Daily Archives: November 30, 2011

ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

– ಹನುಮಂತ ಹಾಲಿಗೇರಿ

ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು ಯಾರು’ ಎಂದು ಪ್ರತ್ಯಕ್ಷವಾಗಿಯೆ ಮಡೆಸ್ನಾನವನ್ನು ಬೆಂಬಲಿಸುವ ವಿತಂಡವಾದಿಗಳು. ಎರಡನೆಯದಾಗಿ ‘ಮಡೆಸ್ನಾನ ಅನಾದಿ ಕಾಲದಿಂದ ನಡೆದುಕೊಂಡ ಆಚರಣೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು. ದಿಡೀರ್ ಎಂದು ನಿಷೇಧಿಸಲಿಕ್ಕೆ ಆಗುವುದಿಲ್ಲ. ಕಾಲ ಉರುಳುವಿಕೆಯಲ್ಲಿ ಅದೆ ನಿಲ್ಲುತ್ತದೆ’ ಎಂದು ಅಪರೋಕ್ಷವಾಗಿ  ಬೆಂಬಲಿಸುವವರು. ಇನ್ನು ಕೊನೆಯದಾಗಿ ಮಡೆಸ್ನಾನದಂತಹ ಅಸಹ್ಯ ಆಚರಣೆಯನ್ನು ತಕ್ಷಣವೇ ನಿಲ್ಲಿಸಲೇಬೇಕು ಎಂದು ಕಟುವಾಗಿ ವಿರೋಧಿಸುವವರು.

ಕೇವಲ ಇದು ಕೇವಲ ನಂಬಿಕೆಯ ವಿಷಯವಾಗಿದ್ದರೆ ಬೇರೆ ಮಾತು. ಆದರೆ  ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ. ಮೇಲುವರ್ಗದವರು ಉಂಡ ಎಂಜೆಲೆಲೆಯ ಮೇಲೆ ಕೆಳವರ್ಗದವರು ಉರುಳಾಡಿದರೆ ಅವರ ಚರ್ಮವ್ಯಾದಿಗಳೆಲ್ಲವೂ ಕಡಿಮೆಯಾಗುತ್ತವೆ ಎಂದರೆ ಮೂಢನಂಬಿಕೆಯಲ್ಲದೆ ಮತ್ತೇನೂ? ಒಬ್ಬರು ಕುಡಿದ ಲೋಟದಿಂದ ಮತ್ತೊಬ್ಬರು ಕುಡಿಯುವುದು ಅಸಹ್ಯ ಎನಿಸುವ, ಅಚಾನಕ್ಕಾಗಿ ಎಂಜಲು ತಾಕಿದರೆ ಸೋಪು ಹಚ್ಚಿ ತೊಳೆದುಕೊಳ್ಳುವವರು ಹೆಚ್ಚಾಗಿರುವ ಈ ಕಾಲದಲ್ಲಿ ಉಂಡ ಎಂಜಲದ ಮೇಲೆ ಉರುಳಾಡುವ ಮನಸ್ಥಿತಿಯನ್ನು ದಲಿತರಲ್ಲಿ ಬಿತ್ತಿದವರು ಯಾರು ಎಂಬುದು ಮುಖ್ಯ ಪ್ರಶ್ನೆ. ಎಂಜಲೆಲೆಯಲ್ಲಿ ಔಷಧೀಯ ಗುಣಗಳಿದ್ದರೆ ಇಷ್ಟೊಂದು ಆಸ್ಪತ್ರೆಗಳೇಕೆ ಹುಟ್ಟಿಕೊಳ್ಳುತ್ತಿದ್ದವು. ಒಂದು ವೇಳೆ ಇದು ನಿಜವೇ ಆಗಿದ್ದರೇ ಉಣ್ಣುವವರು ಬ್ರಾಹ್ಮಣರೇ ಏಕೆಯಾಗಬೇಕು? ಒಂದೊಂದು ವರ್ಷ ಆಚರಣೆ ತಿರುಗುಮುರುಗಾಗಲಿ. ದಲಿತರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಒಂದೊಂದು ವರ್ಷ ಉರುಳಾಡಲಿ!

