ಮಧುಕರ ಶೆಟ್ಟಿ ಮತ್ತವರ ಆದರ್ಶ ದುಷ್ಟಕೂಟಗಳ ದಾಳಗಳಾಗದಿರಲಿ…

– ರವಿ ಕೃಷ್ಣಾರೆಡ್ಡಿ

ಮಧುಕರ ಶೆಟ್ಟರು ಲೋಕಾಯುಕ್ತದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು—ಅದೂ ಈ ರೀತಿ, ವ್ಯಕ್ತಪಡಿಸುವ ಸಂದರ್ಭ ಇದಾಗಿರಲಿಲ್ಲ.

ಅವರು ಕರ್ನಾಟಕದ ದುಷ್ಟ ರಾಜಕಾರಣದ ಮತ್ತು ಮಾಧ್ಯಮದೊಂದಿಗಿನ ಅದರ ಅನೈತಿಕ ಸಂಬಂಧದ ದುಷ್ಟಕೂಟದ ಕೈಯಲ್ಲಿನ ದಾಳಗಳಾಗಿ ಉಪಯೋಗಿಸಲ್ಪಟ್ಟಿದ್ದಾರೆ.

ಯಾವ ಸಂದರ್ಭವೊಂದನ್ನು ಸಂಸ್ಥೆಯೊಂದನ್ನು ಇನ್ನೂ ಗಟ್ಟಿಗೊಳಿಸುವುದಕ್ಕಾಗಿ, ಕ್ರಿಯಾಶೀಲವಾಗಿ ಮಾಡುವುದಕ್ಕಾಗಿ, ಅಲ್ಲಿನ ಕಲ್ಮಶಗಳನ್ನು ತೆಗೆಯುವುದಕ್ಕಾಗಿ ಬಳಸಿಕೊಳ್ಳಬೇಕಿತ್ತೊ, ಅದನ್ನು ಈ ಮಹಾದುಷ್ಟಕೂಟ ತನ್ನ ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿದೆ. ಲೋಕಾಯುಕ್ತದ ಗತಿ ಏನಾಗುತ್ತದೆ ಎಂದು ಪ್ರಜ್ಞಾವಂತರು ಕಕಮಕರಾಗಿರುವಾಗ ಇದು ಖಂಡಿತವಾಗಿ ಅನಗತ್ಯವಾಗಿತ್ತು.

ಕಳೆದ ಆರೇಳು ತಿಂಗಳಿನಿಂದ ಮಧುಕರ ಶೆಟ್ಟರೊಡನೆ ಆಪ್ತವಾಗಿ ಕುಳಿತು ಮಾತನಾಡಿರಬಹುದಾದ ಯಾರಿಗೂ ಅವರು ಸಂದರ್ಶನದಲ್ಲಿ ಹೇಳಿರುವ ಮಾತುಗಳು ಬಹುಶಃ ಹೊಸದೇನೂ ಅಲ್ಲ. ಅವರು ಅಮೆರಿಕಕ್ಕೆ ಹೊರಡುವ ಒಂದೆರಡು ತಿಂಗಳಿನ ಹಿಂದೆ ಶೆಟ್ಟರನ್ನು ಭೇಟಿಯಾಗುವ ಸಂದರ್ಭ ಒದಗಿತ್ತು. ಸ್ನೇಹಿತರೊಬ್ಬರು ಅವರನ್ನು ಭೇಟಿ ಮಾಡುವವರಿದ್ದರು. ಜೊತೆಗೆ ನಾನೂ ಹೋಗಿದ್ದೆ. ಹಾಗಾಗಿ ಈ ಸಂದರ್ಶನದಲ್ಲಿ ಹೇಳಿದ ಎಲ್ಲವನ್ನೂ ಅಂದು ಅವರು ನಮ್ಮೊಡನೆ ಹಂಚಿಕೊಂಡಿದ್ದರು. ಹಾಗಾಗಿ ಈ ಸಂದರ್ಶನದಲ್ಲಿ ಪ್ರಸ್ತಾಪಿತವಾಗಿರುವ ಒಂದು ವಿಷಯ (ಅವರ ಮದುವೆ ಮತ್ತು ಅವರ ತಂದೆಯವರ ವಿರೋಧ) ಬಿಟ್ಟು ಮಿಕ್ಕೆಲ್ಲವೂ ನನಗೆ ಮೊದಲೇ ತಿಳಿದವಾಗಿದ್ದವು.

