ಅನಾರೋಗ್ಯ, ವರ್ತಮಾನ.ಕಾಮ್, ಕೈಜೋಡಿಸಬೇಕಾದ ಸಮಯ

ಸ್ನೇಹಿತರೆ,

ಕೆಲವೊಂದು ವಿಚಾರಗಳನ್ನು ಹೇಳಬೇಕಿದೆ. ಇದು “ವರ್ತಮಾನ.ಕಾಮ್”ಗೆ ಸಂಬಂಧಿಸಿದ್ದಾದ್ದರಿಂದ ಒಂದಷ್ಟು ವೈಯಕ್ತಿಕ ವಿಚಾರಗಳಿದ್ದರೂ ಇಲ್ಲಿ ಹೇಳುವುದು ಸೂಕ್ತ.

ಹೀಗಾಗುತ್ತದೆ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ. ದೈಹಿಕವಾಗಿ ಸಾಕಷ್ಟು ಗಟ್ಟಿಮುಟ್ಟಾಗಿದ್ದರೂ (ಅದು ಇಪ್ಪತ್ತರ ವಯಸ್ಸಿನ ತನಕ ಮಾಡಿದ ದೈಹಿಕ ದುಡಿಮೆಯ ಫಲ) ನನಗೆ ಕಳೆದ ಹತ್ತಾರು ವರ್ಷಗಳಿಂದ ಸಿಗರೇಟ್ ವಾಸನೆ, ಧೂಳು, ವಾಹನಗಳ ಹೊಗೆಯ ಮಾಲಿನ್ಯದ ಅಲರ್ಜಿ ಇತ್ತು. ಭಾರತಕ್ಕೆ ಬರುತ್ತಿದ್ದ ಪ್ರತಿಸಲವೂ ಇವುಗಳ ಕಾರಣದಿಂದ. ಮುಖ್ಯವಾಗಿ ಪ್ರಯಾಣ ಮತ್ತು ವಾಹನಗಳ ಹೊಗೆಯ ಮಾಲಿನ್ಯದಿಂದಾಗಿ ನೆಗಡಿ-ಕೆಮ್ಮು-ಜ್ವರ ಬರುತ್ತಿತ್ತು. ಸುಮಾರು ಒಂದು ವಾರ ಕಾಲದ ಅನಾರೋಗ್ಯ ಅದು. ಕಳೆದ ವರ್ಷ ವಾಪಸಾದಾಗಿನಿಂದ ಇದು ಎರಡು ತಿಂಗಳಿಗೊಮ್ಮೆ ಪುನರಾವರ್ತನೆ ಆಗುತ್ತಿದ್ದ ಕ್ರಿಯೆ. ಅದೆಷ್ಟು ಸಿಟ್ರಿಜಿನ್ ತಿಂದಿರುವೆನೊ ಲೆಕ್ಕವಿಲ್ಲ. ಇದರಿಂದೆಲ್ಲ ರೋಸಿ ಹೋಗಿ ಬೇಕೆಂತಲೆ ನನ್ನ ದೇಹವನ್ನು ಇನ್ನಷ್ಟು ಪರೀಕ್ಷೆಗೆ ಒಡ್ಡುತ್ತಿದ್ದೆ. ಪರಿಣಾಮವಾಗಿ ಒಂದು ತಿಂಗಳಿನಿಂದ ಆರೋಗ್ಯವಾಗಿದ್ದ ದಿನಗಳೇ ಇರಲಿಲ್ಲ.