ಇರಲಿ, ಇದೆಲ್ಲ ವಿತಂಡವಾದವನ್ನು ಪಕ್ಕಕ್ಕೆ ಇಟ್ಟು ಮೇಲಿನ ಎರಡು ವಾದಗಳ ಬಗ್ಗೆ ಚರ್ಚೆ ಮಾಡೋಣ. `ಮಡೆಸ್ನಾನ ನಂಬಿಕೆಗೆ ಸಂಬಂಧಪಟ್ಟದ್ದು ಉರುಳುವವರಿಗೆ ತಮ್ಮ ಖಾಯಿಲೆಗಳು ಕಡಿಮೆಯಾಗುತ್ತವೆ ಎಂಬ ಸಮಾಧಾನವಾಗುವಂತಿದ್ದರೆ ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ. ಇದನ್ನು ನಾನು ಪರ್ವಾಗ್ರಹ ಪೀಡಿತನಾಗಿ ಹೇಳುತ್ತಿಲ್ಲ. ಪೇಸ್‌ಬುಕ್ ತೆಗೆದುನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಡೆಸ್ನಾನದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಠಾಧಿಪತಿಗಳು ಪೇಜಾವರ ಶ್ರೀಗಳು ಕೂಡ ಇದೆ ಮಾತನ್ನು ಹೇಳಿದ್ದಾರೆ. ಚೋರ್ ಗುರು ಚಂಡಾಲ ಶಿಷ್ಯಂದಿರು!

ಮೊದಲು ಸರಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಸರಕಾರ ಒಮ್ಮೆಲೆ ನಿಷೇದಿಸಿದ್ದಕ್ಕೆ ನಮ್ಮಂಥವರ ಮನಸ್ಸುಗಳು ನಿರಾಳಗೊಂಡಿದ್ದವು. ನಂತರ ಯಾವದೋ ಹುನ್ನಾರದಿಂದ, ಯಾರದೋ ಒತ್ತಡಕ್ಕೆ ಮಣಿದಂತೆ ನಾಟಕವಾಡಿದ ಸರಕಾರ ನಿಷೇಧವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡಿದ್ದು ನಾಚಿಕೆಗೇಡು. “ಮಲೆಕುಡಿಯರು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಏಕಾಏಕಿ ಮಡೆಸ್ನಾನ ಆಚರಣೆ ನಿಲ್ಲಿಸುವುದು ಬೇಡ. ಈ ಬಗ್ಗೆ ಮುಂದೆ ಮಠದಲ್ಲಿ ಪ್ರಶ್ನೆ’ ಕಾರ್ಯಕ್ರಮದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು,” ಎಂದು ಸಚಿವ ವಿ.ಎಸ್.ಆಚಾರ್ಯ ಹೇಳಿಕೆ ನೀಡಿ ಜಾರಿಕೊಂಡರು. ಮಲೆಕುಡಿಯರ ಪ್ರತಿಭಟನೆಯಲ್ಲಿ ಮೇಲುವರ್ಗದವರ ಕೈವಾಡವಿರಲೇಬೇಕಲ್ಲವೇ.  ಏಕೆಂದರೆ ಈ ಆಚರಣೆ ಆರಂಭದಲ್ಲಿ ಪ್ರಾರಂಭವಾಗಲಿಕ್ಕೆ ಪುರೋಹಿತಶಾಹಿಗಳ ಹುನ್ನಾರವೇ ಕಾರಣವಲ್ಲವೇ?

ಅದುದರಿಂದ ಹೀಗೆ ಅಮಾನುಷವಾದ, ಕೆಲವರಲ್ಲಿ ಅಸಹ್ಯ ಮೂಡಿಸುವ ಈ ಆಚರಣೆಯನ್ನು ಬೆಂಬಲಿಸುವ ಮೊದಲವಾದಿಗಳು ದಯವಿಟ್ಟು ತಮ್ಮ ವಾದವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಮ್ಮ ಎಂಜಲದ ಮೇಲೆ ಮತ್ತೊಬ್ಬ ಮನುಷ್ಯ ಉರುಳಾಡುವುದು ಬೇಡ ಎಂಬ ಕನಿಷ್ಠ ಮಾನವೀಯತೆ ನಿಮಗಿದ್ದರೆ ದಯವಿಟ್ಟು ಸುಮ್ಮನಿದ್ದು ಬಿಡಿ. ಮೇಲುವರ್ಗದ ಪ್ರಜ್ಞಾವಂತರೆ ಮುಂದೆ ನಿಂತು ಈ ಆಚರಣೆಯನ್ನು ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಜಾರಿಕೊಂಡರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಪದ್ದತಿ ಮುಂತಾದವುಗಳೆಲ್ಲವೂ ಸಹ ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಮತ್ತೆ ಆಚರಣೆಗೆ ತರಲು ಸಾಧ್ಯವೆ?

