“ಕೋಮುವಾದದ, ಕೋಮುವಾದ ರಾಜಕೀಯದ ಕಾಲ ಮುಗಿಯುತ್ತಿದೆ, ಅಥವಾ ಮುಗಿದಿದೆ”. ಹೌದೆ?

-ಬಿ. ಶ್ರೀಪಾದ ಭಟ್

ಇತ್ತೀಚೆಗೆ ಕೆಲವು ಬಲಪಂಥೀಯ ಪತ್ರಿಕೆಗಳು, ಬಹುಪಾಲು ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾದವರು ಶುರು ಹಚ್ಚಿಕೊಂಡಿರುವ ಹೊಸ ವರಾತ ಎಂದರೆ “ಕೋಮುವಾದದ, ಕೋಮುವಾದ ರಾಜಕೀಯದ ಕಾಲ ಮುಗಿಯುತ್ತಿದೆ, ಅಥವಾ ಮುಗಿದಿದೆ”. ಅಂದರೆ ಇವರ ಪ್ರಕಾರ ಈ ದೇಶದಲ್ಲಿ ಇನ್ನು ಮುಂದೆಂದೂ ಕೋಮು ಗಲಭೆಗಳು ನಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. ಇದಕ್ಕೆ ಇವರು ಕೊಡುವ ಕಾರಣಗಳು ಹಾಗೂ ಸಮರ್ಥನೆಗಳು ಹೀಗಿವೆ:

 1. ಕಳೆದ 8 ವರ್ಷಗಳಲ್ಲಿ ಇಂಡಿಯಾದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಬಿಟ್ಟರೆ ಅಂತಹ ಹೇಳಿಕೊಳ್ಳುವಂತಹ ಕೋಮು ಗಲಭೆಗಳು ನಡೆದದ್ದೇ ಇಲ್ಲ.
 2. ಇಂದಿನ ಯುವ ಜನತೆ ಸಂಪೂರ್ಣವಾಗಿ ಕೋಮುವಾದದ ಚಿಂತನೆಯನ್ನೇ ತಿರಸ್ಕರಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇವರು ಹೈಕೋರ್ಟ್‌ನ ರಾಮ ಜನ್ಮ ಭೂಮಿ ಹಾಗು ಬಾಬರಿ ಮಸೀದ್ ವಿವಾದದ ತೀರ್ಪಿನ ಸಂದರ್ಭದಲ್ಲಿ ಜನತೆ ಸಂಯಮದಿಂದ ವರ್ತಿಸಿದ್ದನ್ನು, ಆ ಮೂಲಕ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಕೊಡದಿದ್ದುದನ್ನು ನೆನಪಿಸುತ್ತಾರೆ.
 3. ಕೋಮುವಾದ ರಾಜಕಾರಣದ ಹರಿಕಾರರಾದ ಬಿಜೆಪಿಯರಿಗೆ ಈಗ ಸಂಪೂರ್ಣ ಜ್ಞಾನೋದಯವಾಗಿದೆಯೆಂತಲೂ, ಈ ಬಾರಿ ಅಧಿಕಾರ ಗ್ರಹಣಕ್ಕೆ ಇದರಿಂದ ತಮಗೆ ಅಂತಹ ಲಾಭಾಂಶಗಳಿಲ್ಲದ್ದರಿಂದ ಈ ಸಂಘಪರಿವಾರದವರು ಇದನ್ನು ಈ ಬಾರಿಯ ಚುಣಾವಣಾ ವಿಷಯವನಾಗಿಸಿಕೊಳ್ಳಲಾರರು.

ಹೀಗಾಗಿ ಎಲ್ಲವೂ ಸುಖಾಂತವಾಗಲಿದೆ,ನಾವೂ ನೀವೂ ಎಲ್ಲರೂ ಇನ್ನು ಆರಾಮಾಗಿ ಜೀವಿಸಲ್ಲಿಕ್ಕೆ ಯಾವ ಅಡ್ಡಿಯೂ ಇಲ್ಲ ಎಂದು ಹುಕ್ಮತ್ ಬೇರೆ ಹೊರಡಿಸುತ್ತಾರೆ!!!

ಆದರೆ ಮೇಲಿನ ಇವರ ಹಸಿಹಸಿಯಾದ, ಅಪಕ್ವವಾದ, ಬೌದ್ಧಿಕ ದಿವಾಳಿಕೋರತನದ ತರ್ಕಗಳಲ್ಲೇ ಉತ್ತರಗಳು ಅಡಗಿವೆ.

