ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

– ಹನುಮಂತ ಹಾಲಿಗೇರಿ

ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು ಯಾರು’ ಎಂದು ಪ್ರತ್ಯಕ್ಷವಾಗಿಯೆ ಮಡೆಸ್ನಾನವನ್ನು ಬೆಂಬಲಿಸುವ ವಿತಂಡವಾದಿಗಳು. ಎರಡನೆಯದಾಗಿ ‘ಮಡೆಸ್ನಾನ ಅನಾದಿ ಕಾಲದಿಂದ ನಡೆದುಕೊಂಡ ಆಚರಣೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು. ದಿಡೀರ್ ಎಂದು ನಿಷೇಧಿಸಲಿಕ್ಕೆ ಆಗುವುದಿಲ್ಲ. ಕಾಲ ಉರುಳುವಿಕೆಯಲ್ಲಿ ಅದೆ ನಿಲ್ಲುತ್ತದೆ’ ಎಂದು ಅಪರೋಕ್ಷವಾಗಿ  ಬೆಂಬಲಿಸುವವರು. ಇನ್ನು ಕೊನೆಯದಾಗಿ ಮಡೆಸ್ನಾನದಂತಹ ಅಸಹ್ಯ ಆಚರಣೆಯನ್ನು ತಕ್ಷಣವೇ ನಿಲ್ಲಿಸಲೇಬೇಕು ಎಂದು ಕಟುವಾಗಿ ವಿರೋಧಿಸುವವರು.

ಕೇವಲ ಇದು ಕೇವಲ ನಂಬಿಕೆಯ ವಿಷಯವಾಗಿದ್ದರೆ ಬೇರೆ ಮಾತು. ಆದರೆ  ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ. ಮೇಲುವರ್ಗದವರು ಉಂಡ ಎಂಜೆಲೆಲೆಯ ಮೇಲೆ ಕೆಳವರ್ಗದವರು ಉರುಳಾಡಿದರೆ ಅವರ ಚರ್ಮವ್ಯಾದಿಗಳೆಲ್ಲವೂ ಕಡಿಮೆಯಾಗುತ್ತವೆ ಎಂದರೆ ಮೂಢನಂಬಿಕೆಯಲ್ಲದೆ ಮತ್ತೇನೂ? ಒಬ್ಬರು ಕುಡಿದ ಲೋಟದಿಂದ ಮತ್ತೊಬ್ಬರು ಕುಡಿಯುವುದು ಅಸಹ್ಯ ಎನಿಸುವ, ಅಚಾನಕ್ಕಾಗಿ ಎಂಜಲು ತಾಕಿದರೆ ಸೋಪು ಹಚ್ಚಿ ತೊಳೆದುಕೊಳ್ಳುವವರು ಹೆಚ್ಚಾಗಿರುವ ಈ ಕಾಲದಲ್ಲಿ ಉಂಡ ಎಂಜಲದ ಮೇಲೆ ಉರುಳಾಡುವ ಮನಸ್ಥಿತಿಯನ್ನು ದಲಿತರಲ್ಲಿ ಬಿತ್ತಿದವರು ಯಾರು ಎಂಬುದು ಮುಖ್ಯ ಪ್ರಶ್ನೆ. ಎಂಜಲೆಲೆಯಲ್ಲಿ ಔಷಧೀಯ ಗುಣಗಳಿದ್ದರೆ ಇಷ್ಟೊಂದು ಆಸ್ಪತ್ರೆಗಳೇಕೆ ಹುಟ್ಟಿಕೊಳ್ಳುತ್ತಿದ್ದವು. ಒಂದು ವೇಳೆ ಇದು ನಿಜವೇ ಆಗಿದ್ದರೇ ಉಣ್ಣುವವರು ಬ್ರಾಹ್ಮಣರೇ ಏಕೆಯಾಗಬೇಕು? ಒಂದೊಂದು ವರ್ಷ ಆಚರಣೆ ತಿರುಗುಮುರುಗಾಗಲಿ. ದಲಿತರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಒಂದೊಂದು ವರ್ಷ ಉರುಳಾಡಲಿ!

