ಮಾಧ್ಯಮ ಅಕಾಡೆಮಿಗೆ ಮಂಗಳಾರತಿ

-ಡಾ. ಎನ್. ಜಗದೀಶ್ ಕೊಪ್ಪ

ಕಳೆದ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು, ಪತ್ರಕರ್ತರು ತಮ್ಮ ವೃತ್ತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾತನಾಡಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಅಕಾಡೆಮಿಯ ನಿಷ್ಕ್ರಿಯತೆಯ ಬಗ್ಗೆ ಅಧ್ಯಕ್ಷರು ಮತ್ತು ಸದಸ್ಯರ ಮರ್ಮಕ್ಕೆ ತಾಗುವಂತೆ ಮಾತನಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಸ್ತಿತ್ವದಲ್ಲಿದೆ ಎಂದು ನನಗೆ ಗೊತ್ತಾಗಿದ್ದು ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಮಾತ್ರ. ಸರ್ಕಾರ ಕೊಟ್ಟ ಅನುದಾನವನ್ನು ಪರಿಣಾಮಾಕಾರಿಯಾಗಿ ಬಳಸಲಾರದಕ್ಕೆ, ಹಾಗೂ ಅಕಾಡೆಮಿಯ ಭವಿಷ್ಯದ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದರೂ ಸಹ ಪ್ರಸ್ತಾವನೆಯನ್ನ ಸಲ್ಲಿಸಲಾರದ ಸೋಮಾರಿತನದ ಬಗ್ಗೆ ನೇರವಾಗಿ ಮುಖ್ಯಮಂತ್ರಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಪಾಪ ನಿಷ್ಕ್ರಿಯತೆ ಮತ್ತು ಅಬ್ಬೆಪಾರಿತನದ ಪ್ರತಿರೂಪದಂತಿರುವ ಅಧ್ಯಕ್ಷ ಪರಮೇಶ್ ತಾನೆ ಏನು ಮಾಡಬಲ್ಲರು?

ಇದರಲ್ಲಿ ಸರ್ಕಾರದ ಪಾತ್ರವೂ ಇದೆ. ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನ, ಅಧ್ಯಕ್ಷರನ್ನ ನೇಮಕ ಮಾಡುವ ಪ್ರಕ್ರಿಯೆ ಗಮನಿಸಿದರೆ, ಅಕಾಡೆಮಿಯೆಂಬುದು, ನಿಶ್ಯಕ್ತ ಪತ್ರಕರ್ತರ ನಿರಾಶ್ರಿತರ ಶಿಬಿರವೇನೊ ಎಂಬಾಂತಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಮಾಧ್ಯಮಗಳ ಬಗ್ಗೆ ಗಂಭೀರ ಚರ್ಚೆ ನಡೆಯುತಿದ್ದು, ಮಾದ್ಯಮಗಳ ಭಾಷೆ, ಕಾರ್ಯವೈಖರಿ ಮುಂತಾದ ವಿಷಯಗಳ ಬಗ್ಗೆ ಪ್ರಜ್ಞಾವಂತ ಓದುಗರು, ವೀಕ್ಷಕರು ಧ್ವನಿ ಎತ್ತಿದ್ದಾರೆ. ಎತ್ತುತ್ತಿದ್ದಾರೆ. ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ಸಂವಹನದ ಸೇತುವೆಯಾಗಬೇಕಿದ್ದ ಅಕಾಡಮಿ ಈ ನಿಟ್ಟಿನಲ್ಲಿ ಏನು ಕೆಲಸ ಮಾಡಿದೆ? ಈ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಯಾವ ಕೃತಿ ಪ್ರಕಟಿಸಿದೆ? ಯಾವ ವಿಚಾರ ಸಂಕಿರಣ ಏರ್ಪಡಿಸಿದೆ? ಹಾಗೆ ನೋಡಿದರೆ, ಪ್ರೆಸ್‌ಕ್ಲಬ್ ಪುಸ್ತಕಗಳ ಪ್ರಕಟಣೆಯಲ್ಲಿ ಅಕಾಡೆಮಿಗಿಂತ ಸಾವಿರ ಪಾಲು ವಾಸಿ. ಕಳೆದ ಮೂರು ವರ್ಷಗಳಲ್ಲಿ ಅದರ ಪ್ರಕಟಣೆಗಳ ಸಂಖ್ಯೆ ಐವತ್ತು ದಾಟಿದೆ.