ಸ್ವತಂತ್ರ ಭಾರತದಲ್ಲಿ ಕೋಮುವಾದವನ್ನು,ಹಾಗೂ ಅದರ ಪರಿಕಲ್ಪನೆಯನ್ನು 3 ಕಾಲಘಟ್ಟಗಳಲ್ಲಿ ನೋಡಬಹುದು. ನೆಹರೂ ಕಾಲದ ಕೋಮುವಾದ. ಇಲ್ಲಿ ನಾವು ಆ ಕಾಲದ ಗೋಳ್ವಲ್ಕರ್, ಶ್ಯಾಂಪ್ರಸಾದ್ ಮುಖರ್ಜಿ, ಇವರ ಹಿಂದುತ್ವವಾದಿ, ಅಲ್ಪಸಂಖ್ಯಾತ ದ್ವೇಷದ ಚಿಂತನೆಗಳು ಅಂದಿನ ಜನಮನದಲ್ಲಿ ಬಿತ್ತುವ ಕಾಲಘಟ್ಟವೆನ್ನಬಹುದು.ಈ ಬಿತ್ತನೆಯ ಫಲವೇ ಅಟಲ್ ಬಿಹಾರಿ ವಾಜಪೇಯಿ, ಆಡ್ವಾನಿ, ಎಂ.ಎಂ. ಜೋಶಿ ತರದವರು. ನಂತರ ಕಾಂಗ್ರೆಸ್ಸೇತರ ರಾಜಕಾರಣದ ಮಹಾಮೈತ್ರಿಯಲ್ಲಿ ತೂರಿಕೊಂಡು ಜನಸಂಘ ರೂಪದಲ್ಲಿ ತನ್ನೆಲ್ಲ ರೂಪಗಳನ್ನು, ಚಿಂತನೆಗಳನ್ನು ಪ್ರಯೋಗತ್ಮಕವಾಗಿ ಪರೀಕ್ಷಿಸಿದ, ಹಲವು ಬಾರಿ ಯಶಸ್ಸು ಕಂಡ ಕಾಲಘಟ್ಟ. ಇದು 1980 ರವರೆಗೂ ಕಾಣಬಹುದು. ನಂತರ ಬಿಜೆಪಿ ರೂಪದಲ್ಲಿ ಸಂಪೂರ್ಣ, ಸಕ್ರಿಯ ರಾಜಕಾರಣದಲ್ಲಿ ಧುಮುಕಿತು. ಇಲ್ಲಿಂದ ಆಚೆಗೆ ನಡೆದ ಹಿಂಸಾಚಾರಗಳು, ಗಲಭೆಗಳು, ಹತ್ಯಾಕಾಂಡಗಳನ್ನು ಈಗ ಪದೇ ಪದೇ ವಿವರಿಸುವ ಅಗತ್ಯವೇ ಇಲ್ಲ. ಇದಕ್ಕೆ ಮುಸ್ಲಿಂ ಕಂದಚಾರಿಗಳು ತಮ್ಮ ಕೊಡುಗೆ ನೀಡಿರುವುದು ಕೂಡ ಸರ್ವವಿದಿತ. ಈ ಕಾಲಘಟ್ಟದಲ್ಲಿ ಹಿಂದೂ ಹಾಗು ಮುಸ್ಲಿಂ ಮೂಲಭೂತವಾದಗಳು ಪರಸ್ಪರ ಪೂರಕವಾಗಿ ವರ್ತಿಸಿ ಅಪಾರ ಪ್ರಾಣಹಾನಿ, ಸಂಪತ್ತುಹಾನಿಗಳಿಗೆ ಕಾರಣವಾದವು. ಆದರೆ ಈ ಸಂಘ ಪರಿವಾರದ  ಈ ಕೋಮುವಾದ ರಾಜಕಾರಣ ಇವೆಲ್ಲ ಕಾಲಘಟ್ಟಗಳನ್ನು ಮೀರಿ ಹೊಸ ನಡೆಗಳ, ತಂತ್ರಗಳ ಹುಡುಕಾಟದಲ್ಲಿದೆ. ಇಲ್ಲಿ ಇನ್ನೊಂದು ಪ್ರಮುಖವಾದ ಅಂಶವೆಂದರೆ ಕೋಮುವಾದ ರಾಜಕಾರಣವು ಕ್ರಿಯಾತ್ಮಕವಾಗಿಯೂ (ಎಂದರೆ ಸ್ವಹಿತಾಸಕ್ತಿಯಿಂದ ತಮ್ಮ ಅಚಾರ, ವಿಚಾರಗಳ ಪ್ರತಿಪಾದನೆಗಾಗಿ ಹಾಗೂ ಅವುಗಳನ್ನು ಜಾರಿಗೊಳಿಸಲಿಕ್ಕಾಗಿ ಯಾವ ಪ್ರಚೋದನೆ ಇಲ್ಲದೆ ನಡೆಯುವ ಘಟನೆಗಳು) ಮತ್ತು ಪ್ರತಿಕ್ರಿಯಾತ್ಮಕವಾಗಿಯೂ ಎರಡೂ ರೂಪದಲ್ಲಿ ನಡೆಯುತ್ತವೆ.

ಈಗ ಸಧ್ಯಕ್ಕೆ ಪ್ರತಿಕ್ರಿಯಾತ್ಮಕ ಕೋಮುವಾದದ ರಾಜಕಾರಣ ಮೇಲ್ನೋಟಕ್ಕೆ ತಣ್ಣಗಿರುವಂತೆ ಕಾಣುತ್ತದೆ, ಆದರೆ ಇದು ಸಹಜವೋ ಇಲ್ಲವೋ ಹುಸಿಯಾದದ್ದೋ ಎಂದು ಚಿಂತನೆ ನಡೆಸುವ ಸಂಶೋಧಿಸುವ ಗೋಜಿಗೇ ಹೋಗದೆ ಕೆಲವು ಪತ್ರಿಕೆಗಳು, ಬಹುಪಾಲು ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾದವರು ತಾವಾಗಿಯೇ ಫರ್ಮಾನ್ ನೀಡಿಬಿಟ್ಟಿದ್ದಾರೆ. ಇವರ ಈ ಹೊಸ ಧಾಟಿಯನ್ನು ನೋಡಿದರೆ ಆದಷ್ಟು ಬೇಗ ನರೇಂದ್ರ ಮೋದಿಗೆ ಕ್ಷಮಾಪಣೆ ದೊರಕಿಸಿ ಬಿಜಿಪಿಯನ್ನು ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರದಲ್ಲಿ ಕೂಡಿಸುವ, ಆ ಮೂಲಕ ತಾವೊಬ್ಬ ಕಿಂಗ್ ಮೇಕರ್ ಆಗುವ ಎಲ್ಲಾ ಹುನ್ನಾರಗಳು ಕಾಣುತ್ತಿವೆ. ಆದರೆ ಇದಕ್ಕೆ ಪ್ರೇರಣೆಗಳೇನು?