ಇನ್ನೂ ಎರಡನೆ ವಾದದವರು `ಕಾಲ ಪಕ್ವವಾಗಿಲ್ಲ’ ಎಂಬ ನೆಪದಿಂದ ಆಚರಣೆಯ ಪರವಾಗಿಯೆ ನಿಲ್ಲುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂಥ ಆಚರಣೆ ನಿಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದು ಜಾರಿಕೊಳ್ಳುವುದು ಹೇಡಿತನ. ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರಿಗೆ ನಿಜವಾಗಲೂ ಇದು ಅಸಹ್ಯ ಎನಿಸದಿರಬಹುದು. ಆದರೆ ಇದು ಇಡಿ ಮನುಕುಲಕ್ಕೆ ಅನಾಗರಿಕತೆ, ಅಸಹ್ಯ ಮತ್ತು ಅವಮಾನ. ಮಲೆಕುಡಿಯರಂಥ ದಲಿತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ ಖಂಡಿತ ಈ ಆಚರಣೆ ಮುಂದಿನ ವರ್ಷದಿಂದಲಾದರೂ ನಿಲ್ಲುತ್ತದೆ.

ಇದು ಬಿಟ್ಟು ಈ ಆಚರಣೆ ಧಾರ್ಮಿಕ ನಂಬಿಕೆ ಸಂಬಂಧಪಟ್ಟದ್ದು ಈ ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವ ಸರಕಾರ ತನ್ನ ಮನೋಇಂಗಿತವನ್ನು ಅನಾವರಣಗೊಳಿಸಿದೆ. ತಪ್ಪು ಎಂದು ಗೊತ್ತಾದ ಮೇಲೂ  ನಿಷೇಧಿಸಬೇಕೋ ಬೇಡವೋ ಎಂದು ಅಷ್ಟಮಂಗಲ ಪ್ರಶ್ನೆ ಕೇಳುತ್ತೇವೆ ಎನ್ನುವುದು ಯಾವ ಸೀಮೆ ನ್ಯಾಯ? ಸಾಕ್ಷರರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಮಣೆ ಹಾಕುತ್ತಿರುವುದು ಪ್ರಜ್ಞಾವಂತ ಸಾಕ್ಷರರಿಗೆ ಒಪ್ಪುವ ಮಾತಲ್ಲ.

ಕಾರ್ಮಿಕರ ದ್ವನಿಯಾಗಬಲ್ಲ “ಲೇಬರ್ ಲೈನ್” ಪತ್ರಿಕೆ

-ಅರುಣ್ ಜೋಳದಕೂಡ್ಲಿಗಿ

ಈಚೆಗೆ ಕಾರ್ಮಿಕ ಪರ ಚಟುವಟಿಕೆಗಳು ಮುಖ್ಯವೆನ್ನಿಸುವಂತೆ ಕಾಣುತ್ತಿಲ್ಲ. ಕಾರಣ ಕಾರ್ಮಿಕರ ಸಮಸ್ಯೆಗಳು ಬಗೆಹರಿದು ಸುಖಿಗಳಾಗಿದ್ದಾರೆಂದಲ್ಲ, ಬದಲಿಗೆ ಕಾರ್ಮಿಕರು ದೊಡ್ಡ ದ್ವನಿ ಎತ್ತದಂತೆ ವ್ಯವಸ್ಥೆ ಕಟ್ಟಿಹಾಕಿದೆಯಷ್ಟೆ. ಈ ಮಧ್ಯೆಯೇ ಕಾರ್ಮಿಕರ ಪರ ಕಾಳಜಿ ಇಟ್ಟುಕೊಂಡು ಹೋರಾಟ, ಪ್ರತಿಭಟನೆಗಳನ್ನು ಸದ್ದಿಲ್ಲದೆ ಮಾಡುವ ಕೆಲವಾದರೂ ಪ್ರಾಮಾಣಿಕರು  ನಮ್ಮ ನಡುವೆ ಇದ್ದಾರೆ. ಅಂತಹ ಕೆಲವರ ಪ್ರಯತ್ನವೇ “ಲೇಬರ್ ಲೈನ್” ಎನ್ನುವ ಪತ್ರಿಕೆ.

