ಯಾಕ್ರೀ, ಎಷ್ಟೊಂದು ಜಾಹಿರಾತು ನೀಡಿದ್ದೇವೆ, ಇಷ್ಟೇನಾ ಸುದ್ದಿ ನಮ್ಮದು?

– ಪರಶುರಾಮ ಕಲಾಲ್

ಜಾಹಿರಾತು ಇಲ್ಲದೇ ಯಾವುದೇ ಪತ್ರಿಕೆಗಳು ಬದಕಲಾರವು. ಒಂದು ಪತ್ರಿಕೆಗೆ ನಾವು ಕೊಡುವ 3 ರೂ. ಏನೇನೂ ಅಲ್ಲ. ಪತ್ರಿಕೆಯನ್ನು ಮನೆಗೆ ಮುಟ್ಟಿಸುವ ಹುಡುಗ, ವಿತರಕರಿಗೆ, ಸಾಗಾಣಿಕೆಗೆ ಅದರ ಎಲ್ಲಾ ಖರ್ಚು ಹೆಚ್ಚುಕಡಿಮೆ ಸಾಟಿಯಾಗಿ ಬಿಡುತ್ತದೆ. ಅಂದರೆ ಪತ್ರಿಕೆಯೊಂದು ಉಚಿತವಾಗಿಯೇ ಪತ್ರಿಕೆಯನ್ನು ವಿತರಿಸುತ್ತದೆ ಎಂದೇ ಅರ್ಥ.

ಕಳೆದ 20 ವರ್ಷಗಳಲ್ಲಿ ಎಲ್ಲದರ ಬೆಲೆಯೂ ಏರಿದೆ. ಪೆಟ್ರೋಲ್ ಅಂತೂ ಜ್ವರದಂತೆ ಏರುತ್ತಲೇ ಇದೆ. ಆದರೆ ದಿನ ಪತ್ರಿಕೆಗಳು ಮಾತ್ರ ಬೆಲೆ ಏರಿಸಿಲ್ಲ. ವಿಜಯ ಕರ್ನಾಟಕ ಆರಂಭವಾದಾಗ ಬೆಲೆ ಏರಿಕೆಯ ಸಮರದಲ್ಲಿ ಎಲ್ಲಾ ಪತ್ರಿಕೆಗಳು ಬೆಲೆ ಇಳಿಸಿಕೊಂಡು ಸ್ಪರ್ಧೆ ನಡೆಸಿದ ಇತಿಹಾಸವೂ ಇದೆ. ಈಗ ಸದ್ಯ ಯಾವ ಪತ್ರಿಕೆಯೂ ಬೆಲೆ ಏರಿಸುವ ಸಾಹಸಕ್ಕೆ ಇಳಿಯುತ್ತಿಲ್ಲ. ಕಾದು ನೋಡುತ್ತಾ ಇವೆ.

ಹೊಸ ಪತ್ರಿಕೆಗಳು ಕಾಲಿಡುತ್ತಾ ಇವೆ. ಅವುಗಳ ಸ್ವರೂಪ, ಬೆಲೆ ಎಲ್ಲವೂ ಮತ್ತೊಮ್ಮೆ ದರ ಸಮರ ನಡೆದು ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ.

ಪತ್ರಿಕೆಗಳಿಗೆ ಸರ್ಕಾರ ನೀಡಿರುವ ಜಾಹಿರಾತು ಕುರಿತು “ವರ್ತಮಾನ” ಪ್ರಕಟಿಸಿದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ಬೆಳೆಸಲು ಇದನ್ನು ಪೀಠಿಕೆಯಾಗಿ ಬರೆದಿರುವೆ.

