ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

– ಡಾ. ಎನ್ ಜಗದೀಶ್ ಕೊಪ್ಪ.

ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.

ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.

ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.

ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್  ಮೊರೆ ಹೊಕ್ಕಾಗ  ಹೈಕೋರ್ಟ್  ಸಹ ಸಾವಂತರ ಪರ ತೀರ್ಪು  ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.

ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್  ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.

ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.

ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ  ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.

ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.

ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.

ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ  ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.

ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.

ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.

ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.

ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.

5 thoughts on “ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

 1. M.Lingaraju

  ರುಮಾಲಿನಲ್ಲಿ ಪಾದರಕ್ಷೆಗಳನ್ನಿಟ್ಟು ಇಬ್ಬರಿಗೂ ಹೊಡೆದಿದ್ದೀರಿ.. ಧನ್ಯವಾದ.
  ಇನ್ನೂ ಕನರ್ಾಟಕ ಮಾದ್ಯಮದ ಮಂದಿ ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ, ಈಗಲೇ ಎಚ್ಚರಗೊಳ್ಳುವುದು ಒಳಿತು.

  Reply
 2. Ananda Prasad

  ಮಾಧ್ಯಮಗಳಿಗೆ ಅದರಲ್ಲೂ ಮುಖ್ಯವಾಗಿ ಟಿವಿ ಮಾಧ್ಯಮಕ್ಕೆ ನಿಯಂತ್ರಣದ ಅಗತ್ಯ ಇದೆ. ಇಂದು ಮಾಧ್ಯಮಗಳು ಮಾರುಕಟ್ಟೆ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿರುವುದರಿಂದ ಅವುಗಳು ಸಾಮಾಜಿಕ ಹಾಗೂ ರಾಷ್ಟ್ರೀಯ ಜವಾಬ್ದಾರಿಗಳನ್ನು ಮರೆತು ಬೇಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಅವುಗಳಿಗೆ ಕೆಲವು ಬದ್ಧತೆಗಳನ್ನು ನಿಗದಿಗೊಳಿಸಬೇಕಾದ ಅಗತ್ಯ ಇದೆ. ಇಂಥ ಬದ್ಧತೆಯನ್ನು ಹಾಗೂ ನಿಯಂತ್ರಣವನ್ನು ಅವುಗಳು ತಾವಾಗಿಯೇ ಹಾಕಿಕೊಳ್ಳುವುದು ಕನಸಿನ ಮಾತಾದ್ದರಿಂದ ಈ ಕುರಿತು ಸರಕಾರದ ಹಸ್ತಕ್ಷೇಪದಿಂದ ಮುಕ್ತವಾದ ಒಂದು ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಇವುಗಳನ್ನು ನಿಯಂತ್ರಿಸುವ ಅಧಿಕಾರ ನೀಡಬೇಕಾಗಿದೆ. ಈ ಸಂಸ್ಥೆಯು ಮಾಧ್ಯಮ ರಂಗದ ದೂರುಗಳನ್ನು ಪರಿಶೀಲಿಸಿ ಅವುಗಳಿಗೆ ಎಚ್ಚರಿಕೆ ನೀಡುವ ಮತ್ತು ಪದೇ ಪದೇ ಎಚ್ಚರಿಕೆ ಉಲ್ಲಂಘಿಸುವ ಮಾಧ್ಯಮಗಳಿಗೆ ದಂಡ ಹಾಗೂ ಪರವಾನಗಿ ರದ್ದು ಮಾಡುವಂಥ ವ್ಯಸಸ್ಥೆ ಆಗಬೇಕಾಗಿದೆ. ಮೂಢನಂಬಿಕೆಗಳನ್ನು ಬಿತ್ತುವ ಹಾಗೂ ಅವುಗಳನ್ನು ಗಟ್ಟಿಗೊಳಿಸುವ ಕಾರ್ಯಕ್ರಮಗಳನ್ನು ಕನ್ನಡ ಟಿವಿ ವಾಹಿನಿಗಳು ಎಗ್ಗಿಲ್ಲದೆ ಪ್ರಸಾರ ಮಾಡುತ್ತಿವೆ. ಇವುಗಳನ್ನು ನಿಯಂತ್ರಿಸಲು ಯಾವ ದಾರಿಯೂ ಇಂದು ಲಭ್ಯವಿಲ್ಲ. ರೈತರ, ಕಾರ್ಮಿಕರ ಸಮಸ್ಯೆಗಳು ಟಿವಿ ಮಾಧ್ಯಮದಲ್ಲಿ ಪ್ರಾಮುಖ್ಯ ಪಡೆಯುತ್ತಿಲ್ಲ. ಜನಪರ ನಿಲುವು ಯಾವ ಟಿವಿ ವಾಹಿನಿಯಲ್ಲಿಯೂ ಕಾಣಿಸುತ್ತಿಲ್ಲ. ಯಾವ ರೀತಿ ಪೋಲೀಸು ಹಾಗೂ ನ್ಯಾಯಾಂಗ ಇಲ್ಲದಿದ್ದರೆ ಅರಾಜಕತೆ ಹೆಚ್ಚಾಗುತ್ತದೆಯೋ ಅದೇ ರೀತಿ ಮಾಧ್ಯಮಗಳಿಗೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಟಿವಿ ಮಾಧ್ಯಮವನ್ನು ಹೇಳುವವರು ಕೇಳುವವರು ಇಲ್ಲದಂತಾಗಿ ಅವರು ಪ್ರಸಾರ ಮಾಡಿದ್ದೇ ವೇದವಾಕ್ಯ ಎಂಬಂತಾಗಿದೆ. ಪೋಲೀಸು ಹಾಗೂ ನ್ಯಾಯಾಂಗ ಬೇಡ, ಪ್ರಜೆಗಳೇ ಅಪರಾಧ ಮಾಡದಂತೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುತ್ತೇವೆ ಎಂದರೆ ಆಗುತ್ತದೆಯೇ? ಅದೇ ರೀತಿ ಮಾಧ್ಯಮ ರಂಗಕ್ಕೂ ಒಂದು ನಿಯಂತ್ರಣ ಇದ್ದರೆ ಅವುಗಳ ಬೇಜವಾಬ್ದಾರಿಗೂ ಒಂದು ಕಡಿವಾಣ ಬಿದ್ದಂತೆ ಆಗುತ್ತದೆ. ಬೇಲಿಯೇ ಇಲ್ಲದಿದ್ದರೆ ಯಾವ ರೀತಿಯಲ್ಲಿ ಹೊಲಕ್ಕೆ ಜಾನುವಾರುಗಳು ನುಗ್ಗಿ ಬೇಲಿಯೇ ಇಲ್ಲದಿದ್ದರೆ ಯಾವ ರೀತಿಯಲ್ಲಿ ಹೊಲಕ್ಕೆ ಜಾನುವಾರುಗಳು ನುಗ್ಗಿ ಬೆಳೆ ಹಾಳು ಮಾಡುತ್ತವೆಯೋ ಅದೇ ರೀತಿ ಇಂದು ಮಾಧ್ಯಮ ರಂಗಕ್ಕೆ ಬೇಲಿಯೇ ಇಲ್ಲದಿರುವುದರಿಂದ ಮಾರುಕಟ್ಟೆ ಶಕ್ತಿಗಳು ಹಾಗೂ ಬಂಡವಾಳಗಾರರು ನುಗ್ಗಿ ಅದನ್ನು ಹಾಳುಗೆಡವುತ್ತಿವೆ. ಹೀಗಾಗಿ ಇದಕ್ಕೆ ಒಂದು ಬೇಲಿಯ ಅವಶ್ಯಕತೆ ಇದೆ.

