ಯಾವುದೇ ವಿಚಾರಗಳಲ್ಲಾದರೂ,ಯಾವತ್ತೂ ಅತ್ಯಂತ ಸಮಚಿತ್ತ ಧೋರಣೆಯ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸುವ ಪ್ರಜಾವಾಣಿ ಪತ್ರಿಕೆ ಈ ಕುರಿತು ಸೋಮವಾರದ ತನ್ನ ಸಂಪಾದಕೀಯದಲ್ಲಿ ನ್ಯಾ.ಕಟ್ಜು ಅವರ ನಿಲುವನ್ನು ಕಟುವಾಗಿ ವಿರೋಧಿಸಿದ್ದು ಕಂಡು….. ನಾನಂತೂ ಅತ್ಯಂತ ದಿಗಿಲುಗೊಂಡಿದ್ದೇನೆ!!

  Reply
 3. santhosh kumar

  ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯದಲ್ಲಿ ನ್ಯಾಯಮೂರ್ತಿ ಕಟ್ಜು ಅವರನ್ನು ಉಗ್ರವಾಗಿ ವಿರೋಧಿಸಿದ್ದು ಕಂಡು ಈ ಸಂಪಾದಕೀಯ ಬರೆದದ್ದು ಯಾರು, ಸಂಪಾದಕರೋ ಅಥವಾ ಪತ್ರಿಕೆಯ ಮಾಲಕರೋ ಎಂಬ ಸಂಶಯ ಉಂಟಾಗುತ್ತದೆ. ಪ್ರಜಾವಾಣಿಯಂಥ ಪತ್ರಿಕೆ ಇಂಥ ಸಂಪಾದಕೀಯ ಬರೆದಿರುವುದು ಅನಪೇಕ್ಷಿತ ಹಾಗೂ ಪತ್ರಿಕೆಯ ಸ್ವವಿಮರ್ಶೆಯ ಕೊರತೆಯನ್ನು ತೋರಿಸುತ್ತದೆ. ಬೇರಾವುದೇ ಕನ್ನಡ ಪತ್ರಿಕೆ ಇಂಥ ಉಗ್ರ ಸಂಪಾದಕೀಯ ಬರೆದಿಲ್ಲ ಈ ವಿಷಯದಲ್ಲಿ ಎಂಬುದು ಗಮನಾರ್ಹ.

  Reply

Leave a Reply to santhosh kumar Cancel reply

Your email address will not be published.