ಈ ತಿಂಗಳಿನಲ್ಲಿ ಒಂದಷ್ಟು ಕಡೆ ಓಡಾಟವೂ ಆಗಿತ್ತು. ಬೀದರ್-ಹೈದರಾಬಾದ್-ಹಿರಿಯೂರು-ಮೈಸೂರು-ಕೋಲಾರ, ಹೀಗೆ ಸುತ್ತಾಟ ಈ ಅನಾರೋಗ್ಯದ ನಡುವೆಯೂ ಸಾಗಿತ್ತು. ನಾನಿರುವ ಬಿಟಿಎಂ ಲೇಔಟ್‌ನಲ್ಲಿರುವಷ್ಟು ಸೊಳ್ಳೆಗಳು ಇನ್ನೆಲ್ಲೂ ಇದ್ದ ಹಾಗಿಲ್ಲ. ಆ Aedes aegypti ಎನ್ನುವ ಸೊಳ್ಳೆ ಎಲ್ಲಿ ಯಾವಾಗ ಕಚ್ಚಿತೊ ಗೊತ್ತಿಲ್ಲ. ನನ್ನನ್ನು ಕಚ್ಚುವ ಮೊದಲು ಅದು ಕಚ್ಚಿದ್ದ ಮನುಷ್ಯನ ಗತಿ ಏನಾಗಿದೆಯೊ? ನನ್ನ ನಂತರ ಇನ್ನೆಷ್ಟು ಜನರನ್ನು ಕಚ್ಚಿದೆಯೊ? ಮೊದಲೆ ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ನನ್ನ ದೇಹಕ್ಕೆ ಸೊಳ್ಳೆ ಕಡಿತದಿಂದಾದ ಡೆಂಗಿ ವೈರಸ್ ಅನ್ನು ನಿವಾರಿಸಿಕೊಳ್ಳಲಾಗಿಲ್ಲ. ಈ ಕಾಯಿಲೆಯ incubation ಅವಧಿ 3-14 ದಿನ ಎನ್ನುತ್ತಾರೆ.

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಯಡ್ಡಯೂರಪ್ಪ ಮತ್ತು ಸೋಮಣ್ಣನವರ ವಿರುದ್ಧ ಕೇಸು ದಾಖಲಿಸಿದ ಮಾರನೆ ದಿನ ಜ್ವರ ಕಾಣಿಸಿಕೊಂಡಿತು. 102 ರಿಂದ 104 ಫ್ಯಾರನ್‌ಹೀಟ್ ತನಕ ಜ್ವರ. ಯಾವ ಮಾತ್ರೆಗೂ ಕಮ್ಮಿ ಆಗುತ್ತಿರಲಿಲ್ಲ. ಎರಡು ದಿನದ ನಂತರ ಆಸ್ಪತ್ರೆಗೆ ದಾಖಲಾಗಿ ರಕ್ತಪರೀಕ್ಷೆ ನಡೆಸಿದ ನಂತರವೇ ಜ್ವರದ ಕಾರಣ ಗೊತ್ತಾಗಿದ್ದು. ಆ ಜ್ವರದಲ್ಲಿಯೇ 21/11/11ರ ಸೋಮವಾರದಂದು ನೇರವಾಗಿ ಆಸ್ಪತ್ರೆಯಿಂದ ಕೋರ್ಟಿಗೆ ಹೋಗಿದ್ದು. ಅಂದು ಹೋಗದೆ ಇದ್ದಿದ್ದರೆ ಕೇಸು ಮುಂದಕ್ಕೆ ಹೋಗಿ ಮತ್ತೆ ಏನಾಗುತ್ತಿತ್ತು ಎಂದು ಹೇಳುವುದು ಕಷ್ಟ. ಕೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ ಅಲ್ಲಿಯತನಕ ಕಟ್ಟಿಕೊಂಡಿದ್ದ ಕಫ ವಾಂತಿಯಾಗಿ ಬಂತು. ಜ್ವರ ಇನ್ನಷ್ಟು ಏರಿತು. ಆದರೆ ಅಲ್ಲಿಗೆ ನನ್ನ ಬಹುಪಾಲು ಕೆಲಸ ಮುಗಿದಿತ್ತು. ಮಾರನೆ ದಿನ ನ್ಯಾಯಾಧೀಶರು ತನಿಖೆಗೆ ಆದೇಶಿಸಿದರು.