ಆದರೆ, ಈಗ ಆವರ ಈ ಮಾತುಗಳು ಸಂದರ್ಶನ ರೂಪದಲ್ಲಿ ಬಂದಿರುವುದು, ಅದನ್ನು ಆ ಪತ್ರಿಕೆ ಪ್ರಸ್ತುತ ಪಡಿಸಿರುವ ರೀತಿ ಮತ್ತು ಅದರ ಸಂದರ್ಭ, ಇವು ಯಾವುವೂ ಲೋಕಾಯುಕ್ತ ಸಂಸ್ಥೆಗಾಗಲಿ, ಕರ್ನಾಟಕದ ಜನತೆಗಾಗಲಿ ಒಳ್ಳೆಯದು ಮಾಡುವ ಹಾಗೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಸಂದರ್ಶನ ನೀಡುವುದೇ ಅಪಾಯಕಾರಿ. ಅದೂ ಇಲ್ಲಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಸಮಾನ ಪಿತೂರಿಕೋರರಾಗಿರುವಾಗ.

ಇಷ್ಟಕ್ಕೂ ಮಧುಕರ ಶೆಟ್ಟರ ಅಂತಿಮ ಗುರಿ ಏನು? ಅದು ತಾವು ಈ ಹಿಂದೆ ದುಡಿದ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಜನಪರವಾಗಿ, ಪ್ರಜಾಸತ್ತೆಯ ಪರವಾಗಿ ಬಲಪಡಿಸುವುದಾಗಿತ್ತೆ ಅಥವ ಅದನ್ನು ದುರ್ಬಲಗೊಳಿಸುವುದಾಗಿತ್ತೆ? ಅವರದು ಖಂಡಿತವಾಗಿ ಮೊದಲನೆಯದೇ ಆಗಿರಬೇಕು. ಆದರೆ ಅವರು ಅದನ್ನು ಒಂದು ಲೇಖನವಾಗಿ ತಮ್ಮೆಲ್ಲಾ ವಿಚಾರಗಳನ್ನು ತರ್ಕಬದ್ಧವಾಗಿ ಒಂದು ಕಡೆಯಿಂದ ಮಂಡಿಸುತ್ತ ನಿರೂಪಿಸಿ, ಬರೆದು, ಪ್ರಕಟಿಸಬೇಕಿತ್ತೇ ಹೊರತು, ಸಂದರ್ಶನವಾಗಿ ಅಲ್ಲ. ಹಾಗೆ ಮಾಡದೇ ಹೋದದ್ದರ ಪರಿಣಾಮಗಳನ್ನು ಈಶ್ವರಪ್ಪನವರಂತಹ ಕಿಡಿಗೇಡಿ, ಸಂಕುಚಿತ ದೃಷ್ಟಿಯ, ಸಣ್ಣತನದ ರಾಜಕಾರಣಿಗಳ ಹೇಳಿಕೆಗಳಲ್ಲಿ ನೋಡುತ್ತಿದ್ದೇವೆ. ಕುಮಾರಸ್ವಾಮಿಯವರು ಸಂತೋಷ ಹೆಗ್ಡೆಯವರ ವಿರುದ್ಧ ತಮ್ಮ ವೈಯಕ್ತಿಕ ದ್ವೇಷ ಕಾರಿಕೊಳ್ಳಲು ಬಳಕೆಯಾಗಿದೆ. ಯಡಿಯೂರಪ್ಪ ಸಹ ಇಂದು ತಮ್ಮ ವಿರುದ್ಧದ ಆರೋಪಗಳಿಗೆ ಶೆಟ್ಟರ ಹೇಳಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಹೇಳಿಕೆ ಇಲ್ಲಿ ಯಾವ ಮಟ್ಟದ ಹಾನಿ ಮಾಡಿದೆ ಮತ್ತು ಭ್ರಷ್ಟರಿಗೆ ಮಧುಕರ ಶೆಟ್ಟಿ ಯಾವ ಪರಿ ಅನುಕೂಲಕರವಾಗಿ ಪರಿಣಮಿಸಿದ್ದಾರೆ ಎಂದು ಗೊತ್ತಾಗುತ್ತದೆ. ಇಂದು ಕರ್ನಾಟಕದ ಭ್ರಷ್ಟರೆಲ್ಲ ಒಂದೇ ಮಾತುಗಳನ್ನು ಆಡುತ್ತಿದ್ದಾರೆ.