  Reply
 3. mahantesh navalkal

  news papers also curepted.in bidar district of karnataka most of the reporters are taking money for publishing news.most of themsare invove making rollcall. behalf them putting one guy to collecting money,

  Reply
 4. prasad raxidi

  ಮಾಧ್ಯಮ ಕ್ಷೇತ್ರವೂ ಕೂಡಾ ಇಂದಿನ ರಾಜಕೀಯ- ಇನ್ನಿತರ ವಲಯಗಳಂತೆಯೇ “ಕೆಟ್ಟು- ಕೆರಹಿಡಿದು” ಹೋಗುತ್ತಿದೆ. ಸಭ್ಯರಿಗೆ, ಜೀವನದಲ್ಲಿ ಕೆಲವಾದರೂ ಉತ್ತಮ ಮೌಲ್ಯಗಳನ್ನು ಇಟ್ಟುಕೊಂಡವರಿಗೆ ಸಾಮಾಜಿಕ ಜೀವನದಲ್ಲಿ ಉಳಿಯಲು ಸಾಧ್ಯವಿಲ್ಲದಂತಹ ವಾತಾವರಣ ತಾಲ್ಲೂಕು -ಹಳ್ಳಿಗಳವರೆಗೂ ವ್ಯಾಪಿಸಿದೆ. ನಮ್ಮ ತಾಲ್ಲೂಕಿನಲ್ಲೂ ಇಂತಹವರ ವಿರುದ್ಧ ಸಣ್ಣ ಹೋರಾಟವೊಂದು ಪ್ರಾರಂಭಿಸಿದ್ದೇವೆ (ನಾವು ಕೆಲವರು ಗೆಳೆಯರು ಸೇರಿ) ಏನಾಗುತ್ತದೋ ಗೊತ್ತಿಲ್ಲ…

  Reply
 5. santhosh kumar

  ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರ ಮೇಲೆ ಕೆಲವು ಮಂತ್ರಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿರುವಾಗ ಮತ್ತು ಇದನ್ನು ಮಾಧ್ಯಮಗಳು ಹಾಗೇ ಪ್ರಸಾರ ಮಾಡುತ್ತಿರುವುದರ ವಿರುದ್ಧ ಸಂತೋಷ್ ಹೆಗ್ಡೆಯವರು ೧೦೦ ಕೋಟಿ ರೂಪಾಯಿಗಳ ಮಾನ ನಷ್ಟ ಮೊಕದ್ದಮೆ ಹೂಡಿದರೆ ಇವರಿಗೆ ತಕ್ಕ ಪಾಠ ಕಲಿಸಿದಂತಾದೀತು.

  Reply

Leave a Reply

Your email address will not be published.