ಇವತ್ತು ಮಾಧ್ಯಮ ಪ್ರಶಸ್ತಿಗಳ ಮೌಲ್ಯ ಕೂಡ ಚರ್ಚೆಗೆ ಒಳಪಟ್ಟಿದೆ. ಕಳೆದ ವಾರ ಮಂಡ್ಯದಲ್ಲಿ ನಡೆದ ಪತ್ರಿಕೋದ್ಯಮ ವಿಚಾರ ಸಂಕಿರಣದ ಸಂದರ್ಭದಲ್ಲಿ ಮಾತನಾಡಿದ ಗೆಳೆಯ ದಿನೇಶ್ ಅಮಿನ್‌ಮಟ್ಟು ಪ್ರಶಸ್ತಿ ಸ್ವೀಕಾರದ ಬಗ್ಗೆ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. “ಪ್ರಶಸ್ತಿ ಸ್ವೀಕರಿಸದಿದ್ದರೆ, ಅಹಂಕಾರ ಎನ್ನುತ್ತಾರೆ, 25 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತನಾಗಿ ದುಡಿದ ನಾನು ಕೇವಲ ಎರಡು ವರ್ಷದಲ್ಲಿ ಪತ್ರಿಕೋದ್ಯಮಕ್ಕೆ ಬಂದು ಲಾಭಿ ಮೂಲಕ ಪ್ರಶಸ್ತಿ ಪಡೆಯುವವನ ಜೊತೆ ಕುಳಿತು ಅಕಾಡೆಮಿ ಗೌರವವನ್ನು ಹೇಗೆ ಸ್ವೀಕರಿಸಲಿ? ನನಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಿಂತ ಈಗಾಗಲೇ ಪಡೆದಿರುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಮತ್ತು ಬೆಂಗಳೂರಿನ ಸಂಬುದ್ಧ ಟ್ರಸ್ಟ್ ನೀಡಿರುವ ಗೌರವ ಹೆಚ್ಚು ತೃಪ್ತಿ ನೀಡಿವೆ.” ಇದು ದಿನೇಶ್ ಅಮಿನ್ ಒಬ್ಬರ ಮಾತಲ್ಲ, ತನ್ನ ವೃತ್ತಿಯ ಬಗೆಗಿನ ಬದ್ಧತೆ, ಘನತೆ, ಕಾಳಜಿ ಇಟ್ಟುಕೊಂಡಿರುವ ಪ್ರತಿಯೊಬ್ಬ ಪತ್ರಕರ್ತನ ಮಾತು ಕೂಡ ಹೌದು. ಪ್ರಶಸ್ತಿಗೆ ನಾಲ್ಕು ಜನ ಯೋಗ್ಯರನ್ನ ಆಯ್ಕೆ ಮಾಡಿ, ಅವರ ಜೊತೆ ರಾಜಕಾಣಿಗಳಿಗೆ ಬಕೆಟ್ ಹಿಡಿದ ಎಂಟು ಜನ ಭಟ್ಟಂಗಿಗಳನ್ನು ಆಯ್ಕೆ ಮಾಡಿದರೆ ಪ್ರಶಸ್ತಿಯ ಮೌಲ್ಯ ವೃದ್ಧಿಸುವುದಿಲ್ಲ ಎಂಬ ವಾಸ್ತವ ಸತ್ಯವನ್ನ ಅಕಾಡೆಮಿ ಅರಿಯ ಬೇಕಾಗಿದೆ. ಬಹುತೇಕ ಪ್ರಶಸ್ತಿಗಳು ನಗರ ಕೇಂದ್ರಿತವಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ, ನಾನು ದಕ್ಷಿಣ ಕರ್ನಾಟಕದ ಮಂಡ್ಯದವನಾಗಿದ್ದು ಪ್ರಜ್ಞಾಪೂರ್ವಕವಾಗಿ ಈ ಮಾತನ್ನು ಹೇಳುತಿದ್ದೇನೆ. ಕಳೆದ ಹತ್ತು ವರ್ಷದ ಪ್ರಶಸ್ತಿ ಪಟ್ಟಿಯನ್ನ ಅಕಾಡೆಮಿ ಪ್ರಕಟಿಸಿದರೆ, ಸತ್ಯಾಂಶ ಹೊರಬೀಳಲಿದೆ.

