ಚೆಡ್ಡಿ ಪತ್ರಕರ್ತರ ಸಂಚಿಗೆ ಪತ್ರಕರ್ತರ ಐ.ಪಿ.ಎಸ್. ಮಗ ಬಲಿಪಶು

ಮಧುಕರ ಶೆಟ್ಟಿ ಸಂದರ್ಶನ ವಿವಾದ – ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರ ಸಂಚಿಗೆ  ಸಮಾಜವಾದಿ ಪತ್ರಕರ್ತರ ಐ.ಪಿ.ಎಸ್ ಮಗ ಬಲಿಪಶು

-ಚಂದ್ರಗಿರಿ

ದಿನಾಂಕ 13-11-2011ರ ಭಾನುವಾರ ಕಾರ್ಪೊರೇಟ್ ಎಂ.ಪಿ. ಮಲೆಯಾಳಿ ರಾಜೀವ್ ಚಂದ್ರಶೇಖರ್ ಮಾಲಿಕತ್ವದಲ್ಲಿ ಬರುವ ಕನ್ನಡ ಪ್ರಭದಲ್ಲಿ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ಐ.ಪಿ.ಎಸ್. ಅಧಿಕಾರಿ ಮಧುಕರ ಶೆಟ್ಟಿ ಆವರ ಸಂದರ್ಶನ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕೊಳದಲ್ಲಿ ಅಪಾರವಾದ ಹೊಂಡನ್ನು ಸೃಷ್ಟಿ ಮಾಡಿದೆ. ರಜೆ ಮೇಲೆ ಅಮೆರಿಕಾಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿರುವ  ಐ.ಪಿ.ಎಸ್. ಅಧಿಕಾರಿ ಮುಗ್ಧ ಮಧುಕರ ಶೆಟ್ಟೆ ಅವರ ಸಂದರ್ಶನ ಪ್ರಾಮಾಣಿಕತೆಯಿಂದ ಕೂಡಿದ್ದರೂ ಸಮಯೋಚಿತ ಸಂಚಿಗೆ ಬಲಿಯಾಗಿದೆ.

ಈಚಿನ ದಿನಗಳಲ್ಲಿ ಕರ್ನಾಟಕದ ಜನರಿಗೆ  ಲೋಕಾಯುಕ್ತದ ಬಗ್ಗೆ ನಂಬಿಕೆಯನ್ನು ಶಿಥಿಲಗೊಳಿಸುವ ಮಧುಕರ್ ಅವರ ಈ ಸಂದರ್ಶನ ಈ ಸಂದರ್ಭದಲ್ಲಿ ಪ್ರಕಟವಾಗಿರುವುದು ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಮುಂದಾಗಿದ್ದ ಒಂದು ಸಂಸ್ಥೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಅನುಮಾನವಿದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಮತ್ತು ಕೆಲ ರಾಜಕಾರಣಿಗಳು ಮಧುಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡಿರುವ ದಟ್ಟ ಅನುಮಾನಗಳು ನನ್ನನ್ನು ಕಾಡುತ್ತಿವೆ.

ಕನ್ನಡದ ಹೆಸರಾಂತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮಶೆಟ್ಟರ ಮಗನಾದ ಶ್ರೀ ಮಧುಕರ ಶೆಟ್ಟರು ಪತ್ರಿಕಾ ವಲಯ ಹಾಗೂ ಪ್ರಗತಿಪರ ವಲಯದಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ನಾನು ಬಲ್ಲ ಅನೇಕ ಪತ್ರಿಕಾ ಸ್ನೇಹಿತರು ಅವರು ಉಡುಪಿಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದನ್ನು, ಲೋಕಾಯುಕ್ತದಲ್ಲಿ ಭ್ರಷ್ಟರನ್ನು ಮಟ್ಟ ಹಾಕಿದ ಬಗೆಯನ್ನು, ಅದರಲ್ಲೂ ವಿಶೇಷವಾಗಿ ಕಟ್ಟಾ ಸುಬ್ರಮಣ್ಯಾ ನಾಯ್ಡು ಅವರ ಭೂ ವಂಚನೆ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿಜೃಂಭಣೆಯಿಂದ ವಿವರಿಸಿದ್ದಾರೆ.

ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ ಐ.ಪಿ.ಎಸ್. ತರಬೇತಿ ಪಡೆದು ದಕ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟರು ಇದ್ದಕ್ಕಿದ್ದಂತೆ ಎರಡು ವರ್ಷ ಅಮೆರಿಕದಲ್ಲಿ ಓದುವ ಸಲುವಾಗಿ ರಜೆ ಹಾಕುವ ಪ್ರಸಂಗ ಎದುರಾದಾಗ ಅವರ ಆಪ್ತ ಬಳಗ ಶೆಟ್ಟರಿಗೆ ಲೋಕಾಯುಕ್ತ ಕಾರ್ಯ ವೈಖರಿ ಬಗ್ಗೆ ಬೇಸರವಾಗಿರುವುದನ್ನು ಅಲ್ಲಲ್ಲಿ ವಿಷಾದನೀಯವಾಗಿ ವಿವರಿಸುತ್ತಿತ್ತು. ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡ ಬಗ್ಗೆಯೂ  ಗಿಲ್ಡ್ ಮತ್ತು ಕ್ಲಬ್‌ಗಳಲ್ಲಿ ಈ ಬಳಗ ಮಾತನಾಡಿದ್ದುಂಟು.

ಮಧುಕರ್ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆಯನ್ನು ಪ್ರಶ್ನಿಸಿ ಅವರ ಅತಿಯಾದ ಪ್ರಚಾರವನ್ನು ಟೀಕಿಸುತ್ತಿದ್ದುದು ಅವರ ಪತ್ರಿಕಾ ಮಿತ್ರರ ಮಾತಿನಿಂದ ನಮಗೆ ಗೊತ್ತಾಗುತ್ತಿತ್ತು. ಸಂತೋಷ ಹೆಗ್ಡೆ ಬಗ್ಗೆ ತಮಗಿರುವ ಅಸಮಾಧಾನವನ್ನು ಮಧುಕರ ಲೋಕಾಯುಕ್ತ ಸಂಸ್ಥೆಯೇನು ಸಾಚ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ವ್ಯಕ್ತ ಪಡಿಸುತ್ತಿದ್ದುದು ಅನೇಕ ಪತ್ರಕರ್ತರಿಗೆ ಗೊತ್ತಾಗಿತ್ತು. ಆದರೆ ಸಂತೋಷ ಹೆಗ್ಡೆ ಅವರ ಪ್ರಾಮಾಣಿಕತೆ ಮುಂದೆ ಮಧುಕರರ “ಗಾಸಿಪ್” ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.

ಆದರೀಗ ಲೋಕಾಯುಕ್ತ  ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆ ರೇಣುಕಾಚಾರ್ಯ, ಕುಮಾರಸ್ವಾಮಿ, ಬಿ.ಜೆ.ಪಿ. ಈಶ್ವರಪ್ಪ, ಮಾಜಿ ರೌಡಿ ಶೀಟರ್ ಬಿ.ಕೆ. ಹರಿಪ್ರಸಾದ್ ಅಂತಹವರ ಟೀಕೆಗೆ ತುತ್ತಾಗಿರುವ ಸಂದರ್ಭದಲ್ಲಿ ಮುಗ್ಧ ಮಧುಕರ  ಕನ್ನಡ ಪ್ರಭಕ್ಕೆ ದೂರವಾಣಿ ಸಂದರ್ಶನ ನೀಡಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹೂರಣವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲಿಗೆ ಹೋಗಿ ಬರುತ್ತಿರುವಾಗ,  ಮಗನ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಮಂಡಲ ಪಂಚಾಯತಿ ಸದಸ್ಯರ ರೀತಿಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಮಾಜಿ ಪ್ರಧಾನಿಗಳು ಧಮಕಿ ಹಾಕಿರುವಾಗ ಮಧುಕರರ ಮುಗ್ಧ ಹೇಳಿಕೆ ಪ್ರಾಮಾಣಿಕತೆಯ ಆದರ್ಶವನ್ನು ನಂಬಿ ಬದುಕು ನಡೆಸುವ ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತು. ನಮಗೆ ಈಗ ಕರ್ನಾಟಕದಲ್ಲಿ ಸಂತೋಷ ಹೆಗ್ಡೆ ಬಿಟ್ಟರೆ ಬೇರಾರೂ ಪ್ರಾಮಾಣಿಕರು ಮತ್ತು ಪರಿಪಕ್ವರೂ ಕಾಣುತ್ತಿಲ್ಲದ ಈ ಸಂದರ್ಭದಲ್ಲಿ ಮಧುಕರರ ಸಂದರ್ಶನ ಪ್ರಾಮಾಣಿಕರ ಆತ್ಮಸ್ಥೈರ್ಯಕ್ಕೆ  ಸವಾಲಾಗಿ ಪರಿಣಮಿಸಿದೆ.