ಆದರೆ ಇಂದಿಗೂ ಸಂಪೂರ್ಣವಾಗಿ ಚಾಲ್ತಿಯಲ್ಲಿರುವ, ನಿರಂತರವಾಗಿ ತನ್ನೆಲ್ಲ ಕರಾಳ ರೂಪವನ್ನು ತೋರಿಸುತ್ತಿರುವ ಕ್ರಿಯಾತ್ಮಕ ಕೋಮುವಾದ ಬಗ್ಗೆ ಇವರೆಲ್ಲ ಏಕೆ ಜಾಣ ಮೌನ, ಜಾಣ ಕುರುಡು ನೀತಿ??? ಇದು ದೇಶದೆಲ್ಲೆಡೆಯಲ್ಲಿ ಗುಪ್ತವಾಗಿಯೂ, ಅನೇಕ ವೇಳೆ ಬಹಿರಂಗವಾಗಿಯು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ನಮ್ಮ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿನ ಕ್ರಿಯಾತ್ಮಕ ಕೋಮುವಾದ. ಇದಕ್ಕೆ ಯಾವ ಪ್ರಚೋದನೆಗಳು ಬೇಕಾಗಿಲ್ಲ. ತಣ್ಣಗೆ ತನ್ನ ಹತ್ತಿಕ್ಕುವ, ಆಳುವ ದಬ್ಬಾಳಿಕೆಯನ್ನು ನಡೆಸುತ್ತಿದೆ.ಇದೇ ರೀತಿ ದೇಶದಲ್ಲೆಡೆ ನಡೆಯುತ್ತಿರುತ್ತವೆ. ಇದು ಕೋಮುವಾದವಲ್ಲವೇ? ಈ ಕ್ರಿಯಾತ್ಮಕ ಕೋಮುವಾದ ಬಹಳ ಅಪಾಯಕಾರಿಯಾದದ್ದು. ಇಲ್ಲಿ ಮಗ್ಧ  ಜನರ (???) ಅಂತರ್ಗತ ಭಾವನೆಗಳಿಗೆ ಸುಪ್ತವಾಗಿ ಹುದುಗಿರುವ ಬಲಪಂಥೀಯ ಸಂವೇದನೆಗಳಿಗೆ ನಿರಂತರವಾಗಿ ನೀರು-ಗೊಬ್ಬರ ನೀಡಿ ಅದನ್ನು ಅತ್ಯುತ್ತಮ ಫಸಲಾಗಿಸುವ ಈ ವ್ಯವಸಾಯ ಸಂಘಪರಿವಾರಕ್ಕೆ ಅದರಲ್ಲೂ ಆರೆಸಸ್ಸ್ ನವರಿಗೆ ಬಹಳ ಚೆನ್ನಾಗಿ ಕರತಲಾಮಕವಾಗಿದೆ. ಇವರು ಈ ಫಸಲನ್ನು ಕಳೆದ 50 ವರ್ಷಗಳಿಂದ ಬಹಳ ಚೆನ್ನಾಗಿಯೇ ಎತ್ತಿದ್ದಾರೆ. ಈಗಲೂ ಇದಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ದೇಶದೆಲ್ಲೆಡೆ ನಡೆಯುತ್ತಿವೆ. ಇದು ನೇರವಾಗಿ ಸ್ವಯಂಸೇವಕರ ರೂಪದಲ್ಲೋ, ತಮ್ಮದೇ ಆದ ಪೂರಕ ಸಂಸ್ಥೆಗಳ ಮೂಲಕವೋ, ಬಲಪಂಥೀಯ ಪತ್ರಕರ್ತರ ಮುಖಾಂತರವೋ, ಸದ್ಭಾವನೆಯ ಮುಖವಾಡಗಳನ್ನು ಹೊತ್ತು ಅಂತರಂಗದಲ್ಲಿ ಸಂಪೂರ್ಣ ಮತೀಯವಾದಿಗಳಾಗಿರುವ ಸಾಹಿತಿಗಳ ಮೂಲಕವೋ ಇವರ ಈ ಕಾರ್ಯಕ್ರಮಗಳು ನಿರರಂತರವಾಗಿ ನಡೆಯುತ್ತಿರುತ್ತವೆ. ಈ ಮೂಲಕ ಜನರನ್ನು ಸದಾಕಾಲ ಅಲ್ಪಸಂಖ್ಯಾತ ದ್ವೇಷದ ಮನಸ್ಥಿತಿಯಲ್ಲಿಟ್ಟು ತಮ್ಮ ಮೂಲ ಕಾರ್ಯಗಳನ್ನು ಪ್ರತಿಕ್ರಿಯಾತ್ಮಕ ಹಿಂಸೆಯ ಅಗತ್ಯತೆಯಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ. ಇದೆಲ್ಲಾ ಮೇಲಿನವರಿಗೆ ಗೊತ್ತಿಲ್ಲವೇ? ಗೊತ್ತಿಲ್ಲವೆಂದರೆ ಇವರು ಪತ್ರಿಕಾರಂಗದ ಮೂಲಭೂತ ಅಶಗಳನ್ನೇ ಧಿಕ್ಕರಿಸಿದ್ದಾರೆಂದು ಅರ್ಥ. ಒಂದು ವೇಳೆ ಗೊತ್ತಿದ್ದೂ ಈ ರೀತಿ ವರ್ತಿಸುತ್ತಿದ್ದಾರೆಂದರೆ ಅವರ ಆರೋಗ್ಯವಂತ ಮನಸ್ಥಿತಿಯನ್ನೇ, ಅವರ ಸೈದ್ಧಾಂತಿಕ ಬದ್ದತೆಯನ್ನೇ ಪ್ರಶ್ನಿಸಬೇಕಾಗುತ್ತದೆ.