ಪತ್ರಿಕೆಗಳಿಗೆ ಜಾಹಿರಾತು ಅನಿವಾರ್ಯ ಅವಲಂಬನೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಒಂದು ಪತ್ರಿಕೆಯು ಮುಖಪುಟದಲ್ಲಿ ಕಾಲುಪುಟ ಜಾಹಿರಾತಿಗೆ ಮಾತ್ರ ಜಾಗ ಮೀಸಲಿಟ್ಟಿತ್ತು. ಒತ್ತಡ ಬಂದಾಗಲೂ ಅದು ರಾಜೀ ಆಗಿರಲಿಲ್ಲ. ಬೇರೆ ಪತ್ರಿಕೆಗಳು ಈ ನಿಯಮ ಉಲ್ಲಂಘಿಸಿ, ಮುಖಪುಟದ ತುಂಬಾ ಜಾಹಿರಾತು ಹಾಕಲು ಆರಂಭಿಸಿದರೂ. ಈಗ ಆ ಪತ್ರಿಕೆಯೂ ಕೂಡಾ ಜಾಹಿರಾತಿಗೆ ಮೈ ತೆರೆದುಕೊಂಡು ಬಿಟ್ಟಿದೆ. ಕೆಲವು ಜಾಹಿರಾತುಗಳನ್ನು ಹಾಕಲು ಈ ಹಿಂದೆ ಒಪ್ಪುತ್ತಿರಲಿಲ್ಲ. ಈಗ ಯಾವ ಜಾಹಿರಾತು ಕೊಟ್ಟರೂ ನಡೆಯುತ್ತೇ ಎಂದೇ ಎಲ್ಲಾ ಜಾಹಿರಾತು ತೆಗೆದುಕೊಳ್ಳಲಾರಂಭಿಸಲಾಗಿದೆ. ಒಂದು ಕಡೆ ಸಿಂಗಲ್ ಕಾಲಂನಲ್ಲಿ “ಜಾಹಿರಾತುವಿನಲ್ಲಿ ಪ್ರಕಟವಾದ ವಿಷಯಕ್ಕೂ ಪತ್ರಿಕೆಗೂ ಯಾವುದೇ ಸಂಬಂಧವಿಲ್ಲ,” ಎಂದು ಪ್ರಕಟಿಸಿ ಈ ಸಂಕಷ್ಟದಿಂದ ಪಾರಾಗಿ ಕೈ ತೊಳೆದುಕೊಂಡಿವೆ.

ರಾಜ್ಯ ಸರ್ಕಾರ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳ ಜಾಹಿರಾತು ಕೊಡುವುದು ಗಣ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ, ಉದಾಹರಣೆಗೆ, ಅಣೆಕಟ್ಟು ಲೋಕಾರ್ಪಣೆ, ಮೈಸೂರು ದಸರಾ ಹಬ್ಬ ಇಂತಹ ಸಂದರ್ಭದಲ್ಲಿ ಜಾಹಿರಾತು ನೀಡುತ್ತದೆ.

ಈ ಜಾಹಿರಾತು ನೀಡುವಲ್ಲಿ ಕೆಲವು ನಿಬಂಧನೆಗಳು ಇವೆ. ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮಾತ್ರ ಬಳಸಬೇಕು ಎನ್ನುವುದು. ಆದರೆ ರಾಜ್ಯ ಸರ್ಕಾರ ಈ ಎಲ್ಲಾ ನಿಬಂಧನೆಗಳನ್ನು ಉಲ್ಲಂಘಿಸಿದೆ. ಬೇಕಾಬಿಟ್ಟಿ ಜಾಹಿರಾತು ನೀಡಿದೆ. ಮುಖ್ಯಮಂತ್ರಿ, ಸಚಿವರ ನಿಂತಿರುವ, ಕುಳಿತಿರುವ ಫೋಟೋಗಳನ್ನು ಹಾಕಿದೆ. ಈ ನಿಬಂಧನೆಗಳನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಜಾಹಿರಾತು ಬೇಕೇ ಬೇಕು.

ಇದು ಒಂದಾದರೆ ಮತ್ತೊಂದು ಸರ್ಕಾರಿ ಇಲಾಖೆಯ ಜಾಹಿರಾತುಗಳು. ಭೂಸ್ವಾಧೀನ ಪ್ರಕ್ರಿಯೆಯ ಜಾಹಿರಾತುಗಳಂತೂ ಎರಡು ಮೂರು ಫೇಜಿಗಳಷ್ಟು ಬರುತ್ತವೆ. ಇವೆಲ್ಲವೂ ಎಲ್ಲಾ ಎಡಿಸನ್ ದರದಲ್ಲಿ ಪ್ರಕಟವಾಗುತ್ತದೆ. ಸರ್ಕಾರಿ ಇಲಾಖೆಯ ಜಾಹಿರಾತು, ಅರೆ ಸರ್ಕಾರಿ ಇಲಾಖೆಯ ಜಾಹಿರಾತುಗಳನ್ನು ಎಲ್ಲಾ ಎಡಿಷನ್‌ನಲ್ಲೂ ಮುದ್ರಿಸಲಾಗುತ್ತದೆ. ಲೋಕಲ್ ಎಡಿಷನ್‌ನಲ್ಲಿ ಹಾಕಿ ಎಂದರೂ ಯಾವ ಪತ್ರಿಕೆಗಳು ಅದನ್ನು ಒಪ್ಪುವುದಿಲ್ಲ. ಜಾಹಿರಾತು ಮುಖ್ಯಸ್ಥರು ನೇರವಾಗಿಯೇ ಎಲ್ಲಾ ಎಡಿಷನ್ ಅಂತಾ ಹೇಳ್ರಿ, ಕೊಡಲಿಲ್ಲ ಅಂದರೆ ದಬಾಯಿಸಿ ಎಂದೇ ಹೇಳುತ್ತಾರೆ.

