Daily Archives: November 27, 2011

ಜೀವನದಿಗಳ ಸಾವಿನ ಕಥನ – 13

– ಜಗದೀಶ್ ಕೊಪ್ಪ

ಹರಿಯುವ ಎಲ್ಲಾ ನದಿಗಳೂ ಸ್ವಚ್ಛವಾದ ತಿಳಿನೀರನ್ನು ಒಳಗೊಂಡಿರುವುದಿಲ್ಲ. ಜಗತ್ತಿನ ಎಲ್ಲಾ ನದಿಗಳೂ ನೀರಿನ ಜೊತೆ ಹೂಳನ್ನು ಹೊತ್ತು ಹರಿಯುವುದು ಸಹಜ. ಅದರಲ್ಲೂ ಬಹುತೇಕ ನದಿಗಳ ನೀರು ಕಲ್ಮಶ ಹಾಗೂ ಮಣ್ಣಿನಿಂದ ಕೂಡಿದ್ದು, ಇವುಗಳಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳು ನೀರು ಸಂಗ್ರಹದ ಜಲಾಶಯಗಳಾಗುವ ಬದಲು ಹೂಳು ಸಂಗ್ರಹ ಗುಂಡಿಗಳಾಗಿವೆ. ಹಾಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗುವ ಹೂಳು ಎಲ್ಲಾ ಸರಕಾರಗಳಿಗೆ, ತಂತ್ರಜ್ಞರಿಗೆ ಇಂದಿಗೂ ದೊಡ್ಡ ಸವಾಲಾಗಿದೆ.

ಅಮೆರಿಕಾದ ಜಾರ್ಜ್  ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಖಲೀದ್ ಮಹಮದ್ ಅವರ ಪ್ರಕಾರ, ಪ್ರತಿ ವರ್ಷ ಐವತ್ತು ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಗತ್ತಿನಾದ್ಯಂತ ಜಲಾಶಯಗಳಲ್ಲಿ ಸಂಗ್ರಹವಾಗುತ್ತಿದೆ. 1990 ರಲ್ಲೇ ಜಗತ್ತಿನಾದ್ಯಂತ 1,300 ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಲಾಶಯಗಳಲ್ಲಿ ತುಂಬಿಹೋಗಿತ್ತು. ಇದೀಗ ಎರಡು ದಶಕಗಳ ನಂತರ ದುಪ್ಪಟ್ಟಾಗಿದ್ದರೂ ಆಶ್ಚರ್ಯವಿಲ್ಲ. ಬಹಳಷ್ಟು ಜಲಾಶಯಗಳ ಆಯುಷ್ಯ ಅವುಗಳ ಗಾತ್ರ, ನೀರು ಶೇಖರಿಸುವ ಸಾಮಥ್ರ್ಯಗಳಿಂದ ನಿರ್ಧಾರವಾಗುತ್ತದೆ. ಸಣ್ಣ ಜಲಾಶಯಗಳು ಎರಡು ಮೂರು ದಶಕಗಳಲ್ಲೇ ಹೂಳಿನಿಂದ ತುಂಬಿಹೋಗಿರುವ ಉದಾಹರಣೆಗಳು ಹಲವಾರಿವೆ.

ಚೀನಾದ ಹಳದಿ ನದಿ

ಸಾಮಾನ್ಯವಾಗಿ ಹರಿಯುವ ನದಿಗಳ ನೀರಿನಲ್ಲಿರುವ ಹೂಳಿನ ಪ್ರಮಾಣ ಶೇ.0.2ರಿಂದ 0.5ರವರೆಗೆ ಇದ್ದು, ಚೀನಾದ ನದಿಗಳಲ್ಲಿ ಮಾತ್ರ ಈ ಪ್ರಮಾಣ 2.3ರಷ್ಟಿದೆ. ಜಲಾಶಯದ ಹೂಳು ಮತ್ತು ನದಿನೀರಿನ ಕಲ್ಮಶ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗಿದೆ. ಬಹುತೇಕ ಅಣೆಕಟ್ಟುಗಳನ್ನು ವಿದ್ಯುತ್ ಉತ್ಪಾದನೆಯನ್ನೇ ಗುರಿಯಾಗಿಸಿ ನಿರ್ಮಿಸಲಾಗಿದೆ. ಇಂತಹ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹಾಯಿಸುವ ಕೊಳವೆಗಳು, ಟರ್ಬನ್ ಇಂಜಿನ್ ಬ್ಲೇಡುಗಳು ಕೆಸರಿನಿಂದ ಕಲ್ಮಶವಾದ ನೀರಿನಿಂದಾಗಿ ತುಕ್ಕು ಹಿಡಿಯುತ್ತಿದ್ದು, ಇವುಗಳ ದುರಸ್ತಿ ವೆಚ್ಚ ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ.