ಕಳೆದ 8 ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿಲ್ಲ ಎಂದರೆ ಇದರಲ್ಲಿ ಕೋಮುವಾದದ ವಿರುದ್ದದ ಕಾನೂನುಗಳು ಇಂದಿನ ದಿನಗಳಲ್ಲಿ ಬಲವಾಗಿ ಪ್ರಯೋಗಿಸಲ್ಪಡುತ್ತಿವೆ. ಅಲ್ಲದೆ ರಾಷ್ಟ್ರೀಯವಾದದೊಂದಿಗೆ ಕೋಮುವಾದವನ್ನು ಗಂಟು ಹಾಕುವ ಆ ಮೂಲಕ ದೇಶ ಪ್ರೇಮದ ಉನ್ಮಾದದಲ್ಲಿ ಅರಾಜಕತೆಯನ್ನು ಹುಟ್ಟು ಹಾಕಿ ತನ್ನ ಮೂಲಭೂತ ಹಿಂದುತ್ವವಾದಿ ಪ್ರಣಾಳಿಕೆಗಳನ್ನು ಅನುಷ್ಟಾನಕ್ಕೆ ತರುವ ಇವರ ಯೋಜನೆಗಳು ಸಂಪೂರ್ಣ ಉಲ್ಟಾ ಹೊಡೆದಿವೆ. ಹಾಗೂ 2002 ರ ಗುಜರಾತ್ ನಲ್ಲಿ ನಡೆದ ನರಮೇಧದ ಫಲವಾಗಿ ಸಂಘಪರಿವಾರಕ್ಕೆ ತಮ್ಮ ಹೆಗಲೇರಿದ ಆ ಹತ್ಯಾಕಾಂಡದ ಜವಾಬ್ದಾರಿಯನ್ನು ಇನ್ನೂ ಕಳೆದುಕೊಳ್ಳಲಾಗುತ್ತಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ಆ ರಾಜ್ಯದಲ್ಲಿ ತನ್ನೆಲ್ಲ ಅಧಿಕಾರವನ್ನು ಬಳಸಿ ಪ್ರಗತಿಪರರನ್ನು, ಪ್ರತ್ಯಕ್ಷ ಸಾಕ್ಷಿಗಳನ್ನು ಹತ್ತಿಕ್ಕಿದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಕಷ್ಟ. ಅದಕ್ಕೇ ಬಿಜೆಪಿಗೆ ನರೇಂದ್ರ ಮೋದಿಯ ಅತ್ಯಂತ ಹಾಸ್ಯಾಸ್ಪದ, ಕಳಂಕಿತ, ಕ್ರೂರ ವ್ಯಂಗದ ಉಪವಾಸವನ್ನೂ ಕೂಡ ಅಸಹಾಯಕತೆಯಿಂದ, ಕಂಗಾಲುತನದಿಂದ ಬೆಂಬಲಿಸಬೇಕಾಗಿ ಬಂದಿರುವುದು. ಇಲ್ಲಿನ ಕರ್ನಾಟಕದಂತೆ ಅಲ್ಲಿನ ಕಾಂಗ್ರೆಸ್ ನವರ ಸಂಪೂರ್ಣ ನಿಸ್ತೇಜತನ, ಬೇಜವಬ್ದಾರಿತನ ಕೂಡ ಇವರಿಗೆ ನೇರವಾಗಿ ಸಹಾಯ ಮಾಡುತ್ತಿದೆ. ಇನ್ನು 2008 ರಲ್ಲಿ ಜರುಗಿದ ಒರಿಸ್ಸಾದ ಕಂದಾಮಾಲ್ ಹತ್ಯಾಕಾಂಡದ ಜವಾಬ್ದಾರಿಯಿಂದ ಕೂಡ ಸಂಘಪರಿವಾರಕ್ಕೆ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಅಲ್ಲದೆ ಇಂದಿನ ಸಾಮಾಜಿಕವಾಗಿ ಬದಲಾದ ವರ್ಷಗಳಲ್ಲಿ ಮೊದಲಿನ aggressive ಕೋಮುವಾದ ರಾಜಕಾರಣ ಮಾಡಲಿಕ್ಕೆ ಹಳೇ ಹತಾರಗಳು ಉಪಯೋಗಕ್ಕೆ ಬರುತ್ತಿಲ್ಲ, ಅವು ಹೊಸ ಹತಾರಗಳ, ಸಂಚುಗಳ ಹುಡುಕಾಟದಲ್ಲಿವೆ ಅಷ್ಟೇ. ಅದಕಾಗಿ ಮೇಲ್ನೋಟಕ್ಕೆ ಎಲ್ಲಾ ಸಮಾಧಾನದಿಂದಿರುವಂತೆ ಕಾಣುತ್ತಿದೆ. UPA ಸರ್ಕಾರ ಬೇಕಾದರೆ ಇದರ credit ತಾನು ತೆಗುದುಕೊಳ್ಳಬಹುದು. ಆದರೆ ಆದರ ಸ್ಥಿತಿಯೇ ಚಿಂತಾಜನಕವಾಗಿದೆ.