ಇರಲಿ, ಇದೆಲ್ಲ ವಿತಂಡವಾದವನ್ನು ಪಕ್ಕಕ್ಕೆ ಇಟ್ಟು ಮೇಲಿನ ಎರಡು ವಾದಗಳ ಬಗ್ಗೆ ಚರ್ಚೆ ಮಾಡೋಣ. `ಮಡೆಸ್ನಾನ ನಂಬಿಕೆಗೆ ಸಂಬಂಧಪಟ್ಟದ್ದು ಉರುಳುವವರಿಗೆ ತಮ್ಮ ಖಾಯಿಲೆಗಳು ಕಡಿಮೆಯಾಗುತ್ತವೆ ಎಂಬ ಸಮಾಧಾನವಾಗುವಂತಿದ್ದರೆ ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ. ಇದನ್ನು ನಾನು ಪರ್ವಾಗ್ರಹ ಪೀಡಿತನಾಗಿ ಹೇಳುತ್ತಿಲ್ಲ. ಪೇಸ್‌ಬುಕ್ ತೆಗೆದುನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಡೆಸ್ನಾನದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಠಾಧಿಪತಿಗಳು ಪೇಜಾವರ ಶ್ರೀಗಳು ಕೂಡ ಇದೆ ಮಾತನ್ನು ಹೇಳಿದ್ದಾರೆ. ಚೋರ್ ಗುರು ಚಂಡಾಲ ಶಿಷ್ಯಂದಿರು!

ಮೊದಲು ಸರಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಸರಕಾರ ಒಮ್ಮೆಲೆ ನಿಷೇದಿಸಿದ್ದಕ್ಕೆ ನಮ್ಮಂಥವರ ಮನಸ್ಸುಗಳು ನಿರಾಳಗೊಂಡಿದ್ದವು. ನಂತರ ಯಾವದೋ ಹುನ್ನಾರದಿಂದ, ಯಾರದೋ ಒತ್ತಡಕ್ಕೆ ಮಣಿದಂತೆ ನಾಟಕವಾಡಿದ ಸರಕಾರ ನಿಷೇಧವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡಿದ್ದು ನಾಚಿಕೆಗೇಡು. “ಮಲೆಕುಡಿಯರು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಏಕಾಏಕಿ ಮಡೆಸ್ನಾನ ಆಚರಣೆ ನಿಲ್ಲಿಸುವುದು ಬೇಡ. ಈ ಬಗ್ಗೆ ಮುಂದೆ ಮಠದಲ್ಲಿ ಪ್ರಶ್ನೆ’ ಕಾರ್ಯಕ್ರಮದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು,” ಎಂದು ಸಚಿವ ವಿ.ಎಸ್.ಆಚಾರ್ಯ ಹೇಳಿಕೆ ನೀಡಿ ಜಾರಿಕೊಂಡರು. ಮಲೆಕುಡಿಯರ ಪ್ರತಿಭಟನೆಯಲ್ಲಿ ಮೇಲುವರ್ಗದವರ ಕೈವಾಡವಿರಲೇಬೇಕಲ್ಲವೇ.  ಏಕೆಂದರೆ ಈ ಆಚರಣೆ ಆರಂಭದಲ್ಲಿ ಪ್ರಾರಂಭವಾಗಲಿಕ್ಕೆ ಪುರೋಹಿತಶಾಹಿಗಳ ಹುನ್ನಾರವೇ ಕಾರಣವಲ್ಲವೇ?

ಅದುದರಿಂದ ಹೀಗೆ ಅಮಾನುಷವಾದ, ಕೆಲವರಲ್ಲಿ ಅಸಹ್ಯ ಮೂಡಿಸುವ ಈ ಆಚರಣೆಯನ್ನು ಬೆಂಬಲಿಸುವ ಮೊದಲವಾದಿಗಳು ದಯವಿಟ್ಟು ತಮ್ಮ ವಾದವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಮ್ಮ ಎಂಜಲದ ಮೇಲೆ ಮತ್ತೊಬ್ಬ ಮನುಷ್ಯ ಉರುಳಾಡುವುದು ಬೇಡ ಎಂಬ ಕನಿಷ್ಠ ಮಾನವೀಯತೆ ನಿಮಗಿದ್ದರೆ ದಯವಿಟ್ಟು ಸುಮ್ಮನಿದ್ದು ಬಿಡಿ. ಮೇಲುವರ್ಗದ ಪ್ರಜ್ಞಾವಂತರೆ ಮುಂದೆ ನಿಂತು ಈ ಆಚರಣೆಯನ್ನು ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಜಾರಿಕೊಂಡರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಪದ್ದತಿ ಮುಂತಾದವುಗಳೆಲ್ಲವೂ ಸಹ ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಮತ್ತೆ ಆಚರಣೆಗೆ ತರಲು ಸಾಧ್ಯವೆ?