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

ಒಂದು ಉದಾಹರಣೆಯನ್ನು ಇಲ್ಲಿ ಹೇಳುತ್ತೇನೆ. ಪ್ರಾದೇಶಿಕ ಸಾರಿಗೆ ಇಲಾಖೆಯು ತನ್ನ ಒಂದು ಹಳೇಯ ಜೀಪನ್ನು ಹರಾಜು ಹಾಕಬೇಕಾಯಿತು. ಹರಾಜಿನಲ್ಲಿ ಜೀಪು 30 ಸಾವಿರ ರೂ.ಗೆ ಹೋದರೆ ಅದೇ ಹೆಚ್ಚು. ಆದರೆ ಈ ಜೀಪು ಹರಾಜು ಜಾಹಿರಾತಿಗೆ ನೀಡಿದ ಹಣ 60 ಸಾವಿರಕ್ಕೂ ಅಧಿಕ. ಎಲ್ಲಾ ಪತ್ರಿಕೆಗಳು ಈ ಜಾಹಿರಾತು ಪಡೆಯಲು ತಮ್ಮದೇ ಆದ ಮಾರ್ಗ ಅನುಸರಿಸುತ್ತವೆ. ಬಿಡಿ ಸುದ್ದಿಗಾರರು ಈ ಜಾಹಿರಾತು ಹಿಡಿಯಲು ಹರಸಾಹಸ ಮಾಡುತ್ತಾರೆ. ಕೆಲವರು ಸರ್ಕಾರಿ ಇಲಾಖೆಯ ಗುಮಾಸ್ತರಿಗೆ ಬರುವ ಕಮೀಷನ್‌ನಲ್ಲಿ ಸ್ವಲ್ಪಪಾಲು ನೀಡುತ್ತಾರೆ. ಹಾಗೇ ನೀಡುವಂತೆ ಜಾಹಿರಾತು ಮುಖ್ಯಸ್ಥರು ಹೇಳಿ ಕೊಡುವುದು ಉಂಟು.

ರಾಜ್ಯಮಟ್ಟದ ಲೋಕಲ್ ಪೇಜ್‌ನಲ್ಲಿ ರಾಜ್ಯಮಟ್ಟದ ಸರ್ಕಾರಿ ಜಾಹಿರಾತುಗಳನ್ನು ಹಾಕಲಾಗುತ್ತದೆ. ಇದು ಲೋಕಲ್ ಜಾಹಿರಾತು ಎಂಬ ಭ್ರಮೆ ಹುಟ್ಟಿಸಲಾಗುತ್ತದೆ. ಆದರೆ ಅದು ಬೇರೆ ಎಡಿಷನ್‌ನಲ್ಲೂ ಪುನರಾವರ್ತನೆಯಾಗಿರುತ್ತದೆ. ಎಲ್ಲಾ ಎಡಿಷನ್ ಪೇಜ್‌ಗೆ ಜಾಹಿರಾತು ಬಿಲ್ ನೀಡುವಾಗ ಸಲ್ಲಿಸಲಾಗುತ್ತದೆ.