ಇನ್ನು ಇಂದಿನ ಯುವ ಜನತೆ ಕೋಮುವಾದ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ನಿಜವೆನಿಸಬಹುದಾದರೂ ವಾಸ್ತವವಾಗಿ ಆದು ಹಾಗೆ ಇಲ್ಲ. ಏಕೆಂದರೆ ಕೋಮುವಾದವೋ ಅಥವಾ ಇನ್ಯವುದೋ ಒಟ್ಟಿನಲ್ಲಿ ಯಾವುದು ಅರ್ಥಿಕವಾಗಿ ಲಾಭದಯಕವಾಗಿಲ್ಲವೋ ಅದರ ಬಗ್ಗೆ ಇವರಿಗೆ ಯಾವುದೇ ರೀತಿಯ ವಿಶೇಷ ಆಸಕ್ತಿಗಳಾಗಲಿ, ತೀವ್ರತರವಾದ, ಭಾವನಾತ್ಮಕವಾದ ಬೆಸುಗೆಯಾಗಲಿ ಇಲ್ಲ. ಇದು ಬಿಟ್ಟು ಇನ್ನಾವುದೇ ಸೈದ್ಧಾಂತಿಕ, ವೈಚಾರಿಕ ಕಾರಣಗಳಾಗಲಿ ಇಲ್ಲಿ ಕಾಣುತ್ತಿಲ್ಲ.ಇನ್ನು ಸಂಘ ಪರಿವಾರಕ್ಕೆ ಜ್ಞಾನೋದಯವಾಗಿದೆ ಯೆನ್ನುವುದಂತು ಶುದ್ದ ಕುಹಕದ, ಬೇಜವಬ್ದಾರಿತನದ ಹೇಳಿಕೆಗಳು. ಏಕೆಂದರೆ ಸಂಘ ಪರಿವಾರದ Hidden agendaನೇ ಬೇರೆ. ಅದು ಮತ್ತೆ ಸಾವಿರಾರು ವರ್ಷಗಳ ಹಿಂದಿನ ಸನಾತನವಾದಕ್ಕೆ, ಪುರೋಹಿತಶಾಹಿ ತತ್ವಕ್ಕೆ, ಮನುವಾದಕ್ಕೆ ಮರಳುವುದು ಇವರು ಲಾಗಾಯ್ತಿನಿಂದಲೂ ಪ್ರತಿಪಾದಿಸುತ್ತಿರುವುದು, ದೃಢವಾಗಿ ನಂಬಿರುವುದು ವರ್ಣಾಶ್ರಮವೇ ಆದರ್ಶ ಸಮಾಜದ ಉತ್ತಮ ವ್ಯವಸ್ಥೆ ಎಂದು. ಇವರಿಗೆ ವೈದಿಕ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ಅಘಾತಕರ ವಿಷಯವಾಗಿದೆ. ನವ ಭ್ರಾಹ್ಮಣ್ಯಾವಾದನ್ನು ಹುಟ್ಟು ಹಾಕಲು, ಇವರನ್ನು ಶಕ್ತಿ ರಾಜಕಾರಣದ ಕೇಂದ್ರವನ್ನಾಗಿ ಮಾಡಲು ಈ ಮೂಲಕ ಭಾರತದ ತಳಸಮುದಾಯದವರನ್ನು, ಮಹಿಳೆಯನ್ನು ನಿಯಂತ್ರಿಸುವುದು ಹಾಗೂ ಇದಕ್ಕಾಗಿ ಇವರು ಸಮಯ ಮತ್ತು ಸಂಪೂರ್ಣ ಅಧಿಕಾರಕ್ಕಾಗಿ ಹೊಂಚು ಹಾಕುತ್ತಿದಾರೆ. ಅಂಬೇಡ್ಕರ್ ರವರ ಏಕಾಂಗಿ, ನಿರಂತರ ಹೋರಾಟದ ಫಲವಾಗಿ ಎಚ್ಚರಗೊಂಡ ದಲಿತರ ಪ್ರಜ್ಞೆ, ದಲಿತರ ಶಿಕ್ಷಣ, ದಲಿತರ ರಾಜಕೀಯಗಳು ನಾಗಪುರದ ಕೇಶವಕೃಪಾದ ಪುರೋಹಿತರಿಗೆ ನುಂಗಲಾರದ ತುತ್ತು. ಅಂಬೇಡ್ಕರ್ ಅವರು ತಮ್ಮೆಲ್ಲ ನಿರಂತರ ಜ್ಞಾನ, ವೈಚಾರಿಕತೆ, ಜಾತ್ಯಾತೀತತೆಯನ್ನು ಅತ್ಯಂತ ವೈಜ್ನಾನಿಕವಾಗಿ ಬಳಸಿ ರೂಪಿಸಿದ ಭಾರತದ ಇಂದಿನ ಸಂವಿಧಾನ ಸಂಘಪರಿವಾರಕ್ಕೆ ಸುತಾರಾಂ ಇಷ್ಟವಿಲ್ಲ ಹಾಗೂ ಗೌರವವಿಲ್ಲ. ಮಹಿಳೆಯರ ಸಬಲೀಕರಣವೆನ್ನುತ್ತಲೆ, ಹೌಹಾರಿ ಬೆಚ್ಚಿ ಬೀಳುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ಇವೆಲ್ಲವನ್ನು ನೇರವಾಗಿ ಬಹಿರಂಗವಾಗಿ ವಿರೋಧಿಸಿದರೆ ಶಿಕ್ಷೆಗೆ ಗುರಿಯಾಗುವ, ಮೂಲಭಾತವಾದಿಗಳೆಂದು ತಿರಸ್ಕೃತರಾಗುವ ಸಾಧ್ಯತೆಗಳನ್ನು ಊಹಿಸಿಯೇ ಬಹಿರಂಗವಾಗಿ ಮುಸ್ಲಿಂ ವಿರೋಧಿ ಚಳುವಳಿಯನ್ನು ರೂಪಿಸಿ, ಜನರ ಭಾವನೆಗಳನ್ನು ಕೆರಳಿಸಿ ಗಲಭೆಗಳಲ್ಲಿ ನೇರಾವಾಗಿ ಮುಖಾಮುಖಿಯಾಗಲು ಹಿಂದುಳಿದವರನ್ನು, ದಲಿತರನ್ನು ಅಖಾಡಕ್ಕಿಳಿಸಿ, ಇವರನ್ನು ಮುಸ್ಲಿಂ ಮೂಲಭೂತವಾದದೊಂದಿಗೆ ನೇರವಾಗಿ ಕಣಕ್ಕಿಳಿಸಿ ತಾವು ಮಾತ್ರ ಹಿನ್ನೆಲೆಯಲ್ಲಿ ಗೌರವಾನ್ವಿತ ಸ್ಥಾನದಲ್ಲಿ ನಿಂತು ಅವರು ಮಾತ್ರ ಕಾನೂನಿನ ಕುಣಿಗೆ ಸಿಕ್ಕಿಕೊಂಡು ಜೈಲು ಪಾಲು ಮಾಡುವುದು ಇವರ ಮೂಲಭೂತ ಗೇಮ್ ಪ್ಲಾನ್. ಇವರಿಗೆ ಮುಸ್ಲಿಂ ಕಂದಾಚಾರಿಗಳು ತಮ್ಮ ಮೂಲಭೂತವಾದಿತ್ವದಿಂದ ಸಂಪೂರ್ಣ ಸಹಕರಿಸಿರುವುದು ಕಳೆದ 50 ವರ್ಷಗಳ ಭಾರತದ ಇತಿಹಾಸವನ್ನು ಬಲ್ಲವರಿಗೆ ಸಂಪೂರ್ಣವಾಗಿ ಗೊತ್ತಿರುತ್ತದೆ.