ಇನ್ನೂ ಎರಡನೆ ವಾದದವರು `ಕಾಲ ಪಕ್ವವಾಗಿಲ್ಲ’ ಎಂಬ ನೆಪದಿಂದ ಆಚರಣೆಯ ಪರವಾಗಿಯೆ ನಿಲ್ಲುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂಥ ಆಚರಣೆ ನಿಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದು ಜಾರಿಕೊಳ್ಳುವುದು ಹೇಡಿತನ. ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರಿಗೆ ನಿಜವಾಗಲೂ ಇದು ಅಸಹ್ಯ ಎನಿಸದಿರಬಹುದು. ಆದರೆ ಇದು ಇಡಿ ಮನುಕುಲಕ್ಕೆ ಅನಾಗರಿಕತೆ, ಅಸಹ್ಯ ಮತ್ತು ಅವಮಾನ. ಮಲೆಕುಡಿಯರಂಥ ದಲಿತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ ಖಂಡಿತ ಈ ಆಚರಣೆ ಮುಂದಿನ ವರ್ಷದಿಂದಲಾದರೂ ನಿಲ್ಲುತ್ತದೆ.

ಇದು ಬಿಟ್ಟು ಈ ಆಚರಣೆ ಧಾರ್ಮಿಕ ನಂಬಿಕೆ ಸಂಬಂಧಪಟ್ಟದ್ದು ಈ ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವ ಸರಕಾರ ತನ್ನ ಮನೋಇಂಗಿತವನ್ನು ಅನಾವರಣಗೊಳಿಸಿದೆ. ತಪ್ಪು ಎಂದು ಗೊತ್ತಾದ ಮೇಲೂ  ನಿಷೇಧಿಸಬೇಕೋ ಬೇಡವೋ ಎಂದು ಅಷ್ಟಮಂಗಲ ಪ್ರಶ್ನೆ ಕೇಳುತ್ತೇವೆ ಎನ್ನುವುದು ಯಾವ ಸೀಮೆ ನ್ಯಾಯ? ಸಾಕ್ಷರರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಮಣೆ ಹಾಕುತ್ತಿರುವುದು ಪ್ರಜ್ಞಾವಂತ ಸಾಕ್ಷರರಿಗೆ ಒಪ್ಪುವ ಮಾತಲ್ಲ.

8 thoughts on “ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

 1. Racham

  ಪ್ರಿಯ ಹನಮಂತ್, ಲೇಖನ ಓದಿದೆ, ತುಂಬಾ ವಿಚಾರಪೂರ್ಣ ಲೇಖನ. ಮೌಡ್ಯವನ್ನು ಹರಡುತ್ತಿರುವ, ಬೆಂಬಲಿಸುತ್ತಿರುವ ಎಲ್ಲ ವಿಕೃತ ಮನಸ್ಸುಗಳಿಗೆ ಧಿಕ್ಕಾರವಿರಲಿ…ಇಲ್ಲಿ ಬ್ರಾಹ್ಮಣರು ದಲಿತರು ಎಂಬ ಪ್ರಶ್ನೆಗಿಂತ ಇದು ಮನುಷ್ಯವಿರೋಧಿ ಆಚರಣೆ. ಒಂದು ಧರ್ಮದಲ್ಲಿ ಅಕಸ್ಮಾತ್ ಆಗಿ ಯಾವುದೊ ಕಾಲಘಟ್ಟದಲ್ಲಿ ಇಂಥ ವಿಕೃತ ಆಚರಣೆ ಸೇರಿಕೊಂಡಿದ್ದರೆ ಅದನ್ನು ಎಲ್ಲ ಕಾಲಕ್ಕೂ ಅನ್ವಯಿಸುವಂತೆ ಜಾರಿಯಲ್ಲಿಡುವುದು ಯಾವುದೇ ಧರ್ಮಕ್ಕೆ ಶೋಭೆ ತರುವಂತದ್ದಲ್ಲ. ಇಂಥದನ್ನು ಪ್ರಜ್ಞಾವಂತರು ಕಟುವಾಗಿ ಮುಕ್ತವಾಗಿ ಖಂಡಿಸಬೇಕು. ವಿರೋಧಿಸಬೇಕು. ನಿಮ್ಮ ವಿಚಾರಕ್ಕೆ ನನ್ನ ಬೆಂಬಲವಿದೆ.