ಪ್ರಶಸ್ತಿಯ ಈ ಅಧ್ವಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪಾಲು ಕೂಡ ಇದೆ. ಇಂದು ಆ ಸಂಘದಲ್ಲಿ ಕಾರ್ಯನಿರತ ಪ್ರತ್ರಕರ್ತರಿಗಿಂತ ಕಾರ್ಯ ಮರೆತ ಪತ್ರಕರ್ತರು ಶೇ.90 ಮಂದಿ ಇದ್ದಾರೆ. ಎಂದೋ, ಯಾವ ದಶಕದಲ್ಲೋ, ಒಂದೆರಡು ವಾರ ಅಥವಾ ತಿಂಗಳು ಪತ್ರಿಕೆ ನಡೆಸಿ ಸಂಪಾದಕ ಎಂಬ ಮುದ್ರೆಯನ್ನ ಹಣೆಗೆ ಮತ್ತು ಎದೆಗೆ ಒತ್ತಿಕೊಂಡು ಒಡಾಡುವವರೆ ಸಂಘದಲ್ಲಿ ಹೆಚ್ಚು ಮಂದಿ ಇದ್ದಾರೆ, ಏಕೆಂದರೆ, ಈ ದೇಶದಲ್ಲಿ ರಾಜಕಾರಣಿಗೆ ಮತ್ತು ಪತ್ರಕರ್ತನಿಗೆ ನಿವೃತ್ತಿಯೇ ಇಲ್ಲ, ಅವರೆಲ್ಲರೂ ಸಾಯುವವರೆಗೂ ರಾಜಕಾರಣಿಗಳು ಮತ್ತು ಪತ್ರಕರ್ತರು. ಈ ಕುರಿತಂತೆ ಅಧ್ಯಕ್ಷರಾಗಿರುವ ಮಿತ್ರ ಗಂಗಾಧರ್ ಮೊದಲಿಯಾರ್‌ಗೆ ನಿರಂತರ ಪ್ರಕಟಣೆಯಲ್ಲಿರುವ ಹಾಗೂ ಮಾಧ್ಯಮ ಪಟ್ಟಿಯಲ್ಲಿರವ ಪತ್ರಿಕೆಗಳ ಪತ್ರಕರ್ತರಿಗೆ ಮಾತ್ರ ಸದಸ್ಯತ್ವ ನೀಡುವ ಕುರಿತು ಸಂಘದ ನಿಯಾಮಾವಳಿಗಳನ್ನು ಬದಲಿಸುವಂತೆ ನಾನೇ ಸಲಹೆ ನೀಡಿದ್ದೆ. ಈ ರೀತಿ ಪರಿಷ್ಕರಿಸಿದಾಗ ಮಾತ್ರ ನಿಜವಾದ ಪತ್ರಕರ್ತರು ವೃತ್ತಿಯಲ್ಲಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಜಿಲ್ಲಾ ಘಟಕಗಳು ಶಿಪಾರಸ್ಸು ಮಾಡುವ ಅನೇಕ ಅಪಾತ್ರರು ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಈಗ ನಡೆಯುತ್ತಿರುವುದು ಅದೇ ಆಗಿದೆ.

ನನ್ನ ಈ ಲೇಖನದ ಉದ್ದೇಶ ಯಾರನ್ನೂ ಗುರಿಮಾಡಿಕೊಂಡು ಟೀಕಿಸುವುದಲ್ಲ. ಅಕಾಡೆಮಿಯ ಅವಧಿ ಅಂತ್ಯಗೊಳ್ಳುತಿದ್ದು, ಮುಂಬರುವ ಅಧ್ಯಕ್ಷರು, ಸದಸ್ಯರು ಈ ಅಂಶಗಳತ್ತ ಗಮನ ಹರಿಸಲಿ ಎಂಬುದೇ ನನ್ನ ಆಶಯ ಮತ್ತು ಕಾಳಜಿ. ಕಳೆದ ವಾರ ಕನ್ನಡ ಭಾಷೆಯ ವಿರೋಧಿಯಾದ ಮರಾಠಿ ಪತ್ರಿಕೆಯೊಂದರ ಹುಬ್ಬಳ್ಳಿ ವರದಿಗಾರನೊಬ್ಬ ಧಾರವಾಡ ಜಿಲ್ಲಾಧ್ಯಕ್ಷರ ಶಿಪಾರಸ್ಸು ಪತ್ರ ತೆಗೆದುಕೊಂಡು ಮಾಧ್ಯಮ ಅಕಾಡೆಮಿ ಸದಸ್ಯತ್ವಕ್ಕೆ ಸಚಿವರು, ಶಾಸಕರನ್ನು ಹಿಡಿದುಕೊಂಡು ಓಡಾಡುತ್ತಿದ್ದಾನೆ. ಸದಸ್ಯರ ಗಮನಕ್ಕೆ ಬಾರದೆ ಈ ಕೃತ್ಯ ನಡೆದಿದ್ದು ಈಗ ಈ ಇಬ್ಬರ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಇಂತಹ ಅವಾಂತರಗಳು ನಡೆಯದಂತೆ ಸರ್ಕಾರ ಕೂಡ ಎಚ್ಚರಿಕೆ ವಹಿಸಬೇಕಾಹಿದೆ.