ಮೇಲ್ಕಾಣಿಸಿದ ವಿಷಯಗಳೆಲ್ಲ ಚರ್ವತಚರ್ಣಿತವಾದಂತಹುವುಗಳೇ. ಅಲ್ಲದೇ UPA ಸರ್ಕಾರದ ಅತ್ಮಹತ್ಯಾತ್ಮಕ, ಎಡಬಿಡಂಗಿತನದ, ಗೊತ್ತು ಗುರಿಯಿಲ್ಲದ, ಭ್ರಷ್ಟಾಚಾರ ಕಳಂಕಿತ ಗೋಜಲು ಅಧಿಕಾರ ರಾಜಕಾರಣದ ಸಂಪೂರ್ಣ ಲಾಭ ಪಡೆಯಲು ಈಗ ತುದಿಗಾಲಲ್ಲಿ ನಿಂತಿರುವ ಸಂಘಪರಿವಾರಕ್ಕೆ ಈಗ ಕೋಮುವಾದದ ಬಳಕೆ ಸದ್ಯಕ್ಕೆ ತುರ್ತಿನ ಅಗತ್ಯವಾಗಿ ಕಾಣುತ್ತಿಲ್ಲ. UPA ಸರ್ಕಾರದ ಸ್ವಯಂಕೃತ ಅಪರಾಧಗಳೇ ತಮಗೆ ಅಧಿಕಾರ ತಂದು ಕೊಡಬಲ್ಲದು ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ ಸಂಘಿಗಳು. ಇದಕ್ಕೆ ಭವಿಷ್ಯದ ರಾಜಕಾರಣ, ಅದರ ನಡೆಗಳೇ ಉತ್ತರ ನೀಡಬಲ್ಲವು.  ಆದರೆ ಈ ಎರಡೂ ಕಡೆಯ ಮಾಧ್ಯಮವರು ತೀವ್ರ ಬಲಪಂಥೀಯ ರಾಜಕಾರಣಕ್ಕೆ ಈಗೇಕೆ ಇಂತಹ ಅವಸರ, ಉನ್ಮಾದ ತೋರುತ್ತಿದ್ದಾರೆ? ನರಮೇಧದ ರೂವಾರಿ ನರೇಂದ್ರ ಮೋದಿಯಲ್ಲಿ ಇವರೇನಾದರು ಮನುಷ್ಯತ್ವ, secularism ನ ಹೊಸ ಝಳಕನ್ನೇನಾದರೂ ಕಂಡರೆ? ಅದ್ವಾನಿಯವರಲ್ಲಿ ಪರಿಪಕ್ವ ರಾಜಕಾರಣಿಯನ್ನೇನಾದರೂ ಕಂಡರೆ? ಬಿಜೆಪಿಯಲ್ಲಿ ಭಾರತದ ಭವಿಷ್ಯವನ್ನೇನಾದರೂ ಕಂಡರೆ? ಹಾಗಾದರೆ ಇವರು ಬೆಂಕಿಯ ಜೊತೆ ಸರಸವಾಡುತ್ತಿದ್ದಾರೆಂದು ನೇರವಾಗಿಯೇ ಹೇಳಿಬಿಡಬಹುದು. ಇನ್ನಾದರೂ ಎಡಪಂಥೀಯರು, ಸಮಾಜವಾದಿಗಳು ತಮ್ಮ ಇತಿಹಾಸದ ತಪ್ಪು ಹೆಜ್ಜೆಗಳನ್ನು, ಅಕಡೆಮಿಕ್ ಅಹಂ ಅನ್ನು ಬಿಟ್ಟುಕೊಡಬೇಕಾಗಿದೆ. ಇಂದಿನ ಕಾಲ ಸಂಧರ್ಭದಲ್ಲಿ  ಬಲಪಂಥೀಯರ ಚಳುವಳಿಗಳನ್ನು ಕಟ್ಟುವ, ಜನಸಂಘಟನೆಗಳನ್ನು ನಡೆಸುವ, ಇವೆಲ್ಲವನ್ನು ತಮ್ಮ ಯಶಸ್ಸಿನ ಸೋಪಾನವಾಗಿ ಮಾಡಿಕೊಳ್ಳುವ ಎಲ್ಲಾ ರೀತಿಯ activism ಎದುರಾಗಿ ಎಡಪಂಥೀಯ, ಸಮಾಜವಾದಿ ರಾಜಕಾರಣ, ಸಂಘಟನೆಗಳು ಏಕೆ ಸಂಪೂರ್ಣವಾಗಿ ಸೋತಿವೆ? ಏಕೆ ಈ ರಾಷ್ಟ್ರದ ಜನತೆ ಎಡಪಂಥೀಯ, ಸಮಾಜವಾದಿ ಚಿಂತನೆಗಳನ್ನ, activismನ್ನ ಅತ್ಯಂತ ಸಿನಿಕರಾಗಿ ನೋಡುತ್ತಾರೆ? ಏಕೆ ಈ ರಾಷ್ಟ್ರದ ಜನತೆ ಇವರೆನ್ನೆಲ್ಲಾ ಅನೇಕ ಗಾವುದ ದೂರ ಇಟ್ಟಿದೆ? ಇದು ಆತ್ಮಾವಲೋಕನದ, ಮತ್ತೊಮ್ಮೆ ತಳಮಟ್ಟದಿಂದ ಕೈಯೂರಿ ಎದ್ದೇಳುವ ಕಾಲ. ಬಹಳ ಸಮಯವಿಲ್ಲ. ನಮ್ಮೆಲ್ಲರ ಕಾಳಜಿ ಏನೆಂದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹೇಗೆ ಈ ಸಂಘಪರಿವಾರವನ್ನು ಎದುರಿಸುವುದು? ಹೇಗೆ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಗಟ್ಟವುದು? ಅದಕ್ಕಾಗಿ ನಾವೆಲ್ಲ ಯಾವ ರೀತಿಯ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕ? ಇದು ಒಂದು ದೊಡ್ಡ ಟಾಸ್ಕ್ ನಾವೆಲ್ಲ ಇದರ ಬಗ್ಗೆ ನಮ್ಮೆಲ್ಲರ ಗಮನ, ಚಿಂತನೆಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗಿದೆ.