ಜಾತಿಗೊಂದು ಜಾತಿವಾದಿ ಪತ್ರಿಕೆಗಳು ಹುಟ್ಟುತ್ತಿರುವ ಈ ಕಾಲದಲ್ಲಿ ಜಾತಿಯಾಚೆ ದುಡಿವ ವರ್ಗವನ್ನು ಆಧರಿಸಿ ಪತ್ರಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆ. ಹಿರಿಯ ನ್ಯಾಯವಾದಿಗಳಾದ ಮುರುಳೀಧರ್ ಅವರ ಗೌರವ ಸಂಪಾದಕತ್ವದಲ್ಲಿ, ಎ.ಆರ್.ಎಂ. ಇಸ್ಮಾಯಿಲ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಪತ್ರಿಕೆ ಸಿದ್ದವಾಗುತ್ತಿದೆ. ಬಿ.ಪೀರ್‍‌ಭಾಷಾ, ಜಿ.ಎಂ.ಗುರುಬಸವರಾಜ, ಪರುಶುರಾಮ ಕಲಾಲ್, ಮತ್ತೀಹಳ್ಳಿ ಬಸವರಾಜ್ ರ ಸಂಪಾದಕ ಮಂಡಳಿ ಈ ಪತ್ರಿಕೆಯ ಬೆನ್ನಿಗಿದೆ.

ಪ್ರತೀ ಸಂಚಿಕೆಗೆ ಕಾರ್ಮಿಕರ ಒಂದು ವರ್ಗವನ್ನು ಆಧರಿಸಿ ರೂಪಿಸುವ ಯೋಜನೆ ಇದೆ. ಅಕ್ಟೋಬರ್ ಮೊದಲ ಸಂಚಿಕೆಯನ್ನು ಕಟ್ಟಡ ಕಾರ್ಮಿಕರನ್ನು ಆಧರಿಸಿ ಸಿದ್ದಗೊಳಿಸಲಾಗಿದೆ. ಇಲ್ಲಿ ಕಾರ್ಮಿಕರಿಗೆ ಕಾನೂನಿನ ಅರಿವು, ಕಾರ್ಮಿಕ ಹೋರಾಟಗಾರರ ಮಾತುಕತೆ, ಕಾರ್ಮಿಕ ಜಾಗೃತಿಯ ವೈಚಾರಿಕ ಬರಹಗಳನ್ನು ಸದ್ಯ ಈ ಪತ್ರಿಕೆ ಒಳಗೊಂಡಿದೆ.

ಇದು ಬಳ್ಳಾರಿಯ ಲೇಬರ್ ರಿಸೋರ್ಸ್ ಸೆಂಟರ್ ನಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆ ಇನ್ನಷ್ಟು ವ್ಯಾಪಕತೆಯನ್ನು ಹೆಚ್ಚಿಸಿಕೊಂಡು, ಶ್ರಮಿಕ ಲೋಕದ ಸಂಗತಿಗಳನ್ನು, ಕಾರ್ಮಿಕರ ಆತ್ಮಕಥಾನಕದ ಭಾಗಗಳನ್ನು ಒಳಗೊಳ್ಳಬೇಕಿದೆ. ಇದು ಕೇವಲ ಕಾರ್ಮಿಕ ವರ್ಗದ ಕೂಗು ಮಾತ್ರವಾಗದೆ, ಶಕ್ತಿಯಾಗುವಂತೆ ಇದನ್ನು ರೂಪಿಸಲು ಅವಕಾಶಗಳಿವೆ. ಅಂತಹ ಸಾದ್ಯತೆಯೆಡೆಗೆ ಲೇಬರ್ ಲೈನ್ ಸಾಗಲೆಂದು ಹಾರೈಸೋಣ.