ಜಗತ್ತಿನ ಅತ್ಯಂತ ಕಲ್ಮಷಯುಕ್ತ ನದಿಯೆಂದೇ ಪರಿಗಣಿಸಿರುವ ಚೀನಾದ ಹಳದಿ ನದಿ ಉತ್ತರ ಚೀನಾದಿಂದ ಹರಿದು ಬರುವಾಗ ನೀರಿಗಿಂತ ಹೆಚ್ಚಾಗಿ ಕೆಸರನ್ನೇ ತನ್ನೊಡಲೊಳಗೆ ಸಾಗಿಸುತ್ತದೆ. ಇದರ ಪ್ರಮಾಣ ಗತ್ತಿನ ಇತರೆ ನದಿಗಳಿಗಿಂತ ಶೇ.9ರಷ್ಟು ಹೆಚ್ಚಾಗಿದೆ. 1957ರಲ್ಲಿ ಅಂದಿನ ಸೋವಿಯತ್ ಸರಕಾರದ ತಾಂತ್ರಿಕ ನೆರವಿನಿಂದ ಹಳದಿನದಿಯ ಕೆಳ ಪಾತ್ರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಮೂರು ಗೇಟಿನ ಜಾರ್ಜ್  ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪರಿಸರ ತಜ್ಞರು, ಅತಿ ಶೀಘ್ರದಲ್ಲೇ ಹೂಳು ತುಂಬುವ ಸಂಭವ ಇದೆ ಎಂದು ಎಚ್ಚರಿಸಿದರೂ, ಸರಕಾರ ಇವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. 1960ರಲ್ಲಿ ಅಣೆಕಟ್ಟು ಮುಕ್ತಾಯಗೊಂಡು, 1962ರ ವೇಳೆಗೆ 50 ಮಿಲಿಯನ್ ಟನ್ ಹೂಳು ಶೇಖರವಾಗಿತ್ತು. ಹೂಳು ತುಂಬಿದ ಕಾರಣ ಜಲಾಶಯದ ಹಿನ್ನೀರಿನ ವಿಸ್ತೀರ್ಣವೂ ಹೆಚ್ಚಾಯಿತು. ಆಗ ಎಚ್ಚೆತ್ತುಗೊಂಡ ಚೀನಾ ಸರಕಾರ 1962ರಿಂದ 1973ರವರೆಗೆ ಸತತವಾಗಿ, ಅಣೆಕಟ್ಟಿನ ವಿನ್ಯಾಸವನ್ನು ಬದಲಿಸಿ, ಶೇಖರವಾಗುವ ಹೂಳು ಪ್ರವಾಹ ಸಂದರ್ಭದಲ್ಲಿ ಹೊರಹೋಗುವಂತೆ ಕಾಮಗಾರಿಯನ್ನು ಮಾಡಿತು. ಪ್ರವಾಹ ನಿಯಂತ್ರಣದ ಜೊತೆಗೆ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆದರೆ ಹೂಳಿನ ಪರಿಣಾಮದಿಂದ ಕೇವಲ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಸಾಧ್ಯವಾಯಿತು.

