ಶಿಕ್ಷಣ ಖಾಸಗಿಕರಣದ ಕರಾಳ ಮುಖಗಳು

– ರೂಪ ಹಾಸನ

ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸಿ ರಾಜ್ಯದೆಲ್ಲೆಡೆಯಿಂದ ಪ್ರತಿರೋಧ ಬಂದುದನ್ನು ಗಮನಿಸಿದ ಸರ್ಕಾರ ಈಗ, ಶಾಲೆಗಳನ್ನು ಮುಚ್ಚುತ್ತಿಲ್ಲ, ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತಿದ್ದೇವಷ್ಟೇ ಎಂದು ನಾಜೂಕಾಗಿ ಜಾಣತನದ ಮಾತನಾಡುತ್ತಿದೆ. ಒಂದರೊಳಗೆ ಇನ್ನೊಂದು ಶಾಲೆ ಸೇರಿಕೊಂಡರೆ ಉಳಿದ ಇನ್ನೊಂದು ಶಾಲೆ ತಾನಾಗಿಯೇ ಮುಚ್ಚಿಕೊಳ್ಳುತ್ತದೆ ಎಂಬ ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಶೈಕ್ಷಣಿಕ ನಿಯಮಗಳನ್ನು ಪಾಲಿಸದ, ಅದನ್ನು ಲಾಭದ ವ್ಯಾಪಾರವಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೇ  ಪರವಾನಗಿ ನೀಡಿ, ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ, ಒಂದೆಡೆ ಖಾಸಗಿಯವರ ತೊಟ್ಟಿಲನ್ನು ತೂಗುತ್ತಾ, ಇನ್ನೊಂದೆಡೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲವೆಂದು, ಗ್ರಾಮೀಣ-ಬಡ ಮಕ್ಕಳನ್ನು ಚಿವುಟಿ ಅಳಿಸುವ ಪ್ರಯತ್ನವನ್ನು ಏಕಕಾಲಕ್ಕೆ ಮಾಡುತ್ತಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆವಷ್ಟೇ ಅಮಾನವೀಯ.

ಡಿಸ್ಟ್ರಿಕ್ಟ್ ಇನಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ [ಡೈಸ್]ನ ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿ-ಅಂಶಗಳು ಕಾಣಸಿಗುತ್ತವೆ. 2009-10ನೇ ಸಾಲಿನ ಅಧ್ಯಯನದಂತೆ 46288 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದರೆ, 11884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣ ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾ ಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ, ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆಗಾಗಿ ಅಲ್ಲದೇ ಲಾಭಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರ್ಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರ್ಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದರೆ, ಒಂದು ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ!

ಮಾನ್ಯ ಶಿಕ್ಷಣ ಸಚಿವರು ಹಳ್ಳಿಗಳಲ್ಲಿ ಮಕ್ಕಳಿಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ 2007-08 ರ ಡೈಸ್‌ನ ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5724 ಖಾಸಗಿ ಶಾಲೆಗಳು, ಅಲ್ಲಿ ಕಲಿಯುತ್ತಿರುವ 7,37,017 ಮಕ್ಕಳು, ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ನೀಡುವ ಮನಸ್ಸು ಸರ್ಕಾರಕ್ಕಿಲ್ಲವಷ್ಟೇ.

ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2 ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 4000-5000 ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೋಸಿಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸೇರಿದಂತೆ ಇಪ್ಪತ್ತು ಖಾಸಗಿ ಸಂಸ್ಥೆ-ವ್ಯಕ್ತಿಗಳು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ಈ ರೀತಿಯಲ್ಲಿ ಸರ್ಕಾರ, ಈಗಾಗಲೇ ಸರ್ಕಾರಿ ಶಾಲೆಗಳನ್ನೂ ಸದ್ದಿಲ್ಲದೇ ಖಾಸಗಿಯವರಿಗೆ ದತ್ತು ನೀಡಿ ಆಗಿದೆ!

ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೇ ಸಾಲಿನ ಬಜೆಟ್‌ನಲ್ಲಿ 7700 ಕೋಟಿ, ಅಂದರೆ ಒಟ್ಟು ಬಜೆಟ್‌ನ ಶೇಕಡಾ 15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರ್ಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರ್ಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ ಹುಳುಕು ತನ್ನ ಮುಖಕ್ಕೇ ರಾಚುವಷ್ಟು ಸ್ಪಷ್ಟವಾದ ಉತ್ತರಗಳು ಹೊಳೆಯುತ್ತವೆ.

ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರ್ಕಾರ 2009 ರಲ್ಲೇ ರೂಪಿಸಿದ  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗಿಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು ನೀಡಿಕೊಂಡಿರುವ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವುದಕ್ಕೇ ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನಿರ್ದಾಕ್ಷಿಣ್ಯವಾಗಿ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ, ತಳ ಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ.

2011ರ ಜನಗಣತಿಯಂತೆ ಈಗಲೂ ಇನ್ನೂ 1,08,542 ಮಕ್ಕಳು ಶಾಲೆಯಿಂದ ಹೊರಗೇ ಇದ್ದಾರೆ. ಅವರಿಗೂ ಕಡ್ಡಾಯ ಶಿಕ್ಷಣ ನೀಡುವಂತಾದರೆ ಇನ್ನೂ ನೂರಾರು ಶಾಲೆಗಳನ್ನು ಸರ್ಕಾರವೇ ಪ್ರಾರಂಭಿಸಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಇದೇ ರೀತಿ ಮುಚ್ಚುತ್ತಾ ಹೋದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುತ್ತದೆ. ಮನೆ ಮುಂದಲ ಶಾಲೆಗಳಿಗೇ ಹೆಣ್ಣುಮಕ್ಕಳನ್ನು ಕಳಿಸಲು ಅನುಮಾನಿಸುವ ಗ್ರಾಮೀಣ ಪೋಷಕರು, ಶಾಲೆಗಳು ದೂರವಾದಷ್ಟೂ ಮಕ್ಕಳನ್ನು ಅದರಿಂದ ಇನ್ನಷ್ಟು ದೂರ ಉಳಿಸುತ್ತಾರೆ.

ಕಡಿಮೆ ಮಕ್ಕಳಿರುವ ಶಾಲೆಯ ಅಭಿವೃದ್ಧಿಯ ಹೊಣೆ ಹೊರುವವರಿಗೆ ಶಾಲೆಯನ್ನು ದತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವರು ಹೊರಡಿಸಿರುವ ಫರ್ಮಾನು ನಾಚಿಕೆಗೇಡಿನದಾಗಿದೆ. ಸರ್ವಜನರ ಹಿತವನ್ನು ಬಯಸುವ ಮಾತೃಸ್ವರೂಪಿಯಾದ ಯಾವುದೇ ಸರ್ಕಾರ, ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗದ ಜವಾಬ್ದಾರಿಯನ್ನು ತಾನೇ ಹೊರಬೇಕೇ ಹೊರತು ಅದನ್ನು ಖಾಸಗಿಯವರಿಗೆ ದತ್ತು ನೀಡಿ, ತನ್ನ ನೈತಿಕಶಕ್ತಿಯನ್ನು ಮಾರಿಕೊಳ್ಳವುದಿಲ್ಲ!

ಸಾರ್ವಜನಿಕ ಶಿಕ್ಷಣದ ಬೇರುಗಳಿಗೆ ಹಿಡಿದಿರುವ ಖಾಸಗಿ ಗೆದ್ದಲನ್ನು ಕೊಡವಿ, ಬೇರುಗಳು ಗಟ್ಟಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಮತ್ತು ಸಮಾನತೆಯ ಆಧಾರದ ಸಮಾನಶಾಲೆಗಳನ್ನು ಇನ್ನಾದರೂ ಸರ್ಕಾರ ಪುನರ್ ರೂಪಿಸಬೇಕಿದೆ. ಶಿಕ್ಷಣ ವ್ಯಾಪಾರಿಕರಣವಾಗದಂತೆ ಖಾಸಗಿವಲಯವನ್ನು ಹತ್ತಿಕ್ಕಿ, ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದ ಸಮಸ್ಯೆ ಬರಲು ಸಾಧ್ಯವೇ ಇಲ್ಲ.

Leave a Reply

Your email address will not be published.