ಆಸಕ್ತರು,
ಲೇಬರ್ ಲೈನ್ ಕನ್ನಡ ಮಾಸಿಕ, ಮೇಲ್ಮಹಡಿ, ಸಪ್ತಗಿರಿ ಕಾಂಪ್ಲೆಕ್ಸ್, ಕೆ.ಸಿ.ರಸ್ತೆ, ಬಳ್ಳಾರಿ-583101, ದೂರವಾಣಿ: 08392-271090, labourlinekannada@gmail.com
ವಿಳಾಸಕ್ಕೆ ಸಂಪರ್ಕಿಸಬಹುದು.

ಅನಾರೋಗ್ಯ, ವರ್ತಮಾನ.ಕಾಮ್, ಕೈಜೋಡಿಸಬೇಕಾದ ಸಮಯ

ಸ್ನೇಹಿತರೆ,

ಕೆಲವೊಂದು ವಿಚಾರಗಳನ್ನು ಹೇಳಬೇಕಿದೆ. ಇದು “ವರ್ತಮಾನ.ಕಾಮ್”ಗೆ ಸಂಬಂಧಿಸಿದ್ದಾದ್ದರಿಂದ ಒಂದಷ್ಟು ವೈಯಕ್ತಿಕ ವಿಚಾರಗಳಿದ್ದರೂ ಇಲ್ಲಿ ಹೇಳುವುದು ಸೂಕ್ತ.

ಹೀಗಾಗುತ್ತದೆ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ. ದೈಹಿಕವಾಗಿ ಸಾಕಷ್ಟು ಗಟ್ಟಿಮುಟ್ಟಾಗಿದ್ದರೂ (ಅದು ಇಪ್ಪತ್ತರ ವಯಸ್ಸಿನ ತನಕ ಮಾಡಿದ ದೈಹಿಕ ದುಡಿಮೆಯ ಫಲ) ನನಗೆ ಕಳೆದ ಹತ್ತಾರು ವರ್ಷಗಳಿಂದ ಸಿಗರೇಟ್ ವಾಸನೆ, ಧೂಳು, ವಾಹನಗಳ ಹೊಗೆಯ ಮಾಲಿನ್ಯದ ಅಲರ್ಜಿ ಇತ್ತು. ಭಾರತಕ್ಕೆ ಬರುತ್ತಿದ್ದ ಪ್ರತಿಸಲವೂ ಇವುಗಳ ಕಾರಣದಿಂದ. ಮುಖ್ಯವಾಗಿ ಪ್ರಯಾಣ ಮತ್ತು ವಾಹನಗಳ ಹೊಗೆಯ ಮಾಲಿನ್ಯದಿಂದಾಗಿ ನೆಗಡಿ-ಕೆಮ್ಮು-ಜ್ವರ ಬರುತ್ತಿತ್ತು. ಸುಮಾರು ಒಂದು ವಾರ ಕಾಲದ ಅನಾರೋಗ್ಯ ಅದು. ಕಳೆದ ವರ್ಷ ವಾಪಸಾದಾಗಿನಿಂದ ಇದು ಎರಡು ತಿಂಗಳಿಗೊಮ್ಮೆ ಪುನರಾವರ್ತನೆ ಆಗುತ್ತಿದ್ದ ಕ್ರಿಯೆ. ಅದೆಷ್ಟು ಸಿಟ್ರಿಜಿನ್ ತಿಂದಿರುವೆನೊ ಲೆಕ್ಕವಿಲ್ಲ. ಇದರಿಂದೆಲ್ಲ ರೋಸಿ ಹೋಗಿ ಬೇಕೆಂತಲೆ ನನ್ನ ದೇಹವನ್ನು ಇನ್ನಷ್ಟು ಪರೀಕ್ಷೆಗೆ ಒಡ್ಡುತ್ತಿದ್ದೆ. ಪರಿಣಾಮವಾಗಿ ಒಂದು ತಿಂಗಳಿನಿಂದ ಆರೋಗ್ಯವಾಗಿದ್ದ ದಿನಗಳೇ ಇರಲಿಲ್ಲ.