ಇಷ್ಟಕ್ಕೂ ಮಧುಕರ ಶೆಟ್ಟರು ಮತ್ತು ಆ ಸಂದರ್ಶನ ಓದಿದವರು ಒಂದು ವಿಚಾರವನ್ನು ಗಮನಿಸಬೇಕು: ಲೋಕಾಯುಕ್ತ ಸಂಸ್ಥೆಯಿಂದಾಗಿ ಭ್ರಷ್ಟಾಚಾರ ಹುಟ್ಟಿಲ್ಲ. ಭ್ರಷ್ಟಾಚಾರ ಇದ್ದಿದ್ದರಿಂದಾಗಿ ಮತ್ತು ಅದನ್ನು ತಡೆಗಟ್ಟುವ ನಿಮಿತ್ತವಾಗಿ ಜನಪ್ರತಿನಿಧಿಗಳ ಸರ್ಕಾರ ಲೋಕಾಯುಕ್ತವನ್ನು ಸ್ಥಾಪಿಸಿರುವುದು. ಲೋಕಾಯುಕ್ತದಲ್ಲೂ ಭ್ರಷ್ಟರಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತ ಹೋಗಬೇಕೆ ಹೊರತು ಅದನ್ನು ಮತ್ತಷ್ಟು ದುರ್ಬಲಗೊಳಿಸುವುದು ತರವಲ್ಲ.

ನಾನು ಹೆಚ್ಚುಕಮ್ಮಿ ವ್ಯವಸ್ಥೆಯ ಹೊರಗಿದ್ದು ಮಾತನಾಡುವವನು. ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಆದಷ್ಟೂ ಅದರ ಸಂಪರ್ಕದಿಂದ ಹೊರಗೇ ಇರುವ ರೀತಿ ವರ್ತಿಸುತ್ತೇನೆ. ಇದು ನಾನು ನನ್ನನ್ನು ಅವಮಾನ-ಸೋಲುಗಳಿಂದ ದೂರ ಇಟ್ಟುಕೊಳ್ಳುವ ರೀತಿ. ಈ ವ್ಯವಸ್ಥೆಯ ಭಾಗವಾದರೆ ನಾನೂ ಭ್ರಷ್ಟನಾಗುತ್ತೇನೆ ಎನ್ನುವ ಭಯ ನನಗಿಲ್ಲ. ಆದರೆ ಸೋಲು-ಅವಮಾನಗಳು ಖಂಡಿತ ಆಗುತ್ತವೆ. ಆಗಿವೆ. ಹಾಗಾಗಿಯೆ ಅವುಗಳ ಅವಶ್ಯಕತೆಯಿಲ್ಲ ಎಂದು ದೂರ ಇರುತ್ತೇನೆ.  ಕೆಲವೊಮ್ಮೆ ಸೋಲುವುದು ನೈತಿಕವಾಗಿ ತಪ್ಪೇನೂ ಅಲ್ಲ, ಮತ್ತು ಆ ಪ್ರಯತ್ನ ನಾವು ನಂಬಿಕೊಂಡ ಆದರ್ಶದ ಕ್ರಿಯಾರೂಪ ಎಂದಾದಾಗ, ಅಂತಹ ಕೆಲಸಗಳನ್ನು ಮಾಡಲು ಮುಂದಾಗುತ್ತೇನೆ. ಅಲ್ಲಿ ಸೋಲುವುದು ಶತ:ಸಿದ್ಧವಾಗಿದ್ದರೂ. ಮಾತುಗಳೂ ಅಷ್ಟೆ. ಕೆಲವೊಂದು ವೇದಿಕೆಗಳಲ್ಲಿ ತುಂಬಾ ಆದರ್ಶದ, ಅವಾಸ್ತವಿಕ ಎನ್ನಬಹುದಾದ ಮಾತುಗಳನ್ನು ಆಡುತ್ತೇನೆ. ಅದು ಈ ಹೊತ್ತಿನಲ್ಲಿ ಅವಾಸ್ತವ ಎಂದು ಗೊತ್ತಿದ್ದರೂ. ಆದರೆ ಅವು ಎಂದೂ ಸಾಧ್ಯವಾಗದ ಮಾತುಗಳೇನೂ ಅಲ್ಲ. ಪ್ರಪಂಚದ ಯಾವುದೋ ಭಾಗದಲ್ಲಿ ಒಂದಲ್ಲ ಒಂದು ಸಲ ಅವು ಸಾಧಿಸಿ ತೋರಿಸಲ್ಪಟ್ಟಿವೆ, ಇಲ್ಲವೇ ಸಾಧಿಸಲ್ಪಡುತ್ತವೆ. ನನ್ನ ಇಂತಹ ಆಚಾರ-ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ನಾನೊಬ್ಬ ಹುಚ್ಚ, ಪೆದ್ದ, ತಿಕ್ಕಲು, ಎಂದೆಲ್ಲಾ ಅಂದಿದ್ದಾರೆ. ಅದು ಅವರ ವೈಯಕ್ತಿಕ ದ್ವೇಷ ಕಾರಿಕೊಳ್ಳುವ ತೆವಲಿಗಾಗಿಯೇ ಹೊರತು ಅಲ್ಲಿ ಬೇರೇನೂ ಇರಲು ಸಾಧ್ಯವಿಲ್ಲ.