(ಚಿತ್ರಕೃಪೆ: ವಿಕಿಪೀಡಿಯ)

4 thoughts on ““ಕೋಮುವಾದದ, ಕೋಮುವಾದ ರಾಜಕೀಯದ ಕಾಲ ಮುಗಿಯುತ್ತಿದೆ, ಅಥವಾ ಮುಗಿದಿದೆ”. ಹೌದೆ?

 1. pp

  ಹಾಗಾದರೆ ನೀವು ಎಡಪಂಥೀಯರೇ . . .? ಪಂಥೀಯ ವಾದದಲ್ಲೇ ಮುಳುಗಿರುವ ನೀವು . . . ಪತ್ರಿಕೆ ಅಂತ ಯಾಕೆ ಹೇಳಿಕೊಳ್ಳುತ್ತೀರಿ . ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ಎಂದು ಹಾಕಿಕೊಳ್ಳಿ ಆಗ…ನೀವು ತೆವೆಲಿನಿಂದ ಬರೆದ ಇಷ್ಟನ್ನೂ ಒಪ್ಪುತ್ತೇವೆ . . . ಕೋಮು ಸಾಮರಸ್ಯ, ಬಂಡಾಯ, ಬಂಡವಾಳಶಾಹಿ, ಉದಾರಿಕರಣ . . ಇನ್ನಿತರ ಮೂರು ಪದವನ್ನು ಎಷ್ಟು ದಿನದಿಂದ ಎಳೆದುಕೊಡು ಬಂದ್ದೀದೀರಿ . . . ಇಲ್ಲಿ ಏನೇ ಆದರೂ ಚೀನಾದ ಮಾವೋ ಇದಕ್ಕೆ ಪರಿಹಾರ ಎನ್ನುವ ನಿಮ್ಮ ತನಕ್ಕೆ ಯಾವ ಎಕ್ಕಡದಲ್ಲಿ ಹೊಡೆಯಬೇಕು ತಿಳಿಸಿ. ಸುಮ್ಮನೆ ಕೈ ನವೆ ಆದಾಗಲೆಲ್ಲಾ, ಸಂಘ ಪರಿವಾರ , ಚಡ್ಡಿ , ಎಂದು ಬರೆದುಕೊಂಡು ಬದುಕುತ್ತಿರಲ್ಲಾ . . . ? ಅದಕ್ಕೆ ವರ್ತಮಾನ ಕರ್ನಾಟಕ ಅನ್ನುವ ತಲೆ ಬರಹ ಬೇರೆ ಹಾ ಹಾ ಹಾ ಹಾ ಹಾ . . . . . ತಲೆ ಬುಡವರಿಯದ ತೀಟೆ ಪುರುಷರು ಹಾ ಹಾ ಹಾ ಹಾ ಹಾ .