7 thoughts on “ಮಾಧ್ಯಮ ಅಕಾಡೆಮಿಗೆ ಮಂಗಳಾರತಿ

  1. ರವಿ ಕುಮಾರ

    ದೀನೇಶ್ ಸರ್ ಅವರ ಅಭಿಪ್ರಾಯ ನಿಜಕ್ಕೂ ಆತಂಕ ಪಡುವಂತಿದೆ ಪ್ರಶಸ್ತಿ ಪಡೆದುಕೊಂಡವರ ಪಕ್ಕ ಕುಳಿತುಕೊಳ್ಳಲು ಅವರಿಗೆ ಮುಜುಗರವಾಗಿರಬೇಕು ಯಾಕೆಂದರೆ ತೀರಾ ಇತ್ತೀಚಿಗಂತೂ ಅಯೋಗ್ಯರೇ ಪತ್ರಿಕೋದ್ಯಮವನ್ನು ಆಳುತ್ತಿದ್ದ್ದಾರೆ. ಕೆಲವರಂತೂ ಸಾಚಾಗಳಂತೆ ಸೋಗು ಹಾಕಿ ಆಯಾ ಸಂದರ್ಭದಲ್ಲಿ ಅಧಿಕಾರಿದಲ್ಲಿರುವವರೊಂದಿಗೆ ಆಡ್ಜೆಸ್ಟ್‌ ಆಗುತ್ತಾ, ಪ್ರಶಸ್ತಿ ಪಡೆಯುವವರ ಪಟ್ಟಿಯನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಸ್ತಿ ಘೋಷಣೆಗಾದರೂ ಮಾನದಂಡ ಬೇಡವೇ.?? ಅಪಾತ್ರರನ್ನು ಆಯ್ಕೆ ಮಾಡಿದೆವೆಂಬ ಪಾಪಪ್ರಜ್ನೆ ಕಾಡುವುದಿಲ್ಲವೇ..??

    Reply
  2. gururaj kulkarni

    sir dinesh you are right there is lot of partiality to Hyd, karnatak editors and according to your word some changes had to be done.

    super sir

    gururaj kulkarni
    sub editor
    kannada bandhu kannada daily news paper
    gulbarga ( Hyd karnataka)

    Reply
  3. Melukote VN Gowda

    Ittheechege patrakartharalli praamaanikaru yaaru, brastaru yaaru embudu nijavaagiyu gottaaguthilla. Beliye eddu hola meyuvanthaagide.
    raajakaaranigaligeBacket hidiyuvavarinda idee vyavastheye kulagettu hogide.

    Reply
  4. keshav sasihithlu

    Taluku, Jill mattada Sanghagalallu groupsim ide. Patrikeye illada mathu nintha patrikegala sampadakarugalige State membership siguvanthe shiparasu maduthare. Nijavagi Karyaniratharige adu siguthilla

    Reply
  5. sharanappa Bachalapur

    ನಿಜವಾಗಿಯೂ ಮಾಧ್ಯಮ ಕ್ಷೇತ್ರದಲ್ಲಿ ಈಗ ಚಿಂತಿಸಬೇಕಾಗಿರುವ ಪ್ರಶ್ನೆಗಳನ್ನು ಮೂಖ್ಯಮಂತ್ರಿಗಳು ಎತ್ತಿದ್ದಾರೆ. ಇದರ ಜತಗೆ ದೀನೇಶ ಅಮೀನಮಟ್ಟು ಆಭಿಪ್ರಾಯವೂ ಸತ್ಯವಾಗಿದೆ. ಆದರೆ ಚಿಂತಿಸಬೇಕಾದ ಕಾರ್ಯನಿರತ ಪತ್ರಕರ್ತರು ತಾವೂ ಅಯಿತು, ತಮ್ಮ ಕೆಲಸವಾಯಿತು ಎಂದು ಸುಮ್ಮನೆ ಕುಳುತ್ತಿದ್ದಾರೆ.

    Reply
  6. krishna Murthy

    Bogus reporters always harassment to working journalists. KUWJ should initiave action against such reporters.

    Reply

Leave a Reply

Your email address will not be published. Required fields are marked *