ಇದನ್ನೆಲ್ಲಾ ಹೇಳಬಯಸಿದ್ದು ಮಧುಕರ ಶೆಟ್ಟರು ವ್ಯಕ್ತಪಡಿಸಿರುವ ಕೆಲವು ಆದರ್ಶಪ್ರಾಯದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯ ಸೂಚಿಸಲು ಮತ್ತು ಅವು ಅವರಂತಹವರು ಆಡುವ ಮಾತುಗಳಲ್ಲ ಮತ್ತು ಇದು ಸಂದರ್ಭವೂ ಅಲ್ಲ ಎಂದು ಹೇಳಲು. ಅವರು ವ್ಯವಸ್ಥೆಯ ಭಾಗವಾಗಿದ್ದವರು. ಆದರೆ ಅತೀ ಎನ್ನಿಸುವಷ್ಟು ಆದರ್ಶದ ಮಾತುಗಳನ್ನು ಆಡಿದ್ದಾರೆ. ನನ್ನಂತಹ ‘ಪೆದ್ದ’ನೇ ಆಶ್ಚರ್ಯಪಡುವಷ್ಟು. ಒಂದು, ಅಧಿಕಾರಿಯ ಮರಣದ ವಿಷಯವಾಗಿದ್ದರೆ, ಮತ್ತೊಂದು “ವೈಯಕ್ತಿಕ ವರ್ಚಸ್ಸು ಮತ್ತು ನೈತಿಕತೆ ವೃದ್ಧಿ ಗೀಳಿಗೆ ಬಿದ್ದ ವ್ಯಕ್ತಿಯಿಂದ ಆತ ಪ್ರತಿನಿಧಿಸುವ ಸಂಸ್ಥೆ ಹಾಳಾಗುತ್ತದೆ. ಪ್ರಾಮಾಣೀಕನೆಂಬ ಬಿರುದು-ಬಾವಲಿಗಳ ಬೆನ್ನತ್ತಿದವನು ಸಂಸ್ಥೆಯ ಮಾರ್ಯಾದೆ ಮತ್ತು ಗೌರವ ಉಪೇಕ್ಷಿಸುತ್ತಾನೆ. ಇಂಥವರು ಭ್ರಷ್ಟರಿಗಿಂತಲೂ ಅಪಾಯಕಾರಿ. ಇಷ್ಟಕ್ಕೂ ಒಬ್ಬ ವ್ಯಕ್ತಿ, ಅಧಿಕಾರಿ, ವ್ಯವಸ್ಥೆಯ ಮುಖ್ಯಸ್ಥನನ್ನು ಪ್ರಾಮಾಣಿಕ ಎಂದು ಕರೆಯುವುದೇ ಹಾಸ್ಯಾಸ್ಪದ.” ಎನ್ನುವ ಮಾತುಗಳು. ಇದನ್ನು ಶೆಟ್ಟರು ಸಹಜವಾಗಿ ಇಡೀ ಸಮಾಜವನ್ನು, ಎಲ್ಲಾ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಆದರ್ಶದ ನೆಲೆಯಲ್ಲಿ ಹೇಳಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿಯವರು ಮಾತ್ರ ಇದನ್ನು ನೇರ ಸಂತೋಷ ಹೆಗ್ಡೆಯವರಿಗೆ ತಿರುಗಿಸಿದ್ದಾರೆ.