ಆ ಸಮಯದಲ್ಲಿ ಒಟ್ಟು ಆರು ದಿನ ಆಸ್ಪತ್ರೆಯಲ್ಲಿದ್ದೆ. ಬಹಳಷ್ಟು ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಆಸ್ಪತ್ರೆಯಲ್ಲಿದ್ದ ವಿಷಯ ತಿಳಿದು ಗಾಬರಿ ಆಗಿದ್ದು ಸಹಜ. ಇದೇನು ಭಯದಿಂದ ಹುಟ್ಟಿಕೊಂಡ ಚಳಿಜ್ವರ ಇರಬಹುದೆ ಎಂದು ಒಂದಿಬ್ಬರು ಕೇಳಿದರು ಸಹ. ಮತ್ತೆ ಕೆಲವರು ಯಾರಾದರೂ ಧಾಳಿ ಮಾಡಿದರೇನೊ ಎಂದುಕೊಂಡರು. ಆದರೆ ಹಾಗೇನೂ ಆಗಿರಲಿಲ್ಲ. ಇನ್ನು ಬೆದರಿಕೆ ಕರೆಗಳು. ಮೊದಲ ದಿನ ಒಬ್ಬಾತ ಫೋನ್ ಮಾಡಿ ವಿಚಿತ್ರ ಪ್ರಶ್ನೆ ಕೇಳಿದ್ದ. ಆತ ಯಾವುದೊ ಪುಡಾರಿಯ ಚೇಲಾ ಇದ್ದ ಹಾಗೆ ಇದ್ದಾನೆ. ಏನೇನೊ ಹೆಸರು ಹೇಳಿದ. ನಂತರ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದ ಕಾರಣ ಮತ್ತು ಮಾತನಾಡಿ ಆಯಾಸ ಮಾಡಿಕೊಂಡರೆ ಜ್ವರ ಏರುತ್ತಿದ್ದ ಕಾರಣ ಅನೇಕ ಫೋನ್‌ ಕರೆಗಳನ್ನು ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ ಯಾರು ಏತಕ್ಕೆ ಕರೆ ಮಾಡಿದ್ದರು ಎಂದು ಸಹ ಗೊತ್ತಿಲ್ಲ. ಹಾಗಾಗಿ ಬೆದರಿಕೆ ಕರೆಗಳ ಬಗ್ಗೆ ಹೌದು ಇಲ್ಲ ಎಂದು ಹೇಳುವುದು ಕಷ್ಟವೆ. ಆದರೆ ಡೆಂಗಿ ಜ್ವರಕ್ಕೂ ಇದ್ಯಾವುದಕ್ಕೂ ಯಾವುದೆ ಸಂಬಂಧ ಇರಲಿಲ್ಲ.

ಈ ಎಲ್ಲಾ ಸಮಯದಲ್ಲಿ ನಮ್ಮ ವರ್ತಮಾನದ ಬಳಗದ ಗೆಳೆಯರು ವೆಬ್‌ಸೈಟನ್ನು ಸಾಧ್ಯವಾದಷ್ಟು ಅಪ್‌ಡೇಟ್ ಮಾಡುತ್ತಲೇ ಇದ್ದರು. ಅವರಿಗೆ ಮತ್ತು ಅವರ ಬದ್ಧತೆಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಅವರಿಲ್ಲದೆ ಹೋಗಿದ್ದರೆ ನಾನು ಆಸ್ಪತ್ರೆಗೂ ಸಹ ಬೇಗ ದಾಖಲಾಗುತ್ತಿರಲಿಲ್ಲ. ಅವರ ಕಾಳಜಿ ನನ್ನ ಸ್ಥಿತಿ ಇನ್ನಷ್ಟು ಹದಗೆಡುವುದನ್ನು ಕಾಲಕಾಲಕ್ಕೆ ನಿಲ್ಲಿಸಿದೆ.

ಜ್ವರ ಒಂದು ಬಿಟ್ಟರೆ ಮಿಕ್ಕ ಡೆಂಗಿ ಜ್ವರದ ಇತರೆ ಅನಾಹುತಕಾರಿ ಪರಿಣಾಮಗಳು ನನ್ನ ಮೇಲೆ ಆಗಲಿಲ್ಲ. ಪ್ಲೇಟ್‌ಲೆಟ್ಸ್ (ರಕ್ತಸ್ರಾವದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ರಕ್ತಕಣಗಳು) ಮಾತ್ರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತ ಹೋದವು. ಕೊನೆಗೆ ಐದು ಪೈಂಟ್ಸ್ ತರಿಸಿ Transfusion ಮಾಡಬೇಕಾಯಿತು. ಮಾರನೆ ದಿನದಿಂದ ಅವುಗಳ ಸಂಖ್ಯೆ ನಿಧಾನಕ್ಕೆ ಏರುತ್ತ ಹೋಯಿತು.