  Reply
 2. Dr. Sidram Karanik

  ಬತ್ತಲೆ ಸೇವೆಯನ್ನು ಹೀಗೆ ಮಾಡಿಯೇ ಅತಿರೇಕಕ್ಕೆ ಒಯ್ದವರು ಮಡೆ ಸ್ನಾನದ ಬಗ್ಗೆ ಹೇಳುತ್ತಾರಾದರೂ ಏನು ? ಮೂಢಭಕ್ತಿಗೆ ದೇಶವೇ ಹಾಳಾಗುತ್ತಿದೆ ; ಹಾಳಾಗಲಿ ಬಿಡಿ ; ಮತ್ತೇ ಹೊಸದು ಹುಟ್ಟಿದಾಗ ಬೀಜದಲ್ಲೇ ಇಂಥ ಪ್ರತಿಗಾಮಿ ವಿಚಾರಗಳನ್ನು ; ಸಂಪ್ರದಾಯಗಳನ್ನು ಮುರುಟಿಸಿ ಬಿಡೋಣ ! ಈಗ…… ಯಾಕೋ ಸಾಧ್ಯ ಅಂತ ಹೇಳೋದಕ್ಕೆ ಆಗ್ತಾ ಇಲ್ಲ ! ಕ್ಷಮೆ ಇರಲಿ !

  Reply
 3. V.R.Carpenter

  ಮೊದಲಿಗೆ ಹೀಗೆ ಪ್ರತಿಕ್ರಿಯಿಸುತ್ತೇನೆ ‘ಥೂ, ನಾಚಿಕೆ ಇಲ್ಲದ ಸಮಾಜ, ಇಂತಹ ವಿಕೃತಿಯನ್ನು ಸಹಿಸಿಕೊಂಡು ಅದು ಹೇಗೆ ಮುಂದೆ ಸಾಗುತ್ತಿದೆ? ಅಸಹ್ಯ ಹುಟ್ಟುವುದಿಲ್ಲವೇ? ಎಳೆಯಲ್ಲಿ ಉಂಡವರು ನಿಜವಾಗಿಯೂ ಮನುಷ್ಯರೇ?

  Reply
 4. Nagaraju L M

  ಮಡೆಸ್ನಾನಗಳಂಥ ಅನಿಷ್ಟಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ದೊಡ್ಡದಿದೆ. ಇಂಥ ಆಚರಣೆಗಳ ಹಿಂದೆ ಇರುವ ಮಿತ್ಯೆಗಳನ್ನು ಒಡೆಯುವ ಕ್ರಿಯೆ ನಮ್ಮಲ್ಲಿ ನಡೆಯುತ್ತಿಲ್ಲ. ಸಾಮಾಜಿಕ ಜಾಡ್ಯಗಳನ್ನು ಇಲ್ಲವಾಗಿಸುವಲ್ಲಿನ ಆಡಳಿತಗಾರ ಉಪೇಕ್ಷೆಯಿಂದಾಗಿ ಇವುಗಳನ್ನು ತಡೆಯಲು ಮುಂದಾಗುವ ಅಧಿಕಾರಿಗಳೂ, ಚಳವಳಿಗಾರರೂ ಹತಾಶರಗುತ್ತಿದ್ದಾರೆ.

  Reply
 5. sudha

  ella manujaralli eradu karygalirute i.e.BAD/GOOD things, Nammalli ero thappugalanna yavaga realise madkondu sari padskoltthivo avagle navu Shuddaragthivi& samajanu suddvagiruthe.(edanna ella vyakthigalu avalambisikondre olledu)

  Reply
 6. Malathesh.m

  ನಿಜಕ್ಕೂ ಇದು ಅವರು(ಮೇಲ್ವರ್ಗದ ಜನ)ಎಷ್ಟರ ಮಟ್ಟಿಗೆ ಜಾತಿಯೆ ವಿಷವನ್ನು ಧರ್ಮ ಎಂಬ ಭಾವನೆಯಿಂದ ಬಿತ್ತಲು ನೋಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು.ಆದರೂ ಇದು ನಮ್ಮ ಜನಗಳಿಗೆ ಅರ್ಥವಾಗದೆ ಇರುವುದು ಯಾಕೆ ಎಂಬುದು ನನಗೇ ಅರ್ಥವಾಗುತ್ತಿಲ್ಲ!!ನೀವು ಹೇಳಿದ ಆ ಅಲ್ಲಮರ ವಚನ ಇಂತಹ ಶೋಷಣೆಗೆ ತಮ್ಮನ್ನು ತಾವೇ ವೊಡ್ಡಿಕೊಳ್ಳುತ್ತಿರುವ ನಿಜವಾದ ಮನಸ್ಸಿರುವ ಮಾನವರಿಗೆ ಬಿಡಿಸಿ ಹೇಳಲೇಬೇಕು…….

  Reply
 7. ಸಂತೋಷ್

  ಇಂದಿನ ಕನ್ನಡ ಪ್ರಭ ಓದಿ ನೋಡಿ ಹನುಮಂತ ಹಾಲಿಗೇರಿ ರವರೆ,

  Reply

Leave a Reply

Your email address will not be published.