ಅವರಂತಹ ವ್ಯಕ್ತಿ, ವ್ಯವಸ್ಥೆಯ ಭಾಗವಾಗಿದ್ದವರು, ಅದನ್ನು ಸುಧಾರಿಸಲು ಸಹಕರಿಸಬೇಕೇ ಹೊರತು (ಅದನ್ನು ಅವರ ಅಧಿಕಾರವಧಿಯುದ್ದಕ್ಕೂ ಮಾಡಿದ್ದಾರೆ ಎಂದು ನಾನು ಖಂಡಿತ ನಂಬುತ್ತೇನೆ. ಅದನ್ನು ಗೌರವಿಸುತ್ತೇನೆ ಕೂಡಾ.) ಆದರ್ಶದ ನೆಲೆಯಲ್ಲಿ ಮಾತನಾಡುತ್ತ ಅದನ್ನು undermine ಮಾಡಬಾರದು. ಈ ವಿಚಾರಗಳನ್ನು ಎತ್ತುವುದಕ್ಕೆ, ಪ್ರಸ್ತುತಗೊಳಿಸುವುದಕ್ಕೆ ಬೇರೆಯದೇ ಆದ ವೇದಿಕೆಗಳಿವೆ, ರೀತಿಗಳಿವೆ. ಅದನ್ನು ಅವರು ಗಮನಿಸಬೇಕಿತ್ತು.

ಒಬ್ಬ ಪೋಲಿಸ್ ಅಧಿಕಾರಿ ಸಾಮಾಜಿಕವಾಗಿ ಎಂತಹ ಜೀವನ ನಡೆಸಬೇಕು, ಯಾರೊಂದಿಗೆ ಎಷ್ಟು ಬೆರೆಯಬೇಕು, ಬೆರೆಯಬಾರದು, ಎನ್ನುವುದರ ಬಗ್ಗೆ ಶೆಟ್ಟರು ಅವರ ವೃತ್ತಿಯಲ್ಲಿರುವ ಯಾರಿಗೇ ಆದರೂ ಆದರ್ಶಪ್ರಾಯರಾಗುವ ವ್ಯಕ್ತಿ. ಅವರೇ ಹೇಳಿಕೊಂಡಂತೆ ಬೆಂಗಳೂರಿನಲ್ಲಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿಲ್ಲ. ಪಾರ್ಟಿಗಳಿಗೆ ಹೋಗುವುದಿಲ್ಲ. ಹೀಗಾಗಿ ಯಾರೂ ತಮ್ಮನ್ನು ಸ್ನೇಹ, ನೆಂಟಸ್ತಿಕೆಯ ಮೂಲಕ ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯಾಧೀಶರೆಲ್ಲ ಎಂತೆಂತವರ ಜೊತೆಯೆಲ್ಲಾ ವೇದಿಕೆ ಹಂಚಿಕೊಳ್ಳಲು, ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳಲು ಔಚಿತ್ಯವಿಲ್ಲದೆ ಸಿದ್ಧರಾಗಿ ನಿಂತಿರುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ಹೆಂಡತಿ ಮತ್ತು ಮಗಳು ದೇಶದ ಹೊರಗಿದ್ದಾಗಲೂ ಇಲ್ಲಿ ಪೊಲಿಸ್ ಅಧಿಕಾರಿ ಇರಬೇಕಾದ ರೀತಿಯಲ್ಲಿ ವಿನಾಕಾರಣ ಸಮಾಜದ ಎಲ್ಲರೊಂದಿಗೂ ಗುರುತಿಸಿಕೊಳ್ಳದೆ ನಿಷ್ಟುರ ಜೀವನ ನಡೆಸಿದವರು ಮಧುಕರ್ ಶೆಟ್ಟರು. ಅವರು ಅನವಶ್ಯಕವಾಗಿ ದುರುಳರ ದಾಳಗಳಾಗುವುದು,  ಅದೂ ಪ್ರಾಮಾಣಿಕತೆ ಮತ್ತು ನೈತಿಕತೆಯ ಹೆಸರಿನಲ್ಲಿ, ಖಂಡಿತ ಬೇಸರದ ಸಂಗತಿ.