ಇಂತಹದ್ದೇ ಘಟನೆ ಚೀನಾದ ಯಂಗೊಕ್ಷಿಯಾ ಎಂಬ ನದಿಗೆ 57 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸುವಾಗ  ಮತ್ತೆ ಮರುಕಳಿಸಿತು. 1967ರಲ್ಲಿ ನಿರ್ಮಿಸಲಾಗದ ಈ ಜಲಾಶಯ ಹೂಳಿನಿಂದ ತುಂಬಿಹೋಗಿ, ನೀರಿನ ಶೇಖರಣೆಗಿಂತ ಹೂಳಿನ ಶೇಖರಣೆಯೇ ಈ ಜಲಾಶಯದ ಗುರಿಯೇನೊ ಎಂಬಂತಾಗಿದೆ. ಹೂಳು ಮಿಶ್ರಿತ ನೀರು ಹರಿಯುವ ನದಿಗಳ ಸಂಗತಿ ಹೊಸದೇನಲ್ಲ. ಆದರೆ ನಮ್ಮ ಅಣೆಕಟ್ಟು ತಜ್ಞರು, ಜಗತ್ತಿನ ಎಲ್ಲಾ ನದಿಗಳೂ ಸ್ವಚ್ಛ ತಿಳಿನೀರಿನ ನದಿಗಳೆಂದೇ ಭಾವಿಸಿ ಅಣೆಕಟ್ಟು ನಿರ್ಮಾಣಕ್ಕೆ  ಮುಂದಾಗಿರುವುದೇ ಅಣೆಕಟ್ಟುಗಳ ದುರಂತಕ್ಕೆ ಕಾರಣವಾಗಿದೆ.

ಆಯಾ ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣ, ಸವಕಲು ಮಣ್ಣಿನ ನದಿಯ ಇಕ್ಕೆಲಗಳು ನದಿಗಳು ಹೂಳು ತುಂಬಿ ಹರಿಯಲು ಕಾರಣವಾಗಿವೆ. ಹಾಗಾಗಿ ಯಾವುದೇ ನದಿಗೆ ಅಣೆಕಟ್ಟು ಕಟ್ಟುವ ಮುನ್ನ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ಅವಶ್ಯಕ. ಜೊತೆಗೆ ಈಗಾಗಲೇ ನಿಮರ್ಿಸಿರುವ ಅಣೆಕಟ್ಟಿನಲ್ಲಿ ಶೇಖರವಾಗಿರುವ ಹೂಳಿನ ಪ್ರಮಾಣವದ ಪರಿಶೀಲಿನೆ ಅಗತ್ಯ. ಕೆಲವು ನದಿಗಳು ಮಳೆಗಾಲದ ಪ್ರವಾಹದಿಂದ ಉಕ್ಕಿ ಹರಿಯುವ ಸಂದರ್ಭದಲ್ಲಿ ಹೂಳು ತುಂಬಿದ ನೀರಿನೊಡನೆ ಹರಿದರೆ, ಹಲವು ನದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಹೂಳಿನಿಂದ ಕೂಡಿದ ನೀರಿನಿಂದಲೇ ಹರಿಯುತ್ತವೆ.