ಮಧುಕರ ಶೆಟ್ಟರು ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ನಮ್ಮ ಎರಡು ಮಾತಿಲ್ಲ. ಅಂತೆಯೇ ಇವರು ಸಿನಿಕರು ಎಂಬುದು ಸಂದರ್ಶನದ ಪ್ರತಿ ಹಂತದಲ್ಲೂ ವ್ಯಕ್ತವಾಗಿದೆ. ಕೆಟ್ಟು ಕೆರ ಹಿಡಿದಿರುವ ಈ ವ್ಯವಸ್ಥೆಯಲ್ಲಿ ಪರಿಸ್ಥಿತಿಯನ್ನು ನಿಧಾನಕ್ಕೆ ನಿಯಂತ್ರಣಕ್ಕೆ ತಂದುಕೊಂಡು ಸಮಾಜವನ್ನು ಸುಧಾರಣೆ ಮಾಡುವ ಹಂತಕ್ಕೆ ಹೋಗಬೇಕು. ಅದು ಬಿಟ್ಟು ತಡ ರಾತ್ರಿ ಗೋಷ್ಠಿಗಳಲ್ಲಿ ಪರಿಚಯಸ್ಥರ ಮುಂದೆ ತಾನೇ ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ದೂರಿ ಒಳ್ಳೆಯವನಾಗಬಾರದು. ಇದು ಮೀಡಿಯಾ ಫ್ರೆಂಡ್ಲಿ ಆಫೀಸರ್ ಮನೋಭಾವನೆಗಿಂತ ಮಿಗಿಲಾಗಿ ಏನೂ ಅಲ್ಲ.

ದೂರದ ಅಮೆರಿಕೆಯಿಂದ ದೂರವಾಣಿಯಲ್ಲಿ ನೀವು ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರೊಂದಿಗೆ ಮಾತನಾಡಿದ ನಂತರ ಕನ್ನಡ ನಾಡಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹೀಗಿವೆ ನೊಡಿ ಮಧುಕರ್..:

 • ಬಿ.ಜೆ.ಪಿ ಅಧ್ಯಕ್ಷ ಈಶ್ವರಪ್ಪ ‘ಕಳ್ಳರನ್ನು ಕಳ್ಳರೇ ಹಿಡಿಯುವುದು ಎಂತಹ ಹಾಸ್ಯಾಸ್ಪದ’ ಎಂದಿದ್ದಾರೆ.
 • ‘ಮಧುಕರ್ ನನಗೆ ಈ ಹಿಂದೆಯೇ ಈ ವಿಷಯವನ್ನು ತಿಳಿಸಿದ್ದರು. ಅದಕ್ಕೆ ನಾನು ಲೋಕಾಯುಕ್ತ ಸಂಸ್ಥೆ ಬಗ್ಗೆ ಹಿಂದಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದು,’ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಸಂತೋಷ ಹೆಗ್ಡೆ ಅವರನ್ನು ಮತ್ತೊಮ್ಮೆ ಟೀಕೆ ಮಾಡಿದ್ದಾರೆ.
 • ಮಧುಕರ್ ಅಮೆರಿಕಾಕ್ಕೆ ಹೋದ ಮೇಲೆ ಸಿಐಎ ಏಜೆಂಟ್ ಥರ ಮಾತನಾಡುತ್ತಾರೆ ಕಣ್ರೀ ಎಂದು ವಡ್ಡರ್ಸೆಗೆ ಆಗದ ಕೆಲವು ಕುಹಕಿ ಕಮುನಿಸ್ಟರು ಕೇಕೆ ಹಾಕುತ್ತಿದ್ದಾರೆ.

ಏನೇ ಆಗಲಿ, ಮಧುಕರ ಶೆಟ್ಟರು ಕನ್ನಡಿಗರಿಗೆ ಏನಾದರೂ ತಮ್ಮ ಸಂದೇಶ ರವಾನಿಸುವದಿದ್ದರೆ ಯೂಟ್ಯೂಬ್ ಮುಖಾಂತರ ಮಾತನಾಡಲಿ. ನಾವು ಅದನ್ನು ಡೌನ್ ಲೋಡ್ ಮಾಡಿ ಪ್ರೆಸ್ ಕ್ಲಬ್‌ನಲ್ಲಿ ಪ್ರದರ್ಶಿಸುತ್ತೇವೆ. ಇನ್ನು ಮುಂದೆ ಮಧುಕರ್ ಕಾಸಿಗಾಗಿ ಸುದ್ದಿ ಪ್ರಕಟಿಸುವ ಚೆಡ್ಡಿ ಪತ್ರಕರ್ತರಿಗೆ ಟ್ರ್ಯಾಪ್ ಆಗುವುದು ಬೇಡ.