ಬಹುಶ: ಈ ಲೇಖನವನ್ನು ಮಧುಕರ ಶೆಟ್ಟರು ಓದಿದರೂ ಓದಬಹುದು. ಹಾಗಾದ ಪಕ್ಷದಲ್ಲಿ ಅವರಲ್ಲಿ ನನ್ನ ಒಂದು ವಿನಂತಿ ಏನೆಂದರೆ, “ದಯವಿಟ್ಟು ನಿಮ್ಮ ಸಂದರ್ಶನ ಮತ್ತು ಅದರ ಮೂಲಕ ನೀವು ನಿಜಕ್ಕೂ ಹೇಳಬಯಸಿದ್ದು ಏನು, ಲೋಕಾಯುಕ್ತದಲ್ಲಿರುವ ಸಮಸ್ಯೆಗಳೇನು, ಅದನ್ನು ದೋಷಮುಕ್ತ ಮಾಡಲು ಮತ್ತು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಮಾಡಬೇಕಿರುವ ಕೆಲಸಗಳೇನು, ಇತ್ಯಾದಿಯೆಲ್ಲ  ವಿಸ್ತೃತವಾಗಿ ಬರೆಯಿರಿ. ಅದನ್ನು ಒಂದಲ್ಲ, ಕರ್ನಾಟಕದ ಎಲ್ಲಾ ಪ್ರಮುಖ ಕನ್ನಡ-ಇಂಗ್ಲಿಷ್ ಪತ್ರಿಕೆಗಳಿಗೂ ಕಳುಹಿಸಿಕೊಡಿ. ನಿಮ್ಮ ಸಂದರ್ಶನವನ್ನು ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿರುವವರಿಗೆ ಅದು ಎಚ್ಚರವೂ ಆಗಲಿ.”

9 thoughts on “ಮಧುಕರ ಶೆಟ್ಟಿ ಮತ್ತವರ ಆದರ್ಶ ದುಷ್ಟಕೂಟಗಳ ದಾಳಗಳಾಗದಿರಲಿ…

  1. kariyappa

    Sir,
    Super. This is what I and many like me expect from Mr.Shetty. If he gets a chance to read this article, he should respond the chaos resulted following his interview in a Kannada daily edited and owned by dubious characters. It is quite natural that anybody can suspect their role in the conspiracy. For the couple of days anybody could observe change in approach and news presentation in the channel, which the same editor heads.

    Reply
  2. santhosh kumar

    ಮಧುಕರ ಶೆಟ್ರ ಸಂದರ್ಶನ ಪ್ರಕಟಿಸಿದ ಪತ್ರಿಕೆಯ ಸಂಪಾದಕರ ಹೆಸರೂ ಲೋಕಾಯುಕ್ತ ವರದಿಯಲ್ಲಿ ಇನೀಶಿಯಲ್ ರೂಪದಲ್ಲಿ ಇದ್ದದ್ದರಿಂದ ಆ ವರದಿ ಕೊಟ್ಟ ಸಂತೋಷ್ ಹೆಗ್ಡೆಯವರು ಇದ್ದ ಸಂಸ್ಥೆಯನ್ನು ಕಳಂಕಿತಗೊಳಿಸುವ ಉದ್ದೇಶ ಆ ಸಂದರ್ಶನ ಪ್ರಕಟಿಸುವುದರ ಹಿಂದೆ ಕೆಲಸ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದರಿಂದ ಸಂತೋಷ್ ಹೆಗ್ಡೆಯವರ ಪ್ರಾಮಾಣಿಕತೆಗೆ ಧಕ್ಕೆಯೇನೂ ಆಗಲಾರದು. ಏಕೆಂದರೆ ಅವರಿಗೆ ಮಕ್ಕಳಿಲ್ಲ, ಹೀಗಾಗಿ ಅವರು ಆಸ್ತಿ ಪಾಸ್ತಿ ಕೂಡಿಹಾಕಬೇಕಾದ ಅಗತ್ಯ ಇಲ್ಲ. ಅಲ್ಲದೆ ಅವರು ಸರಳ ಜೀವಿಯೂ ಕೂಡ ಹೌದು. ಹೀಗಾಗಿ ಅವರ ಮೇಲೆ ರಾಜಕಾರಣಿಗಳು ಕೆಸರು ಎರಚಲು ಎಷ್ಟೇ ಪ್ರಯತ್ನಿಸಿದರೂ ಅದರಲ್ಲಿ ಯಶಸ್ವೀ ಆಗಲಾರರು. ಲೋಕಾಯುಕ್ತ ಸಂಸ್ಥೆಗೆ ಸಿಬ್ಬಂದಿ ನೇಮಕ ಮಾಡುವುದು ಸರಕಾರವೇ ಆಗಿರುವಾಗ ಮತ್ತು ಆ ಸಿಬ್ಬಂದಿ ನೇಮಕದಲ್ಲಿ ಲೋಕಯುಕ್ತರದ್ದೆ ಪರಮಾಧಿಕಾರ ಅಲ್ಲದಿರುವಾಗ ಸಂತೋಷ್ ಹೆಗ್ಡೆಯವರು ಏನು ಮಾಡಲು ಸಾಧ್ಯ ಎಂಬ ಸಾಮಾನ್ಯ ಜ್ಞಾನ ಇರುವವರು ಈ ಸಂದರ್ಶನದಿಂದ ವಿಚಲಿತಲಾಗಲಾರರು. ಬಹುಶ: ಈ ಸಾಮಾನ್ಯ ಜ್ಞಾನ ಒಬ್ಬ ಸಾಮಾನ್ಯ ಕನ್ನಡಿಗನಿಗೆ ಇದ್ದೇ ಇದೆ. ಈ ಸಂದರ್ಭದಲ್ಲಿ ಸಂತೋಷ್ ಹೆಗ್ಡೆಯವರು ಸುಮ್ಮನಿರದೆ ಗುಡುಗಬೇಕಾದ ಅಗತ್ಯ ಇದೆ.