ಈ ತಿಂಗಳಿನಲ್ಲಿ ಒಂದಷ್ಟು ಕಡೆ ಓಡಾಟವೂ ಆಗಿತ್ತು. ಬೀದರ್-ಹೈದರಾಬಾದ್-ಹಿರಿಯೂರು-ಮೈಸೂರು-ಕೋಲಾರ, ಹೀಗೆ ಸುತ್ತಾಟ ಈ ಅನಾರೋಗ್ಯದ ನಡುವೆಯೂ ಸಾಗಿತ್ತು. ನಾನಿರುವ ಬಿಟಿಎಂ ಲೇಔಟ್‌ನಲ್ಲಿರುವಷ್ಟು ಸೊಳ್ಳೆಗಳು ಇನ್ನೆಲ್ಲೂ ಇದ್ದ ಹಾಗಿಲ್ಲ. ಆ Aedes aegypti ಎನ್ನುವ ಸೊಳ್ಳೆ ಎಲ್ಲಿ ಯಾವಾಗ ಕಚ್ಚಿತೊ ಗೊತ್ತಿಲ್ಲ. ನನ್ನನ್ನು ಕಚ್ಚುವ ಮೊದಲು ಅದು ಕಚ್ಚಿದ್ದ ಮನುಷ್ಯನ ಗತಿ ಏನಾಗಿದೆಯೊ? ನನ್ನ ನಂತರ ಇನ್ನೆಷ್ಟು ಜನರನ್ನು ಕಚ್ಚಿದೆಯೊ? ಮೊದಲೆ ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ನನ್ನ ದೇಹಕ್ಕೆ ಸೊಳ್ಳೆ ಕಡಿತದಿಂದಾದ ಡೆಂಗಿ ವೈರಸ್ ಅನ್ನು ನಿವಾರಿಸಿಕೊಳ್ಳಲಾಗಿಲ್ಲ. ಈ ಕಾಯಿಲೆಯ incubation ಅವಧಿ 3-14 ದಿನ ಎನ್ನುತ್ತಾರೆ.

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಯಡ್ಡಯೂರಪ್ಪ ಮತ್ತು ಸೋಮಣ್ಣನವರ ವಿರುದ್ಧ ಕೇಸು ದಾಖಲಿಸಿದ ಮಾರನೆ ದಿನ ಜ್ವರ ಕಾಣಿಸಿಕೊಂಡಿತು. 102 ರಿಂದ 104 ಫ್ಯಾರನ್‌ಹೀಟ್ ತನಕ ಜ್ವರ. ಯಾವ ಮಾತ್ರೆಗೂ ಕಮ್ಮಿ ಆಗುತ್ತಿರಲಿಲ್ಲ. ಎರಡು ದಿನದ ನಂತರ ಆಸ್ಪತ್ರೆಗೆ ದಾಖಲಾಗಿ ರಕ್ತಪರೀಕ್ಷೆ ನಡೆಸಿದ ನಂತರವೇ ಜ್ವರದ ಕಾರಣ ಗೊತ್ತಾಗಿದ್ದು. ಆ ಜ್ವರದಲ್ಲಿಯೇ 21/11/11ರ ಸೋಮವಾರದಂದು ನೇರವಾಗಿ ಆಸ್ಪತ್ರೆಯಿಂದ ಕೋರ್ಟಿಗೆ ಹೋಗಿದ್ದು. ಅಂದು ಹೋಗದೆ ಇದ್ದಿದ್ದರೆ ಕೇಸು ಮುಂದಕ್ಕೆ ಹೋಗಿ ಮತ್ತೆ ಏನಾಗುತ್ತಿತ್ತು ಎಂದು ಹೇಳುವುದು ಕಷ್ಟ. ಕೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ ಅಲ್ಲಿಯತನಕ ಕಟ್ಟಿಕೊಂಡಿದ್ದ ಕಫ ವಾಂತಿಯಾಗಿ ಬಂತು. ಜ್ವರ ಇನ್ನಷ್ಟು ಏರಿತು. ಆದರೆ ಅಲ್ಲಿಗೆ ನನ್ನ ಬಹುಪಾಲು ಕೆಲಸ ಮುಗಿದಿತ್ತು. ಮಾರನೆ ದಿನ ನ್ಯಾಯಾಧೀಶರು ತನಿಖೆಗೆ ಆದೇಶಿಸಿದರು.