ಈಗ ಆಸ್ಪತ್ರೆಯಿಂದ ಮನೆಗೆ ಬಂದು ನಾಲ್ಕೈದು ದಿನವಾಗಿದೆ. ಆದರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎನ್ನಿಸಿಲ್ಲ. ಮೊದಲ ಮೂರ್ನಾಲ್ಕು ದಿನವಂತೂ ತೀವ್ರ ತುರಿಕೆ. ಡಾಕ್ಟರ್ ಹೇಳುವ ಪ್ರಕಾರ ಅದು ನನಗೆ ಕೊಡಲ್ಪಟ್ಟ ರಕ್ತದ ಪ್ಲೇಟ್‍ಲೆಟ್‌ಗಳಿಂದಾದ ಅಲರ್ಜಿ. ಈಗ ಒಂದೆರಡು ದಿನಗಳಿಂದ ಮತ್ತೆ ನೆಗಡಿ, ಕೆಮ್ಮು, ಗಂಟಲುನೋವು ಆರಂಭವಾಗಿದೆ. ಬಹುಶಃ ಬೆಂಗಳೂರಿನ ಚಳಿಯಿಂದಾಗಿರಬಹುದು. ಸಂಪೂರ್ಣ ಎಂದು ಗುಣಮುಖನಾಗುತ್ತೇನೆ ಗೊತ್ತಿಲ್ಲ. ಹಿರಿಯ ಗೆಳೆಯರೊಬ್ಬರು ಹೇಳಿದ ಪ್ರಕಾರ ಅವರಿಗೆ ಡೆಂಗಿ ಜ್ವರ ಬಂದನಂತರ ಮಲೇರಿಯಾ ಬಂದಿತ್ತಂತೆ. ಈ ಜ್ವರ ಬಂದ ಎಲ್ಲರದೂ ಒಂದಲ್ಲ ಒಂದು ಕತೆ. ಯಾರಿಗೂ ಇದು ಜೀವನ ಸಹನೀಯಗೊಳಿಸಿಲ್ಲ. ದಯವಿಟ್ಟು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಿ.

ಈ ಎಲ್ಲಾ ಕಾರಣಗಳಿಂದಾಗಿ “ವರ್ತಮಾನ” ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಗಳು ಸ್ವಲ್ಪ ಕುಂಟಿತವಾಗಿವೆ. ಅನೇಕ ವಿಚಾರಗಳ ಬಗ್ಗೆ ಬರೆಯಬೇಕಿತ್ತು, ಬರೆಸಬೇಕಿತ್ತು. ದಾಖಲೆಗಳು ಸಿಗುತ್ತಲೆ ಇವೆ. ಈ ಮಧ್ಯೆಯೂ ಜಗದೀಶ್ ಕೊಪ್ಪ, ಶ್ರೀಪಾದ್ ಭಟ್, ಪರಶುರಾಮ್ ಕಲಾಲ್ ಮತ್ತು ಬಳಗದ ಸ್ನೇಹಿತರು ಗಂಭೀರ ವಿಚಾರಗಳನ್ನು ಚರ್ಚೆಗೆ ಒಡ್ಡುತ್ತಲೇ ಇದ್ದಾರೆ. ಮಿಕ್ಕ ಸ್ನೇಹಿತರೂ ಸಹ ಕೈಜೋಡಿಸಬೇಕಾದ ಸಂದರ್ಭ ಇದೇನೆ. ಅದೇ ಇಲ್ಲಿ ನಾನು ಹೇಳಬೇಕೆಂದುಕೊಂಡ ಮುಖ್ಯ ವಿಷಯ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

2 comments

  1. ರವಿಕೃಷ್ಣ ರೆಡ್ಡಿಯವರೆ,

    ನಿಮ್ಮ ಸದ್ಯದ ಆರೋಗ್ಯದ ಸ್ಥಿತಿಯನ್ನು ಹೇಳಿಕೊಂಡಿದ್ದಕ್ಕೆ ಒಂದಷ್ಟು ಹಗುರಾಗಿರಬಹುದು. ವರ್ತಮಾನ ಗೆಳೆಯರ ಬಳಗ ಮೂಲಕ ಕ್ರಿಯಾಶೀಲವಾಗಿರುತ್ತೆ. ನೀವು ಮೊದಲು ಅರಾಮಾಗಿರಿ. ನಮ್ಮ ನಮ್ಮ ಮಿತಿಯಲ್ಲಿ ವರ್ತಮಾನದ ಜತೆ ಕೈ ಜೋಡಿಸಲು ಪ್ರಯತ್ನಿಸುತ್ತೇವೆ, ನೀವು ನಿರಾಳವಾಗಿರಿ.

Leave a Reply

Your email address will not be published.