  Reply
 2. Ananda Prasad

  ಸಾವಿರಾರು ವರ್ಷಗಳ ಹಿಂದೆ ಇದ್ದಂತೆ ಇಂದೂ ಇರಬೇಕು, ಅದುವೇ ಶ್ರೇಷ್ಠ ಹಾಗೂ ಸರ್ವಕಾಲಿಕ ಮೌಲ್ಯ ಎಂಬ ಹಾಗೂ ಇದಕ್ಕೆ ವಿರುದ್ಧವಾದ ನಾಗರೀಕತೆ, ವಿಜ್ಞಾನ, ಚಿಂತನೆ ಬೆಳೆದಂತೆ ನಮ್ಮ ನಡವಳಿಕೆಗಳು, ಆಚಾರಗಳಲ್ಲಿ ಸುಧಾರಣೆ ತರಬೇಕು ಎಂಬ ಧೋರಣೆಗಳ ನಡುವೆ ನಾವು ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ ಹಾಗೂ ಅಂಥ ಪ್ರತಿಪಾದನೆಯನ್ನು ಎಡಪಂಥ ಎಂದು ಕರೆಯಲು ಸಾಧ್ಯವಾಗದು. ಇದನ್ನು ಮಾನವೀಯ ಪಂಥ ಎಂದು ಬೇಕಾದರೆ ಕರೆಯಬಹುದು. ವಿದ್ಯಾವಂತರು ಇಂಥ ಮಾನವೀಯ ಪಂಥದೆಡೆಗೆ ಹೆಚ್ಚು ಹೆಚ್ಚು ಮುನ್ನಡೆಯಬೇಕಾದ ಅಗತ್ಯವಿದೆ ಹಾಗೂ ಪ್ರತಿಗಾಮಿ ಧೋರಣೆಗಳನ್ನು ಪ್ರತಿರೋಧಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರದ ಚಿಂತನೆಗಳು ಯಾವತ್ತೂ ಪ್ರತಿಗಾಮಿಯಾಗಿಯೇ ಕಂಡು ಬರುತ್ತವೆ. ಈ ಹಿನ್ನೆಲೆಯಲ್ಲಿ ಸಂಘದ ಚಿಂತನೆಗಳನ್ನು ವಿದ್ಯಾವಂತ ಜನರು ತಿರಸ್ಕರಿಸಿ ಮಾನವೀಯ ಮೌಲ್ಯಗಳೆಡೆಗೆ ಸಾಗಬೇಕಾದ ಅಗತ್ಯವಿದೆ. ಇದನ್ನು ಎಡ ಪಂಥ ಎಂಬ ಸಂಕುಚಿತ ದೃಷ್ಟಿಕೋನದಿಂದ ನೋಡಬೇಕಾಗಿಲ್ಲ.

  Reply
 3. Anonymous

  Very interesting article. Yes recently in Periyapatna for whole week RSS was organized a program to teach hinduism. The slogans on the banner they posted were full of hatred and targeting minorities.
  They now try to attract dalits in a big way to RSS. So that they are taking of untouchability and its ill effect. What we have to understand is that they are always poisonous and continue to be so.
  Thanks for the article

  Reply
 4. prasad raxidi

  ಕೋಮುವಾದ ಕಡಿಮೆಯಾಗಿದೆ ಅಥವಾ ಅಪ್ರಸ್ತುತವಾಗಲಿದೆ ಎನ್ನುವದು ಖಂಡಿತ ನಿಜವಲ್ಲ,ಅದು ಹೊಸ ಹೊಸ ವೇಷಗಳನ್ನು ಹುಡುಕುತ್ತಿದೆ ಅಷ್ಟೆ.ಅದೊಂದು ಜಾಗತಿಕ ವಿದ್ಯಮಾನ, ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಕೋಮುವಾದದ ಅಗತ್ಯ ಇಲ್ಲದೆಯೇ ಅಧಿಕಾರ ಹಿಡಿಯುವ ದೈರ್ಯ ಬಿಜೆಪಿ ಪರಿವಾರಕ್ಕೆ ಈಗ ಬಂದಿರುವುದಕ್ಕೆ ಇಂದಿನ ಯು.ಪಿ.ಎ ಸರ್ಕಾರದ ದುರವಸ್ಥೆಯೇ ಕಾರಣ, ಆದರೆ ಸ್ವಾತಂತ್ರ್ಯದ ನಂತರದ ಕಾಂಗ್ರೆಸಿನ ಮತಿಗೇಡಿ- ಅವಕಾಶವಾದಿ ರಾಜಕೀಯವೇ ಕೋಮುವಾದ ಮುಂಚೂಣಿಗೆ ಬರಲು ಕಾರಣವಾಯಿತು.. ಎನ್ನುವುದೂ ಅಷ್ಟೇ ನಿಜದ ಸಂಗತಿ.

  Reply

Leave a Reply to prasad raxidi Cancel reply

Your email address will not be published.