    Reply
  3. jagadishkoppa

    ಪ್ರಿಯ ರೆಡ್ಡಿಯವರೇ ನಿಮಗಾದ ನೋವು ನನ್ನದುಕೂಡ. ಮಧುಕರಶೆಟ್ಟಿ ಯಾರು ಗೊತ್ತಾ? ನನಗೆ ಹಾಗು ನನ್ನ ಹಲವಾರು ಮಿತ್ರರಿಗೆ ಪತ್ರಿಕೋದ್ಯಮದ ಅ ಆ ಇ ಈ ಕಲಿಸಿದ, ಘನತೆಯಿಂದ ಬದುಕುವುದನ್ನು ಕಲಿಸಿದ ಹಿರಿಯ ಪತ್ರಕರ್ತ ವಡ್ಡರಸೆ ರಘುರಾಮಶೆಟ್ಟರ ಪುತ್ರ. ಇವರ ಹೇಳಿಕೆಗೆ ಇದು ಸೂಕ್ತ ಸಮಯವಾಗಿರಲಿಲ್ಲ. ಲೋಕಾಯುಕ್ತದಲ್ಲಿ ಮಧುಕರ್ ಮತ್ತು ಸಂತೋಷ್ ಹೆಗ್ಡೆ ನಡುವೆ ಸಣ್ಣ ಪುಟ್ಟ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು ಅದಕ್ಕೆ ಇವರಿಬ್ಬರ ತಂದೆಯವರ ಅಂದರೆ,ಕೆ.ಎಸ್. ಹೆಗ್ಗಡೆ, ವಡ್ಡರಸೆ ನಡುವಿನ ಆಗಿನ ಸಂಘರ್ಷಗಳು ಕಾರಣವಿರಬಹುದು. ಇದನ್ನು ಅವಕಾಶವಾದಿಗಳು ಸಮರ್ಪಕವಾಗಿ ಬಳಸಿಕೊಳ್ಳುತಿದ್ದಾರೆ. ಜಗದೀಶ್ ಕೊಪ್ಪ

    Reply
  4. Vasanth

    Very thought provoking. madhukhar Sheety should have not given the interview at this point of time. JD (S) and BJP is using this interview to target Santhosh Hegde and through this they are claiming that they are innocent.
    I fully endorse your thoughts sir.Thanks

    Reply
    1. Anil

      At the same time Congress Leaders and the Governor who are supporting Lokayukta are not saints. As long as the present report of Lokayukta do not indicate Congress leaders, Congress/Governor spearheads their campaign in support of Lokayukta.