ರಾಜ್ಯಮಟ್ಟದ ದಿನ ಪತ್ರಿಕೆಯ ಜಿಲ್ಲಾ ಪೇಜುಗಳ ಜಾಹಿರಾತುಗಳ ದರವೂ ಕೂಡಾ ಸ್ಪರ್ಧಾತ್ಮಕವಾಗಿರುತ್ತದೆ. ಜಾಹಿರಾತು ಪುರವಣಿಯಂತೂ 1 ಲಕ್ಷಕ್ಕೆ ನೀಡಲಾಗುತ್ತದೆ. ಎರಡು ಪೇಜ್ ಕಲರ್, ಎರಡು ಪೇಜ್ ಕಪ್ಪು ಬಿಳಪು. ಅದರಲ್ಲಿ ಒಂದು ಪುಟ ಜಾಹಿರಾತು ಕೊಟ್ಟವರ ಗುಣಗಾನಕ್ಕೆ ಮೀಸಲಿರುತ್ತದೆ. ಜನ್ಮದಿನದ ಜಾಹಿರಾತು ಪುರಾವಣಿಯಂತೂ ಲಿಮ್ಕಾ ದಾಖಲೆಯಾಗುವ ಮಟ್ಟಕ್ಕೆ ಮುಟ್ಟಿವೆ. ತಮ್ಮ ತಂದೆ ತೀರಿಕೊಂಡು 12 ವರ್ಷಗಳ ತರುವಾಯ ಒಬ್ಬ ವ್ಯಕ್ತಿಯು ತನ್ನ ತಂದೆಯ ತಿಥಿಗೆ 24 ಪುಟಗಳ ಜಾಹಿರಾತು ನೀಡಿ ವಿಕ್ರಮ ಸ್ಥಾಪಿಸಿದನು. ಮತ್ತೊಬ್ಬರು ತಮ್ಮ ಜನ್ಮದಿನಕ್ಕಾಗಿ 63 ಪುಟಗಳ ಜಾಹಿರಾತು ಪುರವಣಿ ತಂದು ಲಿಮ್ಕಾ ದಾಖಲೆಗೆ ಹೆಸರು ಕಳಿಸಿದ್ದಾರೆ. ಇಲ್ಲಿಗೆ ಬಂದು ನಿಂತಿದೆ ಜಾಹಿರಾತು. ಜಾಹಿರಾತು ಕೊಡುವ ಶಿಕ್ಷಣ ಸಂಸ್ಥೆ, ರಾಜಕಾರಣಿ, ಉದ್ಯಮಿಯ ಬಗ್ಗೆ ವರ್ಷಪೂರ್ತಿ ಅವರ ಫೋಟೋ ಛಾಪಿಸಿ, ಅವರ ಕಾರ್ಯಕ್ರಮದ ವರದಿ, ಕರೆ ನೀಡಿದ ಸುದ್ದಿ ಬರೆಯುತ್ತಾ ಇರಬೇಕು. ಯಾಕ್ರೀ ಎಷ್ಟೊಂದು ಜಾಹಿರಾತು ನೀಡಿದ್ದೇವೆ. ಇಷ್ಟೇನಾ ಸುದ್ದಿ ನಮ್ಮದು. ನಮ್ಮ ಫೋಟೋ ಬಂದಿಲ್ಲ ಯಾಕ್ರಿ ಎಂದು ಕೇಳುವ ಅಧಿಕಾರ ಅವರಿಗೆ ಇದ್ದೇ ಇರುತ್ತದೆ. ಅವರನ್ನು ಸಮಾಧಾನ ಪಡೆಸಲೇಬೇಕು. ಈ ದೊಡ್ಡ ಪತ್ರಿಕೆಗಳ ಜಾಹಿರಾತು ಭರಾಟೆಯಲ್ಲಿ ಸ್ಥಳೀಯ ದಿನ ಪತ್ರಿಕೆಗಳು ಉಸಿರಾಡಲು ಆಗದೇ ಉಬ್ಬಸ ರೋಗಕ್ಕೆ ತುತ್ತಾಗಿ ಬಿಟ್ಟಿವೆ. ಕೆಲವೊಂದು ಸತ್ತೇ ಹೋಗಿವೆ.

2 thoughts on “ಯಾಕ್ರೀ, ಎಷ್ಟೊಂದು ಜಾಹಿರಾತು ನೀಡಿದ್ದೇವೆ, ಇಷ್ಟೇನಾ ಸುದ್ದಿ ನಮ್ಮದು?