ಆ ಸಮಯದಲ್ಲಿ ಒಟ್ಟು ಆರು ದಿನ ಆಸ್ಪತ್ರೆಯಲ್ಲಿದ್ದೆ. ಬಹಳಷ್ಟು ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಆಸ್ಪತ್ರೆಯಲ್ಲಿದ್ದ ವಿಷಯ ತಿಳಿದು ಗಾಬರಿ ಆಗಿದ್ದು ಸಹಜ. ಇದೇನು ಭಯದಿಂದ ಹುಟ್ಟಿಕೊಂಡ ಚಳಿಜ್ವರ ಇರಬಹುದೆ ಎಂದು ಒಂದಿಬ್ಬರು ಕೇಳಿದರು ಸಹ. ಮತ್ತೆ ಕೆಲವರು ಯಾರಾದರೂ ಧಾಳಿ ಮಾಡಿದರೇನೊ ಎಂದುಕೊಂಡರು. ಆದರೆ ಹಾಗೇನೂ ಆಗಿರಲಿಲ್ಲ. ಇನ್ನು ಬೆದರಿಕೆ ಕರೆಗಳು. ಮೊದಲ ದಿನ ಒಬ್ಬಾತ ಫೋನ್ ಮಾಡಿ ವಿಚಿತ್ರ ಪ್ರಶ್ನೆ ಕೇಳಿದ್ದ. ಆತ ಯಾವುದೊ ಪುಡಾರಿಯ ಚೇಲಾ ಇದ್ದ ಹಾಗೆ ಇದ್ದಾನೆ. ಏನೇನೊ ಹೆಸರು ಹೇಳಿದ. ನಂತರ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದ ಕಾರಣ ಮತ್ತು ಮಾತನಾಡಿ ಆಯಾಸ ಮಾಡಿಕೊಂಡರೆ ಜ್ವರ ಏರುತ್ತಿದ್ದ ಕಾರಣ ಅನೇಕ ಫೋನ್‌ ಕರೆಗಳನ್ನು ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ ಯಾರು ಏತಕ್ಕೆ ಕರೆ ಮಾಡಿದ್ದರು ಎಂದು ಸಹ ಗೊತ್ತಿಲ್ಲ. ಹಾಗಾಗಿ ಬೆದರಿಕೆ ಕರೆಗಳ ಬಗ್ಗೆ ಹೌದು ಇಲ್ಲ ಎಂದು ಹೇಳುವುದು ಕಷ್ಟವೆ. ಆದರೆ ಡೆಂಗಿ ಜ್ವರಕ್ಕೂ ಇದ್ಯಾವುದಕ್ಕೂ ಯಾವುದೆ ಸಂಬಂಧ ಇರಲಿಲ್ಲ.

ಈ ಎಲ್ಲಾ ಸಮಯದಲ್ಲಿ ನಮ್ಮ ವರ್ತಮಾನದ ಬಳಗದ ಗೆಳೆಯರು ವೆಬ್‌ಸೈಟನ್ನು ಸಾಧ್ಯವಾದಷ್ಟು ಅಪ್‌ಡೇಟ್ ಮಾಡುತ್ತಲೇ ಇದ್ದರು. ಅವರಿಗೆ ಮತ್ತು ಅವರ ಬದ್ಧತೆಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಅವರಿಲ್ಲದೆ ಹೋಗಿದ್ದರೆ ನಾನು ಆಸ್ಪತ್ರೆಗೂ ಸಹ ಬೇಗ ದಾಖಲಾಗುತ್ತಿರಲಿಲ್ಲ. ಅವರ ಕಾಳಜಿ ನನ್ನ ಸ್ಥಿತಿ ಇನ್ನಷ್ಟು ಹದಗೆಡುವುದನ್ನು ಕಾಲಕಾಲಕ್ಕೆ ನಿಲ್ಲಿಸಿದೆ.