ನದಿಗಳು ಹೂಳು ತುಂಬಿದ ನೀರಿನೊಡನೆ ಹರಿಯಲು ಕಾರಣವೆಂದರೆ, ಅಗ್ನಿಜ್ವಾಲೆ ಮತ್ತು ಪರ್ವತದ ತಪ್ಪಲಿನಲ್ಲಿ ಭೂಕಂಪನದಿಂದಾಗಿ ಉಂಟಾಗುವ ಮಣ್ಣಿನ ಕುಸಿತ. ಅಮೆರಿಕಾ, ಏಷ್ಯಾದ ಭಾರತ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಹದಿಂದ ನದಿಗಳು ಹೂಳು ತುಂಬಿ ಹರಿದರೆ, ಚೀನಾದ ಬಹುತೇಕ ನದಿಗಳು ವರ್ಷದ ಎಲ್ಲಾ ಋತುಗಳಲ್ಲೂ ಹೂಳಿನೊಡನೆ ಹರಿಯುತ್ತವೆ. ಇಂತಹ ಯಾವುದೇ ಅಂಕಿ ಅಂಶಗಳನ್ನು ಪರಿಗಣಿಸದೇ ಜಗತ್ತಿನ ಶೇ.80ಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗಿವೆ, ಆಗುತ್ತಿವೆ. ಇದಕ್ಕೆ ಉದಾಹರಣೆಯೆಂದರೆ, 1981ರಲ್ಲಿ ನೇಪಾಳದಲ್ಲಿ ನಿರ್ಮಾಣ ವಾದ ಕುಲೇಖಾನಿ ಎಂಬ ಅಣೆಕಟ್ಟು. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಲು ಕನಿಷ್ಠ 75ರಿಂದ 100 ವರ್ಷಗಳು ಬೇಕಾಗಬಹುದೆಂದು ಅಣೆಕಟ್ಟು ತಜ್ಞರು ಊಹಿಸಿದ್ದರು. ಆದರೆ 1993ರಲ್ಲಿ ಅಣೆಕಟ್ಟಿನ ಮೇಲ್ಭಾಗದ ನದಿ ಪಾತ್ರದಲ್ಲಿ ಉಂಟಾದ ಭೂ ಕುಸಿತದಿಂದ ಕೇವಲ 30 ಗಂಟೆಗಳ ಅವಧಿಯಲ್ಲಿ ಜಲಾಶಯದ ಸಾಮರ್ಥ್ಯದ 10ನೇ ಒಂದು ಭಾಗದಷ್ಟು ಹೂಳು ತುಂಬಿತು. ಆ ನಂತರ 19 ವರ್ಷಗಳ ಅವಧಿಯಲ್ಲಿ ಅಂದರೆ 2000 ಇಸವಿಗೆ 114 ಅಡಿ ಎತ್ತರದ ಅಣೆಕಟ್ಟಿನ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಿ, ಯಾವ ಪ್ರಯೋಜನಕ್ಕೂ ಬಾರದಾಯಿತು.

ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿ ನಿರ್ಮಿಸಲಾಗಿದ್ದ  ಅಣೆಕಟ್ಟು ಯೋಜನೆಯಿಂದ ನೇಪಾಳ ಸರಕಾರ ವಿಶ್ವಬ್ಯಾಂಕ್ ಸಾಲದ ಸುಳಿಗೆ ಸಿಲುಕುವಂತಾಯಿತು. ಇದೇ ರೀತಿ ಜಗತ್ತಿನಾದ್ಯಂತ ವಿಶ್ವಬ್ಯಾಂಕ್ ಹಾಗೂ ಅಮೆರಿಕಾದ ಇಂಟರ್ ಅಮೇರಿಕನ್ ಬ್ಯಾಂಕಿನಿಂದ ಸಾಲಪಡೆದ ದಕ್ಷಿಣ ಅಮೆರಿಕಾದ ರಾಷ್ಟ್ರಗಳು, ಗ್ವಾಟೆಮಾಲಾ, ಹಂಡುರಾಸ್, ಕಾಸ್ಪರಿಕಾ ಮುಂತಾದ ದೇಶಗಳಲ್ಲಿ ನಿರ್ಮಾಣವಾಗಿರುವ ಅಣೆಕಟ್ಟುಗಳು ನಿಷ್ಪ್ರಯೋಜಕವಾಗಿವೆ. 1993ರಲ್ಲಿ ಅಮೆರಿಕಾದ ಆರ್ಮ್  ಕಾರ್ಪ್ಸ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಯಿಂದ ಎಲ್ಸೆಲ್ಫಡಾರ್ನಲ್ಲಿ 135 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಾಣವಾದ   ಸೆರ್ರೆನ್ ಗ್ಯ್ರಾಂಡ್ ಎಂಬ ಅಣೆಕಟ್ಟು ಕೇವಲ 30 ವರ್ಷಗಳಲ್ಲಿ ಹೂಳು ತುಂಬಿ ಕೆಲಸಕ್ಕೆ ಬಾರದಂತಾಯಿತು. ಈ ಜಲಾಶಯದಲ್ಲಿ ಹೂಳು ತುಂಬಲು 350 ವರ್ಷಗಳು ಬೇಕು ಎಂದು ಅಮೆರಿಕ ಸಂಸ್ಥೆ ಯೋಜನಾ ವರದಿಯಲ್ಲಿ ತಿಳಿಸಿತ್ತು. ಭಾರತದ ಪರಿಸ್ಥಿತಿ ಕೂಡ ಮೇಲಿನ ರಾಷ್ಟ್ರಗಳಿಗಿಂತ ಭಿನ್ನವಾಗಿಲ್ಲ.