4 thoughts on “ಚೆಡ್ಡಿ ಪತ್ರಕರ್ತರ ಸಂಚಿಗೆ ಪತ್ರಕರ್ತರ ಐ.ಪಿ.ಎಸ್. ಮಗ ಬಲಿಪಶು

 1. Ananda Prasad

  ಮಧುಕರ ಶೆಟ್ರು ತಮ್ಮ ತಂದೆಯವರ ಪ್ರಗತಿಪರ ಹಾಗೂ ದಿಟ್ಟ ನಿಲುವುಗಳಿಗೆ ವಿರುದ್ಧವಾಗಿ ಹೋಗುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಇವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಭಾ. ಜ. ಪ. ಸಂಸದರೋರ್ವರು ನಡೆಸುವ ಪತ್ರಿಕೆಯೇ ಬೇಕಾಯಿತೇ? ಬೇರಾವುದೇ ಪ್ರಗತಿಪರ ಪತ್ರಿಕೆಗಳು ಸಿಗಲಿಲ್ಲವೇ? ಲೋಕಾಯುಕ್ತ ಸಂಸ್ಥೆಯಲ್ಲಿ ದೋಷಗಳಿದ್ದರೆ ಅದನ್ನು ಹಾಗೂ ಅದಕ್ಕೆ ಪರಿಹಾರಗಳು ಏನು ಎಂಬ ಬಗ್ಗೆ ತನ್ನ ಸಲಹೆಗಳನ್ನೊಳಗೊಂಡ ಲೇಖನ ಬರೆದು ಎಲ್ಲ ಪತ್ರಿಕೆಗಳಿಗೂ ಕಳುಹಿಸುವುದು ಸೂಕ್ತ ಮಾರ್ಗವಾಗಿತ್ತು. ಅದು ಬಿಟ್ಟು ಹೋಗಿ ಹೋಗಿ ಭಾ. ಜ. ಪ. ದ ಸಂಸದರು ನಡೆಸುವ ಪ್ರತಿಗಾಮಿ ಪತ್ರಿಕೆಯಲ್ಲಿ ತನ್ನ ನಿಲುವನ್ನು ಪ್ರಕಟಿಸಿ ತಮ್ಮ ತಂದೆಯವರ ಉನ್ನತ ಆದರ್ಶಗಳಿಗೆ ಅವರು ತಿಲಾಂಜಲಿ ಕೊಟ್ಟಂತೆ ಕಾಣುತ್ತದೆ. ಭಾ. ಜ. ಪ. ದ ಆ ಸಂಸದರು ನಡೆಸುವ ಪತ್ರಿಕೆಯು ಇವರ ಅಭಿಪ್ರಾಯಗಳನ್ನು ತನಗೆ ಬೇಕಾದಂತೆ ತಿರುಚಿ ಪ್ರಕಟಿಸುವ ಅಪಾಯವನ್ನು ತಪ್ಪಿಸಲು ಆ ಕುರಿತ ಲೇಖನ ಬರೆದು ಎಲ್ಲ ಪತ್ರಿಕೆಗಳಿಗೂ ಕಳುಹಿಸುವುದು ಸೂಕ್ತ ಮಾರ್ಗವಾಗಿತ್ತು. ಹೀಗೆ ಮಾಡಿದಾಗ ಲೇಖನವನ್ನು ತಿರುಚಿ ಪ್ರಕಟಿಸಿದರೆ ಅದು ಉಳಿದ ಪತ್ರಿಕೆಗಳ ಮೂಲಕ ಗೊತ್ತಾಗುತ್ತಿತ್ತು.

  Reply
 2. R.K.

  ಪ್ರಚುರಿತ ವಾದ ಪತ್ರಿಕೆಯ ಸಂಪಾದಕರ ಕಿರು ನಾಮವು ಲೋಕಯುಕ್ತ ವರದಿ ಯಲ್ಲಿ ಇರುವದರಿಂದ ಈ ಸಂದರ್ಶನ ವಿಶ್ವಸನೀಯತೆ ಕಲದುಕೊಂಡಿದೆ.

  Reply

Leave a Reply to ಅರ್ರನ್ನ್ Cancel reply

Your email address will not be published.