  1. Mahesh

    ಜಾಹಿರಾತು ಇಲ್ಲದೆ ಯಾವುದೇ ದಿನ ಪತ್ರಿಕೆ ಉಸಿರಾಡುವುದು ಕಷ್ಟ .ಹಾಗೆಂದು ಮೈತುಂಬಾ ಜಾಹಿರತನ್ನೇ ಹೂದ್ದುಕೊಂಡು ಸುದ್ದಿಗಳನ್ನು ಮೂಲೆಗೆ ತಳ್ಳುವುದು ದುರಂತ . ಕೆಲವು ಪತ್ರಿಕೆಗಳಿಗೆ ಜಾಹೀರಾತು ಪಡೆಯುವುದು ಮದುವೆ ಮನೆಯಲ್ಲಿ ಊಟ ಮಾಡಿದಸ್ಟು ಸಲೀಸಾಗಿದೆ .ಇಂದು ಎಸ್ಟೋ ಮಂದಿ ಮಹಾಶಯರು ವಾರ್ತಾ ಇಲಾಖೆಯಿಂದ ಜಾಹಿರಾತು ಪಡೆಯಲು ಒಂದು ಪಡೆಯನ್ನೇ ಹುಟ್ಟುಹಾಕಿದ್ದಾರೆ .ಇದರ ವಾಮ ಮಾರ್ಗವಾಗಿ ಕಾಸಿಗಾಗಿ ಸುದ್ದಿ ಎಂಬ ಹೊಸ ದಾರಿ ಸೃಷ್ಟಿಯಾಗಿದೆ .ನಿಮಗೆ ಗೊತ್ತಾ ? ಒಂದು ಪುಟದಲ್ಲಿ ಕಾಸಿಗಾಗಿ ಸುದ್ದಿ ಜಾಹಿರಾತನ್ನು ವೀರೋಧಿಸುವ ಸುದ್ದಿ ಇದ್ದರೇ, ಅದೇ ಪತ್ರಿಕೆಯಲ್ಲಿ ಕಾಸಿಗಾಗಿ ಸುದ್ದಿ ಜಾಹೀರಾತು ದೊಡ್ಡದಾಗಿ ಪ್ರಕಟವಾಗಿರುತ್ತದೆ . ಇದಕ್ಕೆ ಏನನ್ನೋಣ ಪರಶುರಾಮ್ ಕಲಾಲ್ ಅವರೇ ,

    Reply
  2. Ananda Prasad

    ಜಾಹೀರಾತುಗಳಿಲ್ಲದೆ ಓದುಗರ ಬೆಂಬಲದಿಂದ ನಡೆಯುವ ಪತ್ರಿಕೆಗಳು ಮಾತ್ರ ಪತ್ರಿಕಾ ಧರ್ಮವನ್ನು ಹಾಗೂ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯ. ಕಲಾಲ್ ಅವರ ಲೇಖನವನ್ನು ನೋಡಿದರೆ ಇಂದು ಪತ್ರಿಕಾ ಧರ್ಮ ಹಾಗೂ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲಾರದ ವಿಕಾರ ಪರಿಸ್ಥಿತಿ ಇರುವಂತೆ ಕಾಣುತ್ತದೆ. ಹೀಗಾಗಿಯೇ ಮುಖ್ಯ ವಾಹಿನಿಯ ಮಾಧ್ಯಮಗಳು ಇಂದು ಯಾವುದೇ ಬದಲಾವಣೆಯೆಡೆಗೆ ಸಮಾಜವನ್ನು ಕೊಂಡೊಯ್ಯಲು ವಿಫಲವಾಗಿರುವಂತೆ ಕಾಣುತ್ತದೆ. ಇಂಥ ಸಂಧರ್ಭದಲ್ಲಿ ಇಂಟರ್ನೆಟ್ ಮಧ್ಯಮ ಮಾತ್ರವೇ ಪರ್ಯಾಯವನ್ನು ನೀಡಬಹುದು. ಆದರೆ ಇಂಟರ್ನೆಟ್ ಇಂದು ಭಾರತದಲ್ಲಿ ಬಹಳ ಕಡಿಮೆ ಜನರನ್ನು ತಲುಪುತ್ತಿರುವುದರಿಂದ ಅದು ಅಷ್ಟು ಪ್ರಭಾವಶಾಲಿಯಾಗಿಲ್ಲ. ಹೆಚ್ಚು ಹೆಚ್ಚು ಜನ ಇಂಟರ್ನೆಟ್ ಬಳಸಲು ಆರಂಭಿಸಿದಂತೆ ಅಥವಾ ಹೆಚ್ಚು ಜನರನ್ನು ಇಂಟರ್ನೆಟ್ ತಲುಪುವಷ್ಟು ಅಗ್ಗವಾದಾಗ ಇಂಟರ್ನೆಟ್ ಪತ್ರಿಕೋದ್ಯಮ ಹೆಚ್ಚು ಪ್ರಭಾವಶಾಲಿ ಆಗಬಹುದು.

    Reply

Leave a Reply to Ananda Prasad Cancel reply

Your email address will not be published. Required fields are marked *