ಭಾರದ 11 ಜಲಾಶಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ಶೇಖರವಾಗುತ್ತಿದೆ. ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟು ಜಲಾಶಯದಿಂದ ಹಿಡಿದು ದಕ್ಷಿಣದ ಆಂಧ್ರದ ನಿಜಾಂಸಾಗಸ್ ಜಲಾಶಯದವರೆಗೆ ಶೇ.135ರಿಂದ ಶೇ.1650 ಪಟ್ಟು ವೇಗದಲ್ಲಿ ಹೂಳು ಶೇಖರವಾಗುತ್ತಿದೆ. ಕೇವಲ ಅಣೆಕಟ್ಟು ನಿಮರ್ಾಣವನ್ನೇ ತಮ್ಮ ಲಾಭದಾಯಕ ದಂಧೆಯನ್ನಾಗಿ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ, ಅಣೆಕಟ್ಟುಗಳ ದುರಂತದ ಬಗ್ಗೆಯಾಗಲಿ, ಭವಿಷ್ಯದ ಬಗ್ಗೆಯಾಗಲಿ ಉತ್ತರದಾಯಕತ್ವ ಇಲ್ಲದಿರುವುದು ಕೂಡ ಗಮನಾರ್ಹ ಸಂಗತಿ. ಯಾವುದೇ ನದಿಗೆ ಅಣೆಕಟ್ಟು ನಿಮರ್ಿಸುವ ಮುನ್ನ ನದಿಯ ನೀರಿನ ಹರಿವಿನ ಪ್ರಮಾಣವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅಣೆಕಟ್ಟು ನಿರ್ಮಾಣವಾಗುವ ಸ್ಥಳದ ಮೇಲ್ಭಾಗದ ನದಿಯ ಪಾತ್ರ ಹಾಗೂ ಇಕ್ಕೆಗಳ ಭೂಮಿ, ಅಲ್ಲಿನ ಮಣ್ಣಿನ ಗುಣ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಮಣ್ಣು ಮರಳು ಮಿಶ್ರಿತವಾಗಿದ್ದು ಸವಕಳು ಗುಣ ಹೊಂದಿದ್ದರೆ ನದಿಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದರ ಜೊತೆಗೆ ಅಲ್ಲಲ್ಲಿ ಸಣ್ಣ-ಸಣ್ಣ ಬ್ಯಾರೇಜ್ಗಳನ್ನು ನಿರ್ಮಿಸಿ, ನೀರಿನಲ್ಲಿ ಹರಿಯುವ ಹೂಳನ್ನು ತಡೆಯುವ ಯೋಜನೆಗಳನ್ನು ರೂಪಿಸಬೇಕು.