      Reply
  5. Ramakrishna M

    ನಿಮ್ಮ ಲೇಖನ ಬಹಳ ಅರ್ಥಗರ್ಭಿತ ಹಾಗೂ ಸಮಯೋಚಿತವಾಗಿದೆ. ನೀವು ಬರೆದಿರುವಂತೆ ಈ ಪತ್ರಿಕೆಯಲ್ಲಿ ಹಾಗೂ ಅವರ ಟೀವಿ ಚಾನೆಲ್ ನಲ್ಲಿ ಈ ಸಂದರ್ಶನವನ್ನು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ರೀತಿ ಬಿಂಬಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ‘ಕಳ್ಳ’ರನ್ನು ನೇಮಿಸುವವರ ಬಗ್ಗೆ ಜಾಣ ಮೌನ ತೋರಿಸಿದ್ದಾರೆ.
    ಮೊನ್ನೆ ಕೂಡ ತನಿಖೆ ನಡೆಸುತ್ತಿದ್ದವರನ್ನು transfer ಮಾಡಿ ಅದಕ್ಷ ಅಧಿಕಾರಿಗಳನ್ನು ಲೋಕಾಯುಕ್ತ ಕಚೇರಿಗೆ ವರ್ಗಾವಣೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೂ ಕೂಡ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುವ ಸಂಚು ಇರುವಂತೆ ತೋರುತ್ತಿದೆ.
    ಧನ್ಯವಾದ.
    Ramakrishna

    Reply
  6. Ananda Prasad

    ಕನ್ನಡ ಪ್ರಭದಲ್ಲಿ ಪ್ರಕಟವಾದ ಮಧುಕರ ಶೆಟ್ರ ಫೋನ್ ಸಂದರ್ಶನವನ್ನು ಓದಿದಾಗ ಇದರಲ್ಲಿ ತೀವ್ರ ಸಿನಿಕತೆ ಕಂಡು ಬರುತ್ತದೆ. ಈ ಸಂದರ್ಶನ ನೋಡಿದಾಗ ಮಧುಕರ ಶೆಟ್ಟರಿಗೆ ಅಥವಾ ಸಂದರ್ಶನ ಪ್ರಕಟಿಸಿದ ಪತ್ರಿಕೆಯ ಸಂಪಾದಕರಿಗೆ, ಮಾಲಕರಿಗೆ ಸಂತೋಷ್ ಹೆಗ್ಡೆಯವರ ಬಗ್ಗೆ ವೈಯಕ್ತಿಕ ದ್ವೇಷವೇನಾದರೂ ಇದೆಯೇ ಎಂಬ ಭಾವನೆ ಉಂಟಾಗುತ್ತದೆ. ಸಂತೋಷ್ ಹೆಗ್ಡೆಯವರು ಗಣಿ ವರದಿ ನೀಡಿ ಬಹಳ ಉತ್ತಮವಾದ ದೇಶದ ಸಂಪತ್ತಿನ ರಕ್ಷಣೆಯ ಮಹತ್ವಪೂರ್ಣ ಕೆಲಸ ಮಾಡಿದ್ದಾರೆ. ದೊಡ್ಡ ದೊಡ್ಡ ಕುಳಗಳನ್ನೂ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಮಧುಕರ ಶೆಟ್ರ ಸಂದರ್ಶನದಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಗಳು ತೀರ ಅಪ್ರಭುದ್ಧ ಹಾಗೂ ಬೇಜವಾಬ್ದಾರಿಯಿಂದ ಕೂಡಿರುವಂತೆ ಕಾಣುತ್ತದೆ.

    Reply
  7. prasad raxidi

    ರವಿಯವರೆ ನಿಮ್ಮ ಅಭಿಪ್ರಾಯ ಸರಿಯಾಗಿದೆ, ಒಂದು ದುಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಸಂದರ್ಭದಲ್ಲಿ -ಅದು ಚಳುವಳಿಗಳಿರಲಿ, ಅಧಿಕೃತ ಸಂಸ್ಥೆಗಳಿರಲಿ ಅದರ ಸದಸ್ಯರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಆಂತರಿಕವಾಗಿಯೇ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು,ಇಲ್ಲವಾದಲ್ಲಿ ಇಂತಹ ಅಸಾಂದರ್ಭಿಕ ಹೇಳಿಕೆಗಳಿಂದ ಈ ಹೋರಾಟಗಳು ದುರ್ಬಲವಾಗುವುದಲ್ಲದೆ, ವ್ಯವಸ್ಥೆ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಇನ್ನಷ್ಟು ಗಟ್ಟಿಯಾಗುತ್ತದೆ.

    Reply
  8. mayur

    This article should have appeared in any main stream paper. Or atleast it should reach people in the form of pamphlets/hand bills.

    Reply

Leave a Reply to Ramakrishna M Cancel reply

Your email address will not be published. Required fields are marked *