ಜ್ವರ ಒಂದು ಬಿಟ್ಟರೆ ಮಿಕ್ಕ ಡೆಂಗಿ ಜ್ವರದ ಇತರೆ ಅನಾಹುತಕಾರಿ ಪರಿಣಾಮಗಳು ನನ್ನ ಮೇಲೆ ಆಗಲಿಲ್ಲ. ಪ್ಲೇಟ್‌ಲೆಟ್ಸ್ (ರಕ್ತಸ್ರಾವದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ರಕ್ತಕಣಗಳು) ಮಾತ್ರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತ ಹೋದವು. ಕೊನೆಗೆ ಐದು ಪೈಂಟ್ಸ್ ತರಿಸಿ Transfusion ಮಾಡಬೇಕಾಯಿತು. ಮಾರನೆ ದಿನದಿಂದ ಅವುಗಳ ಸಂಖ್ಯೆ ನಿಧಾನಕ್ಕೆ ಏರುತ್ತ ಹೋಯಿತು.

ಈಗ ಆಸ್ಪತ್ರೆಯಿಂದ ಮನೆಗೆ ಬಂದು ನಾಲ್ಕೈದು ದಿನವಾಗಿದೆ. ಆದರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎನ್ನಿಸಿಲ್ಲ. ಮೊದಲ ಮೂರ್ನಾಲ್ಕು ದಿನವಂತೂ ತೀವ್ರ ತುರಿಕೆ. ಡಾಕ್ಟರ್ ಹೇಳುವ ಪ್ರಕಾರ ಅದು ನನಗೆ ಕೊಡಲ್ಪಟ್ಟ ರಕ್ತದ ಪ್ಲೇಟ್‍ಲೆಟ್‌ಗಳಿಂದಾದ ಅಲರ್ಜಿ. ಈಗ ಒಂದೆರಡು ದಿನಗಳಿಂದ ಮತ್ತೆ ನೆಗಡಿ, ಕೆಮ್ಮು, ಗಂಟಲುನೋವು ಆರಂಭವಾಗಿದೆ. ಬಹುಶಃ ಬೆಂಗಳೂರಿನ ಚಳಿಯಿಂದಾಗಿರಬಹುದು. ಸಂಪೂರ್ಣ ಎಂದು ಗುಣಮುಖನಾಗುತ್ತೇನೆ ಗೊತ್ತಿಲ್ಲ. ಹಿರಿಯ ಗೆಳೆಯರೊಬ್ಬರು ಹೇಳಿದ ಪ್ರಕಾರ ಅವರಿಗೆ ಡೆಂಗಿ ಜ್ವರ ಬಂದನಂತರ ಮಲೇರಿಯಾ ಬಂದಿತ್ತಂತೆ. ಈ ಜ್ವರ ಬಂದ ಎಲ್ಲರದೂ ಒಂದಲ್ಲ ಒಂದು ಕತೆ. ಯಾರಿಗೂ ಇದು ಜೀವನ ಸಹನೀಯಗೊಳಿಸಿಲ್ಲ. ದಯವಿಟ್ಟು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಿ.

ಈ ಎಲ್ಲಾ ಕಾರಣಗಳಿಂದಾಗಿ “ವರ್ತಮಾನ” ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಗಳು ಸ್ವಲ್ಪ ಕುಂಟಿತವಾಗಿವೆ. ಅನೇಕ ವಿಚಾರಗಳ ಬಗ್ಗೆ ಬರೆಯಬೇಕಿತ್ತು, ಬರೆಸಬೇಕಿತ್ತು. ದಾಖಲೆಗಳು ಸಿಗುತ್ತಲೆ ಇವೆ. ಈ ಮಧ್ಯೆಯೂ ಜಗದೀಶ್ ಕೊಪ್ಪ, ಶ್ರೀಪಾದ್ ಭಟ್, ಪರಶುರಾಮ್ ಕಲಾಲ್ ಮತ್ತು ಬಳಗದ ಸ್ನೇಹಿತರು ಗಂಭೀರ ವಿಚಾರಗಳನ್ನು ಚರ್ಚೆಗೆ ಒಡ್ಡುತ್ತಲೇ ಇದ್ದಾರೆ. ಮಿಕ್ಕ ಸ್ನೇಹಿತರೂ ಸಹ ಕೈಜೋಡಿಸಬೇಕಾದ ಸಂದರ್ಭ ಇದೇನೆ. ಅದೇ ಇಲ್ಲಿ ನಾನು ಹೇಳಬೇಕೆಂದುಕೊಂಡ ಮುಖ್ಯ ವಿಷಯ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