ಆದರೆ ನದಿಗಳ ಸಹಜ ಹರಿಯುವಿಕೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದೊಂದನ್ನೇ ಗುರಿಯಾಗಿರಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಸಾಲ ನೀಡುವ ಏಜನ್ಸಿಗಳಿಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ. ಏಕೆಂದರೆ ಭವಿಷ್ಯದಲ್ಲಿ ಜಲಾಶಯ ಹೂಳಿನಿಂದ ತುಂಬಿದರೆ ಈ ಸಂಸ್ಥೆಗಳಿಗೆ ಲಾಭ. ಹೂಳು ತೆಗೆಯುವ ಕಾಮಗಾರಿಯನ್ನೂ ಇವರೇ ಪಡೆಯಬಹುದು. ಸಾಮಾನ್ಯವಾಗಿ ಜಲಾಶಯಗಳಲ್ಲಿ ಶೇಖರವಾಗುವ ನೀರಿನ ಪ್ರಮಾಣವನ್ನು ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಜೀವ ಶೇಖರಣೆ(Live storege) ಇನ್ನೊಂದು ನಿರ್ಜೀವ  ಶೇಖರಣೆ(Dead storage) ಅಂದರೆ ಮೊದಲ ಹಂತದಲ್ಲಿ ಶೇಖರವಾಗುವ ನೀರನ್ನು ನೀರಾವರಿ ಇಲ್ಲವೆ ಜಲವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಎರಡನೇ ಹಂತದಲ್ಲಿ ಶೇಖರವಾಗುವ ನೀರು, ಅಣೆಕಟ್ಟಿನ ತೂಬು ಅಥವಾ ನೀರು ಹೊರ ಹೋಗುವ ಗೇಟ್ಗಳ ಕೆಳಹಂತದ ಮಟ್ಟದಲ್ಲಿ ಶೇಖರವಾಗುವ ನೀರು. ಇದು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಶೇಖರಣೆಯಾಗಿರುತ್ತದೆ. ಬಹುತೇಕ ಎಲ್ಲಾ ಹಂತಗಳಲ್ಲಿ ಹೂಳು ಈ ನಿಜರ್ೀವ ಶೇಖರಣೆ ಎನ್ನುವ ಜಲಾಶಯದ ತಳಮಟ್ಟದಲ್ಲಿ ಸಂಗ್ರಹವಾಗುವುದರಿಂದ, ಪ್ರವಾಹದಂತಹ ಸಂದರ್ಭದಲ್ಲೂ ಗೇಟ್ ಮೂಲಕ ಹರಿಸುವ ನೀರಿನ ಜೊತೆ ಹೂಳು ಹೊರಹೋಗುವುದಿಲ್ಲ. ನದಿಯ ಕೆಳ ಪಾತ್ರದ ಭೂಮಿಯ ವಿನ್ಯಾಸ ಕೂಡ ಈ ಸಂದರ್ಭದಲ್ಲಿ ಮುಖ್ಯ. ತೀರ ಇಳಿಜಾರಾಗಿದ್ದರೆ, ಜಲಾಶಯದ ಹೂಳು ನೀರಿನ ಜೊತೆ ಹರಿದು ಹೋಗಲು ಸಾಧ್ಯ. ಭೂಮಿ ಸಮತಟ್ಟಾಗಿದ್ದರೆ ಹೂಳು ಹರಿಯುವ ಸಾಧ್ಯತೆ ಬಹಳ ಕಡಿಮೆ.

ಇಂತಹ ಸ್ಥಿತಿಯಲ್ಲಿ  ಹೂಳೂ ತೆಗೆಯುವ ಯಂತ್ರಗಳ ಸಹಾಯದಿಂದ ತೆಗೆಸಬೇಕಾಗುತ್ತದೆ. ನೀರು ಮಿಶ್ರಿತ ಹೂಳನ್ನು ದೊಡ್ಡ ಮಟ್ಟದ ಪಂಪ್ಗಳಿಂದ ಪೈಪ್ ಮೂಲಕ ಹೊರಕ್ಕೆ ಸಾಗಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಕೆಲಸ. ನಮ್ಮನ್ನಾಳುವ ಸರಕಾರಗಳು ಯಾವುದೇ ಒಂದು ಯೋಜನೆ ಆರಂಭಿಸುವ ಮುನ್ನ ಅದರ ಆಳ – ಅಗಲ, ಸಿಗಬಹುದಾದ ಪ್ರತಿಫಲ ಅಥವಾ ಆಗಬಹುದಾದ ನಷ್ಟ ಇವೆಲ್ಲವನ್ನೂ ಎಲ್ಲಾ ಕೋನಗಳಿಂದ ಗ್ರಹಿಸಿ ವಿಶ್ಲೇಷಿಸಬೇಕು. ಜೊತೆಗೆ ನೈಸಗರ್ಿಕವಾಗಿ, ಸಾಮಾಜಿಕವಾಗಿ, ಆಥರ್ಿಕವಾಗಿ ಉಂಟಾಗುವ ಪರಿಣಾಮಗಳನ್ನೂ ಗ್ರಹಿಸಬೇಕು. ಇವುಗಳ ವಿವೇಚನೆ ಇಲ್ಲದೆ ಜಾಗತಿಕವಾಗಿ ಕೈಗೊಳ್ಳುವ ಅನೇಕ ಬೃಹತ್ ಯೋಜನೆಗಳು ಅಭಿವೃದ್ಧಿ ಹೆಸರಿನ ಅವಘಡಗಳಾಗುತ್ತವೆ ಅಷ್ಟೆ.

( ಮುಂದುವರಿಯುವುದು)